ಜಗತ್ತಿನಲ್ಲಿ ಬಳಕೆಯಲ್ಲಿರುವ ಭಾಷೆಗಳ ಸಂಖ್ಯೆ ಖಚಿತವಾಗಿ ತಿಳಿದಿದೆ ಯೆಂದು ಹೇಳಲು ಸಾಧ್ಯವಿಲ್ಲ. ಕೆಲವು ವಿದ್ವಾಂಸರು 4,000 ರಿಂದ 5,000 ಭಾಷೆಗಳಿವೆಯೆಂದೂ, ಕೆಲವರು 3,000 ರಿಂದ 10,000 ಭಾಷೆಗಳಿವೆಯೆಂದು ಅಂದಾಜು ಮಾಡಿದ್ದಾರೆ. ಲೋಕದಲ್ಲಿ ಇಂತಿಷ್ಟೇ ಭಾಷೆಗಳಿವೆಯೆಂದು ಹೇಳಲು ಬರುವುದಿಲ್ಲ. ಜಗತ್ತಿನಲ್ಲಿಯ ಭಾಷೆಗಳ ಸಂಖ್ಯೆ ನಿರ್ಧಾರಕ್ಕೆ ನಿಲುಕದ ಮಾತು. ಅದಕ್ಕೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭಾಷಿಕ ಕಾರಣಗಳಿವೆ.

ಭಾಷಾ ವಿಜ್ಞಾನಿಗಳ ಲೆಕ್ಕಕ್ಕೆ ಸಿಗದ ಹಾಗೂ ಇನ್ನೂ ಯಾರ ಗಮನಕ್ಕೂ ಬಾರದ ಅನೇಕ ಭಾಷೆ, ಉಪಭಾಷೆಗಳು ಇರಬಹುದು, ಇವೆ. ಅವುಗಳ ಶೋಧನೆ ನಡೆಯಬೇಕಾಗಿದೆ. ಉದಾ: ದಕ್ಷಿಣ ಆಫ್ರಿಕಾದ ನದಿ ತೀರ ಪ್ರದೇಶದಲ್ಲಿ ನಿರಂತರ ಶೋಧನೆ ಮತ್ತು ಸಮೀಕ್ಷೆಯಿಂದ ಬ್ಯುಟಕೊ, ಕುಟಕಿ, ಇಂತಹ ಕೆಲವು ಭಾಷೆಗಳು, ಉಪಭಾಷೆಗಳು ಬೆಳಕಿಗೆ ಬಂದವು. ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಪೆಂಗೋ, ಕೊಲಾಮಿ ಭಾಷೆಗಳು ಇತ್ತೀಚೆಗೆ ಶೋಧಿಸಲ್ಪಟ್ಟವು. ಹೊಸ ಹೊಸ ಭಾಷೆಗಳ ಶೋಧನೆಗೆ ಜಗತ್ತಿನಾದ್ಯಂತ ಭಾಷಾ ಪರಿವೀಕ್ಷಣೆಗಳು ಭರದಿಂದ ನಡೆಯಬೇಕಾಗಿವೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಭಾಷೆಗಳಿವೆ, ಭಾಷಿಕರು ಯಾವ ಯಾವ ಭಾಷೆಗಳನ್ನು ಆಡುತ್ತಿದ್ದಾರೆ. ಭಾಷೆಗಳ ಭೌಗೋಳಿಕ ವ್ಯಾಪ್ತಿ ಮುಂತಾದ ಅಂಶಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲಿಕ್ಕೆ ಭಾಷಾ ಪರಿವೀಕ್ಷಣೆ ತುಂಬ ಅವಶ್ಯಕ. ಉದಾ. ಭಾರತದಲ್ಲಿ ಜಾರ್ಜ್ ಗ್ರೀಯರಸನ್‌ರು ಭಾರತದ ಭಾಷೆಗಳ ಪರಿವೀಕ್ಷಣೆ ಮಾಡಿದರು. ಇದು ನಿಜವಾಗಿಯೂ ಒಂದು ಬೃಹತ್ ಪ್ರಯತ್ನ ಎಂಬುದರ ಬಗೆಗೆ ಅನುಮಾನವಿಲ್ಲ. ಅವರ ಈ ಪ್ರಯತ್ನದ ಫಲವಾಗಿ ಅನೇಕ ಭಾಷೆ ಉಪಭಾಷೆಗಳು ಬೆಳಕಿಗೆ ಬಂದವು. ದಕ್ಷಿಣ ಭಾರತದ ಅನೇಕ ಪ್ರದೇಶಗಳು ಅವರ ಪರಿವೀಕ್ಷಣೆಗೆ ಒಳಪಟ್ಟಿಲ್ಲವಾದರೂ ಮುಂದೆ ಬರುವ ಇಂತಹ ಯೋಜನೆಗಳಿಗೆ ಅದು ಮಾದರಿಯಾಯಿತು ಎಂಬುದರ ಬಗ್ಗೆ ಎರಡು ಮಾತಿಲ್ಲ.

ಭಾಷೆಗಳ ಅಳಿವು-ಉಳಿವು ಆಯಾ ಪ್ರದೇಶದ ಭಾಷಿಕರನ್ನು ಅವಲಂಬಿಸಿದೆ. ಮಾತೃಭಾಷಿಕರು ಅಥವಾ ಸ್ವಭಾಷಿಕರು ನಿತ್ಯ ಜೀವನದಲ್ಲಿ ತಮ್ಮ ಮಾತೃಭಾಷೆಯನ್ನು ಉಪಯೋಗಿಸುತ್ತಿದ್ದರೆ ಆ ಭಾಷೆ ಉಳಿಯುತ್ತದೆ. ಭಾಷಾ ಬಳಕೆ ಕಡಿಮೆಯಾದಂತೆಲ್ಲ ಆ ಭಾಷೆ ಅಳಿಯುತ್ತದೆ. ಪ್ರಪಂಚದ ಕೆಲವೆಡೆಯ ಅಲ್ಪಸಂಖ್ಯಾತ, ಆದಿವಾಸಿ, ಬುಡಕಟ್ಟು ಸಮುದಾಯದ ಭಾಷೆಗಳ ಭಾಷಿಕರು ಆಧುನೀಕರಣ, ನಗರೀಕರಣ, ಪಾಶ್ಚಿಮಾತ್ಯೀಕರಣ ಹಾಗೂ ರಾಜಕೀಯ, ಆರ್ಥಿಕ ಕಾರಣಗಳಿಂದಾಗಿ ತಮ್ಮ ಮಾತೃಭಾಷೆಯ ಬಳಕೆ ಹಾಗೂ ವ್ಯವಹಾರ ಕಡಿಮೆಯಾದಂತೆ ಅದೇ ಸಮುದಾಯದ ಮುಂದಿನ ಪೀಳಿಗೆಗೆ ತಮ್ಮ ಮಾತೃ ಭಾಷೆಯ ಸಂಪರ್ಕ ಕಡಿಮೆಯಾಗಿ ಭಾಷೆ  ಕ್ರಮೇಣ ನಶಿಸಿಹೋಗಿ, ಕಣ್ಮರೆಯಾಗುತ್ತದೆ. ಉದಾ: (ಭಾರತದ ಸನ್ನಿವೇಶ ದಲ್ಲಿ ಹೇಳುವುದಾದರೆ) ಪಟ್ಟಣದಲ್ಲಿ ಬದುಕುತ್ತಿರುವ ಲಂಬಾಣಿ ವಿದ್ಯಾವಂತ ಯುವಕರಿಗೆ ತಮ್ಮ ಮಾತೃ ಭಾಷೆಯಲ್ಲಿ ವ್ಯವಹರಿಸಲಿಕ್ಕೆ, ಸರಾಗವಾಗಿ ಮಾತನಾಡಲಿಕ್ಕೆ ಬರುವುದಿಲ್ಲ. (ಕೆಲವರು ಸಂಕೋಚಪಟ್ಟುಕೊಳ್ಳುತ್ತಾರೆ). 1962 ರ ಸುಮಾರಿಗೆ ದಕ್ಷಿಣ ಆಫ್ರಿಕಾದ ಒಂದು ಪ್ರದೇಶದಲ್ಲಿ 500 ಜನ ತುರುಮೆ ಎಂಬ ಬುಡಕಟ್ಟು ಭಾಷೆಯನ್ನು ಆಡುವ ಜನರಿದ್ದರು. ಅವರು ಬೇರೆ ಬೇರೆ ಕಾರಣಗಳಿಂದಾಗಿ ಪಟ್ಟಣಕ್ಕೆ ಬಂದು ನೆಲೆಸಿದಾಗ 1981 ರಷ್ಟೊತ್ತಿಗೆ ಆ ಭಾಷೆಯನ್ನು ಸರಾಗವಾಗಿ ಮಾತನಾಡುವವರು, ಕೇವಲ 10ರಷ್ಟಿತ್ತೆಂದು ಸಂಶೋಧನೆಯಿಂದ ತಿಳಿದು ಬಂದಿದೆ. 19ನೆಯ ಶತಮಾನದ ಆದಿಯ ಬ್ರೆಝಿಲ್‌ನಲ್ಲಿ ಇಂಡಿಯನ್ ಭಾಷೆಗಳನ್ನಾಡುವವರ ಸಂಖ್ಯೆ 1,000 ಇದ್ದಿತು, ಈಗ ಕೇವಲ 200 ರಷ್ಟಿದೆ. ಪ್ರತಿಯೊಂದು ಭಾಷೆ ಆಯಾ ಸಮುದಾಯದವರ ಸಂಪರ್ಕ ಸಾಧನ. ಸಂಪರ್ಕ ಅಥವಾ ಬಳಕೆ ಹೆಚ್ಚಾದಂತೆ ಭಾಷೆ ಬೆಳೆಯುತ್ತದೆ, ಉಳಿಯುತ್ತದೆ. ಸಂಪರ್ಕ ಕಡಿಮೆಯಾದಂತೆ ಭಾಷೆ ಅಳಿಯುತ್ತದೆ ಎಂಬುದು ಮೇಲಿನ ನಿದರ್ಶನಗಳಿಂದ ತಿಳಿದುಬರುತ್ತದೆ.

ಒಂದು ಪ್ರದೇಶದ ಭಾಷೆಯಲ್ಲಿ ವ್ಯಕ್ತಿ ಭಾಷೆ, ಉಪಭಾಷೆಗಳೆಂಬ ವೈವಿಧ್ಯ ಇದೆ. ಈ ರೀತಿಯ ವೈವಿಧ್ಯವೆಂದರೆ ಭಾಷೆಯಲ್ಲಿ ಭಿನ್ನತೆಯಿದೆ ಯೆಂದರ್ಥ. ಈ ಭಿನ್ನತೆಯು ಭಾಷೆಯ ಪ್ರಮುಖ ಲಕ್ಷಣ, ಅದುವೇ ಭಾಷಾ ವಿಜ್ಞಾನಿಗಳ ಲಕ್ಷ್ಯವನ್ನು ಸೆಳೆಯುತ್ತದೆ. ಭಾಷಾ ಬಳಕೆಯಲ್ಲಾಗುವ ವ್ಯತ್ಯಾಸ ಭೌಗೋಳಿಕ ಪ್ರದೇಶವನ್ನಾಧರಿಸಿರಬಹುದು ಅಥವಾ ಒಂದು ಪ್ರದೇಶದ ಸಾಮಾಜಿಕ ವರ್ಗ, ವೃತ್ತಿ ಹಾಗೂ ಸಾಂಸ್ಕೃತಿಕ ವರ್ಗಗಳನ್ನು ಅವಲಂಬಿಸಿರ ಬಹುದು. ಭಿನ್ನ ಅಂಶಗಳು ಆಕಸ್ಮಿಕವಾಗಿರದೆ ಸಹಜವಾಗಿರುತ್ತವೆ. ಉದಾ: ಬೆಳಗಾವಿ ಪ್ರದೇಶದ ಕನ್ನಡ ಹಾಗೂ ಬೆಂಗಳೂರು ಪ್ರದೇಶದ ಕನ್ನಡದಲ್ಲಿಯ ಪ್ರಾದೇಶಿಕ ರೂಪಗಳು, ಉಚ್ಚಾರಣೆ ಮುಂತಾದ ಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರಿಂದ ಅವು ಒಮ್ಮೆಲೆ ಅರ್ಥವಾಗುವುದಿಲ್ಲ. ಆ ಎರಡು ಉಪಭಾಷೆಗಳನ್ನು ಬಳಸುವ ವ್ಯಕ್ತಿಗಳು ಪರಸ್ಪರ ಅರ್ಥಮಾಡಿಕೊಳ್ಳಬೇಕಾದರೆ ಧಾರವಾಡ ಅಥವಾ ದಾವಣಗೆರೆಯ ಉಪಭಾಷೆಗಳಲ್ಲಿ ಮಾತನಾಡಬೇಕಾಗು ತ್ತದೆ. ಒಂದು  ಪ್ರದೇಶದಲ್ಲಿಯ ಬೇರೆ ಬೇರೆ ಸಾಮಾಜಿಕ ವರ್ಗದಲ್ಲಿಯ ಭಾಷಾ ಬಳಕೆಯಲ್ಲಿ ವ್ಯತ್ಯಾಸವಿರುತ್ತದೆ. ಬೆಳಗಾವಿ ಪ್ರದೇಶದಲ್ಲಿಯೇ ಬ್ರಾಹ್ಮಣರ ಹಾಗೂ ಹರಿಜನರ ಭಾಷೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಭಾಷಿಕರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪರಸ್ಪರ ಗ್ರಹಿಕೆ ಪ್ರಮುಖ ಪಾತ್ರವಹಿಸುತ್ತದೆ. ಭಾಷಿಕರು ಒಬ್ಬರ ಭಾಷೆಯನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳುತ್ತಿದ್ದರೆ ಅವರಲ್ಲಿ ಪರಸ್ಪರ ಗ್ರಹಿಕೆ ಇದೆ ಎಂದರ್ಥ. ಅರ್ಥವಾಗದಿದ್ದರೆ ಪರಸ್ಪರ ಗ್ರಹಿಕೆ ಇಲ್ಲವೆಂದರ್ಥ. ಉದಾ: ಚೀನಾದ ಮೂರು ಪ್ರಮುಖ ಉಪಭಾಷಾ ಕುಟುಂಬಗಳಲ್ಲಿ ಭಾಷಿಕರು ಅನೇಕ ವರ್ಷಗಳಿಂದ ಘರ್ಷಣೆ ಮಾಡುತ್ತಲೇ ಬಂದಿದ್ದರು. ಪರಸ್ಪರರಲ್ಲಿ ಭಾಷಾ ಸಂಪರ್ಕವೇ ಇರಲಿಲ್ಲ. ಪರಸ್ಪರರ ತಿಳುವಳಿಕೆಯ ಅಭಾವದಿಂದಾಗಿ ಒಬ್ಬರ ಭಾಷೆ ಇನ್ನೊಬ್ಬರಿಗೆ ಅರ್ಥವಾಗುವುದೇ ಕಷ್ಟವಾಯಿತು. ಅವರ ಭಾಷೆಗಳ ಅಂತರಿಕ ರಚನೆಯಲ್ಲಿಯೂ ವ್ಯತ್ಯಾಸಗಳಾದವು. ಸಾಮಾಜಿಕ ವರ್ಗದಲ್ಲಾಗುವ ಯಾವುದೇ ರೀತಿಯ ಭಿನ್ನತೆ ಆ ಪ್ರದೇಶದ ಭಾಷೆಯಲ್ಲಿ ಪ್ರತಿಬಿಂಬಿತವಾಗು ತ್ತವೆ. ಭಾಷಾ ಭಿನ್ನತೆಗೆ ಸಾಂಸ್ಕೃತಿಕ, ಐತಿಹಾಸಿಕ ಅಂಶಗಳು ಕಾರಣವಾಗಿದೆ ಎಂಬುದನ್ನು ಅಲ್ಲಗಳೆಯಲಾಗದು. ಹೆಚ್ಚು ಪ್ರದೇಶವನ್ನೊಳಗೊಂಡ ಹಾಗೂ ಹೆಚ್ಚು ಭಾಷಿಕರನ್ನೊಳಗೊಂಡ ಭಾಷೆ ಆ ಪ್ರದೇಶದ ಪ್ರತಿನಿಧಿಯಾಗಿ ಆ ಪ್ರದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಹರೆಯನ್ನು ಗುರುತಿಸಲು ನೆರವಾಗುತ್ತದೆ.

