ಪರೀಕ್ಷೆ ಮುಗಿದು ಬೇಸಿಗೆ ರಜ ಬಂತು ಎಂದರೆ ಹಲವರಿಗೆ ಓದಲು ಕಾದಂಬರಿ ಬೇಕು. ಅದರಲ್ಲಿಯೂ ಒಬ್ಬೊಬ್ಬರಿಗೆ ಸಾಮಾಜಿಕ ಕಾದಂಬರಿಯಾದರೆ, ಮತ್ತೊಬ್ಬರಿಗೆ ಪತ್ತೇದಾರಿ ಕಾದಂಬರಿ, ಅಷ್ಟೇ ಅಲ್ಲ, ಒಬ್ಬೊಬ್ಬರ ಪ್ರೀತಿಯ ಕಾದಂಬರಿಕಾರರೂ ಒಬ್ಬೊಬ್ಬರು. ಒಬ್ಬ ಓದುಗರಿಗೆ ಒಬ್ಬ ಕಾದಂಬರಿಕಾರರ ಕಾದಂಬರಿ ಬೇಕಾದರೆ, ಮತ್ತೊಬ್ಬರಿಗೆ ಇನ್ನೊಬ್ಬರ ಕಾದಂಬರಿ.

ಕೆಲವರಿಗೆ ಕಾದಂಬರಿ ಬೇಡ, ಸಣ್ಣ ಕತೆಗಳು ಬೇಕು

ಶಾಲೆಯಲ್ಲಿ ನಾಟಕ ಆಡಬೇಕು, ನಾಟಕಗಳ ಪುಸ್ತಕಗಳು ಬೇಕು. ಅರ್ಧ ಗಂಟೆ, ಒಂದು ಗಂಟೆ ಎರಡು ಗಂಟೆ  – ನಮ್ಮ ಕಾರ್ಯಕ್ರಮದಲ್ಲಿ ನಾಟಕಕ್ಕೆ ಎಷ್ಟು ಕಾಲಾವಕಾಶ  ಇದ್ದರೆ ಅದಕ್ಕೆ ಸರಿಯಾದ ಗಾತ್ರದ ನಾಟಕದ ಪುಸ್ತಕ ಬೇಕು. ಹಾಸ್ಯ ನಾಟಕ, ಸಾಮಾಜಿಕ ನಾಟಕ, ಗಂಭೀರ ನಾಟಕ – ಒಂದೊಂದು ಸಂಘದವರಿಗೆ ಒಂದೊಂದು ಬಗೆಯ ನಾಟಕ. ನಮ್ಮಲ್ಲಿ ಪಾತ್ರವಹಿಸುವವರು ಎಷ್ಟು ಜನ, ಯಾವ ಬಗೆಯ ಪಾತ್ರಗಳನ್ನು ವಹಿಸಬಲ್ಲವರು, ಹೆಂಗಸರ ಪಾತ್ರಗಳನ್ನು ಮಾಡುವವರು ಎಷ್ಟು ಜನ – ಇದನ್ನೆಲ್ಲ ನೋಡಿಕೊಂಡು ನಾಟಕಗಳನ್ನು ಆರಿಸಬೇಕು. ಹತ್ತಾರು ನಾಟಕದ ಪುಸ್ತಕಗಳು ಬೇಕು.

ಕ್ರಿಕೆಟ್, ಪುಟ್ ಬಾಲ್, ಹಾಕಿ – ಆಟಗಳನ್ನು ಕುರಿತು. ಕೆಲವರಿಗೆ ಆಸಕ್ತಿ. ಸಂಗೀತ, ಹೊಲಿಗೆ  ಇಂತಹವುಗಳಲ್ಲಿ ಕೆಲವರಿಗೆ ಆಸಕ್ತಿ. ಆಯಾ ವಿಷಯಗಳನ್ನು ಕುರಿತು ಅವರವರಿಗೆ ಪುಸ್ತಕಗಳು ಬೇಕು.

ಇಷ್ಟು ಮಾತ್ರ ಅಲ್ಲ. ಓದಿನಲ್ಲಿ ನಮಗೆ ಯಾವುದೋ ವಿಷಯ ಅರ್ಥವಾಗದೆ ಹೋದರೆ, ಅಥವಾ ಇನ್ನೂ ತಿಳಿದುಕೊಳ್ಳಬೇಕು ಎಂದು ಆಸೆಯಾದರೆ ನಮಗೆ ಸಹಾಯವಾಗುವ ಪುಸ್ತಕಗಳು ಬೇಕು. ಎಳೆ ವಯಸ್ಸಿನ ವಿದ್ಯಾರ್ಥಿಗಳಿಗೆ ಅವರಿಗೆ ಅರ್ಥವಾಗುವಂತೆ ತಿಳಿಸಿ ಹೇಳುವ ಪುಸ್ತಕಗಳು ಬೇಕು. ಮೇಲಿನ ತರಗತಿಗಳಲ್ಲಿ ಓದುವವರಿಗೆ, ಅವರಿಗೆ ಸ್ಪಷ್ಟವಾಗುವಂತೆ ಹೇಳುವ ಪುಸ್ತಕಗಳು ಬೇಕು. ಆಗಲೇ ಬಹಳ ಓದಿದವರಿಗೂ ಪುಸ್ತಕಗಳು ಬೇಕು.

ವಿಜ್ಞಾನ, ಚರಿತ್ರೆ, ವ್ಯವಸಾಯ, ಎಂಜಿನಿಯರಿಂಗ್, ಸಾಹಿತ್ಯ, ಕಾನೂನು – ತಾವು ವಿಷಯದಲ್ಲೇ ಆಗಲಿ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಪಡೆದಿರುವ ಜ್ಞಾನವನ್ನೆಲ್ಲಾ ನಮ್ಮ ಊರಿನಲ್ಲಿ ಕುಳಿತು ಕರಗತ ಮಾಡಿಕೊಳ್ಳುವುದು ಗ್ರಂಥಾಲಯಗಳಿಂದ.

ಎಷ್ಟು ಮುಖ್ಯ ಅಲ್ಲವೆ ಗ್ರಂಥಾಲಯಗಳು?

ವರ್ಗೀಕರಣ

ಆದರೆ, ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳಿರುತ್ತವೆ. ಎಷ್ಟೋ ಗ್ರಂಥಾಲಯಗಳಲ್ಲಿ ಒಂದು ಲಕ್ಷಕ್ಕೂ ಮೀರಿ ಪುಸ್ತಕಗಳಿವೆ. ನಮಗೆ ಬೇಕಾದ ಪುಸ್ತಕಕ್ಕಾಗಿ ಪ್ರತಿ ಬಾರಿಯೂ ಎಲ್ಲ ಪುಸ್ತಕಗಳನ್ನೂ ಹುಡುಕಬೇಕಾದರೆ ಎಷ್ಟು ಕಷ್ಟ!

ಇದು ತಪ್ಪಬೇಕಾದರೆ ಪುಸ್ತಕಗಳನ್ನು ಬೇರೆ ಬೇರೆ ರೀತಿಗಳಲ್ಲಿ ಜೋಡಿಸಿಡಬೇಕು. ಸಾಹಿತ್ಯ, ಭಾಷೆ, ಚರಿತ್ರೆ, ಭೌತವಿಜ್ಞಾನ, ಗಣಿತ, ಅರ್ಥಶಾಸ್ತ್ರ, ವ್ಯವಸಾಯ, ಎಂಜಿನಿಯರಿಂಗ್ ಹೀಗೆ. ಇದಕ್ಕೆ ’ವರ್ಗೀಕರಣ’ ಎಂದು ಹೆಸರು.

ಆದರೆ ಇಷ್ಟೇ ಸಾಲದು,  ಅಲ್ಲವೆ? ಸಾಹಿತ್ಯದ ಪುಸ್ತಕಗಳೇ ಸಾವಿರಾರು ಇರುತ್ತವೆ  – ಇವನ್ನು ಕಾವ್ಯ, ಕಾದಂಬರಿ, ಸಣ್ಣ ಕತೆ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ – ಈ ರೀತಿ ಮತ್ತೆ ವಿಭಾಗ ಮಾಡಿ ಜೋಡಿಸಬೇಕು.

ಇಷ್ಟೂ ಸಾಲದು

ಕಾವ್ಯದಲ್ಲಿ ಹಲವು ವಿಧ – ಮಹಾಕಾವ್ಯ, ಭಾವಗೀತೆ ಕಥನ, ಕವನಗಳು ಹೀಗೆ. ಒಬ್ಬರೇ ಬರೆದ ಕವನಗಳು, ಹಲವರು ಬರೆದ ಕವನಗಳ ಸಂಕಲನಗಳು ಇರುತ್ತವೆ. ಅಲ್ಲದೆ ಪ್ರಾಚೀನ ಕಾವ್ಯಗಳು, ಮಧ್ಯಕಾಲದ ಕಾವ್ಯಗಳು, ಆಧುನಿಕ ಕಾವ್ಯಗಳು. ಜೊತೆಗೆ ಬೇರೆ ಬೇರೆ ಭಾಷೆಗಳಿಂದ ನಮ್ಮ ಭಾಷೆಗೆ ಅನುವಾದವಾಗಿರುವ ಕಾವ್ಯಗಳು. ಕಾದಂಬರಿಯಲ್ಲಿ – ಸಾಮಾಜಿಕ ಕಾದಂಬರಿ, ಐತಿಹಾಸಿಕ ಕಾದಂಬರಿ, ಪತ್ತೇದಾರಿ ಕಾದಂಬರಿ, ಪ್ರಾದೇಶಿಕ ಕಾದಂಬರಿ ಹೀಗೆ ವಿಂಗಡಿಸಬಹುದು. ಬೇರೆ ಭಾಷೆಗಳಿಂದ ಅನುವಾದವಾಗಿ ಬಂದ ಕಾದಂಬರಿಗಳಿರುತ್ತವೆ. ಕಾವ್ಯಗಳ  ವಿಭಾಗ ಅಥವಾ ಕಾದಂಬರಿಯ ವಿಭಾಗ ಗ್ರಂಥಾಲಯದ ಯಾವ ವಿಭಾಗದಲ್ಲೇ ಆಗಲಿ – ಈ ಒಳ ವರ್ಗೀಕರಣದ  ಜೊತೆಗೆ ಬರೆದವರ ಹೆಸರಿನ ಪ್ರಾರಂಭದ ಅಕ್ಷರದ ಕ್ರಮದಲ್ಲಿ ಪುಸ್ತಕಗಳನ್ನೂ ಜೋಡಿಸಿಟ್ಟರೆ ಹುಡುಕುವವರಿಗೆ ಇನ್ನೂ ಅನುಕೂಲ.

ಪುಸ್ತಕಗಳ ವರ್ಗೀಕರಣ ಎಷ್ಟು ಮುಖ್ಯ. ಅಲ್ಲವೆ?

