ಸಂಗೀತ ಪ್ರಪಂಚದಲ್ಲಿ ವೀಣೆಗೆ ದೊರೆತಿರುವ ಪ್ರಾಧಾನ್ಯ ವೈಶಿಷ್ಟ್ಯಪೂರ್ಣವಾದುದು. ವೇದಗಳ ಕಾಲದಿಂದಲೂ ಒಂದಲ್ಲ ಒಂದು ಸ್ವರೂಪದಲ್ಲಿ ವೀಣೆಯು ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತಿತ್ತೆಂದು ತಿಳಿದು ಬರುತ್ತದೆ. ನಾರದನ ಕೈಯ್ಯಲ್ಲಾಡುವ ಮಹತಿ, ಸರಸ್ವತಿಯ ಕರಗಳಲ್ಲಿ ಕಂಗೊಳಿಸುವ ವಿಪಂಚಿ, ಲವಕುಶರು ತಮ್ಮ ಧ್ವನಿ ಬೆರೆಸಲು ಸಾಧನವಾದ ವೀಣೆ, ಜಗನ್ಮಾತೆಯ ಹಸ್ತಗಳಲ್ಲಿ ವಿರಾಜಿಸುವ ಮಾಣಿಕ್ಯವಲ್ಲಕೀ, ಎಲ್ಲರನ್ನೂ ಮುಗ್ಧಗೊಳಿಸುವ ಮೋಹಕವಾದ್ಯ. ಹಾಡುಗಾರಿಕಯೊಡನೆ ವೀಣಾವಾದನವು ಸೇರಿಯೇ ವಿನಿಕೆಗಳು ನಡೆಯುತ್ತಿದ್ದುದು, ಕಳೆದ ಶತಮಾನದ ಮಧ್ಯದವರೆಗೂ ಜಾರಿಯಲ್ಲಿದ್ದುದು ಎಲ್ಲರಿಗೂ ತಿಳಿದ ಸಂಗತಿಯೇ. ನಮ್ಮ ಮೈಸೂರು ವೀಣೆಯ ಬೆಡಗಿನಿಂದಲೇ ಪ್ರಸಿದ್ಧವಾಗಿರುವುದು. ಇಂತಹ ‘ವೀಣೆ’ಯೊಡನೆ ಸೇರಿಯೇ ಕೇಳಿಬರುತ್ತಿದ್ದ ಹೆಸರು-ರಾಜಾರಾಯರದು . “ವೀಣೆ ರಾಜಾರಾವ್‌” ಎಂದೇ ವಿಖ್ಯಾತರಾಗಿದ್ದ ಇವರ ಜನ್ಮದಾತರು ಲಕ್ಷ್ಮೀನಾರಾಯಣಪ್ಪನವರು. ಸುಪ್ರಸಿದ್ಧ ವೈಣಿಕಪಟುವಾಗಿ, ಮೈಸೂರು ಆಸ್ಥಾನ ವಿದ್ವಾಂಸರಾಗಿ, ಮನೆಯಲ್ಲಿ ಸಂಗೀತದ ಒಂದು ಪರಂಪರೆಯನ್ನೇ ಹುಟ್ಟುಹಾಕಿದ ಮಹಾಕಲಾವಿದರು. ಇವರ ಹೆಸರಿನ ಜೊತೆಗೆ ‘ಭೈರವಿ’ ಅಂಟಿಕೊಂಡಿದ್ದು, ಭೈರವಿ ಲಕ್ಷ್ಮೀನಾರಾಯಣಪ್ಪನವರು ತಮ್ಮ ವಾದನದಿಂದ ವೀಣೆಯ ಇತಿಹಾಸದಲ್ಲಿ ತಮಗೆ ಭದ್ರವಾದ ಸ್ಥಾನವೊಂದನ್ನು ಕಲ್ಪಿಸಿಕೊಂಡಿದ್ದರು.

