ತಮ್ಮ ಸೋದರತ್ತೆ ಜಿ. ವಿಶಾಲಾಕ್ಷಿ ಅವರಿಂದ ಬಾಲ್ಯದಿಂದಲೇ ಭರತನಾಟ್ಯ ಮತ್ತು ವೀಣೆಯನ್ನು ಕಲಿತ ಶ್ರೀಮತಿ ಮೀನಾಕ್ಷಿಯವರು ಶ್ರೀ ರಾಂಗೋಪಾಲ್ ಮತ್ತು ಶ್ರೀಮತಿ ಮೃಣಾಲಿನಿ ಸಾರಾಭಾಯ್ ಅವರಿಂದ ಮಾರ್ಗದರ್ಶನವನ್ನು ಪಡೆದರು. ರಾಂಗೋಪಾಲ್ ಅವರ ತಂಡದೊಂದಿಗೆ ಬ್ರಿಟನ್ ಮತ್ತು ಯೂರೋಪಿನ ಅನೇಕ ಕಡೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಮೃಣಾಲಿನಿ ಸಾರಾಭಾಯ್ ಅವರ ತಂಡದೊಂದಿಗೆ ರಾಷ್ಟ್ರದ ಅನೇಕ ಕಡೆ ನರ್ತಿಸಿದ್ದಾರೆ. “ಋಷಿ ವ್ಯಾಲಿ” ಶಾಲೆಯಲ್ಲಿ ಎರಡು ದಶಕಕ್ಕೂ ಮೀರಿ ನೃತ್ಯ ಶಿಕ್ಷಣ ನೀಡಿದ್ದಾರೆ. ಅನೇಕ ನೃತ್ಯ ನಾಟಕಗಳಿಗೆ ನೃತ್ಯ ಸಂಯೋಜಿಸಿ, ನಿರ್ದೇಶಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ನಾಟಕ, ಸಂಗೀತ ವಿಭಾಗದಲ್ಲಿ ಕೆಲಕಾಲ ಬೋಧಕಿಯಾಗಿದ್ದಲ್ಲದೆ, ನಗರದಲ್ಲಿ “ವೀಣಾ ವಿಶಾಲಾಕ್ಷಿ ನೃತ್ಯ ಶಾಲೆ” ಯನ್ನು ಸ್ಥಾಪಿಸಿ, ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಇವರಿಗೆ ೧೯೯೦-೯೧ನೇ ವರ್ಷದ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕೆ” ಬಿರುದನ್ನು ನೀಡಿ ಗೌರವಿಸಿದೆ.