ನಿರ್ವಹಣೆ

ಒಂದೊಂದು ಗ್ರಂಥಾಲಯದಲ್ಲಿ ಅಲ್ಲಿನ ಅಧಿಕಾರಿಗಳೇ ಪುಸ್ತಕಗಳನ್ನು ವರ್ಗಿಕರಣ ಮಾಡುವುದು ಹೇಗೆ ಎಂದು ಕಲಿತುಕೊಳ್ಳಬೇಕಾದರೆ ಎಷ್ಟು ಕಷ್ಟ? ಭೌತವಿಜ್ಞಾನದಂತೆ ಗಣಿತ ವಿಜ್ಞಾನದಂತೆ ಗ್ರಂಥಾಲಯಗಳಲ್ಲಿ ಪುಸ್ತಕಗಳ ವರ್ಗೀಕರಣವೂ ಒಂದು ವಿಜ್ಞಾನ, ಗ್ರಂಥಾಲಯದಲ್ಲಿ ಪುಸ್ತಕಗಳನ್ನು ವರ್ಗೀಕರಣ ಮಾಡಿಟ್ಟರೆ ಸಾಲದು. ಪ್ರತಿ ಪುಸ್ತಕದ ದಾಖಲೆ ಬೇಕು. ಒಂದು ಪುಸ್ತಕ ಕಳೆದುಹೋದರೆ ಅದರ ಬೆಲೆ ಎಷ್ಟು ತಿಳಿಯಬೇಕು. ವಿಪರೀತ ಚಳಿ ಇರುವ ಕಡೆ ಪುಸ್ತಕಗಳ ಹಾಳೆಗಳು, ರಟ್ಟೇ ಹರಿದು ಬರುತ್ತವೆ. ಬಿಸಿಲಿರುವ ಕಡೆ ಧೂಳೂ ಹೆಚ್ಚು. ಪುಸ್ತಕಗಳನ್ನು ಸರಿಯಾಗಿ, ವೈಜ್ಞಾನಿಕವಾಗಿ ರಕ್ಷಿಸಬೇಕು.

ಒಂದು ಒಳ್ಳೆಯ ಗ್ರಂಥಾಲಯ ಅಕ್ಷರಶಃ ಅಮೂಲ್ಯ. ಯಾವ ಒಳ್ಳೆಯ ಗ್ರಂಥಾಲಯಕ್ಕಾದರೂ ಹೋದಾಗ  ನಾವು ಕಾಣುವ ದೃಶ್ಯ ಏನು? ಚಿಕ್ಕ ಮಕ್ಕಳು ಬಣ್ಣ ಬಣ್ಣದ ಚಿತ್ರಗಳಿರುವ ಕಥೆಯ ಪುಸ್ತಕಗಳನ್ನು ಓದುತ್ತ ಕುಳಿತಿರುತ್ತಾರೆ. ಅವರಿಂದ ಪ್ರಾರಂಭಿಸಿ ಬಹು ವಯಸ್ಸಾದ ವೃದ್ಧರವರೆಗೆ ಎಷ್ಟು ಬಗೆಯ ಜನ ಎಷ್ಟು ಬಗೆಯ ಪುಸ್ತಕಗಳನ್ನು ಓದುತ್ತಿರುತ್ತಾರೆ! ಗಂಡಸರು, ಹೆಂಗಸರು, ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಉಚ್ಛ ತರಗತಿಗಳ ವಿದ್ಯಾರ್ಥಿಗಳು, ಸ್ಪರ್ಧೆಯ ಪರೀಕ್ಷೆಗಳಿಗೆ ಕುಳಿತುಕೊಳ್ಳುವವರು, ಎಂಜಿನಿಯರರು, ಉಪಾಧ್ಯಾಯರು, ಕಛೇರಿಗಳಲ್ಲಿ  ಕೆಲಸ ಮಾಡುವವರು – ಎಲ್ಲ ತಮ ತಮಗೆ ಬೇಕಾದ ಪುಸ್ತಕಗಳನ್ನು ಅಲ್ಲಿಯೇ ಕುಳಿತು ಓದುತ್ತಾರೆ, ಇಲ್ಲವೇ ಮನೆಗೆ ತೆಗೆದುಕೊಂಡು ಹೋಗಿ ಓದುತ್ತಾರೆ. ಪ್ರತಿಯೊಬ್ಬರೂ ತಮಗೆ ಬೇಕಾದ ಪುಸ್ತಕಗಳನ್ನೂ ಹಣ ಕೊಟ್ಟು ಕೊಳ್ಳಬೇಕಾಗಿದ್ದರೆ ಸಾಧ್ಯವಿತ್ತೆ?

ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಗ್ರಂಥಾಲಯಕ್ಕಾಗಿ ಕಟ್ಟಡವನ್ನು ಕಟ್ಟುವುದು, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಪುಸ್ತಕಗಳನ್ನು ಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅಥವಾ ಅದಕ್ಕಿಂತ ಮುಖ್ಯ ಪುಸ್ತಕಗಳನ್ನು ಸರಿಯಾಗಿ ವರ್ಗೀಕರಣ ಮಾಡಿ, ರಕ್ಷಿಸಿ, ಗ್ರಂಥಾಲಯಗಳನ್ನು ಸರಿಯಾಗಿ ನಿರ್ವಹಿಸುವುದು, ಇದಿಲ್ಲದಿದ್ದರೆ ಎಲ್ಲ ವ್ಯರ್ಥ.

ಈ ಕ್ಷೇತ್ರಕ್ಕೆ ಗಮನಕೊಟ್ಟು ಬಹು ಶ್ರೇಷ್ಠ ಕೆಲಸ ಮಾಡಿದವರು ಎಸ್.ಆರ್. ರಂಗನಾಥನ್. ಭಾರತದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಶಿಕ್ಷಣ ಕೊಡಲು ಪ್ರಯತ್ನ ಮಾಡಿದವರು ಇಬ್ಬರು ಪಾಶ್ಚಾತ್ಯರು – ಬವೋರ್ಡನ್ ಎಂಬಾತ ಒಬ್ಬ, ಡಿಕಿನ್ ಸನ್ ಎಂಬಾತ ಇನ್ನೊಬ್ಬ. ಈ ಕ್ಷೇತ್ರದಲ್ಲಿ ಮೊಟ್ಟ ಮೊದಲು ಶ್ರದ್ಧೆಯಿಂದ ಕೆಲಸ ಮಾಡಿದ ಭಾರತೀಯರು ಎಸ್.ಆರ್. ರಂಗನಾಥನ್.

ಗ್ರಂಥಾಲಯಗಳಿಗೆ ಸೇವೆ

ರಂಗನಾಥನ್ ತಾವು ಗ್ರಂಥಾಲಯ ಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿದುದು ಮಾತ್ರವಲ್ಲ, ಭಾರತದಲ್ಲಿ ಗ್ರಂಥಾಲಯಗಳಿಂದ ಜನಕ್ಕೆ ಉಪಯೋಗವಾಗಲು ಹೊಸ ಹೊಸ ರೀತಿಗಳನ್ನು ಯೋಚಿಸಿದರು. ಇವುಗಳಲ್ಲಿ ಪುಸ್ತಕದ ವರ್ಗೀಕರಣಕ್ಕೆ ದ್ವಿಬಿಂದು ಪದ್ಧತಿ ಎಂಬುದನ್ನು ರೂಢಿಗೆ ತಂದದ್ದು ಒಂದು ಮುಖ್ಯ ಸಾಧನೆ.

ವಿದ್ಯಾರ್ಥಿಯಂತೆ ಗಮನಿಸುತ್ತಾ ಕುಳಿತುಕೊಳ್ಳುತ್ತಿದ್ದರು

ರಂಗನಾಥನ್ ಅವರು ಮಾಡಿದ ಮತ್ತೊಂದು ದೊಡ್ಡ ಸೇವೆ ಎಂದರೆ ಗ್ರಂಥಾಲಯಗಳನ್ನು ನೋಡಿಕೊಳ್ಳುವವರಿಗೆ ಶಿಕ್ಷಣವನ್ನು ಕೊಟ್ಟಿದ್ದು. ನೂರಾರು ಮಂದಿಗೆ ಅವರು ಶಿಕ್ಷಣ ಕೊಟ್ಟಿದ್ದು ಮಾತ್ರವಲ್ಲ, ಅಂಥವರಿಗೆ ಶಿಕ್ಷಣ ಕೊಡುವಾಗ ಅವರು ತರಗತಿಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು. ವಿದ್ಯಾರ್ಥಿಯಂತೆ ವಿದ್ಯಾರ್ಥಿಗಳೊಡನೆ ಹಿಂದಿನ ಬೆಂಚಿನಲ್ಲಿ ಕುಳಿತು ಶಿಕ್ಷಕರು ಪಾಠ ಹೇಳುವ ರೀತಿಯನ್ನು ಗಮನಿಸುತ್ತಿದ್ದರು. ಮಾತನ್ನು ಗಮನವಿಟ್ಟು ಕೇಳುತ್ತಿದ್ದರು. ಅಂತಹ ವಿದ್ವಾಂಸರೆದುರಿಗೆ ಪಾಠ ಹೇಳಲು ಶಿಕ್ಷಕರಿಗೆ ಭಯ. ಆದರೂ ಅವರು ಧೈರ್ಯ ಕೊಡುತ್ತಿದ್ದರು. ಪಾಠ ಹೇಳುವಾಗ ಮಾಡಿದ ತಪ್ಪುಗಳನ್ನು ಗುರುತು ಮಾಡಿಕೊಂಡು, ಪಾಠ ಮುಗಿದ ನಂತರ ’ಇಂತಹ ಕಡೆ ಈ ತಪ್ಪಾಯಿತು. ಈ ವಿಷಯಗಳನ್ನು ಚೆನ್ನಾಗಿ ಹೇಳಿದಿರಿ’ ಎಂದು ವಿಮರ್ಶೆ ಮಾಡಿ ಬೆನ್ನು ತಟ್ಟಿ, ಮಾರ್ಗದರ್ಶನ ಮಾಡುತ್ತಿದ್ದರು.

ಬಾಲ್ಯ

ರಂಗನಾಥನ್ ಅವರ ತಂದೆ ರಾಮತೀರ್ಥ ಅಯ್ಯರ್, ಇವರು ಮೊದಲು ತಂಜಾವೂರು ಜಿಲ್ಲೆಯ ನನ್ನಿಲಾಮ್ ತಾಲ್ಲೂಕಿನ ಉಭಯ ವೇದಾಂತಪುರಂನಲ್ಲಿ ಇದ್ದರು.  ಇವರ ತಾಯಿ ಬಹಳ ಸರಳ, ಮೃದು ಸ್ವಭಾವದವರು. ಅವರ ಹೆಸರು ಸೀತಾಲಕ್ಷ್ಮಿ.

