ಇಂಗ್ಲೀಷರು ಭಾರತವನ್ನು ಆಳುತ್ತಿದ್ದ ಕಾಲ. ಆಗಿನ ಮದರಾಸ್‌ಪ್ರಾಂತದ ವಿಧಾನಸಭೇಯಲ್ಲಿ ಯಾವುದೋ ಒಂದು ವಿಷಯವನ್ನು ಕುರಿತು ಸರಕಾರದವರಿಗೂ ಸತ್ಯಮೂರ್ತಿಯವರಿಗೂ ಬಿರುಸಾದ ವಾಗ್ವಾದ ನಡೆಯುತ್ತಿತ್ತು. ಸತ್ಯಮೂರ್ತಿ ಮಾಡಿದ ಆಕ್ಷೇಪಣೆಗಳಿಗೂ ಕೇಳಿದ ಪ್ರಶ್ನೆಗಳಿಗೂ ಉತ್ತರವನ್ನು ಕೊಡಲು ಸಾಧ್ಯವಾಗದೆ ಸರಕಾರದವರು ಕಷ್ಟಪಡುತ್ತಿದ್ದರು. ಆಗ ಸರಕಾರದ ಪ್ರತಿನಿಧಿ ಒಬ್ಬರು “ಸತ್ಯಮೂರ್ತಿ ಹೇಳುವುದನ್ನೆಲ್ಲಾ ನಂಬಬೇಡಿ. ಅವರು ಈಗ ಓಟು ಸಂಪಾದಿಸುವ ಕೆಲಸದಲ್ಲಿದ್ದಾರೆ” ಎಂದರು.

ಈ ಮಾತನ್ನು ಕೇಳಿದ ಸತ್ಯಮೂರ್ತಿ ಕೆಂಡವಾದರು. ಸಭೆಯ ಸದಸ್ಯರನ್ನು ನೋಡಿ “ಸನ್ಮಾನ್ಯ ಹಿರಿಯರೆ, ಆಳುವ ಪಕ್ಷವನ್ನು ಸೇರಿದವರು ಹೇಳುವ ಮಾತು ತುಂಬ ನಿಜ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು. ಆದ್ದರಿಂದ ನಾವು ಓಟು ಸಂಪಾದಿಸುತ್ತೇವೆ. ಆದರೆ ಆಳುವ ಪಕ್ಷದವರಂತೆ ವೈಸ್‌ರಾಯ್‌, ಗವರ್ನರ್‌ಮುಂತಾದವರ ಬಾಲ ಹಿಡಿಯುವವರು ನಾವಲ್ಲ” ಎಂದರು.

ಅವರ ಮಾತನ್ನು ಕೇಳಿ ವಿಧಾನಸಭೆಯೇ ಅದಿರುವಂತೆ ಚಪ್ಪಾಳೆಯ ಸದ್ದು ಮೊಳಗಿತು. ಆಳುವ ಪಕ್ಷದ ಬಿಳಿಯ ಜನ ನಾಚಿಕೆಯಿಂದ ತಲೆ ತಗ್ಗಿಸಿದರು.

ಒಂದೇ ದಾರಿ”

ಇನ್ನೊಂದು ಸಂದರ್ಭ, ಜೇಮ್ಸ್‌ಎಂಬ ಐರೋಪ್ಯ ಪ್ರತಿನಿಧಿ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ದ್ವೇಷಿಸುತ್ತಿದ್ದ. ಈ ಹೋರಾಟ ಬೆಳೆಯುತ್ತಿರುವುದನ್ನು ನೋಡಿ ಅವನಿಗೆ ಹೊಟ್ಟೆ ಉರಿ. ಈ ಹೋರಾಟ ಪ್ರಬಲವಾದ ದಂಗೆಯೆಂದೂ ಅದರ ಹುಟ್ಟಡಗಿಸಲು ಪ್ರಬಲವಾದ ಕ್ರಮ ಕೈಗೊಳ್ಳಬೇಕೆಂದೂ ಅವನ ವಾದ.

ಸರಕಾರವು ಸ್ವಾತಂತ್ರ್ಯ ಹೋರಾಟವನ್ನು ಅಡಗಿಸಲು ಒಂದು ಮಸೂದೆಯನ್ನು ಮದರಾಸ್‌ವಿಧಾನಸಭೆಯ ಮುಂದೆ ತಂದಿತು. ಸತ್ಯಮೂರ್ತಿ ಅದನ್ನು ತೀವ್ರವಾಗಿ ವಿರೋಧಿಸಿದರು.

ಆ ಮಸೂದೆಯನ್ನು ಸಭೆ ಒಪ್ಪುವಂತೆ ಮಾಡಲು ಮಾತನಾಡುತ್ತಾ ಜೇಮ್ಸ್‌. “ಭಾರತದ ಈ ಹೋರಾಟ ಭಯಂಕರವಾದ ಪರಿಣಾಮವುಳ್ಳದ್ದು. ಇಂಥಾದ್ದನ್ನು ಸಾಧಾರಣವಾದ ಶಾಸನಗಳಿಂದ ಅಡಗಿಸುವುದು ಸಾಧ್ಯವಿಲ್ಲ.

ಈ ಮಸೂದೆಯನ್ನು ನೀವು ವಿರೋಧಿಸುತ್ತೀರಲ್ಲಾ, ಈ ದಂಗೆಯನ್ನು ಅಡಗಿಸಲು ಬೇರೆ ಯವ ದಾರಿ ಇದೆ? ನೀವೇ ಹೇಳಿ” ಎಂದು ಸತ್ಯಮೂರ್ತಿಯನ್ನು ನೋಡುತ್ತ ಕೇಳಿದ.

“ಈ ಸ್ವಾತಂತ್ರ್ಯದ ಹೋರಾಟವನ್ನು ಅಡಗಿಸಲು ಒಂದೇ ಒಂದು ದಾರಿ ಇದೆ. ಅದು ಏನೆಂದು ಗೊತ್ತೆ? ಭಾರತಕ್ಕೆ ಸ್ವಾತಂತ್ರ್ಯಕೊಟ್ಟುಬಿಡುವುದು” ಎಂದು ಸತ್ಯಮೂರ್ತಿ ಉತ್ತರಕೊಟ್ಟರು.

“ಸ್ವಾತಂತ್ರ್ಯವನ್ನು ಕುರಿತು ನಮಗೆ ಬೇರೆ ಯಾರು ಹೇಳಿಕೊಡಬೇಕಾಗಿಲ್ಲ. ಪ್ರಪಂಚದಲ್ಲೇ ಸ್ವಾತಂತ್ರ್ಯ ಪ್ರೇಮವುಳ್ಳ ದೇಶವೆಂದರೆ ಅದು ಇಂಗ್ಲೆಂಡು” ಎಂದ ಜೇಮ್ಸ್‌.

ತಕ್ಷಣ ಸತ್ಯಮೂರ್ತಿ, “ನಮಗೆ ಗೊತ್ತಿದೆ, ಈಜಿಪ್ಟನ್ನೂ, ಐರ್ಲೆಂಡನ್ನೂ, ಅಮೆರಿಕವನ್ನೂ ಕೇಳಿದರೆ ಇಂಗ್ಲೆಂಡಿನ ಸ್ವಾತಂತ್ರ್ಯ ಪ್ರೇಮವನ್ನು ಕುರಿತು ಬಹು ಚೆನ್ನಾಗಿ ವಿವರಸುವರಲ್ಲ!”ಎಂದರು.

(ಇಂಗ್ಲೆಂಡ್‌ದೇಶವು ಈಜಿಪ್ಟ್‌, ಐರ್ಲೆಂಡ್‌, ಅಮೆರಿಕ ಮುಂತಾದ ದೇಶಗಳನ್ನು ಒಂದು ಕಾಲದಲ್ಲಿ ಆಕ್ರಮಸಿಕೊಂಡು ಆಳುತ್ತಿತ್ತು).

ಸತ್ಯಮೂರ್ತಿಯವರ ಮಾತನ್ನು ಕೇಳಿ ಜೇಮ್ಸ್‌ಗೆ ಕೋಪ ಉಕ್ಕಿಬಂತು. “ಓಹೋ ! ಹಾಗೋ! ನೀವು ಇಂಗ್ಲೆಂಡಿನ ಆಳ್ವಿಕೆಯಲ್ಲಿ ಇರಲು ಇಷ್ಟಪಡುವುದಿಲ್ಲವೆ? ಹಾಗಾದರೆ ಯಾರ ಕೈಕೆಳಗೆ ಇರುತ್ತೀರಿ? ಜರ್ಮನಿಯೋ ಅಥವಾ ಇಟಲಿಯೋ? ಎಂದ. ಸತ್ಯಮೂರ್ತಿ ಕಡಿ ಕಿಡಿಯಾದರು. ಜೇಮ್ಸ್‌ನನ್ನು ನೋಡಿ “ನಾವು ಸ್ವಾತಂತ್ರ್ಯ ರಾಗಿರಲು ಇಷ್ಟಪಡುತ್ತೇವೆ. ಜರ್ಮನಿಯ ಆಳ್ವಿಕೆಯೂ ಬೇಕಗಿಲ್ಲ, ಇಟಲಿಯ ಆಳ್ವಿಕೆಯೂ ನಮಗೆ ಬೇಡ. ಮೊದಲು ನಿಮ್ಮನ್ನು ಒದ್ದು ಹೊರಗೆ ಹಾಕುತ್ತೇವೆ.” ಎಂದು ಘರ್ಜಿಸಿದರು.

ಕಷ್ಟದ ಬಾಲ್ಯ

ತಮಿಳುನಾಡಿನ ಪುದುಕೋಟೆ ಎಂಬ ಪ್ರಾಂತದಲ್ಲಿ ತಿರುಮಯಂ ಎಂಬ ಊರಿನಲ್ಲಿ ಒಬ್ಬ ವಕೀಲರಿದ್ದರು. ಅವರ ಹೆಸರು ಸುಂದರ ಶಾಸ್ತ್ರಿ. ಅವರ ಮೊದಲ ಮಗನೇ ಸತ್ಯಮೂರ್ತಿ. ಅವರ ತಾಯಿಯ ಹೆಸರು ಸುಬ್ಬಲಕ್ಷ್ಮಿಯಮ್ಮ. ೧೮೮೭ರ ಆಗಸ್ಟ್‌೧೯ರಂದು ಸತ್ಯಮೂರ್ತಿಯವರು ಹುಟ್ಟಿದರು.

ಸತ್ಯಮೂರ್ತಿಗೆ ಎಂಟು ಒಂಬತ್ತು ವಯಸ್ಸಾಗಿತ್ತು. ಅವರ ತಂದೆ ತಮ್ಮ ೪೨ನೆಯ ನಿಧನರಾದರು. ತಾಯಿ ಬಹು ಧೈರ್ಯದಿಂದಲೂ ಸಾಮರ್ಥ್ಯದಿಂದಲೂ ಕುಟುಂಬವನ್ನು ನಡೆಸಿಕೊಂಡು ಬಂದರು. ಕಷ್ಟಗಳ ನಡುವೆಯೂ ಮಗನಿಗೆ ವಿದ್ಯಾಭ್ಯಾಸ ಮಾಡಿಸಿದರು.

ಮೆಟ್ರಿಕ್‌ಪರೀಕ್ಷೆಯಲ್ಲಿ ಪಾಸಾದ ಮಗನನ್ನು, ತಾಯಿ ತಮ್ಮ ಆಭರಣಗಳನ್ನು ಮಾರಿ, ಕಾಲೇಜಿಗೆ ಸೇರಿಸಿದರು. ಓದಿನಲ್ಲಿ ಸತ್ಯಮೂರ್ತಿ ಯಾವಾಗಲೂ ಮುಂದಿರುತ್ತಿದ್ದರು. ಹಲವು ಬಹುಮಾನಗಳನ್ನು ಪದಕಗಳನ್ನೂ ಪಡೆದರು. ಚರ್ಚಾ ಸ್ಪರ್ಧೆಗಳಲ್ಲಿ ಪಾಲುಗೊಂಡು ಅನೇಕ ಬಹುಮಾನಗಳನ್ನು ಪಡೆದು ಉಪಾಧ್ಯಾಯರ ಹೊಗಳಿಕೆಗೆ ಪಾತ್ರರಾದರು.

ಕಾಲೇಜಿನಲ್ಲಿ

ಸತ್ಯಮೂರ್ತಿ ಇಂಟರ್‌ಮೀಡಿಯೆಟ್‌ಪರೀಕ್ಷೆಯಲ್ಲಿ ಪಾಸಾದರು ಮದರಾಸಿಗೆ ಹೋಗಿ ಬಿ.ಎ. ಓದಬೇಕೆಂದು ಅವರ ಆಸೆ. ಆದರೆ ಮನೆಯಲ್ಲಿ ಬಡತನ. ಆ ಕಷ್ಟದಲ್ಲೂ ಧೈರ್ಯದಿಂದ ಅವರ ತಾಯಿ ಅವರನ್ನು ಓದಲು ಕಳುಹಿಸಿದರು.

