ಸಂಗೀತ ಸಾಹಿತ್ಯಗಳಿಂದೊಡಗೂಡಿ, ರಸಭರಿತವಾಗಿ ಹಾಗೂ ಕಲಾತ್ಮಿಕವಾಗಿ ಪುರಾಣೋಕ್ತ ಚಾರಿತ್ರಗಳನ್ನು ನಿರೂಪಿಸಿ ತನ್ಮೂಲಕ ಜನತೆಯಲ್ಲಿ ಭಗವದ್ಭಕ್ತಿ, ಧರ್ಮದ ಜಾಗೃತಿ, ನೀತಿ, ನ್ಯಾಯ, ಸುಸಂಸ್ಕೃತಿಗಳನ್ನು ಬೆಳಗಿಸವುದೇ ಹರಿಕಥಾಕ ಕಲಾ ಮಾಧ್ಯಮದ ಉದ್ದೇಶ. ಈ ಕಲೆಯನ್ನ ಸಾಧಿಸಿ ಮತ್ತು ಸಿದ್ಧಿಸಿಕೊಂಡು ಕೀರ್ತನ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿರುವ ಅನೇಕ ಹಿರಿಯ ಕೀರ್ತಿವಂತ ಕೀರ್ತನಕಾರರಲ್ಲಿ ಮೈಸೂರಿನ ಲಕ್ಷ್ಮೀಪತಿ ಭಾಗವತರು ಒಬ್ಬರು.

 

ಬಹುತೇಕ ಕಲೆಗಳು ಅನುವಂಶೀಯವಾಗಿ ಮುಂದುವರೆದು ಅದರ ಸಂಪ್ರದಾಯ ಮತ್ತು ಶೈಲಿಗಳನ್ನು ಉಳಿಸಿ ಬೆಳೆಸುವುದರಲ್ಲಿ ಬಹಳಷ್ಟು ಯಶಸ್ವೀ ಪರಿಣಾಮಗಳನ್ನು ಹೊಂದಿದೆ. ಲಕ್ಷ್ಮೀಪತಿಗಳಲ್ಲಿ ಮೈಗೂಡಿ ಬಂದ ಈ ಕೀರ್ತನಕಲೆ ಅನುವಂಶೀಯವೇ. ಇವರ ತಂದೆ ಲಕ್ಷ್ಮೀನಾರಾಯಣ ಭಾಗವತರು ಒಳ್ಳೆಯ ರಂಗ ಕಲಾವಿದರೂ ಮತ್ತು ಕಥಾಕೀರ್ತನಕಾರರೂ ಆಗಿದ್ದರು.

ಆತ್ರೇಯಸ ಗೋತ್ರಜರು ಮತ್ತು ಮುಲುಕನಾಡು ತೆಲುಗು ಬ್ರಾಹ್ಮಣರಾದ ಲಕ್ಷ್ಮೀನಾರಾಯಣ ಭಾಗವತರು ತಮ್ಮ ಧರ್ಮಪತ್ನಿ ಸುಬ್ಬಲಕ್ಷ್ಮಮ್ಮನವರೊಡಗೂಡಿ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ವೈದಿಕ ಧರ್ಮಾವಲಂಬಿಗಳಾಗಿ, ಹರಿಕಥೆಯನ್ನೇ ತಮ್ಮ ವೃತ್ತಿಯನ್ನಾಗಿಟ್ಟುಕೊಂಡು ಸಂಸಾರ ಸಾಗಿಸುತ್ತಿದ್ದರು.

ಭಾಗವತರಿಗೆ ಪಾರ್ವತಮ್ಮ, ಶಾರದಮ್ಮ ಎಂಬ ಇಬ್ಬರು ಹೆಣ್ಣುಮಕ್ಕಳೂ, ಲಕ್ಷ್ಮೀಪತಿ, ನರಸಿಂಹಮೂರ್ತಿ ಮತ್ತು ಸತ್ಯನಾರಾಯಣಮೂರ್ತಿ ಎಂಬ ಮೂರು ಗಂಡು ಮಕ್ಕಳು. ಲಕ್ಷ್ಮೀಪತಿಗಳು ಜ್ಯೇಷ್ಠ ಪುತ್ರರಾಗಿ ೧೯೧೬ನೇ ಇಸವಿಯಲ್ಲಿ ಕೊರಟಗೆರೆಯಲ್ಲಿ ಜನಿಸಿದರು.

ವಿದ್ಯಾಭ್ಯಾಸ: ಲೌಕಿಕವಾದ ಶಾಲಾವಿದ್ಯೆಯು ಅಷ್ಟಾಗಿ ಮುಂದುವರೆಯಲಿಲ್ಲ. ಆದರೆ ಕೀರ್ತನಕಲಾ ವ್ಯಾಸಂಗ ಬಹಳ ಉನ್ನತ ಮಟ್ಟದಲ್ಲಿ ಕೈಗೂಡಿತು. ಕಲಾರಾಧಕರಾದ ತಂದೆ ಲಕ್ಷ್ಮೀನಾರಾಯಣ ಭಾಗವತರು ತಾವೇ ಖುದ್ದಾಗಿ ತಮ್ಮ ಮೂವರು ಗಂಡು ಮಕ್ಕಳಿಗೂ ಸಂಸ್ಕೃತ, ವೇದಪಾಠ, ಸಾಹಿತ್ಯ ಪಾಠ ಮತ್ತು ಕಿಈರ್ತನಕಲೆಯ ಶಿಕ್ಷಣವನ್ನು ನೀಡಿ ಸುಭದ್ರವಾದ ಅಸ್ತಿಭಾರವನ್ನು ಹಾಕಿದರು. ಅನುಭವ ಶಿಕ್ಷಣ ಧಾರೆಯೆನ್ನೆರದರು. ತಂದೆಯವರ ಆಶ್ರಯದಲ್ಲಿ ಒಳ್ಳೆಯ ಶಿಸ್ತಿನಿಂದ ಸುಶಿಕ್ಷಿತರಾದ ಲಕ್ಷಮೀಪತಿ ಸಹೋದರರು ಮುಂದೆ ಮಹಾ ಶಾಸ್ತ್ರಜ್ಞರೂ, ಮೇಧಾವಿಗಳು, ಕೋವಿದರೂ ಮತ್ತು ಉತ್ತಮ ಹಾಗೂ ಆದರ್ಶ ಕೀರ್ತನ ಕಲಾವಿದರಾಗಲು ಬಹಳಷ್ಟು ಸಾಧ್ಯವಾಯಿತು. ಕಥಾಕೀರ್ತನ ಪಾಠದ ಜೊತೆಗೆ ಸಹೋದರ ತ್ರಯರಿಗೂ ಉತ್ತಮ ರೀತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ ಮತ್ತು ಮಾರ್ಗದರ್ಶನಗಳು ವಿದ್ವಾನ್‌ ರಾಜಶೇಖರಯ್ಯನವರಲ್ಲಿ ದೊರೆಯಲ್ಪಟ್ಟಿತು. ಸಾಹಿತ್ಯ ಮತ್ತು ಸಂಗೀತ ವಿದ್ಯಾರ್ಜನೆಯಿಂದಾಗಿ ಒಳ್ಳೆಯ ಗುಣಮಟ್ಟದ ಕಲಾಪ್ರೌಢಿಮೆ ಉಂಟಾಗಿ ಇವರುಗಳು ಮಾಡುತ್ತಿದ್ದ ಕಥಾ ಕಾಲಕ್ಷೇಪಗಳಲ್ಲಿ ಸಾಹಿತ್ಯ ಮತ್ತು ಸಂಗೀತಗಳ ಮಧುರ ಮಿಲನವೇರ್ಪಟ್ಟು ಕಥಾಕೀರ್ತನವು ಕರ್ಣಾನಂದಕರವಾಗಿಯೂ, ಮನೋರಂಜಕವಾಗಿಯೂ ಮತ್ತು ಆತ್ಮರಂಜಕವಾಗಿಯೂ ಇರುತ್ತಿತ್ತು.

ತಂದೆಯವರ ತುಂಬು ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಾಗಿ ಲಕ್ಷ್ಮೀಪತಿಗಳು ಮತ್ತು ನರಸಿಂಹಮೂರ್ತಿಗಳು ಒಟ್ಟುಗೂಡಿಕೊಂಡು ಧೈರ್ಯೋತ್ಸಾಹಯುಕ್ತರಾಗಿ ಬಾಲ್ಯದಿಂದಲೇ ಹರಿಕಥೆಗಳನ್ನು ಮಾಡುವುದಕ್ಕೆ ಪ್ರಾರಂಭಿಸಿದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಬಾಲಕರಾದ ಈ ಅಣ್ಣ ತಮ್ಮಂದಿರೀರ್ವರು ಸೇರಿ ಕಥಾಕಾಲಕ್ಷೇಪ ಮಾಡುತ್ತಿದ್ದರೆ ಶ್ರೋತೃವರ್ಗದವರು ಬಹಳವಾಗಿ ಆನಂದಿಸುತ್ತಿದ್ದರಂತೆ. ಊರಿನ ಗಣ್ಯವ್ಯಕ್ತಿಗಳು ಈ ಬಾಲಕರ ಹರಿಕಥೆಗಳನ್ನು ತಮ್ಮ ತಮ್ಮ ಮನೆಗಳಲ್ಲೇರ್ಪಡಿಸಿ ತುಂಬು ಪ್ರೋತ್ಸಾಹ ನೀಡಿ ತಮ್ಮ ಅಭಿಮಾನ,ಆಶೀರ್ವಾದಗಳೊಂದಿಗೆ ಗೌರವ ಸಲ್ಲಿಸುತ್ತಿದ್ದರು. ಬಾಲ್ಯದಲ್ಲೇ ಇವರು ಹರಿಕಥೆಯಲ್ಲಿ ಆಡುತ್ತಿದ್ದ ಮಾತುಗಳ ವೈಖರಿ, ಶಬ್ದ ಭಂಡಾರ, ಒಳ್ಳೆಯ ಹಾಡುಗಾರಿಕೆ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತಂತೆ. ಮೆಚ್ಚಿದ ಜನತೆ ಇವರನ್ನು “ಲವ-ಕುಶ’ರೆಂಬುದಾಗಿ ಹೊಗಳುತ್ತಿದ್ದರಂತೆ.

ಬಾಲಕರ ಕೀರ್ತನಕಲಾ ಪ್ರೌಢಿಮೆಯನ್ನ ಕುರಿತಂತೆಕ ಒಂದೆರಡು ಘಟನೆಗಳನ್ನ ಇಲ್ಲಿ ಉಲ್ಲೇಖಿಸಿದರೆ ತಪ್ಪಾಗಲಾರದು.

ಬಾಲಕರು ಹರಿಕಥೆಯನ್ನು ಮಾಡುವ ಒಂದು ಸಂದರ್ಭದಲ್ಲಿ ಖ್ಯಾತ ಸಂಗೀತ ವಿದ್ವಾಂಸರಾದ ಬಿಡಾರಂ ಕೃಷ್ಣಪ್ಪನ ವರು ಇವರ ಕಥಾ ಕಾಲಕ್ಷೇಪ ಕೇಳುವ ಅವಕಾಶವುಂಟಾಗಿ ಮಕ್ಕಳ ಕಥಾ ಶೈಲಿ ಮತ್ತು ಅವರ ಹಾಡುಗಾರಿಕೆಯನ್ನು ಕೇಳಿ ಬಹಳ ಆನಂದಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಇವರೀರ್ವರಿಗೂ ಕೀರ್ತನಕಲೆಗೆ ಉಪಯುಕ್ತವಾಗುವ ರೀತಿಯಲ್ಲಿ ಕೆಲವೊಂದು ಕೃತಿಗಳನ್ನು ಹೇಳಿಕೊಟ್ಟಿದ್ದಾರೆ.

ಮತ್ತೊಂದು ಸಲ “ಧರ್ಮರತ್ನಾಕರ” ಮೈಸೂರು ಬನುಮಯ್ಯನವರು ಈ ಬಾಲಕರ ಹರಿಕಥೆಯನ್ನು ಅಂದು ಹೆಸರುವಾಸಿಯಾಗಿದ್ದ ಬನುಮಯ್ಯ ಛತ್ರದಲ್ಲಿ ಏರ್ಪಡಿಸಿದ್ದರು. ಕಿಕ್ಕಿರಿದ ಜನಸ್ತೋಮ. “ಭಕ್ತಮಯೂರಧ್ವಜ” ಕಥಾಪ್ರಸಂಗ ಅತಿ ವೈಭವಯುತವಾಗಿ ನಡೆದು ಮೆಚ್ಚುಗೆಗೆ ಪಾತ್ರರಾದರು. ಬನುಮಯ್ಯನವರು ಹುಡುಗರನ್ನು ಬಹುವಾಗಿ ಗೌರವಿಸಿದರಂತೆ. ಈ ಪ್ರಸಂಗ ಅಂದು ಮೈಸೂರಿನ ಮಹಾರಾಜರಾಗಿದ್ದ ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ತಿಳಿದು ಮರುದಿನ ಅರಮನೆಯಲ್ಲಿ ಈ ಸೋದರರ ಕಥಾಕಾಲಕ್ಷೇಪವನ್ನೇರ್ಪಡಿಸಿ ತಾವೇ ಖುದ್ದಾಗಿ ಕೇಳಿ ಬಹಳ ಸಂತೋಷಪಟ್ಟು ಇವರ ಕಲಾ ಸಾಮರ್ಥ್ಯವನ್ನು ಮೆಚ್ಚಿ ಅರಮನೆಯನಿಂದ ಗೌರವ ಸಲ್ಲಿಸಿದರು . ಇಂತು ಬಾಲ್ಯದಲ್ಲೆ ರಾಜ ಸನ್ಮಾನಿತರಾದವರು ಲಕ್ಷ್ಮೀಪತಿಗಳು ಮತ್ತು ನರಸಿಂಹಮೂರ್ತಿಗಳು.

