ಸಂಗೀತ ಕಲೆ ಎಲ್ಲಾ ಕಲೆಗಳಿಗಿಂತ ಶ್ರೇಷ್ಠವಾದ ಕಲೆ ಎನ್ನುತ್ತಾರೆ. ಸಂಗೀತ ಕಲೆ ಎಂದೆಂದಿಗೂ ಅಮರ. ಅದಕ್ಕೆ ಅಳಿವಿಲ್ಲ, ಕೊನೆಯಿಲ್ಲ. ಸಮಯ ಕಾಲಾನುಗುಣವಾಗಿ ಅಭಿವೃದ್ಧಿಗೊಂಡು ಬೆಳೆಯುತ್ತಿರುತ್ತದೆ. ಈ ಕಲೆಗಾಗಿ ಜೀವಮಾನವನ್ನೇ ಮುಡಿಪಾಗಿಟ್ಟು ಅದಕ್ಕಾಗಿಯೇ ತಮ್ಮ ಜೀವವನ್ನು ಸವೆಸಿ ದುಡಿದ ಲಕ್ಷಾಂತರ ಮಂದಿ ಆಗಿ ಹೋಗಿದ್ದಾರೆ. ಹಿಂದೆ ಇದ್ದರು, ಇಂದೂ ಇದ್ದಾರೆ, ಮುಂದಕ್ಕೂ ಇರುತ್ತಾರೆ. ಕಲಾವಿದರು ಅಮರರಾಗಿಲ್ಲದಿರಬಹುದು. ಆದರೆ ಅವರು ಬಿಟ್ಟುಹೋದ ಕಲೆ ಮುಂದಿನ ಪೀಳಿಗೆಗೆ ದಾರಿ ದೀಪವಾಗಿ ಎಂದೆಂದಿಗೂ ಉಳಿಯುತ್ತದೆ.

ಸುಮನಸರಂಜನಿ ಆದಿ

ಸಂಗೀತ ದೇವಿ ಸರಸ್ವತಿ

ಶೃಂಗಾರರೂಪಿಣಿ ಸಲಹೆನ್ನ ತಾಯೇ ||ಪ||

(ಸಂಗೀತ)

ಮಂಗಳ ಕಾರಿಣಿ ಮನೋನ್ಮಣಿ

ಶೃಂಗಗಿರಿವಾಸಿನಿ ಶ್ರಿತಜನಪಾಲಿನಿ ||ಅ.ಪ.||

(ಸಂಗೀತ)

ಕಲಾರೂಪಿಣಿ ಕಾಮಿತದಾಯಿನಿ

ಸುಲಲಿತ ಭಾಷಿಣಿ ಸುಮನಸರಂಜನಿ

.ಪ. ಯಂತೆ: ವೀಣಾಪಾಣಿ ವಿಶ್ವಕಲ್ಯಾಣಿ

ಮಣಿಮಯ ಭೂಷಿಣಿ ಕುಸುಮಪಾದಾಂಬುಜೆ

(ಸಂಗೀತ)(ಎಸ್‌.ಎನ್‌. ಮರಿಯಪ್ಪನವರ ರಚನೆಗಳಲ್ಲೊಂದು)

 

ಸ ರಿ ಗ ಮ ಪ ದ ನಿ

ಸರಿ ಎಂದರೆ ಸಂಸ್ಕೃತದಲ್ಲಿ ದೋಣಿ ಎಂದರ್ಥ. ಗಮ ಎಂದರೆ ಹೊಂದಿಸುವುದು, ಪದ ಎಂದರೆ ಸ್ಥಾನ; ನಿ ಎಂದರೆ ಕೊಡುವುದು ಅಂದರೆ ಒಟ್ಟಿನಲ್ಲಿ ಸಂಸಾರ ಸಮುದ್ರವನ್ನು ದಾಟುವುದಕ್ಕೆ ದೋಣಿಯಾದ ಪರಮಾತ್ಮನನ್ನು ಹೊಂದಿಸುವ ಮಾರ್ಗ ಎಂದರ್ಥ.

‘ಮದ್ಭಕ್ತಾ ಯುತ್ರ ಗಾಯಂತಿ ತತ್ರ ತಿಷ್ಠಾಮಿ’ (ನನ್ನ ಭಕ್ತರು ಎಲ್ಲಿ ಭಕ್ತಿಯಿಂದ ಹಾಡುತ್ತಾರೋ ಅಲ್ಲೇ ನಾನಿರುತ್ತೇನೆ) ಎಂದು ಆ ಭಗವಂತನೇ ಹೇಳಿದ್ದಾನೆ.

 

ಸ ರಿ ಗ ಮ ಪ ದ ನಿ ಸ

ಸ ನಿ ದ ಪ ಮ ಗ ರಿ ಸ

 

ಸರಿಗಮಪದನಿಸ ಸನಿದಪಮಗರಿಸ ಸರಿಗಮಪದನಿಸ ಸನಿದಪಮಗರಿಸ ಸರಿ ……….

‘ಹೇಳಿ ಒಬ್ಬೊಬ್ಬರಾಗಿ ಹೇಳಿ. ಮತ್ತೆ ಒಟ್ಟಿಗೆ ಹೇಳಿ. ಇಲ್ಲ ಇಲ್ಲ ರಿ ಸರಿಯಿಲ್ಲ….. ಹಾಗಲ್ಲ ರಿ……ರಿ…….ಆಂ……. ಹಾಗೆ. ಎಲ್ಲಿ ಮತ್ತೆ ಹೇಳಿ ನೋಡೋಣ…….ಹಾಂ. ಈಗ ಪರವಾಗಿಲ್ಲ. ಈಗ ಮುಂದಿನ ಪಾಠಕ್ಕೆ ಹೋಗೋಣವೇ? ನೋಡಿ ಮುಂದೆ ತಾರಸ್ಥಾಯಿ, ಮಂದ್ರಸ್ಥಾಯಿ, ಜಂಟಿವರಸೆ, ಅಲಂಕಾರಗಳು ಆಕಾರ ಸಾಧನೆ’ ಹೀಗೆಯೇ ಪಾಠ ಮುಂದುವರಿಯುತ್ತದೆ. ೧೯೪೬ರ ಸಮಯ. ಮೈಸೂರಿನ ಚಾಮುಂಡೀಪುರ ಬಡಾವಣೆ, ಒಂದು ಮನೆಯಿಂದ ಒಂದೇ ಸಮ ಸಂಗೀತ ಕೇಳಿಸುತ್ತಿದೆ. ಹಿರಿಯ ವಿದ್ವಾಂಸರೊಬ್ಬರು ಪಾಠ ಹೇಳುತ್ತಿದ್ದಾರೆ. ಚಿಕ್ಕ ಪುಟ್ಟ ಮಕ್ಕಳು ಹೇಳಿಸಿಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸುವವರೆಲ್ಲಾ ಒಂದು ನಿಮಿಷ ನಿಂತು ಕೇಳಿ ಮುಂದಕ್ಕೆ ಹೋಗುತ್ತಿದ್ದಾರೆ. ಅವರಲ್ಲೊಬ್ಬರು ಕುತೂಹಲದಿಂದ ಒಳಗೆ ಹೋಗಿ ಇಣಿಕಿದರು. ನೋಡಿದರೆ ಒಬ್ಬ ದಷ್ಟಪುಷ್ಟ ಆಸಾಮಿಯೊಬ್ಬರು ಒಳ್ಳೆಯ ತಪಸ್ವಿಯಂತೆ ಕುಳಿತು, ಮಕ್ಕಳಿಗೆ ಸಂಗೀತವನ್ನು ಉಣಬಡಿಸುತ್ತಿದ್ದಾರೆ. ಮಕ್ಕಳೂ ಬಹಳ ಆಸ್ಥೆಯಿಂದ ಕಲಿಯುತ್ತಿದ್ದಾರೆ. ಸರಸ್ವತಿಯ ಪೂಜೆ ಅವ್ಯಾಹತವಾಗಿ ಸಾಗುತ್ತಿದೆ. ಇವರು ಯಾರಿರಬಹುದು? ಬಂದವರಿಗೆ ಕುತೂಹಲ. ನಂತರ ಇವರಿಗೆ ತಿಳಿಯಿತು. ಅವರೇ ಸಂಗೀತ ವಿದ್ವಾಂಸ ಎಸ್‌.ಎನ್‌. ಮರಿಯಪ್ಪನವರೆಂದು. ಅವರು ನಡೆಸುತ್ತಿದ್ದ ಶಾಲೆಯ ಹೆಸರು ‘ಸರಸ್ವತಿ ಗಾನ ಕಲಾಮಂದಿರ’. ಅಂದಿನಿಂದ ಇಬ್ಬರಿಗೂ ಎಡೆಬಿಡದ ಗೆಳೆತನ. ಕಡೆಯತನಕ ಮುಂದುವರಿಯಿತು.

ಆ ಮಹಾಕಲಾವಿದರ ಕಿರುಪರಿಚಯ ಇಲ್ಲಿದೆ.

ಜನನ: ಕರ್ನಾಟಕ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಸಾಸಲು ಗ್ರಾಮದ ನಂಜಪ್ಪ ಉಪಾದ್ರು ಎಂಬ ಶಾಲಾ ಉಪಾಧ್ಯಾಯ ರ ಪುತ್ರರಾಗಿ ಎಸ್‌.ಎನ್‌. ಮರಿಯಪ್ಪನವರು ೧೯೧೪ ರಲ್ಲಿ ಜನಿಸಿದರು. ಇವರಿಗೆ ಚಿಕ್ಕಂದಿನಿಂದಲೂ ಕಲೆಯ ಕಡೆಗೆ ಒಲವು. ಪ್ರಾರಂಭದಲ್ಲಿ ನಾಚ್‌ಶ್ಯಾಮರಾಯರಿಂದ ಭರತನಾಟ್ಯವನ್ನು ಕಲಿತರು. ನಂತರ ಮೇಲುಕೋಟೆಯ ನರಸಿಂಹಯ್ಯನವರಿಂದ ಕರ್ನಾಟಕಕ ಸಂಗಿತವನ್ನು ಕಲಿತರು. ಸಾಸಲು ಗ್ರಾಮದಲ್ಲಿದ್ದಾಗಲೇ ಸ್ವಲ್ಪ ಮಟ್ಟಿಗೆ ಜ್ಯೋತಿಷ್ಯ ಶಾಸ್ತ್ರವನ್ನೂ ಕಲಿತರು. ತರುವಾಯ ಬೆಂಗಳೂರಿನಲ್ಲಿದ್ದು ಶ್ರೀ ಸೋಮೇಶ್ರವರ ಭಾಗವತರಿಂದ ಸಂಗೀತದಲ್ಲಿ ಪ್ರೌಢಶಿಕ್ಷಣ ಪಡೆದು ೧೯೪೦ರಲ್ಲಿ ಕಚೇರಿ ಮಾಡಿ ಸುವರ್ಣ ಪದಕ ಪಡೆದರು. ನಂತರ ಕೆಲವು ಕಾಲ ಮದ್ರಾಸಿಲ್ಲಿ ವಾಸವಾಗಿದ್ದು ತಮ್ಮ ಪ್ರೌಢಿಮೆಯನ್ನು ಬೆಳೆಸಿಕೊಂಡು ವಿದ್ವತ್ತನ್ನು ಪಡೆದುಕೊಂಡರು ಎಚ್‌.ಆರ್. ಪದ್ಮನಾಭಶಾಸ್ತ್ರಿ ಎಂಬ ಚಿತ್ರ ನಿರ್ದೇಶಕರು ಇವರನ್ನು ಕೊಲ್ಹಾಪುರಕ್ಕೆ ಕರೆದುಕೊಂಡು ಹೋಗಿ ಚಿತ್ರ ಸಂಗೀತವನ್ನು ನಿರ್ದೇಶಿಸಲು ಅವಕಾಶ ಕಲ್ಪಿಸಿ, ಅವರ ಪ್ರತಿಭೆಯನ್ನು ಬೆಳಕಿಗೆ ತಂದರು. ಅಲ್ಲಿನ ಶಾಲಾ ಕಾಲೇಜಿನಲ್ಲಿ ಕಚೇರಿ ಮಾಡಿ ‘ಗಾನರತ್ನ’ ಎಂಬ ಬಿರುದನ್ನು ಪಡೆದರು. ತರುವಾಯ ಮೈಸೂರಿಗಿ ಬಂದು ನೆಲೆಸಿ ೧೯೪೬ರಲ್ಲಿ ಆಸ್ಥಾನ ವಿದ್ವಾಂಸರಾದರು. ಅದೇ ವರ್ಷ ಲಕ್ಷ್ಮಮ್ಮ ಎಂಬುವವರ ಮನೆಯ ಮಹಡಿಯ ಮೇಲೆ ಒಂದು ಸಂಗೀತ ಶಾಲೆಯನ್ನು ಸ್ಥಾಪಿಸಿದರು. ಅದರ ಹೆಸರು ‘ಸರಸ್ವತಿ ಗಾನಕಲಾಮಂದಿರ’ ಈ ‘ಶಾಲೆಯು ಬಹಳ ವರ್ಷಗಳ ವರೆಗೆ ಅದ್ದೂರಿಯಾಗಿ ನಡೆಯಿತು. ನೂರಾರು ಶಿಷ್ಯರುಗಳನ್ನು ತಯಾರು ಮಾಡಿದರು. ಇವರ ಶಿಷ್ಯರುಗಳಲ್ಲಿ ಪ್ರಮುಖರಾದವರು ಜಲಜಾಕ್ಷಮ್ಮ ಮತ್ತು ಲಕ್ಷ್ಮಮ್ಮ. ಈಗ ಅವರಿಬ್ಬರೂ ಇಲ್ಲ.

