(ಕ್ರಿ. ಶ. ೧೮೧೧-೧೮೩೨) (ಗಣಿತಶಾಸ್ತ್ರದ ಹೊಸ ಸಿದ್ಧಾಂತಗಳು)

ಎವಾರಿಸ್ಟ್ ಗಾಲ್ವ ಅಕ್ಟೋಬರ್ ೨೫, ೧೮೧೧ರಂದು ಪ್ಯಾರಿಸ್ಗೆ ಸಮೀಪದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನಿಕೊಲಾಸ್ ಗೇಬ್ರಿಯಲ್ ಗ್ರಾಮದ ಮೇಯರ್ ಆಗಿದ್ದರು. ತಾಯಿ ಸುಶಿಕ್ಷಿತ ಮಹಿಳೆ. ಮೊದಲ ಶಿಕ್ಷಣವನ್ನು ಮನೆಯಲ್ಲೇ ಮುಗಿಸಿಕೊಂಡು ಪ್ರೌಢ ಶಿಕ್ಷಣಕ್ಕಾಗಿ ಪ್ಯಾರಿಸ್ಸಿಗೆ ಹೋದರು. ಗಣಿತ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿಯಿದ್ದ ಅವನ ಗಮನವೆಲ್ಲಾ ಆ ವಿಷಯದ ಮೇಲೇ ಕೇಂದ್ರೀಕರಣಗೊಂಡಿತ್ತು. ಆತನ ಈ ಗಣಿತದ ಗೀಳಿನಿಂದಾಗಿ ಆತನ ಬಗ್ಗೆ ಶಿಕ್ಷಕರಲ್ಲಿ ಅಸಡ್ಡೆಯ ಭಾವ ಬೆಳೆಯಿತು. ಆ ಶಾಲೆಯನ್ನು ತೊರೆದು “ಪಾಲಿಟೆಕ್ನಿಕ್ ಎಕೋಲ್” ಪ್ರೌಢ ಶಿಕ್ಷಣ ಶಾಲೆಗೆ ಸೇರಲು ಆತ ಮಾಡಿದ ಪ್ರಯತ್ನಗಳೂ ವಿಫಲವಾದವು. ಎವಾರಿಸ್ಟ್ ಗಾಲ್ವ ಕ್ರಾಂತಿಯ ಪ್ರತಿಪಾದಕ ಕೂಡ ಆಗಿದ್ದರು. ಆತನ ತಂದೆ ಅಲ್ಲಿನ ರಾಜಕೀಯ ಕುತಂತ್ರ, ಒಳಸಂಚುಗಳಿಗೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದೇ ಆತನ ಕ್ರಾಂತಿಕಾರಕ ಪ್ರವೃತ್ತಿಗೆ ಕಾರಣವಾಗಿತ್ತು. ರಾಜಕಾರಣದಲ್ಲಿ ತೊಡಗಿದ್ದಾಗಲೂ ಗಾಲ್ವ ಗಣಿತ ಸಂಶೋಧನೆಗಳನ್ನು ಮುಂದುವರಿಸಿದರು.

ಗಣಿತದಲ್ಲಿ “ಸಮೂಹ ಸಿದ್ಧಾಂತ” (ಗ್ರೂಪ್ ಥಿಯರಿ) ಕಂಡು ಹಿಡಿದದ್ದು ಎವಾರಿಸ್ಟ್ ಗಾಲ್ವರ ಒಂದು ಮಹತ್ವದ ಸಂಶೋಧನೆ. ಈ ಸಿದ್ಧಾಂತ ಆಧುನಿಕ ಬೀಜಗಣಿತಕ್ಕೆ ತಳಪಾಯವಾಯಿತು. ೧೮೩೧ರಲ್ಲಿ ಫ್ರಾನ್ಸಿನ ದೊರೆ ಫಿಲಿಪ್ ನ ವಿರುದ್ಧ ಭಾಷಣ ಮಾಡಿದ ಆಪಾದನೆಯ ಮೇಲೆ ಆತ ಬಂಧಿಸಲ್ಪಟ್ಟರು. ಆದರೆ ಆ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆ ಪಡೆದ. ಪುನಃ ಕ್ರಾಂತಿಕಾರಕ ಚಟುವಟಿಕೆಗಳನ್ನು ಗಾಲ್ವ ಮುಂದುವರಿಸಿದರು. ಆತನನ್ನು ಬಂಧಿಸಲೇಬೇಕೆಂದು ತೀರ್ಮಾನಿಸಿದ್ದ ಅಧಿಕಾರಿಗಳು ಅಕ್ರಮವಾಗಿ ಆಕ್ಷೇಪಾರ್ಹ ಆಯುಧಗಳನ್ನು ಹೊಂದಿದ್ದನೆಂಬ ಅಪಾದನೆಯ ಮೇಲೆ ಬಂಧಿಸಿ ಆರು ತಿಂಗಳು ಸೆರೆಮನೆ ವಾಸದ ಶಿಕ್ಷೆ ಕೊಡಿಸಿದರು.

ಸೆರೆಮನೆ ವಾಸದಿಂದ ಹೊರಬಂದ ಎವಾರಿಸ್ಟ್ ಗಾಲ್ವ ರಾಜಕೀಯ ವಿರೋಧಿಯೊಬ್ಬರ ದ್ವಂದ್ವಯುದ್ಧದ ಸವಾಲನ್ನು ಸ್ವೀಕರಿಸಿದರು. ಅದೇ ದ್ವಂದ್ವಯುದ್ಧದಲ್ಲೇ ಗುಂಡೇಟು ಬಿದ್ದು ತೀವ್ರವಾಗಿ ಗಾಯಗೊಂಡರು. ಆ ಗಾಯದಿಂದ ಚೇತರಿಸಿಕೊಳ್ಳಲಾಗದೆ ಮೇ ೩೧, ೧೮೩೨ರಂದು ಪ್ರಾಣ ಬಿಟ್ಟರು.

ಎವಾರಿಸ್ಟ್ ಗಾಲ್ವ ಬದುಕಿದ್ದು ಕೇವಲ ೨೦ ವರ್ಷ ಮಾತ್ರ. ಆದರೆ ಅಷ್ಟೇ ಅವಧಿಯಲ್ಲಿ ಆತ ಮಾಡಿದ ಸಾಧನೆ ಅಗಾಧವಾದದ್ದು.