ಸಂಯುಕ್ತ ಪ್ರತಿವರ್ಷ ಬೆಳೆಯುತ್ತಿದ್ದಾಳೆ. ಕಳೆದ ವರ್ಷಕ್ಕಿಂತ ಈ ವರ್ಷ ಎರಡು ಇಂಚು ಎತ್ತರ! ತೂಕವೂ ಹೆಚ್ಚಿದೆ. ಆಕೆಯ ಎತ್ತರ ನೋಡಿದವರೆಲ್ಲರೂ ಕೇಳುವುದು ಸಂಯುಕ್ತ ಎಷ್ಟನೇ ಕ್ಲಾಸು? ನಾನಿನ್ನೂ ಬಾಲವಾಡಿ ಮುದ್ದುಭಾಷೆಯಲ್ಲಿ ಆಕೆ ಹೇಳಿದರೆ ಅವರು ನಂಬುವುದೇ ಇಲ್ಲ. ಮಕ್ಕಳ ಬೆಳವಣಿಗೆ, ಆಕಾರ, ತೂಕ ನೋಡಿ ವಯಸ್ಸನ್ನು ನಿಖರವಾಗಿ ಹೇಳಲಾಗದು. ಆದರೂ ಹುಟ್ಟಿದ ದಿನಾಂಕ, ವೇಳೆ, ವಾರ ಇವೆಲ್ಲಾ ತಿಳಿದ ಕಾರಣ ಮನುಷ್ಯರ ವಯಸ್ಸು ಹೇಳಬಹುದು. ಹುಟ್ಟಿದಹಬ್ಬವನ್ನೂ ಆಚರಿಸಬಹುದು.

ಆದರೆ ಹುಟ್ಟಿದ ದಿನಾಂಕ, ವೇಳೆ, ವಾರ ಇವೆಲ್ಲಾ ತಿಳಿಯದ ಮರಗಿಡಗಳು, ಪ್ರಾಣಿ-ಪಕ್ಷಿಗಳು, ಮೀನು ಮುಂತಾದ ಜಲಚರಗಳ ವಯಸ್ಸನ್ನು ಹೇಳಲು ಸಾಧ್ಯವೇ?

ವಯಸ್ಸನ್ನು ಹೇಳಲು ಅವುಗಳು ಮಾತನಾಡುತ್ತವೆಯೇ ಅಥವಾ ಹುಟ್ಟಿದಹಬ್ಬ ಆಚರಿಸಿಕೊಳ್ಳುತ್ತವೆಯೇ?

ಆದರೂ ನಾವು ಅವುಗಳ ಹುಟ್ಟಿದ ವಯಸ್ಸನ್ನು ಕಂಡುಹಿಡಿಯಬಹುದು. ಹೇಗೆ ಗೊತ್ತಾ!…

ಮೊದಲಿಗೆ ನಾಟಗಳನ್ನು, ಮರದ ದಿಮ್ಮಿಗಳನ್ನು ಸಂಗ್ರಹಿಸಿರುವ ಸಾಮಿಲ್‌ಗೆ ಹೋಗೋಣ ಅಥವಾ ಕಡಿದುರುಳಿಸಿದ ಮರವನ್ನು ನೋಡೋಣ. ಉದ್ದನೆಯ, ದಪ್ಪನೆಯ ಮರದ ಬುಡವನ್ನು ನೋಡಿದಾಗ ತಿರುಳಿನಲ್ಲಿ ವೃತ್ತಾಕಾರವಾಗಿರುವ ಬಳೆಗಳು ಕಾಣಿಸುತ್ತವೆ. ಪ್ರತಿವರ್ಷ ಮರ ಬೆಳೆದಂತೆಲ್ಲಾ ಒಂದು ಬಳೆಯಷ್ಟು ತಿರುಳು ಉಂಟಾಗುತ್ತದೆ. ಮರ ದಪ್ಪವಾಗುತ್ತದೆ. ಹೊಸ ಬಳೆಯ ಬಣ್ಣ ಹಾಗೂ ಹಿಂದಿನ ವರ್ಷ ನಿರ್ಮಾಣವಾದ ಬಳೆಯ ಬಣ್ಣಗಳಲ್ಲಿ ವ್ಯತ್ಯಾಸವಿರುತ್ತದೆ. ಹೀಗೆ ತಿರುಳಿನಲ್ಲಿ ಉಂಟಾದ ಬಳೆಗಳನ್ನು ಎಣಿಸಿದರೆ ಮರದ ವಯಸ್ಸು ತಿಳಿಯುತ್ತದೆ.

ಮತ್ತೊಂದು ವಿಧಾನವಿದೆ. ತೆಂಗು, ಅಡಿಕೆ ಮರಗಳು ಪ್ರತಿವರ್ಷ ಒಂದರಿಂದ ನಾಲ್ಕು ಹೆಡ ಅಥವಾ ಸೋಗೆಯನ್ನು ಬೀಳಿಸುತ್ತವೆ. ಮರಗಳ ಮೇಲ್ಮೈ ಮೇಲೆ ಬೀಳಿಸಿದ ಹೆಡ ಅಥವಾ ಸೋಗೆಯ ಗುರುತಿರುತ್ತದೆ. ಒಂದು ಹೆಡ ಅಥವಾ ಸೋಗೆಗೆ ಒಂದು ಗೊನೆ ಬಿಡುತ್ತದೆ! ವಾರ್ಷಿಕ ಎಷ್ಟು ಗೊನೆ ಬಿಡುತ್ತದೆ ಎಂದು ತಿಳಿದುಕೊಳ್ಳಬೇಕು. ಮರದ ಮೇಲಿನ ಗುರುತನ್ನು ಎಣಿಸಿ ವಾರ್ಷಿಕ ಬಿಡುವ ಗೊನೆಯ ಸಂಖ್ಯೆಯಿಂದ ಭಾಗಿಸಿದರೆ ವಯಸ್ಸು ತಿಳಿಯುತ್ತದೆ. ಉದಾಹರಣೆಗೆ ಒಂದು ಅಡಿಕೆಯ ಮರ ವರ್ಷಕ್ಕೆ ಮೂರು ಗೊನೆಗಳನ್ನು ಬಿಡುತ್ತದೆ. ಮರದ ಮೇಲಿನ ಸೋಗೆಯ ಗುರುತುಗಳ ಸಂಖ್ಯೆ ೧೭೪. ಅಂದರೆ ಮರದ ವಯಸ್ಸು ೫೮ ವರ್ಷಗಳು.

ಪ್ರಾಣಿಗಳು ಮರಗಳಂತೆ ಇರುವುದಿಲ್ಲ. ಆದರೂ ಇಲ್ಲೊಂದು ಅಚ್ಚರಿಯ ಹೋಲಿಕೆಯಿದೆ. ಪ್ರಾಣಿಗಳಿಗೆ ಕೋಡುಗಳು ಮೂಡುತ್ತವೆ. ಕುರಿ, ಆಡು, ಎಮ್ಮೆ, ದನ, ಜಿಂಕೆ ಹೀಗೆ. ಇವುಗಳ ಕೋಡುಗಳ ಮೇಲೆ ಗಣ್ಣುಗಳಿವೆ ಅಥವಾ ಸುರುಳಿ ಸುರುಳಿಯಾಕಾರವಿದೆ. ವರ್ಷಕ್ಕೊಂದರಂತೆ ಈ ಸುರುಳಿಗಳು ನಿರ್ಮಾಣವಾಗಿರುತ್ತವೆ.

ಎತ್ತು, ಎಮ್ಮೆಗಳನ್ನು ಕೊಳ್ಳುವವರು ಅವುಗಳ ಹಲ್ಲುಗಳನ್ನು ಎಣಿಸುತ್ತಾರೆ. ಹಾಲುಹಲ್ಲು, ಕೋರೆಹಲ್ಲು, ದವಡೆ ಇವುಗಳನ್ನು ಆಧರಿಸಿ ಅವುಗಳ ವಯಸ್ಸನ್ನು ನಿರ್ಧರಿಸುತ್ತಾರೆ. ಬೆಕ್ಕಿನಜಾತಿಯ ಪ್ರಾಣಿಗಳಲ್ಲಿ ಮೀಸೆಯ ಕೂದಲನ್ನು ಎಣಿಸಿ ವಯಸ್ಸನ್ನು ನಿರ್ಧರಿಸಬಹುದಂತೆ. ಹುಲಿಯ ಮೀಸೆಯ ಕೂದಲು ಎಣಿಸಲು ಸಾಧ್ಯವೇ?

ಕೆಲವು ಜಾತಿಯ ಮೀನುಗಳ ವಯಸ್ಸನ್ನು ಗುರುತಿಸಲು ಸಾಧ್ಯ. ಮೀನುಗಳು ಬೆಳೆದಂತೆಲ್ಲಾ ಉದ್ದ ಹಾಗೂ ದಪ್ಪಗಾಗುತ್ತವೆ. ಅವುಗಳ ಮೈಮೇಲೆ ಹೊರಪೆಗಳಿರುತ್ತವೆ [Sಛಿಚಿಟes]. ಪ್ರತಿ ಹೊರಪೆಯ ಮೇಲೂ ಪ್ರತಿವರ್ಷವೂ ಒಂದು ವೃತ್ತಾಕಾರದ ಗೆರೆ ಉಂಟಾಗುತ್ತದೆ. ಹೀಗೆ ಹೊರಪೆಯೊಂದರ ಮೇಲಿರುವ ವೃತ್ತಗಳನ್ನು ಎಣಿಸಿದರೆ ಮೀನಿನ ವಯಸ್ಸು ತಿಳಿಯುತ್ತದೆ.

ಇವೆಲ್ಲಾ ಅಂದಾಜು ವಯಸ್ಸನ್ನು ತಿಳಿಯುವ ವಿಧಾನಗಳು. ಅಣ್ಣಿಗೇರಿಯಲ್ಲಿ ಸಿಕ್ಕ ತಲೆಬುರುಡೆಗಳ ವಯಸ್ಸನ್ನು ಕಂಡುಹಿಡಿದಿದ್ದು ಹೇಗೆ? ಪ್ರಾಣಿಗಳ, ಪಕ್ಷಿಗಳ, ಗಿಡಮರಗಳ ಪಳೆಯುಳಿಕೆಗಳು ಸಿಕ್ಕಾಗ ಅವುಗಳು ಎಷ್ಟು ವರ್ಷ ಹಳೆಯದೆಂದು ತಿಳಿಯಲು ವಿಜ್ಞಾನಿಗಳು ಕಾರ್ಬನ್ ಡೇಟಿಂಗ್ ಎಂಬ ವಿಧಾನ ಅನುಸರಿಸುತ್ತಾರೆ. ಇಂಗಾಲ ಕಾಲನಿರ್ಣಯ ಅಥವಾ ಇಂಗಾಲ ಕಾಲಗಣನೆ. ಇದು ಇಂಗಾಲ-೧೪ ಎಂಬ ಇಂಗಾಲದ ವಿಕಿರಣ ಸೂಸುವ ಐಸೊಟೋಪನ್ನು ಆಧರಿಸಿ ಕೈಗೊಳ್ಳುವ ಜೈವಿಕ ವಸ್ತುಗಳ ಕಾಲಗಣನೆ. ಯಾವುದೇ ಜೈವಿಕ ವಸ್ತುಗಳಲ್ಲಿ ಇಂಗಾಲ-೧೪ ಇದ್ದು ವಿಕಿರಣ ಸೂಸುತ್ತಿರುತ್ತದೆ. ಇದರ ಅರ್ಧಾಯುಷ್ಯ ೫೭೩೦೪೦ ವರ್ಷಗಳು. ಅಂದರೆ ಇಂಗಾಲ-೧೪ ಐಸೋಟೋಪ್ ವಿಕಿರಣ ಸೂಸುತ್ತಾ ೫೭೩೦೪೦ ವರ್ಷಗಳಿಗೆ ಅರ್ಧದಷ್ಟಾಗುತ್ತದೆ. ಉತ್ಖನನದಲ್ಲಿ ಸಿಕ್ಕಿದ ಜೈವಿಕ ವಸ್ತುವಿನಲ್ಲಿ ಉಳಿದಿರುವ ಇಂಗಾಲದ-೧೪ ಐಸೋಟೋಪ್‌ನ ಪ್ರಮಾಣವನ್ನು ಅಳೆದು ವಯಸ್ಸನ್ನು ನಿರ್ಣಯಿಸಲಾಗುತ್ತದೆ. ಈ ವಿಧಾನದಿಂದ ಸುಮಾರು ೫೦ ಸಾವಿರ ವರ್ಷಗಳ ಹಳೆಯ ಜೈವಿಕ ವಸ್ತುಗಳ ವಯಸ್ಸನ್ನೂ ಹೇಳಬಹುದು.

ಚಲಿಸುವ ಪ್ರಾಣಿಗಳಿಗಿಂತ ಸ್ಥಿರವಾಗಿರುವ ಮರಗಳಿಗೆ ಆಯುಷ್ಯ ಜಾಸ್ತಿ. ಈ ಭೂಮಿಯ ಮೇಲೆ ಸಾವಿರಾರು ವರ್ಷಗಳಷ್ಟು ಹಳೆಯದಾದ ಮರಗಳಿವೆ. ಪ್ರಾಣಿಗಳಲ್ಲಿ ಅತಿಹೆಚ್ಚು ಕಾಲ ಬದುಕುವ ಪ್ರಾಣಿಸಮೂಹವೆಂದರೆ ಮನುಷ್ಯ ಮಾತ್ರ. ಆತನ ಆಯುಸ್ಸು ಸಹ ಕ್ಷೀಣಿಸುತ್ತಿದೆ.

೧೦೦ ವರ್ಷದ ಅಜ್ಜ ತನ್ನ ಹುಟ್ಟಿದ ಹಬ್ಬದ ಕೇಕ್‌ನ ಮೇಲಿರುವ ಕ್ಯಾಂಡಲ್‌ಗಳನ್ನೆಲ್ಲಾ ಆರಿಸಲು ಎಷ್ಟು ಸಮಯ ತೆಗೆದುಕೊಳ್ಳಬಹುದು?