ತಂದೆ ತಾಯಿಯರಿಬ್ಬರೂ ಧರ್ಮದಲ್ಲಿ ಶ್ರದ್ಧೆ ಇದ್ದವರು, ಸುಸಂಸ್ಕೃತರು. ಮದರಾಸಿನ ಹತ್ತಿರದ ಶಿಯಾಳಿ ಗ್ರಾಮದಲ್ಲಿ ೧೮೯೨ರ ಆಗಸ್ಟ್ ೯ ರಂದು ರಂಗನಾಥನ್ ಹುಟ್ಟಿದರು. ತಂದೆ ರಾಮತೀರ್ಥ ಅಯ್ಯರ್ ಅವರಿಗೆ ಒಟ್ಟು ಮೂರು ಗಂಡು ಮಕ್ಕಳು. ಒಂದು ಹೆಣ್ಣು ಮಗು.

ತಂದೆ ತಮಗಿದ್ದ ಸ್ವಲ್ಪ ಗದ್ದೆಯಲ್ಲಿ ಭತ್ತ ಬೆಳೆದು ಜೀವನ ಸಾಗಿಸುತ್ತಿದ್ದರು. ಅಷ್ಟೇನೂ ಶ್ರೀಮಂತರಲ್ಲ, ಬಡವರೂ ಅಲ್ಲ. ಸುಸಂಸ್ಕೃತರಾದ ಅವರು ರಾಮಾಯಣ ಪ್ರವಚನವನ್ನು ಮಾಡುತ್ತಿದ್ದರು. ತಂದೆ ತಾಯಿಯರ ಧರ್ಮ, ಸಂಸ್ಕೃತಿಗಳು ಮಗು ರಂಗನಾಥನ್ ಮೇಲೆ ಬಹಳ ಪರಿಣಾಮ ಬೀರಿದವು. ರಂಗನಾಥನ್ ಅವರ ತಾಯಿಯ ತಂದೆ ಸುಬ್ಬ ಅಯ್ಯರ್ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ತಂದೆ ತಾಯಿಯರು ಕೆಲವು ದಿನಗಳ ನಂತರ ಶಿಯಾಳಿಯಲ್ಲಿ ಅವರಿಗೆ ತಮ್ಮ ಮಗನನ್ನು ಒಪ್ಪಿಸಿ ’ಓದಿಸಿ ಆತನನ್ನು ವಿದ್ಯಾವಂತರನ್ನಾಗಿ ಮಾಡುವುದು ನಿಮ್ಮ ಭಾರ’ ಎಂದು ಅವರ ಮಡಿಲಲ್ಲಿ ಹಾಕಿದರು.

ವಿದ್ಯಾಭ್ಯಾಸ

೧೮೯೭ರಲ್ಲಿ ವಿಜಯ ದಶಮಿಯಂದು ರಂಗನಾಥನ್ ರ ಅಕ್ಷರಾಭ್ಯಾಸ  ಪ್ರಾರಂಭವಾಯಿತು.

ತರಗತಿಯ ಉಪಾಧ್ಯಾಯರಾದ ಆರ್. ಅನಂತರಾಮ ಅಯ್ಯರ್, ಸಂಸ್ಕೃತ ಉಪಾಧ್ಯಾಯರಾದ ತಿರುವೆಂಕಟಾಚಾರಿಯರ್ ಈತನ ಪ್ರತಿಭೆ ಪ್ರಕಾಶಿಸಲು ಕಾರಣರಾದರು. ಚಿಕ್ಕಂದಿನಿಂದಲೂ ಚುರುಕಾದ ಹುಡುಗ, ತಂಜಾವೂರು ಜಿಲ್ಲೆಯನ್ನೆಲ್ಲ ಸುತ್ತಿ ದೇವಸ್ಥಾನಗಳನ್ನು ಸಂದರ್ಶಿಸುವುದು, ರಂಗನಾಥನ್ ರ ತಂದೆ ೧೮೭೮ರ ಜನವರಿಯಲ್ಲಿ ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ನಿಧನ ಹೊಂದಿದರು. ಅವುಗಳ  ವಿಷಯ ತಿಳಿದು ಕೊಳ್ಳುವುದು ಎಂದರೆ ಅವನಿಗೆ ಬಹು ಆಸಕ್ತಿ.

ಶಿಯಾಳಿಯ ಎನ್. ಎಂ. ಹಿಂದೂ ಮಾಧ್ಯಮಿಕ ಶಾಲೆಯಲ್ಲಿ ಹುಡುಗನ ವಿದ್ಯಾಭ್ಯಾಸ ಆಯಿತು. ಅಲ್ಲಿ ಆತನು ತರಗತಿಗೆ ಮೊದಲನೆಯವನಾದ. ಆಗ ಸಂಸ್ಕೃತವನ್ನೂ  ಕಲಿತ. ದೊಡ್ಡವನಾದ ಅನಂತರವೂ ಅದು ಅಚ್ಚುಮೆಚ್ಚಾಯಿತು. ೧೯೦೭-೧೯೮೯ ಅನಾರೋಗ್ಯದ ಕಾಲ. ಆಗ ಆತನ ಸ್ನೇಹಿತನೂ ಹಾಗೂ ಆತನ ಕ್ಲಾಸಿನವನೇ ಆದ ವೆಂಕಟರಮಣನ್ ಎಂಬ ಹುಡುಗ ಬಂದು ಮನೆಯಲ್ಲಿ ಪಾಠವನ್ನು ಓದುತ್ತಿದ್ದ. ಅದನ್ನು ಕೇಳಿಕೊಂಡು ಹೋಗಿ ರಂಗನಾಥನ್ ಪರೀಕ್ಷೆಗೆ ಕುಳಿತ. ಆತನಿಗೆ ಜ್ಞಾಪಕ ಶಕ್ತಿಯು ತುಂಬಾ ಇದ್ದುದರಿಂದ ಬೇಗ ಅರ್ಥಮಾಡಿಕೊಂಡು ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ.

ಮದರಾಸಿನಲ್ಲಿ ರಂಗನಾಥನ್ ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಗ ಕೆ.ಎಸ್. ಸುಬ್ರಹ್ಮಣ್ಯ ಅಯ್ಯರ್ ಎಂಬುವರು ಉಪಾಧ್ಯಾಯರಾಗಿದ್ದರು ಅವರು ದೊಡ್ಡ ವಿದ್ವಾಂಸರು. ಅಲ್ಲದೆ ತುಂಬಾ ಕಟ್ಟುನಿಟ್ಟಿನ ಜೀವನ ನಡೆಸುತ್ತಿದ್ದರು. ಅವರೊಡನೆ ರಂಗನಾಥನ್ ನಿಕಟ ಸಂಬಂಧವನ್ನು ಹೊಂದಿದ್ದ. ಆಗಾಗ್ಗೆ ಅವರು ಚರ್ಚೆಯಲ್ಲಿ ತೊಡಗುತ್ತಿದ್ದರು ಒಮ್ಮೆ ಚರ್ಚೆಯಲ್ಲಿ ತೊಡಗಿದ್ದಾಗ ಸುಬ್ರಹ್ಮಣ್ಯ ಅಯ್ಯರ್ ಅವರು ರಂಗನಾಥನ್ ಗೆ ಮದರ್ (ತಾಯಿ) ಎಂಬ ಪುಸ್ತಕವನ್ನು ಕೊಟ್ಟರು. ರಂಗನಾಥನ್ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ನಿಧಾನವಾಗಿ ಓದಿದ. ಅದರಲ್ಲಿ ಅರವಿಂದರ ಜೀವನದ ಚಿತ್ರಣ ಇತ್ತು. ಆ ಪುಸ್ತಕ ಅವನ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರಿತು. ಅದೇ ಅವನ ಜೀವನದ ಅಡಿಗಲ್ಲಾಗಿ, ಅವರನ್ನು ತುಂಬಾ ಶಿಸ್ತಿನ ಸ್ವಭಾವವನ್ನು ಬೆಳೆಸಿಕೊಳ್ಳಲು, ಶಾಂತ ಸರಳ ಮನೋಭಾವವನ್ನು ಬೆಳೆಸಿಕೊಂಡು ಜೀವನುದ್ದಕ್ಕೂ ಒಂದೇ ಸಮನೆ ನಡೆಯಲು ಕಾರಣವಾಯಿತು ಎಂದು ಹೇಳಬಹುದು. ಹುಡುಗ ಜೀವನದಲ್ಲಿ ತಾಳ್ಮೆಯನ್ನು ಕಲಿತ.

೧೯೦೯ರಲ್ಲಿ ಹುಡುಗ ರಂಗನಾಥನ್ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಗೆ ಸೇರಿದ. ಅನಾರೋಗ್ಯದಲ್ಲಿ ಹಳ್ಳಿಯಿಂದ ಮದರಾಸಿಗೆ, ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಕಾಲೇಜಿನ ಪ್ರಿನ್ಸಿಪಾಲ್ ಡಾಕ್ಟರ್ ಸ್ಕಿನ್ನರ್ ಆತನ ಅಂಕಗಳನ್ನು ನೋಡಿ ಕಾಲೇಜಿಗೆ ಸೇರಿಸಿಕೊಳ್ಳಲು ಅನುಮತಿ ನೀಡಿದರು. ೧೯೧೧ರಲ್ಲಿ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಮೇಲಿನ ಸ್ಥಾನ ಪಡೆದು ಉತ್ತೀರ್ಣನಾದ. ೧೯೧೩ರಲ್ಲಿ ಬಿ.ಎ. ಮೊದಲ ದರ್ಜೆಯಲ್ಲಿ ಉತ್ತೀರ್ಣನಾದ. ೧೯೧೩ರ ಜೂನ್ ನಲ್ಲಿ ಗಣಿತ ಎಂ.ಎ. ಗೆ ಸೇರಿದ. ಗುರುಗಳ ಪಾಠಗಳಿಗಿಂತ ಅವರುಗಳ ಸಂಪರ್ಕದಿಂದಲೇ ಹೆಚ್ಚಿನ ಜ್ಞಾನ ಗಳಿಸಿಕೊಂಡ. ೧೯೧೬ರಲ್ಲಿ ಎಂ.ಎ. ತರಗತಿಯಲ್ಲಿಯೂ ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾದ. ಅನಂತರ ಸಯದ್ ಪೇಟೆಯಲ್ಲಿ ಅಧ್ಯಾಪಕ ಶಾಸ್ತ್ರದಲ್ಲಿ ಎಲ್.ಟಿ. ಡಿಗ್ರಿ ಮಾಡಲು ಸೇರಿದ. ೧೯೧೭ರಲ್ಲಿ ಟ್ರೈನಿಂಗ್ ಮುಗಿಯಿತು. ಅಲ್ಲೂ ಮೊದಲ ವರ್ಗದಲ್ಲಿ ಉತ್ತೀರ್ಣನಾದ.

ಗಣಿತ ಅಧ್ಯಾಪಕರು

ಈಗ ರಂಗನಾಥನ್ ಅಧ್ಯಾಪಕರಾದರು.

