ಜನನ : ೯-೨೯-೧೯೩೨ ರಂದು ಕೋಲಾರ ಜಿಲ್ಲೆಯ ಶೇಗಿಹಳ್ಳಿಯಲ್ಲಿ

ಮನೆತನ : ಕಲಾವಿದರ ಮನೆತನ. ತಂದೆ ವಸಂತಪ್ಪ ತಬಲಾ ವಾದಕರು. ತಾಯಿ ಅಕ್ಕಯ್ಯಮ್ಮ. ದೇವರನಾಮ ಹಾಡುತ್ತಿದ್ದರು. ದೊಡ್ಡಪ್ಪ ಯಕ್ಷಗಾನ ಕಲಾವಿದರು ಅಣ್ಣ ಲಕ್ಷ್ಮಿ ನಾರಾಯಣದಾಸರು ಹರಿಕಥಾ ವಿದ್ವಾಂಸರು.

ಶಿಕ್ಷಣ : ಆಂಧ್ರದ ಚಲನಚಿತ್ರ ಹಾಗೂ ರಂಗನಟರಾಗಿದ್ದ ವೇಮೂರಿ ಗೊಗ್ಗಯ್ಯನವರಲ್ಲಿ ಕೀರ್ತನಾಭ್ಯಾಸ. ಚಿಕ್ಕಂದಿನಲ್ಲಿ ಭಜನೆ ನಡೆಸುತ್ತಿದ್ದ ವಂಕಟಪ್ಪನವರಲ್ಲಿ ಗಾಯನ ಶಿಕ್ಷಣ. ಮದರಾಸಿಗೆ ಹೋಗಿ ಅಲ್ಲಿನ ಸಿ ಆರ್. ರಾಮಮೂರ್ತಿ ಅವರಲ್ಲಿ ಶಾಸ್ತ್ರೀಯ ಸಂಗೀತ ಕಲಿಕೆ. ಮುಂದೆ ಮಂಡಕಲ್ ಅಶ್ವತ್ಥನಾರಾಯಣ ಅವರಲ್ಲೂ ಕೀರ್ತನ ಕಲೆಯಲ್ಲಿ ಶಿಕ್ಷಣ.

ಕ್ಷೇತ್ರ ಸಾಧನೆ : ಶ್ರೀನಿವಾಸದಾಸರು ಬಹುಮುಖ ವ್ಯಕ್ತಿತ್ವ ಊರಿನಲ್ಲಿ ನಡೆಯುತ್ತಿದ್ದ ಪಂಢರಿ ಭಜನೆಯಲ್ಲ ಬಾಲ ಕೃಷ್ಣನಾಗಿ ವೇಷ ತೊಟ್ಟು ಕೃಷ್ಣಲೀಲಾ ವಿನೋದದಲ್ಲಿ ನರ್ತಿಸುತ್ತಿದ್ದರು. ಚಿಂತಾಮಣಿಗೆ ಆಂಧ್ರದಿಂದ ಬಂದು ಕ್ಯಾಂಪ್ ಹಾಕಿದ ನಾಟಕ ಕಂಪೆನಿಯಲ್ಲಿ ಬಾಲ ನಟನಾಗಿ ಕೃಷ್ಣನ ಪಾತ್ರದಲ್ಲಿ ಮಿಂಚಿದಾಗ ಅಲ್ಲಿನ ಹಿರಿಯ ನಟರೂ. ಗಾಯಕರೂ ಆಗಿದ್ದ ವೇಮೂರಿ ಗೊಗ್ಗಯ್ಯ, ಪುರುಪಲ್ಲಿ ಸತ್ಯನಾರಾಯಣರಾವ್, ರಘುರಾಮಯ್ಯ, ಕನ್ನಾಂಬ ಅವರಿಂದ ಮುಕ್ತಕಂಠದ ಪ್ರಶಂಸೆ. ರಾಮಮೂರ್ತಿಯವರ ಜೊತೆ ಮದರಾಸಿನಲ್ಲಿದ್ದಾಗ ತಿರುವಾಂಕೂರು ಸೋದರಿಯರಾದ ಲಲಿತ-ಪದ್ಮಿನಿ-ರಾಗಿಣಿಯವರ ಪರಿಚಯ. ಅವರ ನಾಟ್ಯ ಪ್ರದರ್ಶನದಲ್ಲಿ ಹಿನ್ನೆಲೆ ಗಾಯಕರಾಗಿಯೂ ಕಾರ್ಯನಿರ್ವಹಣೆ. ಕೆಲವೊಂದು ಅನಿವಾರ್ಯಕಾರಣ ತೊಂದರೆಗಳಿಂದ ಕಂಪೆನಿ ತೊರೆದು ಹುಟ್ಟೂರಿಗೆ ಹಿಂತಿರುಗಿ ಬಂದು ಮಂಡಿಕಲ್ ಅಶ್ವತ್ಥ ನಾರಾಯಣರ ಮಾರ್ಗದರ್ಶನದಲ್ಲಿ ಕಥಾ ಕೀರ್ತನ ನಡೆಸಲು ಆರಂಭಿಸಿದರು. ನಾಟಕದ ಪ್ರಭಾವ, ಉತ್ತಮ ಹಾಗೂ ಮಾಧುರ್ಯಯುಕ್ತ ಕಂಠ ಸಿರಿಯಿಂದ ಉತ್ತಮ ಕಥಾ ಪ್ರಸಂಗಗಳ ನಿರೂಪಣೆಯಿಂದ ಜನ-ಮನ ಗೆಲ್ಲುವಲ್ಲಿ ಯಶ ಕಂಡು ಹರಿಕಥೆಯನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ರಾಜ್ಯಾದ್ಯಂತ ಸಂಚಾರ ಮಾಡಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಆರ್. ಗುರುರಾಜುಲು ನಾಯ್ಡು, ಹಂಡೆ ಗುರುದೇವ ವ್ಯಾಸಾಚಾರ್ಯರಂಥ ಕೀರ್ತನ ದಿಗ್ಗಜಗಳ ಉತ್ತೇಜನ ಮಾರ್ಗದರ್ಶನ. ಹಾಗಾಗಿ ಬೆಂಗಳೂರಿಗೆ ವಲಸೆ ಬಂದರು. ಆಕಾಶವಾಣಿ, ದೂರದರ್ಶನಗಳಲ್ಲಿ ಹರಿಕಥೆ, ಸುಗಮ ಸಂಗೀತ ರಂಗಗೀತೆಗಳ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹರಿಕಥೆಗೆ ಅನುಕೂಲವಾಗುವಂತೆ ಕಥಾ ಪ್ರಸಂಗಗಳನ್ನು ಉಪ ಕಥೆಗಳನ್ನು ಗೀತೆಗಳನ್ನೂ ರಚನೆ ಮಾಡಿರುತ್ತಾರೆ. ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಕರ್ನಾಟಕ ಕೀರ್ತನ ಕಲಾ ಪರಿಷತ್ತಿನಿಂದ ಕೀರ್ತನ ಕಲಾತಿಲಕ ಅಲ್ಲದೆ ಕೀರ್ತನ ಕಲಾಭೂಷಣ, ಗಾನಭೂಷಣ ಮುಂತಾಗಿ ಅನೇಕ ಪ್ರಶಸ್ತಿಗಳು ಸಂದಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೦-೦೧ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.