ಮದರಾಸಿನ ಕ್ರಿಶ್ಚಿಯನ್‌ಕಾಲೇಜಿನಲ್ಲಿ ಬಿ.ಎ.ಓದುತ್ತಿದ್ದಾಗ ಸತ್ಯಮೂರ್ತಿ ಮಾತುಗಾರಿಕೆಯನ್ನು ಒಂದು ಕಲೆಯನ್ನಾಗಿ ಬೆಳೆಸಿಕೊಂಡು ಎಲ್ಲರ ಪ್ರೀತಿಗೂ ಪ್ರಶಂಸೆಗೂ ಪಾತ್ರರಾದರು. ಇಲ್ಲಿ ಓದುತ್ತಿದ್ದಾಗಲೇ ಅವರ ಮನಸ್ಸು ಭಾರತದ ಸ್ವಾತಂತ್ರ್ಯ ಹೋರಾಟದ ಕಡೆಗೆ ತಿರುಗಿತು.

ಬಂಗಾಳ ಪ್ರಾಂತವನ್ನು ಎರಡು ಭಾಗವಾಗಿ ಮಾಡಿದ ಕಾಲ ಅದು. ಬಂಗಾಳವನ್ನು ಒಡೆದುದನ್ನು ವಿರೋಧಿಸಿ ಜನ ದೊಡ್ಡ ಚಳುವಳಿಯನ್ನು ಪ್ರಾರಂಭಿಸಿದರು. ದೇಶವನ್ನು ಆಳುತ್ತಿದ್ದ ಬ್ರಿಟಿಷ್‌ಸರ್ಕಾರ ಹಲವರು ನಾಯಕರನ್ನು ದೇಶದಿಂದ ಹೊರಹಾಕಿತು. ಆ ಅನ್ಯಾಯವನ್ನು ಎದುರಿಸಿ ದೇಶದಲ್ಲೆಲ್ಲ ಹೋರಾಟ ನಡೆಯುತ್ತಿತ್ತು. ಅಸಂಖ್ಯಾತ ವಿದ್ಯಾರ್ಥಿಗಳು ಹೋರಾಟದಲ್ಲಿ ಧುಮುಕಿದರು. ಆಗ ಬಿಪಿನ್‌ಚಂದ್ರಪಾಲ್‌ಎಂಬ ದೇಶಭಕ್ತರು ಮದರಾಸಿಗೆ ಬಂದರು. ಅವರ ಭಾಷಣವನ್ನು ಕೇಳಲು ಸತ್ಯಮೂರ್ತಿ ಮತ್ತು ಅವರ ಸ್ನೇಹಿತರು ಹೋಗಿದ್ದರು. ಆ ಭಾಷಣ ಅವರ ಮೇಲೆ ತೀವ್ರ ಪರಿಣಾಮ ಬೀರಿತು.

ದೇಶ ಬಿಡುಗಡೆ ಹೊಂದಬೇಕೆಂಬ ಉತ್ಸಾಹಗೊಂಡ ಅವರ ಮನಸ್ಸು ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡಿತು. ಆದರೆ ಓದಿನಲ್ಲಿ ಅವರ ಗಮನ ಸ್ವಲ್ಪವೂ ಕುಗ್ಗಲಿಲ್ಲ.

ಸತ್ಯಮೂರ್ತಿ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರ ತಾಯಿಗೆ ಸಂತೋಷವಾಯಿತು. ಸತ್ಯಮೂರ್ತಿಗಳಿಗೆ ತಮ್ಮ ಕಾಲೇಜಿನಲ್ಲಿಯೇ ಟ್ಯೂಟರ್ ಕೆಲಸವೂ ಸಿಕ್ಕಿತು. ಐವತ್ತೈದು ರೂಪಾಯಿ ಸಂಬಳ. ಕೆಲಸ ಸಿಕ್ಕಿದ ಕೂಡಲೆ ತಮ್ಮ ತಾಯಿಯವರನ್ನು ಮದರಾಸಿಗೆ ಬರಮಾಡಿಕೊಂಡರು. ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡರು.

ವಕೀಲರು

ಅವರಿಗೆ ನ್ಯಾಯಶಾಸ್ತ್ರವನ್ನು ಕಲಿಯಬೇಕೆಂಬ ತೀವ್ರವಾದ ಆಸೆಯಿತ್ತು. ಆದರೆ ಅದಕ್ಕಾಗಿ ಲಾ ಕಾಲೇಜಿನಲ್ಲಿ ಎರಡು ವರ್ಷ ಓದಬೇಕು. ಹಾಗೆ ಓದಲು ಸೇರಿದರೆ ಕೆಲಸ ಮಾಡಲು ಸಾಧ್ಯವಾಗದು, ಸಂಬಳವೂ ಸಿಕ್ಕದು ಹಾಗಿದ್ದರೂ ಲಾ ಕಾಲೇಜಿಗೆ ಸೇರಿದರು. ವೃತ್ತ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಅದರಿಂದ ಬರುವ ಸ್ವಲ್ಪ ವರಮಾನದಿಂದ ಕಾಲೇಜಿನಲ್ಲಿ ಓದಿಕೊಂಡು ಕುಟುಂಬ ಪೋಷಣೆ ಮಾಡಿಕೊಂಡು ಬಂದರು. ಹಲವಾರು ತೊಂದರೆಗಳ ನಡುವೆಯೂ ಲಾ ಪರೀಕ್ಷೆಯಲ್ಲಿ ಪಾಸಾದರು.

ಬಿ.ಎಲ್‌. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ವಕೀಲಿ ವೃತ್ತಿ ನಡೆಸಲು ಒಂದೆರಡು ವರ್ಷಗಳು ಹಿರಿಯ ವಕೀಲರಲ್ಲಿ ಕೆಲಸವನ್ನು ಕಲಿಯಬೇಕು. ಸತ್ಯಮೂರ್ತಿ  ಕೆಲಸ ಕಲಿಯಲು ಸೇರಿದ ಇಬ್ಬರು ಹಿರಿಯರಲ್ಲಿ ಒಬ್ಬರು ದೇಶಭಕ್ತರಾದ ಶ್ರೀನಿವಾಸ ಅಯ್ಯಂಗಾರ್ಯರು. ಆದ್ದರಿಂದ ಅವರ ದೇಶಪ್ರೇಮ ಇನ್ನೂ ಬೆಳೆಯಿತು. ತಮ್ಮ ವೃತ್ತಿಯಲ್ಲಿ ಆಸೆ ಕಡಿಮೆಯಾಯಿತು. ರಾಜಕೀಯದಲ್ಲಿ ಹುರುಪು ಹೆಚ್ಚಿತು. ದೇಶದ ಬಿಡುಗಡೆಯೇ ಅವರ ಕನಸಾಯಿತು. ವಕೀಲಿ ವೃತ್ತಿಯಿಂದ ಅವರು ಹೇರಳವಾಗಿ ಹಣವನ್ನು ಸಂಪಾದಿಸಬಹುದಾಗಿತ್ತು. ಆದರೆ ಹಗಲಿರುಳೂ ಸ್ವಾತಂತ್ರ್ಯ ದಾಹವೇ ಅವರನ್ನು ಆವರಿಸಿತು.

ಅವರಿಗೆ ಮದುವೆ ಆಯಿತು. ಹೆಂಡಿತಿಯ ಹೆಸರು ಬಾಲಸುಂದರಮ್ಮಾಳ್‌. ಅವರು ಪತಿಯ ಎಲ್ಲ ಕಾರ್ಯಗಳಲ್ಲೂ ನೆರವಾದರು. ದೇಶದ ಹೋರಾಟದಲ್ಲಿ ಒಂದಾಗಿ ಹೋಗಿದ್ದ ಸತ್ಯಮೂರ್ತಿಯವರಿಗೆ ಕುಟುಂಬದ ಅಗತ್ಯಗಳಿಗೆ ಗಮನ ಕೊಡುವುದು ಎಷ್ಟೋ ಬಾರಿ ಸಾಧ್ಯವಾಗುತ್ತಿರಲಿಲ್ಲ. ಆದರೂ ಅವರ ಹೆಂಡತಿ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದರು.

ಕಾಂಚೀಪುರದ ಕಾಂಗ್ರೆಸ್‌ಅಧಿವೇಶನ್‌

೧೯೧೮ರಲ್ಲಿ ಕಾಂಚೀಪುರದಲ್ಲಿ ಕಾಂಗ್ರೆಸ್‌ಪಕ್ಷದ ಪ್ರಾಂತ ಸಮ್ಮೇಳನ ನಡೆಯಿತು. ಸರೋಜಿದೇವಿಯವರು ಆ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಾಜಜಿಯವರೂ ಸತ್ಯಮೂರ್ತಿಯವರೂ ಸಮ್ಮೇಳನಕ್ಕೆ ಹೋಗಿದ್ದರು.

ಆಗ ಪ್ರಪಂಚದ ಮೊದಲನೆಯ ಮಹಾಯುದ್ಧ ನಡೆಯುತ್ತಿತ್ತು. ಸಮ್ಮೇಳನದಲ್ಲಿ ಆನಿ ಬೆಸೆಂಟ್‌ಅವರು ಒಂದು ಸಲಹೆಯನ್ನು ಮಂಡಿಸಿದರು.

“ಬ್ರಿಟಿಷರು ಯುದ್ಧದ ಆಪತ್ತು ಸ್ಥಿತಿಯಲ್ಲಿ ಸಿಕ್ಕಿಕೋಂಡು ಪರಿತಪಿಸುತ್ತಿದ್ದಾರೆ. ಅವರೊಡನೆ ಯಾವ ವಿಧವಾದ ಮಾತುಕತೆಯನ್ನೂ ನಡೆಸದೆ ಯಾವ ವಿಧವಾದ ಪ್ರತಿಫಲವನ್ನು ಎದುರು ನೋಡದೆ ಯುದ್ಧದಲ್ಲಿ ಸಹಾಯ ಮಾಡಬೇಕು.”

ಇ ಗೊತ್ತುವಳಿ ಹಲವು ದೇಶೀಯ ವಾದಿಗಳಿಗೆ ಹಿಡಿಸಲಿಲ್ಲ. ಅವರಲ್ಲಿ ರಾಜಾಜಿ ಮತ್ತು ಸತ್ಯಮೂರ್ತಿ ಪ್ರಮುಖರು. ಇವರು ಆನಿಬೆಸೆಂಟ್‌ಅವರ ಗೊತ್ತುವಳಿಗೆ ಒಂದು ತಿದ್ದುಪಡಿಯನ್ನು ತಂದರು.

“ನಾವು ಸ್ವತಂತ್ರರಾಗಲು ಆಂಗ್ಲರು ಒಪ್ಪಿದರೆ ನಾವು ಅವರಿಗೆ ಯುದ್ಧದಲ್ಲಿ ಸಹಾಯ ಮಾಡಬಹುದು.”

ತಿದ್ದುಪಡಿಯನ್ನು ಸಮರ್ಥಿಸಿ ಸತ್ಯಮೂರ್ತಿ ಬಹು ಸೊಗಸಾಗಿ ಮತನಾಡಿದರು. ಅವರು ಆಳವಾದ ಹಾಗೂ ತರ್ಕಸಮ್ಮತವಾದ ತಮ್ಮ ವಿಚಾರವನ್ನು ಸಭೆಯ ಮುಂದಿಟ್ಟ ವಿಧಾನ ಎಂತಹ ಸಂದೇಹಿಗಳನ್ನೂ ಚಿಂತಿಸುವಂತೆ ಮಾಡಿತು.

ಅವರಾದ ಮೇಲೆ ರಾಜಾಜಿಯವರು ಮಾತನಾಡಿದರು. ಆ ಮೇಲೆ ಆನಿ ಬೆಸೆಂಟ್‌ಅವರ ಮಸೂದೆ ಸಭೆಯ ತೀರ್ಮಾನಕ್ಕೆ ಬಂದಿತು. ಸತ್ಯಮೂರ್ತಿಯವರ ತಿದ್ದುಪಡಿ ಸ್ವೀಕೃತವಾಗಿ, ಆನಿಬೆಸೆಂಟರ ಗೊತ್ತುವಳಿ ಬಿದ್ದುಹೋಯಿತು.

ಈ ಅವಧಿಯಲ್ಲಿ ಗಾಂಧೀಜಿಯವರು ರಾಜಕೀಯಕ್ಕೆ ಕಾಲಿಟ್ಟರು. ಸತ್ಯಮೂರ್ತಿಯವರನ್ನು ಗಾಂಧೀಜಿಯವರ ಉದ್ದೇಶಗಳು ಆಕರ್ಷಿಸಿದವು.

ಚುನಾವಣೆಗಳ ಕಣ

ಆ ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿ ಎರಡು ಪಕ್ಷಗಳು ಇದ್ದವು. ಕಾಂಗ್ರೆಸ್‌ಚುನಾವಣೆಗಳಲ್ಲಿ ಗೆದ್ದು ಆಡಳಿತವನ್ನು ವಹಿಸಿಕೊಂಡು ಜನಸೇವೆ ಮಾಡಬೇಕೆಂಬುದು ಒಂದು ಪಕ್ಷದವರ ವಾದ. ಚುನಾವಣೆಯಲ್ಲಿ ಸೇರಬೇಕು ಎಂಬ ಅಭಿಪ್ರಾಯವುಳ್ಳವರು ಸತ್ಯಮೂರ್ತಿ.

