“ನಮ್ಮ ದೇಶದಲ್ಲಿ ಒಬ್ಬ ಚಕ್ರವರ್ತಿ ಇದ್ದ. ಆತ ರಕ್ತ ಪಾತದಿಂದ ಕೂಡಿದ ಭಾರೀ ಯುದ್ಧದ ಮೂಲಕ ಸಾಮ್ರಾಜ್ಯವೊಂದನ್ನು ಗೆದ್ದ ನಂತರ ವಿರಕ್ತನಾಗಿ ಯುದ್ಧವನ್ನು ಬಿಟ್ಟುಕೊಟ್ಟು ಸಂನ್ಯಾಸಿಯಾದ. ಅಹಿಂಸೆಯ ಮಹಾನ್ ಬೋಧಕನಾದ. ಅಂತೆಯೇ ಶಕ್ತಿ ಸಾಹಸಗಳಿಂದ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಏರಿರುವ ನೀವು ಮುಂದೆ ಏನಾಗುತ್ತೀರೋ ಯಾರು ಬಲ್ಲರು?”

ರಷ್ಯದ ಸರ್ವಾಧಿಕಾರಿ ಮಾರ್ಷಲ್ ಸ್ಟಾಲಿನ ಅವರೊಂದಿಗೆ ಈ ಮಾತನ್ನು ಆಡಿದ ಧೈರ‍್ಯಶಾಲಿ, ವಿಶ್ವದ ಮಹಾನ್ ತತ್ತ್ವಶಾಸ್ತ್ರಜ್ಞ ಹಾಗೂ ಮಾನವತಾವಾದಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್, ೧೯೪೯ರಲ್ಲಿ ತನಗೆ ತೀರಾ ಹೊಸದಾದ ಜವಾಬ್ದಾರಿಯಾಗಿ ’ರಷ್ಯದಲ್ಲಿ ಭಾರತದ ರಾಯಭಾರಿ’ ಹುದ್ದೆಗೆ ನೇಮಿಸಿದಾಗ ಮಾಸ್ಕೋಗೆ ತೆರಳಿದ್ದ ರಾಧಾಕೃಷ್ಣನ್ ಸರ್ವಾಧಿಕಾರಿ ಸ್ಟಾಲಿನ್‌ನೊಂದಿಗೆ ಪ್ರಥಮ ಭೇಟಿಯಲ್ಲೇ ಹೇಳಿದ ಮಾತು ಇದು.

ಸ್ಟಾಲಿನ್‌ರಿಗೆ ಅಂದು ರಷ್ಯದ ಎದುರಿರಲಿಲ್ಲ. ಹಲವಾರು ವರ್ಷಗಳ ಕಾಲ ಅವರು ಆಡಿದುದೇ ಕಡೆಯ ಮಾತು, ಮಾಡಿದುದೇ ಸರಿ ಎನ್ನುವಂತೆ ಅಧಿಕಾರ ನಡೆಸಿದರು. ಇಡೀ ಪ್ರಪಂಚದಲ್ಲಿ ಅತ್ಯಂತ ಶಕ್ತಿವಂತರೆನಸಿಕೊಂಡ ನಾಲ್ಕೈದು ಜನರಲ್ಲಿ ಒಬ್ಬರು. ಯಾರೂ ಅವರಿಗೆ ನೀವು ಮಾಡಿದ್ದು ಸರಿ-ತಪ್ಪು ಎಂದು ಹೇಳರಲಿಲ್ಲ. ತನ್ನ ಬೆನ್ನು ಚಪ್ಪರಿಸುವಂತಹ, ಆದರೆ ಅದರ ಹಿಂದೆ ರಕ್ತಪಾತದ ಕ್ರಾಂತಿಮಾರ್ಗ ಅಂತಿಮವಾಗಿ ತ್ಯಜಿಸತಕ್ಕದ್ದೇ ಎನ್ನುವ ಸತ್ಯದೊಂದಿಗೆ ಕೂಡಿದ ಈ ಮಾತಿಗೆ ಸ್ವಾಲಿನರು ಏನೆಂದು ಉತ್ತರಿಸಿಯಾರು? “ಹೌದು. ಕೆಲವೊಮ್ಮೆ ಪವಾಡಗಳು ನಡೆದು ಹೋಗುತ್ತವೆ, ನಾನೂ ಐದು ವರ್ಷ ಕಾಲ ಧರ್ಮಶಾಸ್ತ್ರದ ಪಾಠಶಾಲೆಯಲ್ಲಿದ್ದೆ” ಎಂದರು.

ರಾಧಾಕೃಷ್ಣನ್ ಅವರು ಭೇಟಿ ಮುಗಿಸಿ ಹಿಂತಿರುಗಿದಾಗ ಅವರಿಬ್ಬರ ಮಾತುಕತೆಯಲ್ಲಿ ದುಭಾಷಿಯಾಗಿದ್ದ ಪಾವ್ಲೊವ್ ರೊಂದಿಗೆ ಸ್ಟಾಲಿನ್ ಹೀಗೆ ಹೇಳಿದರಂತೆ, “ಅವರು ಸಂಕುಚಿತ ಮನೋಭಾವದ ರಾಷ್ಟ್ರಭಕ್ತ ಅಲ್ಲ, ಅವರ ಹೃದಯ ಸಂಕಷ್ಟದಲ್ಲಿರುವ ಮಾನವ ಜನಾಂಗಕ್ಕಾಗಿ ಮಿಡಿಯುತ್ತಿದೆ.”

ಸ್ಟಾಲಿನ್-ರಾಧಾಕೃಷ್ಣನ್

ಬಾಲ್ಯ

 

೧೮೮೮ರ ಸೆಪ್ಟೆಂಬರ್ ತಿಂಗಳ ಐದನೇ ತಾರೀಕಿನಂದು ತಮಿಳುನಾಡಿನ ಚಿತ್ತೂರು ಜಿಲ್ಲೆಯ ತಿರುತ್ತಣಿಯಲ್ಲಿ ಜನಿಸಿದ ರಾಧಾಕೃಷ್ಣನ್, ಮಧ್ಯಮ ವರ್ಗದ ಧಾರ್ಮಿಕ ಮನೋಭಾವದ ತೆಲುಗು ಹಿಂದೂ ಕುಟುಂಬವೊಂದರಲ್ಲಿ ಹುಟ್ಟಿದರು. ಅವರು ಸಾಮಾನ್ಯ ಓರ್ವ ಜಮೀನ್ದಾರಿಯ ತಹಶೀಲ್ದಾರರಾಗಿದ್ದ ವೀರಸಾಮಯ್ಯ ಅವರ ದ್ವಿತೀಯ ಪುತ್ರ. ತಿರುತ್ತಣಿ ಹಾಗೂ ಸಮೀಪದಲ್ಲೇ ಇದ್ದ ವಿಶ್ವ ವಿಖ್ಯಾತ ಧಾರ್ಮಿಕ ಕೇಂದ್ರ ತಿರುಪತಿಗಳ ಧಾರ್ಮಿಕ ಸ್ವರೂಪ ಬೀರಿದ ಪ್ರಭಾವವೇ ರಾಧಾಕೃಷ್ಣನ್ ವಿಶ್ವವಿಖ್ಯಾತ ತತ್ತ್ವಜ್ಞಾನಿ ಆಗಿ ರೂಪುಗೊಳ್ಳಲು ಕಾರಣ.

ಎಂಟರ ಹರೆಯದಲ್ಲೇ ಅವರನ್ನು ಜರ್ಮನ್ ಮಿಷನ್ ಶಾಲೆಗೆ ಸೇರಿಸಲಾಯಿತು. ಐದು ವರ್ಷಗಳ ಬಳಿಕ ವೆಲ್ಲೂರಿನ ವೊರ್ಹಿಸ್ ಕಾಲೇಜಿಗೆ ಸೇರಿಸಲ್ಪಟ್ಟ ರಾಧಾಕೃಷ್ಣನ್ ಪ್ರೌಢ ಶಿಕ್ಷನದ ನಂತರ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು. ಹೀಗೆ ಸಾಂಪ್ರದಾಯಿಕ ಮನೆತನಕ್ಕೆ ಸೇರಿದ್ದರೂ ಅವರ ಶಿಕ್ಷಣವೆಲ್ಲ ನಡೆದದ್ದು ಕ್ರಿಶ್ಚಿಯನ್ ವಿದ್ಯಾಸಂಸ್ಥೆಗಳಲ್ಲಿ.

ಹಿಂದೂ ಧರ್ಮದಲ್ಲಿ ಒಲವು

ಹೀಗಾಗಿ ರಾಧಾಕೃಷ್ಣನ್‌ಗೆ ಎಳವೆಯಲ್ಲಿ ಬೈಬಲ್ ಕಂಠಪಾಠ. ಕ್ರಿಶ್ಚಿಯನ್ ಧರ್ಮದ ಬಗ್ಗೆ ಪರಿಪೂರ್ಣ ಜ್ಞಾನ. ಕ್ರಿಶ್ಚಿಯನ್ ಮಿಷನರಿಗಳು ಹಿಂದೂ ಧರ್ಮದ ಬಗ್ಗೆ, ಹಿಂದೂ ನಂಬಿಕೆ ಹಾಗೂ ಸಂಪ್ರದಾಯಗಳ ಬಗ್ಗೆ ಮಾಡುತ್ತಿದ್ದ ಟೀಕೆಗಳೂ ಅವರಿಗೆ ಚೆನ್ನಾಗಿ ಗೊತ್ತಿದ್ದವು.

ಈ ಟೀಕೆಗಳಿಂದ ಬಹಳಷ್ಟು ಮಾನಸಿಕ ವೇದನೆ ಅನುಭವಿಸುತ್ತಿದ್ದ ಅವರು ಹಿಂದೂ ಧರ್ಮದ ಸತ್ವವೇನು? ಅದರ ದೋಷಗಳೇನು? ಎಂದು ಶೋಧಿಸುವ ಸಲುವಾಗಿ ಹಿಂದೂಧರ್ಮದ ಕೂಲಂಕುಷ ಅಧ್ಯಯನದಲ್ಲಿ ತೊಡಗಿದರೆಂದು ಅವರೇ ಬರೆದಿದ್ದಾರೆ ತತ್ವ್ತಶಾಸ್ತ್ರದ ಸ್ನಾತಕೋತ್ತರ ಪದವಿಗಾಗಿ ಅವರು ಥೀಸಿಸ್‌ಗೆ ’ವೇದಾಂತದ ನೀತಿ ತತ್ತ್ವಗಳು’ ಎನ್ನುವ ವಿಷಯ ಆರಿಸಿಕೊಂಡದ್ದು ಇದೇ ಹಿನ್ನೆಲೆಯಲ್ಲಿ.

ಧಾರ್ಮಿಕ ಮನೋಭಾವದವರಾದರೂ ತಂದೆ ವೀರ ಸಾಮಯ್ಯ ರಾಧಾಕೃಷ್ಣನ್‌ರನ್ನು ಕ್ರಿಶ್ಚಿಯನ್ ಸಂಸ್ಥೆಗಳಿಗೆ ಸೇರಿಸಿದ ಕಾರಣ, ಕ್ರಿಶ್ಚಿಯನ್ ಶಾಲೆಗಳ ಶಿಸ್ತುಬದ್ಧ ವ್ಯವಸ್ಥಿತ ಜೀವನ ಅವರಲ್ಲಿ ಮೂಡಿ ಬಂತು.

ಮದುವೆ, ಉದ್ಯೋಗ

ಹದಿನೆಂಟರ ಎಳೆಯ ಪ್ರಾಯದಲ್ಲಿ ೧೯೦೬ರಲ್ಲಿ ಶಿವಕಾಮಮ್ಮ ಅವರೊಂದಿಗೆ ರಾಧಾಕೃಷ್ಣನ್ ರ ವಿವಾಹ ಆಯಿತು. ಆದರೆ ವೈವಾಹಿಕ ಜೀವನ ಅವರ ಅಧ್ಯಯನ ಶೀಲತೆಗೆ ಒಂದಿಷ್ಟೂ ಅಡ್ಡಿ ಆಗಲಿಲ್ಲ. ೧೯೦೯ರಲ್ಲಿ ಅವರು ಮದ್ರಾಸ್ ವಿಶ್ವವಿದ್ಯಾಲಯದ ಎಂ. ಎ. ಶಿಕ್ಷಣ ಮುಗಿಸಿದರು.

ಪ್ರೆಸಿಡೆನ್ಸಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಹಾಬ್ಸ್ ರಾಧಾಕೃಷ್ಣನ್‌ರ ಬುದ್ಧಿಮತ್ತೆಯನ್ನು ಸರಿಯಾಗಿ ಗುರುತಿಸಿದರು. ರಾಧಾಕೃಷ್ಣನ್ ತಿಂಗಳಿಗೆ ಒಂದನೂರು ರೂಪಾಯಿ ವೇತನದ ಮೇಲೆ ಮದರಾಸು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಪ್ರಾದ್ಯಾಪಕರಾಗಿ ನೇಮಕಗೊಂಡರು.

