ಎಣ್ಣೆ ಬಳಸದೆ ಅಡುಗೆ ಮಾಡುವುದನ್ನು ಊಹಿಸಲೂ ಅಸಾಧ್ಯ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ ೩೦ ಗ್ರಾಂ ಕೊಬ್ಬು ಸೇವಿಸಿದರೆ ಆರೋಗ್ಯವಾಗಿ ಇರಬಹುದು. ದಿನನಿತ್ಯ ನಾವು ಬಳಸುವ ಬೇಳೆಕಾಳು, ಹಣ್ಣು, ಸೊಪ್ಪು, ತರಕಾರಿ, ಅಕ್ಕಿ, ಗೋಧಿ, ಜೋಳ, ತೆಂಗು, ಶೇಂಗಾ, ಎಳ್ಳು, ಜೀರಿಗೆ ಮುಂತಾದವುಗಳಲ್ಲಿ ಶೇ.೦.೧ರಿಂದ ಶೇ.೫೦ರವರೆಗೆ ಕೊಬ್ಬು ಇದೆ. ಇದರಿಂದ ನಾವು ೧೫ ಗ್ರಾಂ.ನಿಂದ ೨೦ ಗ್ರಾಂ ಕೊಬ್ಬು ಸೇವಿಸುತ್ತೇವೆ. ಊಟ ಮಾಡುವಾಗ ಮೇಲೆಣ್ಣೆ, ತುಪ್ಪ ಹಾಕಿಕೊಳ್ಳುವುದು, ಕರಿದ ಪದಾರ್ಥ, ಸಿಹಿ ಪದಾರ್ಥಗಳನ್ನು ಜೊತೆಯಲ್ಲಿ ಸೇವಿಸಿದರೆ ಆ ಪ್ರಮಾಣ ೩೦ಗ್ರಾಂ ದಾಟಿ ೨೦೦ ಗ್ರಾಂ ಆಗುತ್ತದೆ.

ದೇಹದ ಹಿಗ್ಗುವಿಕೆ-ಕುಗ್ಗುವಿಕೆ, ಕರುಳಿನ ಚಲನೆ, ಎಲುಬು/ಕೀಲು/ಸಂದುಗಳ ಸರಾಗ ಚಲನೆ, ಜಠರಾಮ್ಲ ಉತ್ಪತ್ತಿ, ಮೂತ್ರಪಿಂಡ/ಶ್ವಾಸಕೋಶ ಕ್ರಿಯೆ, ಸಂತಾನ ಶಕ್ತಿ ಹೀಗೆ ದೇಹದ ಅನೇಕ ವ್ಯವಸ್ಥೆಗಳ ನಿರ್ವಹಣೆಗೆ ಕೊಬ್ಬಿನಿಂದ ತಯಾರಾಗುವ ಪ್ರೊಸ್ಟಗ್ಲಾಂಡಿನ್ ಎನ್ನುವ ವಸ್ತು ಬೇಕು. ಆರೋಗ್ಯಯುತ ತ್ವಚೆ, ಚಳಿಯಿಂದ ರಕ್ಷಣೆ, ಮಲಬದ್ಧತೆ ನಿವಾರಣೆ, ಜೀವಕೋಶಗಳ ಆಕಾರ-ಕಾರ್ಯಗಳ ನಿರ್ವಹಣೆ, ಕೊಲೆಸ್ಟರಾಲ್ ಪ್ರಮಾಣದ ಏರಿಳಿತಕ್ಕೆ ಕೊಬ್ಬು ಕಾರಣ. ೧೦ ಗ್ರಾಂ. ಶರ್ಕರಪಿಷ್ಟ ನೀಡುವ ಶಕ್ತಿಗಿಂತ ೫೦ ಕಿಲೋ ಕ್ಯಾಲರಿ ಅಧಿಕ ಶಕ್ತಿಯನ್ನು ೧೦ ಗ್ರಾಂ ಕೊಬ್ಬು ನೀಡುತ್ತದೆ.

ಕೊಬ್ಬಿನಲ್ಲಿ ಆಮ್ಲ ಹಾಗೂ ಜಿಡ್ಡು ಎರಡೂ ಇವೆ. ದೇಹದ ಬೆಳವಣಿಗೆ, ಹೃದಯ/ರಕ್ತನಾಳ/ಚರ್ಮದ ಆರೋಗ್ಯಕ್ಕೆ ಕೊಬ್ಬಿನಲ್ಲಿರುವ ಕೊಬ್ಬಿನ ಆಮ್ಲಗಳೇ ಕಾರಣ. ಮೇದಸ್ಸು ಎ, ಡಿ, ಇ ಮತ್ತು ಕೆ ಜೀವಸತ್ವಗಳು ಕೊಬ್ಬಿನಲ್ಲಿ ಮಾತ್ರ ಕರುಗುತ್ತವೆ. ಕೊಬ್ಬಿನಲ್ಲಿರುವ ಲಿನೋಲಿಯಿಕ್ ಆಮ್ಲ ಮತ್ತು ಆರ್‌ಕಿಡೋನಿಕ್ ಆಮ್ಲ ಈ ಕೆಲಸವನ್ನು ಮಾಡುತ್ತವೆ.

ವ್ಯಕ್ತಿ ಎತ್ತರಕ್ಕೆ ತಕ್ಕ ತೂಕವಿರಬೇಕು. ಇಲ್ಲದಿದ್ದರೆ ದೈನಂದಿನ ಕೆಲಸ ನಿರ್ವಹಿಸಲು ಶಕ್ತಿ ಕುಂದುತ್ತದೆ. ಆದರೆ ಈಗ ದೈಹಿಕ ಶ್ರಮ ಕಡಿಮೆಯಾದ್ದರಿಂದ ಅಧಿಕ ಕೊಬ್ಬು ದೇಹದಲ್ಲೇ ಶೇಖರವಾಗುತ್ತಿದೆ. ಹೆಂಗಸರಲ್ಲಿ ಈ ಕೊಬ್ಬು ನಿತಂಬ ಹಾಗೂ ಹೊಟ್ಟೆಯಲ್ಲಿ ಪದರ ಪದರವಾಗಿ ಸೇರಿಕೊಂಡರೆ, ಗಂಡಸರಲ್ಲಿ ಹೆಚ್ಚಾಗಿ ಹೊಟ್ಟೆಯಲ್ಲಿ ಸೇರಿಕೊಳ್ಳುತ್ತದೆ. ಆದರೆ ಕೊಬ್ಬನ್ನು ಕಡಿಮೆ ಮಾಡುವ ಯಾವುದೇ ನಿಶ್ಚಿತ ಸೂತ್ರಗಳಿಲ್ಲ. ಡಯಟ್ ಎಂದು ಮಾಡುವ ಅರೆಹೊಟ್ಟೆ ಊಟ ನಿಶ್ಯಕ್ತಿ ಹಾಗೂ ಕೆಲಸದಲ್ಲಿ ನಿರುತ್ಸಾಹ ಮೂಡಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಇದು ಬೇರೆ ರೋಗಗಳಿಗೂ ಕಾರಣವಾಗಬಹುದು. ಇದರಿಂದಲೂ ಪರಿಹಾರ ಕಾಣದವರು ತೆಳುವಾಗಿಸುವ ಔಷಧಗಳ ಮೊರೆ ಹೋಗುತ್ತಾರೆ. ಇದು ಇನ್ನೂ ಅಪಾಯಕಾರಿ ಹಂತ.

ಪತ್ರಿಕೆಯೊಂದರ ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೆ.೬೦ ಪುರುಷರು, ಶೇ.೭೬ ಮಹಿಳೆಯರು (ಮಧ್ಯಮ, ಮೇಲ್‌ಮಧ್ಯಮ, ಶ್ರೀಮಂತ ವರ್ಗ) ಅಧಿಕ ಕೊಬ್ಬು ಹೊಂದಿದ್ದಾರೆ. ಪುರುಷರಲ್ಲಿ ಮೊದಲ ಸ್ಥಾನ ರಾಜಕಾರಣಿಗಳದು. ಬ್ಯಾಂಕ್ ಉದ್ಯೋಗಿಗಳು, ಸರಕಾರಿ ಉದ್ಯೋಗಿಗಳು ಎರಡನೇ ಸ್ಥಾನದಲ್ಲೂ, ವೈದ್ಯರು, ವಕೀಲರು ಹಾಗೂ ವ್ಯಾಪಾರಸ್ಥರು ಮೂರನೆಯ ಸ್ಥಾನದಲ್ಲಿದ್ದಾರೆ. (ಮಹಿಳೆಯರಿಗೆ ಈ ವಿಂಗಡಣೆ ಇಲ್ಲ) ಕೊಬ್ಬನ್ನು ಮಿತಗೊಳಿಸುವುದು ಉತ್ತಮ. ಅದಕ್ಕಾಗಿ ಅಡುಗೆ ಎಣ್ಣೆ ಬಳಸುವಾಗ ಪಾಲಿ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ (ಪಿಯುಎಫ್‌ಎ) ಹೆಚ್ಚಿರುವ ಎಣ್ಣೆ ಬಳಸುವುದು ಒಳ್ಳೆಯದು.

