ಇಬ್ಬರಲ್ಲಿಯ ಶಕ್ತಿ – ಸಾಮರ್ಥ್ಯವನ್ನು ಪರೀಕ್ಷಿಸಬಹುದಾದ ಸ್ಪರ್ಧೆಯಾಟವಿದು. ಸ್ಪರ್ಧಾಳುಗಳಿಬ್ಬರು ಸುಮಾರು ಎರಡು ಅಂಗುಲ ವ್ಯಾಸವುಳ್ಳ, ಒಂದೂವರೆ ಮೊಳ ಉದ್ದವಿರುವ ಗೋಲಮೈಯುಳ್ಳ ಒಂದು ಕೋಲನ್ನು ತೆಗೆದುಕೊಂಡು ಎದುರು ಬದುರಾಗಿ ಕುಳಿತುಕೊಳ್ಳುವರು. ಇಬ್ಬರೂ ತಮ್ಮ ಕಾಲುಗಳನ್ನು ಉದ್ದಕ್ಕೆ ನೀಡಿ ಇಬ್ಬರ ಪಾದಗಳೂ ಒಂದಕ್ಕೊಂದು ಹತ್ತಿಕೊಳ್ಳುವಂತೆ ಮಾಡುವರು. ಪಾದಗಳು ಒಂದಕ್ಕೊಂದು ಕೂಡಿದ ಸ್ಥಳದಲ್ಲಿ ಕೋಲನ್ನು ಹಿಡಿದುಕೊಳ್ಳುವರು. ಒಬ್ಬರು ಕೋಲಿನ ನಡುವೆ ಮತ್ತೊಬ್ಬರು ಆ ಕೋಲಿನ ಎರಡು ತುದಿಗಳಲ್ಲಿ ಹಿಡಿದುಕೊಳ್ಳುವರು. ಮೂರನೆಯವನೊಬ್ಬನು “ಸುರು” ಎಂದ ಕೂಡಲೇ ಕೋಲನ್ನು ಇಬ್ಬರು ತಮ್ಮ ತಮ್ಮೆಡೆ ಎಳೆದುಕೊಳ್ಳುವರು. ಎಳೆದುಕೊಳ್ಳುವಾಗ ನೀಡಿದ ಕಾಲು ನೀಡಿದಂತೆಯೇ ಇರಬೇಕು, ಬಗ್ಗಿಸಬಾರದು. ಶಕ್ತಿವಂತನಾದವನು ತನ್ನೆಡೆ ಕೋಲು ಹಿಡಿದೆಳೆಯುವಾಗ ಇನ್ನೊಬ್ಬನ ಶಕ್ತಿ ಕಡಿಮೆಯಿದ್ದರೆ ಆತನು ಕುಂಡಿ ಎತ್ತರಿಸಿ ನಿಲ್ಲುವಂತಾಗುವದು. ನೆಲದಿಂದ ಮೇಲೆದ್ದವನು ಸೋತಂತಾಗುವನು.