ಮೈಸೂರು ರಾಜ ಮನೆತನದ ಸಿರಿ ಸಂಪದಗಳ ಕಲಾ ವೈಭವಗಳ ಹೃದಯ ಶ್ರೀಮಂತಿಕೆಯ ಬೆಡಗುಗಳಿಗೆ ಕೃಷ್ಣಮೂರ್ತಿಯವರ ಸಾಹಿತ್ಯ ಸೃಷ್ಟಿ ಕನ್ನಡಿ ಹಿಡಿದಿದೆ. ಅವರ ಭಾಷೆಯಲ್ಲಿ ಮೈಸೂರು ಮಲ್ಲಿಗೆಯ ಪರಿಮಳ ಬುತ್ತಿ ಚಿಗುರಿನ ಸವಿ ಶ್ರೀಗಂಧದ ತಂಪು ವೀಣೆಯ ನಿನಾದವೆಲ್ಲ ತುಂಬಿ ಓದುಗರನ್ನು ೭೦-೮೦ ವರ್ಷಗಳಷ್ಟು ಹಿಂದಕ್ಕೆ ಒಯ್ಯುತ್ತದೆ. ಇಂತಹ ತುಂಬು ಮನಸ್ಸಿನ ಅನುಭವಗಳ ಸಾಕಾರವೆನ್ನುವಂತಿರುವ ಶ್ರೀಯುತರು ಮೈಸೂರು ವಾಸುದೇವಾಚಾರ್ಯರ ಮೊಮ್ಮಗ. ಪದ್ಮಾವತಿಬಾಯಿ – ಸುಬ್ರಹ್ಮಣ್ಯಂ ಅವರ ಸುಪುತ್ರ. ೨೭-೬-೧೯೨೧ ರಲ್ಲಿ ಜನನ. ಆಚಾರ್ಯರ ಪ್ರಧಾನ ಶಿಷ್ಯರಾಗಿದ್ದ ಎನ್‌. ಚೆನ್ನಕೇಶವಯ್ಯನವರಲ್ಲಿ ಸಂಗೀತಾಭ್ಯಾಸ ಆರಂಭಿಸಿ ಮುಂದೆ ತಾತನವರಲ್ಲಿ ಪ್ರೌಢ ಶಿಕ್ಷಣ ಹೊಂದಿದರು. ಸೋದರ ರಾಜಾರಾಂ ಅವರೊಡನೆ ಜಲತರಂಗ್‌ ವಾದನದ ಕಚೇರಿಗಳನ್ನು ಮಾಡಿ ಜನ ಸಮುದಾಯವನ್ನು ಮುಗ್ಧರನ್ನಾಗಿಸಿ ನಾಲ್ವಡಿ ಕೃಷ್ಣರಾಜ ಒಡೆಯರ ಗಮನವನ್ನೂ ಸೆಳೆಯುವಂತಾದರು. ಮುಂದೆ ಪ್ರಭುಗಳು ಇವರನ್ನು ಅರಮನೆಯ ವಾದ್ಯಗೋಷ್ಠಿಗೆ ಸೇರಿಸಿಕೊಂಡರು.

ಲಂಡನ್ನಿನ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರು. ಡೊನಾಲ್ಡ್‌ ಜಾನ್ಸನ್‌ ಅವರಲ್ಲಿ ಪಿಯಾನೋ ವಾದ್ಯದಲ್ಲಿ ಶಿಕ್ಷಣ ಪಡೆದರು. ಗವಾಯಿ ವಿಲಾಯತ್‌ ಹುಸೇನ್‌ಖಾನ್‌ ಅವರಲ್ಲಿ ಹಿಂದುಸ್ಥಾನಿ ಸಂಗೀತದಲ್ಲೂ ತರಬೇತಿ ಪಡೆದರು. ಕಾರ್ಯಕ್ರಮ ನಿರ್ವಾಹಕ ನಿರ್ದೇಶಕ ಮುಂತಾದ ಹುದ್ದೆಗಳಲ್ಲಿದ್ದು ಆಕಾಶವಾಣಿಯಲ್ಲಿ ಮೂವತ್ತಮೂರು ವರ್ಷಗಳು ಸೇವೆ ಸಲ್ಲಿಸಿ ನಿವೃತ್ತರಾದರು. ನಂತರ ಭಾರತೀಯ ವಿದ್ಯಾಭವನದಲ್ಲಿ ವಾದ್ಯ ವೃಂದ ನಿರ್ದೇಶಕರಾಗಿ ಹಲವಾರು ಅತ್ಯುತ್ತಮ ಕಾರ್ಯಕ್ರಮಗಳನ್ನು ರೂಪಿಸಿ ನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ. ಅನೇಕ ಧ್ವನಿಸುರುಳಿಗಳೂ ಇದಕ್ಕೆ ನಿದರ್ಶನವಾಗಿ ಉಳಿದಿವೆ.

ಕೃಷ್ಣಮೂರ್ತಿಯವರು ಬರೆದು ನಿರ್ದೇಶಿಸಿದ ಮೂರು ರೇಡಿಯೋ ರೂಪಕಗಳು ಒಂದೇ ವರ್ಷದಲ್ಲಿ ಅಖಿಲ ಭಾರತ ಪ್ರಶಸ್ತಿ ಗಳಿಸಿದ್ದು ದಾಖಲೆಯಾಯಿತು. ಆಕಾಶವಾಣಿ ಕೇಂದ್ರಗಳ ಮೂಲಕ ಶ್ರೀಯುತರು ನಿರ್ದೇಶಿಸಿದ ವಾದ್ಯ ವೃಂದ ಕಾರ್ಯಕ್ರಮಗಳ ಉನ್ನತಮಟ್ಟ ಅವರಿಗೆ ನ್ಯಾಷನಲ್‌ ಆರ್ಕೆಸ್ಟ್ರಾ ತಂಡದ ನಿರ್ದೇಶಕತ್ವವನ್ನು ದೊರಕಿಸಿತು. ಶ್ರೀ ಜಯಚಾಮರಾಜ ಒಡೆಯರ ೯೪ ಕೃತಿಗಳನ್ನು ಪಾಶ್ವಾತ್ಯ ಪದ್ಧತಿಯಲ್ಲಿ ನೊಟೇಷನ್‌ ಬರೆದು ಪ್ರಭುಗಳಿಗೆ ಅರ್ಪಿಸಿದ್ದರು. ಇವರು ಹಲವಾರು ಲೇಖನಗಳೂ, ಪುಸ್ತಕಗಳೂ ವಿದ್ವಾಂಶರ ವಿಮರ್ಶಕರ ಮೆಚ್ಚುಗೆ ಗಳಿಸಿವೆ. ಅದರಲ್ಲಿ ‘ನಾ ಕಂಡ ಕಲಾವಿದರು’, ‘ನೆನಪುಗಳು’, (ಆಂಗ್ಲ ಅನುಭವ) ‘ಸಂಗೀತ ಸರಿತಾ’ ಮುಖ್ಯವಾದುವು. ಸುಬ್ಬಾಶಾಸ್ತ್ರಿ ಕನ್ನಡ ಚಲನಚಿತ್ರಕ್ಕೆ ಡಾ||ವಿ. ದೊರೆಸ್ವಾಮಿ ಅಯ್ಯಂಗಾರರೊಡನೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು. ನಾಲ್ಕಾರು ಸಾಕ್ಷ್ಯಚಿತ್ರಗಳಿಗೆ ಸ್ವಯಂ ಸಂಗೀತ ನಿರ್ದೇಶನ ಮಾಡಿದ್ದಾರೆ.

ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಲಿ ಮತ್ತು ಆಕಾಶವಾಣಿಯ ಎಂ.ಎ.ಬಿ.ಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ‘ಸಂಗೀತ ಕಲಾರತ್ನ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಅನೇಕ ಬಿರುದು ಸನ್ಮಾನಗಳು ಲಭ್ಯವಾಗಿವೆ. ಈಗಲೂ ಸಂಗೀತ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸದಲ್ಲಿ ಅವರು ತೋರುವ ಉತ್ಸಾಹ ತತ್ಪರತೆ ಅನುಸರಣೀಯ.