೧೯೧೭ರಿಂದ ೧೯೨೦ರವರೆಗೆ ಸರ್ಕಾರಿ ಕಾಲೇಜಿನಲ್ಲಿ ಮತ್ತು ೧೯೨೦ ರಿಂದ ೧೯೨೩ರವರೆಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಾಗಿ ಕೆಲಸ ಮಾಡಿ, ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಕೆಲವರು ತಂಗಳು ಇದ್ದರು. ಕಾಲೇಜಿನಲ್ಲಿ ತಮ್ಮದೇ ರೀತಿಯ ಪಾಠವನ್ನು ಬೋಧಿಸುವ ಕ್ರಮವನ್ನು ಅನುಸರಿಸಿದರು. ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವುದರಿಂದಲೇ ಆರಂಭಿಸಿದರು. ಕೆಲವು ದಿನಗಳಾದ ಮೇಲೆ ಹುಡುಗರಿಗೆ ಇವರು ಪಾಠ  ಹೇಳುವ ಕ್ರಮ ಸ್ವಲ್ಪ ಹೆದರಿಕೆ ತಂದಿತು. ಏಕೆಂದರೆ ಪರೀಕ್ಷೆಗೆ ಕೆಲವೇ ತಿಂಗಳುಗಳಿವೆ. ಆರಿಸಿರುವ ಪಾಠಗಳಲ್ಲಿ ಉಪಾಧ್ಯಾಯರು ಇನ್ನೂ ಏನನ್ನೂ ಮುಟ್ಟಿಯೇ ಇಲ್ಲ.

ವಿದ್ಯಾರ್ಥಿಗಳಿಗೆ ತಾವು ಉತ್ತೀರ್ಣರಾಗುತ್ತೇವೆಯೋ ಇಲ್ಲವೋ ಎಂಬ ಅನುಮಾನ ಉಂಟಾಗಿ ಪ್ರಿನ್ಸಿಪಾಲ್ ಅವರಲ್ಲಿ ಹೋಗಿ ದೂರನ್ನಿತ್ತರು. ಪ್ರಿನ್ಸಿಪಾಲರಿಗೆ  ರಂಗನಾಥನ್ ಬುದ್ಧಿವಂತರು ಎಂಬುದು ತಿಳಿಯದೇ ಇಲ್ಲ. ಆದರೂ ಅವರನ್ನು ಕರೆದು, ’ಸರಿಯಾಗಿ ಪಾಠಗಳನ್ನು ಮುಗಿಸಿ’ ಎಂದು ಹೇಳಿದರು. ಆದರೂ ರಂಗನಾಥನ್ ತಮ್ಮದೇ ರೀತಿಯಲ್ಲಿ ಪಾಠ ಮಾಡಿಕೊಂಡು ಸ್ವಲ್ಪಸ್ವಲ್ಪವಾಗಿ ಎಲ್ಲವನ್ನೂ ಕೂಡಿಸಿ ಪಾಠ ಮುಗಿಸಿದರು. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬಹಳ ಚೆನ್ನಾಗಿ ಉತ್ತರಿಸಿದರು. ಫಲಿತಾಂಶವು ಬಹಳ ಚೆನ್ನಾಗಿಯೇ ಬಂದಿತು.

ಗ್ರಂಥಾಲಯ ಪಾಲಕರ ಶಿಕ್ಷಣ ತರಗತಿಯಲ್ಲಿ ರಂಗನಾಥನ್.

ಗ್ರಂಥಾಲಯದ ಭಂಡಾರಿ

ಅನಂತರ ಮದರಾಸು ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ  ಪ್ರಥಮ ಭಂಡಾರಿಯಾಗಿ ೧೯೨೪ರಲ್ಲಿ ನಿಯಮಿಸಲ್ಪಟ್ಟರು. ಮದರಾಸಿನಲ್ಲಿ ಗ್ರಂಥಾಲಯದಲ್ಲಿ ಗ್ರಂಥ ಭಂಡಾರಿಯಾಗಿ ಕೆಲಸ ಮಾಡುತ್ತಿದ್ದಾಗ ಉಪಕುಲಪತಿಗಳು ಮತ್ತು ಇತರ ಅಧಿಕಾರಿಗಳನ್ನು ನೋಡಲು ಹೋದವರಲ್ಲ. ತಮ್ಮ ರೀತಿಯಲ್ಲಿ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದರು. ಅವರು ಯಾರಿಗೂ ತಲೆ ಬಾಗುತ್ತಿರಲಿಲ್ಲ. ಇದರಿಂದ ಒಬ್ಬಿಬ್ಬರು

ಮೇಲಧಿಕಾರಿಗಳಿಗೆ ಅಸಮಾಧಾನವಾಯಿತು.

ರಂಗನಾಥನ್ ಕಳುಹಿಸಿದ ಸಲಹೆಗಳನ್ನು ಪರಿಗಣಿಸದೆ ಹಾಗೆಯೇ ವರ್ಷಗಟ್ಟಲೆ ಇಟ್ಟುಬಿಡುತ್ತಿದ್ದರು. ಆದರೂ ರಂಗನಾಥನ್ ಚಿಂತಿಸದೆ ತಮ್ಮದೇ ಆದ ಗೌರವ ರೀತಿಯಲ್ಲಿ ನಡೆದುಕೊಂಡು ಹೋದರು. ಯಾವ ಯೋಚನೆಗೂ ಅವರು ಯಾರ ಹತ್ತಿರವೂ ಹೋದವರಲ್ಲ. ಮಾಡುವ ಪ್ರಯತ್ನ ಮಾಡುತ್ತಿದ್ದರು. ತಮ್ಮ ಕರ್ತವ್ಯವನ್ನು ನಿ‌ಷ್ಠೆಯಿಂದ ಮಾಡುತ್ತಿದ್ದರೇ ಹೊರತು ಯಾವ ಕೆಲಸಕ್ಕಾಗಿಯೂ ದೊಡ್ಡವರನ್ನು ಹುಡುಕಿಕೊಂಡು ಹೋಗುವ ಅಭ್ಯಾಸವನ್ನು ಇಟ್ಟುಕೊಂಡಿರಲಿಲ್ಲ. ಆದರೆ ಅವರ ಪ್ರತಿಭೆಯನ್ನು ಗುರುತಿಸಿಯೇ ಅನೇಕರು ಅವರ ಬಳಿಗೆ ಬಂದು ಸಲಹೆಗಳನ್ನು ಪಡೆಯಲಾರಂಭಿಸಿದರು.

೧೯೨೪ರಲ್ಲಿ ರಂಗನಾಥನ್ ಲಂಡನ್ನಿನ ಬ್ರಿಟಿಷ್ ವಸ್ತು ಸಂಗ್ರಹಾಲಯದ ಗ್ರಂಥ ಭಂಡಾರದಲ್ಲಿ ಹೆಚ್ಚಿನ ತರಬೇತಿಗಾಗಿ  ಇಂಗ್ಲೆಂಡಿಗೆ ಕಳುಹಿಸಲ್ಪಟ್ಟರು. ಅಲ್ಲಿನ ಎಲ್ಲ ಕಾಲೇಜು, ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡಿ ಸ್ವಯಂ ಅನುಭವ ಪಡೆದರು. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂ ಲೈಬ್ರರಿ ಪ್ರಪಂಚದ ಪ್ರಸಿದ್ಧ ಗ್ರಂಥಾಲಯಗಳಲ್ಲಿ ಒಂದು. ರಂಗನಾಥನ್  ಅವರು ಅಲ್ಲಿ ಪುಸ್ತಕಗಳನ್ನು ವರ್ಗೀಕರಣ ಮಾಡಿದ ರೀತಿ, ಗ್ರಂಥಾಲಯವನ್ನು ನಡೆಸುತ್ತಿದ್ದ ರೀತಿ, ಓದುಗರಿಗೆ ಸಿಕ್ಕುತ್ತಿದ್ದ ಸೌಲಭ್ಯಗಳು ಎಲ್ಲವನ್ನೂ ಅಧ್ಯಯನ ಮಾಡಿದರು.

ಸೇವೆಯ ಹಲವು ಮುಖಗಳು

೧೯೨೮ರಲ್ಲಿ  ಮದರಾಸಿನ ಗ್ರಂಥಾಲಯ ಸಂಘದ ಸ್ಥಾಪನೆ ಆಯಿತು.  ಅದೇ ವರ್ಷ ಡಿಸೆಂಬರ್ ತಿಂಗಳು ದಕ್ಷಿಣ ಭಾರತ ಶಿಕ್ಷಕರ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನದ ಬಗ್ಗೆ ‍ಭಾಷಣ ಮಾಡಿದರು. ಅದು ಬಹಳ ಪರಿಣಾಮಕಾರಿಯಾಗಿ ೧೯೨೯ರಲ್ಲಿ ವಿಶ್ವವಿದ್ಯಾನಿಲಯದವರು ನಾಲ್ಕಾರು ತಿಂಗಳ ಅವಧಿಯಲ್ಲಿ ಶಿಕ್ಷಣ ಕೊಡಲಾರಂಭಿಸಿದರು. ೧೯೩೧ ರಿಂದ ೧೯೩೭ರವರೆಗೆ ಮದರಾಸು ವಿಶ್ವವಿದ್ಯಾನಿಲಯವು ಇದರ ಜವಾಬ್ದಾರಿಯನ್ನು ವಹಿಸಿಕೊಂಡಿತು. ಅನಂತರ ಕಾಲಕ್ರಮೇಣ ಒಂದು ವರ್ಷದ ಡಿಪ್ಲೊಮಾ ತರಗತಿ ತೆರೆದರು. ಈಗ ಅದು ಬ್ಯಾಚಲರ್ ಪದವಿ ಆಗಿ ಪರಿವರ್ತನೆಯಾಗಿದೆ.

‘೧೯೪೫ರಲ್ಲಿ ಇವರು ಗ್ರಂಥ ಭಂಡಾರಿಯ ವೃತ್ತಿಯಿಂದ ನಿವೃತ್ತರಾದರು. ನಿವೃತ್ತರಾದ ರಂಗನಾಥನ್ ಅವರ ಪ್ರತಿಭೆಯನ್ನು ಗುರುತಿಸಿದ ಕಾಶಿ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಅವರು ಆಧುನಿಕ ರೀತಿಯಲ್ಲಿ ಗ್ರಂಥಾಲಯವನ್ನು ಪುನರ್ ಆಧುನಿಕ ರೀತಿಯಲ್ಲಿ ಗ್ರಂಥಾಲಯವನ್ನು ಪುನರ್ ವ್ಯವಸ್ಥೆ ಮಾಡಲು ಅವರನ್ನು ಆಹ್ವಾನಿಸಿದರು. ರಂಗನಾಥನ್ ಅಲ್ಲಿ ೧೯೪೯ರ ಗ್ರಂಥಪಾಲರ ಡಿಪ್ಲೋಮಾ ತರಗತಿಯನ್ನು ತೆರೆದರು. ಹದಿನೆಂಟು ತಿಂಗಳುಗಳಲ್ಲಿ ಒಂದು ಲಕ್ಷ ಗ್ರಂಥಗಳನ್ನು ವರ್ಗೀಕರಿಸಿದರು.

ಅನಂತರ ದೆಹಲಿಯ ಉಪಕುಲಪತಿಗಳಾದ ಸರ್ ಆರಿಸ್ ಗ್ವಯರ್ ರಿಂದ ಕರೆ ಬಂತು. ಅವರು ತಮ್ಮ ವಿದ್ಯಾಪೀಠದ ಗ್ರಂಥಾಲಯವನ್ನು ನವೀನ ರೀತಿಯಲ್ಲಿ ವ್ಯವಸ್ಥೆ ಮಾಡಬೇಕೆಂದು ಕೇಳಿಕೊಂಡರು. ಅಲ್ಲಿಗೆ ಗ್ರಂಥಾಲಯ ಶಾಸ್ತ್ರದ ಪ್ರಾಧ್ಯಾಪಕರೆಂದೂ ವಿಶ್ವವಿದ್ಯಾಲಯದ ಗ್ರಂಥಾಲಯದ ಸಲಹೆಗಾರರೆಂದೂ ೧೯೪೭ರಿಂದ ೧೯೫೪ರವರೆಗೆ ನೇಮಿಸಲ್ಪಟ್ಟರು. ಅಲ್ಲಿ ಎರಡು ವರ್ಷದ  ತರಬೇತಿಯು ವರ್ಗವನ್ನು ಪ್ರಾರಂಭಿಸಿದರು. ಈ ರೀತಿಯ ಶಿಕ್ಷಣ ದೆಹಲಿ ಮತ್ತು ಕಾಶಿಗಳಲ್ಲಿ ಮಾತ್ರ ಈಗಲೇ ಇದೆ. ಇದರಿಂದ ಇವರ ಖ್ಯಾತಿ ಇನ್ನೂ ಹೆಚ್ಚಿತು.

೧೯೬೧ರಲ್ಲಿ  ಬೆಂಗಳೂರಿನಲ್ಲಿ ಭಾರತೀಯ ’ಸಂಖ್ಯಾಶಾಸ್ತ್ರ ಸಂಸ್ಥೆ’ಯ ಆಶ್ರಯದಲ್ಲಿ ನಡೆಯುತ್ತಿದ್ದ ಸಂಶೋಧನೆ ತರಬೇತಿ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಆಗಾಗ ಇಂಗ್ಲೆಂಡು, ಅಮೆರಿಕ, ಫ್ರಾನ್ಸ್ ಗಳಿಗೆ ಗೌರವ ಪ್ರಾಧ್ಯಾಪಕರೆಂದು ಆಹ್ವಾನಿಸಲ್ಪಡುತ್ತಿದ್ದರು. ಆ ದೇಶದಲ್ಲಿ ಗ್ರಂಥಾಲಯಗಳ ನಿರ್ವಹಣೆಯನ್ನು ಕುರಿತು ಉಪನ್ಯಾಸಗಳನ್ನು ನೀಡಿ ಬಂದರು.

೧೯೩೦ರಿಂದ ಸಾರ್ವಜನಿಕ ಗ್ರಂಥ ಭಂಡಾರಗಳು ಹಳ್ಳಿಯಿಂದ ದೆಹಲಿಯವರೆಗೂ ಹಬ್ಬುವಂತೆ ಮಾಡಲು ಬಹುವಾಗಿ ದುಡಿದರು. ಬಾಲ್ಯದಿಂದಲೂ ಬರಹದಲ್ಲಿ ಬಹಳ ಆಸಕ್ತಿಯನ್ನೂ ವಹಿಸುತ್ತಿದ್ದರು. ಜೀವನದಲ್ಲಿ ಕಂಡುಂಡ ಅನುಭವಗಳನ್ನೂ ಹೊಸ ವಿಚಾರಗಳನ್ನೂ ನವೀನ ಪ್ರಯೋಗಗಳನ್ನೂ ಬರೆದಿಟ್ಟರು. ಚಿಕ್ಕಂದಿನಿಂದಲೂ ಸಹ ಓದು ಬರಹಗಳಲ್ಲಿ ಆಸಕ್ತಿ ಇದ್ದುದರಿಂದಲೇ ಅವರು ಐವತ್ತೆರಡು ಮಹತ್ವಪೂರ್ಣ ಗ್ರಂಥಗಳನ್ನು ರಚಿಸಲು ಸಾಧ್ಯವಾಯಿತು. ವರ್ಗೀಕರಣ, ಗ್ರಂಥಾಲಯ ಆಡಳಿತ, ಸಂದರ್ಭ ಸೇವೆ, ಗ್ರಂಥಗಳ ಆಯ್ಕೆ ಈ ನಾಲ್ಕು ಗ್ರಂಥಗಳು ಬಹಳ ಮುಖ್ಯವಾದುವು.

ಅವರ ಮೊದಲ ಗ್ರಂಥ ’ಮಾದರಿಯ ಕಾನೂನು’ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಗ್ರಂಥಾಲಯವನ್ನು ಸ್ಥಾಪಿಸುವುದೂ ಒಂದು ಕರ್ತವ್ಯ ಎಂಬುದನ್ನು ಎತ್ತಿ ತೋರಿಸುತ್ತದೆ.

’ಗ್ರಂಥಾಲಯ ಬೆಳವಣಿಗೆಯ ಯೋಜನೆ’ ಎಂಬುದು ಮತ್ತೊಂದು ಗ್ರಂಥ. ಇದನ್ನು ಬರೆದ ಮುಖ್ಯ ಉದ್ದೇಶ ದೇಶದಲ್ಲೆಲ್ಲಾ ಗ್ರಂಥ ಭಂಡಾರಗಳನ್ನು ಸ್ಥಾಪಿಸಿ ಬೆಳೆಸುವ ಅಗತ್ಯವನ್ನು ವಿವರಿಸುವುದು.

ದ್ವಿಬಿಂದು ಪದ್ಧತಿ

ಗ್ರಂಥಾಲಯದಲ್ಲಿ ಪುಸ್ತಕಗಳನ್ನು ವರ್ಗೀಕರಣ ಮಾಡುವುದು ಎಷ್ಟು ಮುಖ್ಯ ಎಂದು ಆಗಲೇ ನೋಡಿದೆವಲ್ಲವೆ?  ಈ ವರ್ಗೀಕರಣದಲ್ಲಿ ಅನೇಕ ರೀತಿಗಳಿವೆ. ರಂಗನಾಥನ್ ಅವರು ಲಂಡನ್ನಿನಲ್ಲಿ ಸೇಯರ್ಸ್ ಅವರ ಶಿಷ್ಯತ್ವದಲ್ಲಿ ಡ್ಯೂಯಿಯ ದಶಮಾಂಶ ಪದ್ಧತಿ, ಬ್ರಾನರ ವಿಷಯ ಪದ್ಧತಿ,  ಕಟರರ ವ್ಯಾಪಕ ಪದ್ಧತಿ, ಲೈಬ್ರರಿ ಆಫ್ ಕಾಂಗ್ರೆಸ್ ಗಳನ್ನು ಅಭ್ಯಾಸ ಮಾಡಿದರು. ಇವುಗಳಲ್ಲಿ ದೋಷಗಳನ್ನು ಕಂಡರಲ್ಲದೆ, ಭಾರತೀಯ ಭಂಡಾರ ವರ್ಗೀಕರಣಕ್ಕೆ ಉಪಯೋಗವಾಗಲಾರವೆಂದು ನಿರ್ಧರಿಸಿದರು. ವರ್ಗೀಕರಣ ಶಾಸ್ತ್ರದ ಉದ್ಧಾಮ ಪಂಡಿತರಾದ ಬರ್ವಿಕ್ ಸೇಯರ್ಸ್ ಅವರ ನೆರವಿನಿಂದ ದ್ವಿಬಿಂದು ವರ್ಗೀಕರಣ ಪದ್ದತಿಯನ್ನು ರೂಪಿಸಿದರು.

ಇದನ್ನು ಮದರಾಸು ವಿಶ್ವ ವಿದ್ಯಾನಿಲಯದ ಗ್ರಂಥಾಲಯದಲ್ಲಿ ಉಪಯೋಗಿಸಿ ಪು‌ಸ್ತಕ ಭಂಡಾರವನ್ನು ವರ್ಗೀಕರಿಸಿದರು. ಆಗ ಅನೇಕ ಅಡ್ಡಿ ಆತಂಕಗಳು ಬಂದವು. ಏಳೆಂಟು ವರ್ಷಗಳು ಅದಕ್ಕೆ ಪರಿಹಾರ ಹುಡುಕುತ್ತ, ದ್ವಿಬಿಂದು ಪದ್ಧತಿಯನ್ನು ಪುಸ್ತಕ ಬರೆದು ವಿವರಿಸಿದರು. ಅನಂತರ ಅದಕ್ಕೆ ಜಗತ್ತಿನಾದ್ಯಂತ ಅಗ್ರಸ್ಥಾನ ದೊರಕಿತು. ಇದರ ಸ್ಫೂರ್ತಿಯಿಂದ ಅವರು ಇನ್ನೂ ಕೆಲವು ಗ್ರಂಥಗಳನ್ನು ರಚಿಸಿದರು. ಒಟ್ಟು ಐವತ್ತೆರಡು ಪುಸ್ತಕಗಳನ್ನು ರಚಿಸಿದರು.

ಸೇವೆ – ಮನ್ನಣೆ

೧೯೩೩ರಲ್ಲಿ ಇವರ ಮುಖಂಡತ್ವದಲ್ಲಿ ಭಾರತೀಯ ಗ್ರಂಥಾಲಯ ಸಂಘ ಸ್ಥಾಪನೆ ಆಯಿತು. ಆರೇಳು ವರ್ಷಗಳು ಇದರಲ್ಲಿ ದುಡಿದು ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ಗ್ರಂಥಗಳ ಪ್ರಕಟಣೆಗಳನ್ನು ಮಾಡಿದರು. ಆ ಸಮಯದಲ್ಲಿ ಅಬ್ಗಿಲಾ ಎಂಬ ಒಂದು ಪತ್ರಿಕೆಯನ್ನು ಸಹ ಹೊರಡಿಸಿದರು. ಇದು ಗ್ರಂಥಾಲಯದ ವಿಜ್ಞಾನದ ಸಂಶೋಧನಾ ಲೇಖನಗಳಿಗೆ ಮೀಸಲಾಗಿತ್ತು. ಇವುಗಳಲ್ಲೆಲ್ಲಾ ರಂಗನಾಥನ್ ರ ದೇಶಪ್ರೇಮ, ರಾಷ್ಟ್ರಭಿವೃದ್ಧಿಯ ಬಯಕೆಗಳನ್ನು ಕಾಣಬಹುದು. ಸಾರ್ವಜನಿಕ ಗ್ರಂಥಾಲಯ ಕಾನೂನನ್ನು ಜಾರಿಗೆ ತರುವುದರಲ್ಲಿ ಅನೇಕ ರಾಜ್ಯಗಳ ಸರ್ಕಾರಗಳ ಅಧಿಕಾರಿಗಳು ಪ್ರಮುಖರು ಎಲ್ಲರನ್ನೂ ಭೇಟಿ ಮಾಡಿ ಮನ ಒಲಿಸಿದ್ದಾರೆ. ಬಂಗಾಳ, ಮೈಸೂರು, ಕೇರಳ, ಉತ್ತರ ಪ್ರದೇಶ, ಮಧ್ಯ ಪ್ರದೇಶಗಳಿಗೆ ಅನ್ವಯಿಸುವ ಕಾನೂನುಗಳನ್ನು ಸಿದ್ಧಪಡಿಸಿಕೊಟ್ಟರು.

ಭಾರತದ ’ವಿಶ್ವವಿದ್ಯಾಲಯ ಧನ ಸಹಾಯದ ಆಯೋಗ’ ದ ಗ್ರಂಥಾಲಯ ಸಮಿತಿಯ ಅಧ್ಯಕ್ಷರಾಗಿ ಅಪಾರ ಸೇವೆ ಮಾಡಿದರು. ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಗ್ರಂಥಾಲಯಗಳಿಗಾಗಿ ಕಟ್ಟಡಗಳನ್ನು ಕಟ್ಟಲು ಮತ್ತು ಪುಸ್ತಕಗಳನ್ನು ಕೊಳ್ಳಲು ಅಪಾರ ಧನ ಸಹಾಯ ದೊರೆಯುವಂತೆ ಮಾಡಿದರು.

೧೯೪೯ರಲ್ಲಿ ಬ್ರಿಟಿಷ್ ಕೌನ್ಸಿಲ್ ನ ಆಮಂತ್ರಣದ ಮೇರೆಗೆ ಇಂಗ್ಲೆಂಡಿಗೆ ಹೋಗಿದ್ದರು. ೧೯೫೮-೫೯ರಲ್ಲಿ ಜಗತ್ತಿನ ಬೇರೆ ಕಡೆ ಸುತ್ತಿ ಗ್ರಂಥಾಲಯ ಶಾಸ್ತ್ರದ ಬಗ್ಗೆ ಭಾಷಣಗಳನ್ನು ಮಾಡಿದರು. ೧೯೮ರಲ್ಲಿ ದೆಹಲಿ ವಿಶ್ವವಿದ್ಯಾಲಯವು ಇವರಿಗೆ ’ಡಾಕ್ಟರೇಟ್’ ಪದವಿಯನ್ನು ನೀಡಿ ಗೌರವಿಸಿತು. ೧೯೫೭ರಲ್ಲಿ ಕೇಂದ್ರ ಸರ್ಕಾರವು ಪದ್ಮಶ್ರೀ ಬಿರುದನ್ನು ನೀಡಿತು. ೧೯೬೪ರ ಜೂನ್ ೧ ರಂದು ಅಮೇರಿಕೆಯ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಆಫ್ ಲಿಟರೇಚರ್ ಪದವಿಯನ್ನು ಕೊಟ್ಟಿತು. ರಂಗನಾಥನ್ ಅವರಿಗೆ ಜಗತ್ತಿನ ಅನೇಕ ಸಂಘ ಸಂಸ್ಥೆಗಳ ಸಂಪರ್ಕ ಇತ್ತು. ಇವರು ಅಂತರ ರಾಷ್ಟ್ರೀಯ ಗ್ರಂಥ ಸೂಚೀ ಸಭೆಯ ಕಾರ್ಯಕರ್ತರಾಗಿದ್ದರು. ಅಂತರರಾಷ್ಟ್ರೀಯ ಡಾಕ್ಯುಮೆಂಟೇಷನ್ ಸಂಘದ ಗೌರವಾಧ್ಯಕ್ಷ ರಾಗಿದ್ದರು. ಬ್ರಿಟಿಷ್ ಗ್ರಂಥಾಲಯ ಸಂಘದ ಅಜೀವ ಉಪಾಧ್ಯಕ್ಷರಾಗಿದ್ದರು.

ತಮ್ಮ ಇಳಿವಯಸ್ಸಿನಲ್ಲೂ ರಂಗನಾಥನ್ ರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಇವರ ಕೆಲಸದಲ್ಲಿ ಹೊಸ ಯೋಚನೆ, ಹೊಸ ತಿರುವು ಇರುತ್ತಿತ್ತು. ಗ್ರಂಥಾಲಯ ವಿಜ್ಞಾನಕ್ಕಾಗಿ ತಮ್ಮ ತನು, ಮನ, ಧನ ಸಮಯವನ್ನು ಉಪಯೋಗಿಸಿದ ಸಾಧಕ. ಯೋಗಿ, ಆಚಾರ್ಯರು ರಂಗನಾಥನ್ ರು. ರಂಗನಾಥನ್ ರು ಯಾವುದೇ ಸಭೆ, ಭಾಷಣಕ್ಕಾಗಲೀ ಸಮಯಕ್ಕೆ ಸರಿಯಾಗಿ ಹೋಗುತ್ತಿದ್ದರು.   ಪ್ರತಿದಿನವೂ ರಾಮಾಯಣವನ್ನು ಪಾರಾಯಣ ಮಾಡುತ್ತಿದ್ದರು. ಗ್ರಂಥಾಲಯ ವಿಜ್ಞಾನದಲ್ಲಿ ಭಾರತದಲ್ಲಿ ಇವರದೇ ಮೊದಲೆನಯ ಹೆಸರು. ದೇಶ ವಿದೇಶಗಳಲ್ಲಿ ಇವರ ವಿದ್ವತ್ತು ಪಂಡಿತರ ಕುತೂಹಲವನ್ನು ಕೆರಳಿಸಿತು. ಇವರನ್ನು ’ಭಾರತೀಯ ಗ್ರಂಥಾಲಯ ಚಳವಳಿಯ ಪಿತಾಮಹರು ’ ಎಂದು ಅನೇಕರು ಕರೆದಿದ್ದಾರೆ. ರಂಗನಾಥನ್ ರು ಗ್ರಂಥಾಲಯ ಚಳವಳಿಯಲ್ಲಿ ಸುಮಾರು ಅರ್ಧ ಶತಮಾನದಷ್ಟು ಕಾಲ ಕೆಲಸ ಮಾಡಿದರು.

೧೯೬೦ರ ಸುಮಾರಿಗೆ ರಂಗನಾಥನ್ ಅವರು ಬೆಂಗಳೂರಿಗೆ ಬಂದರು.

ಬೆಂಗಳೂರಿಗೆ ಬಂದ ಮೇಲೆ ೧೯೬೫ರ ಕರ್ನಾಟಕದಲ್ಲಿ ಗ್ರಂಥಾಲಯ ಕಾಯಿದೆಯನ್ನು ಜಾರಿಗೆ ತರಲು ಕಾರಣರಾದರು. ೧೯೫೨ರಲ್ಲಿ ಸರ್ಕಾರದ ಗ್ರಂಥಾಲಯ ತರಬೇತಿ ಕೇಂದ್ರ ಸ್ಥಾಪನೆಗೆ ಇವರೇ ಕಾರಣಕರ್ತರು. ’ಕರ್ನಾಟಕದ ಗ್ರಂಥಾಲಯ ಸಂಘ’ ದ ಸ್ಥಾಪನೆಯು ಇವರಿಂದಲೇ ನೆರವೇರಿತು. ಅಲ್ಲದೆ ಅನೇಕ ನಗರ ಗ್ರಂಥಾಲಯಗಳು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಗೆ ಬಂದವು. ಗ್ರಂಥಾಲಯಗಳ ಬಗ್ಗೆ ಅನೇಕ ಸಮ್ಮೇಳನಗಳು ಇವರ ನೇತೃತ್ವದಲ್ಲಿ ನಡೆದವು.

೧೯೭೨ರ ಸೆಪ್ಟೆಂಬರ್ ತಿಂಗಳಿನಲ್ಲಿ ರಂಗನಾಥನ್ ಅವರು ನಿಧನರಾದರು.

ರಂಗನಾಥನ್ ಯಾವ ಕೆಲಸವನ್ನು ಮಾಡಿದರೂ ಶಿಸ್ತಿನಿಂದ, ಒಂದು ಕ್ರಮದಲ್ಲಿ ಮಾಡುವವರು. ಟಿಪ್ಪಣಿಗಳನ್ನು ಗುರುತು ಹಾಕಿಕೊಂಡು ಓಗದೆ ತರಗತಿಯಲ್ಲಾಗಲೀ ವೇದಿಕೆಯ ಮೇಲಾಗಲೀ ಯಾವುದೇ ವಿಷಯದ ಮೇಲೆ ಭಾಷಣ ಮಾಡುವಾಗ ನಿರರ್ಗಳವಾಗಿ ಮಾತಾಡುವ ಶಕ್ತಿ ಅವರಿಗಿತ್ತು. ಎಷ್ಟು ಹೊತ್ತಾದರೂ ನಿರಾಯಾಸವಾಗಿ ಭಾಷಣ ಮಾಡುತ್ತಿದ್ದರು. ಪ್ರಶ್ನೆಗಳನ್ನು ಹುಡುಗರಿಗೇ ಹಾಕಿ ಉತ್ತರ ಪಡೆಯುವ ಪದ್ದತಿ ಇವರದು. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ವಿಧಾನದಲ್ಲಿ ಬೋಧನೆ ಮಾಡುವ ವೈಖರಿ ಇವರಿಗೆ ಹಿಡಿಸುತ್ತಿರಲಿಲ್ಲ. ಅನೇಕ ಗ್ರಂಥ ಭಂಡಾರಿಗಳು ದೂರದಿಂದಲೂ ಹತ್ತಿರದಿಂದಲೂ ಬಂದು ವಾರಗಟ್ಟಲೆ ಕುಳಿತು, ಇವರಲ್ಲಿ ವಿಷಯ ಕುರಿತು ಚರ್ಚೆ ನಡೆಸಿ ಗ್ರಂಥ ವಿಜ್ಞಾನದ ವಿಷಯಗಳನ್ನು ಸಂಗ್ರಹಣೆ ಮಾಡುತ್ತಿದ್ದರು. ಇವರು ಹೇಳಿ ಕೊಡುತ್ತಿದ್ದ ಪಾಠ ಎಲ್ಲರಿಗೂ ಚೆನ್ನಾಗಿ ಅರ್ಥವಾಗುತ್ತಿತ್ತು.  ಅವರ ತರಗತಿಯಲ್ಲಿ ವಿದ್ಯಾರ್ಥಿಗಳು ಗಮನವಿಟ್ಟು ಪಾಠವನ್ನು ಕೇಳಬೇಕು. ಆಗ ಟಿಪ್ಪಣಿಗಳನ್ನು ಬರೆದುಕೊಳ್ಳಬಾರದು. ಟಿಪ್ಪಣಿ ಬರೆದುಕೊಳ್ಳುತ್ತಿದ್ದವರಿಗೆ ನಿಲ್ಲಿಸುವಂತೆ ಹೇಳಿ, ’ಮೊದಲು ಕೇಳಿ ಅರ್ಥ ಮಾಡಿಕೊಳ್ಳಿ. ನಂತರ ಯೋಚಿಸಿ ಅನ್ನುತ್ತಿದ್ದರು. ವಿದ್ಯಾರ್ಥಿಗಳೇ ಉಪಹಾರವನ್ನು ಜ್ಞಾಪಿಸುವವರೆಗೂ ಚರ್ಚೆಯನ್ನು ನಡೆಸುತ್ತಲೇ ಇರುತ್ತಿದ್ದರು. ಚರ್ಚೆ ಮುಗಿಯುವವರೆಗೆ ಆಹಾರದ ಯೋಚನೆಯೇ ಇಲ್ಲ.

ರಂಗನಾಥನ್ ಅವರದು ಶ್ರಮವನ್ನೇ ಲಕ್ಷಿಸದ ಚೇತನ. ಅವರು ದಿನಕ್ಕೆ ಹದಿನಾರು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಅವರು ರಜ ತೆಗೆದುಕೊಂಡದ್ದೇ ಇಲ್ಲ, ಇಡೀ ವರ್ಷದಲ್ಲಿ ಒಂದು ದಿನ ರಜೆ ತೆಗೆದುಕೊಂಡರೆ ಆಶ್ಚರ್ಯ ಎನ್ನುವಂತೆ ದುಡಿಯುತ್ತಿದ್ದರು. ಅವರ ಮೊದಲನೆಯ ಹೆಂಡತಿ ತೀರಿಕೊಂಡ ಮರುದಿನ ಕಛೇರಿಗೆ ಬಂದು ಕೆಲಸ ಮಾಡಿದರು.

ಬೆಳಿಗ್ಗೆ, ಸಂಜೆ ಅಂಚೆ ಬಂತೆಂದರೆ ಅವರಿಗೆ ಕೆಲಸವಿರುತ್ತಿತ್ತು. ಬೇರೆ ಬೇರೆ ದೇಶಗಳಿಂದ, ನಮ್ಮ ದೇಶದ ಬೇರೆ ಬೇರೆ ಭಾಗಗಳಿಂದ ಬಂದ ಪತ್ರಗಳನ್ನು ತೆಗೆದುಕೊಂಡು ಬಂದು ಲೇಖನಗಳನ್ನು ತಿದ್ದುವುದು, ಭಾಷಣಕ್ಕೆ ಬನ್ನಿ ಎಂದು ಕರೆದವರಿಗೆ ಉತ್ತರ ಬರೆಯುವುದು, ಲೇಖನಗಳನ್ನು ಕೇಳಿದವರಿಗೆ ಲೇಖನವನ್ನು ಒದಗಿಸುವುದು – ಅಂತೂ ಬಂದ ಪತ್ರಗಳಿಗೆಲ್ಲ ಮರುದಿನದ ಅಂಚೆಯಲ್ಲೇ ಉತ್ತರ ಹೋಗುವಂತೆ ಮಾಡುತ್ತಿದ್ದುದ್ದು ಅವರ ನಿಷ್ಠೆಯನ್ನೂ ಸಮಯ ಪರಿಪಾಲನೆಯನ್ನೂ ಎತ್ತಿ ತೋರುತ್ತದೆ. ಬೆಳಗಿನಿಂದ ಸಂಜೆಯವರೆಗೆ ಒಂದಲ್ಲ ಒಂದು ರೀತಿಯ ಕೆಲಸದಲ್ಲಿ ನಿರತರಾಗುತ್ತಿದ್ದರು. ಪಾಠ ಮಾಡುವುದು, ಬಂದ ಜನರೊಡನೆ ಚರ್ಚೆ. ಅವರು ಭೌತಿಕವಾಗಿ ಬಳಲಿದರೂ ಮಾನಸಿಕವಾಗಿ ಬಳಲುತ್ತಿರಲಿಲ್ಲ. ಸಮಸ್ಯೆಗಳಿಗೆ ಪರಿಹಾರ ದೊರೆತಂತೆ, ಹೊಳೆದಂತೆ ರಾತ್ರಿಯಲ್ಲೂ ಎದ್ದು ಕುಳಿತು ಗುರುತು ಮಾಡಿಕೊಳ್ಳುತ್ತಿದ್ದರು. ಅದು ಅನಂತರ ಲೇಖನ ರೂಪವನ್ನು ತಾಳುತ್ತಿತ್ತು.

ಸರಳತೆ

ರಂಗನಾಥನ್ ಅವರದು ಬಹು ಸರಳವಾದ ಜೀವನ. ಮದರಾಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಬರಿಯ ಪಾದಗಳಲ್ಲೇ ಓಡಾಡುತ್ತಿದ್ದರು. ಕಾಶಿಗೆ ಹೋದ ನಂತರ ಅಲ್ಲಿನ ಬಿಸಿಲಿನಲ್ಲಿ ಕಾದ ನೆಲದ ಮೇಲೆ ಕಾಲಿಡಲಾರದೆ ಚಪ್ಪಲಿಗಳನ್ನು ಉಪಯೋಗಿಸಲು ಪ್ರಾರಂಭಿಸಿದರು. ಅವರ ಉಡುಪೋ ಬಹಳ ಸರಳ. ಪಂಚೆ, ಅಂಗಿ, ಮಸ್ಲಿನ್ ರುಮಾಲು, ಕುತ್ತಿಗೆಯ ಸುತ್ತ ಒಂದು ಶಲ್ಯ. ಹಲವಾರು ದೇಶಗಳನ್ನು ಸುತ್ತಿ ಬಂದ ನಂತರವೂ ತಮ್ಮ ಸರಳತೆಯನ್ನು ಉಳಿಸಿಕೊಂಡಿದ್ದರು.

ರಂಗನಾಥರು ಸರಳವಾದ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಕೆಲವು ದಿನಗಳು ಒಂದೇ ಹೊತ್ತು ಊಟ ಮಾಡುತ್ತಿದ್ದರು. ಅದನ್ನು ನೋಡಿದರೆ ಊಟಕ್ಕಾಗಿ ಬದುಕಿಲ್ಲ, ಬದುಕಲು ಊಟ ಮಾಡುವೆ ಎಂಬ ಮಾತು ಇವರ ಪಾಲಿಗೆ  ನಿಜವೆನಿಸುತ್ತದೆ. ಕಾಫಿ, ಚಹಾ ಕುಡಿಯುತ್ತಿರಲಿಲ್ಲ. ಸಿಗರೇಟ್  ಸೇದುವುದಾಗಲೀ ಮಾದಕ ಪದಾರ್ಥಗಳನ್ನು ಸೇವಿಸುವ ಚಟವಾಗಲೀ ಇವರಿಗೆ ಇರಲಿಲ್ಲ. ವಿವಿಧ ತರಕಾರಿ,ಹಾಲು, ಹಣ್ಣು ಉಪಯೋಗಿಸುತ್ತಿದ್ದರು. ಎಲೆ ಅಡಿಕೆಯನ್ನೂ ಸಹಾ ಸೇವಿಸುತ್ತಿರಲಿಲ್ಲ. ಕಟ್ಟುನಿಟ್ಟಾದ ಸಸ್ಯಾಹಾರಿ, ೮೨ ವರ್ಷಗಳ ಜೀವನದುದ್ದಕ್ಕೂ ಸರಳ ಜೀವನ ಮಾಡಿ, ಹಣವನ್ನು ಕೂಡಿಡುತ್ತಿದ್ದರು. ಆ ಹಣಕ್ಕೆ ಬ್ಯಾಂಕಿನಲ್ಲಿ ಆ ಹಣವನ್ನೆಲ್ಲಾ ಮದರಾಸು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಶಾರದಾ ರಂಗನಾಥನ್ ರ ಹೆಸರಿನಲ್ಲಿ ಉದಾರವಾಗಿ ದಾನ ನೀಡಿದರು.

ನಿಮ್ಮ ಕ್ಷೇತ್ರದಲ್ಲೇ ನೀವು ಕೆಲಸ ಮಾಡಿ

ಶಿಸ್ತು

ತಾವು ಅಚ್ಚುಕಟ್ಟಾಗಿ ಶಿಸ್ತಿನಿಂದ ಕೆಲಸ ಮಾಡುತ್ತಿದ್ದ ರಂಗನಾಥನ್ ಇತರರಿಂದ ಇದೇ ಬಗೆಯ ಕೆಲಸವನ್ನು ನಿರೀಕ್ಷಿಸುತ್ತಿದ್ದರು. ಈ ಕೆಲಸ ಹೆಚ್ಚು. ಆ ಕೆಲಸ ಕಡಿಮೆ ಎಂಬ ಭಾವನೆ ಏನೂ ಅವರಿಗಿರಲಿಲ್ಲ.

ಒಮ್ಮೆ ಕಛೇರಿಯ ಒಳ ಅಂಗಳವನ್ನು ಪ್ರವೇಶಿಸುತ್ತಿದ್ದಾಗ ಕಾಲನ್ನು ಒರೆಸುವ ನೆಲೆಹಾಸು (ರಗ್ಗು) ಅಸ್ತವ್ಯಸ್ತವಾಗಿ ಬಿದ್ದಿದ್ದುದಲ್ಲದೆ ಧೂಳಿನಿಂದ ತುಂಬಿತ್ತು. ಅದನ್ನು ನೋಡಿದ ರಂಗನಾಥನ್ ರು ಅಲ್ಲಿನ ಜವಾನನ್ನು ಕರೆದು ಅದನ್ನು ಸರಿಯಾಗಿ ಇಡುವಂತೆ ಹೇಳಿದರು. ಆತ ನೇರವಾಗಿ ಹೋದ. ರಂಗನಾಥನ್ ರು ಆತನನ್ನೇ ಗಮನಿಸುತ್ತಾ ನಿಂತರು. ಆತ ಹೊರಗಡೆ ಜಾಡಮಾಲಿಯನ್ನು ಕರೆತರಲು ಹೋದುದು. ಅವರಿಗೆ ಖಚಿತವಾಯಿತು. ಆಗ ತಾವೇ ಅದನ್ನು ಒದರಿ ಸರಿ ಮಾಡಿ ಇಟ್ಟರು. ಆತ ಜಾಡಮಾಲಿಯನ್ನು ಕರೆದು ತಂದಾಗ, ನೆಲೆಹಾಸು ಸರಿಯಾದ ಸ್ಥಾನದಲ್ಲಿಟ್ಟುದ್ದುದು ಆತನಿಗೆ ಕಂಡಿತು. ಪೆಚ್ಚಾಗಿ ನಿಂತ.

