೧೯೩೯ರಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಶ್ರೀ ಎಸ್.ಎ. ತಪಲೆ, ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರರು. ಸಂಗೀತ ಕ್ಷೇತ್ರದಲ್ಲಿ ಹಲವು ವಿಶೇಷ ಕೆಲಸಗಳನ್ನು ದಾಖಲಿಸಿರುವ ಅವರ ಸಾಧನೆ ಮುಂದಿನ ತಲೆಮಾರಿಗೆ ಮಾದರಿಯಾಗುವಂತಹದ್ದು.

ಪ್ರಚಲಿತವಿರುವ ಮತ್ತು ಪ್ರಚಲಿತವಿರದ ವಿಭಿನ್ನರಾಗಗಳಲ್ಲಿ ಬಂದಿಶ್‌ಗಳಿಗೆ ಸ್ವರಸಂಯೋಜನೆ ಮಾಡಿರುವ ಶ್ರೀಯುತರ ಕೃತಿಯೊಂದು ಪ್ರಕಟವಾಗಿದೆ. ಅಲ್ಲದೆ ಹಿಂದೂಸ್ಥಾನಿ ಸಂಗೀತ ಜ್ಞಾನಕೋಶ, ತಂಬೂರಿಯ ಮೇಲೆ ರಹಸ್ಯ ಮತ್ತು ಸಹಜ ಸ್ವರಗಳು, Mystery of Ancient Music (ಇಂಗ್ಲೀಷ್),ಕ್ರಮಿಕ ತಾನ-ಆಲಾಪ್ ಭಾಗ-೧ ಮತ್ತು ಭಾಗ-೨ (ಹಿಂದಿ) ಸಂಗೀತ ಮಕರಂದ ಭಾಗ-೧ ಮತ್ತು ಭಾಗ-೨, ಸಂಗೀತದ ರಹಸ್ಯ ಸ್ಥಳಗಳು ಮುಂತಾದ ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ.

ಗುಲ್ಬರ್ಗಾ ಆಕಾಶವಾಣಿಯ ಆಯ್ಕೆ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಸಂಗೀತ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಸಂಗೀತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ರಚಿಸಿ, ಪ್ರಯೋಗ ಪರೀಕ್ಷೆಯ ಪರೀಕ್ಷಕರಾಗಿ ತಪಲೆ ಅನೇಕ ಸ್ತರಗಳಲ್ಲಿ ಸಂಗೀತ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.

ಸಂಗೀತ ಕಲಿಯುವವರಿಗಾಗಿ ಶ್ರೀಯುತರು ತಯಾರಿಸಿದ ಸಮ-ಪ್ರಕೃತಿ ರಾಗಗಳ ಪರಿಚಯ ಕಾರ್ಯಕ್ರಮ ಆಕಾಶವಾಣಿಯ ರಾಯಚೂರು ಕೇಂದ್ರದಿಂದ ಪ್ರಸಾರವಾಗಿದೆ.ಒಂದು ಸಪ್ತಕದಲ್ಲಿ ೨೨ ಶ್ರುತಿಗಳ ಸ್ಥಾಪನೆಯ ಸಾಧ್ಯತೆಯನ್ನು ಸ್ವರಮಂಡಲದ ಮೇಲೆ ಶ್ರೀಯುತರು ಸಂಶೋಧಿಸಿದ್ದು ಈ ಪ್ರದರ್ಶನ ದೂರದರ್ಶನದ ಗುಲ್ಬರ್ಗಾ ಮತ್ತು ಬೆಂಗಳೂರು ಕೇಂದ್ರಗಳಿಂದ ಪ್ರಸಾರವಾಗಿದೆ.

ಸಂಗೀತ ಕ್ಷೇತ್ರದ ಶ್ರೀ ಎಸ್.ಎ. ತಪಲೆ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೬-೦೭ರ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.