ತಮ್ಮ ಮಹತ್ತರ ತಿಳಿವಳಿಕೆ ಹಾಗೂ ಅಪಾರ ಪ್ರೌಢಿಮೆಯ ಕಾರಣ ಎರಡೇ ವರ್ಷಗಳ ಅವಧಿಯಲ್ಲಿ ಅವರು ಅದೇ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಉಪ ಪ್ರಾಚಾರ‍್ಯರಾದರು. ೧೯೧೬ರಲ್ಲಿ ಅದೇ ಕಾಲೇಜಿನಲ್ಲಿ ತತ್ತ್ವ ಶಾಸ್ತ್ರದ ಪ್ರಾಚಾರ‍್ಯರಾದರು.

ಧೀಮಂತರು

ಸಂಸ್ಕೃತ ಹಾಗೂ ಹಿಂದಿಗಳೆರಡರಲ್ಲೂ ರಾಧಾಕೃಷ್ಣನ್ ರವರಿಗೆ ವಿಶೇಷ ಆಸಕ್ತಿ ಇತ್ತು. ಎರಡನ್ನೂ ಕಲಿತ ಅವರು ಸಂಸ್ಕೃತದಲ್ಲಿದ್ದ ವೇದ, ಉಪನಿಷತ್ತುಗಳನ್ನು ಅಭ್ಯಸಿಸಿದರು. ಮಾತೃಭಾಷೆ ತೆಲುಗು ಹಾಗೂ ಇತರ ಪ್ರಾದೇಶಿಕ ಭಾಷೆಗಳನ್ನು ಕಲಿತರು. ಹೀಗೆ ಹಲವಾರು ಭಾಷೆಗಳಲ್ಲಿ ಪಾಂಡಿತ್ಯವಿದ್ದ ಅವರು ಜೀವನವಿಡೀ ಓದುವುದರಲ್ಲಿ ಆನಂದ ಕಾಣುತ್ತಿದ್ದರು. ಶ್ರೇಷ್ಠ ಪುಸ್ತಕಗಳ ಸಂಗ್ರಹ ಅವರ ಜೀವನದ ಹವ್ಯಾಸವಾಯಿತು. ಆದರೆ ಅದು ಕೇವಲ ಆಂಡಬರವಾಗಿರಲಿಲ್ಲ. ಅವರು ಪ್ರತಿಯೊಂದನ್ನೂ ಓದಿ ಜೀರ್ಣಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡರು. ಒಮ್ಮೆ ಮಗುಚಿದ ಪುಟಗಳನ್ನು ಬೇಕಾದಾಗ ತದ್ರೂಪ ಹೇಳುವ ಹಾಗೂ ಒಮ್ಮೆ ಹೇಳಿದ್ದನ್ನು ಅನಂತರ ಅಕ್ಷರಶಃ ಲೇಖನಕ್ಕೆ ಇಳಿಸುವ ಅಪಾರ ಸ್ಮರಣ ಶಕ್ತಿ ಅವರಿಗಿತ್ತು.

ಮೈಸೂರು ವಿಶ್ವವಿದ್ಯಾನಿಲಯ

೧೯೧೭ರಲ್ಲಿ ರಾಜಮಹೇಂದ್ರಿಯ ಆರ್ಟ್ಸ್‌ಕಾಲೇಜಿಗೆ ವರ್ಗಾಯಿಸಲ್ಪಟ್ಟ ರಾಧಾಕೃಷ್ಣನ್ ಮರುವರ್ಷವೇ ಮೈಸೂರು ವಿಶ್ವವಿದ್ಯಾಲಯಕ್ಕೆ ತೆರಳಿದರು. ಮೈಸೂರಿನಲ್ಲಿರುವಾಗ, ’ಭಾರತದ ಅತಿ ಕಿರಿಯ ವಯಸ್ಸಿನ ಪ್ರಾಚಾರ‍್ಯ’ರೆಂದು ಹೆಸರು ಗಳಿಸಿದ್ದ ಅವರು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ. ಇತರ ಪ್ರಾಚಾರ‍್ಯರಿಗೂ ಮೆಚ್ಚುಗೆಯ ವ್ಯಕ್ತಿ. ಎರಡು ಕಾಲುಗಳನ್ನು ಜೋಡಿಸಿ ನೇರವಾಗಿ ನಿಂತುಕೊಂಡು ತನ್ನ ನೆಹರೂ ಕೋಟಿನ ಮೇಲಿನೆರಡು ಗುಂಡಿಗಳನ್ನು ತೆರೆದಿಟ್ಟು, ನೇರವಾಗಿ ಆದರೆ ಸರಳವಾಗಿ ವಿಷಯವನ್ನು ಅದರಲ್ಲೇ ತಲ್ಲೀನರಾಗಿ ವಿವರಿಸುವ ಅವರ ಶೈಲಿ ಅತ್ಯಂತ ಆಕರ್ಷಣೀಯ. ಅವರ ಪಾಠ ಕೇಳಲು ಕೆಲವೊಮ್ಮೆ ಇತರ ಪ್ರಾಚಾರ‍್ಯರೂ ಬಂದು ವಿದ್ಯಾರ್ಥಿಗಳೊಂದಿಗೆ ಕುಳಿತು ಕೊಳ್ಳುತ್ತಿದ್ದರಂತೆ.

ಪ್ರತಿಭಾವಂತ ಲೇಖಕ

ಈ ಮೂರು ವರ್ಷಗಳ ಅವಧಿಯಲ್ಲಿ ರಾಧಾಕೃಷ್ಣನ್ ಎರಡು ಪ್ರಮುಖ ಪುಸ್ತಕಗಳನ್ನು ಪುರ್ಣಗೊಳಿಸಿದರು. ’ರವೀಂದ್ರನಾಥ ಠಾಕೂರರ ಜೀವನ ದೃಷ್ಟಿ’ ಎನ್ನುವ ಇವರ ಮೊದಲ ಪುಸ್ತಕ ಸ್ವತಃ ರವೀಂದ್ರರಿಂದಲೇ ಮೆಚ್ಚುಗೆ ಪಡೆಯಿತು.

ಲೇಖಕ ರಾಧಾಕೃಷ್ಣನ್‌ರನ್ನು ಜಗತ್ತಿಗೆ ಪರಿಚಯಿಸಿದ ಮೊದಲ ಪುಸ್ತಕ ಇದು. ’ಸಮಕಾಲೀನ ತತ್ತ್ವ ಶಾಸ್ತ್ರದಲ್ಲಿ ಧರ್ಮದ ಮಹತ್ವ” ಅವರ ದ್ವಿತೀಯ ಪುಸ್ತಕ.

ಕಲ್ಕತ್ತ ವಿಶ್ವವಿದ್ಯಾನಿಲಯಕ್ಕೆ

ಈ ಎರಡು ಪ್ರಕಟಣೆಗಳಿಂದಾಗಿ ರಾಧಾಕೃಷ್ಣನ್‌ರ ಜೀವನದಲ್ಲಿ ಮಹತ್ತರ ಪರಿವತ್ನೆ ಉಂಟಾಯಿತು. ಕಲ್ಕತ್ತ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದ ’ಬಂಗಾಳದ ಹುಲಿ’ ಆಶುತೋಷ ಮುಖರ್ಜಿ ಈ ಪ್ರತಿಭೆಯನ್ನು ಗುರುತಿಸಿ ಅವರನ್ನು ಕಲ್ಕತ್ತ ವಿಶ್ವವಿದ್ಯಾನಿಲಯಕ್ಕೆ ಬರುವಂತೆ ಆಹ್ವಾನಿಸಿದರು. ಅಲ್ಲಿ ಮಾನಸಿಕ ಹಾಗೂ ನೈತಿಕ ವಿಜ್ಞಾನ ವಿಷಯಗಳಿಗಾಗಿ ಸ್ಥಾಪಿತವಾಗಿದ್ದ ಪ್ರೊಫೆಸರ್ ಸ್ಥಾನ ದೊರೆಯಿತು. ಅದನ್ನು ’ಕಿಂಗ್ ಜಾರ್ಜ್‌ದಿ ಫಿಫ್ತ್‌ಪ್ರೊಫೆಸರ್ ಷಿಪ್’ ಎಂದು ಹೆಸರಿಸಿದ್ದರು. ಆ ಕಾಲದಲ್ಲಿ ಭಾರತದಲ್ಲಿ ತತ್ತ್ವಶಾಸ್ತ್ರದ ಪರಮೋಚ್ಛ ಪೀಠ ಅದು. ೧೯೨೧ ರಿಂದ ೧೯೩೧ ಹಾಗೂ  ಪುನಃ ೧೯೩೭ರಿಂದ ೧೯೪೪ರವರೆಗೆ ಅವರು ಈ ಪೀಠವನ್ನು ಅಲಂಕರಿಸಿದ್ದರು.

೧೯೨೬ರ ವೇಳೆಗೆ ಈ ಕಿರಿ ವಯಸ್ಸಿನ ತತ್ತ್ವ ಜ್ಞಾನಿ ಪಾಶ್ಚಾತ್ಯರ ಮೇಲೆ ಪ್ರಭಾವ ಬೀರಿದ್ದರು. ಪರಿಣಾಮವಾಗಿ ೧೯೨೬ರಲ್ಲಿ ಅವರಿಗೆ ಆಕ್ಸ್‌ಫರ್ಡ್ ಮ್ಯಾಂಚೆಸ್ಟರ್ ಕಾಲೇಜು ಆಪ್ಟನ್ ಉಪನ್ಯಾಸಗಳಿಗೆ ಕರೆ ನೀಡಿತು. ಅಲ್ಲಿ ಅವರು ಆರಿಸಿಕೊಂಡ ವಿಷಯ ’ಜೀವನದ ಬಗ್ಗೆ ಹಿಂದೂ ದೃಷ್ಟಿಕೋನ’. ಈ ಉಪನ್ಯಾಸ ಮಾಲೆಗೆ ಆಹ್ವಾನಿಸಲ್ಪಟ್ಟ ಪ್ರಥಮ ಭಾರತೀಯರಾದ ರಾಧಾಕೃಷ್ಣನ್ ಅವರ ಈ ಉಪನ್ಯಾಸಗಳು ಪುಸ್ತಕ ರೂಪದಲ್ಲಿ ಪ್ರಕಟಿಸಲ್ಪಟ್ಟವು; ಮಾತ್ರವಲ್ಲ ಕ್ರಮೇಣ, ಫ್ರೆಂಚ್‌, ಜರ್ಮನ್ ಇತ್ಯಾದಿ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟು, ಜಾಗತಿಕ ಖ್ಯಾತಿ ಗಳಿಸಿದುವು.

ಇಂಗ್ಲೆಂಡಿನಲ್ಲಿ ತಮ್ಮ ಪ್ರಥಮ ಯಶಸ್ವಿ ಉಪನ್ಯಾಸಗಳಿಂದ ಹಿಂತಿರುಗಿದ ಅವರು ತಮ್ಮ ಸ್ವಕ್ಷೇತ್ರ ಮದರಾಸಿನಲ್ಲಿ ಪ್ರಥಮ ಸಾರ್ವಜನಿಕ ಭಾಷಣ ಮಾಡಿದರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜು ಸಭಾಂಗಣದಲ್ಲಿ ಏರ್ಪಾಡಾಗಿದ್ದ ಸಭೆ ಆರಂಭಗೊಳ್ಳುವ ಮೊದಲೇ ನಿಲ್ಲಲೂ ಜಾಗ ಸಿಕ್ಕದಷ್ಟು ಜನರು ಸೇರಿದ ಕಾರಣ, ಭಾಷಣವನ್ನು ಕಟ್ಟಡದ ಹೊರಗಡೆ ವಿಶಾಲವಾಗಿದ್ದ ಪ್ರದೇಶದಲ್ಲಿ ನಡೆಸಬೇಕಾಯಿತು. ತಮ್ಮ ನಿರರ್ಗಳ ಶಬ್ಧ ವೈಖರಿಯಿಂದ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡಿದ ರಾಧಾಕೃಷ್ಣನ್, ಭಾಷಣ ಮುಗಿಸುವವರೆಗೂ ಸಭೆಯಲ್ಲಿ ಸಾಸಿವೆ ಬಿದ್ದರೂ ಕೇಳುವಷ್ಟು ಮೌನ ಏಕಾಗ್ರತೆ ಇತ್ತು.

