ಭಾರತದಲ್ಲಿ ಪತ್ರಿಕೆಗಳ ಇತಿಹಾಸ ಸುಧೀರ್ಘ ವಾದುದು. ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದು. ಅಷ್ಟೇ ರೋಮಾಂಚಕಾರಿಯೂ ಆಗಿದೆ. ಬ್ರಿಟಿಷ್ ಆಡಳಿತದ ವಿರುದ್ಧ ನಡೆದ ಏಳುಬೀಳುಗಳ ಹೋರಾಟದ ಕಥೆ ಇದು. ತಮ್ಮ ಲೇಖನಿಯಿಂದ ವಿದೇಶೀ ಆಡಳಿತಗಾರರ ವಿರುದ್ಧ ದಂಗೆ ಎದ್ದು ಕೆಂಡಕಾರಿದ ಪತ್ರಕರ್ತರಲ್ಲಿ ಬಹುಮಂದಿ ಸೆರೆಮನೆ ಸೇರಿದರು. ಕಷ್ಟಪಟ್ಟರು. ಅಲ್ಲೇ ನವೆದರು. ಕೊನೆಗೆ ಬಿಡುಗಡೆಯಾಗಿ ಹೊರಗೆ ಬಂದ ಮೇಲೆ ಬೀದಿ ಭಿಕಾರಿಗಳಾಗಿ ಯಾರ ಅರಿವಿಗೂ ಬಾರದೆ ಪ್ರಾಣತ್ಯಾಗ ಮಾಡಿದರು. ಅಷ್ಟೇ ವಿಚಿತ್ರವೆಂದರೆ ಈ ಹೋರಾಟದ ಸರಣಿ ಆರಂಭವಾದದ್ದು ಈಸ್ಟ್ ಇಂಡಿಯ ಕಂಪನಿಯ ಮಾಜಿ ನೌಕರ, ಬ್ರಿಟಿಷ್ ರಾಷ್ಟ್ರೀಯನಾದ ಜೇಮ್ಸ ಆಗಸ್ಟಸ್ ಹಿಕ್ಕಿಯಿಂದ. ಅನಂತರ ಅವನನ್ನು ಭಾರತೀಯರು ಸ್ವಲ್ಪ ತಡವಾಗಿ ಅನುಕರಿಸಿದರು.

ಇಂತಹವರ ಪಂಕ್ತಿಯಲ್ಲಿ ಸೇರಿದ ಸದಾನಂದರು ಭಾರತೀಯ ಪತ್ರಿಕೋದ್ಯಮದ ಸಿಂಹ, ನಿರ್ಭೀತ, ಸ್ವಾಯತ್ತ ಹಾಗೂ ಸ್ವತಂತ್ರ ಪತ್ರಿಕಾ ಧೋರಣೆಯ ವಿಚಾರವಾಧೀ ಪ್ರತಿಪಾದಕ. ತನ್ನ ಮೊನಚು ಬರಹಗಳ ಮೂಲಕ ಬ್ರಿಟಿಷ್ ಆಧಿಪತ್ಯವನ್ನು ಅಲ್ಲಾಡಿಸಿದ ನಿರಂಕುಶ ಪತ್ರಕರ್ತರಾದ ಬಿ.ಜಿ. ಹಾರ್ನಿಮನ್. ಸೈಯದ್ ಅಬ್ದುಲ್ಲಾ ಬ್ರೆಲ್ವಿ. ಕಸ್ತೂರಿ ಶ್ರೀನಿವಾಸನ್, ತಿರುವಲೆ ತಾತಾಚಾರ್ಯ ಶರ್ಮ ಮುಂತಾದ ಪ್ರಖ್ಯಾತ ರಾಷ್ಟ್ರೀಯವಾದಿ ಪತ್ರಿಕೋಧ್ಯಮಿಗಳ ಸಮಕಾಲೀನ. ಎಲ್ಲಾ ರೀತಿಯ ವಿದೇಶೀ ನಿಯಂತ್ರಣವನ್ನು ವಿರೋಧಿಸಿದ ಸಹಜ ಉಗ್ರಗಾಮಿ.

ಗಾಂಧೀಜಿಯ ಗರಡಿಯ ಶಿಕ್ಷಣ

ಸ್ವಾತಂತ್ರ್ಯಪೂರ್ವದಲ್ಲಿ ಪತ್ರಿಕೋದ್ಯಮ ಅಷ್ಟೇನೂ ಅಕರ್ಷಕವಾದ ವೃತ್ತಿಯಾಗಿರಲಿಲ್ಲ. ಆಗ ಈ ಕ್ಷೇತ್ರದಲ್ಲಿ ಮುಳುಗಿ ತೇಲುವ ಛಲದಿಂದ ಮುನ್ನುಗ್ಗಿದವರು ಬೆರಳೆಣಿಕೆಯಷ್ಟು ಮಂದಿ. ಅವರಲ್ಲಿ ಅಗ್ರಪೀಠ, ಅಗ್ರಮರ್ಯಾದೆ ಸಲ್ಲಬೇಕಾದದ್ದು ಸದಾನಂದರಿಗೆ. ಅವರಿಗೆ ಪತ್ರಿಕೋದ್ಯೋಗ ಕೇವಲ ಹೊಟ್ಟೆಹೊರೆಯುವುದಕ್ಕಾದ ವೃತ್ತಿಯಾಗಿರಲಿಲ್ಲ. ಜೀವನದ ಧ್ಯೇಯವಾಗಿತ್ತು. ಅವರ ಜೀವನವೇ ಪತ್ರಿಕೋದ್ಯಮವಾಗಿತ್ತು. ಆಗ ಕಾನೂನಿನ ಕಡಿವಾಣಗಳೂ ಬಲು ಭಾರವಾಗಿದ್ದವು. ಎಂತಹವರನ್ನೂ ಅಂಜಿಸುವಂತಹವು. ಸದಾನಂದರು ಇದಕ್ಕೆಲ್ಲ ಬಗ್ಗಲಿಲ್ಲ. ಜಗ್ಗಲಿಲ್ಲ. ತಮಗೆ ಸತ್ಯವೆಂದು ಕಾಣಿಸಿದ್ದನ್ನು ಸತ್ಯವಾಗಿಯೇ ಬರೆದ ಕ್ಷಾತ್ರತೇಜಸ್ಸಿನ ಬರಹಗಾರ. ಬ್ರಿಟಿಷರ ಕಣ್ಣಿನಲ್ಲಿ ಸದಾನಂದರು ಒಬ್ಬ ದಂಗೆಕೋರ. ಭಾರತೀಯರ ದೃಷ್ಟಿಯಲ್ಲಿ ಅವರೊಬ್ಬ ಕ್ರಾಂತಿಕಾರಿ. ಅಂತೆಯೇ ಪತ್ರಿಕೋದ್ಯಮ ದಲ್ಲಿಯೂ ಸಹ. ಹಳೆಯ ಪತ್ರಿಕಾ ಬರಹದ ತತ್ವಗಳಿಗೆ ಅವರೆಂದೂ ಅಂಟಿಕೊಳ್ಳದೆ ಹೊಸತನ್ನು ಹುಡುಕುತ್ತಾ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. “ಆಕರ್ಷಕ ’ ಹಾಗೂ ’ಜನಪ್ರಿಯ’ ಪತ್ರಿಕೋದ್ಯಮದಲ್ಲಿ ಅವರಿಗೆ ನಂಬಿಕೆ. ಅವರ ನಿರಂತರ ಪ್ರಯೋಗಶೀಲತೆ ಕೇವಲ ಭಾರತೀಯ ಇಂಗ್ಲಿಷ್ ಪತ್ರಿಕೋದಮದಲ್ಲೇ ಅಲ್ಲ. ಭಾಷಾ ಪತ್ರಿಕೋದ್ಯಮದಲ್ಲೂ ಹೊಸ ಆಯಾಮವನ್ನೇ ತೆರೆಯಿತು. ಜನ ಅವರ ಪತ್ರಿಕೆಗಳನ್ನು ಮೆಚ್ಚಿದರು. ಹೆಚ್ಚು ಸಂಖ್ಯೆಯಲ್ಲಿ ಕೊಂಡರು. ಪರಿಣಾಮವಾಗಿ ಸರ್ಕಾರದ ಕಾವಲುಗಣ್ಣು ಇನ್ನಷ್ಟು ಚುರುಕಾಯಿತು.

