ಜನನ : ೧೯೫೬.

ಗುರುಪರಂಪರೆ : ವಿದ್ವಾನ್ ವಿ. ದೇಶಿಕಾಚಾರ್ಯರಲ್ಲಿ ಕೊಳಲು ವಾದನದಲ್ಲಿ ಕ್ರಮಬದ್ಧ ಶಿಕ್ಷಣವಾಗಿದೆ. ಸುಗಮ ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿ ಮಾರ್ಗದರ್ಶನ ನೀಡಿದವರು ಪಿಟೀಲು ವಿದ್ವಾಂಸರಾದ ಬಿ.ಕೆ. ಚಂದ್ರಶೇಖರ್ ಅವರು.

ಸಾಧನೆ : ೮೦ ರ ದಶಕದಲ್ಲಿ ಸುಗಮ ಸಂಗೀತಕ್ಕೆ ಸಾಕಷ್ಟು ಮನ್ನಣೆ ದೊರೆತು ಜನಪ್ರಿಯರಾಗಿ ಅದಕ್ಕೆ ಕೆಲವೊಂದು ವಾದ್ಯಗಳ ಬಳಕೆ ಪ್ರಾರಂಭವಾದಾಗಿನಿಂದ ತಮ್ಮ ಕೊಳಲು ವಾದನದ ಮೂಲಕ ಅದಕ್ಕೆ ಹೆಚ್ಚಿನ ಮೆರುಗು ಕೊಟ್ಟವರು ಮುರಳೀಧರ ಅವರು. ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಗಳೆನಿಸಿದ ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ಗರ್ತಿಕೆರೆ ರಾಘಣ್ಣ, ಶಿವಮೊಗ್ಗ ಸುಬ್ಬಣ್ಣ, ಬಿ.ಕೆ.ಸುಮಿತ್ರ ಮುಂತಾದವರೊಡನೆ ಸಹಕರಿಸಿ ಈ ತಲೆಮಾರಿನ ಅನೇಕ ಉದಯೋನ್ಮುಖ ಕಲಾವಿದರೆಲ್ಲರಿಗೆ ಪಕ್ಕವಾದ್ಯ ನುಡಿಸಿ ಉತ್ತೇಜಿಸಿದ್ದಾರೆ.

ಚಲನಚಿತ್ರ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿ ಸಂಗೀತ ನಿರ್ದೇಶಕರುಗಳಾದ ಜಿ.ಕೆ. ವೆಂಕಟೇಶ್, ವಿಜಯ ಭಾಸ್ಕರ್, ಎಂ. ರಂಗರಾವ್, ಹಂಸಲೇಖ, ವಿ. ಮನೋಹರ್, ಮುಂಬಯಿನ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಮುಂತಾದವರೊಂದಿಗೆ ಧ್ವನಿಗ್ರಹಣಗಳಲ್ಲಿ ಸಹಕಾರ ನೀಡಿದ್ದಾರೆ. ಅನೇಕ ಧ್ವನಿ ಸುರುಳಿಗಳಲ್ಲೂ ಇವರ ಕೊಳಲಿನ ಇನಿದನಿ ನಿನಾದಿಸಿದೆ. ತಾವೇ ಸ್ವತಃ ಸಂಗೀತ ಸಂಯೋಜನೆ ಮಾಡಿ ಹಲವಾರು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ.

ಪ್ರಶಸ್ತಿ – ಸನ್ಮಾನ : ಆದರ್ಶ ಸುಗಮ ಸಂಗೀತ ಅಕಾಡೆಮಿಯಿಂದ ನಾದಬ್ರಹ್ಮ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೦-೦೧ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮುಂತಾಗಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

ಇವರ ಪ್ರತಿಭೆ ಇನ್ನೂ ಬೆಳಕನ್ನು ಕಾಣುತ್ತಿರುವಾಗಲೆ ಸುಗಮ ಸಂಗೀತ ಕ್ಷೇತ್ರವನ್ನು ಕತ್ತಲು ಮಾಡಿ ದಿನಾಂಕ ೦೪-೦೨-೨೦೦೬ ರಂದು ಹರಿಪಾದ ಸೇರಿಬಿಟ್ಟರು.