ನೃತ್ಯ ಕ್ಷೇತ್ರದಲ್ಲಿ ಹಿನ್ನೆಲೆ ಗಾಯಕರಾಗಿ, ಸಂಗೀತ ಸಂಯೋಜನಕರಾಗಿ, ನೃತ್ಯ ನಾಟಕಗಳ ರಚನೆಕಾರರಾಗಿ ಪ್ರಸಿದ್ಧರಾಗಿರುವ ಶ್ರೀ ಎಲ್. ರಾಮಶೇಷ ಅವರು ತಮ್ಮ ’ನಟರಾಜ ಸಂಗೀತ ಶಾಲೆ’ಯ ಆಶ್ರಯದಲ್ಲಿ ಹಲವಾರು ಯುವ ಸಂಗೀತಗಾರರನ್ನು ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಾರೆ.

೧೯೪೬ರಲ್ಲಿ ಸಂಗೀತ ಮನೆತನದಲ್ಲಿ ಜನಿಸಿದ ಶ್ರೀ ರಾಮಶೇಷ ಅವರು ತಮ್ಮ ತಂದೆ ವೆ||ಬ್ರಂ|| ಶ್ರೀ ಎಲ್. ಲಕ್ಷ್ಮೀಪತಿ ಅವರಿಂದ ಸಂಗೀತ ಸಾಹಿತ್ಯ, ಸಂಸ್ಕೃತ ಹಾಗೂ ಕಥಾಕೀರ್ತನೆಗಳಲ್ಲಿ ಶಿಕ್ಷಣ ಪಡೆದರು.

ಹದಿವಯಸ್ಸಿನಿಂದಲೇ ಈ ಎಲ್ಲಾ ಮಾಧ್ಯಗಳಲ್ಲೂ ಸಾರ್ವಜನಿಕ ಕಾರ್ಯಕ್ರಮ ಕೊಡಲು ಪ್ರಾರಂಭಿಸಿದ ರಾಮಶೇಷ ನೃತ್ಯಕ್ಕೆ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದು ೭೦ರ ದಶಕದಿಂದ, ಅನೇಕ ಹಿರಿಯ ಹಾಗೂ ಯುವ ನೃತ್ಯ ಕಲಾವಿದರಿಗೆ ಹಿನ್ನೆಲೆ ಗಾಯಕರಾಗಿ ಸೇವೆ ಸಲ್ಲಿಸಿರುವ ರಾಮವೇಷ ಅವರ ’ಶ್ರೀಕೃಷ್ಣ’ ’ಗೋಕುಲ ಕೃಷ್ಣ’, ’ಕೃಷ್ಣ’, ’ಮಹಿಷಾಸುರ ಮರ್ದಿನಿ’ ನೃತ್ಯ ನಾಟಕಗಳನ್ನು ರಚಿಸಿ ಸಂಗೀತ ಸಂಯೋಜಿಸಿದ್ದಾರೆ.

ಸಂಗೀತ ಕಚೇರಿಗಳಿಗೆ ಹಾಗೂ ನೃತ್ಯದ ಹಿನ್ನೆಲೆ ಗಾಯನಕ್ಕೆ ಹಲವಾರು ಸಲ ಹೊರದೇಶ ಪ್ರವಾಸ ಮಾಡಿರುವ ರಾಮಶೇಷ ಅವರು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಶ್ರೀಯುತರಾಗಿರುವ ಶ್ರೀಯುತರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯು ತನ್ನ ೧೯೯೭-೯೮ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.