ಇಂತಹ ಹೆಸರಾಂತ ವೈಣಿಕರ ಸುಪುತ್ರರಾಗಿ, ರಾಜಾರಾಯರು ೧೯೦೯ರಲ್ಲಿ ಜನಿಸಿದರು. ತಂದೆಯವರ ಶಿಕ್ಷಣ, ಶ್ರದ್ಧಾಪೂರ್ಣವಾದ ಸಾಧನೆ, ಸಂಗೀತದಲ್ಲಿದ್ದ ಅದಮ್ಯವಾದ ಒಲವು ರಾಜಾರಾಯರು ಶ್ರೇಷ್ಠ ವೈಣಿಕ ವಿದ್ವಾಂಸರಾಗಲು ನೆರವಾದುವು. ಗಾಯನದಲ್ಲೂ ಪರಿಣತರಾಗಿದ್ದ ಇವರು, ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರು. ರಾಜಾರಾಯರೂ ಅವರ ಸೋದರ ಗೋಪಾಲರಾಯರೂ, ಮೈಸೂರು ಸಹೋದರರೆಂಬ ಖ್ಯಾತಿಹೊಂದಿದ್ದು, ಭಾರತದ ಎಲ್ಲೆಡೆಯೂ ತಮ್ಮ ಜೋಡಿ ವೀಣಾವಾದನದಿಂದ ಅಪಾರ ಕೀರ್ತಿ, ಯಶಸ್ಸು, ಜನಪ್ರಿಯತೆಗಳನ್ನು  ಆರ್ಜಿಸಿದರು.

ಮೈಸೂರಿನ ಸಂಸ್ಥಾನದಲ್ಲಿ ರಾಜಾರಾಯರನ್ನು ಆಸ್ಥಾನ ವಿದ್ವಾಂಸರಾಗಿ ನೇಮಕ ಮಾಡುವುದು ಕೆಲವು ಅನ್ಯವಿದ್ವಾಂಸರ ತಂತ್ರದಿಂದಾಗಿ ತಪ್ಪಿಹೋಯಿತು. ಸಂಗೀತದಂತಹ ವಿದ್ಯೆಯ ಸೌಧದಲ್ಲೂ ಅಸಹನೆ, ಅಸೂಯೆ, ರಾಜಕೀಯಗಳು ತಲೆಹಾಕಿದುದು ರಾಜಾರಾಯರ ಮನಸ್ಸಿಗೆ ಬಹಳ ಬೇಸರ, ನೋವುಂಟುಮಾಡಿತು. ಮೈಸೂರಿನಲ್ಲಿ ಉಳಿಯುವುದು ಇಷ್ಟವಾಗದೆ ಸಂಸಾರ ಸಮೇತ ಅವರು ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ವರ್ಗಾಯಿಸಿದರು. ನರಸಿಂಹರಾಜ ಕಾಲೋನಿಯಲ್ಲಿರುವ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಸಂಗೀತ ವಿಭಾಗದ ಪ್ರಾಧ್ಯಾಪಕರಾಗಿ ಸುಮಾರು ಇಪ್ಪತ್ತು ವರ್ಷಗಳು ಸೇವೆ ಸಲ್ಲಿಸಿದರು. ಗಾಯನ, ವೀಣಾವಾದನ ಹಾಗೂ ಪಿಟೀಲು ವಾದನಗಳಲ್ಲಿ ಇವರಿಂದ ಮಾರ್ಗದರ್ಶನ, ತರಬೇತಿ ಹೊಂದಿದವರು ಅನೇಕಾನೇಕ. ನಿಸ್ಪೃಹ ವ್ಯಕ್ತಿತ್ವ, ಶ್ರದ್ಧೆಯ ಶಿಕ್ಷಣ, ಎಂತಹ ಸಂದರ್ಭದಲ್ಲೂ ಸಮತೋಲನ ಉಳಿಸಿಕೊಳ್ಳುವ ಮನೋಭಾವ, ವಿದ್ಯಾರ್ಥಿಗಳ ಬಗ್ಗೆ ಅಪಾರ ವಿಶ್ವಾಸ, ಸರಿ ವಿದ್ವಾಂಸರಲ್ಲಿ ಗೌರವಯುತ ನಡಳಿಕೆ ಮುಂತಾದ ಉತ್ತಮ ಗುಣಗಳು ಇವರನ್ನು ಸರ್ವಜನಪ್ರಿಯ ವ್ಯಕ್ತಿಯನ್ನಾಗಿ ಮಾಡಿದವು. ಇವರ ಶಿಕ್ಷಣ ಲಾಭಪಡೆದು ಪ್ರಸಿದ್ಧರಾಗಿರುವವರಲ್ಲಿ ರತ್ನಗಿರಿ ಸುಬ್ಬಾಶಾಸ್ತ್ರಿ, ಡಾ. ಸುಮಾ ಸುಧೀಂದ್ರ, ಕೊಳತ್ತೂರು ರಾಮಕೃಷ್ಣ ಶಾಸ್ತ್ರಿ, ಸಿ.ವಿ. ನಾಗರಾಜು, ಟಿ.ಎನ್‌. ರಾಮಚಂದ್ರರಾವ್‌, ಪುತ್ರಿ ವೀಣಾ ಕಿನ್ಹಾಳ್‌ ಉಲ್ಲೇಖಾರ್ಹರು.

ಲಕ್ಷ್ಯದಲ್ಲಿದ್ದ ಇವರ ಸಾಧನೆ ಅಪಾರ. ಅಚ್ಚುಕಟ್ಟಾದ ಪಾಠಕ್ರಮ. ಸ್ವರ ಸಹಿ ಸಹಿತವಾಗಿ ಕೃತಿಗಳನ್ನು ಪಾಠ ಮಾಡುತ್ತಿದ್ದರು. ವಿದ್ಯಾರ್ಥಿಗಳೊಡನೆ ಸಹಜವಾಗಿ, ಸರಳವಾಗಿ ಮಾತಾಡುತ್ತ ಅವರಿಗೆ ಸಂಗೀತದೊಡನೆ ಜೀವನಕ್ಕೆ ಅಗತ್ಯವಾದ ಹಲವು ಹತ್ತು ವಿಷಯಗಳನ್ನು ತಿಳಿಸುತ್ತಿದ್ದರು. ಊಟೋಪಚಾರಗಳಲ್ಲಿ ಬಹಳ ಅಚ್ಚುಕಟ್ಟು. ಸಂಗೀತದ ವಿಚಾರಗಳನ್ನು ಊಟದ ವಿಚಾರಗಳ ಉಪಮೆಯೊಡನೆ ವಿವರಿಸುತ್ತಿದ್ದ ರಾಜಾರಾಯರ ವೈಖರಿಯನ್ನು, ಅವರ ವಿದ್ಯಾರ್ಥಿಗಳ ಮಾತಿಂದಲೇ ತಿಳಿಯಬೇಕು! ಅಂತಹ ಉತ್ತಮ ಅಭಿರುಚಿ, ರಸಿಕತೆ!

ಮಾತುಗಳನ್ನು ಹಿಂದುಮುಂದಾಗಿ ಹೇಳುವುದೂ ಇವರ ವಿನೋದಪ್ರವೃತ್ತಿಗೆ ಮತ್ತೊಂದು ನಿದರ್ಶನ. “ಎಲ್ಲಾ ವಿಷಯಗಳನ್ನೂ ಸರಿಯಾಗಿ ಓದಿ, ತಿಳಿದುಕೊಂಡು, ಪರೀಕ್ಷೆಗೆ ಬಂದು ಬರೆದರೆ ‘ಸುಪ್ಯಾ’, ಇಲ್ಲದಿದ್ದರೆ ‘ಲುಪೇ’, ನೀವೇನು ಸುಪ್ಯಾ ಆಗಬೇಕೋ, ಲುಫೇ ಆಗಬೇಕೋ?” ಎಂದು ಕೇಳಿದರೆ, ತರಗತಿಯಲ್ಲಿ ನಗೆಯ ಅಲೆ ಏಳದಿರಲು ಸಾಧ್ಯವೇ? ಶಾಸ್ತ್ರಭಾಗದಲ್ಲೂ ಪಾಂಡಿತ್ಯ, ಪರಿಣತಿ ಪಡೆದಿದ್ದವರಾದ್ದರಿಂದ, ಶಾಸ್ತ್ರಸಮ್ಮತವಾದ ಅಚ್ಚುಕಟ್ಟಾದ ರೀತಿಯಲ್ಲಿ ಪ್ರತಿಯೊಂದು ರಾಗವೂ, ಕೃತಿಗಳೂ, ನೆರವಲ್‌-ಸ್ವರ ಪ್ರಸ್ತಾರಗಳೂ ವಿದ್ಯಾರ್ಥಿಗಳಿಗೆ ಪಾಠವಾಗುತ್ತಿದ್ದುವು; ಅವರ ವಾದನದಲ್ಲೂ ಸ್ಪಷ್ಟವಾಗಿ ಮೂಡುತ್ತಿದ್ದುವು. ಹಾಗೆಯೇ ಹಿರಿಯ ಕಿರಿಯರೆಲ್ಲರಿಗೂ ಅನುಕೂಲವಾಗುವಂತೆ ಶಾಸ್ತ್ರಗ್ರಂಥಗಳನ್ನೂ ಬರೆದಿದ್ದಾರೆ. ‘ಸಂಗೀತ ಶಾಸ್ತ್ರಸಾರ’, ‘ಸಂಗೀತಶಾಸ್ತ್ರಚಂದ್ರಿಕೆ’, ಹ‘ಹರಿದಾಸಕೃತಿಮಂಜರಿ’, ‘ಹರಿದಾಸರ ಕೃತಿಗಳು’, ‘ಭಾರತೀಯ ಸಂಗೀತ ವಾದ್ಯಗಳು’-ಇತ್ಯಾದಿ ಹಲವಾರು ಲಕ್ಷ್ಯ-ಲಕ್ಷಣ ಪುಸ್ತಕಗಳು ರಾಜಾರಾಯರಿಗಿದ್ದ ಪಾಂಡಿತ್ಯ, ಜ್ಞಾನ ಸಂಪತ್ತು, ವಿಚಾರ ಪ್ರೌಢಿಮೆಗಳಿಗೆ ಹಿಡಿದ ದರ್ಪಣದಂತಿವೆ. ಉತ್ತಮ ವಾಗ್ಮಿಯೂ ಆಗಿದ್ದು, ಸಂಘ-ಸಂಸ್ಥೆಗಳು ನಡೆಸುತ್ತಿದದ ವಿಚಾರಗೋಷ್ಟಿಗಳಲ್ಲಿ ಭಾಗವಹಿಸಿ, ವಿದ್ವತ್ಪೂರ್ಣ ಭಾಷಣಗಳನ್ನೂ, ಉಪಯುಕ್ತ ಪ್ರಾತ್ಯಕ್ಷಿಕೆ, ಕಾರ್ಯಕ್ರಮಗಳನ್ನೂ ನೀಡುತ್ತಿದ್ದರು. ಹಿರಿಯ ವೀಣಾವಾದಕರಾಗಿ, ಉತ್ತಮ ಬೋಧಕರಾಗಿ, ಗ್ರಂಥಕರ್ತೃವಾಗಿ ಇವರ ಸಾಧನೆ ತ್ರಿಪಥ ಗಾಮಿನಿಯಾದ ಭಾಗೀರಥಿಯಂತೆ.