ಮತ್ತೊಂದು ಘಟನೆಯೆಂದರೆ, ಬಾಲಕರ ಕಥಾ ಶೈಲಿ, ನಿರೂಪಣೆ ಮತ್ತು ಸಂದರ್ಭೋಚಿತವದ ಭಾವಾವೇಶಗಳಿಂದ ಕೂಡಿದ ಮಾತುಗಳ ಮತ್ತು ಹಾಡುಗಾರಿಕೆಯ ವೈಶಿಷ್ಟ್ಯವನ್ನು ಕೇಳಿದ ಅಂದಿನ ಪ್ರಖ್ಯಾತ ರಂಗ ಕಲಾವಿದರಾಗಿದ್ದ ‘ನಟಭಯಂಕರ’ ಗಂಗಾಧರರಾಯರು ಬಹಳವಾಗಿ ಶ್ಲಾಘಿಸಿದ್ದೇ ಅಲ್ಲದೆ ತಮ್ಮ ನಾಟಕದ ಕಂಪೆನಿಯ ವತಿಯಿಂದ ನಡೆಯುವ ‘ಭಕ್ತಪ್ರಹ್ಲಾದ’, ‘ಕೃಷ್ಣಗಾರುಡಿ’ ಮುಂತಾದ ಕೆಲವೊಂದು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಲು ಹುರಿದುಂಬಿಸಿದರು. ಹೀಗಾಗಿ ಈ ಬಾಲಕರು ಕೃಷ್ಣ-ಬಲರಾಮ, ನಾರದ ಪಾತ್ರಗಳನ್ನು ವಹಿಸಿ ನಾಟಕ ಕ್ಷೇತ್ರದಲ್ಲೂ ಹೆಸರುಗಳಿಸಿದರು. ಈ ನಿಟ್ಟಿನಲ್ಲೂ ಇವರು ತಮ್ಮ ತಂದೆಯನ್ನೇ ಅನುಸರಿಸಿದಂತಾಯಿತು. ಏಕೆಂದರೆ ಇವರ ತಂದೆಯವರೂ  ಸಹ ಮೊದ ಮೊದಲಲ್ಲಿ ರಂಗ ಕಲಾವಿದರಾಗಿ ಅಂದು ಖ್ಯಾತರಾಗಿದ್ದ ಅಗಳೀ ಕಂಪೆನಿ, ಚೆಂದಣ್ಣ ಕಂಪೆನಿ ಮತ್ತು ಗಂಗಾಧರರಾಯರ ಕಂಪೆನಿಯಲ್ಲಿ ನಾಟಕಗಳಲ್ಲಿ ಪಾತ್ರಧಾರರಾಗಿ ರಂಗ ಕಲಾಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು. ಅಂತೆಯೇ ಲಕ್ಷ್ಮೀಪತಿಗಳು ಮತ್ತು ನರಸಿಂಹ ಮೂರ್ತಿಗಳು ಕೆಲಕಾಲ ಬಾಲಪಾತ್ರಗಳನ್ನ ವಹಿಸಿ ಗಂಗಾಧರರಾಯರ ಕಂಪೆನಿ ಮತ್ತು ಗುಬ್ಬಿ ವೀರಣ್ಣನವರ ಕಂಪೆನಿಯಲ್ಲಿ ಕಲಾವಿದರಾಗಿ ದುಡಿದು ನಾಟಕ ಕ್ಷೇತ್ರದಲ್ಲೂ ಸ್ವಲ್ಪ ಮಟ್ಟಿನ ಸೇವೆ ಸಲ್ಲಿಸಿದ್ದಾರೆ.

ಈ ರೀತಿ ಲಕ್ಷ್ಮೀಪತಿಗಳು ಮತ್ತು ನರಸಿಂಹಮೂರ್ತಿಗಳು ಬಾಲ್ಯದಿಂದಲೇ ಒಟ್ಟುಗೂಡಿ ಯುಗಳ ಕಥಾ ಕಾಲಕ್ಷೇಪವನ್ನು ಮುಂದುವರೆಸಿದರು. ಇವರಿಗೆ ಲಕ್ಷ್ಮೀಪತಿ ಸಹೋದರರು ಎಂಬುದಾಗಿಯೇ ಹೆಸರು ಬಂದುಬಿಟ್ಟಿತು. ಇವರ ಜೋಡಿ ಹೇಗಿತ್ತೆಂದರೆ:

ಕೆಲಸಮಯ ಲಕ್ಷ್ಮೀಪತಿಗಳು ಹರಿಕಥೆ ಮಾಡಿದರೆ ನರಸಿಂಹಮೂರ್ತಿಗಗಳು ಹಾರ್ಮೋನಿಯಂ ನುಡಿಸುತ್ತಿದ್ದರು. ಅಂತೆಯೇ ನರಸಿಂಹಮೂರ್ತಿಗಳು ಕಥೆ ಮಾಡಿದರೆ ಲಕ್ಷ್ಮೀಪತಿಗಳು ಹಾರ್ಮೋನಿಯಂ ನುಡಿಸುತ್ತಿದ್ದರು. ಹಗೆ ಕೆಲ ಸಂದರ್ಭಗಳಲ್ಲಿ ಒಬ್ಬರು  ಕೇವಲ ಕಥಾ ವಿಷಯ ಮತ್ತು ಅದರಲ್ಲಿನ ಮಾತುಗಳನ್ನು ಹೇಳಿದರೆ ಇನ್ನೊಬ್ಬರು ಅದಕ್ಕೆ ಸಂಬಂಧಿಸಿದ ಹಾಡುಗಳನ್ನು ಪದ್ಯಗಳನ್ನ ಹಾಡುತ್ತಿದ್ದರು. ಒಂದೊಂದು ಸಮಯ ಒಬ್ಬರಿಗೊಬ್ಬರು ಕಥಾಭಾಗಗಳನ್ನು ಹಂಚಿಕೊಂಡು ಹರಿಕಥೆಗಳನ್ನು ನಡೆಸುತ್ತಿದ್ದರು. ವಿಶಿಷ್ಟ ತರವಾದ ಈ ಮಾದರಿಯಲ್ಲಿ ಅಣ್ಣ ತಮ್ಮಂದಿರು ಒಟ್ಟಿಗೆ ಬಹಳ ಕಾಲ ಕಥಾ ಕಾಲಕ್ಷೇಪ ನಡೆಸಿದರು. ಅನಂತರ ಕೀರ್ತನ ಕಲಾ ಸೇವೆಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ನಡೆಸಲು ಉಪಕ್ರಮಿಸಿದರು. ಮೂರನೆಯವರಾದ ಸತ್ಯನಾರಾಯಣಮೂರ್ತಿಗಳು ತಮ್ಮ ಯುವಾವಸ್ಥೆಯಿಂದ ಹರಿಕಥೆಯನ್ನು ಪ್ರಾರಂಭಿಸಿದರು. ಮತ್ತು ಮೊದಲಿನಿಂದಲೂ ಪ್ರತ್ಯೇಕವಾಗಿಯೇ ಹರಿಕಥೆಯನ್ನು ನಡೆಸುತ್ತಿದ್ದರು.? ಸಹೋದರ ತ್ರಯರೂ ಕಥಾಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಲಾ ಸೇವೆಯಲ್ಲಿ ನಿರತರಾದರು.