ಮರಿಯಪ್ಪನವರು ಮೊದಲು ಮೈಸೂರಿನ ನಿರ್ಮಲ ಕಾನ್ವೆಂಟಿನಲ್ಲಿಯೂ ನಂತರ ಜೆ.ಎಸ್‌.ಎಸ್‌. ಶಾಲೆಯಲ್ಲೂ ಕೆಲಸ ಮಾಡುತ್ತಿದ್ದರು.

ಮರಿಯಪ್ಪನವರು ಹಲವಾರು ವರ್ಷಗಳ ಕಾಲ ಸರ್ಕಾರದ ಸಂಗೀತ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಅಂಥ ಶಿಷ್ಯರೂ ಕೂಡ ಇದ್ದರು. ಇವರನ್ನು ನೋಡಿದ ತಕ್ಷಣ ಇವರು ಸಂಗೀತ ವಿದ್ವಾಂಸರೇ ಇರಬೇಕು ಎಂದು ನೋಡಿದವರೆಗೆ ಅನ್ನಿಸಬೇಕು. ಹಾಗೆ ಒಂದು ಶಲ್ಯ, ಶುಭ್ರವಸ್ತ್ರ, ಹೀಗೆ ಉಡುಪನ್ನು ಧರಿಸುತ್ತಿದ್ದರು. ಬಹಳ ಧಾರಾ ಳಿಗಳು. ನೇರ ನಡೆ ನುಡಿ. ಅವರು ಹೇಳಿದ ಮಾತು ಎಲ್ಲಾ ಕಡೆ ನಡೆಯುತ್ತಿತ್ತು. ಪಾಠ ಹೇಳುವುದರಲ್ಲಿ ಎತ್ತಿದ ಕೈ. ಅವರು ನಿಗರ್ವಿ, ಯಾರು ಏನು ಕೇಳಿದರೂ ಹೇಳಿಕೊಡುತ್ತಿದ್ದರು ಮುಖ್ಯವಾಗಿ ಯಾವ ರಾಗ ಹೇಗೆ ಹಾಡಬೇಕು? ಅಥವಾ ನುಡುಸಬೇಕು? ಪರೀಕ್ಷೆಗೆ ಅಭ್ಯಸಿಸುವ ಕ್ರಮಗಳೇನು? ರಾಗದ ಜೀವಸ್ವರ (Key note) ಮುಖ್ಯ ಸ್ವರಗಳಾವುವು; ಮುಂತಾದ ವಿಷಯಗಳನ್ನು ಸರಳವಾಗಿ, ಕೂಲಂಕಷವಾಗಿ ವಿವರಿಸುತ್ತಿದ್ದರು. ಒಟ್ಟಿನಲ್ಲಿ ಬಹಳ ಒಳ್ಳೆಯ ಗುರುಗಳಾಗಿದ್ದರು. ಇವರ ಜ್ಞಾನದ ಉಪಯೋಗವನ್ನು ಪಡೆದುಕೊಂಡವರು ಬೇಕಾದಷ್ಟು ಜನರಿದ್ದಾರೆ. ಇವರಿಗೆ ಸ್ವಲ್ಪ ನೃತ್ಯವೂ ಗೊತ್ತಿದ್ದುದರಿಂದ ಇತ್ತೀಚೆಗೆ ಮರಣ ಹೊಂದಿದ್ದ ಪದ್ಮ ವಿಭೂಷಣ ಕೆ. ವೆಂಕಟಲಕ್ಷಮ್ಮನವರಿಗೂ ಸಲಹೆಕೊಟ್ಟು ಪದ, ಜಾವಳಿ ಮುಂತಾದವುಗಳಿಗೆ ಸ್ವರಸಂಯೋಜಿಸುತ್ತಿದ್ದರು. ಸರಳ ಸ್ವಭಾವದವರು ಮತ್ತು ವಿದ್ಯಾಪಕ್ಷಪಾತಿಗಳು. ಇವರ ಮನೆಯಲ್ಲಿ ಇವರಿಂದಲೇ ಸಂಗೀತ ಪರಂಪರೆ ಆರಂಭವಾಯಿತೆಂದೆನಿಸುತ್ತದೆ. ಇವರ ಮಕ್ಕಳು ಮೊಮ್ಮಕ್ಕಳು ಎಲ್ಲರೂ ಹಾಡುತ್ತಾರೆ. ಇವರು ಸಹ ಕಲಾವಿದರು ವಿದ್ವಾಂಸರುಗಳ ಬಗ್ಗೆ ಅಪಾರ ಗೌರವನ್ನಿರಿಸಿಕೊಂಡಿದ್ದರು. ಪಕ್ಕವಾದ್ಯದವರನ್ನು ಚೆನ್ನಾಗಿ ಹುರಿದುಂಬಿಸಿ ಪ್ರೋತ್ಸಾಹ ನೀಡುತ್ತಿದ್ದರು. ಪ್ರತಿವರ್ಷವೂ ‘ಸರಸ್ವತಿ ಗಾನ ಕಲಾಮಂದಿರ’ದಲ್ಲಿ ಶ್ರೀ ಪುರಂದರ ಮತ್ತು ತ್ಯಾಗರಾಜರ ಉತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸುತ್ತಿದ್ದರು. ಈ ಉತ್ಸವ ೧೦ ಅಥವಾ ೧೩ ದಿವಸಗಳವರೆಗೂ ನಡೆಯುತ್ತಿತ್ತು. ಇದರಲ್ಲಿ ಮೈಸೂರಿನ ಸಮಸ್ತ ಸಂಗೀತ ವಿದ್ವಾಂಸರುಗಳೂ ಭಾಗವಹಿಸುತ್ತಿದ್ದರು. ಈ ಉತ್ಸವದಲ್ಲಿ ಮೇಲ್ಮಟ್ಟ, ಮಧ್ಯಮ, ಸಾಧಾರಣ ಇಂತಹ ಕಚೇರಿಗಳೆಲ್ಲಾ ನಡೆಯುತ್ತಿದ್ದವು. ಈ ಉತ್ಸವದಲ್ಲಿ ಪ್ರಖ್ಯಾತ ವಿದ್ವಾಂಸರು, ಗಾಯಕರು, ಗಾಯಕಿಯರು, ವೈಣಿಕರು ಎಲ್ಲರಿಗೂ ‘ಸಂಗೀತ ವಿದ್ಯಾವಾರಿಧಿ’ ಎಂಬ ಬಿರುದನ್ನಿತ್ತು. ಒಳ್ಳೆಯ ಭರ್ಜರಿ ಸರಿಗೆ ಶಾಲು, ಅಪ್ಪಟ ರೇಷ್ಮೆ ಶಲ್ಯ ಹೀಗೆ ಭಾರಿ ಭಾರಿಯಾಗಿ ಕೊಟ್ಟು ವಿದ್ವಾಂಸರನ್ನು ಗೌರವಿಸುತ್ತಿದ್ದರು. ಎಲ್ಲದರಲ್ಲೂ ಮನಸ್ಸು, ಕೈ ಎರಡೂ ಧಾರಾಳ. ಉತ್ಸವದ ಕಡೆಯ ದಿನ ತ್ಯಾಗರಾಜರ ವಿಚಾರವಾಗಿ ಒಂದು ಉಪನ್ಯಾಸವಿರುತ್ತಿತ್ತು. ಇವರಿಗೆ ಬಹಳ ಮಂದಿ ಸ್ನೇಹಿತರು. ಅದರಲ್ಲಿಲಯೂ ಬಹಳ ಆಪ್ತರಾಗಿದ್ದವರು ಇತ್ತೀಚೆಗೆ ನಿಧನರಾದ ವೇಣುವಾದನ ಪಟು ವಿದ್ವಾನ್‌ ವಿ.ದೇಶಿಕಾಚಾರ್ ಅವರೂ ಒಬ್ಬರು. ಅವರು ಹೇಳುವ ಪ್ರಕಾರ ‘ಶ್ರೀ ಮರಿಯಪ್ಪನವರ ಶಾರೀರ ಬಹಳ ಮೇಲ್ಮಟ್ಟದ್ದು. ನಾದ ತುಂಬಿದ ಕಂಠ, ಅಪರಿಮಿತವಾದ ಮನೋಧರ್ಮ. ಬಹಳ ಚೆನ್ನಾಗಿ ಹಾಡುತ್ತಿದ್ದರು. ನಾನೂ ಅವರೂ ಒಂದು ಸಲ ಮದ್ರಾಸಿನ ಆಕಾಶವಾಣಿಯ ಕಾರ್ಯಕ್ರಮಕ್ಕಾಗಿ ಹೋಗಿದ್ದೆವು. ನನ್ನದು ಮೊದಲನೆಯ ದಿನ, ಅವರದು ಮರುದಿನ. ಅವರ ಕಾರ್ಯಕ್ರಮ ಮುಗಿಸಿಕೊಂಡು ಇಬ್ಬರೂ ಜೊತೆಯಾಗಿ ರೈಲಿನಲ್ಲಿ ಲೋಕಾಭಿರಾಮವಾಗಿ ಮಾತನಾಡಿಕೊಂಡು ಬಂದೆವು. ಆ ಸವಿನೆನಪು ನನಗೆ ಈಗಲೂ ಸಂತೋಷಕೊಡುತ್ತಿದೆ. ಅವರು ಬಹಳ ಸೌಜನ್ಯ ಶೀಲರು. ಮಾತುಕತೆ ಎಲ್ಲಾ ಬಹಳ ಸರಳ ಪ್ರತಿವರ್ಷವೂ ನಡೆಸುವ ತ್ಯಾಗರಾಜ ಉತ್ಸವಕ್ಕೆ ನನ್ನನ್ನು ತಪ್ಪದೆ ಕರೆಯುತ್ತಿದ್ದರು. ನನ್ನ ಕಚೇರಿ ಅಲ್ಲಿ ಒಂದು ದಿವಸ ಇರುತ್ತಲೇ ಇತ್ತು. ಬಹಳ ಜನ ಆ ಉತ್ಸವಕ್ಕೆ ಸೇರುತ್ತಿದ್ದರು. ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ಆ ವೈಭವ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ” ಎಂದು.

ಮತ್ತೊಬ್ಬ ಪ್ರಿಯ ಸ್ನೇಹಿತರು ಹೇಳುತ್ತಾರೆ “ಅವರು ಬಹಳ ಧಾರಾಳಿಗಳು. ಕರ್ನಾಟಕದ ಹಲವಾರು ಕಡೆ ಕಚೇರಿಗಳನ್ನು ನಡೆಸಿದ್ದಾರೆ. ಎಲ್ಲಿ ಹೋದರೂ ಪಕ್ಕವಾದ್ಯದವರು, ನಮ್ಮಂತಹ ಆಪ್ತಮಿತ್ರುಗಳನ್ನು ಕರೆದುಕೊಂಡು ಹೋಗಿ ಕಚೇರಿ ನಡೆಸಿ ಅಲ್ಲಿನವರು ಕೊಟ್ಟ ಸಂಭಾವನೆಗಿಂತ ಹೆಚ್ಚಾಗಿ ತಮ್ಮ ಕೈಯಿಂದ ಖರ್ಚುಮಾಡಿ ನಮ್ಮನ್ನೆಲ್ಲಾ ಸಂತೋಷ ಪಡಿಸಿ ಕರೆದುಕೊಂಡು ಬರುತ್ತಿದ್ದರು. ಯಾವತ್ತೂ ಹಣದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಹೇಗೆ ಬರುತ್ತಿತ್ತೋ ಹಾಗೆಯೇ ಖರ್ಚು ಮಾಡುತ್ತಿದ್ದರು.”

ಶ್ರೀಮಾನ್‌ ಮರಿಯಪ್ಪನವರಿಗೆ ಸಂಗೀತ ಕಲೆಯಲ್ಲಿ ಎಷ್ಟು ಪ್ರೌಢಿಮೆಯಿದ್ದಿತೋ ಅಷ್ಟೇ ಖಚಿತವಾದ ಸಂಗೀತ ಶಾಸ್ತ್ರ ಜ್ಞಾನವನ್ನೂ ಪಡೆದಿದ್ದರು. ಇವರು ‘ಸೀನಿಯರ್ ಗ್ರೇಡ್’ನ ವಿದ್ಯಾರ್ಥಿಗಳಿಗಾಗಿ ಒಂದು ಅತ್ಯಮೂಲ್ಯವಾದ ಪುಸ್ತಕವನ್ನು ಬರೆದಿದ್ದಾರೆ. ಸಂಗೀತವನ್ನು ಕಲಿತು ಹಾಡುವವರು ಬಹಳ ಜನರಿದ್ದಾರೆ. ಆದರೆ ಆ ವಿಷಯದ ಬಗ್ಗೆ ಪುಸ್ತಕ ಬರೆಯಲು ಬಹಳ ಮಟ್ಟಿಗೆ ಪಾಂಡತ್ಯವಿರಬೇಕು. ಇವನ್ನೆಲ್ಲಾ ಸಾಧಿಸಿದವರು ಹಲವೇ ಜನರುಂಟು. ಅವರಲ್ಲಿ ವಿದ್ವಾಂಸರಾದ ಮರಿಯಪ್ಪನವರೂ ಒಬ್ಬರು. ೧೯೭೬ರಲ್ಲಿ ಇವರಿಗೆ ಗಾನಸುಧಾಕರ ಎಂಬ ಬಿರುದನ್ನಿತ್ತು ಗೌರವಿಸಲಾಯಿತು.

೧೯೮೦ರಲ್ಲಿ ಮೈಸೂರಿನ ‘ಕಲಾಭಿವರ್ಧಿನೀ’ ಸಭೆಯ ಆಶ್ರಯದಲ್ಲಿ ನಡೆದ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಗಾನಕಲಾ ರತ್ನ ಎಂಬ ಬಿರುದನ್ನು ಪಡೆದರು.

ಇವರು ಕೃತಿ ರಚನೆಗಳನ್ನೂ ಮಾಡುತ್ತಿದ್ದರು. ಸ್ವರಜತಿಗಳು, ವರ್ಣಗಳು, ಕೃತಿಗಳು, ಜಾವಳಿಗಳು, ಪದ ಮತ್ತು ತಿಲ್ಲಾನಗಳು ಮುಂತಾದ ನೂರಕ್ಕೂ ಮೇಲ್ಪಟ್ಟ ರಚನೆಗಳನ್ನು ಮಾಡಿದ್ದಾರೆ. ಇವರ ಅಂಕಿತ ‘ಬ್ರಹ್ಮಪುರಿ’ ಎಂದು. ಈ ರಚನೆಗಳು ಪ್ರಕಟವಾಗಿಲ್ಲ. ಅವರ ಶಿಷ್ಯಂದಿರ ಬಳಿ ಇರಬಹುದು. ಅವುಗಳನ್ನು ಸಂಗ್ರಹಿಸಿ ಸ್ವರಸಾಹಿತ್ಯದೊಂದಿಗೆ ಪ್ರಕಟಿಸಿದರೆ ಆ ಮಹಾವಿದ್ವಾಂಸರಿಗೆ ಗೌರವ ಕೊಟ್ಟಂತಾಗುತ್ತದೆ.

ಒಟ್ಟಿನಲ್ಲಿ ಇವರು ಸಂಗೀತಕಲೆಗಾಗಿ ಬಹಳ ಮಟ್ಟಿಗೆ ದುಡಿದಿದ್ದಾರೆ. ಬೇಕಾದಷ್ಟು ಮಂದಿ ಶಿಷ್ಯರನ್ನು ತಯಾರು ಮಾಡಿರುತ್ತಾಋಎ. ಸಜ್ಜನಿಕೆ ಹಾಗೂ ತೃಪ್ತಿಯ ಜೀವನ ನಡೆಸುತ್ತಿದ್ದರು. ಪದವಿಗಳಿಗೆ ಆಸೆ ಪಟ್ಟವರಲ್ಲ. ಅವರು ಸಂಗೀತದಿಂದ ಮುಖ್ಯವಾಗಿ ಆತ್ಮಾನಂದವನ್ನು ಪಡೆಯುತ್ತಿದ್ದರು. ರಾಗ, ತಾನ, ಪಲ್ಲವಿ ಮುಂತಾದುವನ್ನು ಬಹಳ ಚೆನ್ನಾಗಿ ಪ್ರಸ್ತುತ ಪಡಿಸುತ್ತಿದ್ದರು.

ಸಂಗೀತವನ್ನು ಹಲವಾರು ಜನ ಕಲಿಯುತ್ತಾರೆ, ಕಲಿತು ತಾವು ಹಾಡಿಕೊಳ್ಳುತ್ತಾರೆ. ಆದರೆ ತಾವು ಕಲಿತುದನ್ನು ಮತ್ತೊಬ್ಬರಿಗೆ ಹೇಳಿಕೊಟ್ಟು ಅವರಿಂದ ಹಾಡಿಸಿ ಸಂತೋಷಪಡುವುದಕ್ಕೆ ಬಹಳ ಮಟ್ಟಿಗೆ ಆ ಕಲೆಯ ಮೇಲೆ ಪ್ರೀತಿ ವಿಶ್ವಾಸವಿರಬೇಕು. ಹೇಳಿಕೊಡಲು ಬಹಳಷ್ಟು ತಾಳ್ಮೆಬೇಕು. ಮರಿಯಪ್ಪನವರು ರಚನೆಗಳನ್ನು ರಚಿಸಿ ಸಂಗೀತ ಗ್ರಂಥವನ್ನು ಬರೆದು ಮತ್ತು ಶಿಷ್ಯರಿಗೆ ಜ್ಞಾನ ಸಂಪತ್ತು ನೀಡಿ ಸಂಗೀತ ಸರಸ್ವತಿಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಕೆಲವರು ತಮ್ಮ ತಮ್ಮ ಮಕ್ಕಳಿಗಾಗಿ ಬೇಕಾದಷ್ಟು ಆಸ್ತಿ ಮಾಡಿ ಬಿಟ್ಟುಹೋಗುತ್ತಾಋಎ. ಅವರ ಜೀವಮಾನ ಪೂರ್ತಿ ಅದರಲ್ಲೇ ಕಳೆದು ಹೋಗುತ್ತದೆ. ಈ ಮಹಾ ವಿದ್ವಾಂಸರು ಅವರ ಮಕ್ಕಳು, ಮೊಮ್ಮಕ್ಕಳು, ಶಿಷ್ಯರು ಮತ್ತು ಅಭಿಮಾನಿಗಳು ಎಲ್ಲರಿಗೂ ಗಾನಾಮೃತಪಾನಮಾಡಿಸಿ ಸಂಗೀತದ ಮೂಲಕ ಅಮೂಲ್ಯವಾದ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ. ಇವರು ೧೯೮೬ರಲ್ಲಿ ವಿಧಿವಶರಾದರು.

ಇವರ ಪುತ್ರ ಚಿ. ಸದಾಶಿವ, ಅವರ ಪತ್ನಿ ಮಕ್ಕಳು ಎಲ್ಲರೂ ‘ಮೈಸೂರಿನಲ್ಲಿಯೇ ವಾಸವಾಗಿದ್ದಾರೆ. ಮರಿಯಪ್ಪನವರೂ ಮೊದಲಿಂದ ಕಡೆಯವರೆಗೂ ಮೈಸೂರಿನಲ್ಲಿಯೇ ನೆಲಸಿದ್ದರು. ಸಂಗೀತಕಲೆಗಾಗಿ ದುಡಿದ ಇವರೇ ಧನ್ಯರು. ಭಾರತಮಾತೆಯು ಇಂತಹ ಸತ್ಪುತ್ರರಿಂದಲೇ ತನ್ನ ಸುಸಂಸ್ಕೃತ ಪರಂಪರೆಯನ್ನು ಉಳಿಸಿಕೊಂಡು ಬಂದಿರುವಳೆಂದರೆ ತಪ್ಪಾಗಲಾರದು.