ಸದಾನಂದರು ಮಹಾತ್ಮ ಗಾಂಧಿಯವರ ಕಟ್ಟಾ ಅನುಯಾಯಿ. ಅವರ ಪ್ರಭಾವ ಸದಾನಂದರ ಮೇಲೂ ಆಯಿತು. ಗಾಂಧೀಜಿಯವರ ‘ಯಂಗ್ ಇಂಡಿಯ’ ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿ ತರಬೇತಿ ಪಡೆದ ಮೇಲೆ ತಮ್ಮದೇ ಆದ ಶೈಲಿಯಲ್ಲಿ ಹೊಸ ಬಗೆಯ ಪತ್ರಿಕೋದ್ಯಮ ಆರಂಭಿಸುವ ಯೋಜನೆ ಹಾಕಿಕೊಂಡರು. ಗಾಂಧೀಜಿ ನಡೆದ ದಾರಿಯಲ್ಲೆ ನಡೆದರು. ನಾಗರಿಕ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ತಮ್ಮ ಜೀವನದಲ್ಲಿ ‘ಪವಿತ್ರ’ ಎಂದು ಭಾವಿಸಿದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡರು. ಅದಕ್ಕಾಗಿ ಕಂಗೆಡಿಸುವಂತಹ ‘ಕಷ್ಟಕೋಟಲೆಗಳನ್ನು ಸಹಿಸಿದರು. ‘ಯಂಗ್ ಇಂಡಿಯ’ ದಲ್ಲಿ ನಡೆದ ಪತ್ರಿಕಾ ಮೂಲಶಿಕ್ಷಣ ಈ ರಂಗದಲ್ಲಿ ಸಾಹಸಗಳನ್ನು ಮಾಡಲು ಪ್ರೇರೇಪಿಸಿತು.

ಸದಾನಂದರು ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು.

ಸದಾನಂದರಿಗೆ ಹರೆಯದಿಂದಲೂ ಬಂಡುಕೋರನೆಂಬ ಖ್ಯಾತಿ. ಅದಕ್ಕೆ ತಕ್ಕಂತೇ ನಡೆದುಕೊಂಡರು. ಜೊತೆಗೆ ಸದಾನಂದರಿಗೆ ತಮಿಳು ಪತ್ರಿಕೋದಮದ ಹಿನ್ನೆಲೆ ಸಹ ಇತ್ತು. ಅವರ ತಂದೆ ಸ್ವಾಮಿನಾಥನ್ ಸಹ ಪತ್ರಕರ್ತರಾಗಿದ್ದರು. ನೈತಿಕ ಮೌಲ್ಯಗಳ ಬಗ್ಗೆ ಅಪಾರ ಆಸ್ಥೆ ಅವರಿಗೆ. ತಂದೆಯ ಗುಣ ಮಗನಿಗೂ ಹರಿದು ಬಂತು. ಹುಟ್ಟಿನಿಂದಲೇ ಪತ್ರಿಕೋದ ಮದ ವಾತಾವರಣದಲ್ಲಿ ಬೆಳೆದದ್ದರಿಂದ ಅದು ಅವರಿಗೆ ಸುಲಭವಾಗಿ ಮೈಗೂಡಿತು. ಗಾಂಧೀಜಿ ಇದನ್ನು ಪೋಷಿಸಿದರು. ಬಾಪೂ ನೆರವಿನಿಂದ ಅಪ್ಪಟ ರಾಷ್ಟ್ರೀಯ ವಾದಿ ಪತ್ರಕರ್ತರಾದರು ಸದಾನಂದ.

‘ಯಂಗ್ ಇಂಡಿಯ’ ಪತ್ರಿಕೆಯಲ್ಲಿ ತರಬೇತಿ ಪಡೆದ ನಂತರ ಸದಾನಂದರು ಸ್ವಲ್ಪಕಾಲ ಬರ್ಮಕ್ಕೆ ತೆರಳಿದರು. ಆಗಲೇ ಅವರಿಗೆ ತಮ್ಮ ಯೋಜನೆಗಳ ಸ್ಪಷ್ಟ ಚಿತ್ರವನ್ನು ರೂಪಿಸುವ ಅವಕಾಶ ದೊರೆತದ್ದು.

ಆಮೇಲೆ ಭಾರತಕ್ಕೆ ಮರಳಿದರು.

ಸುದ್ದಿ ಕೊಡುವುದರಲ್ಲಿ ಮೋಸ

ಭಾರತದಲ್ಲಿ ಅಂದಿನ ದಿನಗಳಲ್ಲಿ ಸುದ್ದಿ ಸರಬರಾಜಿನ ಏಕಸ್ವಾಮ್ಯವನ್ನು ಹೊಂದಿದ ಸಂಸ್ಥೆ ‘ಅಸೋಸಿಯೇಟೆಡ್ ಪ್ರೆಸ್ ಆಫ್ ಇಂಡಿಯ (ಎ.ಪಿ.ಐ).’

ಪ್ರತಿ ದೇಶದಲ್ಲಿ, ಪ್ರತಿ ಭಾಷೆಯಲ್ಲಿ ಎಷ್ಟೊಂದು ವೃತ್ತಪತ್ರಿಕೆಗಳಿವೆ, ಇವೆಲ್ಲ ಎಷ್ಟೊಂದು ಸುದ್ದಿಗಳನ್ನು ಪ್ರಕಟಿಸುತ್ತವೆ ಅಲ್ಲವೆ! ಅವರಿಗೆ ಸುದ್ದಿಗಳು ಸಿಕ್ಕುವುದು ಹೇಗೆ? ಕೆಲವು ಕಡೆಗಳಲ್ಲಿ ಅವರ ಪ್ರತಿನಿಧಿಗಳನ್ನಿಟ್ಟುಕೊಂಡಿರುತ್ತಾರೆ. ಈ ಪ್ರತಿನಿಧಿಗಳು ತಮ್ಮ ತಮ್ಮ ಪತ್ರಿಕೆಗಳಿಗೆ ಸಮಾಚಾರ ತಲುಪಿಸುತ್ತಾರೆ. ಆದರೆ ಪ್ರತಿ ಪತ್ರಿಕೆಯೂ ಪ್ರತಿ ದೇಶದಲ್ಲಿಯೂ ಪ್ರತಿಯೊಂದು ಮುಖ್ಯವಾದ ಊರಿ ನಲ್ಲಿಯೂ ಪ್ರತಿನಿಧಿಗಳನ್ನು ಇಟ್ಟುಕೊಂಡು ಸುದ್ದಿ ತರಿಸುವುದು ಸಾಧ್ಯವೇ?’

ಸಮಾಚಾರಗಳನ್ನು ಸಂಗ್ರಹಿಸಿ ಪತ್ರಿಕೆಗಳಿಗೆ ಒದಗಿಸುವುದಕ್ಕೆ ವಾರ್ತಾಸಂಸ್ಥೆಗಳಿರುತ್ತವೆ. ಇವು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ, ಮುಖ್ಯ ಊರುಗಳಲ್ಲಿ ತಮ್ಮ ಪ್ರತಿನಿಧಿಗಳನ್ನು ಇಟ್ಟುಕೊಂಡಿರುತ್ತವೆ. ಎಲ್ಲ ಕಡೆಗಳಿಂದ ಸುದ್ದಿಗಳನ್ನು ಸಂಗ್ರಹಿಸುತ್ತವೆ. ಇವಕ್ಕೆ ಹಣ ಕೊಡುವ ಪತ್ರಿಕೆಗಳಿಗೆ ಸುದ್ದಿಗಳನ್ನು ಕಳುಹಿಸುತ್ತವೆ.

ಭಾರತದಲ್ಲಿ ಮೊಗಲರ ಕಾಲದಲ್ಲೆ ಕೈಬರಹದ ಒಂದು ಬಗೆಯ ಪತ್ರಿಕೆಗಳು ಬಳಕೆಯಲ್ಲಿದ್ದವು. ಭಾರತಕ್ಕೆ ಮುದ್ರಣ ಕಲೆ ಬಂದನಂತರ ವೃತ್ತಪತ್ರಿಕೆಗಳು ಬೆಳೆಯಲು ತುಂಬಾ ಸಹಾಯವಾಯಿತು. ಭಾರತದ ಮೊದಲನೆ ಅಚ್ಚಾದ ಪತ್ರಿಕೆ ’ದಿ ಬೆಂಗಾಲ್ ಗೆಜೆಟ್’ – ಇದರ ಮೊದಲ ಪ್ರತಿ ಅಚ್ಚಾದದ್ದು ಸರಿಯಾಗಿ ಇನ್ನೂರು ವರ್ಷಗಳ ಹಿಂದೆ, ೧೭೮೦ರ ಜನವರಿ ೨೯ರಂದು. ರಾಜಾರಾಮ್ ಮೋಹನ ರಾಯ್‌ನಂತಹ ದೇಶಾಭಿಮಾನಿಗಳು ಪ್ರತಿಭಾವಂತರು ಪತ್ರಿಕೋಧ್ಯಮಕ್ಕೆ ಕಾಲಿಟ್ಟಿದ್ದು ಭಾರತದ ಪುಣ್ಯ. ಹತ್ತೊಂತ್ತನೆಯ ಶತಮಾನದಲ್ಲಿ ‘ಟೈಮ್ಸ್ ಆಫ್ ಇಂಡಿಯ’, ‘ಪಯನೀರ್’ ‘ಮದ್ರಾಸ್ ಮೇಯ್ಲ್’, ‘ಹಿಂದೂ’ ಇಂತಹ ಒಳ್ಳೆಯ ಪತ್ರಿಕೆಗಳು ಹುಟ್ಟಿದವು.

ಈ ಹೊತ್ತಿಗೆ ಇಂಗ್ಲೆಂಡಿನಲ್ಲಿ ರಾಯಿಟರ್ ಸಮಾಚಾರ ಸಂಸ್ಥೆ ಹುಟ್ಟಿಕೊಂಡಿತ್ತು. ಮೊದಮೊದಲು ಸುದ್ದಿಯನ್ನು ಇಂಗ್ಲೆಂಡಿನಿಂದ ಭಾರತಕ್ಕೆ ಅಂಚೆಯಲ್ಲಿ ಕಳಿಸುತ್ತಿದ್ದರು. ಇಂಗ್ಲೆಂಡಿಗೂ ಭಾರತಕ್ಕೂ ನೇರವಾಗಿ ತಂತಿಯ ಸಂಪರ್ಕ ಏರ್ಪಟ್ಟ ಮೇಲೆ ಸುದ್ದಿಗಳನ್ನು ಬೇಗನೆ ಕಳುಹಿಸುವುದು ಸಾಧ್ಯವಾಯಿತು. ಭಾರತದ ಪತ್ರಿಕೆಗಳು ರಾಯಿmರ್ ಸಂಸ್ಥೆಯಿಂದ ಸಮಾಚಾರ ತರಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಿದವು. ಮೊಟ್ಟಮೊದಲು ರಾಯಿಟರ್ ಸಂಸ್ಥೆಯಿಂಧ ಸಮಾಚಾರ ಪಡೆದ ಭಾರತೀಯ ಪತ್ರಿಕೆ ‘ಬೆಂಗಾಲಿ’, ಇದು ಆದದ್ದು ೧೯೦೦ರಲ್ಲಿ.

ರಾಯಿmರ್ ಸಂಸ್ಥೆ ಪ್ರಪಂಚದ ಹಲವು ಕಡೆಗಳಲ್ಲಿ ತನ್ನ ಶಾಖೆಗಳನ್ನು ಪ್ರಾರಂಭಿಸಿತು. ಪ್ರಪಂಚದ ಎಲ್ಲ ಮುಖ್ಯಪತ್ರಿಕೆಗಳೂ ರಾಯಿಟರ್‌ನಿಂದಲೇ ಸುದ್ದಿಗಳನ್ನು ತರಿಸಿಕೊಳ್ಳುತ್ತಿದ್ದವು. ಸ್ವಲ್ಪ ಕಾಲಾನಂತರ ‘ಅಮೆರಿಕನ್ ಅಸೋಸಿಯೇಟೆಡ್ ನ್ಯೂಸ್ ಏಜೆನ್ಸಿ’ ಮೊದಲಾದ ಸಂಸ್ಥೆಗಳು ಹುಟ್ಟಿಕೊಂಡವು.

ಈ ವಿದೇಶಗಳ ಸಂಸ್ಥೆಗಳಿಂದ ಸುದ್ದಿ ತರಿಸಿಕೊಳ್ಳುವುದು ತುಂಬಾ ಖರ್ಚಿನ ಸಂಗತಿಯಾಗಿತ್ತು. ಆದುದರಿಂದ ಭಾರತದಲ್ಲಿಯೇ ಒಂದು ಸುದ್ದಿ ಸಂಗ್ರಹ ಸಂಸ್ಥೆಯನ್ನು ಪ್ರಾರಂಭಿಸುವ ಪ್ರಯತ್ನಗಳು ನಡೆದವು. ಕೆ.ಸಿ. ರಾಯ್ ಎಂಬುವನು ‘ಆಸೋಸಿಯೇಟೆಡ್ ಪ್ರೆಸ್ ಆಫ್ ಇಂಡಿಯ’ ಎಂಬ ಸುದ್ದಿಸಂಸ್ಥೆಯನ್ನು ಪ್ರಾರಂಭಿಸಿದನು. ಭಾರತದಲ್ಲಿ ಇದೇ ದೊಡ್ಡದೊಂದು ವಾರ್ತಾಸಂಗ್ರಹ ಸಂಸ್ಥೆ.