“ಕೂಡಲೇ ಕೂಡದು, ಹೋರಾಟವನ್ನು ನಡೆಸಿ ದೇಶವನ್ನು ಸ್ವತಂತ್ರವನ್ನಾಗಿ ಮಾಡಿದ ಮೇಲೆಯೇ ಚುನಾವಣೆಗಳನ್ನು ನಡೆಸಿ, ಜಯಗಳಿಸಿ ಆಡಳಿತವನ್ನು ನಡೆಸಬೇಕು” ಎಂಬುದು ಇನ್ನೊಂದು ಪಂಗಡದವರ ವಾದ.

ಈ ಎರಡು ಗುಂಪುಗಳಿಗೂ ಘರ್ಷಣೆಯಾಗಿ ಪಕ್ಷ ಎರಡಾಗಿ ಒಡೆಯಿತು. ಚುನಾವಣೆಯಲ್ಲಿ ಸೇರ ಬಯಸಿದವರು “ಸ್ವರಾಜ್ಯ ಪಕ್ಷ” ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು. ಸತ್ಯಮೂರ್ತಿ ಅದಕ್ಕೆ ಸೇರಿದರು. ಸತ್ಯಮೂರ್ತಿ ವಿಧಾನಸಭೆಯ ಚುನಾವಣೆಗೆ ನಿಂತು ಅಮೋಘವಾದ ಜಯ ಪಡೆದರು. ಆದರೆ ವಿಧಾನಸಭೆಯಲ್ಲಿ ಜಸ್ಟಿಸ್‌ಪಕ್ಷದ ಸದಸ್ಯರೇ ಹೆಚ್ಚಾಗಿದ್ದುದರಿಂದ ಆ ಪಕ್ಷ ಆಡಳಿತ ಪಕ್ಷವಾಯಿತು. ಸ್ವರಾಜ್ಯ ಪಕ್ಷ ವಿರೋಧ ಪಕ್ಷವಾಯಿತು. ಸತ್ಯಮೂರ್ತಿ ತಮ್ಮ ವಾಗ್ಮಿತೆಯಿಂದ ಆಡಳಿತ ಪಕ್ಷವನ್ನು ಅನೇಕ ಬಾರಿ ಇಕ್ಕಟ್ಟಿಗೆ ಸಿಕ್ಕಿಸುತ್ತಿದರು. ಆದರೂ ಅಡಳಿತ ಪಕ್ಷದವರು ಇವರನ್ನು ಬಹು ಗೌರವದಿಂದ ಕಾಣುತ್ತಿದ್ದರು.

ಆ ಸಮಯದಲ್ಲಿಯೇ ಪುರಸಭೆಗಳ ಚುನಾವಣೆಗಳು ನಡೆದುವು. ಕಾಂಗ್ರೆಸ್ಸಿನ ಎರಡು ಭಾಗಗಳೂ ಒಂದಾದುವು. ತಮಿಳುನಾಡಿನಲ್ಲಿ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ  ಸತ್ಯಮೂರ್ತಿಯವರಿಗೆ ಬಂತು. ಆಗ ಅವರ ಸಾಮರ್ಥ್ಯ ಬೆಳಕಿಗೆ ಬಂದು “ಚುನಾವಣಾ ಪ್ರಭು” ಎಂಬ ಖ್ಯಾತರಾದರು. ಅನಂತರ ಅವರನ್ನು ಕೇಂದ್ರ ಶಾಸನ ಸಭೆಯ ಚುನಾವಣೆಗೆ ಕಾಂಗ್ರೆಸ್‌ನಿಲ್ಲಿಸಿತು. ಅವರಿಗೆ ವಿರೋಧವಾಗಿ ನಿಂತವರು ಸರ್.ಎ. ರಾಮಸ್ವಾಮಿ ಮೊದಲಿಯಾರ್. ಅವರು ವಿದ್ವಾಂಸರು ಮತ್ತು ಹಣವಂತರು. ಆದರೂ ಸತ್ಯಮೂರ್ತಿ  ಚುನಾವಣೆಯಲ್ಲಿ ಗೆದ್ದರು.

ಕೇಂದ್ರ ಶಾಸನ ಸಭೆಯಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಕರೆದು ವಿರೋಧಿಗಳನ್ನು ಪೀಡಿಸುವುದರಲ್ಲಿ ಸತ್ಯಮೂರ್ತಿ ನಿಪುಣರು. ಪುನಃ ಪುನಃ ಆಕ್ಷೇಪಣೆಗಳನ್ನೂ, ಪ್ರಶ್ನೆಗಳನ್ನೂ ಪ್ರಶ್ನೆಗಳಿಗೆ ಉಪ ಪ್ರಶ್ನೆಗಳನ್ನೂ (ಸಪ್ಲಿಮೆಂಟರಿಸ್) ಎತ್ತುವುದರಲ್ಲಿ ಸಮಾನವಿಲ್ಲದವರು. ಆದ್ದರಿಂದ ಅವರಿಗೆ “ಸಪ್ಲಿಮೂರ್ತಿ” ಎಂದೇ ಹೆಸರಿಟ್ಟುಬಿಟ್ಟಿದ್ದರು.

೧೯೩೯ ರಲ್ಲಿ ಅವರು ಮದರಾಸ್‌ಪಟ್ಟಣದ ಮೇಯರಾಗಿ ಚುನಾಯಿಸಲ್ಪಟ್ರು. ಅವರ ಕಾಲದಲ್ಲಿ ಆ ಪಟ್ಟಣ ಏಳಿಗೆಯನ್ನೂ ಪ್ರಸಿದ್ಧಿಯನ್ನೂ ಪಡೆಯಿತು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅವರು ಪೂಂಡಿ ಎಂಬ ಊರಿನ ಹತ್ತಿರ ಹರಿಯುವ ಕುಚಸ್ಥಲೆ ಎಂಬ ನದಿಗೆ ಆಣೆಕಟ್ಟು ಕಟ್ಟುವ ಯೋಚನೆ ಮಾಡಿದರು. ಆದರೆ ನಗರ ಸಭೆಯಲ್ಲಿ ಅದಕ್ಕೆ ಹಣವಿಲ್ಲ. ಆದ್ದರಿಂದ ಸರಕಾರದ ಸಹಾಯವನ್ನು ಕೋರಿದರು. ಸತ್ಯಮೂರ್ತಿಯವರು ನೀಡಿದ ವಿವರಣೆಯಿಂದ ಸರಕಾರ ತೃಪ್ತಿಗೊಂಡು ಹಣ ಸಹಾಯ ಮಾಡಿತು. ಈಗ ಪೂಂಡಿ ಜಲಾಶಯ “ಸತ್ಯ ಮೂರ್ತಿ ಸಾಗರ” ಎಂಬ ಹೆಸರು ಪಡೆದು ಮದರಾಸಿನ ನೀರಿನ ದಾಹವನ್ನು ಪರಿಹರಿಸುತ್ತಿದೆ.

ಇಂಗ್ಲೆಂಡಿಗೆ

೧೯೧೯ರಲ್ಲಿ ಕಾಂಗ್ರೆಸ್‌ಪಕ್ಷ ಸತ್ಯಮೂರ್ತಿಯವರನ್ನು ಇಂಗ್ಲೆಂಡಿಗೆ ಕಳುಹಿಸಿತು.

ನಮ್ಮ ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟವನ್ನು ಅಡಗಿಸಲು ಆಂಗ್ಲ ಸರಕಾರ ರೌಲತ್‌ಶಾಸನ ಎಂಬ ಒಂದು ಮಸೂದೆಯನ್ನು ತಂದಿತು. ಅದರಂತೆ ಯಾರನ್ನು ಬೇಕಾದರೂ ಯಾವಾಗ ಬೇಕಾದರೂ ಬಂಧಿಸಬಹುದಾಗಿತ್ತು. ಯಾವ ವಿಚಾರಣೆಯನ್ನೂ ನಡೆಸದೆ ಸೆರೆಮನೆಗೆ ತಳ್ಳಬಹುದಾಗಿತ್ತು.

ಈ ಭಯಂಕರವಾದ ಶಾಸವನ್ನು ಪ್ರತಿಭಟಿಸಲು ಗಾಂಧೀಜಿಯವರು ಶಾಂತಿಯುತವಾದ ಹೋರಾಟವನ್ನು ಪ್ರಾರಂಭಿಸಿದರು. ಪಂಜಾಬಿನಲ್ಲಿ ಜಲಿಯನ್‌ವಾಲಬಾಗ್‌ಎಂಬ ಸ್ಥಳದಲ್ಲಿ ಒಂದು ಸಾರ್ವಜನಿಕ ಸಭೆ ನಡೆಯಿತು. ಸಾವಿರಾರು ಜನರು ಸೇರಿದ್ದ ಅ ಸಭೆ ಶಾಂತಿಯುತವಾಗಿ ನಡೆಯುತ್ತಿತ್ತು.

ಜನರಲ್‌ಡಯರ್ ಎಂಬ ಒಬ ಆಂಗ್ಲ ದಳಪತಿ, ಕ್ರೂರ ಮನಸ್ಸುಳ್ಳವನು, ಸ್ವಾತಂತ್ರ್ಯ ಹೋರಾಟದ ವಿರೋಧಿ. ಈತ ಸಭೆಯಲ್ಲಿದ್ದ ಜನಗಳ ಮೇಲೆ ಗುಂಡು ಹಾರಿಸುವಂತೆ ಸೈನ್ಯಕ್ಕೆ ಆಜ್ಞೆ ಮಾಡಿದನು. ಕಾಗೆ ಗುಬ್ಬಿಗಳನ್ನು ಹೊಡೆದು ಹಾಕುವಂತೆ ಅಲ್ಲಿದ್ದ ಜನರ ಮೇಲೆ, ಆ ಸೈನಿಕರು ಗುಂಡು ಹಾರಿಸಿದರು. ಸಾವಿರಾರು ಜನ ಸತ್ತರು. ಈ “ಪಂಜಾಬಿನ ಕಗ್ಗೊಲೆ”ಯ ಸುದ್ದಿಯನ್ನು ಕೇಳಿ ದೇಶವೇ ನಡುಗಿತು. ಎಲ್ಲೆಲ್ಲೂ ಕುದಿತ. ಈ ಭಯಂಕರ ಘಟೆನಯನ್ನು ಕುರಿತು ನ್ಯಾಯ ವಿಚಾರಣೆ ನಡೆಸಬೇಕೆಂದು ಕೋರಿ ದೇಶದಲ್ಲೆಲ್ಲಾ ಚಳುವಳಿ ನಡೆಯಿತು.

ಆಂಗ್ಲ ಸರಕಾರ ವಿಚಾರಣೆಗೆ ಒಪ್ಪಿತು. ಪಂಜಾಬಿನ ಕಗ್ಗೊಲೆಯನ್ನು ಕುರಿತು ವಿಚಾರಣೆಯನ್ನು ನಡೆಸಲು ಇಂಗ್ಲೆಂಡಿನಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಅದರ ಮುಂದೆ ಸಾಕ್ಷಿ ಹೇಳಲು ಕಾಂಗ್ರೆಸ್‌ಪಕ್ಷ ಒಂದು ಸಮಿತಿಯನ್ನು ಕಳುಹಿಸಿತು. ಆ ಸಮಿತಿಯ ನಾಯಕತ್ವವನ್ನು ಸತ್ಯಮೂರ್ತಿ ವಹಿಸಿದರು. ಆಗ ಅವರ ವಯಸ್ಸು ಮೂವತ್ತೊಂದು ಎಂದರೆ ಅವರ ಸಾಮರ್ಥ್ಯ, ಅವರಲ್ಲಿ ನಮ್ಮ ದೇಶನಾಯಕರಿಗಿದ್ದ ನಂಬಿಕೆ ಮತ್ತು ವಿಶ್ವಾಸ ಮನವರಿಕೆಯಾಗುತ್ತದೆ.

ಸಾಕ್ಷ್ಯವನ್ನು ಹೇಳಲು ಹೋದ ಸತ್ಯಮೂರ್ತಿ ಇಂಗ್ಲೆಂಡಿನಲ್ಲಿ ಇದ್ದ ಕಾಲ ಬಹು ಸ್ವಲ್ಪವೇ. ಆ ಸ್ವಲ್ಪ ಕಾಲದಲ್ಲೇ ಅವರು ಇಂಗ್ಲೆಂಡ್‌, ಸ್ಕಾಟ್ಲೆಂಡ್‌, ಐರ್ಲೆಂಡ್‌ಬಾಗಗಳಲ್ಲಿ ಸುತ್ತಾಡಿ ನಮ್ಮ ಸ್ವಾತಂತ್ರ್ಯ ಧ್ಯೇಯಗಳನ್ನು ಬಹು ಚೆನ್ನಾಗಿ ವಿವರಿಸಿ ಅಲ್ಲಿನ ಜನಗಳಿಗೆ ತಿಳಿಸಿದರು.

ಒಂದು ಸಲ ಅವರು ಒಂದು ಸಭೆಯಲ್ಲಿ ಮಾತನಾಡುತ್ತಿದ್ದರು. ಅನ್ಯ ದೇಶಿಯರಾದ ಆಂಗ್ಲರು ಸೈನ್ಯ ಬಲದಿಂದ ಭಾರತ ದೇಶವನ್ನು ಆಕ್ರಮಸಿಕೊಂಡು ಅದನ್ನು ಆಳುತ್ತಿರುವುದು ಅನೀತಿ, ಭಾರತದ ಜನವೇ ಭಾರವನ್ನು ಆಳಬೇಕು ಎಂದರು. ಆಗ ತಟಕ್ಕನೆ ಒಬ್ಬ ಬಿಳಿಯನು ಎದ್ದು ನಿಂತು, “ಭಾರತವನ್ನು ಬಿಟ್ಟು ನಾವು ಹೊರಬಂದರೆ, ಅಲ್ಲಿ ಕೊಲೆ, ಕೊಳ್ಳೆ ಇವು ಹೆಚ್ಚಿ ಭಾರತ ದೇಶವೇ ಹಾಳಾಗುವುದಿಲ್ಲವೇ? ಎಂದು ಅಹಂಭಾವದಿಂದ ಪ್ರಶ್ನೆ ಮಾಡಿದನು.

"ಇಂಗ್ಲೀಷರು ಪ್ರಪಂಚದ ಸ್ಪೆಷಲ್ ಪೋಲಿಸರೇ?"

ಆಗ ಸತ್ಯಮೂರ್ತಿಯವರು ತಮ್ಮನ್ನು ಪ್ರಶ್ನಿಸಿದವನನ್ನು ನೋಡುತ್ತಾ, “ಭಾರತದಲ್ಲಿ ಕೋಮುವಾರು ಕಲಹಗಳು  ನಡೆಯುತ್ತದೆ ಎಂದೇ ಇಟ್ಟುಕೊಳ್ಳೋಣ. ಆದರೆ ಇಂಗ್ಲೀಷರನ್ನು ಭಗವಂತನು ಯಾವಾಗ ಪ್ರಪಂಚದ ಸ್ಪೆಷಲ್‌ಪೋಲೀಸನ್ನಾಗಿ ನೇಮಿಸಿದನು?” ಎಂದು ಮರು ಪ್ರಶ್ನೆ ಹಾಕಿದರು.

ಪ್ರಶ್ನೆ ಕೇಳಿದಾತ ನಾಚಿಕೆಯಿಂದ ತಲೆ ತಗ್ಗಿಸಿದರು.

ಕಾಲೇಜುಗಳಿಗೆ ಭೇಟಿ

ಸತ್ಯಮೂರ್ತಿಯವರಿಗೆ ರಾಜಕೀಯದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲೂ ಆಸಕ್ತಿ ಇತ್ತು. ಕಲೆಗಳಲ್ಲಿ ಅವರಿಗೆ ಹೆಚ್ಚಾದ ಒಲವು. ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರು. ಒಳ್ಳೆಯ ನಟ ಎಂದು ಹೆಸರು ಗಳಿಸಿದ್ದರು.

ತಮಿಳು, ಸಂಸ್ಕೃತ, ಇಂಗ್ಲೀಷ್‌ಭಾಷೆಗಳಲ್ಲಿ ಅವರಿಗೆ ಅಪಾರವಾದ ವಿದ್ವತ್ತು. ಸಂಸ್ಕೃತದಲ್ಲೇ ಬಹು ದೀರ್ಘವಾದ ಒಂದು ಉಪನ್ಯಾಸವನ್ನು ಅವರು ಮಾಡಿದ್ದಾರೆ.

ವಿದ್ಯಾಭ್ಯಾಸ ವಿಷಯದಲ್ಲಿ ಅವರಿಗೆ ಹೆಚ್ಚಾದ ಶ್ರದ್ಧೆ. ಮದರಾಸು ವಿಶ್ವವಿದ್ಯಾಲಯವು ಅವರ ಪ್ರತಿಭೆಯ ಉಪಯೋಗವನ್ನು ಪಡೆಯಲು ಅವರನ್ನು ಸೆನೆಟ್‌ಮತ್ತು ಸಿಂಡಿಕೇಟ್‌ಸಮಿತಿಗಳಿಗೆ ಸದಸ್ಯರನ್ನಾಗಿ ನೇಮಿಸಿತು. ಕಾಲೇಜುಗಳ ಆಡಳಿತ ಕ್ರಮಗಳಲ್ಲಿ ಸುಧಾರಣೆಯನ್ನು ತರಲು ವಿಶ್ವವಿದ್ಯಾಲಯ ಆಲೋಚಿಸಿತು. ಅದಕ್ಕಾಗಿ ಒಂದು ಸಮಿತಿಯನ್ನು ನೇಮಿಸಿತು. ಅದರಲ್ಲಿ ಸತ್ಯಮೂರ್ತಿಯವರೂ ಇದ್ದರು. ಆಟಪಾಟಗಳು, ಪುಸ್ತಕ ಭಂಡಾರ ಮುಂತಾದ ಭಾಗಗಳಲ್ಲಿ ಕಂಡುಬರುವ ಕುಂದುಕೊರತೆಗಳನ್ನು ಪರಿಶೀಲಿಸುವ ಜವಾಬ್ದಾರಿ ಸತ್ಯಮೂರ್ತಿಯವರದಾಯಿತು.

"ನಾಯಕರು ತಾವು ಹೇಳಿದಂತೆ ನಡೆಯಬೇಕು ನ್ಯಾಯವೆ" "ಉತ್ತಿಷ್ಠ ನರಶಾರ್ದೂಲ"

ಈ ಸಮಿತಿ ಪಾಲಯಂಕೊಟ್ಪೈ ಎಂಬ ಊರಿನಲ್ಲಿರುವ ಸೆಯಿಂಟ್‌ಕ್ಸೇವಿಯರ್‌ಕಾಲೇಜಿಗೆ ಹೋಯಿತು. ಕಾಲೇಜಿನ ಸಿಬ್ಬಂದಿಯವರು ಸಮಿತಿಯ ಸದಸ್ಯರನ್ನು ಕಾಲೇಜನ್ನು ತೋರಿಸಲು ಕರೆದುಕೊಂಡು ಹೋದರು. ಸತ್ಯಮೂರ್ತಿಯವರು ನೇರವಾಗಿ ಕಾಲ್ಚೆಂಡಾಡುವ ಮೈದಾನದಕ್ಕೆ ಹೋದರು. ಹಿಂದಿನ ದಿನ ತಾನೆ ಬಣ್ಣ ಹಾಕಿಸಲ್ಪಟ್ಟಿದ್ದ “ಗೋಲ್‌ಪೋಸ್ಟ್‌” ಕಂಬಗಳನ್ನು ಅವರು ಮುಟ್ಟಿ ನೋಡಿದರು. ಕೈಗೆಲ್ಲಾ ಹೊಸಬಣ್ಣ ಮೆತ್ತಿಕೊಂಡಿತು. ಹತ್ತಿರದಲ್ಲೇ ಇದ್ದ ಕಾಲೇಜಿನ ಮುಖ್ಯೋಪಾಧ್ಯಯರಿಗೆ ತಮ್ಮ ಬಣ್ಣ ಮೆತ್ತಿದ ಕೈಯನ್ನು ತೋರಿಸಿ “ನಾವು ವಯಸ್ಸಾದವರು. “ಪುಟ್‌ಬಾಲ್‌”ನ್ನೂ  “ಹಾಕಿ”ಯನ್ನೂ ಆಡುವ ವಯಸ್ಸು ನಮಗೆ ಕಳೆಯಿತು. ಆಟವಾಡಲು ನಮಗೆ ಹೊತ್ತಾದರೂ ಎಲ್ಲಿದೆ? ಏತಕ್ಕಾಗಿ ಇದೆಲ್ಲವನ್ನೂ ಹೊಸದನ್ನಾಗಿ ಮಾಡುವ ಶ್ರಮ ತೆಗೆದುಕೊಂಡಿರಿ? ಆಟಪಾಟಗಳಿಗೆ ಇಷ್ಟು ಹಣ ಬೇಕು ಎಂದು ಕೇಳಿದ್ದರೇ ಸಾಕಗುತ್ತಿರಲಿಲ್ಲವೇ?” ಎಂದು ಕೇಳಿದರು.

ಮರುದಿನವೂ ಸಮಿತಿಯ ಕೆಲವು ಸದಸ್ಯರು ಅದೇ ಕಾಲೇಜಿಗೆ ಹೋದರು. ಆಗ ಉಪಮುಖ್ಯಾಧ್ಯಾಪಕರು ಸತ್ಯಮೂರ್ತಿಯವರನ್ನು ಕಾಲೇಜಿನ ಪುಸ್ತಕ ಭಂಡಾರಕ್ಕೆ ಕರೆದುಕೊಂಡು ಹೋದರು. ಸತ್ಯಮೂರ್ತಿಯವರು ಎರಡು “ಷೆಲ್ಫ್‌”ಗಳನ್ನು ದಾಟಿ ಹೋದರು. ಅಲ್ಲಿ ಒಂದು ಚಿಕ್ಕ ಏಣಿ ಇತ್ತು. ಅವರು ಏಣಿಯ ಎರಡು ಮೆಟ್ಟಿಲುಗಳನ್ನೇರಿ ಮೂರನೆಯ ನಾಲ್ಕನೆಯ ಷೆಲ್ಫನ ತಟ್ಟೆಗಳಲ್ಲಿಟ್ಟಿದ್ದ ಪುಸ್ತಕಗಳ ಸಾಲಿನ ಹಿಂದೆ ಏನೋ ಹುಡುಕುವವರಂತೆ ತಮ್ಮ ಕೈಯನ್ನು ಒಳಗೆ ತೂರಿದರು. ಅಲ್ಲಿ ಹಿಂದಿನ ಸಾಲಿನಲ್ಲಿದ್ದ ಆರೇಳು ಪುಸ್ತಕಗಳನ್ನು ತೆಗೆದು, ಪುಸ್ತಕ ಭಂಡಾರದ ಅಧಿಕಾರಿಯ ಕೈಗೆ ಕೊಟ್ಟು ಒಂದು ಮೇಜಿನ ಮೇಲಿಡಲು ಹೇಳಿದರು. ಏಣಿಯಿಂದ ಇಳಿದು ಮೇಜಿನ ಹತ್ತಿರ ಬಂದು ಕುಳಿತರು. ಅಷ್ಟರಲ್ಲಿ ಉಪಮುಖ್ಯಸ್ಥರು ಅವರ ಮುಂದೆ ಕೈ ಒರೆಸಿಕೊಳ್ಳಲು ಒಂದು ತುಂಡು ಬಟ್ಟೆಯನ್ನು ಹಿಡಿದರು. ಸತ್ಯಮೂರ್ತಿ  ಬಟ್ಟೆಯನ್ನು ತೆಗೆದುಕೊಂಡು, ಕೈಯನ್ನು ಒರೆಸಿಕೊಂಡು, ಹಲವು ಕಾಲದಿಂದ ಧೂಳು ಹಿಡಿದಿದ್ದ ಪುಸ್ತಕಗಳನ್ನು ಚೆನ್ನಾಗಿ ಒರೆಸಿ ಶುದ್ಧಪಡಿಸಿದರು. ಅನಂತರ ಉಪ ಮುಖ್ಯಸ್ಥರೊಡನೆ ಮಾತನಾಡುತ್ತಿದ್ದಂತೆಯೇ ಸಾವಧಾನವಾಗಿ ತಮ್ಮ ಜೀಬಿನಿಂದ ಒಂದು ಚಾಕುವನ್ನು ತೆಗೆದು, ಬಿಡಿಸಿ, ಅದರಿಂದ ಕತ್ತರಿಸದೆ ಇದ್ದ ಹೊಸ ಪುಸ್ತಕದ ಹಾಳೆಗಳನ್ನು ನಿಧಾನವಾಗಿ ಬೇರ್ಪಡಿಸಲು ಆರಂಭಿಸಿದರು. ಎರಡು ಮೂರು ಪುಸ್ತಕಗಳ ಹಾಳೆಗಳನ್ನು ಹೀಗೆ ಬೇರ್ಪಡಿಸಿದ ಮೇಲೆ ಪುಸ್ತಕ ಭಂಡಾರದ ಅಧಿಕಾರಿಯನ್ನು ಕರೆದು “ಹಾಳೆಗಳನ್ನು ಕತ್ತರಿಸದೆ ಹಿಂದಿನ ಸಾಲಿನಲ್ಲಿ ಪುಸ್ತಕಗಳನ್ನು ಏಕೆ ಇಟ್ಟಿದ್ದೀರಿ? ಹಾಳೆಗಳನ್ನು ಕತ್ತರಿಸಿ ಪುಸ್ತಕಗಳನ್ನು ಜೋಡಿಸಿ ಇಡಬಾರದೇ? ” ಎಂದು ಹೇಳಿ ಅಲ್ಲಿಂದ ಹೊರಟರು. ಆ ಕಾಲೇಜಿನವರು ಪುಸ್ತಕ ಭಂಡಾರಕ್ಕೆ ಎಂದು ಪಡೆದ ಹಣವನ್ನು ಬೇರೆ ರೀತಿಗಳಲ್ಲಿ ಖರ್ಚು ಮಾಡುತ್ತಿದ್ದಾರೆ ಎಂದು ಸತ್ಯಮೂರ್ತಿಯವರಿಗೆ ಸ್ಪಷ್ಟವಾಯಿತು. ಆ ವರ್ಷವೂ ಅದರ ಮುಂದಿನ ಎರಡು ವರ್ಷಗಳೂ ಪುಸ್ತಕ ಭಂಡಾರಕ್ಕಾಗಿ ಆ ಕಾಲೇಜು ಕೇಳಿದ್ದ ಸಹಾಯಧನ ನಿಂತುಹೋಯಿತು. ಸತ್ಯಮೂರ್ತಿಯವರದು ತೀಕ್ಷ್ಣ ದೃಷ್ಟಿ. ಯಾವುದೂ ಅವರ ದೃಷ್ಟಿಯಿಂದ ತಪ್ಪಿ ಹೋಗುತ್ತಿರಲಿಲ್ಲ.

