ಜನನ : ೫-೨-೧೯೩೦ ರಂದು ಶಿವಮೊಗ್ಗದಲ್ಲಿ

ಮನೆತನ : ಹರಿಕಥಾ ವಿದ್ವಾಂಸರ ಮನೆತನ. ತಂದೆ ಹೊಳಿಯಪ್ಪನವರು ಹಾಗೂ ತಾತ ಭೀಮದಾಸರು ಹರಿಕಥಾ ವಿದ್ವಾಂಸರಾಗಿದ್ದರು.

ಶಿಕ್ಷಣ : ಮೊದಲಿಗೆ ತಾತ ಭೀಮದಾಸರಿಂದ ಶಿಕ್ಷಣ. ಅನಂತರ ಬ್ರಹ್ಮ ವಿದ್ಯಾಶ್ರಮದ ಕಭೀರನಾಥ ಸ್ವಾಮಿಗಳ ಶಿಷ್ಯರಾಗಿದ್ದ ಮುಕುಂದನಾಥ ಸ್ವಾಮಿಗಳ ಶಿಷ್ಯರಾಗಿ ಅವರಿಂದ ಹರಿಕಥಾ ದೀಕ್ಷೆ ಹಾರ್ಮೋನಿಯಂ, ತಬಲಾ, ಖಂಜರಿ, ಮೃದಂಗ ನುಡಿಸುವ ಪರಿಶ್ರಮವಿದೆ.

ಕ್ಷೇತ್ರ ಸಾಧನೆ : ಶಿವಮೊಗ್ಗಾದಲ್ಲಿ ’ಮಹಾಸತಿ ಅನಸೂಯಾ’ ಕಥೆಯೊಂದಿಗೆ ಕೀರ್ತನ ರಂಗ ಪ್ರವೇಶ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾ. ಸ. ಧರಣೀಂದ್ರಯ್ಯ, ವಿದ್ಯಾ ವಾಚಸ್ಪತಿ ವರ್ಧಮಾನ ಶಾಸ್ತ್ರೀ ಹಾಗೂ ಭುಜಬಲ ಶಾಸ್ತ್ರೀ ಮುಂತಾದವರ ಸಂಪರ್ಕ ಹೊಂದಿ ಜೈನಧರ್ಮ ಕಥಾವಲೋಕನ ಮಾಡಿ ’ಜಿನ ಕಥೆ’ಗಳನ್ನು ಮಾಡಿ ತಮ್ಮ ಪ್ರತಿಭೆಯನ್ನು ವಿಸ್ತರಿಸಿಕೊಂಡಿದ್ದಾರೆ. ಕನ್ನಡ ಭಾಷೆ ಮಾತ್ರವಲ್ಲದೆ ಹಿಂದಿ, ಮರಾಠಿ, ತಮಿಳು, ತೆಲುಗು ಭಾಷೆಗಳಲ್ಲೂ ಕಥೆ ಮಾಡುವ ಪರಿಣಿತಿ ಹೊಂದಿದ್ದಾರೆ.  ನಾಟಕ ರಂಗದಲ್ಲೂ ಪರಿಶ್ರಮವಿದೆ.

ಶಂಕರನಾಥರು ದಾವಣಗೆರೆಯಲ್ಲಿ ಶ್ರೀ ದತ್ತಾಶ್ರಮ ಸ್ವಾಮಿ ಧ್ಯಾನಮಂದಿರವೊಂದನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದಾರೆ. ಶಿವಮೊಗ್ಗಾ ಜಿಲ್ಲಾ ಕೀರ್ತನ ಕಲಾ ಪರಿಷತ್ತಿನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಇವರ ಖ್ಯಾತಿ ವ್ಯಾಪಿಸಿವೆ. ಆಕಾಶವಾಣಿಯ ಬಿ. ಹೈ. ಶ್ರೇಣಿ ಕಲಾವಿದರು.

ಪ್ರಶಸ್ತಿ – ಪುರಸ್ಕಾರಗಳು : ಶೃಂಗೇರಿ ಜಗದ್ಗುರುಗಳಿಂದ, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರಿಂದ, ಗಾನವಿಶಾರದ ಡಾ|| ಬಿ. ದೇವೇಂದ್ರಪ್ಪನವರಿಂದ, ವಿಶ್ವಶಾಂತಿ ಆಶ್ರಮದ ವತಿಯಿಂದ ಪ್ರಶಂಸಾ ಪತ್ರಗಳು ದೊರೆತಿವೆ. ಕೀರ್ತನಾಚಾರ್ಯ, ಕೀರ್ತನ ಕೇಸರಿ, ಕೀರ್ತನ ವಿಶಾರದ, ಹರಿಕೀರ್ತನ ದುರಂಧರ, ಹರಿಕಥಾ ಭೂಷಣ, ಸಾಹಿತ್ಯ ಕೇಸರಿ ಮುಂತಾದ ಬಿರುದು ಖಿಲ್ಲತ್ತುಗಳು ಸಂಘ ಸಂಸ್ಥೆಗಳಿಂದ, ಮಠ ಮಾನ್ಯಗಳಿಂದ ದೊರೆತಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೪-೦೫ ರ ಸಾಲಿನ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿದೆ.