ಜನನ : ೯-೧-೧೯೫೩

ಮನೆತನ : ಶಿಕ್ಷಣ ತಜ್ಞರ ಹಾಗೂ ಕಲಾರಸಿಕರ ಮನೆತನ. ತಂದೆ ಎಂ.ವಿ.ಸುಂದರೇಶನ್.

ಗುರುಪರಂಪರೆ : ಅತಿ ಚಿಕ್ಕವಯಸ್ಸಿನಲ್ಲೇ ರವೀಂದ್ರನಾಥ್ ವಾರಿಯರ್ ಅವರಲ್ಲಿ ಮೃದಂಗ ವಾದನದಲ್ಲಿ ಉನ್ನತ ಶಿಕ್ಷಣ ಹಾಗೂ ಮಾರ್ಗದರ್ಶನ.

ಸಾಧನೆ : ಮೊದ ಮೊದಲು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅನೇಕ ವಿದ್ವಾಂಸರುಗಳಿಗೆ ಮೃದಂಗ ಪಕ್ಕವಾದ್ಯ ನುಡಿಸುವ ಮೂಲಕ ಕಲಾರಂಗ ಪ್ರವೇಶ. ಅದರ ಅನುಭವದಿಂದ ಸುಗಮ ಸಂಗೀತದ ಕಡೆ ಒಲವು ಮೂಡಿಸಿಕೊಂಡು ಆ ಕ್ಷೇತ್ರದಲ್ಲಿ ಒಬ್ಬ ಶ್ರೇಷ್ಠಲಯ ವಾದ್ಯಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಾಡಿನ ಖ್ಯಾತ ಗಾಯಕರಾದ ಬಾಳಪ್ಪ, ಹುಕ್ಕೇರಿ. ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಶ್ಯಾಮಲಾ ಜಿ. ಭಾವೆ, ಶಿವಮೊಗ್ಗಾ ಸುಬ್ಬಣ್ಣ, ಸಿ. ಅಶ್ವಥ್ ಮುಂತಾದವರಿಗೆ ತಬಲಾ ಪಕ್ಕವಾದ್ಯ ನುಡಿಸಿರುತ್ತಾರೆ. ಸುಮಾರು ೪೦ ವರ್ಷದ ಅನುಭವಗಳನ್ನು ಹೊಂದಿರುವ ಬಾಲಿ (ಸಂಗೀತ ಕ್ಷೇತ್ರದಲ್ಲಿ ಬಾಲಿ ಎಂದೆ ಖ್ಯಾತನಾಮರು) ಪಾಶ್ಚಿಮಾತ್ಯ ಹಾಗೂ ಲ್ಯಾಟಿನ್ ಲಯವಾದ್ಯಗಳನ್ನು ನುಡಿಸುವ ರಾಜ್ಯದ ಏಕೈಕ ಕಲಾವಿದನೆಂಬ ಖ್ಯಾತಿಗೆ ಆಯೋಜಿಸಿದ್ದಾರೆ. ಡಾ|| ಯು. ಆರ್. ಅನಂತಮೂರ್ತಿ ಅವರ ’ಮೌನಿ’ ಚಲನಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಲವಾರು ಧ್ವನಿ ಸುರುಳಿ, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿರುವದಲ್ಲದೆ ಕರ್ನಾಟಕದ ಸುವರ್ಣೋತ್ಸವಕ್ಕಾಗಿ ಸ್ವತಃ ಸಾಹಿತ್ಯ – ಸಂಗೀತ ಒದಗಿಸಿದ್ದಾರೆ. ಇದರ ಸಿ.ಡಿ.ಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ವಿತರಿಸಿದ್ದಾರೆ. ಶೈಕ್ಷಣಿಕ ಹಾಗೂ ಸುಗಮ ಸಂಗೀತದ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ’ರಿದಂ ಕಿಂಗ್’ ಎಂದೇ ಖ್ಯಾತರಾಗಿ ದಕ್ಷಿಣ ಭಾರತದ ಏಕೈಕ ಲಯವಾದ್ಯ ಸಂಯೋಜಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಗಮ ಸಂಗೀತ ಕ್ಷೇತ್ರದಲ್ಲಿ ಬಾಲಿಯ ಹೆಸರು ಮನೆಮಾತಾಗಿದೆ. ಹೊರ ರಾಷ್ಟ್ರಗಳಲ್ಲೂ ಸಂಚರಿಸಿ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಪ್ರಶಸ್ತಿ – ಸನ್ಮಾನ : ಸಕಲ ವಾದ್ಯಕಲಾನಿಪುಣ, ಕಲಾಕೋವಿದ, ಸ್ವರಮಂದಾರ, ಲಯಬ್ರಹ್ಮ ಇತ್ಯಾದಿ ಪ್ರಶಸ್ತಿ ಗೌರವಗಳು ಸಂದಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೦-೦೧ರ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸಂದಿದೆ.