ಧನದಾಸೆಯಿಂದ ಬಳಲದ, ಪ್ರಶಸ್ತಿಗಳಿಗಾಗಿ ಆಶಿಸದ, ಯಾರ ಹಂಗಿಗೂ ಸಿಲುಕದ, ದಾಕ್ಷಿಣ್ಯಕ್ಕೆ ಒಳಗಾಗದ, ನೇರ ನುಡಿಯ ಆರ್ದವಾದಿ ಚಂದ್ರಶೇಖರ್ ಅವರು ಹೆಸರಾಂತ ವಕೀಲ ನಂಜುಂಡಯ್ಯ ಹಾಗು ಗಾಯಕಿ ಶಾರದಮ್ಮನವರ ಸತ್ಪುತ್ರರಾಗಿ ೧೯೨೨ ರಲ್ಲಿ ಜನಿಸಿದವರು ಚಿಕ್ಕಮ್ಮಂದಿರಾದ ಧರ್ಮಾಂಬಾಳ್ ಮತ್ತು ತಂಗಮ್ಮ ಇವರ ಸಂಗೀತ ಗುರುಗಳು ಪರ್ವತವಾಣಿಯವರೂ ಸೇರಿದಂತೆ ಪ್ರಖ್ಯಾತ ನಾಟಕಕಾರರೊಡನೆ ನಾಟಕವನ್ನೂ ಅಭ್ಯಾಸ ಮಾಡಿದವರು. ಭರತನಾಟ್ಯ, ಕಥಕ್ ಮುಂತಾದ ನೃತ್ಯ ಪ್ರಕಾರಗಳಲ್ಲಿ ಕ್ರಮವಾಗಿ ಶಿಕ್ಷಣ ಹೊಂದಿರುವವರು. ಎಸ್.ಎನ್. ಸಿ. ಅಂದರೆ ಕಲೆಗಳ ಕ್ಷೇತ್ರದ ಎಲ್ಲಾ ವಿಭಾಗಗಳ ಹಿರಿಯರೂ-ಕಿರಿಯರೂ ಗೌರವಿಸುವ ವ್ಯಕ್ತಿ.

೧೯೪೬ರಲ್ಲಿ ಅಂದಿನ ಹೆಸರಾಂತ ನೃತ್ಯ ಕಲಾವಿದರ ರಾಂಗೋಪಾಲ್ ಅವರ ನೃತ್ಯವನ್ನು ಕುರಿತು ’ಮೈಸ್‌ ಇಂಡಿಯಾ’ ಪ್ರತಿಕೆಯಲ್ಲಿ ಬರೆದ ಮೊದಲ ವಿಮರ್ಶಾ ಲೇಖನ ಹೊಸದೊಂದು ಅಲೆಯನ್ನೇ ಎಬ್ಬಿಸಿತು. ಅಂದಿನಿಂದ ಇಂದಿನವರೆಗೂ ಅವರು ಕೇಳಿರುವ, ನೋಡಿರುವ ಸಂಗೀತ-ನೃತ್ಯ ಕಾರ್ಯಕ್ರಮಗಳದೆಷ್ಟೋ! ಅವರ ಲೇಖನಿ ಮೂಡಿಸಿರುವ ಏಳು-ಬೀಳುಗಳೆಷ್ಟೋ!

ಒಬ್ಬ ಉತ್ತಮ ಕಲಾ ವಿಮರ್ಶಕ ಆಯಾ ಕಲೆಗಳ ಆಯಾಮವನ್ನು ಚೆನ್ನಾಗಿ ಅರಿತಿರಬೇಕು; ಕಾಲದಿಂದ ಕಾಲಕ್ಕೆ ಆಯಾ ಕ್ಷೇತ್ರಗಳಲ್ಲಿ ಆಗುವ ಬದಲಾವಣೆಗಳನ್ನು ಅರಿತಿರಬೇಕು; ಒಂದು ಕಾರ್ಯಕ್ರಮವನ್ನು ಮೊದಲಿಂದ ಕಲಡೆಯವರೆಗೆ ಪೂರಾ ಹಾಜರಿದ್ದು ಕೇಳಿರಬೇಕು ನೋಡಿರಬೇಕು; ಯಾವ ರೀತಿಯ ಒತ್ತಡಗಳಿಗೂ ಮಣಿಯಬಾರದು; ಕಲಾವಿದರ ಬಗ್ಗೆ ಮಾಡುವ ವೈಯಕ್ತಿಕ ಅಭಿಪ್ರಾಯಗಳಾಗಬಾರದು; ಕಾರ್ಯಕ್ರಮದ ಸಾಧು-ಅಸಾಧುತ್ವವನ್ನು ಮಾತ್ರ ನಿಷ್ಪಕ್ಷಪಾತವಾಗಿ ವಿಮರ್ಶಿಸಬೇಕು-ಇತ್ಯಾದಿ ಉನ್ನತ ದೃಷ್ಟಿಕೋನವನ್ನು ಅಳವಡಿಸಿಕೊಂಡಿರುವ ಶ್ರೀಯುತರಿಂದ ಮೆಚ್ಚುಗೆ ಪಡೆಯುವುದು ಕಷ್ಟಸಾಧ್ಯವೇ ಸರಿ! ಆದರೂ ಅವರ ವಿಮರ್ಶೆಯಿಂದ ಕಲಾವಿದರ ಶ್ರೋತೃಗಳ ಗುಣಮಟ್ಟ ಏರುವುದು ಹಾಗೂ ಪ್ರತಿಕೆಯ ಘನತೆ ಹೆಚ್ಚುವುದಂತೂ ಸತ್ಯ.

ಇಂತಹ ಸ್ಪಷ್ಟ ನಿಲುವಿನ ಅನುಭವದ ಖಣಿಯಾಗಿರುವ ಎಸ್. ಎನ್. ಸಿ. ಅವರನ್ನು ಆದರಿಸದ ಸನ್ಮಾನಿಸದ ಸಂಘ-ಸಂಸ್ಥೆ-ಸಭೆಗಳೇ ಇಲ್ಲವೆನ್ನಬಹುದು. ಪ್ರಶಸ್ತಿಗಳಿಗೆ ಪ್ರಾಶಸ್ತ್ಯ ಕೊಡದಿದ್ದರೂ ಅವರನ್ನು ರಾಜ್ಯೋತ್ಸವ ಪ್ರಶಸ್ತಿ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ ಸರ್ಕಾರದ ಪ್ರಶಸ್ತಿಗಳು ಬೆನ್ನಟ್ಟಿ ಬಂದಿವೆ. ಹಲವಾರು ಸಂಸ್ಥೆಗಳಲ್ಲಿ ಸಲಹೆಗಾರರಾಗಿ ರಾಜ್ಯದ ಹಾಗೂ ರಾಷ್ಟ್ರದ ಎಲ್ಲಾ ಕಲೆಯ ಸಂಬಂಧವಾದ ಕ್ಷೇತ್ರಗಳಲ್ಲೂ ಇವರ ಪಾತ್ರ ಗುರುತರವಾದುದು. ಸರ್ಕಾರಿ ವಲಯದಲ್ಲೂ ಇವರಿಗೆ ಸಲ್ಲುವ ಗೌರವ ಅಪಾರ. ಜೀವನ ಸಂಧ್ಯೆಯಲ್ಲಿರುವ ಈ ಜ್ಞಾನವೃದ್ಧರು ಈಗಲೂ ಕಲೆಗಾಗಿ ದುಡಿಯುತ್ತಿರುವ ಪರಿ ಇಂದಿನ-ಮುಂದಿನ ಪೀಳಿಗೆಯವರಿಗೊಂದು ಆದರ್ಶ. ಹಾಗೆಯೇ ಗೌರವ ಧನವಾಗಿ ಬಂದ ಹಣವನ್ನು ವಿವಿಧ ಸಂಸ್ಥೆಗಳಿಗೆ ದಾನ ಮಾಡಿ, ದತ್ತಿ ಕಾರ್ಯಕ್ರಮಗಳು ನಡೆಯುವಂತೆ ಏರ್ಪಡಿಸಿರುವ ಇವರ ಔದಾರ್ಯ ಪ್ರಶಂಸನೀಯ.