ಮುಂದೆ ಲಕ್ಷ್ಮೀಪತಿಯವರು ಗೃಹಸ್ಥಾಶ್ರಮ ಸ್ವೀಕರಿಸಿ ತಮ್ಮ ಪತ್ನಿ ಶ್ರೀಮತಿ ಲಕ್ಷಮ್ಮನವರೊಡಗೂಡಿ ಮೈಸೂರಿನಲ್ಲಿ ಖಾಯಂ ಆಗಿ ನೆಲೆಸಿದರು. ತಮ್ಮಲ್ಲಿರುವ ಕೀರ್ತನಕಲೆಯ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸಿದರು. ವೈದಿಕಧರ್ಮಾವಲಂಬಿಗಳಾದ, ಶ್ರೋತ್ರಿಯರಾದ ಇವರು ನಿತ್ಯವಾದ ನೇಮ ನಿಷ್ಠೆಗಳನ್ನ ಸಾಕಷ್ಟು ಮಟ್ಟಿಗೆ ಕಾಪಾಡಿಕೊಂಡು ಕೀರ್ತನ ಕಲೆಯನ್ನೇ ಜೀವನದ ವೃತ್ತಿಯನ್ನಾಗಿ ಬಳಸಿಕೊಂಡು ಸಾಧುತ್ವದಿಂದ ಸಂಸಾರ ಸಾಗಿಸುತ್ತಿದ್ದರು. ಕಥಾವೃತ್ತಿಯಿಂದ ಬರುತ್ತಿದದ ಸಂಪಾದನೆಯಿಂದ ಯದೃಚ್ಛಾಲಾಭ ತುಷ್ಟರಾಗಿ, ಕೊರತೆಯಿಲ್ಲದೆ ಕುಟುಂಬ ನಡೆಸುತ್ತಿದ್ದರು. ಕೀರ್ತನ ಕಲೆಯೇ ಬಾಳಿನುಸಿರೆಂಬುದಾಗಿ ಭಾವಿಸಿದ ಇವರು ಕಲಾರಾಧನೆಯಲ್ಲಿ ಬಹಳವಾಗಿ ತಮ್ಮನ್ನ ತಾವು ತೊಡಗಿಸಿಕೊಂಡರು.

ಯಾವ ಕಲೆ ಜನತೆಯಲ್ಲಿನ ಅಂಕುಡೊಂಕುಗಳನ್ನು ಸರಿಪಡಿಸಿ, ಜೀವನ ಮೌಲ್ಯಗಳ ಅರಿವನ್ನುಂಟುಮಾಡಿ, ನೆಮ್ಮದಿಯ ಬಾಳ್ವೆಯ ಪಥ ತೋರಿಸಿ, ಜನತೆಯನ್ನು ಸುಸಂಸ್ಕೃತರನ್ನಾಗಿಸಿ, ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಸಕ್ರಿಯಾತ್ಮಕ ಶಕ್ತಿಯಾಗಿರುತ್ತದೆಯೋ ಆ ಕಲೆ ನಿಜಕ್ಕೂ ಸರ್ವಪ್ರಕಾರದಿಂದಲೂ, ಸರ್ವಕಾಲದಲ್ಲೂ ಶ್ಲಾಘನೀಯ ಮತ್ತು ಪೂಜನೀಯ. ಈ ಕ್ರಿಯಾಶೀಲತೆಯ ಅದ್ಭುತ ಶಕ್ತಿ ನಮ್ಮ ಭಾರತದಲ್ಲಿನ ಸಂಗೀತ, ಸಾಹಿತ್ಯ, ನಾಟಕ, ಶಿಲ್ಪ, ಜಾನಪದ ಮತ್ತು ಕಥಾಕೀರ್ತನ ಕಲೆಗಳಲ್ಲಿ ಇದೆ ಎಂಬುದು  ಸತ್ಯ ಮತ್ತು ಹೆಮ್ಮೆಯ ವಿಷಯ. ನಿತ್ಯ ವಿನೂತನವಾದ, ಸತ್ಯವೂ ಮತ್ತು ಸುಂದರವೂ ಆದ ನಮ್ಮ ಕಲೆಗಳು ವಿಶ್ವಿವಿಖ್ಯಾತ. ಇಂತಹ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಕಲಾವಿದರು ಯಾರೇ ಆಗಲಿ ಅವರು ಸುಸಂಸ್ಕೃತರು, ಗೌರವಾರ್ಹರು ಮತ್ತು  ಸಮಾಜಕ್ಕೆಕ ಕಲಾದೇವಿಯಿತ್ತ ಕೊಡುಗೆ. ಕಲೆಯ ನಿಜೋದ್ದೇಶಗಳನ್ನ ಸಂರಕ್ಷಿಸಿ, ಕ್ಷೇತ್ರದಲ್ಲಿ ನಿಷ್ಠೆಯಿಂದ ದುಡಿದು, ನಾಡಿಗೆ ಕೀರ್ತಿ ತರುವುದು ಕಲಾವಿದರ ಆದ್ಯ ಹಾಗೂ ಗಮನೀಯವಾದ ಕರ್ತವ್ಯ. ಈ ಕರ್ತವ್ಯ ನಿಷ್ಠೆಯಿಂದ ಕೀರ್ಥನ ಪ್ರಪಂಚದಲ್ಲಿ ಕೀರ್ತಿಕಲಾ ಸೇವೆಯನ್ನು  ಆರಂಭಿಸಿ ತೈಲಧಾರೆಯಂತೆ ಅವಿಚ್ಛಿನ್ನವಾಗಿ ನಡೆಸಿಕೊಂಡು ಬಂದಿರುವ ಕೀರ್ತನಕಾರರಲ್ಲಿ ಲಕ್ಷ್ಮೀಪತಿಗಳು ಅಗ್ರಪೂಜ್ಯಾರ್ಹರು.

ಈ ಪುಣ್ಯತರವಾದ ಕೀರ್ತನಕಲಾ ಸೇವೆ ಸಲ್ಲಿಸಲು ಕಂಕಣಬದ್ಧರಾದ ಲಕ್ಷ್ಮೀಪತಿ ಭಾಗವತರು ವೈಧಿಕಕ ಧರ್ಮ ರೀತಿಯಲ್ಲಿ ಉಡುಪುಗಳನ್ನು ಧರಿಸಿ ಹರಿಕಥೆಗೆ ಸಿದ್ಧರಾಗುತ್ತಿದ್ದರು. ಕಚ್ಚೆಪಂಚೆಯನ್ನು ಧರಿಸಿ, ಶಲ್ಯವನ್ನ ಹೊದ್ದುಕೊಂಡು, ಹಣೆಯಲ್ಲಿ ಭಸ್ಮವನ್ನು ಧರಿಸಿ, ಕೈಯಲ್ಲಿ ತಾಳಗಳನ್ನು ಹಿಡಿದು ಹರಿಕಥೆಯನ್ನು ನಿಂತು ನಡೆಸುತ್ತಿದ್ದರು.

ರಾಮಾಯಣ, ಮಹಾಭಾರತ, ಭಾಗವತ, ದೇವೀಭಾಗವತ, ಗಣೇಶ ಪುರಾಣ, ಸ್ಕಾಂದ ಪುರಾಣ, ಸಾಧು ಸಂತರ ಮತ್ತು ಶಿವಶರಣರ ಕಥೆಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು. ಹರಿಕಥೆಗಳನ್ನು ಸಪ್ತಾಹ ಪರ್ಯಂತರ ಮತ್ತು ಎರಡು ಮೂರು ವರ್ಷಗಳ ಕಾಲ ಪರ್ಯಂತರವೂ ಏಕ ರೀತಿಯಲ್ಲಿ ಮಾಡುವ ಪದ್ಧತಿ ಇವರದಾಗಿತ್ತು. ರಾಮಾಯಣ, ಮಹಾಭಾರತಾದಿ ಪುರಾಣಗಳನ್ನು ವರ್ಷಗಟ್ಟಲೇ ವಿಸ್ತಾರವಾಗಿ ಕಥಾಕೀರ್ತನ ರೂಪದಲ್ಲಿ ನಡೆಸಿರುವ ವಿಶೇಷ ವೈವಿಧ್ಯತೆ ಇವರದು.

ಲಕ್ಷ್ಮೀಪತಿಕಗಳು ಪೀಠಿಕೆಯನ್ನು ನಿರ್ವಹಿಸುವಾಗ ವಿಷಯಗಳಿಗೆ ಒತ್ತು ಕೂಡುವುದಕ್ಕಗಿ ಮಧ್ಯೆ ಮಧ್ಯೆ ಸರಿಹೊಂದಿಕೊಳ್ಳುವ ಕೃತಿಗಳನ್ನು, ದೇವರ ನಾಮಗಳನ್ನ, ಊಗಾಭೋಗಗಳನ್ನು, ಶ್ಲೋಕಗಳನ್ನು ಹಾಡುತ್ತಿದ್ದರು. ಇದು ರಂಜನೀಯವೂ, ಆಕರ್ಶಕವಾಗಿಯೂ  ಇರುತ್ತಿತ್ತು. ಪೀಠಿಕೆಯನ್ನು ಮುಗಿಸಿ ಮುಂದೆ ಮೂಲ ಕಥೆಯ ವಿಷಯಕ್ಕೆ ಬರುತ್ತಿದ್ದರು.

ಕಥಾ ಭಾಗವನ್ನು ಕಲಾತ್ಮಕವಾಗಿ ವಿವರಿಸುವುದಕ್ಕಾಗಿ ಪರಿಪಕ್ವವಾದ ಕಲಾ ಕೌಶಲ್ಯತೆ, ಸೃಜನಶೀಲತೆ, ಭಾವೈಕ್ಯತೆ, ರಸಪ್ರಜ್ಞೆ, ಪಾತ್ರಗಳ ಸ್ಥಾನಮಾನಗಳ ಅರಿವು, ಮಾತಿನ ಶುದ್ಧತೆ ಮತ್ತು ಚಾತುರ್ಯತೆ, ಸಮಯ ಸನ್ನಿವೇಶಗಳ ಪ್ರಜ್ಞೆ ಅತ್ಯವಶ್ಯಕ. ಈ ಅರ್ಹತೆಗಳನ್ನು ಹೊಂದಿರುವ ಲಕ್ಷ್ಮೀಪತಿಗಳು ಕಥಾ ಸನ್ನಿವೇಶಗಳನ್ನು ಕರ್ಣಾನಂದಕರವಾಗಿ ಹೇಳುವುದಷ್ಟೇ ಅಲ್ಲದೆ ಮನಸ್ಸಿಗೆ ನಾಟಿ ಅಂತೆಯೇ ಚಿತ್ರಣವಾಗಿ ಕಣ್ಣಿಗೆ ಕಟ್ಟಿದಂತೆ ಹೇಳುತ್ತಿದ್ದರು. ಕಥಾ ಪ್ರಸಂಗದಲ್ಲಿ ಬರುವ ಸುಖಃದುಃಖ, ವೀರ-ರೌದ್ರ, ಹಾಸ್ಯ, ನಕ್ಕು-ನಲಿಯುವ ಮತ್ತು ಧರ್ಮ ಜಿಜ್ಞಾಸ ಸಂಬಂಧವಾದ ವಾದ ವಿವಾದಗಳ ಸನ್ನಿವೇಶಗಳನ್ನು ವರ್ಣಿಸುತ್ತಿದ್ದರೆ ಜನತೆಯ ಕಣ್ಣಲ್ಲಿ ನೀರಾಡುತ್ತಿತ್ತು.

ಮಹಾಭಾರತದಲ್ಲಿ ಉದಾಹರಣೆಗೆ-ಬಭ್ರುವಾಹನ ಕಾಳಗ, ಭಕ್ತ ಮಯೂರ ಧ್ವಜ ಕಥೆಯಲ್ಲಿ ಅರ್ಜುನ  ತಾಮ್ರಧ್ವಜರ ಕಾಳಗ, ಭೀ ಮ ದುಯೋನರ ಕಾಳಗ ಪ್ರಸಂಗ, ಇಂತು ಯಾವುದೇ ವೀರರಸದಿಂದ ಕೂಡಿದ ವಾಗ್ದಾದಗಳನ್ನ ಅದೇ ಧೋರಣೆಯಲ್ಲಿ ಮಾಡುತ್ತಿದ್ದರು.

ಹಾಸ್ಯರಸ ಪ್ರಧಾನವಾದ ಶೂರ್ಪನಖಿಯ ನಾಸಡಕಾಚ್ಛೇದನ ಭಾಗವನ್ನು ವರ್ಣಿಸುವಾಗ ಮಾತಿನ ಲಕ್ಷಣ ಜನತೆಯನ್ನು ನಕ್ಕು ನಲಿಸುತ್ತಿತ್ತು.

ಇಂಥ ಯಾವುದೇ ಪ್ರಸಂಗಗಳನ್ನು ವರ್ಣಿಸುವಾಗ ಭಾವೈಕ್ಯತೆಯಿಂದ ವೇದಿಕೆಯಲ್ಲಿ ಏಕಪಾತ್ರಾಭಿನಯವನ್ನೇ ಮಾಡುತ್ತಿದ್ದರು.

ಧರ್ಮ, ಭಕ್ತಿ, ನೀತಿ ವಿಷಯಗಳನ್ನು ನಿರೂಪಿಸುವಾಗ ವೇದೋಪನಿಷತ್ತುಗಳ ಹಿರಿಯ ಆಚಾರ್ಯರುಗಳ, ಸಾಧು ಸಂತರ, ಹರಿದಾಸರುಗಳ ಸೂಕ್ತಿಗಳನ್ನು ಆಧಾರವಾಗಿ ಬಳಸುತ್ತಿದ್ದರು.

ಕಲಾದೇವಿಯ ಅನುಗ್ರಹ ಸಂಪಾದಿತರಾದ ಇವರು ಕೀರ್ತನಕಲೆಯ ಜೊತೆಗೆ ಕವಿತಾ ಸಾಮರ್ಥ್ಯವನ್ನು ಪಡೆದಿದ್ದರು. ಕಥಾಪ್ರಸಂಗಗಳಲ್ಲಿ ಸಂದರ್ಭಕ್ಕನುಗುಣವಾದ ಹಾಡುಗಳ, ಪದ್ಯಗಳ ಕೊರತೆ ಬಂದಾಗ ತಾವೇ ಕೃತಿಗಳನ್ನು, ಹಾಡುಗಳನ್ನು ಮತ್ತು ಪದ್ಯಗಳನ್ನು ರಚಿಸಿ ಅಳವಡಿಸಿಕೊಳ್ಳುತ್ತಿದ್ದರು.

ಕಥಾ ಪ್ರಸಂಗಗಳಲ್ಲಿ ಪದ್ಯಗಳನ್ನು, ಶ್ಲೋಕಗಳನ್ನು, ಚೂರ್ಣಿಕೆಗಳನ್ನು ಹಾಡುವಗ ಸನ್ನಿವೇಶಕ್ಕನುಗುಣವಾಗಿ ಸೂಕ್ತ ರಾಗಗಳನ್ನು ಅಳವಡಿಸಿ ಹಾಡುವಾಗ ಸಾಹಿತ್ಯ ಭಾವ, ರಾಗ ಭಾವ ಬಹಳ ರಂಜನಾತ್ಮಕವಾಗಿ ಹೊರಹೊಮ್ಮುತ್ತಿತ್ತು. ಅನೇಕ ಸಂಧರ್ಭಗಳಲ್ಲಿ ಕೃತಿಗಳನ್ನೊ, ಹಾಡುಗಳನ್ನೋ ಹಾಡಿದಾಗ ಅವುಗಳಿಗೆ ಕಲ್ಪನಾ ಸ್ವರ ಪ್ರಯೋಗಗಳೂ ಕೇಳಿ ಬರುತ್ತಿತ್ತು ಇವರ ಹರಿಕಥೆಯಲ್ಲಿ. ಹೀಗಾಗಿ ಇವರ ಹರಿಕಥೆ ಸಂಗೀತಮಯವು ಆಗಿರುತ್ತಿತ್ತು. ಪಕ್ಕವಾದ್ಯಗಾರರಿಗೆ ಇವರ ಹರಿಕಥೆಯಲ್ಲಿ ತನಿ ಆವರ್ತನ ನುಡಿಸುವುದಕ್ಕೆ ಅವಕಾಶ ದೊರೆಯುತ್ತಿತ್ತು.

ಲಕ್ಷ್ಮೀಪತಿಗಳು ಕರ್ನಾಟಕದಾದ್ಯಂಥ ಕಥಾಕೀರ್ತನೆಗಳನ್ನು ನಡೆಸಿ ಜನತೆಯ ಅಭಿಯಾನ, ಪುರಸ್ಕಾರಗಳಿಗೆ ಪಾತ್ರರಾಗಿ ಕೀರ್ತಿ ಗಳಿಸಿದ್ದಾರೆ. ತೆಲುಗು ಭಾಷೆಯಲ್ಲೂ ಹರಿಕಥೆಗಳನ್ನು ನಡೆಸುತ್ತಿದ್ದ ಇವರು ವಿಜಯವಾಡ ಮುಂತಾದ ಪ್ರಾಂತಗಳಲ್ಲಿ ತೆಲುಗು ಬಾಷೆಯಲ್ಲಿ ಕಥೆಗಳನ್ನು ಮಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ.

ಸನ್ಮಾನ ಸರಮಾಲೆ: ಕೀರ್ತನಕಲಾ ಪಾಂಡಿತ್ಯ ಗಳಿಸಿರುವ ಲಕ್ಷ್ಮೀಪತಿಗಳಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿರುವುದು ಸರಿಯಷ್ಟೆ.

ಮೈಸೂರಿನ ಅಹೋಬಲಮಠದಲ್ಲಿ ಶ್ರೀ ಮಹಾಭಾರತ ಪುರಾಣವನ್ನು ಕೀರ್ತನರೂಪದಲ್ಲಿ ನಡೆಸಿದ ಇವರ ವಿದ್ಯಾ ಪ್ರೌ ಢಿಮೆಯನ್ನು ಪ್ರಶಂಸಿಸಿ ಲಕ್ಷ್ಮೀಪತಿಗಳಿಗೂ ಮತ್ತು ಅವರ ಸೋದರ ನರಸಿಂಹಮೂರ್ತಿಗಳಿಗೂ ರಾಜಸೇವಾ ಪ್ರಸಕ್ತ ಬ್ರಂ.ಶ್ರೀ./ ಅಂಬಳೆ ಸುಬ್ರಹ್ಮಣ್ಯ ಅಯ್ಯರ್ ರವರ ಅಧ್ಯಕ್ಷತೆಯಲ್ಲಿ ಇವರಿಗೆ ಅಭಿನವ ಕುಮಾರವ್ಯಾಸ ಎಂಬ ಬಿರುದಿತ್ತು ಸನ್ಮಾನಿಸಿದರು. ಈ ಸನ್ಮಾನ ವಿಷಯವನ್ನು ಕನ್ನಡ ಕವಿ ಬ್ರ.ಶ್ರೀ ಕೆ. ಶ್ರೀಕಂಠಶರ್ಮರವರು ಪದ್ಯಮಾಲಿಕಾ ರೂಪದಲ್ಲಿ ರಚಿಸಿದರು. ವಾರ್ಧಿಕ ಷಟ್ಪದಿಯಲ್ಲಿರುವ ಈ ಪದ್ಯ ಭಾಗವನ್ನು ಇಲ್ಲಿ ಉಲ್ಲೇಖಿಸಲು  ಬಯಸಿ ಬರೆದಿರುತ್ತೆ:

“ಆ ಕುಮಾರವ್ಯಾಸ ತಾನೆರಡು ರೂಪಾಗು

ತೀ ಕಾಲದೊಳ್ಪುಟ್ಟಿ ಬಂದು ಭಾರತ ಕಥೆಯ

ಲೋಕಕ್ಕೆ ವಿಸ್ತರಿಸುತಿರ್ದಪನೆನಲ್ಕೀಗ ಲಕ್ಷ್ಮೀಶನುಂ ಮೂರ್ತಿಯುಂ”

“ಆ ಕಥೆಯ ಮೈಸೂರು ನರಸಿಂಹ ಭವನದೊ

ಳಾ ಕಲ್ಯದಿಂ ಪೇಳ್ದರದರಿಂದಲಭಿನವ

ಶ್ರೀ ಕುಮಾರವ್ಯಾಸರೆಂಬ ನಾಮವು

ಸಲ್ವುದೀಗಕುಮಾರರ್ಗಿಳೆಯೊಳು”

 

೧೯೪೭ರಲ್ಲಿ ಮೈಸೂರು ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದ ಆಶ್ರಯದಲ್ಲಿ ವೇದಾಂತ ಶಿರೋಮಣಿ ಇತ್ಯಾದಿ ಬಿರುದಾಂಕಿತರಾದ ಆಸ್ಥಾನ ವಿದ್ವಾನ್‌ ವೆ.ಬ್ರ ಎಸ್‌. ವಿಠಲಶಾಸ್ತ್ರಿಗಳ  ಘನ ಅಧ್ಯಕ್ಷತೆಯಲ್ಲಿ ಕೀರ್ತನಕೇಸರಿ ಎಂಬ ಬಿರುದಿತ್ತು ಸನ್ಮಾನಿಸಲಾಯಿತು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೪-೯೫ರ ಕರ್ನಾಟಕ ಕಲಾ ತಿಲಕ ಪ್ರಶಸ್ತಿಯನ್ನಿತ್ತು ಗೌರವಿಸಿತು. ೧೯೯೫ರಲ್ಲಿ ಬೆಂಗಳೂರು ಗಾಯನ ಸಮಾಜ ೨೭ನೇ ಸಂಗೀತ ಸಮ್ಮೇಳನ ಸಂದರ್ಭದಲ್ಲಿ ಇವರಿಗೆ ಸನ್ಮಾನ ಮಾಡಿತು. ೧೯೯೬ರಲ್ಲಿ ಮೈಸೂರಿನ ಗಾನಭಾರತೀ(ರಿ) ಶ್ರೀ ಕೃಷ್ಣ ಜಯಂತಿ ಉತ್ಸವ ಸಂದರ್ಭದಲ್ಲಿ ಗೌರವಿಸಿತು.

೧೯೯೭ರಲ್ಲಿ ಕರ್ನಾಟಕ ಕೀರ್ತನ ಕಲಾಪರಿಷತ್ತು (ರಿ) ಬೆಂಗಳೂರು, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆಸಿದ ಮೂರನೇ ಅಖಿಲ ಕರ್ನಾಟಕ ಕೀರ್ತನಕಾರರ ಸಮ್ಮೇಳನಕ್ಕೆ ಭಾಗವತರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕೀರ್ತನಶ್ರೀ ಎಂಬ ಬಿರುದಿತ್ತು ಸನ್ಮಾನಿಸಿತು.

ಕೃತಿಗಳ ಕೊಡುಗೆ: ತುಂಬು ಅನುಭವಸ್ಥರಾದ ಲಕ್ಷ್ಮೀಪತಿಗಳು ಅನೇಕವಾದ ರಚನೆಗಳನ್ನು ಮಾಡಿ ಕಲಾಕ್ಷೇತ್ರಕ್ಕೆ ನೀಡಿದ್ದಾರೆ.

ಲೋಕನೀತಿಯುಕ್ತವಾದ ತಮ್ಮ ಅಮೃತವಾಣಿಯನ್ನು ಭಾಮಿನೀ ಷಟ್ಪದಿ ಪದ್ಯಗಳ ರೂಪದಲ್ಲಿ ರಚಿಸಿ “ಭಕ್ತಿ ಕುಸುಮಾಂಜಲಿ” ಎಂಬ ಪುಸ್ತಕಕ ಪ್ರಕಟಿಸಿದ್ದಾರೆ.

ನಿತ್ಯ ಉಪಯುಕ್ತವಾದ ಅನೇಕ ದೇವತಾ ಭಜನಾವಳಿಗಳನ್ನು ರಚಿಸಿದ್ದಾರೆ.

ಶ್ರೀಕಾಂತ ಎಂಬ ಅಂಕಿತದಲ್ಲಿ ಅನೇಕ ಕೃತಿಗಳನ್ನು ವಿವಿಧ ರಾಗಗಳಲ್ಲಿ ರಚಿಸಿ ಸ್ವರಪಡಿಸಿ ಸಂಗೀತಕ್ಷೇತ್ರಕ್ಕೆ ನೀಡಿದ್ದಾರೆ.

ಸ್ವರ ಮತ್ತು ಸಾಹಿತ್ಯ ಹಾಗೂ ಅದರ ಭಾವಾರ್ಥಗಳೊಂದಿಗಿರುವ ಇವರ ಹದಿನೈದು ಕೃತಿಗಳನ್ನೊಳಗೊಂಡ “ಶ್ರೀಕಾ ಂತ ಕೀರ್ತನ ಕುಸುಮಾಂಜಲಿ” ಎಂಬ ಒಂದು ಕಿರುಪುಸ್ತಕವನ್ನುಕ ಶ್ರೀ ನಟರಾಜ ಸಂಗೀತ ಶಾಲಾ, ಮೈಸೂರು, ಪ್ರಕಟಿಸಿದ್ದಾರೆ. ಈ ಪುಸ್ತಕಕ್ಕೆ ದೇಶದ ಅಗ್ರಮಾನ್ಯ ಸಂಗೀತಶಾಸ್ತ್ರಜ್ಞರಾದ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣರವರು ಮುನ್ನುಡಿ ಬರೆದಿದ್ದಾರೆ. ಸಂಗೀತ ಕಚೇರಿಗಳಲ್ಲಿ ಕೆಲವಿದ್ವಾಂಶರು ಈ ಕೃತಿಗಳನ್ನು  ಹಾಡುತ್ತಿದ್ದಾರೆ.

ನಾಟ್ಯಕ್ಷೇತ್ರಕ್ಕೆ ಉಪಯುಕ್ತವಾದ ಕೆಲವು ಕೃತಿಗಳನ್ನೂ, ಪದವರ್ಣಗಳನ್ನೂ ರಚಿಸಿದ್ದಾರೆ. ಇವುಗಳನ್ನು ನಾಟ್ಯಾಚಾರ್ಯ ಪ್ರೊಫೆಸರ್ ಕೆ. ರಾಮಮೂರ್ತಿರಾವ್‌ ಮತ್ತು ನಾಟ್ಯ ಕಲಾವಿದರು ನೃತ್ಯ ಸಂಯೋಜಿಸಿ ಅನೇಕ ಕಡೆಗಳಲ್ಲಿ ತಮ್ಮ ಶಿಷ್ಯರುಗಳಿಂದ ನೃತ್ಯ ಪ್ರದರ್ಶನ ಮಾಡಿಸುತ್ತಿದ್ದಾರೆ.

ಪರಂಪರೆ: ಈ ಕಲಾ ತಪಸ್ವಿಯ ಕಲಾನಿಧಿಯನ್ನು ಶಿಷ್ಯವೃತ್ತಿಯಿಂದ ಅರ್ಜಿಸಿ, ಅವರ ಪರಂಪರೆ, ಶೈಲಿ ಮತ್ತು ಧ್ಯೇಯಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುವಂತಹ ಶಿಷ್ಯಸಂಪತ್ತು ಕೇವಲ ಬೆರಳೆಣೆಕೆಯಲ್ಲಿರುವುದು ಬಹಳ ಶೋಚನೀಯ ಸಂಗತಿ. ಇವರ ಏಕಮಾತ್ರ ಶಿಷ್ಯ ಕೆನರಾಬ್ಯಾಂಕ್‌ನಲ್ಲಿ ಹುದ್ದೆಯಲ್ಲಿರುವ ಶ್ರೀ ರಮೇಶ್‌ ಇಂದಿಗೂ ಸ್ವಲ್ಪಮಟ್ಟಿಗೆ ಈ ಕಲೆಯನ್ನು ಉಳಿಸಿಕೊಂಡಿದ್ದಾರೆ.

ಆದರೆ ಈ ಕೀರ್ತನಕಲಾ ವಂಶವೃಕ್ಷ ಒಣಗಿ ಹೋಗಿಲ್ಲ ಮತ್ತು ಒಣಗಿಹೋಗುವುದೂ ಇಲ್ಲ. ಲಕ್ಷ್ಮೀಪತಿಗಳಿಗೆ ನಾಲ್ಕು ಗಂಡು ಮಕ್ಕಳು ರಾಮಶೇಷ({ಈ ಲೇಖನದ ಬರಹಗಾರ), ಭೀಮು, ಸೋಮಶೇಖರ ಮತ್ತು ಶ್ಯಾಮಸುಂದರ ಮತ್ತು ಶ್ರೀಮತಿ ಗೀತಾ ಎಂಬ ಒಬ್ಬ ಹೆಣ್ಣು ಮಗಳು.

ಜ್ಯೇಷ್ಠ ಪುತ್ರನಾದ ಎಲ್‌, ರಾಮಶೇಷ ಈ ಕೀರ್ತನ ಕಲೆಯನ್ನು  ಇಂದಿಗೂ  ಅವರ ಆಶೀರ್ವಾದ ಮತ್ತು ದೈವಕೃಪೆ ಹಾಗೂ ಜನತೆಯ ಪ್ರೋತ್ಸಾಹದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅಂತೆಯೇ ತಂದೆಯಲ್ಲಿಯೇ ಸಂಗೀತಾಭ್ಯಾಸ ಮಾಡಿ ಕಚೇರಿಗಳನ್ನು ನೀಡುವ ಮತ್ತು ನೃತ್ಯ ಕ್ಷೇತ್ರದಲ್ಲಿ ಹಿನ್ನೆಲೆ ಗಾಯಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲಕ್ಷ್ಮೀಪತಿಗಳು ಈಗಲೂ ನಿರರ್ಥಕವಗಿ ಕಾಲಕಳೆಯದೆ ಆಸಕ್ತ ಸಂಗೀತಾಭ್ಯಾಸಿಗಳಿಗೆ ಸಂಗೀತಪಾಠ ಹೇಳಿಕೊಡುತ್ತಿದ್ದಾರೆ.

ಇಂದಿಗೂ ಉತ್ಸಾಹಶಾಲಿಗಳಾಗಿ ಸಂಗೀತ, ಸಾಹಿತ್ಯ ಮತ್ತು ಕೀರ್ತನಕಲೆಯ ಬಗ್ಗೆ ಆಶೆ ಆಕಾಂಕ್ಷೆಗಳನ್ನಿಟ್ಟುಕೊಂಡಿರುವ ಲಕ್ಷ್ಮೀಪತಿ ಭಾಗವತರು ನಶಿಸಿಹೋಗುತ್ತಿರುವ ಶಾಸ್ತ್ರೀಯ ಕಲೆಗಳ ಅದರಲ್ಲೂ ಕೀರ್ತನಕಲೆ ಬಗ್ಗೆ ವಿಶಾದ ವ್ಯಕ್ತಪಡಿಸುತ್ತಾ ಈ ಕಲೆಗಳ ಪುನರುಜ್ಜೀವನಕ್ಕಾಗಿ ಯುವ ಪೀಳಿಗೆ ಇಂದು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯಬೇಕು ಮತ್ತು ಸಮಜ, ಸಂಘ ಸಂಸ್ಥೆಗಳು ಬಹಳಷ್ಟು ಸಹಕಾರ ಪ್ರೋತ್ಸಾಹಗಳನ್ನಿಯಬೇಕು ಮತ್ತು ಸರಕಾರ ಈ ಕಲಾಭ್ಯಾಸಿಗಳಿಗೆ ಎಲ್ಲ ರೀತಿಯಲ್ಲೂ ಸುಭದ್ರವಾದ ಹೆಚ್ಚಿನ ಸೌಲಭ್ಯಗಳನ್ನು ಮತ್ತು ಜೀವನಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂಬುದಾಗಿ ತಿಳಿಸುತ್ತಾರೆ.

ಕಲೆ ಸಂಸ್ಕೃತಿಯ ಜೀವನಾಡಿಗಳಲ್ಲೊಂದು. ಹಳೆಯ ಶಾಸ್ತ್ರೀಯ ಕಲೆಗಳನ್ನು ಪೋಷಿಸುತ್ತಾ ಹೊಸಕಲೆಗಳನ್ನು ಪ್ರಚುರಗೊಳಿಸುತ್ತಾ ಕಲಾಸಂಪತ್ತನ್ನು ವೃದ್ಧಿಗಳಿಸಿದಾಗಲೆ ಕಲಾರಾಧನೆ ಸಾರ್ಥಕವಾಗುತ್ತದೆ.

“ಸತ್ಯ ಧರ್ಮಗಳು ಬಾಳಿನುಸಿರಾಗಲಿ

ನಿತ್ಯ ವಿನೂತವಾಗಲಿ ಕಲೆಯ ಬಾಳ್ವೆಯು”

ಇದು ‘ಅಭಿನವ ಕುಮಾರವ್ಯಾಸ’, ‘ಕರ್ನಾಟಕ ಕಲಾ ತಿಲಕ’ ಹರಿಕಥಾ ವಿದ್ವಾನ್‌ ವೇ.ಬ್ರ.ಎಲ್‌. ಲಕ್ಷ್ಮೀಪತಿ ಭಾಗವತರ ಸಂದೇಶ.