ಭಾರತೀಯ ತತ್ತ್ವಶಾಸ್ತ್ರ

೧೯೨೭ರಲ್ಲಿ ಅವರು ತಮ್ಮ ಸಂಸ್ಮರಣೀಯ ಗ್ರಂಥ ’ಭಾರತೀಯ ತತ್ತ್ವಶಾಸ್ತ್ರ’ವನ್ನು ಎರಡು ಸಂಪುಟಗಳಲ್ಲಿ ಬರೆದು ಮುಗಿಸಿದರು. ಭಾರತೀಯ ಚಿಂತನೆಗಳ ವ್ಯವಸ್ಥಿತ ಹಾಗೂ ಅಭ್ಯಾಸಯೋಗ್ಯ ಪುಸ್ತಕವೊಂದನ್ನು ಬರೆದಂತೆ ಇಂಗ್ಲೆಂಡಿನ ಲೈಬ್ರರಿ ಆಫ್ ಫಿಲಾಸಫಿಯ ಪ್ರೊಫೆಸರ್‌ಜೆ. ಹೆಚ್. ಮುಯಿರ‍್ಹೆಡ್ ಅವರು ಮಾಡಿಕೊಂಡ ವಿನಂತಿ. ರಾಧಾಕೃಷ್ಣನ್‌ರವರ ಈ ಪುಸ್ತಕಗಳಿಗೆ ಪ್ರೇರಣಶಕ್ತಿ ಎನಿಸಿತು. ಕ್ರಿಶ್ಚಿಯನ್ ತತ್ತ್ವಗಳ ಆಳವಾದ ಅಧ್ಯಯನ ನಡೆಸಿರುವ ಪಾಶ್ಚಾತ್ಯರಿಗೆ ಭಾರತೀಯ ತತ್ತ್ವಶಾಸ್ತ್ರವನ್ನು ನೀಡಿದ ಕೆಲವೇ ಮಂದಿಯಲ್ಲಿ ರಾಧಾಕೃಷ್ಣನ್ ಒಬ್ಬರು. ಅವರ ಈ ಕೃತಿ ಪಾಶ್ಚಾತ್ಯ ವಿದ್ಯಾರ್ಥಿಗಳಿಗೆ ಇಂದಿಗೂ ಭಾರತೀಯ ತತ್ತ್ವಶಾಸ್ತ್ರದ ಬಗ್ಗೆ ಅಭ್ಯಾಸದ ಪುಸ್ತಕವಾಗಿ ಉಳಿದಿದೆ.

೧೯೨೬ರಲ್ಲಿ ಅವರು ಕೇಂಬ್ರಿಜ್‌ನಲ್ಲಿ ನಡೆದ ಜಗತ್ತಿನ ವಿಶ್ವವಿದ್ಯಾನಿಲಯಗಳ ಸಮ್ಮೇಳನದಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದರು.

ಪ್ರಪಂಚದ ವಿಶ್ವಕೋಶಗಳಲ್ಲಿ ’ಎನ್‌ಸೈಕ್ಲೋಪೀಡಿಯ ಬ್ರಿಟಾನಿಕ’ ಬಹಳ ಪ್ರಸಿದ್ಧವಾದದ್ದು. ಅತ್ಯಂತ ಶ್ರೇಷ್ಠ ವಿದ್ವಾಂಸರೆನಿಸಿಕೊಂಡವರನ್ನು ಮಾತ್ರ ಅದಕ್ಕೆ ಲೇಖನಗಳನ್ನು ಬರೆಯಲು ಆಹ್ವಾಣಿಸುತ್ತಾರೆ. ಈ ವಿಶ್ವಕೋಶದ ಹದಿನಾಲ್ಕನೆಯ ಹಾಗೂ ಅದರ ನಂತರದ ಆವೃತ್ತಿಗಳಿಗೆ ಹಿಂದೂ ಧರ್ಮವನ್ನು ಕುರಿತು ಬರೆಯಲು ರಾಧಾಕೃಷ್ಣನ್ ಅವರನ್ನು ಆಹಾವನಿಸಲಾಯಿತು. ಅವರ ವಿಚಾರ ಪೂರಿತ, ವಿಷಯ ಸಮೃದ್ಧ, ಸ್ಪಷ್ಟ ಶೈಲಿಯ ಲೇಖನಗಳನ್ನು ವಿದ್ವಾಂಸರು ಮೆಚ್ಚಿಕೊಂಡರು.

ಆಕ್ಸ್‌ಫರ್ಡ್‌‌ನಲ್ಲಿ

೧೯೩೦ರಲ್ಲಿ ಅವರು ಆಕ್ಸ್‌ಫರ್ಡ್‌ವಿಶ್ವವಿದ್ಯಾನಿಲಯಕ್ಕೆ ತೆರಳಿ ’ಧರ್ಮಗಳ ತುಲನಾತ್ಮಕ ಅಧ್ಯಯನ’ದ ಬಗ್ಗೆ ಅಪ್ಟನ್ ಪೀಠವಹಿಸಿಕೊಂಡರು. ಎರಡನೆಯ ಬಾರಿಗೆ ಈ ಉಪನ್ಯಾಸ ಮಾಲೆಗೆ ಆಹ್ವಾನಿತರಾದ ಅವರಿಗೆ, ಅನೇಕ ವಿಶ್ವವಿದ್ಯಾನಿಲಯಗಳಿಂದ ಉಪನ್ಯಾಗಳಿಗೆ ಆಹ್ವಾನ ಬಂದಿತು.

ಈ ಉಪನ್ಯಾಸಗಳೇ ಅನಂತರ ’ಜೀವನವನ್ನು ಕುರಿತು ಆದರ್ಶತ್ವದ ದೃಷ್ಟಿ’ ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಇದು ಅವರ ಅತ್ಯಂತ ಮುಖ್ಯ ಬರಹಗಳಲ್ಲಿ ಒಂದಾಗಿದ್ದು ಧಾರ್ಮಿಕ ಚಿಂತನೆಗೆ ಅವರ ಅಮೂಲ್ಯ ಕೊಡುಗೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

೧೯೨೭ರಲ್ಲಿ ’ಭಾರತೀಯ ತತ್ತ್ವಶಾಸ್ತ್ರ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿದ್ದ ರಾಧಾಕೃಷ್ಣನ್ ೧೯೨೫ರಿಂದ ೧೯೩೭ರ ವರೆಗೆ ಆ ಸಂಸ್ಥೆಯ ಕಾರ‍್ಯಕಾರಿ ಮಂಡಳಿ ಅಧ್ಯಕ್ಷರಾಗಿದ್ದರು.

ಕ್ರೈಸ್ತ ಚರ್ಚ್‌‌ಗಳಲ್ಲಿ ಉಪನ್ಯಾಸ

ಕ್ರೈಸ್ತ ಚರ್ಚುಗಳಲ್ಲಿ ಆ ಮತದ ಅಧಿಕಾರಿಗಳು ಭಾನುವಾರ ಮತ್ತು ಇತರ ವಿಶಿಷ್ಟ ದಿನಗಳಲ್ಲಿ ಉಪದೇಶ ಭಾಷಣ ಮಾಡುತ್ತಾರೆ. ಈ ಭಾಷಣಗಳಲ್ಲಿ ಕ್ರೈಸ್ತ ಮತದ ಬೋಧನೆಗಳನ್ನು ವಿವರಿಸುತ್ತಾರೆ, ಮನುಷ್ಯ ಹೇಗೆ ಬಾಳಿ ಬದುಕಬೇಕು ಎಂದು ವಿವರಿಸುತ್ತಾರೆ. ಕ್ರೈಸ್ತರ ಚರ್ಚುಗಳಲ್ಲಿ ಉಪದೇಶ ಭಾಷಣ ಮಾಡಲು ಕ್ರೈಸ್ತರಲ್ಲದವರನ್ನು ಅವರೆವಿಗೆ ಆಹ್ವಾನಿಸಿರಲಿಲ್ಲ. ಆದರೆ ಇಂಗ್ಲೆಂಡಿನ ಮ್ಯಾಂಚೆಸ್ಟರ್, ಬರ್ಮಿಂಗಂ ಮತ್ತು ಲಿವರ್‌ಪೂಲ್‌ಗಳಲ್ಲಿ ಚರ್ಚುಗಳಲ್ಲಿ ಉಪದೇಶ ಭಾಷಣ ಮಾಡುವಂತೆ ರಾಧಾಕೃಷ್ಣನ್ ಅವರಿಗೆ ಆಹ್ವಾನಗಳು ಬಂದವು. ರಾಧಾಕೃಷ್ಣನ್ ಅವರ ಈ ಧರ್ಮೋಪದೇಶಗಳನ್ನೇ ’ಪೌರ್ವಾತ್ಯ ಹಾಗೂ ಪಾಶ್ಚಾತ್ಯ ಧರ್ಮ’ ಎನ್ನುವ ಪುಸ್ತಕವಾಗಿ ಪ್ರಕಟಿಸಲಾಯಿತು. ಇದು ಅತ್ಯಧಿಕ ಪ್ರಸಾರ ಪಡೆಯಿತು.

೧೯೩೧ರ ಜೂನ್‌ನಲ್ಲಿ ರಾಧಾಕೃಷ್ಣನ್ ಭಾರತಕ್ಕೆ ಹಿಂತಿರುಗಿದಾಗ, ಕಲ್ಕತ್ತ ವಿಶ್ವವಿದ್ಯಾನಿಲಯ ಅವರನ್ನು ಅವರಿದ್ದ ಪ್ರಾಚಾರ‍್ಯ ಪದದಲ್ಲಿ ಜೀವನ ಪೂರ್ಣ ಖಾಯಂ ಗೊಳಿಸಿತು. ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಅವರೆಗೆ ಈ ರೀತಿ ಯಾರನ್ನೂ ಜೀವನಪೂರ್ಣ ಖಾಯಂಗೊಳಿಸಿರಲಿಲ್ಲ.

ಅದೇ ವರ್ಷ ಕಲ್ಕತ್ತ ವಿಶ್ವವಿದ್ಯಾನಿಲಯ ಅವರ ಸೇವೆಯನ್ನು ಹೊಸದಾಗಿ ಸ್ಥಾಪಿತವಾದ ಆಂಧ್ರ ವಿಶ್ವವಿದ್ಯಾನಿಲಯಕ್ಕೆ ಐದು ವರ್ಷಗಳ ಅವಧಿಗಾಗಿ ಎರವಲಾಗಿ ನೀಡಿತು. ಅಂತೆಯೇ ೧೯೩೭ರವರೆಗೆ ಅವರು ಆಂಧ್ರ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದರು.

ಆಕ್ಸ್‌ಫರ್ಡ್‌‌ನಲ್ಲಿ ಪ್ರಾಚಾರ್ಯ

೧೯೩೨ರಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸ್ಥಾನವೊಂದು ಅವರಿಗೆ ದೊರೆಯಿತು. ಆಕ್ಸ್‌ಫರ್ಡ್‌ವಿಶ್ವವಿದ್ಯಾನಿಲಯ ಅವರನ್ನು, ’ಪೌರ್ವಾತ್ಯ ಧರ್ಮಗಳು ಹಾಗೂ ನೀತಿಶಾಸ್ತ್ರ’ ಎನ್ನುವ ವಿಷಯದ ಮೇಲೆ ಪ್ರಾಚಾರ‍್ಯರಾಗಿ ನೇಮಿಸಿತು. ಆಕ್ಸ್‌ಫರ್ಡ್‌‌ನಲ್ಲಿ ಪೀಠವೊಂದನ್ನು ಪಡೆದ ಪ್ರಥಮ ಭಾರತೀಯರೆನ್ನುವ ಖ್ಯಾತಿ ಗಳಿಸಿದ ಅವರು ೧೯೫೨ರವರೆಗೂ ಈ ಸ್ಥಾನದಲ್ಲಿದ್ದರು. ೧೯೫೨ರ ಅದೇ ವಿಶ್ವವಿದ್ಯಾನಿಲಯ ಅವರನ್ನು ’ವಿಶಿಷ್ಟ ಮಹೋಪಾಧ್ಯಾಐ’ (ಪ್ರೊಫೆಸರ್ ಎಮರಿಟಸ್‌) ಆಗಿ ನೇಮಿಸಿ ಗೌರವಿಸಿತು.

೧೯೩೩ರಲ್ಲಿ ಬ್ರಿಟಿಷ್ ಅಕಾಡೆಮಿಯ ವಾರ್ಷಿಕ ಉಪನ್ಯಾಸ ಮಾಲಿಕೆಯಲ್ಲಿ ಅವರು ನೀಡಿದ ಉಪನ್ಯಾಸಗಳು ’ಗೌತಮ ದಿ ಬುದ್ಧ’ ಎನ್ನುವ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟಗೊಂಡವು. ಇದರಿಂದಾಗಿ ೧೯೩೯ರ‍ಲ್ಲಿ ಅವರು ಅಕಾಡೆಮಿಯ ಫೆಲೋ ಆಗಿ ಚುನಾಯಿತರಾದರು. ಬ್ರಿಟಿಷ್  ಅಕಾಡೆಮಿ ಫೆಲೋ ಆಗಿ ಆಯ್ಕೆಯಾದ ಪ್ರಥಮ ಭಾರತೀಯ ಎನಿಸಿದರು. ಎರಡು ದಶಕಕ್ಕೂ ಹೆಚ್ಚು ಕಾಲದ ಬಳಿಕ ೧೯೬೨ರಲ್ಲಿ ಅಕಾಡೆಮಿ ಅವರಿಗೆ ’ಗೌರವ ಫೆಲೋ’ಆಗಿ ಚುನಾಯಿಸಿ ಮತ್ತೊಮ್ಮೆ ಗೌರವಿಸಿತು. ಅಕಾಡೆಮಿ ಇತಿಹಾಸದಲ್ಲೇ ಈ ಗೌರವ ಪಡೆದ ನಾಲ್ಕನೇ ವ್ಯಕ್ತಿ ರಾಧಾಕೃಷ್ಣನ್.

ಕಾಶಿ ಹಿಂದೂ ವಿಶ್ವವಿದ್ಯಾನಿಲಯ

ಕಾಶಿ ಹಿಂದೂ ವಿಶ್ವವಿದ್ಯಾನಿಲಯವು ಭಾರತದ ಹಿರಿಯ ವಿಶ್ವವಿದ್ಯಾನಿಯಲಗಳಲ್ಲಿ ಒಂದು. ಅದು ಸಂಕಷ್ಟಗಳಿಗೆ ಒಳಗಾಗಿ ರಾಧಾಕೃಷ್ಣನ್‌ರವರ ನೆರವು ಕೋರಿತು. ೧೯೩೯ರಲ್ಲಿ ಅವರು ಕಲ್ಕತ್ತ ವಿಶ್ವವಿದ್ಯಾನಿಲಯದಿಂದಲೇ ಎರವಲಾಗಿ ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಉಪಕುಲಪತಿ ಸ್ಥಾನ ವಹಿಸಿಕೊಂಡರು. ೧೯೪೮ರವರೆಗೂ ಈ ಹುದ್ದೆಯಲ್ಲಿದ್ದ ಅವರು ಕಾಶಿ ವಿಶ್ವವಿದ್ಯಾನಿಲಯದ ಗುಣಮಟ್ಟ ಏರಿಸಿದ್ದಷ್ಟೇ ಅಲ್ಲ, ಆರ್ಥಿಕ ತೊಂದರೆಗಳಿಂದಲೂ ಅವರನ್ನು ಪಾರು ಮಾಡಿದರು. ೧೯೪೧ರಲ್ಲಿ ಅವರನ್ನು ಕಾಶಿಯಲ್ಲಿ ಭಾರತೀಯ ಸಂಸ್ಕೃತಿಗೆ ಮುಡಿಪಾದ ಪ್ರಾಚಾರ‍್ಯ ಪೀಠಕ್ಕೆ ನೇಮಿಸಲಾಯಿತು.

೧೯೪೪ರಲ್ಲಿ ಅವರು ಪ್ರಥಮ ಬಾರಿಗೆ ಉಪನ್ಯಾಸಗಳಿಗಾಗಿ ಪೂರ್ವದೇಶಗಳಿಗೆ ತೆರಳಿದರು. ಚೀನಾದಲ್ಲಿ ಅವರು ಹಿಂದೂ ಧರ್ಮದ ಬಗ್ಗೆ ಹನ್ನೆರಡು ಉಪನ್ಯಾಸಗಳನ್ನು ಮಾಡಿದರು.

೧೯೪೬ರಲ್ಲಿ ಅವರು ವಾಟುಮಲ್ ಫೌಂಡೇಷನ್ ಏರ್ಪಾಡಿನಲ್ಲಿ ಅಮೆರಿಕದ ಪ್ರಸಿದ್ಧ ಹಾರ್ವರ್ಡ್‌ವಿಶ್ವವಿದ್ಯಾನಿಲಯ ಮತ್ತು ಇತರ ಹದಿಮೂರು ವಿಶ್ವವಿದ್ಯಾನಿಲಯಗಳ ಪ್ರವಾಸ ಕೈಗೊಂಡರು.

ಯನಸ್ಕೊ

ಅದೇ ವರ್ಷ ಅವರು ವಿಶ್ವಸಂಸ್ಥೆಯ ’ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ’ (ಯುನೆಸ್ಕೊ) ಯಲ್ಲಿ ಭಾರತೀಯ ನಿಯೋಗದ ನಾಯಕರಾಗಿ ನೇಮಕಗೊಳ್ಳುವುದರೊಂದಿಗೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ರಂಗ ಪ್ರವೇಶಿಸಿದರು.೧೯೪೮ರಲ್ಲಿ ಅದರ ವಾರ್ಷಿಕ ಸಮ್ಮೇಳನದ ಉಪಾಧ್ಯಕ್ಷರಾಗಿಯೂ, ೧೯೪೯ರಲ್ಲಿ ಅಧ್ಯಕ್ಷರಾಗಿಯೂ ಕಾರ‍್ಯ ನಿರ್ವಹಿಸಿದರು.

ಸ್ವಾತಂತ್ರ್ಯಕ್ಕೆ ಸ್ವಾಗತ

೧೯೪೭ರ ಆಗಸ್ಟ್ ೧೪ರ ಮಧ್ಯರಾತ್ರಿಗೆ ಭಾರತದ ಗುಲಾಮಗಿರಿ ಮುಗಿಯಿತು. ಆಗ ಸೇರಿದ್ದ ಸಂವಿಧಾನ ಸಭೆಯ ಐತಿಹಾಸಿಕ ಸಭೆಯಲ್ಲಿ, ಹನ್ನೆರಡು ಗಂಟೆಗೆ ಸರಿಯಾಗಿ ಸಭೆ ಕೈಗೊಳ್ಳಲಿದ್ದ ಸ್ವಾತಂತ್ರ್ಯದ ಪ್ರತಿಜ್ಞೆಯ ಮೇಲೆ ಜವಾಹರಲಾಲ ನೆಹರೂ ಮಂಡಿಸಿದ ಗೊತ್ತುವಳಿಯನ್ನು ಕುರಿತು ಮಾತನಾಡಿದವರಲ್ಲಿ ಮೂರನೆಯವರು ರಾಧಾಕೃಷ್ಣನ್. ಉಪನಿಷತ್ ಹೇಳಿಕೆಗಳಿಂದ ತುಂಬಿದ್ದ ಹಾಗೂ ಆಧುನಿಕ ದೃಷ್ಟಿ ಬೆಳಗುತ್ತಿದ್ದ ಅವರ ಉಪನ್ಯಾಸ ಮಧ್ಯರಾತ್ರಿಯ ಗಂಟೆ ಬಾರಿಸುವ ೫ ನಿಮಿಷ ಮೊದಲು ಮುಗಿಯಿತು. ಇದು ಅಧ್ಯಕ್ಷರಿಗೆ ಗೊತ್ತುವಳಿ ಅಂಗೀಕಾರಕ್ಕೆ ಹಾಕಲು ಬೇಕಾದಷ್ಟೇ ಸಮಯ ಉಳಿಸಿತ್ತು. ಮಧ್ಯರಾತ್ರಿಗೆ ಸರಿಯಾಗಿ ಪ್ರತಿಜ್ಞಾ ಸ್ವೀಕಾರದೊಂದಿಗೆ ಭಾರತಕ್ಕೆ ಸ್ವಾತಂತ್ರ್ಯ ಘೋಷಿಸಲ್ಪಟ್ಟಿತು.

ಮೇಲೆ: ರಾಧಕೃಷ್ಣ -ಗಾಂಧಿಜಿ, ಕೆಳಗೆ: ಅಮೆರಿಕಾ ಕೆನಡಿ-ರಾಧಕೃಷ್ಣನ್)

ಸ್ವತಂತ್ರನಾಡಿನಲ್ಲಿ ಹೊಸ ಹೊಣೆಗಳು

 

ಸ್ವತಂತ್ರ ಭಾರತ ಅವರ ವಿಶ್ವವಿಖ್ಯಾತ ವ್ಯಕ್ತಿತ್ವವನ್ನು ಗಮನಿಸಿ, ದೇಶದ ರಾಷ್ಟ್ರವ್ಯಾಪಿ ಸಮಸ್ಯೆಗಳನ್ನು ಬಗೆ ಹರಿಸಲು ಅವರ ನೆರವು ಅಪೇಕ್ಷಿಸಿತು. ಅವರು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಉಪಕುಲಪತಿ ಸ್ಥಾನಕ್ಕೆ ರಾಜಿನಾಮೆ ನೀಡಿ ’ಭಾರತೀಯ ವಿಶ್ವವಿದ್ಯಾನಿಲಯ ಶಿಕ್ಷಣ ಆಯೋಗ’ದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು. ಆಯೋಗ ನೀಡಿದ ವ್ಯಾಪಕ ವರದಿ ಭಾರತ ಹಾಗೂ ಇಂಗ್ಲೆಂಡ್‌ಗಳೆರಡರಲ್ಲೂ ವ್ಯಾಪಕ ಪ್ರಶಂಸೆ ಪಡೆಯಿತು.

೧೯೪೯ರಲ್ಲಿ ಅವರನ್ನು ಸಂಪೂರ್ಣ ಹೊಸ ಜವಾಬ್ದಾರಿಯೊಂದಕ್ಕೆ ನೇಮಿಸಲಾಯಿತು. ಮಾನವ ಹಕ್ಕುಗಳ ಹಾಗೂ ಮಾನವೀಯ ಚೈತನ್ಯದ ಮಹಾನ್ ಬೆಂಬಲಿಗರಾದ ಈ ತತ್ತ್ವಜ್ಞಾನಿಯನ್ನು, ಸರ್ವಾಧಿಕಾರಿ ಸ್ಟಾಲಿನ್‌ರ ಆಳ್ವಿಕೆಯಲ್ಲಿದ್ದ ರಷ್ಯಾಕ್ಕೆ ಭಾರತದ ಪ್ರಥಮ ರಾಯಭಾರಿಯಾಗಿ ನೇಮಿಸಲಾಯಿತು.

ರಷ್ಯದಲ್ಲಿ

ರಷ್ಯಕ್ಕೆ ತೆರಳಿದ ರಾಧಾಕೃಷ್ಣನ್‌ಗೆ ತನ್ನ ಪರಿಚಯ ಪತ್ರಗಳನ್ನು ಮಾಸ್ಕೊ ತಲುಪಿದ ಒಂದೆರಡು ದಿನಗಳಲ್ಲೇ ಸ್ವತಃ ಸ್ಟಾಲಿನ್‌ರಿಗೇ ಒಪ್ಪಿಸುವ ಅಪೂರ್ವ ಅವಕಾಶ ಲಭಿಸಿತು. ಇತರ ರಾಯಭಾರಿಗಳು ಇದಕ್ಕಾಗಿ ನಾಲ್ಕಾರು ತಿಂಗಳು ಕಾಯಬೇಕಾಗಿತ್ತು. ಸ್ಟಾಲಿನ್‌ರನ್ನು ಕಾಣುವುದೇ ಅವರಿಗೆ ಅಸಾಧ್ಯ ಎನ್ನಿಸಿತ್ತಿತ್ತು. ಸ್ಟಾಲಿನ್-ರಾಧಾಕೃಷ್ಣನ್ ಭೇಟಿ ಮೂರು ಘಂಟೆಗಳ ಕಾಲ ನಡೆದು, ಮಾಸ್ಕೊದಲ್ಲಿಯೂ ಜಗತ್ತಿನ ಹಲವು ದೇಶಗಳ ಅಂತೆಯೇ ೧೯೫೨ರ ಏಪ್ರಿಲ್‌ನಲ್ಲಿ ತನ್ನ ಅವಧಿ ಮುಗಿಸಿ ಹಿಂತಿರುಗುವ ಸಂದರ್ಭದಲ್ಲೂ ರಾಧಾಕೃಷ್ಣನ್‌ರಿಗೆ ಸ್ಟಾಲಿನರು ಮತ್ತೊಮ್ಮೆ ಭೇಟಿ ನೀಡಿ ಸೌಹಾರ್ದ ಮಾತುಕತೆಯಾಡಿ ಬೀಳ್ಕೊಟ್ಟರು. ಸ್ಟಾಲಿನ್ ವಿದೇಶೀ ರಾಜಕಾರಣಿಯೊಬ್ಬನಿಗೆ ನೀಡಿದ ಅಸಾಮಾನ್ಯ ಗೌರವ ಇದು.

ರಾಧಾಕೃಷ್ಣನ್‌ರವರು ರಾಯಭಾರಿ ಆಗಿದ್ದ ಈ ಅವಧಿಯೇ ಬಹುತೇಕ, ಭಾರತ ಹಾಗೂ ರಷ್ಯ ನಡುವಿನ ನಂತರದ ಮೈತ್ರಿಯುತ ಸಂಬಂಧ ವೃದ್ಧಿಗೆ ತಳಪಾಯ. ಭಾರತ ಸ್ವತಂತ್ರ ರಾಷ್ಟ್ರವಾಗಿದ್ದು ತನ್ನದೇ ಆದ ನೀತಿ, ಯೋಜನೆ ಹೊಂದಿದೆ ಎಂದು ಸ್ಟಾಲಿನ್‌ರಿಗೆ ಮನವರಿಕೆ ಮಾಡಿಕೊಟ್ಟ ರಾಧಾಕೃಷ್ಣನ್ ಸ್ಟಾಲಿನ್‌ರ ಭಾರತದ ಬಗ್ಗೆ ಸದಭಿಪ್ರಾಯ ಮೂಡಿಸಲು ಶಕ್ತರಾದರು.

ಸ್ಟಾಲಿನ್‌ರೊಂದಿಗೆ ತನ್ನ ವಿದ್ಯಾ ಭೇಟಿಯ ಬಗ್ಗೆ ರಾಧಾಕೃಷ್ಣನ್ ಒಂದು ಕಡೆ ಬರೆದ ಮಾತುಗಳು ಹೀಗಿವೆ: ’ಮಾತುಕತೆ ಬಿಚ್ಚು ಮನಸ್ಸಿನದಾಗಿತ್ತು. ಭಾರತದಲ್ಲಿ ಚರ್ಚಿಸಲಾಯಿತು. ಮಾತುಕತೆ ಮೂಲಕ ಬಗೆ ಹರಿಸಲಾಗದ ಯಾವುದೇ ಅಸಾಮಾನ್ಯ ಸಮಸ್ಯೆ ಇಂದು ವಿಶ್ವಕ್ಕೆ ಎದುರಾಗಿಲ್ಲ ಎಂದು ನಾನು ಹೇಳಿದೆ. ಉನ್ನತ ವ್ಯಕ್ತಿಗಳನ್ನು ಮಹಾನ್ ಶಕ್ತಿಶಾಲಿ ರಾಷ್ಟ್ರಗಳನ್ನು ಒಂದು ಗೂಡಿಸಲು ಸರ್ವ ಪ್ರಯತ್ನ ಮಾಡಬೇಕೆಂದೂ ಹೇಳಿದೆ.”

ನಾಗರಿಕ ಸ್ವಾತಂತ್ರ್ಯಗಳ ಕೊರತೆಗಾಗಿ ಸರ್ವಾಧಿಕಾರಿ ಸ್ಟಾಲಿನ್ನರನ್ನೇ ಒಮ್ಮೆ ನಯವಾಗಿ ಟೀಕಿಸಿದ್ದ ರಾಧಾಕೃಷ್ಣನ್, ರಷ್ಯನ್ ವಿಶ್ವಕೋಶದಲ್ಲಿ ಮಹಾತ್ಮಾ ಗಾಂಧೀಜಿಯ ಬಗ್ಗೆ ಇದ್ದ ಕೆಲವೊಂದು ಅಸಂಬದ್ಧ ಟೀಕೆಗಳನ್ನು ತೆಗೆದು ಹಾಕುವಂತೆ ಮಾಡುವಲ್ಲಿಯೂ ಯಶಸ್ವಿ ಆದರು.

ಉಪರಾಷ್ಟ್ರಪತಿ

೧೯೫೨ರಲ್ಲಿ ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ರಾಜ್ಯಸಭೆಯ ಅಧ್ಯಕ್ಷಪದ ನಿರ್ವಹಿಸಿ ರಾಜ್ಯಸಭೆಯ ಕಾರ‍್ಯ-ಕಲಾಪಗಳನ್ನು ನೆರವೇರಿಸುವುದು ಉಪರಾಷ್ಟ್ರಪತಿಯ ಪ್ರಧಾನ ಜವಾಬ್ದಾರಿ. ರಾಧಾಕೃಷ್ಣನ್ ಇದರಲ್ಲಿ ಪೂರ್ಣ ಯಶಸ್ವಿಯಾದರು. ಎಲ್ಲ ಪಕ್ಷ, ಪಂಗಡಗಳ ಸದಸ್ಯ ಗೌರವ, ಆದರಗಳನ್ನು ಗಳಿಸಿದ ಅವರು ರಾಜಕೀಯ ರಂಗದಲ್ಲೂ ಪ್ರೀತಿಪಾತ್ರರಾದರು.

ರಾಧಾಕೃಷ್ಣನ್ ಅವರಿಗೆ ಉಪರಾಷ್ಟ್ರಪತಿಯಾಗಿ, ರಾಜ್ಯಸಭೆಯ ಅಧ್ಯಕ್ಷರಾಗಿ ಬಿಡುವಿಲ್ಲದಷ್ಟು ಕೆಲಸ. ಪ್ರತಿನಿತ್ಯ ಭೇಟಿಗಾಗಿ ಬರುವವರು ಲೆಖ್ಖವೇ ಇಲ್ಲ. ಆದರೂ ಅವರು ಸಾಹಿತ್ಯ, ತತ್ತ್ವಶಾಸ್ತ್ರ ಹಾಗೂ ಶಿಕ್ಷಣಗಳಲ್ಲಿ ತಮ್ಮ ಆಸಕ್ತಿಯನ್ನು ಮುಂದುವರಿಸಿದರು. ೧೯೫೩ರಿಂದ ೧೯೬೨ರ ವರೆಗೆ ಅವರು ದಿಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಆಗಿದ್ದರು.

೧೯೪೯ರಲ್ಲಿ ಭಾರತೀಯ ಪೆನ್‌(ಕವಿಗಳು, ನಾಟಕಕಾರರು, ಪ್ರಬಂಧಕಾರರು ಹಾಗೂ ಕಾದಂಬರಿಗಾರರ ಸಂಘ (ಅಧ್ಯಕ್ಷರಾಗಿದ್ದ ಅವರು ೧೯೫೬ರಲ್ಲಿ ಅಂತಾರಾಷ್ಟ್ರೀಯ ಪೆನ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ೧೯೫೯ರಲ್ಲಿ ಜರ್ಮನಿಯಲ್ಲಿ ನಡೆದ ಪೆನ್ ಕಾಂಗ್ರೆಸ್‌ನಲ್ಲಿ ಭಾಗವಹಿಸಿದರು.

೧೯೫೩ರಲ್ಲಿ ಭಾರತ ತನ್ನ ಈ ಶ್ರೇಷ್ಠ ಪುತ್ರನಿಗೆ ದೇಶದ ಅಗ್ರಮಾನ್ಯ ಗೌವವಾಗಿ ’ಭಾರತ ತನ್ನ ಈ ಶ್ರೇಷ್ಠ ಪುತ್ರನಿಗೆ ದೇಶದ ಅಗ್ರಮಾನ್ಯ ಗೌರವವಾಗಿ ’ಭಾರತ ರತ್ನ’ ಪ್ರಶಸ್ತಿ ನೀಡಿತು. ೧೯೫೫ರಲ್ಲಿ ಜರ್ಮನಿ ತನ್ನ ಶ್ರೇಷ್ಠ ಗೌರವ ನೀಡಿ ಸತ್ಕರಿಸಿತು.

ಉಪರಾಷ್ಟ್ರಪತಿಯಾಗಿ ಯುರೋಪ, ಕೆನಡಾ, ಅಮೆರಿಕ, ಲ್ಯಾಟಿನ್ ಅಮೆರಿಕ, ಸಿಂಗಪುರ, ಇಂಡೋನೇಷಿಯಾ, ಚೀನ, ಜಪಾನ್, ಮಂಗೋಲಿಯ ಮೊದಲಾದ ಹಲವು ದೇಶಗಳ ಪ್ರವಾಸ ಕೈಗೊಂಡ ಅವರು ಸ್ವತಂತ್ರ ಭಾರತದ ನೀತಿ ಹಾಗೂ ಕಾರ‍್ಯಕ್ರಮಗಳ ಬಗ್ಗೆ ವಿದೇಶಿ ನಾಯಕರಿಗೆ ಸ್ಪಷ್ಟ ಅರಿವು ನೀಡಲು ಶ್ರಮಿಸಿದರು.

ಪತ್ನಿ ತೀರಿಕೊಂಡರು

ಈ ಮಧ್ಯೆ ೧೯೫೬ರಲ್ಲಿ ಅವರ ಪತ್ನಿ ಶಿವಕಾಮಮ್ಮ ಸ್ವರ್ಗಸ್ಥರಾದರು. ಸಾಮಾನ್ಯ ವಿದ್ಯಾರ್ಥಿ ಜೀವನ ನಡೆಸುತ್ತಿದ್ದ ಕಾಲದಲ್ಲಿ ರಾಧಾಕೃಷ್ಣನ್‌ರ ಕೈಹಿಡಿದ ಅವರು, ೫೦ ವರ್ಷಗಳ. ಅವಧಿಯಲ್ಲಿ ತಮ್ಮ ಪತಿ ಜಗತ್ತಿನಾದ್ಯಂತ ಪರಮೋಚ್ಛ ಗೌರವ, ಆದರಗಳನ್ನು ಗಳಿಸುತ್ತಿದ್ದಾಗ ಎಲೆಮರೆಯ ಕಾಯಿಯಂತಿದ್ದು ಅವರ ಉತ್ಕರ್ಷದಲ್ಲಿ ಸಂತಸವನ್ನು ಕಾಣುತ್ತಾ ಸಾಂಸಾರಿಕ ಜೀವನದಿಂದ ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡರು.

ರಾಷ್ಟ್ರಪತಿ

೧೯೫೭ರಲ್ಲಿ ರಾಧಾಕೃಷ್ಣನ್ ಮತ್ತೆ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ೧೯೬೨ರಲ್ಲಿ ರಾಜೇಂದ್ರ ಪ್ರಸಾದರು ನಿವೃತ್ತರಾದಾಗ, ರಾಷ್ಟ್ರಪತಿಸ್ಥಾನಕ್ಕೆ ಆಯ್ಕೆಯಾದರು. ರಾಷ್ಟ್ರದ ಸರ್ವೋಚ್ಛ ಸ್ಥಾನಕ್ಕೆ ಆಯ್ಕೆಯಾದ ಅವರು ಮಾಡಿದ ಮೊದಲ ಕೆಲಸ ಆ ಹುದ್ದೆಯಲ್ಲಿ ನಿಗದಿಯಾಗಿದ್ದ ಹತ್ತು ಸಾವಿರ ರೂಪಾಯಿಗಳ ಮಾಸಿಕ ವೇತನವನ್ನು ಮೂರು ಸಾವಿರಕ್ಕೆ ಇಳಿಸಿದ್ದು. ತೆರಿಗೆ ಪಾವತಿ ಬಳಿಕ ಸಿಗುತ್ತಿದ್ದುದು ಒಂದು ಸಾವಿರದ ಒಂಭೈನೂರ ರೂಪಾಯಿಗಳು ಮಾತ್ರ.

ರಾಷ್ಟ್ರಪತಿಯನ್ನು ಕಾಣಲು ಅಪೇಕ್ಷಿಸುವ ಯಾರೇ ಸಾಮಾನ್ಯ ಪ್ರಜೆ, ಯಾವುದೇ ಪೂರ್ವಾನುಮತಿ ಇಲ್ಲದೆ ವಾರದಲ್ಲಿ ಎರಡು ದಿನ ತಮ್ಮನ್ನು ಕಾಣಬಹುದೆಂದು ಪ್ರಕಟಿಸಿದ ರಾಧಾಕೃಷ್ಣನ್ ಅವರು ತಮ್ಮ ಅವಧಿ ಯುದ್ಧಕ್ಕೂ ಅದನ್ನು ಪಾಲಸಿದರು.

೧೯೬೩ರ ಅಮೆರಿಕ ಭೇಟಿ ಭಾರತ-ಅಮೆರಿಕ ಸಂಬಂಧಗಳಲ್ಲಿ ವಿಶಿಷ್ಟ ಮೈಲುಗಲ್ಲೆನಿಸಿತು. ವಾಷಿಂಗ್ಟನ್ನಿನಲ್ಲಿ ಅಮೆರಿಕ ಸಂಬಂಧಗಳಲ್ಲಿ ವಿಶಿಷ್ಟ ಮೈಲುಗಲ್ಲೆನಿಸಿತು. ವಾಷಿಂಗ್ಟನ್ನಿನಲ್ಲಿ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ’ಶ್ವೇತಭವನ’ದ ಆವರಣದಲ್ಲೇ ಹೆಲಕಾಪ್ಟರಿನಲ್ಲಿ ಇಳಿದ ರಾಧಾಕೃಷ್ಣನ್ ಶ್ವೇತಭವನದಿಂದ ಆ ಗೌರವ ಪಡೆದ ಮೊದಲ ರಾಷ್ಟ್ರಾಧ್ಯಕ್ಷ ಎನಿಸಿದರು. ಅದಕ್ಕೆ ಮುನ್ನ ಯಾವ ವಿದೇಶಿಯನಿಗೂ ಅಮೆರಿಕ ಈ ಗೌರವ ನೀಡಿರಲಿಲ್ಲ.

ಅದೇ ವರ್ಷ ಇರಾನಿನ ಟೆಹರಾನ್ ವಿಶ್ವವಿದ್ಯಾನಿಲಯ ತತ್ತ್ವಶಾಸ್ತ್ರದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನೂ, ನೇಪಾಳದ ತ್ರಿಭುವನ ವಿಶ್ವವಿದ್ಯಾನಿಲಯ ಸಾಹಿತ್ಯದ ಗೌರವ ಡಾಕ್ಟರೇಟನ್ನೂ, ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯ ಕಾನೂನಿಲ್ಲಿ ಗೌರವ ಡಾಕ್ಟರೇಟನ್ನೂ ನೀಡಿ ರಾಧಾಕೃಷ್ಣನ್‌ರನ್ನು ಗೌರವಿಸಿದುವು.

೧೯೬೪ರಲ್ಲಿ ಮುಂಬಯಿಯಲ್ಲಿ ನಡೆದ ವಿಶ್ವಕ್ರೈಸ್ತ ಸಮ್ಮೇಳನಕ್ಕೆ ಆಗಮಿಸಿದ್ದ ಆರನೇ ಪೋಪ್‌ಪಾಲರು ರಾಧಾಕೃಷ್ಣನ್‌ರಿಗೆ ವ್ಯಾಟಿಕನ್ನಿನ ಅತ್ಯುನ್ನತ ಪ್ರಶಸ್ತಿ ’ಗೋಲ್ಡನ್‌ಪರ್ನ್‌’ ನೀಡಿ ಗೌರವಿಸಿದರು.

೧೯೬೪ರ ಸೆಪ್ಟೆಂಬರ್‌ನಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗಿ ರಷ್ಯಾಕ್ಕೆ ನೀಡಿದ ಮೊದಲ ಭೇಟಿ, ಭಾರತ ರಷ್ಯಾ ಸಂಬಂಧದಲ್ಲಿ ಒಂದು ಉಲ್ಲೇಕನೀಯ ಬದಲಾವಣೆ. ಮೇ ತಿಂಗಳಲ್ಲಷ್ಟೇ ಪ್ರಧಾನಿ ಜವಾಹರಲಾಲ ನೆಹರೂ ಮೃತರಾಗಿದ್ದರು. ಇಡಿಯ ವಿಶ್ವವೇ ಭಾರತದ ಭವಿಷ್ಯವನ್ನು ಕುರಿತು ರಾಧಾಕೃಷ್ಣನ್ ರತ್ತ ನೋಡುತ್ತಿತ್ತು. ಆದರೆ ನೆಹರೂ ಉತ್ತರಾಧಿಕಾರಿಯಾಗಿ ಲಾಲ್‌ಬಹದ್ದೂರ್ ಶಾಸ್ತ್ರಿ ಅಧಿಕಾರ ವಹಿಸಿಕೊಳ್ಳುವಲ್ಲಿ ರಾಧಾಕೃಷ್ಣನ್ ಅವರು ದೇಶದ ಆಡಳಿತ ಸೂತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ಆ ಅವಿಶ್ರಾಂತ ದುಡಿಮೆ ರಾಧಾಕೃಷ್ಣನ್‌ರವರ ಆರೋಗ್ಯದ ಮೇಲೆ ಪರಿಣಾಮ ಮಾಡಿತ್ತು. ವಯಸ್ಸೂ ಆಗುತ್ತಿತ್ತು. ಅವರು ೧೯೬೭ರಲ್ಲಿ ನಿವೃತ್ತರಾಗಲು ನಿರ್ಧರಿಸಿದರು. ಅವರು ರಾಷ್ಟ್ರಪತಿಯಾಗಿ ಮುಂದುವರೆಯಬೇಕೆಂದು ಹಲವರು ಒತ್ತಾಯ ಮಾಡಿದರು. ಆದರೂ ಮೇ ತಿಂಗಳ ಒಂಬತ್ತನೇ ದಿನಾಂಕದಂದು ಅತ್ಯಂತ ಗೌರವಾರ್ಹ ರೀತಿಯಲ್ಲಿ ರಾಷ್ಟ್ರಪತಿ ಪದವಿಯಿಂದ ನಿವೃತ್ತರಾದರು.

ಅದೇ ವರ್ಷ ಅವರ ಪ್ರಮುಖ ಪ್ರಕಟಣೆ ’ಬದಲಾಗುತ್ತಿರುವ ಜಗತ್ತಿನಲ್ಲಿ ಧರ್ಮ’ ಪ್ರಕಟವಾಯಿತು. ಜೀವನ ಅವರಿಗೆ ನಿರಂತರ ಅಧ್ಯಯನದ ವಿಧಾನವಾಗಿತ್ತು. ಆತ್ಮದ ಅರಿವಿಗಾಗಿ ಇಡಿಯ ಜೀವನವಿದೆ ಎನ್ನುತ್ತಿದ್ದರು ಅವರು. ಶಿಕ್ಷಣದ ಅಂತಿಮ ಗುರಿ ಮಾನವನಿಗೆ ತನ್ನ ವಾಸ್ತವಿಕ ಆಂತರ‍್ವನ್ನು ಅರಿಯಲು ನೆರವಾಗುವುದು ಹಾಗೂ ನಾವು ಈ ಜಗತ್ತಿನಲ್ಲಿ ಏನು ಎನ್ನುವುದನ್ನು ಕಂಡು ಹಿಡಿಯಲು ನೆರವಾಗುವುದು ಎಂದು ಅವರು ಬರೆದಿದ್ದಾರೆ.

ಮನುಷ್ಯನ ಭವಷ್ಯತ್ತಿನಲ್ಲಿ ವಿಶ್ವಾಸಕ್ಕೆ ಬದ್ಧರಾಗಿರುವವರು ಶಿಕ್ಷಕರು ಎನ್ನುತ್ತಿದ್ದ ಅವರು ಶಿಕ್ಷಕರಿಗೆ ಮಾನವ ಜನಾಂಗದ ಭವಿಷ್ಯ, ದೇಶದ ಹಾಗೂ ಜಗತ್ತಿನ ಭವಿಷ್ಯಗಳಲ್ಲಿ ವಿಶ್ವಾಸ ಅಗತ್ಯ ಎನ್ನುತ್ತಿದ್ದರು. ಶಿಕ್ಷಣದ ಬಗ್ಗೆ ಚಿಂತನೆ ಹೊಂದಿದ್ದ ಅವರು ಶಿಕ್ಷಕರ ಬಗ್ಗೆಯೂ ಅಪಾರ ಚಿಂತನೆ ಹೊಂದಿದ್ದರು. ಅವರ ಜನ್ಮದಿನವನ್ನು ಈಗ ’ಶಿಕ್ಷಕರ ದಿನ’ವಾಗಿ ಆಚರಿಸಲಾಗುತ್ತಿದೆ.

ಕಡೆಯ ದಿನಗಳು

ರಾಷ್ಟ್ರಪತಿಗಳು ತಮ್ಮ ಸ್ಥಾನ ತ್ಯಾಗದ ಬಳಿಕ ಅವರು ೧೫ ವರ್ಷಕಾಲ ತಾವು ನೆಲೆಸಿದ್ದ ದೆಹಲಿ ತ್ಯಜಿಸಿ ದೂರದ ಮದ್ರಾಸಿಗೆ ತೆರಳಿದರು.

೧೯೬೮ರ ಸೆಪ್ಟೆಂಬರ್‌ನಲ್ಲಿ ಆಗಿನ ರಾಷ್ಟ್ರಪತಿ ಡಾಕ್ಟರ್ ಝಕೀರ್ ಹುಸೇನ್‌ಮದರಾಸಿಗೆ ಬಂದು, ಮೈಲಾಪುರದ ತಮ್ಮ ಮನೆಯಲ್ಲಿ ಶಾಂತ ಜೀವನ ಸಾಗಿಸುತ್ತಿದ್ದ ರಾಧಾಕೃಷ್ಣನ್‌ರನ್ನು ಭೇಟಿಯಾಗಿ, ಸಾಹಿತ್ಯ ಅಕಾಡೆಮಿಯ ಪ್ರಥಮ ಫೆಲೋಶಿಪ್ ನೀಡಿದರು. ಭಾರತೀಯ ಚಿಂತನೆ ಹಾಗೂ ಜಾಗತಿಕ ಮಾನವತಾ ವಾದಗಳಿಗೆ ಅವರಿತ್ತ ಅಪೂರ್ವ ಕೊಡುಗೆಗೆ ಭಾರತ ನೀಡಿದ ಅಧಿಕೃತ ಮಾನ್ಯತೆ ಇದೆನಿಸಿತು.

ಡಾಕ್ಟರ್ ರಾಧಾಕೃಷ್ಣನ್ ಭಾಗವಹಿಸಿದ ಅಂತಿಮ ಸಾರ್ವಜನಿಕ ಸಭೆ ಅದು. ಕೆಲವೇ ದಿನಗಳ ಬಳಿಕ ಅವರಿಗೆ ಪ್ರಥಮ ಭಾರಿಗೆ ಹೃದಯಾಘಾತ ಆಯಿತು.

೧೯೭೫ರ ಏಪ್ರಿಲ್ ೧೭ರ ಗುರುವಾರ ಮುಂಜಾನೆ ರಾಧಾಕೃಷ್ಣನ್ ಕೊನೆಯುಸಿರೆಳೆದು.

ಪ್ರತಿಭಾವಂತರು

ರಾಧಾಕೃಷ್ಣನ್ ಅವರು ಈ ಶತಮಾನದ ಅತ್ಯಂತ ಧೀಮಂತ ವ್ಯಕ್ತಿಗಳ್ಲಲಿ ಒಬ್ಬರು. ಅವರು ಅಧ್ಯಯನಕ್ಕೆ ಆರಿಸಿಕೊಂಡಿದ್ದು ಸಾಮನ್ಯವಾಗಿ ಜನರು ಕಷ್ಟವಾದ ನೀರಸವಾದ ಜ್ಞಾನಭಾಗ ಎಂದು ಭಾವಿಸುವ ತತ್ತ್ವಶಾಸ್ತ್ರ. ತಮ್ಮ ವಿದ್ಯಾರ್ಥಿ ದೆಸೆಯಿಂದ ಅವರು ಈ ಕ್ಷೇತ್ರದಲ್ಲಿ ಸಾಧಿಸಿದ ಪ್ರಭುತ್ವ ಅಸಾಧಾರಣವಾದದ್ದು. ಇಪ್ಪತ್ತನೆಯ ವರ್ಷದಲ್ಲಿ ಅವರು ಎಂ.ಎ. ಪದವಿಗಾಗಿ ಬರೆದ ’ಎಥಿಕ್ಸ್‌ಆಫ್ ದೀ ವೇದಾಂತ’ (ವೇದಾಂತದಲ್ಲಿ ನೀತಿ ತತ್ತ್ವಗಳು) ಎಂಬ ಪ್ರಬಂಧವನ್ನು ಓದಿದ ಪ್ರಾಧ್ಯಾಪಕ ಎಚ್.ಜಿ. ಹೋಗ್ ಎರಡನೇ ವರ್ಷದ ಎಂ.ಎ. ಪರೀಕ್ಷೆಗಾಗಿ ಬರೆದ ಈ ಪ್ರಬಂಧ ವೇದಾಂತದ ಮೂಲ ತತ್ತ್ವವನ್ನು, ಅದರ ತಿರುಳನ್ನು ನಿರೂಪಿಸುತ್ತದೆ. ಪ್ರಬಂಧದ ಆಂಗ್ಲಭಾಷೆ ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಕಾಣುವ ಮಟ್ಟಕ್ಕಿಂತ ಬಹು ಹೆಚ್ಚಿನದು” ಎಂದರು. ಅಲ್ಲಿಂದ ಸುಮಾರು ಐವತ್ತು ವರ್ಷಗಳ ಕಾಲ ರಾಧಾಕೃಷ್ಣನ್ ಜಗತ್ತಿನ ತತ್ತ್ವಶಾಸ್ತ್ರ ಕ್ಷೇತ್ರದ ಅತ್ಯಂತ ಪ್ರತಿಭಾವಂತ, ಪ್ರಭಾವೀ ವಿದ್ವಾಂಸರಲ್ಲಿ ಒಬ್ಬರಾದರು. ಪೂರ್ವದೇಶಗಳು, ಪಶ್ಚಿಮ ದೇಶಗಳು ಎಲ್ಲ ದೇಶಗಳ ಎಲ್ಲ ಕಾಲಗಳ ಶ್ರೇಷ್ಠ ಗ್ರಂಥಗಳನ್ನು ಅಭ್ಯಾಸ ಮಾಡಿದರು. ಹೋಲಿಸಿ ನೋಡಿದರು. ರಕ್ತಗತ ಮಾಡಿಕೊಂಡರು. ಈ ಕಾರಣದಿಂದಲೇ ಅವರು ಎಲ್ಲ ದೇಶಗಳಲ್ಲೂ ವಿದ್ವಾಂಸರ ಮತ್ತು ಜನಸಾಮಾನ್ಯರ ಗೌರವವನ್ನು ಪಡೆಯುವಂತಾಯಿತು. ಟೆಹರಾನ್, ಪೆನ್ಸಿಲ್ವೇನಿಯ, ಮಾಸ್ಕೊ, ಆಕ್ಸ್‌ಫರ್ಡ್‌, ಕೇಂಬ್ರಿಜ್, ರೋಮ್ ವಿಶ್ವವಿದ್ಯಾನಿಲಯಗಳು ಸೇರಿದಂತೆ ಜಗತ್ತಿನ ಸುಮಾರು ಒಂದು ನೂರಕ್ಕೂ ಹೆಚ್ಚಿನ ವಿಶ್ವವಿದ್ಯಾನಿಲಯಗಳು ಅವರಿಗೆ ಡಾಕ್ಟರೇಟ್‌ಪ್ರಶಸ್ತಿಯನ್ನು ನೀಡಿದವು. ಆಕ್ಸ್‌ಫರ್ಡ್‌, ಲಂಡನ್ ಮ್ಯಾಂಚೆಸ್ಟರ್, ಷಿಕಾಗೋ, ಇಂತಹ ವಿಶ್ವವಿದ್ಯಾನಿಲಯಗಳೂ ಅವರು ಉಪನ್ಯಾಸ ಕೊಡುವಂತೆ ಆಹ್ವಾನಿಸಿದವು.