ಭೇಷ್‌ಮಗೂ”

ಅಂದೇ ಮಧ್ಯಾಹ್ನ ಸಮಿತಿಯ ಕೆಲವು ಸದಸ್ಯರು ತಿರುನೆಲ್‌ವೇಲಿ ಹಿಂದೂ ಕಾಲೇಜಿಗೆ ಹೊದರು. ಆ ಕಾಲೇಜಿನ ಒಂದು ಕೊಠಡಿಯಲ್ಲಿ ಪಾಠ ನಡೆಯುತ್ತಿತ್ತು.

ಐದಾರು ಜನ ಕೂಡಿದ ಒಂದು ಗುಂಪು ಆ ತರಗತಿಯ ಕಡೆಯೇ ಬರುತ್ತಿತ್ತು. ಆ ಗುಂಪಿನ ಮುಂದೆ ಹೊಸಬರೊಬ್ಬರು ಬರುತ್ತಿದ್ದರು. ಬೇರೆಯವರು ಅವರ ಹಿಂದೆ ಬರುತ್ತಿದ್ದರು.

ಆ ಹೊಸಬರು ಪಂಚೆಕಚ್ಚೆ ಹಾಕಿ ಪಂಚೆ ಉಟ್ಟಿದ್ದರು. ಸೊಗಸಾದ ಕೋಟನ್ನು ಹಾಕಿಕೊಂಡಿದ್ದರು. ಆ ಕೋಟಿನ ಮೇಲೆ ಅಂಗವಸ್ತ್ರವೊಂದು ಮಡಿಕೆಗಳು ಕದಲದಂತೆ ಹಾಕಲ್ಪಟ್ಟಿತ್ತು. ಕನ್ನಡಕವನ್ನೂ ಧರಿಸಿದ್ದರು.

ಅವರೇ ಸತ್ಯಮೂರ್ತಿ.

ಸತ್ಯಮೂರ್ತಿ ತರಗತಿಗೆ ಬಂದು ಅಧ್ಯಾಪಕರನ್ನು ತರಗತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಅವರು ಉತ್ತರ ಕೊಡುತ್ತಿದ್ದರು.

ಆಗ ಆ ತರಗತಿಯಲ್ಲಿದ್ದ ಹುಡುಗರಲ್ಲಿ ಒಬ್ಬನು ಮಾತ್ರ ಸತ್ಯಮೂರ್ತಿಯವರನ್ನು ಎವೆಯಿಕ್ಕದೆ ನೋಡುತ್ತಿದ್ದನು. ಏನನ್ನೋ ಕೇಳಬೇಕೆಂಬ ಚಪಲ. ಆದರೆ ಧೈರ್ಯಬಾರದು. ಕೊನೆಗೆ ಧೈರ್ಯ ತಂದುಕೊಂಡು ಅವರನ್ನೇ ನೊಡುತ್ತಾ ಅವರ ಬಳಿ ಬಂದನು.

ತಮ್ಮ ಬಳಿಗೆ ಬಂದ ಹುಡುಗನನ್ನು ಸತ್ಯಮೂರ್ತಿ ನೋಡಿದರು. ಹುಡುಗನು, “ನಾನು ತಮ್ಮಲ್ಲಿ ಒಂದು ಪ್ರಶ್ನೆ ಕೇಳಬೆಕೆಂದಿದ್ದೇನೆ. ದಯಮಾಡಿ ಅದಕ್ಕೆ ಅನುಮತಿ ಕೊಡುವಿರಾ? ಎಂದು ಭಿನ್ನಯಿಸಿದನು.

“ಓ, ಧಾರಾಳವಾಗಿ ಕೇಳಬಹುದು” ಎಂದರು ಅವರು. ” ತಾವೋ ಕಾಂಗ್ರೆಸ್ಸಿನಲ್ಲಿರುವ ದೊಡ್ಡ ನಾಯಕರಲೊಬ್ಬರು. ಬೇರೆ ದೇಶದ ಸರಕುಗಳನ್ನು ಕೊಂಡುಕೊಳ್ಳಕೂಡದು, ವಿದೇಶದ ಬಟ್ಟೆಗಳನ್ನು ಹಾಕಿಕೊಳ್ಳಕೂಡದು ಎಂದು ಹೇಳುವವರು. ಹಾಗಿರುವಾಗ ತಾವು ಬೇರೆ ದೇಶದ ಬಟ್ಟೆಯನ್ನು ಕೊಂಡು, ಬಹು ಸೊಗಸಾದ ಕೋಟನ್ನು ಹಾಕಿಕೊಳ್ಳಬಹುದೆ? ಮಾತೂ ನಡತೆಯೂ ಬೇರೆಯಾಗಿರಬಹುದೆ?” ಎಂದು ಪಟಪಟನೆ ಆ ಹುಡುಗ ಪ್ರಶ್ನಿಸಿದನು.

ಸತ್ಯಮೂರ್ತಿ ಬದಲೇನನ್ನೂ ಹೇಳಲಿಲ್ಲ ಮುಗುಳು ನಗುತ್ತಾ ತರಗತಿಯಿಂದ ಹೊರಬಂದರು.

ಸ್ವಲ್ಪ ಸಮಯ ಕಳೆಯಿತು. ಮುಖ್ಯೋಪಾಧ್ಯಾಯರ ಕೊಠಡಿಯಿಂದ ಒಬ್ಬ ಸೇವಕ ತರಗತಿಗೆ ಬಂದು ಪ್ರಶ್ನೆ ಕೇಳಿದ ವಿದ್ಯಾಥಿಯನ್ನು ಕರತರಬೇಕೆಂದು ಅಪ್ಪಣೆಯಾಗಿದೆ ಎಂದು ಹೇಳಿದ, ಒಂದು ಕ್ಷಣ ಆ ಹುಡುಗನಿಗೆ ಗಾಬರಿಯಾಯಿತು. ಆದರೂ ಮುಖ್ಯೋಪಾಧ್ಯಾಯರು ಕೊಠಡಿಯೊಳಕ್ಕೆ ಹೋದನು.

ಸತ್ಯಮೂರ್ತಿಯವರು ಅವನನ್ನು ಆದರದಿಂದ ಬರಮಾಡಿಕೊಂಡು ಹೀಗೆ ಹೇಳಿದರು

“ತಮ್ಮಾ, ನಿನ್ನಂತೆ ಮನಸ್ಸಿನ ಕೆಚ್ಚು ಶುದ್ಧವಾದ ಹೃದಯವೂ ಉಳ್ಳ ಯುವಕರೇ ನಮ್ಮ ದೇಶಕ್ಕೆ ಬೇಕು. ಬೇರೆ ದೇಶದ ಸರಕುಗಳನ್ನು ನೀನು ಎಷ್ಟರಮಟ್ಟಿಗೆ ದ್ವೇಷಿಸುತ್ತೀಯೆ ಎನ್ನುವುದನ್ನು ನಿನ್ನ ಪ್ರಶ್ನೆಯಿಂದಲೇ ತಿಳಿದಿದ್ದೇನೆ. ಅದಕ್ಕಾಗಿ ನಿನ್ನನ್ನು ಪ್ರಶಂಸಿಸುತ್ತೇನೆ. ದೇಶ ನಾಯಕರೆಲ್ಲರೂ ತಾವು ಹೇಳುವಂತೆ ನಡೆಯಬೇಕು ಎಂದು ನೀನು ನಿರೀಕ್ಷಿಸುತ್ತೀಯೆ. ಅದು ತುಂಬ ನ್ಯಾಯವಾದದ್ದೆ. ನಾನು ಹಾಕಿಕೊಂಡಿರುವ ಈ ಕೋಟಿನ ಬಟ್ಟೆಯ ನಯವೂ ತರವು ನಿನ್ನನ್ನು ಭ್ರಾಂತಿಗೊಳಿಸಿವೆ. ಇದು ವಿದೇಶೀ ಬಟ್ಟೆಯಲ್ಲ. ಕದ್ದರ್‌ರೇಶ್ಮೆ.” ಹೀಗೆ ಹೇಳಿ ಚಾಕುವೊಂದನ್ನು ತೆಗೆದುಕೊಂಡು ಕೋಟಿನ ಒಳಭಾಗದಿಂದ ಸ್ವಲ್ಪ ಬಟ್ಟೆಯನ್ನು ಕತ್ತರಿಸಿ, ತೆಗೆದು ತೋರಿಸಿದರು.

ಸತ್ಯಮೂರ್ತಿ  ಸ್ವದೇಶದ ಸರಕುಗಳನ್ನು ಬಳಕೆಗೆ ತರುವ ವಿಚಾರದಲ್ಲಿ ಬಹು ತೀವ್ರವಾದಿಗಳಾಗಿದ್ದರು. ವಿದೇಶದ ಸಾಮಗ್ರಿಗಳನ್ನು ಅವರು ಬಳಸುತ್ತಿರಲಿಲ್ಲ.

ವ್ಯಕ್ತಿತ್ವದ ಕೆಲವು ಮುಖಗಳು

ಸತ್ಯಮೂರ್ತಿ  ಸಂಪ್ರದಾಯ ನಿಷ್ಟರು. ಪ್ರತಿದಿನ ರಾಮಯಣ ಪರಾಯಣವನ್ನು ಮಾಡದೆ ಬೆಳಿಗ್ಗೆ ಆಹಾರವನ್ನು ಮುಟ್ಟುತ್ತಿರಲಿಲ್ಲ. ಯಾವ ಊರಿಗೆ ಹೊದರು, ರಾತ್ರಿ ಎಷ್ಟು ಹೊತ್ತಾದರೂ, ಆ ಊರಿನಲ್ಲಿರುವ ದೇವಾಲಯಕ್ಕೆ ಹೋಗಿ, ದೇವರ ದರ್ಶನ ಮಾಡದೆ ಇರುತ್ತಿರಲಿಲ್ಲ. ಹಾಗೆಯೇ ಹರಿಜನರು ದೇವಾಲಯ ಪ್ರವೇಶ ಮಾಡುವ ವಿಷಯದಲ್ಲಿ ಬಹು ತೀವ್ರವಾಗಿ ಆಸಕ್ತಿ ತೋರಿಸಿದರು.

ಮದರಾಸಿನ ಮೇಯರಾಗಿದ್ದಾಗ ಅವರು ನಗರದ ಬೀದಿಗಳನ್ನು ಗುಡಿಸಿ ಚೊಕ್ಕಟವಾಗಿಟ್ಟಿರುವ ಕೆಲಸವನ್ನು ಮೇಲುಸ್ತುವಾರಿ ಮಾಡಲು, ದಿನಂಪ್ರತಿ ಬೆಳಿಗ್ಗೆ ಏಳು ಘಂಟೆಯಿಂದ ಹತ್ತು ಘಂಟೆಯವರೆಗೆ, ನಗರದ ಒಂದೊಂದು ವಿಭಾಗಕ್ಕೂ ಹೋಗಿ ನೋಡಿಬರುತ್ತಿದ್ದರು.

ಸತ್ಯಮೂರ್ತಿಗಳು ಬಹು ಸಮರ್ಥರಾದ ಭಾಷಣಕಾರರು ಎನ್ನಿಸಿಕೊಂಡಿದ್ದರು. ಆದರೆ ಭಾಷಣ ಮಾಡಲು ಒಪ್ಪಿದರೆ ತಮ್ಮ ಹೊಣೆಯನ್ನು ಹಗುರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ವಿಧಾನಸಭೆಯ ಅಧಿವೇಶನವಾಗಲಿ, ಬೇರೆ ಯಾವ ಸಭೆಯಾದರೂ ಸರಿ, ಅವರು ಮತನಾಡಬೇಕೆಂದಿರುವ ವಿಷಯವನ್ನು ಕುರಿತು ಬಹು ಶ್ರದ್ಧೆಯಿಂದ ಯೋಚಿಸಿ, ಮೊದಲೇ ತಯಾರುಮಾಡಿಕೊಂಡು ಹೋಗುತ್ತಿದ್ದರು. “ಉಪನ್ಯಾಸಕ್ಕಾಗಿ ನಮ್ಮನ್ನು ಕರೆದು ಅವರು ಗೌರವಿಸುತ್ತಾರೆ. ಆ ಉಪನ್ಯಾಸಕ್ಕೆ ನಾವು ಮೊದಲೇ ತಯಾರು ಮಾಡಿಕೊಂಡರೆ ಅದೇ ನಾವು ಅವರಿಗೆ ತೋರಿಸುವ ಮರ್ಯಾದೆ” ಎಂದು ಅವರು ಹೇಳುತ್ತಿದ್ದರು.

ವಿಧಾನ ಸಭೆಗಳಲ್ಲೂ ಬೇರೆ ಅನೇಕ ಸಭೆಗಳಲ್ಲೂ ಅವರಿಗೆ ಅನೇಕ ದೊಡ್ಡ ಮನುಷ್ಯರೊಡನೆ ತಿಕ್ಕಾಟವುಂಟಾಯಿತು. ಆದರೆ ಆ ಪ್ರಕರಣ ಮುಗಿದ ಮೆಲೆ ಅವರೊಡನೆ ಪ್ರೀತಿ ವಿಶ್ವಾಸಗಳೊಡನೆ ನಡೆದುಕೊಳ್ಳುವುದು ಸತ್ಯಮೂರ್ತಿಯವರ ಸ್ವಭಾವ. ಮನಸ್ಸಿನಲ್ಲಿ ಕಹಿ ಎಂಬುದೇ ಅವರಲ್ಲಿ ಇರಲಿಲ್ಲ.

ಸತ್ಯಮೂರ್ತಿ ತಮ್ಮ ಪ್ರಯತ್ನಶೀಲತೆಯಿಂದ ದೊಡ್ಡವರಾದರು. ವಕೀಲರಾಗಿ ತುಂಬಾ ಯಶಸ್ಸು ಗಳಿಸಿದ್ದರು. ಅವರು ಹಣ ಅಥವಾ ಅಧಿಕಾರಕ್ಕೆ ಆಸೆ ಪಟ್ಟಿದ್ದರೆ ಅವು ಸುಲಭವಾಗಿ ದಕ್ಕುತ್ತಿದ್ದವು.

ಆಂಗ್ಲರು ಸತ್ಯಮೂರ್ತಿಯವರಿಗೆ ನ್ಯಾಯಾಧೀಶರು, ದಿವಾನ್‌ಮುಂತಾದ ಹಲವು ಪದವಿಗಳನ್ನು ಕೊಡಲು ಬಯಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂಬ ಹಂಬಲದಿಂದ ಅವರು ಅವೆಲ್ಲವನ್ನೂ ತಿರಸ್ಕರಿಸಿದರು.

ನೀವು ನಾಶ ಮಾಡಲಾರಿರಿ”

೧೯೨೬ನೇ ವರ್ಷ ಸತ್ಯಮೂರ್ತಿಯವರು ಎರಡನೆಯ ಸಲ ಇಂಗ್ಲೆಂಡಿಗೆ ಹೋದರು. ಹಲವು ನಗರಗಳಿಗೆ ಭೇಟಿಯಿತ್ತರು. ಭಾರತದಲ್ಲಿ ಆಂಗ್ಲರ ದಬ್ಬಾಳಿಕೆ, ಅವರ ಕ್ರೌರ್ಯ, ಅವರು ನಡೆಸುತ್ತಿರುವ ಶೋಷಣೆ ಇವನ್ನು ಕುರಿತು ವಿವರಿಸಿದರು. ಭಾರತಕ್ಕೆ ಸ್ವಾತಂತ್ರ್ಯಅವಶ್ಯಕತೆ ಏಕೆ ಎಂಬುದನ್ನೂ ಸ್ಪಷ್ಟವಾಗಿ ವಿವರಿಸಿದರು.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಪ್ರಸಿದ್ಧ ಕವಿ ಸುಬ್ರಹ್ಮಣ್ಯ ಭಾರತಿಯವರ ಗೀತೆಗಳು ಜನರಲ್ಲಿ ಸ್ವಾತಂತ್ರ್ಯ ದ ಸ್ಫೂರ್ತಿಯ ಕಿಡಿಯನ್ನು ಹೊತ್ತಿಸುತ್ತಿದ್ದವು. ಇದನ್ನು ಕಂಡ ಆಂಗ್ಲ ಸರಕಾರ ೧೯೨೮ರಲ್ಲಿ ಮಹಾಕವಿ ಸುಬ್ರಹ್ಮಣ್ಯ ಭಾರತಿಯವರು ದೇಶಭಕ್ತಿ ಗೀತೆಗಳನ್ನು ಹಾಡಕೂಡದೆಂದು ನಿಷೇಧಿಸಿತು. ಇದು ಸತ್ಯಮೂರ್ತಿಯವರನ್ನು ಕೆರಳಿಸಿತು. ವಿಧಾನಸಭೆಯಲ್ಲಿ “ಭಾರತೀಯವರು ಭಾರತದಲ್ಲಲ್ಲದೆ ಬೇರೆಲ್ಲಾದರೂ ಹುಟ್ಟಿದ್ದರೆ ಆ ದೇಶದ ರಾಷ್ಟ್ರಕವಿಯೆಂದು ಗೌರವಿಸಲ್ಪಡುತ್ತಿದ್ದರು. ಭಾರತಿಯವರ ಗೀತೆಗಳ ಪುಸ್ತಕಗಳೆಲ್ಲವನ್ನೂ ನೀವು ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ ತಮಿಳು ಭಾಷೆ ಇರುವವರೆಗೂ, ತಮಿಳನೆಂದು ಒಬ್ಬ ಇರುವವರೆಗೂ, ಭಾರತಿಯವರ ಗೀತೆಗಳು ಬೆಲೆ ಕಟ್ಟಲಾಗದ ಆಸ್ತಿಯಾಗಿ ಶಾಶ್ವತವಾಗಿರುತ್ತವೆ” ಎಂದು ಗುಡುಗಿದರು.

ಸ್ವಾತಂತ್ರ್ಯವೇ ಸತ್ಯಮೂರ್ತಿಯವರ ಉಸಿರಾಗಿತ್ತು. ಸ್ವಾತಂತ್ರ್ಯಕ್ಕಾಗಿ ಜನ ಹೋರಾಡಲೇಬೇಕು ಎನ್ನುತ್ತಿದ್ದರು ಸತ್ಯಮೂರ್ತಿ. ಇದನ್ನು ಜನತೆಗೆ ತಿಳಿಸಲು ಪ್ರತಿ ಸಂದರ್ಭವನ್ನು ಕುಶಲತೆಯಿಂದ ಬಳಸಿಕೊಳ್ಳುತ್ತಿದ್ದರು.

ಉತ್ತಿಷ್ಠ ನರಶಾರ್ದೂಲ”

ತಂಜಾವೂರು ಜಿಲ್ಲೆಯ ಮನ್ನಾರ್ ಗುಡಿಯಲ್ಲಿ ಪ್ರತಿ ವರ್ಷ ಸಂಸ್ಕೃತ ವಿದ್ವತ್ಸಭೆ ನಡೆಯಿಸುತ್ತಿತ್ತು. ಪ್ರಖ್ಯಾತರಾದ ಸಂಸ್ಕೃತ ವಿದ್ವಾಂಸರು ಅದರಲ್ಲಿ ಭಗವಹಿಸಲು ಬರುತ್ತಿದ್ದರು. ಕಠಿಣವಾದ ತತ್ತ್ವಾರ್ಥಗಳನ್ನು ಕುರಿತು ಚರ್ಚೆಗಳೂ ಇತಿಹಾಸ ಪುರಾಣಗಳನ್ನು ಕುರಿತು ಉಪನ್ಯಾಸಗಳು ನಡೆಯುತ್ತಿದ್ದುವು. ಸಾಮಾನ್ಯ ಪಂಡಿತರಿಗೆ ಅದರಲ್ಲಿ ಸ್ಥಾನವಿಲ್ಲ. ರಾಜಕೀಯ ಮಾತುಗಾರರನ್ನಂತೂ ಹತ್ತಿರ ಸೇರುಸುತ್ತಿರಲಿಲ್ಲ. ಆದರೆ ಆ ಸಭೆಯಲ್ಲಿ ಮಾತನಾಡಲು ಸತ್ಯಮೂರ್ತಿಯವರನ್ನು ಆಹ್ವಾನಿಸಿದರು. ಅವರೂ ಒಪ್ಪಿಕೊಂಡರು. ವಿಷಯ ಶ್ರೀ ಮದ್ರಾಮಾಯಣವನ್ನು ಕುರಿತದ್ದು. ಅವರು ಮಹತ್ತಾದ ವಿಷಯಗಳನ್ನು ಕುರಿತು ಉಪನ್ಯಾಸ ಮಾಡಿದರು. ಅವರ ಆ ಸಂಸ್ಕೃತ  ಭಾಷಣ ಎಲ್ಲರನ್ನೂ ಪರಮಾಶ್ಚರ್ಯದಲ್ಲಿ ಮುಳುಗಿಸಿತು.

ಸತ್ಯಮೂರ್ತಿಯವರು ತಮ್ಮ ಉಪನ್ಯಾಸದಲ್ಲಿ ಪ್ರತ್ಯಕ್ಷವಾಗಿ ರಾಜಕೀಯದ ಬಗ್ಗೆ ಮಾತನಾಡಲಿಲ್ಲ. ಆದರೆ ಪರೋಕ್ಷವಾಗಿ, ಕುಶಲತೆಯಿಂದ ಜನತೆಯ ಕರ್ತವ್ಯವನ್ನು ಪ್ರತಿಪಾದಿಸಿದ ಜಾಣ್ಮೆ ಮೆಚ್ಚುವಂತಹುದು. ಭಾರತ ದೇಶದ ಜನ ನಿದ್ರಿಸುತ್ತಿರಬಾರದು. ತಮ್ಮ ಸ್ವಧರ್ಮವನ್ನು ಮಾಡಬೇಕು. ಅದನ್ನು ಮರೆತು ಕೀಳಾದ ಗಲಾಮಗಿರಿಯಲ್ಲಿಯೇ ನಿದ್ರೆ ಮಾಡುತ್ತಿರಬಾರದು ಎಂಬ ವಿಷಯವನ್ನು ಒಂದು ಸಂದರ್ಭದಲ್ಲಿ ಎತ್ತಿ ತೋರಿಸಿದರು.

ಅದಕ್ಕೆ ಉದಾಹರಣೆಯಾಗಿ ಒಂದು ಸಂಗತಿಯನ್ನು ಹೇಳಿದರು. ಕಾಡಿನಲ್ಲಿ ಶ್ರೀರಾಮ ಮಲಗಿಕೊಂಡಿದ್ದನು. ಸೂರ್ಯೋದಯವಾಯಿತು. ಆಗ ಅವನನ್ನು ಎಬ್ಬಿಸುವುದಕ್ಕಾಗಿ ವಿಶ್ವಾಮಿತ್ರ: “ಉತ್ತಿಷ್ಠ ನರಶಾರ್ದೂಲ ಕರ್ತವ್ಯ ದೈವಮಾಹ್ನಿಕಂ” ಎಂದು ಹೇಳುತ್ತಾರೆ. “ಓ, ಮನುಷ್ಯರಲ್ಲಿ ಸಿಂಹದಂತಿರುವವನೇ ಎದ್ದೇಳು. ದೈವ ಕರ್ತವ್ಯವಾದ ಸಂಧ್ಯಾವಂದನೆಯನ್ನು ಮಾಡು” ಎಂದು ಮೊಗಳಿದರು ಸತ್ಯಮೂರ್ತಿ. “ಉತ್ತಿಷ್ಠ ನರಶಾರ್ದೂಲ” ಎಂದು ಅಲ್ಲಿದ್ದ ಜನರನ್ನು ನೋಡಿ ಅವರು ಅಬ್ಬರಿಸಿದಾಗ ಸ್ವಾತಂತ್ರ್ಯದ ಉತ್ಸಾಹ ಹರಿಯಿತು. ಎಲ್ಲೆಲ್ಲೂ ಚಪ್ಪಾಳೆಯ ಧ್ವನಿ.

ತಮಗೆ ಸಹಜವಾಗಿದ್ದ ಪ್ರತಿಭೆಯ ಉಪಯೋಗದಿಂದಲೇ ಅವರು ತೃಪ್ತಿ ಹೊಂದಲ್ಲಿಲ್ಲ. ತಮ್ಮ ಅಸಾಧಾರಣವಾದ ದುಡಿಮೆಯಿಂದಲೂ ಪ್ರಯತ್ನದಿಂದಲೂ ತಮ್ಮ ಸಾಮರ್ಥ್ಯವನ್ನು ಅವರು ಇನ್ನು ಹೆಚ್ಚಿಸಿಕೊಂಡರು.

ಒಂದು ಸಲ ಸತ್ಯಮೂರ್ತಿವರನ್ನು ಕಾಣಲು ಸ್ನೇಹಿತರೊಬ್ಬರು ಹೋದರು. ಆಗ ಸತ್ಯಮೂರ್ತಿ  ರಾಮಾಯಣ ಪಾರಾಯಣ ಮಾಡುತ್ತಿದ್ದರು. ಹನುಮಂತನು ಸೀತಾದೇವಿಗೆ ತನನ್ನು ರಾಮಭಕ್ತನೆಂದು ಪರಿಚಯ ಮಾಡಿಕೊಳ್ಳುವ ಘಟ್ಟ ಸೀತಾದೇವಿಯ ದುಃಖ ಆನಂದ ಬಾಷ್ಪವಾಗಿ ಮಾರ್ಪಡುತ್ತದೆ. ಅದನ್ನು ಓದುತ್ತಿದ್ದ ಸತ್ಯಮೂರ್ತಿಯವರೂ ಆನಂದದ ಕಣ್ಣೀರು ಸುರಿಸುತ್ತಿದ್ದರು.

