ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ವಿದ್ಯಾರಣ್ಯಪುರದಲ್ಲಿ ೨೭-೧೦-೧೯೧೪ರಲ್ಲಿ ಜನಿಸಿದ ಲಕ್ಷ್ಮಣ ಶಾಸ್ತ್ರಿಗಳ ತಂದೆ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗಳು ಸಂಗೀತ ಸಂಸ್ಕೃತ ಎರಡರಲ್ಲೂ ಪಾರಂಗತರಾಗಿದ್ದವರು. ತಂದೆಯವರಿಂದಲೇ ಗಾಯನ, ಪಿಟೀಲು, ಹಾರ್ಮೋನಿಯಂ ವಾದನಗಳಲ್ಲಿ ಅಭ್ಯಾಸ ಆರಂಭಿಸಿದರು. ಮುಂದೆ ಮೈಸೂರು ವಾಸುದೇವಾಚಾರ್ಯ ಹಾಗೂ ನಾಟ್ನಹಳ್ಳಿ ಚೆನ್ನಕೇಶವಯ್ಯನವರಲ್ಲಿ ಸತತವಾಗಿ ಪ್ರೌಢ ಶಿಕ್ಷಣ ಪಡೆದು ಲಕ್ಷ್ಯ-ಲಕ್ಷಣಗಳೆರಡರಲ್ಲೂ ಪ್ರಬುದ್ಧರಾದವರು ಲಕ್ಷ್ಮಣಶಾಸ್ತ್ರಿ.

ಮೈಸೂರು ಸರಕಾರದ ಶಿಕ್ಷಣ ಇಲಾಖೆಯಲ್ಲಿ ಸುಮಾರು ಮೂವತ್ತೈದು ವರ್ಷಗಳು ಪ್ರೌಢಶಾಲಾ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನಂತರ ಬೆಂಗಳೂರಿನಲ್ಲಿ ಶ್ರೀ ವೆಂಕಟೇಶ್ವರ ಗಾನ ನಿಲಯವನ್ನು ಸ್ಥಾಪಿಸಿ ಅದರ ಮೂಲಕ ಅನೇಕ ಸಂಗೀತಾಭ್ಯಾಸಿಗಳಿಗೆ ಶಿಕ್ಷಣ ನೀಡಿರುವ ಹಿರಿಮೆ ಇವರದು.

ನಾಡಿನ ಹಿರಿಯ ಕಲಾವಿದರನೇಕರಿಗೆ ಹಾರ್ಮೋನಿಯಂ ಪಕ್ಕವಾದ್ಯ ನುಡಿಸಿರುತ್ತಾರೆ. ಜಯಪುರದಲ್ಲಿ ನಡೆದ ಅಖಿಲ ಭಾರತ ಹಿಂದೂಸ್ಥಾನಿ-ಕರ್ನಾಟಕ ಸಂಗೀತ ಸಮ್ಮೇಳನದಲ್ಲಿ  ರಾಜ್ಯವನ್ನು ಪ್ರತಿನಿಧಿಸಿದ್ದರು. ಆಕಾಶವಾಣಿಯ ಮೂಲಕ ಇವರ ಗಾಯನ ಶ್ರೋತೃಗಳನ್ನು ರಂಜಿಸಿದೆ. ನಾಡಿನಲ್ಲೂ ಹೊರ ನಾಡುಗಳ ಅನೇಕ ಸಂಸ್ಥೆಗಳಲ್ಲೂ ಇವರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಸರ್ಕಾರವು ನಡೆಸುವ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ಹಲವಾರು ಪ್ರತಿಷ್ಠಿತ ಸಭೆಗಳೂ, ಸಂಸ್ಥೆಗಳೂ ಶ್ರೀಯುತರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಇವರಿಗೆ ಪ್ರಾಪ್ತವಾಗಿದೆ. ೧೦-೪-೨೦೦೩ ರಂದು ಲಕ್ಷ್ಮಣಶಾಸ್ತ್ರಿಯವರು ಶ್ರೀ ಶಾರದೆಯ ಮಡಿಲಲ್ಲಿ ಚಿರವಿಶ್ರಾಂತಿ ಹೊಂದಿದರು.