ಮನೆತನ : ಕಥಾಕೀರ್ತನ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕುಟುಂಬದಿಂದ ಬಂದವರು ಶ್ರೀ ಎಸ್. ಎನ್. ಸುರೇಶ್. ಇವರ ತಂದೆ ಸೋಸಲೆ ನಾರಾಯಣದಾಸರು ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದ ಕಥಾಕೀರ್ತನ ವಿದ್ವಾಂಸರು, ಇವರ ದೊಡ್ಡಪ್ಪನವರಾದ ತಾಳ ಬ್ರಹ್ಮ, ಹರಿಕಥಾ ಸಿಂಹ ಬಿರುದಾಂಕಿತರಾದ ಸೋಸಲೆ ರಾಮದಾಸ್ ಮತ್ತು ಸೋಸಲೆ ವೆಂಕಟದಾಸ್ ಕೂಡ ಕಥಾಕೀರ್ತನ ಮಾಧ್ಯಮದಲ್ಲಿ ಬಹುಜನ ಮನ್ನಣೆ ಪಡೆದಿದ್ದ ವಿದ್ವಾಂಸರು.

ಕ್ಷೇತ್ರ ಸಾಧನೆ: ತಮ್ಮ ಏಳನೇ ವಯಸ್ಸಿನಲ್ಲೇ ಕಾರ್ಯಕ್ರಮ ನೀಡಲು ಆರಂಭಿಸಿದ ಸುರೇಶ್ ನಾಡಿನಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಥಾಕೀರ್ತನೆ ವಿಭಾಗದಲ್ಲಿ ಆಕಾಶವಾಣಿಯ ’ಎ’ ಶ್ರೇಣಿ ಕಲಾವಿದರಾದ ಸುರೇಶ್ ಅವರು ಅಲ್ಲೂ ತಮ್ಮ ಪ್ರಬುದ್ಧ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಸಂಗೀತ ಆಡಿಯೋ ಸಂಸ್ಥೆ ಇವರ ಕಥಾಕಿರ್ತನೆಯ ಹಲವು ಧ್ವನಿ ಸುರುಳಿಗಳನ್ನು ಹೊರತಂದಿದೆ. ಚೆನ್ನೈನ ಭಾರತೀಯ ವಿದ್ಯಾಭವನ, ತಿರುಮಲ – ತಿರುಪತಿ ದೇವಸ್ಥಾನ ಸಮಿತಿ ಮುಂತಾದ ಪ್ರತಿಷ್ಠತ ಸಂಸ್ಥೆಗಳು ಶ್ರೀಯುತರ ಕಾರ್ಯಕ್ರಮಗಳನ್ನು ಏರ್ಪಡಿಸಿವೆ. ಬೆಂಗಳೂರು ವಿದ್ಯಾರಣ್ಯಪುರ ಸಾಂಸ್ಕೃತಿಕ ಕಲಾ ಕೇಂದ್ರದವರು ತಿಂಗಳಿಗೊಂದರಂತೆ ಇವರ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು, ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ’ದಾಸಪರಂಪರೆ’ ಶೀರ್ಷಿಕೆಯಲ್ಲಿ ಆ ಕಥಾಕೀರ್ತನ ಕಾರ್ಯಕ್ರಮ ನಡೆಯುತ್ತಾ ಬಂದಿದೆ.

ಪುರಾತನ ಕಥಾವಸ್ತುಗಳಿಗೆ ಸೀಮಿತವಾದ ಕಥಾಕೀರ್ತನ ಮಾಧ್ಯಮವನ್ನು ಕುಟುಂಬ ಕಲ್ಯಾಣದ ಮಹತ್ವ, ಅಸ್ಪೃಶ್ಯತೆ ನಿವಾರಣೆ, ಕುಡಿತದ ದುಷ್ಪರಿಣಾಮ, ವಿದ್ಯಾಭ್ಯಾಸದ ಮಹತ್ವ ಮುಂತಾದ ಸಮಕಾಲೀನ ಸಮಸ್ಯೆಗಳ ಚಿಂತನೆಗೆ ಬಳಸಿಕೊಂಡದ್ದು ಸುರೇಶ್ ಅವರ ಒಂದು ದೊಡ್ಡ ಸಾಧನೆ.

ಪ್ರಶಸ್ತಿ – ಪುರಸ್ಕಾರಗಳು : ಶ್ರೀ ಎಸ್. ಎನ್. ಸುರೇಶ್ ಅವರಿಗೆ ಕಥಾಕೀರ್ತನ ಕ್ಷೇತ್ರದ ಸೇವೆಯನ್ನು ಗಮನಿಸಿ ೨೦೦೬-೦೭ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಸನ್ಮಾನಿಸಿದೆ.