ಭಿನ್ನ ವೃತ್ತಿ ಪ್ರವೃತ್ತಿಗಳನ್ನು ಹೊಂದಿರುವ ಕಲಾವಿದರು  ಈಗ ನಮ್ಮ ನಡುವೆ ಅನೇಕರಿದ್ದಾರೆ. ಅಂತಹವರಲ್ಲಿ ಅತಿ ಹಿರಿಯ ವಿದ್ವಾಂಸರ ಶ್ರೇಣಿಗೆ ಸೇರುವವರು ಎಲ್‌. ಭೀಮಾಚಾರ್, ರತ್ನಭರಣಗಳ ಕುಶಲ ಕಲೆಯನ್ನು ವೃತ್ತಿಯಾಗಿ ಉಳ್ಳ ಮನೆತನದಲ್ಲಿ ೧೦-೫-೧೯೩೧ ರಂದು ಜನಿಸಿರುವ ಭೀಮಾಚಾರ್ ಮೊದಲಿಗೆ ಹೆಚ್‌. ಪುಟ್ಟಾಚಾರ್ ಅವರಲ್ಲಿ ಮೃದಂಗ ಹಾಗೂ ಘಟ ವಾದನಗಳಲ್ಲಿ ತರಬೇತಿ ಪಡೆದರು. ಸ್ವಲ್ಪಮಟ್ಟಿಗೆ ಗಾಯನವನ್ನೂ ಅಭ್ಯಾಸ ಮಾಡಿದರು. ನಂತರ ಗುರುಗಳ ಸಲಹೆಯಂತೆ ಮೋರ್ಚಿಂಗ್‌ ವಾದನವನ್ನು ಸಾಧನೆಯಿಂದ ತಮ್ಮದಾಗಿಸಿಕೊಂಡರು.

ನಮ್ಮ ರಾಜ್ಯದಲ್ಲಿ ಇವರು ಪ್ರತಿಷ್ಠಿತ ಸ್ಥಾನವನ್ನು ಗಳಿಸಿರುವ ಲಯ ವಾದ್ಯ ವಿದ್ವಾಂಸರಲ್ಲಿ ಒಬ್ಬರು. ಮೂರು-ನಾಲ್ಕು ತಲೆಮಾರಿನ ಸಂಗೀತಗಾರರಿಗೆ ಹಿರಿಯ-ಕಿರಿಯ ಕಲಾವಿದರನೇಕರಿಗೆ ಮೋರ್ಚಿಂಗ್‌ ವಾದನ ಸಹಕಾರ ನೀಡಿರುತ್ತಾರೆ. ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದಲೂ ಇವರ ವಾದನದ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.

ಕೊಳಲು ಮಹಾಲಿಂಗಂ ಹಾಗೂ ಪಿ. ಭುವನೇಶ್ವರಯ್ಯ ಇವರುಗಳೊಡನೆ ನುಡಿಸಿರುವ ಎರಡು ಎಲ್‌.ಪಿ. ಧ್ವನಿ ಮುದ್ರಣಗಳೂ, ಹಲವಾರು ಧ್ವನಿಸುರುಳಿಗಳೂ ಲಭ್ಯವಿದೆ. ಆರು ವಾದ್ಯಗಳಿರುವ ‘ಮೋರ್ಚಿಂಗ್‌ ತರಂಗ’ ಇವರ ಕಲ್ಪನೆಯ ಮೂರ್ತಿ ರೂಪ. ಈ ವಿಶಿಷ್ಟ ತಂಡದ ಲಯ ಲಹರಿ ಕಾರ್ಯಕ್ರಮಗಳು ನಮ್ಮ ದೇಶದಲ್ಲೂ ಯೂರೋಪಿನ ಹಲವೆಡೆಗಳಲ್ಲೂ ಯಶಸ್ವಿಯಾಗಿ ನಡೆದು ಜನಮನ್ನಣೆ ಪಡೆದಿವೆ. ಇವರ ಪುತ್ರ ಧೃವರಾಜ್‌ ಮೃದಂಗ ವಾದಕ. ಪುತ್ರಿ ಭಾಗ್ಯಲಕ್ಷ್ಮಿ ಹಾಗೂ ಮತ್ತೊಬ್ಬ ಪುತ್ರ ರಾಜಶೇಖರ್ ತಂದೆಯ ಹೆಜ್ಜೆಯನ್ನನುಸರಿಸಿ ಮೋರ್ಚಿಂಗ್ ವಾದನದಲ್ಲಿ ವಿಖ್ಯಾತರಾಗಿದ್ದಾರೆ.

ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರಿಂದ ‘ಲಯ ವಾದ್ಯ ಪ್ರವೀಣ’, ಮೈಸೂರಿನ ಶ್ರೀ ಬಾಲಚಂದ್ರ ಮಂದಿರದಿಮದ ‘ಮೋರ್ಚಿಂಗ್‌ ತರಂಗ್‌ ಕಲಾಭೂಷಣ’, ಶ್ರೀ ಗುರುರಾಘವೇಂದ್ರ ಟ್ರಸ್ಟ್‌ನಿಂದ ‘ಲಯ ವಾದ್ಯ ಮಕುಟ’, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’, ತಾಳ ವಾದ್ಯ ಕಲಾ ಕೇಂದ್ರದಿಂದ ‘ಲಯಕಲಾ ನಿಪುಣ’ ಇತ್ಯಾದಿ ಹಲವಾರು ಗೌರವಗಳಿಂದ ಮಾನ್ಯರಾಗಿರುವ ಭೀಮಾಚಾರ್ ಅವರು ಇಂದಿಗೂ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಕಿರಿಯರಿಗೆ ಆದರ್ಶಪ್ರಾಯರಾಗಿದ್ದಾರೆ.