ಹೈದ್ರಾಬಾದ ಕರ್ನಾಟಕದ ಕಲ್ಬುರ್ಗಿ ಪ್ರದೇಶದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಪ್ರಚಾರ ಪಡಿಸಿದ ಶ್ರೀ ಎಸ್‌. ಗುರುನಾಥರಾವ್‌ ಅಲಗೂಡಕರ ಅವರು ಆ ಭಾಗದ ಹಿರಿಯ ತಲೆಮಾರಿನ ಸಂಗೀತಗಾರರಾಗಿದ್ದಾರೆ. ಅವರು ತಮ್ಮ ೭ನೆಯ ವಯಸ್ಸಿನಲ್ಲಿಯೇ ಅವರ ಕಾಕ ಶಂಕರಭಟ್ಟ ಅಲಗೂಡ ಅವರಿಂದ ಪ್ರಥಮವಾಗಿ ಕಲಿಯಲಾರಂಭಿಸಿದರು. ಚಿಕ್ಕಂದಿನಿಂದಲೂ ಕಲೆಯ ಬಗೆಗೆ ತೀವ್ರ ಒಲವು ಇದ್ದುದರಿಂದ ೮ ನೆಯ ವಯಸ್ಸಿನಲ್ಲಿ ಗುಲಾಮ ಬೀಕಖಾನ ಸಾಹೇಬರು ಸಾರಂಗಿ ವಾದಕರಿಂದ ಹಾರ್ಮೋನಿಯಂ ಮತ್ತು ಗಾಯನ ಕಲಿಯಲು ಆರಂಭಿಸಿದರು. ಶಾಲಾ ಶಿಕ್ಷಣವನ್ನು ಬಿಡಿಸಿ ೧೫ನೆ ವಯಸ್ಸಿನಲ್ಲಿ ಗುಲ್ಬರ್ಗದ ಎನ್‌. ವಿ. ಶಾಲೆಗೆ ಸೇರಿಸಲಾಯಿತು. ಅದೇ ಸಮಯದಲ್ಲಿ ಕಲಬುರ್ಗಿಯಲ್ಲಿದ್ದ ಗೋಪಾಲರೆಡ್ಡಿಯವರು ನಡೆಸುತ್ತಿದ್ದ ಸಂಗೀತ ಶಾಲೆಯಲ್ಲಿ ತಬಲಾ ಹಾಗೂ ಹಾರ್ಮೋನಿಯಂ ಸಾಥಿ ನೀಡಲಾರಂಭಿಸಿದರು. ಮಹಾರಾಷ್ಟ್ರದ ಅಬ್ಬಾ ಸಾಹೇಬ ಮಜಮುದಾರ ಹಾಗೂ ಡಿ.ಆರ್. ಪರ್ವತೀರಕರ, ಡಾ. ಗಂಗೂಬಾಯಿ ಹಾನಗಲ್‌, ಬಸವರಾಜ ರಾಜಗುರು, ಕಿಶೋರಿ ಅಮೋನಕರ, ಡಾ. ಪರವೀನ್‌ ಸುಲ್ತಾನ, ಡಾ. ಪ್ರಭಾ ಅತ್ರೆ, ಡಾ. ಪುಟ್ಟರಾಜ ಗವಾಯಿ ಇವರೇ ಮುಂತಾದ ಅನೇಕ ಹೆಸರಾಂತ ಕಲಾವಿದರುಗಳಿಗೆ ತಬಲಾ ಹಾಗೂ ಹಾರ್ಮೋನಿಯಂ ಸಾಥಿಯನ್ನು ನೀಡಿದ್ದಾರೆ.

ಸಂಗೀತ ಶಿಕ್ಷಣ ಕ್ಷೇತ್ರದಲ್ಲಿಯೂ ಅವರ ಸೇವೆ ಅಪಾರ. ಅಧಿಕ ಸಂಖ್ಯೆಯಲ್ಲಿ ತಬಲಾ ಹಾಗೂ ಹಾರ್ಮೋನಿಯಂ ಅನ್ನು ಅವರಿಂದ ಕಲಿತ ವಿದ್ಯಾರ್ಥಿಗಳು ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನಿತ್ತಿದ್ದಾರೆ.

ಅಪಾರ ಪ್ರತಿಭಾಶಾಲಿ ಕಲಾವಿದರಾದ ಎಸ್‌. ಗುರುನಾಥರಾವ್‌ ಅಲಗೂಡಕರ ರವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು “ಕರ್ನಾಟಕ ಕಲಾ ತಿಲಕ” ಬಿರುದಿನೊಂದಿಗೆ ೧೯೯೪-೯೫ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.