ಆಟಗಾರರಲ್ಲಿ ನಾಯಕರಿಬ್ಬರು ಎದುರು ಬದುರಾಗಿ ನಿಲ್ಲುತ್ತಾರೆ. ಇಬ್ಬರೂ ಪರಸ್ಪರರ ಕೈಗಳಿಗೆ ಗಿಂಚು ಹಾಕಿ ತೋರಣದಂತೆ ಕೈ ಮೇಲಕ್ಕೆ ಎತ್ತಿ ಹಿಡಿಯುತ್ತಾರೆ. ಇಬ್ಬರೂ “ಅಪ್ಪೆದೊಪ್ಪೆ”, ಪಿಂಗಾಳ ದೊಪ್ಪೆ, ಬುಂದಿಲಾಡು, ಗುಡುಗುಡು ಗುಬ್ಬಿ, ಚೈಂಯ್ಯಕ್ಕಾ, ಪೈಂಯ್ಯಕ್ಕಾ, ಬಂಡೀ ಮೇಲೆ, ದೋಸೆ ಹಾಕಿ, ದೋಸೆ ಮೇಲೆ ಬೆಣ್ಣೆ ಹಾಕಿ, ಗುಳುಂ ಗುಟ್, ಗುಳುಂ ಗುಟ್” ಎಂದು ಹೇಳಲಾರಂಭಿಸಿದೊಡನೆ ಅಲ್ಲಿ ನೆರೆದ ಆಟಗಾರರು, ನಾಯಕರು ಎತ್ತಿದ ಕೈತೋರಣದೊಳಗಿಂದ ಒಬ್ಬರ ಹಿಂದೊಬ್ಬರಂತೆ ಹಾದು ವರ್ತುಳಾಕಾರವಾಗಿ ತಿರುಗಲಾರಂಭಿಸುವರು. ಆಗ ಹಾಡುತ್ತಿದ್ದ ನಾಯಕರಿಬ್ಬರೂ “ಗುಳುಂಗುಟ್” ಎಂಬ ಶಬ್ದ ಹೇಳುತ್ತ ತಮ್ಮ ಎತ್ತಿದ ಕೈಯನ್ನು ಕೆಳಕ್ಕೆ ಇಳಿಸಿ, ಅಗಲಿಸಿ ಹಾದ ಹೋಗಲು ಹವಣಿಸುತ್ತಿರುವವರನ್ನು ಬಂಧಿಸುವರು. ಸಿಕ್ಕಿ ಬಿದ್ದವನು ಒಬ್ಬ ನಾಯಕನ ಹಿಂದೆ ಹೋಗಿ ಆತನ ಸೊಂಟ ಹಿಡಿದುಕೊಳ್ಳುವನು. ಬಿದ್ದವನು ಒಬ್ಬ ನಾಯಕನ ಹಿಂದೆ ಹೋಗಿ ಆತನ ಸೊಂಟ ಹಿಡಿದುಕೊಳ್ಳುವನು. ಮತ್ತೆ ಮೇಲಿನಂತೆ ಆಟ ಪ್ರಾರಂಭ. ಎರಡನೆಯ ಬಾರಿ ಸಿಕ್ಕಿ ಬಿದ್ದವನು ಇನ್ನೊಬ್ಬ ನಾಯಕನ ಸೊಂಟ ಹಿಡಿದುಕೊಳ್ಲಬೇಕು. ಹೀಗೆ ಎಲ್ಲ ಆಟಗಾರರು ಬಂಧಿತರಾಗುವವರೆಗೆ ಇದೇ ರೀತಿ ಮುಂದುವರಿಯುತ್ತದೆ. ಬಂಧಿತರಾದ ಆಟಗಾರರು ತಮ್ಮ ಸರತಿ ಬಂದಂತೆ ಒಬ್ಬ ಈಚೆ ಇನ್ನೊಬ್ಬ ಆಚೆ ಒಬ್ಬರ ಹಿಂದೊಬ್ಬರು ಸೊಂಟ ಹಿಡಿದು ನಿಲ್ಲುವುದರಿಂದ ಉಗಿ ಬಂಡಿಯಂತೆ ಎರಡೂ ಕಡೆ ಸಾಲು ಬೆಳೆಯುತ್ತದೆ. ಆಗ ಇಬ್ಬರೂ ನಾಯಕರ ನಡುವೆ ಬಂದು ಗೆರೆ ಎಳೆದು ನಾಯಕರಿಬ್ಬರು ತಂತಮ್ಮ ಕಡೆಗೆ ಎಳೆದುಕೊಳ್ಳುವರು. ಇತರರು ಸೊಂಟವನ್ನು ಗಟ್ಟಿಯಾಗಿ ಹಿಡಿದು ಎಳೆಯುವರು. ಯಾವ ಪಕ್ಷದ ಎಲ್ಲ ಜನರು ಗೆರೆಯ ಈಚೆ ಬರುವರೋ ಆ ಪಕ್ಷ ಸೋತ ಪಕ್ಷವಾಗುವದು.