ರಂಗನಾಥನ್ ಅವರಿಗೆ ಹದಿನಾಲ್ಕನೆಯ ವಯಸ್ಸಿಗೇ ಮದುವೆಯಾಯಿತು. ಹೆಂಡತಿ ಬಹು ಸೌಮ್ಯ ಸ್ವಭಾವದವರು. ೧೯೨೮ರಲ್ಲಿ ಆಕೆ ತೀರಿಕೊಂಡರು. ಒಂದು ವರ್ಷದ ನಂತರ ರಂಗನಾಥನ್, ಶಾರದ ಎಂಬಾಕೆಯನ್ನು ಮದುವೆಯಾದರು. ಈಕೆ ಬಹು ಒಳ್ಳೆಯ ಸ್ವಭಾವದವರು. ರಂಗನಾಥನ್ ರ ಕೆಲಸದಲ್ಲಿ ಬಹಳ ನೆರವಾಗುತ್ತಿದ್ದರು.

೧೯೪೫ರ ಒಂದು ದಿನ ಕಾಶಿಯಲ್ಲಿ ಒಂದು ಭಾಷಣವನ್ನು ಏರ್ಪಡಿಸಿದ್ದರು. ಆಗ ರಂಗನಾಥನ್ ರ ಜೊತೆಯಲ್ಲಿ ಅವರ ಶ್ರೀಮತಿಯವರೂ ಬಂದಿದ್ದರು. ಭಾಷಣವಾದ ನಂತರ ಅಲ್ಲಿ ಬಂದಿದ್ದ ಅತಿಥಿಗಳಲ್ಲಿ ಒಬ್ಬರು ರಂಗನಾಥನ್ ಅವರನ್ನು ಕುರಿತು, ’ತಮ್ಮ ಶ್ರೀಮತಿಯವರು ವಿದ್ಯಾವತಿಯೇ? ಎಂದು ಕೇಳಿದರು. ಅದಕ್ಕೆ ಅವರು,’ಹೌದು ಆಕೆ ತನ್ನದೇ ಆದ ರೀತಿಯಲ್ಲಿ ವಿದ್ಯಾವತಿ’ ಎಂದರು. ಯಾವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ?’ ಎಂಬ ಪ್ರಶ್ನೆಗೆ  ಅವರ ಉತ್ತರ ಹೀಗಿತ್ತು: ’ಆಕೆ ಜೀವನದಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅದೇ ಗೃಹಿಣಿಯ ಪರೀಕ್ಷೆ’ ಎಂದು. ಅವರ ಹೆಂಡತಿಗೆ ಇಂಗ್ಲೀಷಾಗಲೀ, ಹಿಂದಿಯಾಗಲೀ ಓದಲು, ಬರೆಯಲು, ಮಾತನಾಡಲು ಬರುತ್ತಿರಲಿಲ್ಲ. ಅವರ ಈ ಉತ್ತರದಲ್ಲಿ ಹಾಸ್ಯದ ಜೊತೆಗೆ ಅಭಿಮಾನ ತುಂಬಿ ತುಳುಕಿದೆ.

ಜಿಪುಣತನವೇ?

ಗ್ರಂಥಾಲಯಗಳು ಬೆಳೆಯಬೇಕು. ಗ್ರಂಥಾಲಯ ವಿಜ್ಞಾನ ಬೆಳೆಯಬೇಕು ಎಂದು ರಂಗನಾಥನ್ ಬಾಳೆಲ್ಲ ದುಡಿದರು. ಇದಕ್ಕಾಗಿ ಅವರು ಎಷ್ಟರಮಟ್ಟಿಗೆ ಮುಡಿಪಾಗಿದ್ದರು ಎಂಬುದನ್ನು, ಅವರಲ್ಲಿ ವಿಚಿತ್ರ ಎಂದು ಕೆಲವರಿಗೆ ತೋರಿದ ಒಂದು ಅಭ್ಯಾಸದಿಂದ ಕಾಣಬಹುದು.

ಭಿಕ್ಷುಕರು ಬಂದು ಭಿಕ್ಷೆ ಕೇಳಿದರೂ ರಂಗನಾಥನ್ ಅವರು ಕೊಡುತ್ತಿರಲಿಲ್ಲ. ಭಿಕ್ಷುಕನು ಭಿಕ್ಷೆಯನ್ನು ಕೇಳಿದಾಗ ಕೊಡಬೇಕೆಂದು ತೋರಿದರೆ, ಅವನಿಗೆ ಎಷ್ಟು ಕೊಡಬೇಕು ಎಂಬುದನ್ನು ಲೆಕ್ಕ ಹಾಕಿಕೊಂಡು ಆ ಹಣವನ್ನು ಬ್ಯಾಂಕಿನಲ್ಲಿ ಇಡುತ್ತಿದ್ದರು. ಅದನ್ನು ಗ್ರಂಥ ವಿಜ್ಞಾನ ಕಾರ್ಯಕ್ರಮಗಳ ಉಪಯೋಗಕ್ಕೆ ಎಂದು ಮೀಸಲಾಗಿ ಇಡುತ್ತಿದ್ದರು. ಅದನ್ನೆಲ್ಲಾ ಒಮ್ಮೆ ಒಟ್ಟುಗೂಡಿಸಿ ಗ್ರಂಥಾಲಯ ವಿಜ್ಞಾನದ ಕೆಲಸಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು  ದಾನವಾಗಿ ಕೊಟ್ಟರು. ಇದು ಹಲವರಿಗೆ ವಿಚಿತ್ರವೆನಿಸಬಹುದು. ಕಾಯಕದಲ್ಲೇ ಕೈಲಾಸ ಎಂಬುದನ್ನು ಅರಿತು ಎಲ್ಲವನ್ನೂ ಈ ಗ್ರಂಥ ವಿಜ್ಞಾನಕ್ಕಾಗಿ ಧಾರೆ ಎರೆಯಲಾರಂಭಿಸಿದರು. ಅವರ ಜೀವನವೆಲ್ಲಾ ಗ್ರಂಥ ವಿಜ್ಞಾನಕ್ಕೇ ಮೀಸಲಾಗಿತ್ತು.

ಸನ್ಯಾಸಿಯಾಗಲೇ?

ರಂಗನಾಥನ್ ಅವರ ಮೇಲೆ ಧಾರ್ಮಿಕ ಸ್ವಭಾವದ ಅವರ  ತಂದೆ ತಾಯಿಗಳ ಪ್ರಭಾವ ಹೆಚ್ಚಾಗಿತ್ತು ಎಂದು ಹೇಳಿದೆ. ಲೋಕ ವ್ಯವಹಾರದಲ್ಲಿ ಜನರಲ್ಲಿ ಅವರಿಗೆ ಕಾಣುತ್ತಿದ್ದ ಸ್ವಾರ್ಥ, ಸಣ್ಣತನ, ಮೋಸ, ಅಸೂಯೆ ಇವನ್ನು ಕಂಡು ಬೇಸರವಾಗುತ್ತಿತ್ತು. ಅವರ ಯೌವನದಲ್ಲಿ ನಡೆದ ಒಂದು ಘಟನೆ ಕುತೂಹಲಕಾರಿಯಾದದ್ದು.

ಅವರ ಕೆಲಸ ನಿರಂತರವಾಗಿ ನಡೆಯುತ್ತಿತ್ತು. ದಿನಗಳುರುಳಿದಂತೆ ಆತ್ಮಕ್ಕೆ ಏನೂ ಸಂತೋಷ ಸಿಕ್ಕದಂತಾಗಿ, ಇದರಿಂದ ಮೋಕ್ಷ ದೊರೆಯಲಾರದು ಎನ್ನಿಸಿತು. ಸನ್ಯಾಸತ್ವ ಸೀಕರಿಸಿ ಮನಸ್ಸಿಗೆ ಶಾಂತಿ ತಂದುಕೊಳ್ಳಬೇಕು ಎಂಬ ಇಚ್ಛೆಯಾಯಿತು. ಆಗ ಅವರು ಪುರೋಹಿತ ಸ್ವಾಮಿ ಎಂಬುವರನ್ನು ಪ್ರಾರ್ಥಿಸಿದರು. ಅವರು ರಂಗನಾಥರಿಗೆ ಹೀಗೆ ಹೇಳಿದರು : ’ನೀವು ಸನ್ಯಾಸತ್ವ ಸ್ವೀಕರಿಸಿ ನಿಮ್ಮ ಕ್ಷೇತ್ರದಿಂದ ಬಂದರೂ ನಿಮ್ಮ ಮನಸ್ಸು ಆ ವಿಷಯಗಳ ಬಗ್ಗೆ ಯೋಚನೆ ಮಾಡುತ್ತಲೇ ಇರುತ್ತದೆ. ಆಗಲೂ ಮನಸ್ಸು ಒಂದು ನೆಮ್ಮದಿಗೆ ಬರುವುದಿಲ್ಲ.

ಆತ್ಮ ಸಂತೋಷ ಹೊಂದಿ ಸಾಕ್ಷಾತ್ಕಾರ ಹೊಂದುವುದು ಎಂಬುದು ಸುಳ್ಳು. ನಿಮ್ಮ ಕ್ಷೇತ್ರದಲ್ಲೇ ನೀವು ಕೆಲಸ ಮಾಡಿ. ಅದರಿಂದಲೇ ಆತ್ಮಾನಂದ ದೊರಕಿ ಅದರಿಂದ ನೀವು ಮೋಕ್ಷ ಪಡೆಯಬಹುದು’ ರಂಗನಾಥನ್ ಅವರು ಬೇರೆ ಮಾರ್ಗವಿಲ್ಲದೆ ಮತ್ತೆ ತಮ್ಮ ಕ್ಷೇತ್ರಕ್ಕೆ ಹಿಂದಿರುಗಿ ತಮ್ಮ ದೇಹವನ್ನೇ ಗಂಧದ ಕೊರಡಿನಂತೆ ತೇಯ್ದು ಗ್ರಂಥಾಲಯಕ್ಕಾಗಿ ದುಡಿಯಲಾರಂಭಿಸಿದರು.

ಯಾರಾದರೂ ಗ್ರಂಥಾಲಯದ ಅಧಿಕಾರಿಯಾಗಿರಬಹುದು, ಅದಕ್ಕೆ ವಿಶೇಷ ಶಿಕ್ಷಣವೇನೂ ಬೇಕಿಲ್ಲ ಎಂಬ ಭಾವನೆ ಜನರಿಗಿದ್ದ ಕಾಲದಲ್ಲಿ ಗ್ರಂಥಾಲಯ ನಿರ್ವಹಣೆಯ ಕೆಲಸವನ್ನು ವಹಿಸಿಕೊಂಡರು ರಂಗನಾಥನ್. ಗ್ರಂಥಾಲಯ ವಿಜ್ಞಾನದಲ್ಲಿ ಭಾರತಕ್ಕೆ ಅಂತರರಾಷ್ಟ್ರೀಯ ಕೀರ್ತಿಯನ್ನು ತಂದುಕೊಟ್ಟರು.

ಅವರ ಇಡೀ ಬಾಳು ಸರಸ್ವತಿಗಾಗಿ ಬೆಳಗಿದ ದೀಪವಾಯಿತು.