ಭಾರತದ ಚಿಂತನೆಯ ನಿರೂಪಣೆ

ನೀರಸ, ಕ್ಲಿಷ್ಟ ಎನ್ನಿಸುವ ತತ್ತ್ವಶಾಸ್ತ್ರದ ವಿಷಯಗಳನ್ನು ಎಷ್ಟು ಸರಳವಾಗಿ, ಲವಲವಿಕೆಯ ಶೈಲಿಯಲ್ಲಿ ರಾಧಾಕೃಷ್ಣನ್ ನಿರೂಪಿಸುತ್ತಿದ್ದರು ಎಂಬುದು ಬೆರಗುಗೊಳಿಸುವ ವಿಷಯ. ಸರಳವಾದ ಶೈಲಿಯಲ್ಲಿ ಗಾಢವಾದ ಕ್ಲಿಷ್ಟವಾದ ವಿಷಯಗಳನ್ನು ಇಷ್ಟು ಚೆನ್ನಾಗಿ ನಿರೂಪಿಸಲು ಸಾಧ್ಯವೇ ಎಂದು ಇಂಗ್ಲಿಷರೇ ಅಚ್ಚರಿಪಡಿಸುವಂತೆ ಮಾತನಾಡುತ್ತಿದ್ದರು. ಬರೆಯುತ್ತಿದ್ದರು. ಇದಕ್ಕೆ ಮುಖ್ಯ ಕಾರಣ, ವಿಷಯದ ಮೇಲಿನ ಅವರ ಅಸಾಧಾರಣ ಪ್ರಭುತ್ವ. ತನಗೆ ಸ್ಪಷ್ಟವಿಲ್ಲದುದನ್ನು ಒಬ್ಬ ವ್ಯಕ್ತಿ ಇತರರಿಗೆ ಸ್ಪಷ್ಟ ಮಾಡಲಾರ. ಅವನ ತಿಳಿವಳಿಕೆಯ ಗೊಂದಲ, ಅಸ್ಪಷ್ಟತೆ ಅವನ ಭಾಷೆಯಲ್ಲೂ ಮೂಡುತ್ತದೆ. ರಾಧಾಕೃಷ್ಣನ್‌ರವರು ವಿಷಯವನ್ನು ಕೂಲಂಕುಷವಾಗಿ ತಿಳಿಯದೆ ಅದರ ವಿಷಯ ಮಾತನಾಡುತ್ತಿರಲಿಲ್ಲ. ಇದರಿಂದ ಅವರು ಪೂರ್ವದೇಶಗಳ ಚಿಂತನೆ, ಪಶ್ಚಿಮ ದೇಶಗಳ ಚಿಂತನೆ ಇವುಗಳ ನಡುವೆ ಸೇತುವೆಯಾದರು. ಭಾರತ ಧರ್ಮ, ಚಿಂತನೆ ಇದನ್ನು ಬಹು ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಹೊರದೇಶಗಳಲ್ಲಿ ನಿರೂಪಿಸಲು ಸಮರ್ಥರಾದರು. ಭಾರತದಲ್ಲಿ ಏನಿದೆ! ಅನಾಗರಿಕ ಜನ, ಇವರಿಗೆ ಪಾಶ್ಚಾತ್ಯರ ಕಣ್ಣು ತೆರೆಸಿದ್ದರು, ವಿವೇಕಾನಂದರು. ಈ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ರಾಧಾಕೃಷ್ಣನ್ ಮುಂದುವರಿಸಿದರು.

ಆದರೆ ರಾಧಾಕೃಷ್ಣನ್‌ರವರ ಜ್ಞಾನ ಸಾಮ್ರಾಜ್ಯದಲ್ಲಿ ಸಂಕುಚಿತ ಮನೋಭಾವಕ್ಕೆ ಎಡೆ ಇರಲಿಲ್ಲ. ಬೌದ್ಧ, ಜೈನ ಧರ್ಮಗಳನ್ನು ಮಾತ್ರವಲ್ಲದೆ ಯಹೂದಿ, ಕ್ರೈಸ್ತ, ಇಸ್ಲಾಂ ಮತ್ತು ಜೊರಾಸ್ತರ ಧರ್ಮಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಕೇಂಬ್ರಿಜ್‌ನ ಪ್ರಸಿದ್ಧ ಪ್ರಾಧ್ಯಾಪಕರೊಬ್ಬರು “ಭಾರತದ ಜನಕ್ಕೆ ಕ್ರೈಸ್ತ ಧರ್ಮವನ್ನು ತಿಳಿಸಿಕೊಡಿ ಎಂದು ನಾವು ಪಾದ್ರಿಗಳನ್ನು ಕಳುಹಿಸಬೇಕೆ? ನಮ್ಮ ಧರ್ಮವನ್ನು ಇತರರಿಗೆ ಹೇಳಿಕೊಡಬಲ್ಲರು ರಾಧಾಕೃಷ್ಣನ್” ಎಂದರು.

ಧರ್ಮ

ರಾಧಾಕೃಷ್ಣನ್ ಗ್ರಂಥಾಲಯದಲ್ಲಿ ಅಥವಾ ಆಶ್ರಮದಲ್ಲಿ ಎಲ್ಲರಿಂದ ದೂರವಾಗಿ ಜ್ಞಾನವನ್ನು ಗಳಿಸಿದ ವ್ಯಕ್ತಿಯಲ್ಲ. ಜ್ಞಾನ, ಧರ್ಮ, ಎಲ್ಲ ಬಾಳನ್ನೂ ಹಸಿರು ಮಾಡಬೇಕು, ಹಸನಾಗಿ ಮಾಡಬೇಕು, ಬಾಳಿಗೆ ಬೆಳಕಾಗದ ಜ್ಞಾನ-ಧರ್ಮಗಳಿಂದ ಪ್ರಯೋಜನವಿಲ್ಲ ಎಂದು ನಂಬಿದ್ದರು. ತತ್ತ್ವಶಾಸ್ತ್ರವನ್ನೂ ಜಗತ್ತಿನ ಧರ್ಮಗಳನ್ನೂ ಅವರು ಅಧ್ಯಯನ ಮಾಡಿದ್ದೂ, ಮನುಷ್ಯನ ಜೀವನ ಹೇಗೆ ಸುಂದರವಾಗಬಹುದು, ಸಾರ್ಥಕವಾಗಬಹುದು ಎಂಬುದನ್ನು ತಿಳಿಯಲೆಂದೇ ನಾವು ಸೌಕರ್ಯ ಮತ್ತು ಪರಿಪೂರ್ಣತೆಗಳನ್ನು ಬೇರೊಂದು ಲೋಕದಲ್ಲಿ ಹುಡುಕಬೇಕಾಗಿಲ್ಲ. ಭೂಮಿಯಲ್ಲಿ ಸ್ವರ್ಗವಿದೆ. ಪ್ರಪಂಚದಿಂದ ಮುಕ್ತರಾಗುವೆವೆಂದು ಕೆಲವರು ಮನೆಮಠ ಎಲ್ಲವನ್ನು ಬಿಟ್ಟು ದೂರ ಓಡುತ್ತಾರೆ. ಆದರೆ ಪ್ರತಿ ಮನುಷ್ಯನ ಜೀವನವೂ ಬೆಲೆಯುಳ್ಳದ್ದು. ಮಾನವ ಚೇತನಕ್ಕೆ ಗೌರವ ತರುವಂತಹ ನಡತೆಯೇ ಧರ್ಮ. ಮಾತು, ಯೋಚನೆ, ಕಾರ್ಯ-ಯಾತರಲ್ಲಿಯೂ ಇತರರಿಗೆ ಕೆಡಕನ್ನು ಬಯಸಿದಿರುವುದೇ ಧರ್ಮ. ಇತರರ ಕಷ್ಟಕ್ಕೆ ಮರುಗುವುದೇ ಧರ್ಮ. ಧರ್ಮ ವ್ಯಕ್ತಿಯ ಮನಸ್ಸನ್ನು ಮೃದುಗೊಳಿಸಬೇಕು, ಅವನಿಂದ ಸಮಾಜಕ್ಕೆ ಒಳ್ಳಯದಾಗುವಂತೆ ಬದುದಕುವನದನ್ನು ಕಲಿಸಬೇಕು. ಹಿಂದೂಧರ್ಮವು ವ್ಯಕ್ತಿಯ ಮನಸ್ಸನ್ನು ಸುತ್ತ ಮುತ್ತ ಇರುವವರ ಕಡೆ ಹರಿಸಬಲ್ಲದು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ- ಈ ಆಶ್ರಮಗಳ ವ್ಯವಸ್ಥೆಯಿಂದ ವ್ಯಕ್ತಿಯ ಮನಸ್ಸು ಪರಿಪಕ್ವವಾಗುತ್ತದೆ. ಅವನು ಜೀವನದಿಂದ ದೂರವಾಗುವುದಿಲ್ಲ; ಆದರೆ ಅತಿ ಮೋಹವನ್ನೂ ಬೆಳೆಸಿಕೊಳ್ಳುವುದಿಲ್ಲ. ವ್ಯಕ್ತಿಯಾಗಿ, ಸಮಾಜದ ಅಂಶವಾಗಿ ಬೆಳೆಯುತ್ತಾನೆ. ಕಾಲ ಬದಲಾದಂತೆ ಧರ್ಮದಲ್ಲಿ ಅಗತ್ಯವಾದ ಬದಲಾವಣೆಗಳಾಗಲು ಅವಕಾಶ ಇರಬೇಕು. ಈ ದೃಷ್ಟಿಯನ್ನು ಅವರು ತಮ್ಮೆಲ್ಲ ಕೃತಿಗಳಲ್ಲಿ ಪ್ರತಿಪಾದಿಸಿದರು.

ಹೊಣೆಯರಿತ ಪ್ರಜೆ

ಧರ್ಮದ ಒಂದು ಮುಖ್ಯ ಅಂಶ ಸಮಾಜದ ಉಪಯುಕ್ತ ಭಾಗವಾಗಿ ಬದುಕುವುದು ಎಂದು ಮನಗಂಡಿದ್ದ ರಾಧಾಕೃಷ್ಣನ್, ತಮ್ಮ ಸಮಾಜದ ಮತ್ತು ನಾಡಿನ ಭಾಗವಾಗಿದ್ದರು. ಕಾಲೇಜು ಅಧ್ಯಾಪಕರಾಗಿ ಅವರು ಎಷ್ಟು ನಿಷ್ಠೆಯಿಂದ ಕೆಲಸ ಮಾಡಿದರು ಎನ್ನುವುದಕ್ಕೆ ಒಂದು ಉದಾಹರಣೆ ಕೊಡಬಹುದು. ಅವರು ಮೈಸೂರು ವಿಶ್ವವಿದ್ಯಾನಿಲಯವನ್ನು ಬಿಟ್ಟಾಗ ಅವರ ವಿದ್ಯಾರ್ಥಿಗಳು ಅವರನ್ನು ಕೋಚಿನಲ್ಲಿ ಕೂಡಿಸಿ ತಾವೇ ಗಾಡಿಯನ್ನು ಎಳೆಯಲು ಸಿದ್ಧರಾದರು. ಅವರು ಹಲವು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಾಗಿ ಅವುಗಳಲ್ಲಿ ಶಿಕ್ಷಣ ಸಾರ್ಥಕವಾಗುವಂತೆ ಶ್ರಮಿಸಿದರು. ಭಾರತ ಸರ್ಕಾರ ನೇಮಿಸಿದ ವಿಶ್ವವಿದ್ಯಾನಿಲಯ ಶಿಕ್ಷಣ ಆಯೋಗದ ಅಧ್ಯಕ್ಷರಾಗಿ, ದೇಶದ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಭೇಟಿ ಕೊಟ್ಟು ಅವುಗಳ ಕಾರ್ಯರೀತಿಯನ್ನು ಅಭ್ಯಾಸ ಮಾಡಿದರು. ಭಾರತದಲ್ಲಿ ಉಚ್ಚ ಶಿಕ್ಷಣ ಯಾವ ರೀತಿ ನಡೆಯಬೇಕೆಂಬುದನ್ನು ವಿವರಿಸಿ ದೀರ್ಘವಾದ, ಬಹು ಉಪಯುಕ್ತವಾದ ವರದಿಯನ್ನು ಸರಕಾರಕ್ಕೆ ಕೊಟ್ಟರು. ದೂರದ ರಷ್ಯಾದಲ್ಲಿ ಭಾರತದ ರಾಯಭಾರಿಗಳಾದರು. ವಿಶ್ವಸಂಸ್ಥೆಯ ಶಿಕ್ಷಣ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸದಸ್ಯರಾಗಿ ಅಧ್ಯಕ್ಷರಾಗಿ ಕೆಲಸ ಮಾಡಿದರು. ಸಾಹಿತಿಗಳ ಅಂತಾರಾಷ್ಟ್ರೀಯ ಸಂಸ್ಥೆ ಪಿ.ಇ.ಎಸ್.ನ ಭಾರತ ಶಾಖೆಯ ಅಧ್ಯಕ್ಷರಾಗಿದ್ದರು. ಭಾರತದ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರು. ಭಾರತದ ಉಪರಾಷ್ಟ್ರಪತಿಯಾಗಿ ರಾಜ್ಯಸಭೆಯ ಕಾರ್ಯಕಲಾಪಗಳನ್ನು ನಿರ್ವಹಿಸಿದರು. ರಾಷ್ಟ್ರಪತಿಗಳಾಗಿ ಜನ ಸಾಮಾನ್ಯರೊಡನೆ ಸಂಪರ್ಕವಿಟ್ಟುಕೊಂಡಿದ್ದರು. ಚೀನ ಭಾರತದ ಮೇಲೆ ದಾಳಿ ಮಾಡಿದಾಗ, ಪ್ರಧಾನಿ ನೆಹರೂ ತೀರಿಕೊಂಡಾಗ, ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿಗಳು ತೀರಿಕೊಂಡಾಗ ದೇಶಕ್ಕೆ ಮಾರ್ಗದರ್ಶನ ಮಾಡಿದರು. “ನಮ್ಮ ದೇಶದಲ್ಲಿ ಎಲ್ಲಿಯವರೆಗೆ ಬಡತನ, ಹಸಿವು, ರೋಗ ಮತ್ತು ಅಜ್ಞಾನಗಳಿರುತ್ತವೆಯೋ ಅಲ್ಲಿ ಯವರೆಗೆ ಪ್ರಜಾಪ್ರಭುತ್ವ ಸಾರ್ಥಕವಾಗುವುದಿಲ್ಲ” ಎಂದಿದ್ದಾರೆ.

 

’ನಾನು ಈಗ ಒಬ್ಬ ಸಂನ್ಯಾಸಿ’

ನಾನೊಬ್ಬ ಸಂನ್ಯಾಸಿ

 

ರಾಷ್ಟ್ರದ ಉನ್ನತವಾದ ರಾಷ್ಟ್ರಪತಿ ಸ್ಥಾನದಿಂದ ನಿವೃತ್ತರಾಗಿ ದೂರದ ಮದ್ರಾಸಿಗೆ ಹಿಂತಿರುಗಿ, ತತ್ಕಾಲೀನ ಸಾರ್ವಜನಿಕ ಸೆಳೆತಗಳಿಂದ ಸಂಪೂರ್ಣ ದೂರವುಳಿದು ಸಾಕ್ಷಾತ್ ಋಷಿಯಂತೆ ತಮ್ಮ ಶೇಷಾಯುಷ್ಯ ಕಳೆದ ಅವರನ್ನು ಮರಣಕ್ಕೆ ಎರಡು ವರ್ಷ ಮೊದಲು ತರುಣ ಮಿತ್ರರೊಬ್ಬರು ಕೇಳಿದ್ದರು. “ನೀವು ನಿಮ್ಮ ಉತ್ಸಾಹವನ್ನೇ ಕಳಕೊಂಡಿರೇಕೆ?” ಎಂದು.

ರಾಷ್ಟ್ರಪತಿ ಸ್ಥಾನದಲ್ಲಿದ್ದು ಬಂದ ನಾನು ಈಗ ಒಬ್ಬ ಸಂನ್ಯಾಸಿ. ಸಂನ್ಯಾಸವೆಂದರೆ ಕೇವಲ ಕಾವಿ ವಸ್ತ್ರಧಾರಣೆ ಅಲ್ಲ. ಜೀವನದಿಂದ ಕಳಚಿಕೊಂಡು ದೂರ ಸರಿಯುವುದೇ ಸಂನ್ಯಾಸ ಎಂದು ಅವರು ಉತ್ತರಿಸಿದ್ದರು.

ಹಿಂದೂ ಧರ್ಮದ ನೈಜ ಗುಣವಾದ ವಿಶಾಲ ದೃಷ್ಟಿಕೋನ ಹೊಂದಿದ ಅವರು ಎಲ್ಲ ಧರ್ಮಗಳ ಪಾರಮಾರ್ಥಿಕ ತತ್ತ್ವಗಳನ್ನು ಪ್ರತಿಪಾದಿಸುತ್ತಿದ್ದರು.

“ಹಿಂದೂ ಧರ್ಮ ಒಂದು ಪ್ರಗತಿಪರ ಚಾರಿತ್ರಿಕ ಚಳವಳಿ. ಅದಿನ್ನೂ ಪ್ರಗತಿ ಹೊಂದುತ್ತಲೇ ಇರುತ್ತದೆ. ಅದರ ಅನುಯಾಯಿಗಳು ಒಂದು ಖಜಾನೆಯ ರಕ್ಷಕರಲ್ಲ. ಬದಲು ದಿವ್ಯ ಜ್ಯೋತಿಯನ್ನು ಹೊತ್ತಿರುವ ಹರಿಕಾರರು” ಎಂದು ಅರಿತಿದ್ದ ರಾಧಾಕೃಷ್ಣನ್ ಹಿಂದೂ ಧರ್ಮದ ದೌರ್ಬಲ್ಯ, ಸಂಪ್ರದಾಯ ಹಾಗೂ ಸತ್ಯಗಳ ನಡುವಿನ ಗೊಂದಲ ಮಾತ್ರ ಎನ್ನುತ್ತಿದ್ದರು. “ದೇವರು ನಾನೇ ಸಂಪ್ರದಾಯ ಎಂದು ಹೇಳುವುದಿಲ್ಲ. ನಾನು ಸತ್ಯ ಎಂದು ಹೇಳುತ್ತಾನೆ” ಎಂದಿದ್ದರು ಅವರು.

ನುಡಿಪ್ರಭುತ್ವ

ರಾಧಾಕೃಷ್ಣನ್ ಅವರ ವ್ಯಕ್ತಿತ್ವ ಸರಳವಾದದ್ದು. ಆಡಂಬರ ಎಂದರೆ ಅವರಿಗಾಗದು. ಶುಭ್ರವಾದ ಬಿಳಿಯ ಕಚ್ಚೆಪಂಚೆ, ಉದ್ದದ ನಿಲುವಂಗಿ, ಪೇಟ ಅವರ ಉಡುಪು. ಎಲ್ಲದರಲ್ಲಿಯೂ ಶಿಸ್ತು, ಆದರೆ ಸರಳರು. ಕುಣಿಗಲ್ಲಿನ ಹುಡುಗನೊಬ್ಬ ತನಗೆ ಶಾಲೆಯ ಫೀಸ್ ಕೊಡಲು ಹಣವಿಲ್ಲ ಎಂದು ಕಾಗದ ಬರೆದುಕೊಂಡರೆ, ರಾಷ್ಟ್ರಪತಿ ರಾಧಾಕೃಷ್ಣನ್ ಉತ್ತರ ಬರೆದು ಸಹಾಯ ಮಾಡಿದರು. ರಾಷ್ಟ್ರಪತಿಗಳಾದರೂ ವಾರಕ್ಕೆರಡು ಬಾರಿ, ಯಾರಾದರೂ ತಮ್ಮನ್ನು ಭೇಟಿ ಮಾಡಬಹುದು. ಕಷ್ಟ ಹೇಳಿಕೊಳ್ಳಬಹುದು ಎಂದು ವ್ಯವಸ್ಥೆ ಮಾಡಿದ್ದರು. ಅವರ ಮಾತಿನ ಶೈಲಿಯೂ ಇಷ್ಟೇ ಸರಳ. ಚೀನ ಭಾರತಕ್ಕೆ ಸೈನ್ಯವನ್ನು ನುಗ್ಗಿಸಿದಾಗ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಭಾರತ ಇಡೀ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಮೊದಲ ವಾಕ್ಯದಲ್ಲೇ ಹೇಳಿದರು: “ಪ್ರಜಾಪ್ರಭುತ್ವದ ದೀಪಗಳು ಒಂದಾದ ಮೇಲೊಂದು ಆರಿಹೋಗುತ್ತಿವೆ.” ಮನುಷ್ಯ ವಿಜ್ಞಾನವನ್ನು ಬೆಳೆಸಿದ, ವಿವೇಕವನ್ನು ಬೆಳೆಸಲಿಲ್ಲ ಎಂದು ಹೇಳುತ್ತದೆ ಎಂದರು. “ಮನುಷ್ಯ ಪಕ್ಷಿಯಂತೆ ಗಾಳಿಯಲ್ಲಿ ಹಾರಬಲ್ಲ, ಮೀನಿನಂತೆ ನೀರನಲ್ಲಿ ಈಜಬಲ್ಲ, ಮನುಷ್ಯನಂತೆ ನೆಲದ ಮೇಲೆ ಬದುಕಲು ಕಲಿಯಲಿಲ್ಲ” ಧರ್ಮದ ಹೆಸರಿನಲ್ಲಿ ಒಬ್ಬರನೊಬ್ಬರು ದ್ವೇಷಿಸುವುದು ಹೆಚ್ಚಾಯಿತು ಎನ್ನುತ್ತ ಹೀಗೆಂದರು: “ನಮ್ಮ ಧರ್ಮಕ್ಕಾಗಿ ಹೋರಾಡಲು ಬಂದಿದ್ದೇವೆ. ಪ್ರಾಣ ಕೊಡಲು ಸಿದ್ಧರಾಗಿದ್ದೇವೆ ಆದರೆ ಅದು ಹೇಳಿದಂತೆ ಬದುಕಲು ಸಿದ್ಧರಾಗಿಲ್ಲ”. ಗಾಂಧೀಜಿ ಹಿಂದೂ ಧರ್ಮದ ಸತ್ವದ ಪ್ರತೀಕ ಎಂದುಅ ವರು ವಿವರಿಸುತ್ತಿದ್ದಾಗ ಒಬ್ಬರು ಪ್ರಶ್ನಿಸಿದರು, “ಎಲ್ಲ ಹಿಂದೂಗಳು ಗಾಂಧೀಜಿಯಂತೆಯೇ ಇದ್ದಾರೆಯೇ” ರಾಧಾಕೃಷ್ಣನ್ ಉತ್ತರಿಸಿದರು: “ಮೋಂಬತ್ತಿ ಉರಿಯುವುದು ಅದರ ಮೇಲ್ತುದಿಯಲ್ಲಿ ತಾನೆ?”

ಇಷ್ಟಾದರೆ ಸಾಕು

ರಾಧಾಕೃಷ್ಣನ್ ಅವರು ತಮ್ಮ “ಸತ್ಯಕ್ಕಾಗಿ ನನ್ನ ಅನ್ವೇಷಣೆ” ಎಂಬ ಪುಸ್ತಕದ ಕಡೆಯ ವಾಕ್ಯಗಳಲ್ಲಿ ಹೇಳುವ ದೃಷ್ಟಿ ಎಲ್ಲರೂ ಮನನ ಮಾಡಬೇಕಾದದ್ದು.

“ಮನುಷ್ಯನ ಬಾಳಿನಲ್ಲಿ ಬೇಸರ ತರುವ ಸಂಗತಿ ಎಂದರೆ, ಬಡವರು, ದೀನರು, ಅರ್ಧೈವಂತರು, ಸಂಕಟಕ್ಕೊಳಗಾದವರು ಎಲ್ಲ ಇರುವ ಈ ಜಗತ್ತಿನ ಜನರ ನೋವಿನಲ್ಲಿ ತಾನು ಹೆಚ್ಚು ಪಾಲು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲವಲ್ಲ ಎನ್ಜುವುದು. ಇಡೀ ಬಾಳನ್ನು ಮೌನದಲ್ಲಿ ಸಾಗಿಸಬೇಕಾದರೂ ಚಿಂತೆ ಇಲ್ಲ; ಆಗಾಗ ಮಗುವೊಂದನ್ನು ನೋಡಿ ಮುಗುಳ್ನಗೆ ನಗುವುದು, ಮತ್ತೊಬ್ಬರಿಗೆ ಹರ್ಷವಾಗುವಂತೆ, ಅವನ ಹೃದಯದಲ್ಲಿ ಹೊಸ ಭರವಸೆ ಚಿಗುರುವಂತೆ ಸಂತೈಸುವುದು ಇಷ್ಟು ಸಾಧ್ಯವಾದರೆ ಸಾಕು.’