ರಂಗಣ್ಣನವರು ೧೮೯೮ ರಲ್ಲಿ ಹಾಸನ ಜಿಲ್ಲೆಯ ಸಾಲಗಮೆಯಲ್ಲಿ ಹುಟ್ಟಿದರು. ಹೆಸರಾಂತ ವಿಮರ್ಶಕರೂ, ಸಾಹಿತಿಗಳೂ ಪ್ರಾದ್ಯಾಪಕರೂ ಆಗಿದ್ದ ಇವರು ಕನ್ನಡದ ಭಾಷಾಬಿಮಾನವನ್ನು ಜನರಿಗೆ ತಿಳಿಸುವಲ್ಲಿ ಲೇಖಗಳ ಮೂಲಕ ಮತ್ತು ಉಪನ್ಯಾಸಗಳ ಮೂಲಕ ಶ್ರಮಿಸಿದರು. ಹೊಸಗನ್ನಡದಲ್ಲಿ ನೂತನ ವಿಮರ್ಶೆಯ ಮಾರ್ಗವನ್ನು ಸ್ಥಾಪಿಸಿದ ಕೀರ್ತಿ ರಂಗಣ್ಣನವರಿಗೆ ಸಲ್ಲುತ್ತದೆ. ಕಾಳಿದಾಸನ ನಾಟಕಗಳ ವಿಮರ್ಶೆ, ವಿಕ್ರಮೋರ್ವಶೀಯ ನಾಟಕದ ವಿಮರ್ಶೆ, ಶೈಲಿ ೧,೨,೩, ಪಾಶ್ಚಾತ್ಯ ಗಂಬೀರ ನಾಟಕಗಳು, ಹೊನ್ನಶೂಲ ರನ್ನಕವಿ ಪ್ರಶಸ್ತಿ, ಇವು ಇವರ ವಿಮರ್ಶಾಕೃತಿಗಳು. ರನ್ನಕವಿ ಪ್ರಶಸ್ತಿ ೧೯೨೮ ಇದರಲ್ಲಿ ಪ್ರಾಚೀನ ಹಿರಿಯ ಕವಿಗಳ ಶೈಲಿಯನ್ನು ಕುರಿತು ವಿಮರ್ಶಿಸಿದ್ದಾರೆ.

ಸಾಮಾನ್ಯ ಚಿತ್ರಕ್ಕೆ ಚಿನ್ನದ ಚೌಕಟ್ಟು, ಎಂಬ ಬಿಡಿ ಲೇಖನನ ರಾಮಾಶ್ವಮೇಧವನ್ನು ಕುರಿತ ವಿಮರ್ಶೆ, ಇದರ ಜೊತೆಗೆ ಇವರ ಲೇಖನಗಳು ಸೇರಿ ಹೊನ್ನಶೂಲ ಎಂಬ ಕೃತಿ ಪ್ರಕಟವಾಯಿತು. ಕಾಳಿದಾಸನ ನಾಟಕಗಳು ವಿಮರ್ಶೆಯಲ್ಲಿ ಶೇಕ್ಸ್ ಪಿಯರ್ ನ ಹರ್ಮಿಯಾನಳಿಗೂ ಕಾಳಿದಾಸನ ಶಕುಂತಲೆಗೂ ಹೋಲಿಸಿ ವಿಮರ್ಶಿಸಿದ್ದಾರೆ. ಶೈಲಿ ಸಂಪುಟಗಳಲ್ಲಿ ಶೈಲಿಯ ಸ್ವರೂಪ ಎಂಬ ಪ್ರಭಂದವಲ್ಲದೆ ನಾಲ್ಕು ಹಳಗನ್ನಡ ಕವಿಗಳ ಬಗ್ಗೆಯೂ ಮತ್ತು ಅರಿಸ್ಟಾಟಲ್, ಪೋಪ್, ಕೋಲ್ ರಿಜ್, ವಡ್‌ವರ್ತ್, ಮೊದಲಾದ ಪಶ್ಚಾತ್ಯ ವಿಮರ್ಶಕರ ಅಬಿಪ್ರಾಯಗಳಿವೆ.

ಪಾಶ್ಚಾತ್ಯ ಗಂಬೀರ ನಾಟಕಗಳು, ೧೯೭೦ ಗ್ರೀಸ್, ಇಟಲಿ, ಸ್ಪೈನ್, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ ದೇಶಗಳಲ್ಲಿ ಗಂಬೀರ ನಾಟಕಗಳು ಬೆಳೆದು ಬಂದ ಬಗೆ, ಅಲ್ಲಿನ ಮುಖ್ಯ ಗಂಬೀರ ನಾಟಕಕಾರರು ಮತ್ತು ಅವರ ಕೃತಿಗಳ ವಿಮರ್ಶೆಯನ್ನು ಮಾಡಿಕೊಡುತ್ತದೆ. ಈ ಗ್ರಂಥ ಗಂಬೀರ ನಾಟಕಗಳ ವಿಶ್ವಕೋಶದಂತಿದೆ. ರಂಗಣ್ಣನವರ ಸಾಹಿತ್ಯ ಚಟುವಟಿಕೆ ವಿಮರ್ಶೆಯ ಕ್ಷೇತ್ರಕ್ಕೆ ಮಾತ್ರ ಪರಿಮಿತವಾಗದೆ ಸೃಜನಾತ್ಮಕ ಸಾಹಿತ್ಯಕ್ಕೂ ಕೈ ಚಾಚಿದೆ. ಇವರ ಕವಿ ಕಥಾಮೃತ ೧೯೭೨ ಎಂಬ ಗ್ರಂಥದಲ್ಲಿ ಪಾಶ್ಚಾತ್ಯ ಕವಿಗಳ ಜೀವನ, ಸ್ವಭಾವ, ಚರ್ಯೆಗಳ ಬಗ್ಗೆ ಚಿತ್ರಿಸಿದ್ದಾರೆ. ರಂಗಬಿನ್ನಪ ೧೯೬೩ ಇಲ್ಲಿನ ವಚನಗಳು ಮಾನವ ಸ್ವಾಭಾವಗಳಾದ ಸುಖ, ದುಃಖ, ಆಸೆ, ನಿರಾಸೆ, ಮಾನ, ಅಪಮಾನ, ಬದುಕನ್ನು ಎದುರಿಸಬೇಕೆಂಬ ಸ್ಪರ್ಧೆ, ಧೈರ್ಯ, ಛಲ, ಈ ಭಾವಗಳನ್ನು ಚಿತ್ರಿಸುತ್ತದೆ. ಇವರ ಇಂಗ್ಲಿಷ್ ಕೃತಿಗಳಲ್ಲಿ ದಿ ಲೇಡಿ ಅಂಡ್ ರಿಂಗ್, ಆನ್ ದಿ ಸೆಲ್ಫ್, ಬಿ.ಎಂ.ಶ್ರೀ., ಮುಖ್ಯವಾಗಿವೆ. ಇವರ ರಂಗಬಿನ್ನಪಕ್ಕೆ, ೧೯೬೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ೪೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಜನತೆ ಆಯ್ಕೆ ಮಾಡಿ ಗೌರವಿಸಿತು.