ಎದುರಿಲ್ಲದ ವಾದ

ಸತ್ಯಮೂರ್ತಿ ಬೇಸರಪಡದ ದುಡಿಮೆಯಲ್ಲಿ ನಿರತರಾದ ಕರ್ಮವೀರರು. ೧೯೩೫ರಲ್ಲಿ ಸತ್ಯಮೂರ್ತಿಯವರು ತಮಿಳುನಾಡು ಪ್ರದೇಶ ಕಾಂಗ್ರೆಸ್‌ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಅದೇ ವರ್ಷ ಕೇಂದ್ರಶಾಸನ ಸಭಾ ಸದಸ್ಯರಾಗಿಯೂ ಆಯ್ಕೆಯಾದರು. ಆಂಗ್ಲ ಸರಕಾರವು ಜನರನ್ನು ಸದೆ ಬಡಿಯುವ ಕ್ರೂರವಾದ ಶಾಸನಗಳನ್ನು ಜಾರಿಗೆ ತರುವ ಯೋಚನೆ ಮಾಡುತ್ತಿತ್ತು. ಆ ಶಾಸನಗಳನ್ನೆಲ್ಲಾ ರದ್ದುಪಡಿಸಬೇಕೆಂದು ಸತ್ಯಮೂರ್ತಿಯವರು ತಿದ್ದುಪಡಿಯನ್ನು ಸೂಚಿಸಿದರು. ತಮ್ಮ ಮುಂದೆ ಇಪ್ಪತ್ತಕ್ಕೂ ಹೆಚ್ಚಾದ ಶಾಸನ ಪುಸ್ತಕಗಳನ್ನು ಇಟ್ಟುಕೊಂಡು ಹಿಂದಿನ ದಾಖಲೆಗಳನ್ನು ತೋರಿಸಿ ನಾಲ್ಕು ಘಂಟೆಗಳ ಕಾಲ ಮಾತಾಡಿದರು. ಅವರಿಗೂ ಸರಕಾರದ ನ್ಯಾಯ ಮಂತ್ರಿ ಎನ್‌.ಎನ್.ಸರ್ಕಾರ್ ಅವರಿಗೂ ನಡೆದ ಹಾಸ್ಯ ತುಂಬಿದ ವಾಗ್ಯುದ್ಧವನ್ನೂ ಸಭೆ ಕುತೂಹಲದಿಂದ ಕೇಳುತ್ತಿತ್ತು.

ಎರಡು ತಿಂಗಳು ಕಳೆದ ಬಳಿಕ ಆ ಮಸೂದೆ ಪುನಃ ಚರ್ಚೆಗೆ ಬಂತು. ಆ ಸಂದರ್ಭದಲ್ಲಿ ಆ ಸಭೆ ಎಂದೂ ಕೇಳಿರದಂಥ ರೀತಿಯಲ್ಲಿ ಸಾರವತ್ತಾದ ದೀರ್ಘ ಭಾಷಣವನ್ನು ಮಾಡಿದರು ಸತ್ಯಮೂರ್ತಿ. ಪ್ರಶ್ನೋತ್ತರ ಕಾಲದಲ್ಲಿ ಹೆಚ್ಚು ಹೊತ್ತನ್ನು ಅವರೇ ತೆಗೆದುಕೊಂಡರು. ಪ್ರಶ್ನೆಗಳ ಸುರಿಮಳೆಯಿಂದ ಸರಕಾರವನ್ನು ಪೇಚಾಟಕ್ಕೆ ಸಿಕ್ಕಿಸಿದರು. ತಾವು ತೆಗೆದುಕೊಂಡು ಹೋಗಿದ್ದ ೬೯ ನ್ಯಾಯ ಗ್ರಂಥಗಳಿಂದ ಹಿಂದಿನ ಸಂದರ್ಭಗಳನ್ನು ವಿವರಿಸಿ ಬಹು ಚೆನ್ನಾಗಿ ಮಾತನಾಡಿದರು. ಅವರನ್ನು ಎದುರಿಸಲು ಆಂಗ್ಲ ಸದಸ್ಯರೂ ಕೆಲವು ನ್ಯಾಯಗ್ರಂಥಗಳನ್ನು ತಂದಿದ್ದರು. ಆದರೆ ಅವರಿಗೂ ಸರಕಾರದ ಇತರ ಪ್ರತಿನಿಧಿಗಳಿಗೂ ಅವಕಾಶವೇ ಸಿಕ್ಕಲಿಲ್ಲ.

ಒಂದು ಹಾಡು, ಅದರ ಶಕ್ತಿ

ಆಂಗ್ಲ ಸರಕಾರವನ್ನು ಸೆರೆಮನೆಗೆ ಹೋಗುವುದರಿಂದ ಮಾತ್ರವೇ ಎದುರಿಸಿದರೆ ಸಾಲದು, ವಿಧಾನಸಭೆಗಳ ಕಾರ್ಯಕಲಾಪಗಳಲ್ಲೂ ಪಾಲ್ಗೊಂಡು ಸ್ವರಾಜ್ಯವನ್ನು ಪಡೆಯಬೇಕು ಎಂಬ ಅಭಿಪ್ರಾಯವನ್ನು ಮನಸಾರ ನಂಬಿದ್ದವರು ಸತ್ಯಮೂರ್ತಿ. ಅಭಿಪ್ರಾಯ ಭೇದ ಬಂದಾಗಲೆಲ್ಲ ಅವರು, ಗಾಂಧೀಜಿಯವರಾದರೂ ಸರಿ, ಚರ್ಚೆಯ ಮೂಲಕ ತಮ್ಮ ಕಡೆಗೆ ಒಲಿಸಿಕೊಳ್ಳಲು ಪ್ರಯತ್ನಪಡುತ್ತಿದ್ದರೇ ವಿನಾ, ಪಕ್ಷವನ್ನು ಬಿಟ್ಟುಹೋಗಲಿಲ್ಲ.

ಆ ಕಾಲದಲ್ಲಿ ತಮಿಳು ನಾಡಿನಲ್ಲಿ ಒಂದು ರಾಜಕೀಯ ಪಲ್ಲವಿ ಕೇಳಿಬರುತ್ತಿತ್ತು. ಸತ್ಯಮೂರ್ತಿಯೇ ಅದನ್ನು ರಚಿಸಿದವರು. ನಾಲ್ಕು ಜನ ಸೇರಿ ಅಂದಿನ ರಾಜಕೀಯವನ್ನು ಕುರಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ಯಾರಾದರೊಬ್ಬರು ಈ ಪಲ್ಲವಿಯನ್ನು ಹೇಳಿಯೇ ಹೇಳುತ್ತಿದ್ದರು.

“ಅವನ ಚರ್ಮ ಬಿಳಿಯದಂತೆ

ನನ್ನ ತೊಗಲು ಕರಿಯದಂತೆ………”

ಎಂದು ದೀರ್ಘವಾಗಿ ಹಾಡುವರು. ಬೇರೆಯವರ ಮುಖದಲ್ಲಿ ಒಂದು ಉತ್ಸಾಹ ಕಾಣಬರುವುದು. ಕೆಲವು ಸಲ ಸತ್ಯಮೂರ್ತಿಯವರು ಈ ದೇಶದಲ್ಲಿ ಆಂಗ್ಲರು ಅನುಭವಿಸುತ್ತಿದ್ದ ವಿಶೇಷವಾದ ಹಕ್ಕುಗಳನ್ನೂ ಸವಲತ್ತುಗಳನ್ನೂ ಎತ್ತಿ ಹೇಳಿ ಪಲ್ಲವಿಯೊಡನೆ ತಮ್ಮ ಭಾಷಣವನ್ನು ಮುಗಿಸುತ್ತಿದ್ದರು.

ಉದಾಹರಣೆ: “ಒಂದು ಉದ್ಯೋಗವನ್ನು ಆಂಗ್ಲನೊಬ್ಬನು ಮಾಡಿದರೆ ಅವನಿಗೆ ಎರಡು ಸಾವಿರ ರೂಪಾಯಿ ಸಂಬಳ. ಅದೇ ಉದ್ಯೋಗವನ್ನು ನಾನು ಮಾಡಿದರೆ ನನಗೆ ಇನ್ನೂರು ರೂಪಾಯಿ. ಈ ವ್ಯತ್ಯಾಸಕ್ಕೆ ಕಾರಣವೇನು ಗೊತ್ತೇ? ಅವನ ಚರ್ಮ ಬಿಳಿಯದಂತೆ, ನನ್ನ ತೊಗಲು ಕರಿಯದಂತೆ……….”

ಹೀಗೆ ಉದಾಹರಣೆಗಳನ್ನು ಒಂದರ ಮೇಲೊಂದಾಗಿ ಪೇರಿಸುತ್ತಾ ಹೋಗುವರು. ಜನರ ಆವೇಶವನ್ನು ಎಬ್ಬಿಸುವುದಕ್ಕಾಗಿ ಹೀಗೆ ಅನೇಕ ಯುಕ್ತಿಗಳನ್ನು ಅವರು ಭಾಷಣಗಳಲ್ಲಿ ಉಪಯೋಗಿಸುತ್ತಿದ್ದದ್ದುಂಟು.

ಸಭೆಗಳಲ್ಲಿ ಮಾತನಾಡುವುದು ಮಾತ್ರವಲ್ಲ. ಪ್ರತಿಯೊಬ್ಬ ಪ್ರಜೆಯ ಮನೆಗೂ ಹೋಗಿ ಓಟುಗಳನ್ನು ಬೇಡಿದ ಕ್ರಮ ದೇಶಸೇವಕರುಗಳಿಗೆಲ್ಲ ಒಂದು ಅಪೂರ್ವವಾದ ಮಾದರಿಯಾಗಿರುತ್ತಿತ್ತು. ಒಂದು ಮನೆಗೆ ಹೋದರೆ ತನ್ನೊಡನೆ ಬಂದವರು ಮಾತನಾಡಲಿ ಎಂದು ಅವರು ಸುಮ್ಮನಿರುತ್ತಿರಲಿಲ್ಲ. ಆ ಮನೆಯಾಕೆ ಬಾಗಿಲಿಗೆ ಬಂದ ಕೂಡಲೆ ತಮ್ಮ ಪರಿಚಯವನ್ನು ಹೇಳಿಕೊಂಡು ಮಾತಿಗೆ ಆರಂಭಿಸಿ ಬಿಡುತ್ತಿದ್ದರು. ಅವರ ಈ ರೀತಿ ಬೇರೆಯವರಿಗೆ ಮಾರ್ಗದರ್ಶಕವಾಗಿರುತ್ತಿತ್ತು.

ರಾಜಾಜಿಯವರಿಗೂ ಸತ್ಯಮೂರ್ತಿಯವರಿಗೂ ಆಗಾಗ ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಬರುತ್ತಿದ್ದವು. ಆದರೂ ಅದು ಅವರ ಸ್ನೇಹಕ್ಕೆ ಕುಂದು ತರಲಿಲ್ಲ. ಒಂದು ವರ್ಷ ದೀಪಾವಳಿಯ ದಿನ ತಮ್ಮ ಹೆಂಡತಿ ಮತ್ತು ಮಗಳೊಡನೆ ರಾಜಾಜಿಯವರ ಮನೆಗೆ ಹೋಗಿ ಅವರಿಗೆ ನಮಸ್ಕಾರ ಮಾಡಿಸಿ ಕರೆದುಕೊಂಡು ಬಂದರು.

ಸತ್ಯಮೂರ್ತಿಯವರಿಗೆ ದೈವಭಕ್ತಿ ಇದ್ದರೂ ಹರಿಜನರ ದೇವಾಲಯ ಪ್ರವೇಶ ಮುಂತಾದ ಚಳುವಳಿಗಳಲ್ಲಿ ಅವರಿಗೆ ಪೂರ್ಣವಾದ ನಂಬಿಕೆ ಇತ್ತು. ಒಮ್ಮೆ ತಾವೇ ಹರಿಜನರ ನಾಯಕರೊಡನೆ ಮಧುರೆಯಲ್ಲಿ ಮೀನಾಕ್ಷಿ ದೇವಾಲಯಕ್ಕೆ ಹೋಗಿ ಬಂದರು.

ದೇಶಸೇವೆಗಾಗಿ ಸದಾ ಸಿದ್ಧ

ದೇಶಸೇವೆಗಾಗಿ ಯಾವಾಗ ಕರೆ ಬಂದರೂ ಸತ್ಯಮೂರ್ತಿ ಕೂಡಲೇ ಅದಕ್ಕೆ ಸಿದ್ಧವಾಗಿರುತ್ತಿದ್ದರು. ೧೯೧೯ರಲ್ಲಿ ಜಲಿಯನ್ ವಾಲಾ ಬಾಗ್‌ಕಗ್ಗೊಲೆಯನ್ನು ಎದುರಿಸಿ ಸಾಕ್ಷ್ಯ ಹೇಳಲು ಕಾಂಗ್ರೆಸ್‌ನಿಯಮಿಸಿದ ಸಮಿತಿಯಲ್ಲಿ ಅವರು ಪಾಲುಗೊಳ್ಳಬೇಕೆಂಬ ಅಪ್ಪಣೆ ಕೊನೆಯ ಘಳಿಗೆಯಲ್ಲಿ ಬಂದಿತು. ಸತ್ಯಮೂರ್ತಿ ತಮ್ಮ ವಕೀಲಿ ಕೆಲಸವನ್ನು ಗಮನಿಸಲು ಅವಸರ ಅವಸರವಾಗಿ ಏರ್ಪಾಟು ಮಾಡಿ ಕಾಂಗ್ರೆಸಿನ ಕೆಲಸವನ್ನು ಮಾಡಿದರು.

೩೧ ವರ್ಷ ಮಾತ್ರವಾಗಿದ್ದ ಆ ಯುವಕ ಸಿಂಹದ ಗುಹೆಯಲ್ಲಿ ಹೊಕ್ಕು ಅದರ ಹಲ್ಲನ್ನು ಹಿಡಿದು ನೋಡಿದಂತೆ ಇಂಗ್ಲೆಂಡಿಗೆ ಹೋಗಿ ಮಂಡಿಸಿದ ವಾದ ಅಪೂರ್ವವಾದುದು.

“ಇಂಗ್ಲೆಂಡಿನಿಂದ ಹಿಂತಿರುಗಿದ ಮೇಲೆ ನನ್ನ ದೇಶದ ಜನ ಮನಃಪೂರ್ವಕವಾಗಿ ಕೊಟ್ಟ ಸ್ವಾಗತವನ್ನು ಕಂಡು ವಕೀಲಿ ಕೆಲಸಕ್ಕೆ ತಿರುಗಿ ನಾನು ಹೋಗುವುದಿಲ್ಲ. ಕಾಂಗ್ರೆಸ್‌ಪ್ರಚಾರ ಸೇವೆಯಲ್ಲೇ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಎಂದು ತೀರ್ಮಾನಿಸಿಕೊಂಡೆ” ಎಂದು ಸತ್ಯಮೂರ್ತಿ ಹೇಳಿದರು. ಹೇರಳವಾಗಿ ಹಣ ಬರುತ್ತಿದ್ದ ವಕೀಲಿ ವೃತ್ತಿಯನ್ನೇ ದೇಶಕ್ಕಾಗಿ ಅವರು ತ್ಯಾಗ ಮಾಡಿದರು.

ದೇಶಕ್ಕಾಗಿ ಸೆರೆಮನೆಯಲ್ಲಿ

ಸತ್ಯಮೂರ್ತಿ ಮಾತುಗಾರಿಕೆಯಲ್ಲಿ ಮಾತ್ರ ನಿಪುಣರಲ್ಲ. ಹೋರಾಟದಲ್ಲಿ ಯಾವ ಹೆದರಿಕೆಯೂ ಇಲ್ಲದೆ ನಿಲ್ಲಬಲ್ಲ ಧೀರರು ಅವರು. ಗಾಂಧೀಜಿಯವರು ಉಪ್ಪಿನ ತೆರಿಗೆಯನ್ನು ಪ್ರತಿಭಟಿಸಿ ಹೋರಾಟ ನಡೆಸಿದರು. ತಮಿಳುನಾಡಿನಲ್ಲಿ ಸತ್ಯಮೂರ್ತಿಯವರು ನಾಯಕರಾಗಿ ಈ ಹೋರಾಟಕ್ಕೆ ಜಯ ದೊರಕಿಸಿಕೊಟ್ಟರು. ಸರ್ಕಾರ ಅವರನ್ನು ಬಂಧಿಸಿತು, ಸೆರೆಮನೆಗೆ ಕಳುಹಿಸಿತು. ಶಿಕ್ಷೆಯ ಅವಧಿ ಮುಗಿದು ಹೊರಕ್ಕೆ ಬಂದ ಸತ್ಯಮೂರ್ತಿ ಮತ್ತೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಮತ್ತೆ ಸರ್ಕಾರ ಅವರನ್ನು ಸೆರೆಮನೆಗೆ ತಳ್ಳಿತು. ಇದು ೧೯೩೨ರಲ್ಲಿ. ೧೯೪೦ರಲ್ಲಿ ಗಾಂಧೀಜಿ ಸತ್ಯಾಗ್ರಹ ಮಾಡಿದಾಗ ಸತ್ಯಮೂರ್ತಿ ಅವರ ಜೊತೆಗೂಡಿದರು. ಸೆರೆಮನೆಗೆ ಹೋದರು. ೧೯೪೧ರಲ್ಲಿ ಸೆರೆಮನೆಯಿಂದ ಬಿಡುಗಡೆಯಾಯಿತು. ಮೂರನೆಯ ವರ್ಷವೇ ಗಾಂಧೀಜಿಯ ನಾಯಕತ್ವದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ “ಭಾರತ ಬಿಟ್ಟು ಹೊರಡಿ!” ಹೋರಾಟ ಪ್ರಾರಂಭವಾಯಿತು. ಸತ್ಯಮೂರ್ತಿ ಹೋರಾಟಕ್ಕೆ ಸೇರಿದರು. ಸರ್ಕಾರ ಮತ್ತೆ ಅವರನ್ನು ಸೆರೆಮನೆಗೆ ಕಳುಹಿಸಿತು.

ಒಂದೊಂದು ಸಲ ಸೆರೆಮನೆಗೆ ಹೋದಾಗಲೂ ಅವರ ಆರೋಗ್ಯ ಕೆಡುತ್ತಿತ್ತು. ಆದರೂ ಅವರು ಸೆರೆಮನೆಗೆ ಹೋಗಲು ಹಿಂಜರಿಯಲಿಲ್ಲ.

೧೯೪೨ರಲ್ಲಿನ ಸೆರೆಮನೆ ವಾಸದಿಂದ ಸತ್ಯಮೂರ್ತಿ ಮನೆಗೆ ಹಿಂತಿರುಗಲಿಲ್ಲ. ಹಲವು ವರ್ಷಗಳಿಂದಲೇ ಹದಗೆಡುತ್ತಿದ್ದ ಅವರ ದೇಹಸ್ಥಿತಿ ಇನ್ನೂ ಕೆಟ್ಟಿತು. ದೇಶ ಸ್ವತಂತ್ರವಾಗಬೇಕು ಎಂಬುದಕ್ಕಾಗಿ ಅವರು ತಮ್ಮ ದೇಹಾರೋಗ್ಯವನ್ನೂ ಲೆಕ್ಕಿಸದೆ ದೇಶಸೇವೆಯಲ್ಲೇ ನಿರತರಾಗಿದ್ದರು. ದೇಹಸ್ಥಿತಿ ಕಳವಳಕ್ಕೆ ಎಡೆಕೊಟ್ಟಾಗ ಸರಕಾರ ಅವರನ್ನು ಬಿಡುಗಡೆ ಮಾಡಿತು. ಆದರೂ ಕಾಯಿಲೆಯ ತೀವ್ರತೆಯ ಕಾರಣದಿಂದ ಅವರನ್ನು ಮದರಾಸಿನ ಜನರಲ್ ಆಸ್ಪತ್ರೆಗೆ ಸೇರಿಸಿದರು. ದೇಶ ಸ್ವತಂತ್ರವಾಗುವುದು ನಿಶ್ಚಯ ಎಂದು ಅವರ ಮನಸ್ಸಿಗೆ ಬಂದಿತ್ತು. ದೇಶದ ಸ್ವಾತಂತ್ರ್ಯವನ್ನೇ ಕನಸಿನಲ್ಲಿ ಕಂಡು ಅದನ್ನು ನನಸಾಗಿಸಲು ಪಾಡುಪಟ್ಟ ಅವರು ೧೯೪೩ನೆಯ ಮಾರ್ಚ್‌ತಿಂಗಳಲ್ಲಿ ತಮ್ಮ ೫೯ನೆಯ ವಯಸ್ಸಿನಲ್ಲಿ ಕಾಲವಾದರು.

ಸ್ವಾರ್ಥವಿಲ್ಲದ ಶಿಸ್ತಿನ ಸೇವೆ

ಸತ್ಯಮೂರ್ತಿಯವರು ದೇಶಕ್ಕೆ ಮಾಡಿದ ಸೇವೆ ಬಹು ಮುಖವಾಗಿದುದು. ವಿದ್ಯಾಕ್ಷೇತ್ರದಲ್ಲಿ ಅವರ ಆಸಕ್ತಿಯನ್ನು ಆಗಲೇ ವಿವರಿಸಿದೆ. ೧೯೨೯ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಸ್ಥಾಪನೆಯಾಗಲು ಶ್ರಮಿಸಿದವರಲ್ಲಿ ಅವರೊಬ್ಬರು. ಕೇಂದ್ರ ಶಾಸನ ಸಭೆಯ ಸದಸ್ಯರಾಗಿ ಬಿಳಿಯರ ಸರ್ಕಾರದ ಅನ್ಯಾಯಗಳನ್ನು ಧೈರ್ಯವಾಗಿ ಬಯಲಿಗೆಳೆದರು. ದೇಶದ ಸ್ವಾತಂತ್ರ್ಯಕ್ಕಾಗಿ ಜನ ಹೋರಾಡಬೇಕೆಂಬ ಸಂದೇಶವನ್ನು ತಮಿಳುನಾಡಿನ ಮೂಲೆ ಮೂಲೆಗೆ ಒಯ್ದರು. “ಕಾಂಗ್ರೆಸ್‌ಏನು ಮಹಾ?” ಎಂದು ವಿದೇಶಿ ಸರ್ಕಾರ ತಿರಸ್ಕಾರದಿಂದ ಇದ್ದಾಗ, ಕಾಂಗ್ರೆಸಿಗೆ ಚುನಾವಣೆಗಳಲ್ಲಿ ಅದ್ಭುತ ಜಯವಾಗಲು ಕಾರಣರಾದವರಲ್ಲಿ ಅವರೊಬ್ಬರು. ಮದರಾಸು ಪ್ರಾಂತದಲ್ಲಿ ಅವರು ತಾವೇ ಆದಷ್ಟು ಪ್ರದೇಶಗಳಿಗೆ ಭೇಟಿಕೊಟ್ಟು ನೂರಾರು ಸಭೆಗಳಲ್ಲಿ ಕಾಂಗ್ರೆಸಿನ ಸಂದೇಶವನ್ನು ಸಾರಿದರು. ಅವರು ಗ್ರಾಮಾಫೋನ್ ರಿಕಾರ್ಡ್‌‌ಗಳನ್ನು ಬಳಸಿದ ರೀತಿ ಅವರ ಪಕ್ಷದವರನ್ನೇ ವಿಸ್ಮಯಗೊಳಿಸಿತು. ಇಂಗ್ಲೆಂಡಿಗೆ ಹೋಗಿ, ಇಂಗ್ಲೀಷರೆ ಬೆರಗಾಗುವಂತೆ ಸ್ವಚ್ಛವಾದ ಸಮರ್ಥವಾದ ಇಂಗ್ಲಿಷ್‌ಭಾಷೆಯಲ್ಲಿ ಭಾರತಕ್ಕೆ ಇಂಗ್ಲೀಷರ ಆಡಳಿತದಿಂದ ಬಿಡುಗಡೆ ದೊರೆಯಬೇಕೆಂಬ ಕೇಳಿಕೆಯನ್ನು ಸಾರಿದರು.

ಸತ್ಯಮೂರ್ತಿ ಪೂರ್ಣ ಸ್ವರಾಜ್ಯವನ್ನು ಆಶಿಸಿದರು. ಮುಸ್ಲಿಮರಿಗೆ ಬೇರೆಯಾಗಿ ಪಾಕಿಸ್ತಾನ್ ಕೊಡುವ ವಿಷಯವನ್ನು ಅವರು ಬಲವಾಗಿ ವಿರೋಧಿಸಿದರು.

ಬಹು ದೊಡ್ಡ ಪದವಿಗಳನ್ನು ಕೂಡ ಬಹು ಸಾಮರ್ಥ್ಯದಿಂದ ನಿರ್ವಹಿಸಬಲ್ಲವರಾಗಿದ್ದರು ಸತ್ಯಮೂರ್ತಿ. ಹಾಗೆಯೇ ಪದವಿಗಳನ್ನು ಬಿಟ್ಟುಬಿಡಲೂ ಹಿಂಜರಿಯುತ್ತಿರಲಿಲ್ಲ. ೧೯೩೯ರ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಮದರಾಸು ಪ್ರಾಂತದಲ್ಲಿ ಆಸಾಧಾರಣ ಜಯವಾಗಲು ಸತ್ಯಮೂರ್ತಿಯವರು ಬಹುಮಟ್ಟಿಗೆ ಕಾರಣರಾದರು. ಕಾಂಗ್ರೆಸ್‌ಪಕ್ಷ ಸರಕಾರವನ್ನು ರಚಿಸಿದಾಗ ಅವರನ್ನೆ ಮುಖ್ಯಮಂತ್ರಿಗಳನ್ನಾಗಿ ಆರಿಸಲಾಗುವುದು ಎಂದು ಅವರೂ ಇತರರೂ ನಿರೀಕ್ಷಿಸಿದ್ದರು. ಮುಖ್ಯಮಂತ್ರಿಯಾಗಲು ಎಲ್ಲ ರೀತಿಯಲ್ಲೂ ಅವರು ಯೋಗ್ಯರೂ ಆಗಿದ್ದರು. ಆದರೆ ಪಕ್ಷ ಬೇರೆಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿತು. ಸತ್ಯಮೂರ್ತಿಯವರು ಪಕ್ಷವನ್ನು ಬಿಡಲಿಲ್ಲ. ಅದನ್ನು ಟೀಕಿಸಲಿಲ್ಲ. ತಾವು ಸಾಯುವವರೆಗೆ ಕಾಂಗ್ರೆಸ್‌ಪಕ್ಷಕ್ಕಾಗಿ ದುಡಿದರು.

"ಸ್ವಾತಂತ್ರ್ಯದ ಸಂದೇಶ"