ಸಂಪ್ರದಾಯಸ್ಥ ಕುಟುಂಬದಲ್ಲಿ ೧೨-೧೧-೧೯೪೪ ರಂದು ಬೆಂಗಳೂರಿನಲ್ಲಿ ಜನಿಸಿದವರು ಶೇಷಗಿರಿರಾವ್‌. ಇವರ ಸಂಗೀತ ವಿದ್ಯಾ ಗುರುಗಳು ತಂದೆ ಶ್ರೀ ಹೆಚ್‌.ಎಸ್‌. ವೆಂಕಟಸುಬ್ಬರಾವ್‌. ಹದಿನಾಲ್ಕರ ವಯಸ್ಸಿನಲ್ಲಿ ಪಿಟೀಲು ಹಿಡಿದು ವೇದಿಕೆ ಹತ್ತಿದ ಶೇಷಗಿರಿರಾವ್‌ರವರ ಯಶಸ್ಸು ತನಿವಾದಕರಾಗಿಯೂ ಪಕ್ಕ ವಾದ್ಯಗಾರರಾಗಿಯೂ ಅಸಮಾನವಾದುದು.

ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ, ಸಭೆಗಳಲ್ಲೂ, ಉತ್ಸವಾದಿಗಳಲ್ಲೂ ಇವರ ವಾದನ ನಡೆದಿದೆ. ಸುಮಾರು ಮೂರನಾಲ್ಕು ತಲೆಮಾರಿನ ವಿದ್ವದ್ವರೇಣ್ಯರೆಲ್ಲರಿಗೂ ಪಕ್ಕವಾದ್ಯ ಸಹಕಾರ ನೀಡಿರುವ ಹಿರಿಮೆ ಇವರದು. ಆಕಾಶವಾಣಿಯ ‘ಎ-ಟಾಪ್‌’ ಶ್ರೇಣಿಯ ಕಲಾವಿದರಾದ ಇವರ ಕಾರ್ಯಕ್ರಮಗಳು ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರಗಳಿಂದ ಪ್ರಸಾರವಾಗುತ್ತಿರುತ್ತವೆ. ರಾಷ್ಟ್ರಮಟ್ಟದ ಸಮ್ಮೇಳನಗಳಲ್ಲಿ ಇವರು ಭಾಗವಹಿಸಿದ್ದಾರೆ. ಹಾಗೆಯೇ ಹಲವಾರು ಶಿಷ್ಯರಿಗೂ ತರಬೇತಿ ನೀಡುತ್ತಿದ್ದಾರೆ.

ಅನನ್ಯ ಪುರಸ್ಕಾರ, ಕಲಾ ಜ್ಯೋತಿ, ಕಲಾ ದೀಪ್ತಿ ಮುಂತಾದ ಬಿರುದುಗಳನ್ನು ಪಡೆದಿರುವ ಶ್ರೀಯುತರನ್ನು ಹಲವಾರು ಸಂಸ್ಥೆಗಳು ಸನ್ಮಾನಿಸಿವೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಇವರಿಗೆ ಲಭ್ಯವಾಗಿದೆ. ಸುಮಾರು ಮೂವತ್ತು ವರ್ಷಗಳು ನಿಲಯದ ಕಲಾವಿದರಾಗಿ ಬೆಂಗಳೂರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶೇಷಗಿರಿರಾವ್‌ ಅವರು ವೇದಿಕೆ ಕಲಾವಿದರಾಗಿ, ಗುರುವಾಗಿ ತಮ್ಮ ಸೇವೆಯನ್ನು ನಡೆಸುತ್ತಿದ್ದಾರೆ.