ವೀಣಾ ರಾಜಾರಾಯರ ಜೀವಿತದ ಪೂರ್ವಭಾಗವು ಕಚೇರಿಗಳನ್ನು ನಡೆಸುವುದರಲ್ಲೂ, ಸಂಧ್ಯಾಕಾಲವು ಶಿಕ್ಷಕವೃತ್ತಿಯಲ್ಲೂ ಸಾರ್ಥಕವಾಗಿ ವಿನಿಯೋಗವಾಯಿತೆಂದು ವಿಂಗಡಿಸಬಹುದು. ಇವರ ವಾದನದಲ್ಲಿ ಮೈಸೂರು ಶೈಲಿಯು ಪ್ರತಿಬಿಂಬತವಾಗಿರುತ್ತಿತ್ತು. ಆಲಾಪನೆಯಾಗಿರಲಿ, ಕೃತಿನಿರೂಪಣೆಯಾಗಿರಲಿ, ನೆರವಲ್‌-ಕಲ್ಪನಾ ಸ್ವರಗಳಾಗಿರಲಿ, ಅದರಲ್ಲಿ ಉತ್ತಮ ಮನೋಧರ್ಮವಿದ್ದು, ಶಿಸ್ತು-ಶಾಸ್ತ್ರೀಯತೆಗಳು ಪೋಷಣೆ ಪಡೆದು ಉಳಿದಿರುತ್ತಿದ್ದುವು.

ಕರ್ನಾಟಕ ಗಾನಕಲಾ ಪರಿಷತ್ತಿನ ನಾಲ್ಕನೇಸಮ್ಮೇಳನಾಧ್ಯಕ್ಷರಾಗಿ ಅವರು ಮಾಡಿದ ಅಧ್ಯಕ್ಷ ಭಾಷಣ ಅವರ ಹೃದಯ ಶ್ರೀಮಂತಿಕೆಗೆ, ಅನ್ಯ ವಿದ್ವಾಂಸರ ಬಗ್ಗೆ ಅವರಿಗಿದ್ದ ವಿಶ್ವಾಸ-ಗೌರವಗಳಿಗೆ, ಮುಂದಿನ ಪೀಳಿಗೆಯವರ ಸಾಧನೆಯ ಬಗೆಗಿದ್ದ ಕಳಕಳಿಗೆ, ಸರಳತೆ-ಸಜ್ಜನಿಕೆಗಳಿಗೆ ಕೈಗನ್ನಡಿಯಂತಿತ್ತು. ಭಾಷಾಭೇದ, ಪ್ರಾಂತ್ಯಭೇದಗಳನ್ನವರು ಲಕ್ಷಿಸುತ್ತಿರಲಿಲ್ಲ. ಶಾಲೆಗಳಲ್ಲಿಯೇ ಸಂಗೀತವು ಇತರ ಪಠ್ಯವಸ್ತುಗಳಂತೆಯೇ ಕಡ್ಡಾಯವಗಾಗಿ ಸೇರ್ಪಡೆಯಾಗಬೇಕು; ಇದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಮನೋವೈಶಾಲ್ಯ, ಸೌಂದರ್ಯಾನುಭೂತಿ, ವಿವೇಚನಾ ಸಾಮರ್ಥ್ಯ, ಏಕಾಗ್ರತೆ ಮುಂತಾದ ಹಲವು ಹತ್ತು ಒಳ್ಳೆಯ ಅಂಶಗಳು ಬೆಳೆಯಲು ಸಾಧ್ಯವಾಗುತ್ತದೆಂದು ನಂಬಿದ್ದವರು .

ಸಾಮಾನ್ಯವಾಗಿ ಎಲ್ಲ ಸಮ್ಮೇಳನಗಳಲ್ಲಿಯೂ ಮೊದಲ ದಿನದ ಉದ್ಘಾಟನಾ ಕಚೇರಿ, ಸಮ್ಮೇಳನಾಧ್ಯಕ್ಷರಿಂದ ಜರುಗುವುದು ನಡೆದು ಬಂದಿರುವ ಪದ್ಧತಿ. ಆದರೆ ರಾಜಾರಾಯರು, ತಮ್ಮ ವಯೋಧರ್ಮವನ್ನು ಗಣಿಸಿ ತಮ್ಮ ಬದಲು ಬೇರೆ ವಿದ್ವಾಂಸರಿಗೆ ಆ ಸಮಯದ ಕಚೇರಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದು ಬಹುಶಃ ಸಂಗೀತ ಸಮ್ಮೇಳನಗಳ ಚರಿತ್ರೆಯಲ್ಲಿಯೇ ಒಂದು ದಾಖಲೆ ಎನ್ನಬಹುದು. ಇದು ನಡೆದದ್ದು ರಾಜಾರಾಯರು ಸಮ್ಮೇಳನಾಧ್ಯಕ್ಷರಾಗಿದ್ದ, ಕರ್ನಾಟಕ ಗಾನಕಲಾ ಪರಿಷತ್ತಿನ ೬.೧.೭೪ರಿಂದ ೧೩.೧.೭೪ರ ವರೆಗೆ ನಡೆದ ಸಮ್ಮೇಳನ ಸಂದರ್ಭದಲ್ಲಿ. ಇಂತಹ ಔದಾರ್ಯ, ಕಾರ್ಯಕ್ರಮ ಉತ್ತಮವಾಗಿರಲೇಬೇಕೆಂಬ ಆಸ್ಥೆ, ನಿರಾಡಂಬರ ಪ್ರವೃತ್ತಿ ಎಲ್ಲರಿಗೂ ಸಾಧ್ಯವಾಗದು.

ಶ್ರೀಶೈಲ ನಿಡುಮಾಮಿಡಿ ಸ್ವಾಮಿಗಳಿಂಧ ‘ರಾಗರಸಾಭಿಜ್ಞ’, ಬೇರೆ ಬೇರೆ ಸಂಸ್ಥೆಗಳಿಂದ ‘ಸಂಗೀತ ವಿದ್ಯಾ ತಿಲಕ’, ‘ಗಾಯನ-ವಾದನ ಪ್ರವೀಣ’, ‘ಗಾನವಿದ್ಯಾವಿಶಾರದ’, ‘ಗಾನಕಲಾ ಭೂಷಣ’ ಇತ್ಯಾದಿ ಗೌರವ ಪ್ರಶಸ್ತಿಗಳು ರಾಜಾರಾಯರಿಗೆ ಸಂದಿದ್ದುವು. ಭೈರವಿ ಲಕ್ಷ್ಮೀನಾರಾಯಣಪ್ಪ ಹಾಗೂ ಮೈಸೂರು ಸದಾಶಿವರಾಯರ ಜೀವನ ಸಾಧನೆಗಳನ್ನು ಚಿತ್ರಿಸುವ ಕಿರುಹೊತ್ತಿಗೆಗಳನ್ನು ಇವರು ಬರೆದಿದ್ದಾರೆ. ಇವು ಇಂಡಿಯಾ ಬುಕ್‌ ಹೌಸ್‌ನಿಂಧ ಪ್ರಕಟವಾಗಿವೆ.

ವೀಣೆ ರಾಜಾರಾಯರ ಪುತ್ರ ಶ್ರೀ ನಾಗರಾಜ್‌ರವರು ಲಯವಾದ್ಯಗಾರರಾಗಿ ಸಂಗೀತ ಜಗತ್ತಿನಲ್ಲಿ ಪರಿಚಿತರಾಗಿದ್ದಾರೆ. ಪುತ್ರಿ ವೀಣಾ ವಿದುಷಿ ವೀಣಾ ಕಿನ್ಹಾಳ್‌ ಪರದೇಶದಲ್ಲಿ ನೆಲೆಸಿದ್ದರೂ ಇಲ್ಲಿನ ಸಂಸ್ಥೆಗಳ ಮೂಲಕ ತಮ್ಮ ತಂದೆಯವರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತಿರುತ್ತಾರೆ. ಮತ್ತೊಬ್ಬ ಪುತ್ರಿ ಡಾ. ಪೂರ್ಣಿಮಾ ತಮ್ಮ ತೀಕ್ಷ್ಣ ಲೇಖನಿಯಿಂದಲೂ ಕುಶಾಗ್ರಮತಿಯಿಂದಲೂ ತಮ್ಮದೇ ಆದ ಗೌರವಯುತ ಸ್ಥಾನವನ್ನು ಪತ್ರಿಕೋಧ್ಯಮದಲ್ಲಿ ಸಾಧಿಸಿಕೊಂಡಿದ್ದಾರೆ. ೧೯೭೯ರಲ್ಲಿ ರಾಜಾರಾಯರು, ತಮ್ಮ ಭೌತಿಕ ಕಾಯದಿಂದ ಮುಕ್ತರಾದರು. “ದೇಹವೊಂದು ದೇವ ವೀಣೆ, ನರನರವೂ ತಂತಿ ತಾನೆ, ಹಗಲಿರುಳೂ ನುಡಿಯುತಿಹ, ಉಸಿರಾಟವೇ ಜೀವ” ಎಂಬ ಸಾಲುಗಳನ್ನಿಲ್ಲಿ ಸ್ಮರಿಸಬಹುದು. ಶಿಷ್ಯ-ಪ್ರಶಿಷ್ಯರ ಕೈಯಲ್ಲಾಡುತ್ತಿರುವ ವೀಣೆಯ ನಾದದಲ್ಲಿ ರಾಜಾರಾಯರ ಉಸಿರೂ ಸೇರಿ, ಇಂದೂ ಮಿಡಿಯುತ್ತಿರ ಬಹುದಲ್ಲವೇ?

ನಮ್ಮ ಗುರು ಗಾನಕಲಾಸಿಂಧು ಡಿ. ಸುಬ್ಬರಾಮಯ್ಯನವರಿಗೂ ಪರಮಾಪ್ತ ಮಿತ್ರರಾಗಿದ್ದ ರಾಜಾರಾಯರು ನಮ್ಮ ಮನೆಯವರೆಲ್ಲರಿಗೂ ಬಹು ಆಪ್ತರಾಗಿದ್ದವರು. ವಿದುಷಿ ವಸುಂಧರಾ ಹಾಗೂ ಡಾ.ಟಿ.ಎಸ್‌. ಸತ್ಯವತಿ, ಆಚಾರ್ಯ ಪಾಠ ಶಾಲಾ ಕಾಲೇಜಿನಲ್ಲಿ ಅವರಿಂದ ಸಂಗೀತ ಶಿಕ್ಷಣ ಪಡೆದ ಭಾಗ್ಯ ಶಾಲಿಗಳು. ಹೀಗಾಗಿ ಅವರು ನಮ್ಮ ಮನೆಗೆ ಆಗೀಗ ಬರುತ್ತಿದ್ದರು. ಬಂದಾಗಲೆಲ್ಲ ಒಮ್ಮೆ ಮನೆಯನ್ನೆಲ್ಲಾ ಸುತ್ತಿ ನೋಡಿ, “ನಿಮ್ಮ ಮನೆಯ ಬಾಗಿಲು, ಕಿಟಕಿ, ನೆಲ, ಗೋಡೆ, ಹೆಂಚುಗಳೂ ಸಂಗೀತ ಹಾಡುತ್ತಿವೆ?” ಎನ್ನುತ್ತಿದ್ದರು. ಇಂತಹ ಮಹಾನುಭಾವರ ಸ್ಮರಣೆ ಪುಣ್ಯಪ್ರದ. ಇಂತಹವರ ವಿಚಾರಧಾರೆ, ನಡೆ-ನುಡಿಗಳು ಮಾರ್ಗದರ್ಶಕ.