ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ೧೯೧೪ರಲ್ಲಿ ನಂಜಪ್ಪ ಉಪಾದ್ರು ಅವರ ಸತ್ಪುತ್ರರಾಗಿ ಜನಿಸಿದವರು ಮರಿಯಪ್ಪ ಮೊದಲು ನಾಚ್‌ಶ್ಯಾಮರಾವ್‌ ಅವರಿಂದ ಭರತನಾಟ್ಯವನ್ನೂ ನಂತರ ಮೇಲುಕೋಟೆಯ ನರಸಿಂಹಯ್ಯನವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿದರು. ಮುಂದೆ ಚಿದಂಬರಂನಲ್ಲಿ ಸಭೇಶ ಐಯ್ಯರ್, ತಂಜಾವೂರು ಪೊನ್ನಯ್ಯಪಿಳ್ಳೆ ಹಾಗೂ ಮಧುರೈ ಸುಬ್ರಹ್ಮಣ್ಯ ಐಯ್ಯರ್ ಅವರುಗಳಿಂದ ಮಾರ್ಗದರ್ಶನ ಹೊಂದಿ ಬೆಂಗಳೂರಿಗೆ ಮರಳಿ ಬಂದು ಫಾಲ್ಘಾಟ್‌ ಸೋಮೇಶ್ವರ ಭಾಗವತರಲ್ಲಿ ಪ್ರೌಢ ಸಂಗೀತ ಶಿಕ್ಷಣ ಪಡೆದರು.

ಮೈಸೂರಿನಲ್ಲಿ ವಾಸವಾಗಿದ್ದು ವೃತ್ತಿ ಜೀವನ ಆರಂಭಿಸಿದ ಶ್ರೀಯುತರು ಮೈಸೂರು ಆಸ್ಥಾನ ವಿದ್ವಾಂಸ ಪದವಿಯನ್ನು ಪಡೆದು ದೇಶದ ಹಲವೆಡೆ ಕಛೇರಿಗಳನ್ನು ನಡೆಸಿ ಕೀರ್ತಿ ಪಡೆದರು. ಕೆಲವು ಕಾಳ ಕೊಲ್ಹಾಪುರದಲ್ಲಿದ್ದು ಚಿತ್ರ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ‘ಸರಸ್ವತಿ ಗಾನ ಕಲಾ ಮಂದಿರ’ವನ್ನು ಸ್ಥಾಪಿಸಿ ಮೈಸೂರು-ನಂಜನಗೂಡಿನಲ್ಲಿ ಅನೇಕಾನೇಕ ಶಿಷ್ಯರಿಗೆ ತರಬೇತಿ ನೀಡಿದರು. ‘ಬ್ರಹ್ಮಪುರಿ’ ಅಂಕಿತದಲ್ಲಿ ಸ್ವರಜತಿ’, ವರ್ಣ ಕೃತಿ ಜಾವಳಿ ಪದ, ತಿಲ್ಲಾನ ಇತ್ಯಾದಿ ಪ್ರಕಾರಗಳಲ್ಲಿನ ಇವರ ರಚನೆಗಳು ಮುದ್ರಣವಾಗಿ ಬೆಳಕು ಕಾಣಬೇಕಾಗಿದೆ. ಸಂಗೀತ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಸೇವೆ ಸಲ್ಲಿಸಿರುವುದರೊಂದಿಗೆ ಸಂಗೀತ ಪದ್ಯ ಪುಸ್ತಕ ಸಹ ಬರೆದಿದ್ದಾರೆ.

‘ಗಾನ ರತ್ನ’, ‘ಗಾನ ಸುಧಾಕರ’, ‘ಗಾನ ರತ್ನಾಕರ’, ‘ಗಾಯನ ಕಲಾ ಭೂಷಣ’, ‘ಗಾನ ಗಂಧರ್ವ’ ಇತ್ಯಾದಿ ಬಿರುದುಗಳಿಂದ ಅಲಂಕೃತರಾಗಿದ್ದ ಮರಿಯಪ್ಪನವರು ೧೯೮೪-೮೫ನೇ ಸಾಲಿನಲ್ಲಿ ‘ಕರ್ನಾಟಕ ಕಲಾತಿಲಕ’ರೂ ಆಗಿ ೧೯೮೬ರಲ್ಲಿ ಪರಂಧಾಮವನ್ನು ಸೇರಿದರು.