ಸರಕಾರದ ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ಸಂಗೀತದ ಗೀಳಿಗೆ ಭಂಗ ಬಾರದಂತೆ, ಆ ಕಲೆಗೆ ಸಂಬಂಧಪಟ್ಟ ವಿವಿಧ ಪ್ರಕಾರಗಳಲ್ಲಿ ನಿರತರಾಗಿರುವ ಕೀರ್ತಿ ಮೈಸೂರಿನ ಹಿರಿಯ ಹಾರ್ಮೋನಿಯಂ ವಾದಕ ಎಸ್‌. ಬಿ. ಹುನಗುಂದರಿಗೆ ಸಲ್ಲತಕ್ಕದ್ದು. ಆ ಹುದ್ದೆಯಲ್ಲಿ ಮೇಲಿಂದ ಮೇಲೆ ಉದ್ಭವಿಸುವ ವರ್ಗಾವಣೆಗಳು ಪ್ರತಿಕೂಲವಾಗದೇ ಅದನ್ನು ತಮ್ಮ ಅನುಕೂಲಕ್ಕೆ ಪರಿವರ್ತಿಸಿಕೊಂಡು, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ, ಕರ್ನಾಟಕ ಹಾಗೂ ಕೇರಳಗಳ ರೇಡಿಯೋ ಕೇಂದ್ರಗಳಿಂದ ಹಿಂದೂಸ್ಥಾನಿ ಸಂಗೀತ ಕಛೇರಿಗಳನ್ನು ಬಿತ್ತರಿಸುತ್ತಾ ಬಂದಿದ್ದಾರೆ. ಅಲ್ಲಿನ ಉಸ್ತಾದ್‌ಗಳ ಸಂಪರ್ಕದಿಂದ ತಮ್ಮ ವಾದನಶೈಲಿಯನ್ನೂ ಪರಿಷ್ಕರಿಸಿಕೊಳ್ಳಲು ಸಾಧ್ಯವಾಗಿದೆ. ಹೀಗೆ ಅವರಿಗೆ ನೆರವಾದ ಗುರುಗಳೆಂದರೆ ಬೆಳಗಾವಿಯ ಅಬ್ದುಲ್‌ ಅಜಿಜ್‌ ರೂನ್‌ ಸಾರಂಗೇವಾಲೇ, ಶೊಲಾಪುರದ ಪಂ. ಹರಿಭಾವು ಬೇಂದ್ರೆ ಮತ್ತು ಮುಂಬಯಿನ ಪ್ರಭುದೇವ ಸರದಾರ್.

ಇವರ ಹಾಡುಗಾರಿಕೆ ಪಾಟ್ಣ, ಪುಣೆ, ಧಾರವಾಡ ಮತ್ತು ಬೆಂಗಳೂರು ಆಕಾಶವಾಣಿ ನಿಲಯಗಳಿಂದ ಪ್ರಸಾರವಾಗಿದ್ದರೆ, ಇವರಿಗೆ ಹಾರ್ಮೋನಿಯಂ ಸಾಥಿ ಒದಗಿಸಿದ ಶ್ರೇಷ್ಠ ಗಾಯಕರ ಸಂಖ್ಯೆ ಅಷ್ಟೇ ವಿಸ್ತಾರ. ಮೈಸೂರು ವಿಶ್ವವಿದ್ಯಾನಿಲಯದ ಸಲುವಾಗಿ ಶ್ರೀಯುತರು ಉತ್ತರ ಕರ್ನಾಟಕದ ಅನೇಕ ವೃತ್ತಿ ನಾಟಕ ಕಲಾವಿದರಿಗೂ ಹಾರ್ಮೋನಿಯಂನಲ್ಲಿ ಸಹಕರಿಸಿದ್ದಾರೆ.

ಹುನಗುಂದರ ಮತ್ತೊಂದು ಮಹತ್ವದ ಸಾಧನೆ ಎಂದರೆ ಹಲವಾರು ಗೀತ-ನಾಟಕಗಳಿಗೆ ಸಂಗೀತದ ನಿರ್ದೇಶನ, ಅಂತೆಯೇ ಲಾಗಾಯಿತಿನಿಂದ ಮೈಸೂರಿನ ‘ಸ್ಟಾರ್ ಆಫ್‌ ಮೈಸೂರು’ ಎಂಬ ಆಂಗ್ಲ ದೈನಂದಿನದ ಹಿಂದೂಸ್ಥಾನಿ ಸಂಗೀತ ವಿಮರ್ಶಕರಾಗಿ ಸಲ್ಲಿಸುತ್ತಿರುವ ಸೇವೆ ಅನುಪಮ.

ಭಾರತ ಸರಕಾರದ ದೂರ ಸಂಪರ್ಕ ಇಲಾಖೆಯ ಪ್ರಥಮ ದರ್ಜೆಯ ಅಧಿಕಾರಿಯಾಗಿದ್ದ ಶ್ರೀಯುತರು ೧೯೭೭ರಲ್ಲಿ ನಿವೃತ್ತಿ ಹೊಂದಿ, ಅಂದಿನಿಂದ ಮೈಸೂರಿನಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಉಚಿತವಾಗಿ ಬೋಧಿಸುತ್ತಿದ್ದಾರೆ. ಇವರ ಸೇವೆಯನ್ನು ಮೆಚ್ಚಿ ಸ್ಥಳೀಯ ರೋಟರಿ, ಗಾನ ಭಾರತಿ ಮತ್ತು ‘ಸಮತೆಂತೋ’ ಸಂಸ್ಥೆಗಳು ಸನ್ಮಾನಿಸವೆ. ಶ್ರೀ ಎಸ್‌.ಬಿ. ಹುನಗುಂದ ಅವರ ಸಂಗೀತ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೬-೯೭ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.