ಒಂದು ಪ್ರದೇಶದಲ್ಲಿ ಭಾಷಾ ಸಮೀಕ್ಷೆ ಕೈಕೊಂಡಾಗ ಹೊಸ ಹೊಸ ಭಾಷೆ, ಉಪಭಾಷೆಗಳು ಬೆಳಕಿಗೆ ಬರಬಹುದು, ಬರುತ್ತವೆ. ಅವುಗಳಿಗೆ ಹೆಸರನ್ನು ಕೊಡುವುದು ಅಥವಾ ಹುಡುಕುವುದು ದೊಡ್ಡ ಸಮಸ್ಯೆಯಾಗಿದೆ. ಈ ಕುರಿತು ಎರಡು ಬಗೆಯ ಸನ್ನಿವೇಶಗಳು ಕಂಡು ಬರುತ್ತವೆ. ಅನೇಕ ಬುಡಕಟ್ಟು, ಆದಿವಾಸಿ ಸಮುದಾಯದ ಭಾಷೆಗಳಿಗೆ ಹೆಸರುಗಳೇ ಇರುವುದಿಲ್ಲ. ಭಾಷಿಕರಿಗೆ ನೀವು ಆಡುತ್ತಿರುವ ಭಾಷೆ ಯಾವುದು? ಅದರ ಹೆಸರೇನು? ಎಂದು ಕೇಳಿದಾಗ, ಅವರು ನಿರುತ್ತರರಾಗಬಹುದು ಅಥವಾ ಅಸ್ಪಷ್ಟ ಉತ್ತರ ಕೊಡಬಹುದು. ಹೆಚ್ಚಾಗಿ ಭಾಷಿಕರು ‘ನಮ್ಮ ಭಾಷೆ’ ಅಥವಾ ‘ನಮ್ಮ ಜನ’ ಎನ್ನುತ್ತಾರಷ್ಟೆ. ಉದಾ: ದಕ್ಷಿಣ ಅಮೆರಿಕಾದ ನದೀ ತೀರ ಪ್ರದೇಶದಲ್ಲಿ ಭಾಷಾ ಪರಿವೀಕ್ಷಣೆ ಕೈಕೊಂಡಾಗ ಮಾಚು, ಕ್ಯಾರಿಬ್ ಎಂಬ ಬುಡಕಟ್ಟು ಸಮುದಾಯಗಳ ಭಾಷೆಗಳು ಬೆಳಕಿಗೆ ಬಂದವು. ಆದರೆ ಅವುಗಳ ಹೆಸರುಗಳೇ ಇಲ್ಲ. ಭಾಷಿಕರು ತಮಗೆ ತಿಳಿದಂತೆ ಉತ್ತರ ಕೊಟ್ಟರು. ಇದಕ್ಕೆ ವಿರೋಧ ವಾದ ಇನ್ನೊಂದು ಸನ್ನಿವೇಶವು ಇದೆ. ಒಂದು ಸಮುದಾಯದಲ್ಲಿಯ ಭಾಷೆಗೆ ಭಾಷಿಕರು ಬೇರೆ ಬೇರೆ ಹೆಸರುಗಳನ್ನು ಕೊಟ್ಟಿರುತ್ತಾರೆ ಅಥವಾ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಭಾಷೆಗಳ ಹೆಸರುಗಳ ಬಗೆಗಿನ ಇಂತಹ ಸನ್ನಿವೇಶಗಳು ಜಗತ್ತಿನಾದ್ಯಂತ ಬೇರೆ ಬೇರೆ ಭಾಷಾ ವಲಯದಲ್ಲಿ ಕಂಡುಬಂದಿವೆ.

ಪರಿಸ್ಥಿತಿ ಹೀಗಿರುವಾಗ ಭಾಷೆಗಳು ಎಷ್ಟಿವೆ ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಭಾಷೆಗಳ ಸಂಖ್ಯೆಯನ್ನು ಶೋಧಿಸುವಾಗ ಭಾಷೆ ಉಪಭಾಷೆ, ಲಿಪಿಯುಳ್ಳ ಭಾಷೆ-ಲಿಪಿರಹಿತ ಭಾಷೆ, ಹೆಸರಿರುವ – ಹೆಸರಿಲ್ಲದ ಭಾಷೆ ಮುಂತಾದ ಅಂಶಗಳನ್ನು ಗಮನಿಸಬೇಕಾಗುತ್ತದೆ. ಪ್ರತಿಯೊಂದು ಭಾಷೆಯೂ ಅಧ್ಯಯನ ಯೋಗ್ಯವಾಗಿದೆ. ಜಗತ್ತಿನಾದ್ಯಂತ ಭಾಷೆಗಳ ಸಂಖ್ಯೆ ಎಷ್ಟೆಂದು ಶೋಧಿಸುವುದು ಸಂಶೋಧಕರ ಮುಂದಿರುವ ಸವಾಲಾಗಿದೆ.

ಪ್ರಪಂಚದಲ್ಲಿ ಎಷ್ಟೋ ಸಾವಿರ ಭಾಷೆಗಳಿದ್ದರೂ ಅವುಗಳನ್ನು ಆಡುವ, ಬಳಸುವ ಜನಸಂಖ್ಯಾ ಪ್ರಮಾಣದಲ್ಲಿ ಅಗಾಧ ವ್ಯತ್ಯಾಸಗಳಿವೆ. ಪ್ರಥಮ ಭಾಷಿಕರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಜಗತ್ತಿನ ಮೊದಲ ಇಪ್ಪತ್ತು ಭಾಷೆಗಳು ಹೀಗಿವೆ.

1. ಚೈನೀಸ್ (ನೂರು ಕೋಟಿ)

2. ಇಂಗ್ಲಿಶ್ (ಮೂವತ್ತೈದು ಕೋಟಿ)

3. ಸ್ಪ್ಯಾನಿಶ್ (ಇಪ್ಪತ್ತು ಕೋಟಿ)

4. ಹಿಂದಿ (ಇಪ್ಪತ್ತು ಕೋಟಿ)

5. ಅರಾಬಿಕ್ (ಹದಿನೈದು ಕೋಟಿ)

6. ಬಂಗಾಳಿ (ಹದಿನೈದು ಕೋಟಿ)

7. ರಶಿಯನ್ (ಹದಿನೈದು ಕೋಟಿ)

8. ಪೋರ್ಚುಗೀಸ್ (ಹನ್ನೆರಡು ಕೋಟಿ)

9. ಜಪಾನೀಸ್ (ಹನ್ನೆರಡು ಕೋಟಿ)

10. ಜರ್ಮನ್ (ಹತ್ತು ಕೋಟಿ)

11. ಫ್ರೆಂಚ್ (ಏಳು ಕೋಟಿ)

12. ಪಂಜಾಬಿ (ಏಳು ಕೋಟಿ)

13. ಜಾವಾನೀಸ್ (ಆರೂವರೆ ಕೋಟಿ)

14. ಬಿಹಾರಿ (ಆರೂವರೆ ಕೋಟಿ)

15. ಇಟಾಲಿಯನ್ (ಆರು ಕೋಟಿ)

16. ಕೋರಿಯನ್ (ಆರು ಕೋಟಿ)

17. ತೆಲುಗು (ಐದೂವರೆ ಕೋಟಿ)

18. ತಮಿಳು (ಐದೂವರೆ ಕೋಟಿ)

19. ಮರಾಠಿ (ಐದು ಕೋಟಿ)

20. ವಿಯಟ್ನಾಮಿಸ್ (ಐದು ಕೋಟಿ)

ಇದೇ ಪಟ್ಟಿಯಲ್ಲಿ ಮುಂದಿನ ಹತ್ತು ಭಾಷೆಗಳೊಳಗೆ ಕನ್ನಡವೂ ಬರುವುದೆಂದು ಊಹಿಸಬಹುದಷ್ಟೆ.

ಪ್ರಥಮ ಭಾಷಿಕರ ಜತೆಗೆ ದ್ವಿತೀಯ ಭಾಷಿಕರ ಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡಾಗಲೂ ಇಪ್ಪತ್ತರಲ್ಲಿ ಹದಿನಾಲ್ಕು ಪಟ್ಟಿಯಲ್ಲೇ ಬೇರೆ ಬೇರೆ ಸ್ಥಾನ ಪಡೆದು ಉಳಿದುಕೊಳ್ಳುತ್ತದೆ. ಇಂಗ್ಲಿಶಿಗೆ 140 ಕೋಟಿ ಭಾಷಿಕರೊಡನೆ ಮೊದಲನೇ ಸ್ಥಾನ. ಪ್ರಥಮ ಭಾಷಿಕರಿಗಿಂತ ಅಧಿಕ ಪ್ರಮಾಣದಲ್ಲಿ ದ್ವಿತೀಯ ಭಾಷಿಕರನ್ನು ಹೊಂದಿರುವ ಭಾಷೆಗಳಲ್ಲಿ ಇಂಗ್ಲಿಶ್ (35 1400) ಮತ್ತು ಹಿಂದಿ (20 70) ಗಮನ ಸೆಳೆಯುತ್ತದೆ. ಹೀಗೆ ದ್ವಿತೀಯ ಭಾಷಿಕರ ಸಂಖ್ಯೆ ಅಧಿಕವಾಗಿರುವುದು ಪರೋಕ್ಷವಾಗಿ ಭಾಷೆಯ ಬೆಳವಣಿಗೆಯ ಮೇಲೆ ಎಂಥ ಪರಿಣಾಮಕ್ಕೆ ಕಾರಣವಾಗುವುದೆಂದು ಅಧ್ಯಯನ ಮಾಡಲಾಗುತ್ತಿದೆ.