ಜನನ : ೨೮-೭-೧೯೪೦

ಮನೆತನ : ಸಂಗೀತಗಾರರ ಮನೆತನ. ಪತ್ನಿ ಹೆಚ್.ಆರ್. ಲೀಲಾವತಿ ಹಿರಿಯ ಸುಗಮ ಸಂಗೀತ ಗಾಯಕಿ. ವೃತ್ತಿಯಿಂದ ವಕೀಲರು.

ಗುರುಪರಂಪರೆ : ಬಾಲ್ಯದಿಂದಲೇ ಸ್ವಯಂ ಪ್ರತಿಭೆಯಿಂದ ಸಂಗೀತಾಭಿರುಚಿಯಿಂದ ಬೆಳೆಸಿಕೊಂಡು ಮುಂದೆ ಹೆಚ್.ಆರ್.ಲೀಲಾವತಿಯವರಿಂದ ಮಾರ್ಗದರ್ಶನ ಪಡೆದಿದ್ದಾರೆ.

ಸಾಧನೆ : ಚಿಕ್ಕ ವಯಸ್ಸಿನಲ್ಲಿಯೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾವಗೀತೆಗಳನ್ನು ಹಾಡಿರುತ್ತಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ಕರ್ನಾಟಕದ ಪರವಾಗಿ ಪ್ರತಿನಿಧಿಸಿದವರು. ೧೯೮೩ರಲ್ಲಿ ಅಮೆರಿಕಾದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿರುವುದೇ ಅಲ್ಲದೆ ಅಲ್ಲಿನ ಅನೇಕ ನಗರಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಆಕಾಶವಾಣಿಯ ಮೂಲಕವೂ ಇವರ ಭಾವಗೀತೆಗಳ ಗಾಯನ ಪ್ರಸಾರವಾಗಿವೆ.

ಮಹಾರಾಷ್ಟ್ರದ ಖ್ಯಾತ ಕವಿ ಜಿ.ಡಿ. ಮೊಡಗೂಳಕರ್ ಅವರ ಗೀತರಾಮಾಯಣವನ್ನು ಕನ್ನಡೀಕರಿಸಿ ಪ್ರಸಾರ ಮಾಡಿದ ಹೆಗ್ಗಳಿಕೆ ಇವರದು. ಐ.ಬಿ.ಹೆಚ್. ಸಂಸ್ಥೆಯ ಅಮರನಾಥ್ ಧ್ವನಿ ಸುರುಳಿಗಳ ಮೂಲಕ ಇವರ ಧ್ವನಿ ಹೊರಹೊಮ್ಮಿದೆ. ಕರ್ನಾಟಕದ ಚಲನಚಿತ್ರ ಅಭಿವೃದ್ಧಿ ನಿಗಮ ಹೊರತಂದ ಅನೇಕ ಸಾಕ್ಷ್ಯ ಚಿತ್ರಗಳಿಗೆ ಧ್ವನಿ ನೀಡಿದ್ದಾರೆ. ಪತ್ನಿ ಲೀಲಾವತಿ ಅವರೊಂದಿಗೆ ಅನೇಕ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರು ಉತ್ತಮ ಲೇಖಕರು ಕೂಡ. ಸುಧಾ, ಪ್ರಜಾಮತ ವಾರಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಸುಗಮ ಸಂಗೀತ ಬೆಳವಣಿಗೆಯ ಕುರಿತು ಸಂಗೀತ ನೃತ್ಯ ಅಕಾಡೆಮಿಗಾಗಿ ಆಂಗ್ಲ ಭಾಷೆಯಲ್ಲಿ ಒಂದು ದೀರ್ಘ ಲೇಖನವನ್ನು ಬರೆದು. ಹೊರ ರಾಜ್ಯದವರಿಗೆ ಕರ್ನಾಟಕ ಸುಗಮ ಸಂಗೀತದ ಶ್ರೀಮಂತಿಕೆಯ ಬಗ್ಗೆ ತಿಳಿವಳಿಕೆ ಮೂಡುವಂತೆ ಸಹ ಮಾಡಿದ್ದಾರೆ. ’ಇಂಡಿಯನ್ ಸಮ್ಮರ್’ ಹಾಗೂ ’ಮಾಲ್ಗುಡಿ ಡೇಸ್‌’ನಲ್ಲಿ ಅಭಿನಯಿಸಿದ್ದಾರೆ.

ಪ್ರಶಸ್ತಿ – ಸನ್ಮಾನ : ಅಮೆರಿಕಾದ ವಾಷಿಂಗ್ಟನ್‌ನಲ್ಲಿನ ತ್ರಿವೇಣಿ ಕಲಾ ಸಂಘದಿಂದ ಸನ್ಮಾನ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ೧೯೯೭ರ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ. ೨೦೦೫ ರಲ್ಲಿ ಮೈಸೂರಿನ ಸರ್ವಜ್ಞ ಕನ್ನಡ ಸಂಘದ ವತಿಯಿಂದ ಗಾನಸುಧಾ ಪ್ರಶಸ್ತಿ ಸಹ ಇವರಿಗೆ ಲಭಿಸಿದೆ.

ಇವರು ೨೦೦೬ ರಲ್ಲಿ ನಿಧನರಾದರು.