ಎಳ್ಳು ಶೇ.೭೫, ಸೂರ್‍ಯಕಾಂತಿ ಶೇ.೬೫, ಸೋಯಾ ಶೆ.೬೨ರಷ್ಟು ಪೂಫಾ ಹೊಂದಿವೆ. ಬೆಣ್ಣೆ ಶೆ.೦.೩೪, ತುಪ್ಪ ಶೇ.೦.೨೭, ಕೊಬ್ಬರಿ ಎಣ್ಣೆ ಶೇ.೦.೨೮ ಪೂಫಾ ಹೊಂದಿದ್ದು ಅಧಿಕ ಜಿಡ್ಡಿನಿಂದ ಕೂಡಿವೆ.

ಮನೆಯವರೆಲ್ಲರ ಸಹಕಾರವಿದ್ದರೆ, ವ್ಯಕ್ತಿ ಆಹಾರಸೇವನೆ ವಿಧಾನವನ್ನು ಬದಲಿಸಿಕೊಳ್ಳಬಹುದು. ಇದು ಸಾಧ್ಯವಾಗದವರು ಈಗ ಪ್ರಕೃತಿ ಚಿಕಿತ್ಸಾ ಕೇಂದ್ರ ಸೇರಿಕೊಳ್ಳುತ್ತಾರೆ. ಸಾಂಪ್ರದಾಯಿಕವಲ್ಲದ ಆಹಾರಕ್ರಮಗಳನ್ನು ರೂಢಿಸಿಕೊಳ್ಳುತ್ತಾರೆ. ಸ್ವಲ್ಪ ತೆಳುವಾದ ನಂತರ ಮನೆಯಲ್ಲಿ ಮತ್ತೆ ಹಳೆಯ ಕ್ರಮ ಮುಂದುವರಿಸಿದರೆ ಪ್ರತಿಕೂಲ ಪರಿಣಾಮದ ಸಾಧ್ಯತೆ ಇದೆ.

ನಮ್ಮ ದೇಹಕ್ಕೆ ಅತ್ಯವಶ್ಯವಾಗಿ ಬೇಕಾದ ಕೊಬ್ಬನ್ನು ಹೆಚ್ಚಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮದು.

೧. ಹೆಚ್ಚು ದ್ರವಾಹಾರ ಸೇವಿಸಿ, ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯಿರಿ.

೨. ವಿಶೇಷ ಊಟ ಮಾಡಿದರೆ ಮತ್ತೊಂದು ಹೊತ್ತು ಉಪವಾಸ ಮಾಡಿ.

೩. ಸೊಂಟದ ಸುತ್ತಳತೆ ೭೫ ಸೆಂ.ಮೀ. ಮೀರದಂತೆ ನೋಡಿಕೊಳ್ಳಿ.

೪. ದೇಹದ ತೂಕ ಎತ್ತರಕ್ಕೆ ತಕ್ಕ ತೂಕಕ್ಕಿಂತ ಅಧಿಕವಾದರೆ ಆಹಾರದಲ್ಲಿ ಜಿಡ್ಡಿರದಂತೆ ನೋಡಿಕೊಳ್ಳಿ.

೫. ನಿಂಬೆಹುಳಿ, ಮುರುಗನಹುಳಿ, ಹುಣಸೆಹಣ್ಣಿನ ಪಾನಕ, ಮಜ್ಜಿಗೆ, ನಾನಾ ರೀತಿಯ ತಂಬುಳಿಗಳು ದಿನನಿತ್ಯದ ಆಹಾರದೊಂದಿಗಿರಲಿ.

– ಈ ಲೇಖನ ವಿವಿಧ ಪತ್ರಿಕೆಗಳ ವರದಿಯನ್ನು ಆಧರಿಸಿದೆ. ಹೆಚ್ಚುವರಿ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಹ ಸಂಪರ್ಕಿಸಲಾಗಿದೆ.