ಜನನ : ೧೪-೧೦-೧೯೧೬ ರಂದು ಕೊರಟಗೆರೆಯಲ್ಲಿ ತುಮಕೂರು ಜಿಲ್ಲೆ

ಮನೆತನ : ಹೆಸರಾಂತ ಹರಿಕಥಾ ವಿದ್ವಾಂಸರ ಮನೆತನ. ತಂದೆ ಎಂ. ಲಕ್ಷ್ಮೀನಾರಾಯಣ ನರಸಿಂಹಮೂರ್ತಿ, ಎಲ್. ಸತ್ಯನಾರಾಯಣಮೂರ್ತಿ ಹರಿಕಥಾ ವಿದ್ವಾಂಸರಾಗಿದ್ದವರು.

ಶಿಕ್ಷಣ : ಮೋಟಗಾನಹಳ್ಳಿ ರಾಮಶೇಷು ಶಾಸ್ತ್ರಿಗಳಲ್ಲಿ ಸಂಸ್ಕೃತ ಪಾಠ, ವೇದ-ಆಗಮ ಶಾಸ್ತ್ರಗಳಲ್ಲಿ ಪಾಂಡಿತ್ಯ. ವಿದ್ವಾನ್ ರಾಜಶೇಖರಯ್ಯನವರಲ್ಲಿ ಸಂಗೀತ ಶಿಕ್ಷಣ. ತಂದೆಯವರಿಂದಲೇ ಕಥಾಕೀರ್ತನದಲ್ಲಿ ಶಿಕ್ಷಣ.

ಕ್ಷೇತ್ರ ಸಾಧನೆ : ಮೊದ ಮೊದಲಿಗೆ ತಂದೆಯವರ ಜೊತೆಯಲ್ಲಿ ಸಹ ಗಾಯಕರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಅನಂತರ ತಮ್ಮ ಸಹೋದರ ಎಲ್. ನರಸಿಂಹಮೂರ್ತಿ ಭಾಗವತರೊಂದಿಗೆ ಜೊತೆಯಾಗಿ ಯುಗಳ ಕಾರ್ಯಕ್ರಮವನ್ನು ನೀಡುತ್ತಿದ್ದು ಇವರ ಈ ಜೋಡಿ ಅತ್ಯಂತ ಹೆಸರುವಾಸಿಯಾಗಿತ್ತು. ತಮ್ಮನ ನಿಧನಾನಂತರ ಭಾಗವತರು ಸ್ವತಂತ್ರವಾಗಿ ಕಥೆ ಮಾಡಲು ಪ್ರಾರಂಭಿಸಿ ತಮ್ಮ ಕೊನೆಯುಸಿರಿನತನಕ ಸೇವೆ ಸಲ್ಲಿಸಿದರು. ಸುಮಾರು ಆರು ದಶಕಗಳಿಗೂ ಮಿಕ್ಕಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ತಮ್ಮ ಹೆಸರು ಚಿರಸ್ಥಾಯಿಯಾಗಿ ನಿಲ್ಲುವಂತೆ ಶ್ರಮಿಸಿದ್ದಾರೆ. ಅತಿ ಎಳೆಯ ವಯಸ್ಸಿನಲ್ಲೇ ನಾಲ್ವಡಿ ಕೃಷ್ಣರಾಜೊಡೆಯರ ಸಮ್ಮುಖದಲ್ಲಿ ಹರಿಕಥೆ ಮಾಡಿ ಪ್ರಶಂಸೆ ಗಳಿಸಿದವರು. ರಾಜ್ಯಾದ್ಯಂತ ಸಂಚರಿಸಿ ಕನ್ನಡ – ತೆಲುಗು ಭಾಷೆಗಳಲ್ಲಿ ಹರಿಕಥೆ ನಡೆಸಿದ್ದಾರೆ. ಅಷ್ಟಾದಶ (ಹದಿನೆಂಟು) ಪುರಾಣಗಳನ್ನು ಅಧ್ಯಯನ ಮಾಡಿ ತಮ್ಮ ಕಾರ್ಯಕ್ರಮಗಳಿಗೆ ತಾವೇ ಸಾಹಿತ್ಯ ರಚನೆ, ಗೀತೆ ರಚನೆಗಳನ್ನು ಮಾಡುತ್ತಿದ್ದರು. ’ಶ್ರೀಕಾಂತ’ ಎಂಬ ಅಂಕಿತದಲ್ಲಿ ಅನೇಕ ಕೃತಿ ರಚನೆಗಳನ್ನು ಮಾಡಿದ್ದಾರೆ. ಕವಿ ಕುಮಾರವ್ಯಾಸನ ಕಾವ್ಯ ಕರ್ಣಾಟ ಭಾರತ ಕಥಾ ಮಂಜರಿ ಇವರ ಅತ್ಯಂತ ಪ್ರೀತಿಯ ಕಾವ್ಯ. ಅದರಲ್ಲಿನ ಅನೇಕ ಪ್ರಸಂಗಗಳನ್ನು ಕಥಾ ಕೀರ್ತನಗಳಿಗೆ ಅಳವಡಿಸಿ ಕಾರ್ಯಕ್ರಮ ನೀಡಿರುತ್ತಾರೆ. ಇವರ ಪುತ್ರ ರಾಮಶೇಷು ಉತ್ತಮ ಗಾಯಕರಾಗಿ ಅನೇಕ ನೃತ್ಯ ಕಾರ್ಯಕ್ರಮಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡುತ್ತಿದ್ದಾರೆ. ಮೊಮ್ಮಗ ’ವಿಜಿ ಪ್ರಕಾಶ್’ ಉತ್ತಮ ಗಾಯಕನಾಗಿ ಮುಂಬಯಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ೧೯೮೫ ರಲ್ಲಿ ದಾಸಾಶ್ರಮದ ಕೀರ್ತನ ಶಿಕ್ಷಣ ಶಿಬಿರದಲ್ಲಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ೧೯೯೭ ರಲ್ಲಿ ಮುಳಬಾಗಿಲಿನಲ್ಲಿ ನಡೆದ ಅಖಿಲ ಕರ್ನಾಟಕ ಕೀರ್ತನ ಕಲಾ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ’ಅಭಿನವ ಕುಮಾರ ವ್ಯಾಸ’ ’ಕೀರ್ತನ ರತ್ನ’ ಮೊದಲಾದ ಬಿರುದುಗಳಿಗೆ ಪಾತ್ರರಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೪-೯೫ ರ ಸಾಲಿನ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ.