ಜನನ : ೨೯-೧೧-೧೯೪೮ ಮೈಸೂರು

ಮನೆತನ : ಯಕ್ಷಗಾನ – ನಾಟಕ ಪರಂಪರೆಯ ಮನೆತನ. ತಂದೆ ಬಿ. ಶಂಕರಪ್ಪ – ತಾಯಿ ಮಹದೇವಮ್ಮ.

ಗುರುಪರಂಪರೆ : ತಂದೆಯವರಿಂದಲೇ ಶಿಕ್ಷಣ. ಯಕ್ಷಗಾನ ಬಯಲಾಟ – ರಂಗಗೀತೆಗಳ ಗಾಯನಗಳೆ ಸುಗಮ ಸಂಗೀತದ ಕಡೆ ಒಲವು ಮೂಡಲು ಸ್ಫೂರ್ತಿ, ಲೌಕಿಕ ವಿದ್ಯಾಭ್ಯಾಸದಲ್ಲಿ ಆಂಗ್ಲ ಭಾಷಾ ಸ್ನಾತಕೋತ್ತರ ಪದವಿ. ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಪ್ರಾಚಾರ್ಯ.

ಸಾಧನೆ: ವಿದ್ಯಾಥಿ ದೆಸೆಯಲ್ಲಿದ್ದಾಗಲೆ ಶಾಲಾ – ಕಾಲೇಜುಗಳಲ್ಲಿ ನಡೆಯುತ್ತಿದ್ದ ಅಂತರ ಕಾಲೇಜು ಚರ್ಚಾಸ್ಪರ್ಧೆ. ಗೀತೆಗಳ – ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಕೆ. ೧೯೬೫ ರಲ್ಲಿ ಸುಗಮ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ. ೧೯೬೬ ರಲ್ಲಿ ಕರ್ನಾಟಕ ಸರ್ಕಾರ ನಡೆಸಿದ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. ಅನಂತರ ರಾಜ್ಯಾದ್ಯಂತ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುತ್ತಾರೆ. ನಾಟಕ ಕ್ಷೇತ್ರದಲ್ಲೂ ಸಾಕಷ್ಟು ಪರಿಶ್ರಮವಿದೆ. ಹಿರಿಯ ಕವಿಗಳ ಅನೇಕ ಗೀತೆಗಳಿಗೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ರಾಗಸಂಯೋಜನೆ ಮಾಡಿ ಹಾಡಿದ್ದಾರೆ. ತಮ್ಮದೆ ಹಂಸಧ್ವನಿ ಸಾಂಸ್ಕೃತಿಕ ಟ್ರಸ್ಟಿನ ಸ್ಥಾಪಕ ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿ ನಾಡಿನ ಮುಂಚೂಣಿ ಗಾಯಕರುಗಳೆಲ್ಲರನ್ನು ಕರೆಸಿ ಗೌರವಿಸಿದ್ದಾರೆ.

ಸುಗಮ ಸಂಗೀತದ ಮೇರು ಪಿ. ಕಾಳಿಂಗರಾಯರ ಅಭಿಮಾನಿಯಾಗಿ ಅವರ ನೆನಪಿನ ಸಂಚಿಕೆ ಸಂಪಾದಕರಾಗಿ ಕಾರ್ಯನಿರ್ವಹಿಸಿರುವುದೇ ಅಲ್ಲದೆ ಪ್ರತಿ ವರ್ಷ ಅವರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ವಚನ ಸಂಗೀತ, ಶಿಶುನಾಳರ ಗೀತೆಗಳು. ದೇವರನಾಮಗಳ ಕುರಿತು ಹಲವಾರು ಕಡೆ ಪ್ರಾತ್ಯಕ್ಷಿಕೆಗಳನ್ನು ನೀಡಿರುತ್ತಾರೆ. ೨೦೦೩ ರಲ್ಲಿ ಅಮೆರಿಕಾದಲ್ಲಿ ಕನ್ನಡ ಭಾವಗಂಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಕೆಲವು ಧ್ವನಿ ಸುರುಳಿಗಳು ಹೊರಬಂದಿವೆ.

ಪ್ರಶಸ್ತಿ – ಸನ್ಮಾನ : ಕನ್ನಡ ಕೋಗಿಲೆ, ರೋಟರಿ ರಾಜ್ಯೋತ್ಸವ ಪ್ರಶಸ್ತಿ, ರೈಲ್ವೇ ಕನ್ನಡ ಸಂಘದಿಂದ ರಾಜ್ಯೋತ್ಸವ ಸನ್ಮಾನ, ಕ್ಯಾಲಿಫೋರ್ನಿಯ ಕನ್ನಡ ಸ್ನೇಹಿತರ ಬಳಗದಿಂದ ’ನೈಟಿಂಗೇಲ್ ಆಫ್ ಕರ್ನಾಟಕ’ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೨೦೦೩-೦೪ ರ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಇವರಿಗೆ ಸಂದಿದೆ.