ಸಂಗೀತ ಕಛೇರಿಗಳಲ್ಲಿ ಖಂಜರಿ ವಾದ್ಯಕ್ಕೆ ಒಂದು ಗೌರವದ ಸ್ಥಾನ ಗಳಿಸಿಕೊಡಲು ಶ್ರಮಿಸಿದ ಹಿರಿಯ ಕಲಾವಿದರಲ್ಲಿ ಶೇಷಗಿರಿ ದಾಸ್‌ ಅವರು ಒಬ್ಬರು. ೧೯೨೫ರಲ್ಲಿ ಮೈಸೂರಿನಲ್ಲಿ ಜನಿಸಿದ ಸೋಸಲೆ ಶೇಷಗಿರಿದಾಸ್‌ ಮೊದಲು ಮೃದಂಗ ವಾದನದಲ್ಲಿ ವೆಂಕಟೇಶ ದೇವರ್ ಅವರ ಮಾರ್ಗದರ್ಶನ ಪಡೆದು ನಂತರ ಸ್ವಂತ ಸಾಧನೆಯಿಂದ ಖಂಜರಿ ವಾದ್ಯ ವಾದನದಲ್ಲಿ ಪರಿಣತರಾದರು. ಇವರ ಮೊದಲ ಕಾರ್ಯಕ್ರಮ ಮೈಸೂರು ವಾಸುದೇವಾಚಾರ್ಯರ ಒಂದು ಕಛೇರಿಗೆ ಸಹ ವಾದ್ಯವಾಗಿ ನಡೆಯಿತು. ಮೈಸೂರು ಟಿ. ಚೌಡಯ್ಯನವರ ವಿಶ್ವಾಸ, ಪ್ರೋತ್ಸಾಹಗಳು ದೊರಕಿ ನಾಡಿನ, ನೆರೆ ನಾಡಿನ ಹಲವಾರು ಹಿರಿಯ ಕಿರಿಯ ಕಲಾವಿದರುಗಳಿಗೆ ಖಂಜರಿ ವಾದನದಲ್ಲಿ ಸಹಕರಿಸಿ ಕೀರ್ತಿ ಪಡೆದರು.

ಮೊದಲಿಗೆ ಮೈಸೂರು ಆಕಾಶವಾಣಿಯಲ್ಲಿ ಸೇವಾ ನಿರತರಾಗಿದ್ದು ನಂತರ ಬೆಂಗಳೂರು ನಿಲಯದ ಕಲಾವಿದರಾಗಿದ್ದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿ ಜೀವನ ನಡೆಸಿದರು. ೧೯೮೮ರಲ್ಲಿ ನಿವೃತ್ತರಾದ ಮೇಲೂ ಸಂಗೀತ ಕ್ಷೇತ್ರದಲ್ಲಿ ಇವರ ಸೇವೆ ಮುನ್ನಡೆಯಿತು.

ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಗೌರವ ಸಲ್ಲಿಸಿವೆ. ‘ಖಂಜರಿ ವಾದ್ಯ ವಿಶಾರದ’ ಎಂದು ಸೋಸಲೆ ಮಠದ ಸ್ವಾಮಿಗಳಿಂದ ಸನ್ಮಾನಿತರದ ಇವರಿಗೆ ‘ಕಲಾರತ್ನ’ ಎಂಬ ಬಿರುದು, ೧೯೮೯-೯೦ರ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾತಿಲಕ’ ಪ್ರಶಸ್ತಿಯೂ ಪ್ರಾಪ್ತವಾಗಿದೆ.