ಕೃಷ್ಣರಾಜನಗರ ತಾಲ್ಲೂಕಿನ ಸಾಲಿಗ್ರಾಮವೆಂಬ ಗ್ರಾಮದಲ್ಲಿ ನಾಗಸ್ವರ ವಿದ್ವಾನ್‌ ಎಸ್‌. ಬೋರಯ್ಯನವರ ಪುತ್ರರಾಗಿ ೨೧-೧೦-೧೯೨೮ ರಲ್ಲಿ ಜನಿಸಿದರು. ಮೊದಲು ತಂದೆಯವರಿಂದಲೇ ಆರಂಭವಾದ ಇವರ ಸಂಗೀತ ಶಿಕ್ಷಣ, ಟಿ.ಪುಟ್ಟಸ್ವಾಮಯ್ಯ, ಆರ್.ಕೆ. ಶ್ರೀಕಂಠನ್‌, ಎಂ.ಎಸ್‌. ಶೆಲ್ವಪುಳ್ಳೆ ಅಯ್ಯಂಗಾರ್, ಡಾ|| ವಿ. ದೊರೆಸ್ವಾಮಿ ಅಯ್ಯಂಗಾರ್ ಮತ್ತು ಪಲ್ಲವಿ ಚಂದ್ರಪ್ಪನವರಲ್ಲಿ ಮುಂದುವರೆದು ಉತ್ತಮ ಮಟ್ಟದ ಗಾಯಕರಾಗುವಂತೆ ಕೇಶವಮೂರ್ತಿಯವರಿಗೆ ನೆರವಾಯಿತು.

ಬೆಂಗಳೂರು ಆಕಾಶವಾಣಿಯ ನಿಲಯದ ಕಲಾವಿದರಾಗಿದ್ದ ಇವರು ನಿಲಯದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡರು. ನಾಡಿನಲ್ಲೂ, ನೆರೆ ನಾಡುಗಳಲ್ಲೂ ಇವರ ಮಧುರ ಕಂಠದ ಗಾನಯ ಕಛೇರಿಗಳು ಅಸಂಖ್ಯಾತವಾಗಿ ನಡೆದುವು. ಶ್ರೀ ಜಯಚಾಮರಾಜೇಂದ್ರ ಒಡೆಯರ ಸಮ್ಮುಖದಲ್ಲಿ ಹಾಡಿ ಪ್ರಶಸ್ತಿ ಪಡೆದುದರ ಜೊತೆಗೆ ಕೂಡ್ಲಿ ಶೃಂಗೇರಿ ಮಠದ ‘ಗಾನ ಕಲಾ ಭೂಷಣ’, ಮೈಸೂರು ಹನುಮಜ್ಜಯಂತ್ಯುತ್ಸವದ ‘ಗಾಯನ ಚತುರ’, ಭಾರತೀಯ ಧರ್ಮ ಸಮ್ಮೇಳನದಲ್ಲಿ ‘ಸಂಗೀತ ರತ್ನ’, ಅಖಿಲ ಕರ್ನಾಟಕ ಹರಿದಾಸ ಸಮ್ಮೇಳನದ ‘ಸಂಗೀತ ವಿಶಾರದ’, ಚಿಂತಾಮಣಿ ಗಾಯನ ಸಮಾಜದಿಂದ ‘ಗಾಯಕ ರತ್ನ’, ದಟ್ಟಹಳ್ಳಿ ಆಂಜನಪ್ಪ ಸ್ವಾಮಿಗಳಿಂದ ‘ಸಂಗೀತ ಕಲಾರತ್ನ’ ಇತ್ಯಾದಿ ಹಲವು ಬಿರುದುಗಳನ್ನು ಗಳಿಸಿದ್ದರು. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ೧೯೯೨-೯೩ರ ಸಾಲಿನ ಪ್ರಶಸ್ತಿ ನೀಡಿ ಇವರಿಗೆ ‘ಕರ್ನಾಟಕ ಕಲಾ ತಿಲಕ’ ಗೌರವವನ್ನು ಸಲ್ಲಿಸಿತು.

ರಾಜ್ಯ ಸರಕಾರ ನಡೆಸುವ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಂಗೀತದಲ್ಲಿಯೇ ತನು-ಮನಗಳನ್ನು ಅರ್ಪಿಸಿದ್ದ ಇವರು ೧೧-೯-೨೦೦೦ ರಲ್ಲಿ ನಾದ ದೇವಿಯಲ್ಲಿ ಐಕ್ಯರಾದರು.