ಜನನ : ೨೪-೧೧-೧೯೩೪ ಮೈಸೂರು.

ಮನೆತನ : ಸಂಗೀತ ಕಲಾವಿದರ ಮನೆತನ. ತಂದೆ ಎಸ್. ಬಿ. ಕೃಷ್ಣಸ್ವಾಮಿ – ತಾಯಿ ರಾಜಮ್ಮ.

ಗುರುಪರಂಪರೆ: ಮೊದಲಿಗೆ ಎಂ. ವಿ. ಕೃಷ್ಣಪ್ಪನವರಲ್ಲಿ ಪ್ರಾಥಮಿಕ ಶಿಕ್ಷಣ. ಮುಂದೆ ಆರ್. ಕೆ. ರಾಮನಾಥನ್ ಅವರ ಬಳಿ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದು ಅನಂತರ ಆರ್.ಕೆ.ಶ್ರೀಕಂಠನ್ ಅವರಲ್ಲಿ ಪ್ರೌಢ ಶಿಕ್ಷಣ ಪಡೆದು ಸುಗಮ ಸಂಗೀತ ಕ್ಷೇತ್ರದಲ್ಲೂ ಸಾಕಷ್ಟು ಪರಿಣತಿ ಪಡೆದಿದ್ದಾನೆ.

ಸಾಧನೆ : ಕಳೆದ ೫೦ ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಆಕಾಶವಾಣಿ ಮೂಲಕ ಪ್ರಸಾರವಾಗುತ್ತಿದೆ. ಹಿರಿಯ ಕವಿಪುಂಗವರೆನಿಸಿದ ಡಾ|| ಡಿ.ವಿ.ಜಿ., ಪು.ತಿ.ನ. ಕುವೆಂಪು ಇವರ ಗಾಯನದಲ್ಲಿ ಅವರ ರಚನೆಗಳನ್ನು ಕೇಳಿ ಮೆಚ್ಚಿಕೊಂಡವರು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಒಂದು ಕಾಲದಲ್ಲಿ ಸುಗಮ ಸಂಗೀತ ಕ್ಷೇತ್ರದಲ್ಲಿ ಎಸ್.ಕೆ.ವಸುಮತಿ – ವೈ.ಎಸ್. ಇಂದಿರಾ ಜೋಡಿ ಅತ್ಯಂತ ಜನಪ್ರಿಯವಾಗಿತ್ತು. ತಮ್ಮ ರಾಗ ತರಂಗ ಸಂಸ್ಥೆಯ ಮೂಲಕ ಸುಮಾರು ೨೦೦ ಕ್ಕೂ ಮಿಕ್ಕಿ ಶಿಷ್ಯರನ್ನು ತಯಾರು ಮಾಡಿದ್ದಾರೆ. ಅನೇಕರು ಇಂದು ಹೆಸರಾಂತ ಗಾಯಕರಾಗಿದ್ದಾರೆ. ರಾಗ ತರಂಗ ಲಾಂಛನದಲ್ಲಿ ಅನೇಕ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಪ್ರಮುಖವಾಗಿ ಪು.ತಿ.ನ. ರವರ ಗೋಕುಲ ನಿರ್ಗಮನ, ಹರಿಣಾಭಿಸರಣಃ ಗೇಯ ನಾಟಕಗಳು, ಕಾಳಿದಾಸನ ಕುಮಾರ ಸಂಭವವೇ ಅಲ್ಲದೆ ಕೃಷ್ಣಭಕ್ತೆ ಗೋದಾ, ಜಮದಗ್ನಿ ರೇಣುಕಾ ಮುಂತಾಗಿ ಅನೇಕ ನೃತ್ಯ – ರೂಪಕಗಳನ್ನು ಸಂಯೋಜಿಸಿ ಆಕಾಶವಾಣಿಯ ಮೂಲಕ ಪ್ರಸಾರ ಮಾಡಿದ್ದಾರೆ. ಅನೇಕ ದೇವರ ನಾಮಗಳಿಗೂ ರಾಗ ಸಂಯೋಜನೆ ಮಾಡಿದ್ದಾರೆ. ಭಾವ ಮಂಥನ ರಾಗಾಧಾರಿತ ಸುಗಮ ಸಂಗೀತ ಕಾರ್ಯಕ್ರಮ, ಒಂದೊಂದು ಋತುವಿಗೂ ಸಂಬಂಧಿಸಿದ ನೃತ್ಯ – ಗೇಯ ರೂಪಕಗಳು ಅತ್ಯಂತ ಜನಪ್ರಿಯ.

ಪ್ರಶಸ್ತಿ – ಸನ್ಮಾನ : ಅನನ್ಯ ಕಲಾಭಿಜ್ಞ ಹಂಸ ಪ್ರಶಸ್ತಿ ಇವರಿಗೆ ಸಂದಿರುವುದಲ್ಲದೇ ೨೦೦೦-೦೧ರಲ್ಲಿ ಕರ್ನಾಟಕದ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ೨೦೦೩ ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯೆ ಅಲ್ಲದೆ ಮೈಸೂರಿನ ಹಲವಾರು ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.