ಶ್ರೀಮತಿ ಕಮಲಮ್ಮ ಹಾಗೂ ಶ್ರೀ ಕೃಷ್ಣ ನಾರಾಯಣರಾವ್‌ ದಂಪತಿಗಳ ಸತ್ಪುತ್ರರಾದ ರಾಮಚಂದ್ರರಾಯರು ಶಾಸ್ತ್ರೀಯತೆಯನ್ನು ನವೀನತೆಯೊಡನೆ ಸಮರಸಗೊಳಿಸಿದ ರಸಸಿದ್ಧರು. ಹಲವಾರು ಸಮಕಾಲಿಕ ಭಾರತೀಯ ಭಾಷೆಗಳೊಡನೆ ಪಾಶ್ಚಿಮಾತ್ಯ ಭಾಷೆಗಳಲ್ಲೂ, ಟಿಬೆಟಿಯನ್‌ ಸಂಸ್ಕೃತ ಪಾಳಿ ಅರ್ಧಮಾಗಧಿ ಭಾಷೆಗಳಲ್ಲೂ ಅಪಾರ ಪಾಂಡಿತ್ಯ ಪಡೆದಿದ್ದರು.

ವೃತ್ತಿಯಿಂದ ಮನಶ್ಯಾಸ್ತ್ರಜ್ಞರಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ-ನರವಿಜ್ಞಾನ ಕೇಂದ್ರದಲ್ಲಿ ಮನಶ್ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಸಂಗೀತ ಸಾಹಿತ್ಯ ನೃತ್ಯ ಶಿಲ್ಪ ಇತ್ಯಾದಿ ಕಲಾಪ್ರಕಾರಗಳಲ್ಲಿ ರಾಯರ ಸೇವೆ ಊಹಾತೀತವಾದುದು. ಮಹತ್ತರ ಮಹತ್ವವುಳ್ಳದ್ದು ಅಮೇರಿಕದ ಪೆಸಿಫಿಕ್‌ವಿಶ್ವವಿದ್ಯಾಲಯದ ಕ್ಯಾಲಿಸನ್‌ ಕಾಲೇಜಿನ ಶಿಕ್ಷಣ ಕೇಂದ್ರದಲ್ಲಿ ಭಾರತೀಯ ಸಂಸ್ಕೃತಿ ವಿಭಾಗದ ಮುಖ್ಯಸ್ಥರಾಗಿ ಇವರು ಸಲ್ಲಿಸಿದ ಸೇವೆ ಅಪಾರ. ರಾಜ್ಯ ಲಲಿತ ಕಲಾ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ಆಗಮ ಮಂಡಳಿ ಇಂಡಿಯನ್‌ ಇನ್ಸ್ಟಿಟ್ಯೂಟ್‌ಆಫ್‌ ಮ್ಯಾನೇಜ್‌ಮೆಂಟ್‌, ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ಸೈನ್ಸ್‌ ತಿರುಮಲೆ, ತಿರುಪತಿ ದೇವಾಲಯದ ಸಲಹಾ ಮಂಡಳಿ, ಶಿಲ್ಪಕಲಾ ಪರಿಷತ್ತಿನ ಅಧ್ಯಕ್ಷ ಸ್ಥಾನ – ಹೀಗೆ ಹತ್ತಾರು  ಕ್ಷೇತ್ರಗಳಲ್ಲಿ ರಾಯರ ಕೊಡುಗೆ ಅದ್ವಿತೀಯ.

ಕನ್ನಡದಲ್ಲಿ ಅರವತ್ತಕ್ಕೂ ಹೆಚ್ಚು ಪುಸ್ತಕಗಳು; ಸಂಸ್ಕೃತದಲ್ಲಿ ನಾಟಕ’ ಬೌದ್ಧಮತದ ಪ್ರಾಚೀನ ಗ್ರಂಥಕ್ಕೆ ಪಾಳಿ ಭಾಷೆಯಲ್ಲಿ ವ್ಯಾಖ್ಯಾನ; ಭಾರತೀಯ ವೈದ್ಯ ವಿಜ್ಞಾನ ವಿಶ್ವಕೋಶ ಮೂರು ಭಾಗಗಳಲ್ಲಿ; ಟಿಬೆಟ್ಟಿನ ತಾಂತ್ರಿಕ ಪರಂಪರೆ ಮತ್ತು  ಅನುಸಂಧಾನ; ಅದ್ವೈತದಲ್ಲಿ ಅರಿವು; ಭಾರತದ ದೇವಾಲಯಗಳನ್ನು ಕುರಿತ ಆರು ಪುಸ್ತಕಗಳ ಮಾಲೆ; ಪ್ರತಿಮಾ ಕೋಶ ಆರು ಭಾಗಗಳಲ್ಲಿ; ಭಾರತೀಯ ವಿಚಾರ ಮೂಲಗಳು; ಆಗಮಕೋಶ ಹನ್ನೆರಡು ಭಾಗಗಳಲ್ಲಿ; ಭಾರತೀಯ ದೇವಾಲಯಗಳಲ್ಲಿ ಕಲೆ ಮತ್ತು ನಿರ್ಮಾಣ ತಂತ್ರ; ನವಗ್ರಹ ಕೋಶ ಎರಡು ಭಾಗಗಳಲ್ಲಿ; ಶ್ರೀತತ್ತ್ವನಿಧಿ ಎರಡು ಭಾಗಗಳಲ್ಲಿ; ಪುರಂದರ ಸಾಹಿತ್ಯ ದರ್ಶನ ನಾಲ್ಕು ಭಾಗಗಳಲ್ಲಿ; ಋಗ್ವೇದ ಮೂವತ್ತು ಭಾಗಗಳಲ್ಲಿ- ಹೀಗೆ ರಾಯರ ಲೇಖನಿಯಿಂದ ಮೂಡಿದ ಸಾಹಿತ್ಯ ರತ್ನಗಳು ವಿದ್ಯಾಧಿದೇವಿಯ ಸಿರಿಕಂಠದಲ್ಲಿ ಶೋಭಿಸುವ ಮಾಲೆಗಳಾಗಿ ಉಳಿದಿವೆ.

ಭಾರತ ಸರ್ಕಾರವು ಕೈಗೊಂಡ ಕನಕ-ಪುರಂದರ ಮತ್ತು ಡಾ|| ವಿ. ದೊರೆಸ್ವಾಮಿ ಅಯ್ಯಂಗಾರ್ ಅವರನ್ನು ಕುರಿತು ಸಾಕ್ಷ್ಯಚಿತ್ರಗಳಿಗೆ ನಿರೂಪಣಾ ಸಾಹಿತ್ಯ ಒದಗಿಸಿದರು. ರಾಜ್ಯೋತ್ಸವ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ಕಲಾರತ್ನ ಲಲಿತ ಕಲಾಶ್ರಯ, ಹಂಪಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಮುಂತಾದುವು ಅವರನ್ನು ಅರಸಿ ಬಂದ ಸನ್ಮಾನಗಳು.

ಅವಿರತವಾಗಿ ಸಂಗೀತ ಸಾಹಿತ್ಯ ಸಾರಸ್ವತ ಭಂಡಾರವನ್ನು ತುಂಬಿಸಿದ ಅವರ ಲೇಖನಿ ೨-೨-೨೦೦೬ ರಂದು ಅವರ ಜೀವಜ್ಯೋತಿಯ ಅಸ್ತದೊಡನೆ ಚಿರ ವಿಶ್ರಾಂತಿ ಹೊಂದಿತು.