ಆದರೆ ಈ ಸಂಸ್ಥೆಗೆ ರಾಯಿmರ್ ಸಂಸ್ಥೆಯ ಬೆಂಬಲ ಬಹು ಅಗತ್ಯವಾಗಿತ್ತು. ರಾಯಿmರ್ ಸಂಸ್ಥೆ ಇಂಗ್ಲೆಂಡಿನಲ್ಲಿದ್ದುದು. ಅದರಲ್ಲಿ ಬ್ರಿಟನ್ನಿನ ಪಾಲುದಾರರಿದ್ದರು. ಇದರಿಂದ ಆ ಸಂಸ್ಥೆ ಪಕ್ಷಪಾತ ಮಾಡುತ್ತಿತ್ತು. ಸುದ್ದಿಗಳನ್ನು ಕಳುಹಿಸುವಾಗ ಬ್ರಿಟಿಷ್ ಆಡಳಿತಕ್ಕೆ ಅನುಕೂಲವಾಗುವಂತೆ ಕಳುಹಿಸುತ್ತಿತ್ತು. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ವಿರುದ್ಧ ಪ್ರತಿಭಟನೆ, ಹೋರಾಟ, ರಾಷ್ಟ್ರನಾಯಕರ ಅಭಿಪ್ರಾಯಗಳು, ಕೆಲಸ ಇವನ್ನು ಕುರಿತು ಸಷ್ಪಕ್ಷಪಾತವಾಗಿ, ಸಾಕಷ್ಟು ವಿವರವಾಗಿ ವರದಿಗಳನ್ನು ಕಳುಹಿಸುತ್ತಿರಲಿಲ್ಲ. ಭಾರತೀಯರ ರಾಷ್ಟ್ರೀಯ ಅಂದೋಲನದ ಸುದ್ದಿಯನ್ನು ವಿಕೃತಗೊಳಿಸಿ ಪತ್ರಿಕೆಗಳಿಗೆ ಸರಬರಾಜು ಮಾಡುತ್ತಿತ್ತು. ಇದು ಭಾರತೀಯರೆಲ್ಲರಿಗೂ ಗೊತ್ತಿದ್ದ ವಿಷಯವೇ. ಆದರೆ ಇದಕ್ಕೆ ಪ್ರತಿಸ್ಪರ್ಧಿಯಾಗಿ ಸುದ್ದಿಸಂಸ್ಥೆಯೊಂದನ್ನು ನಡೆಸುವುದು ಮಕ್ಕಳಾಟವಲ್ಲ. ಆಗಾಧ ಬಂಡವಾಳ ಮತ್ತು ತಾಂತ್ರಿಕ ಅನುಭವ ಬೇಕಾಗಿತ್ತು. ಎಲ್ಲವನ್ನು ಸಮನ್ವಯಗೊಳಿಸಬಲ್ಲ ಕರ್ತೃತ್ವ ಶಾಲಿಯೊಬ್ಬನ ಅಗತ್ಯವಿತ್ತು. ಹೀಗೆ ಮಾಡಿದವರು ಸರ್ಕಾರದ ಕೋಪಕ್ಕೆ ಗುರಿಯಾಗುತ್ತಿದ್ದರು; ಸರ್ಕಾರ ಅವರಿಗೆ ಹಲವು ರೀತಿಗಳಲ್ಲಿ ಕಿರುಕುಳ ಕೊಟ್ಟು ಹಣವನ್ನು ಕಿತ್ತುಕೊಳ್ಳಬಹುದಾಗಿತ್ತು. ಇಷ್ಟು ಎದೆಗಾರಿಕೆ ಮತ್ತು ಹೂಡವ ಬಂಡವಾಳವನ್ನು ನಷ್ಟ ಮಾಡಿಕೊಳ್ಳುವ “ಹುಚ್ಚು’ ಯಾರಿಗೂ ಇರಲಿಲ್ಲ. ಪ್ರತಿಭಾವಂತ ಪತ್ರಿಕೋದ್ಯಮಿಗಳೆಲ್ಲ ಹಿಂಜರಿದರು. ಇದರಿಂದ ಎ.ಪಿ.ಐ.ಗೆ ಬಹುಕಾಲದವರೆಗೆ ಅಡತಡೆಗಳೇನೂ ಉಂಟಾಗಲಿಲ್ಲ. ಎ.ಪಿ.ಐ. ಸುದ್ದಿಸಂಸ್ಥೆಯನ್ನು ಸ್ಥಾಪಿಸಿದ ಕೆ.ಸಿ. ರಾಯ್ ಸಹ ಭಾರತೀಯನೇ. ಆದರೆ ಬ್ರಿಟಿಷರ ಒತ್ತಡ ತಂತ್ರಗಳಿಗೆ ಮಣಿಯಲೇ ಬೇಕಾಯಿತು. ವಿರೋಧಿಸುವುದರಿಂದ ಪ್ರಯೋಜನವಾಗಲಾರದು ಎಂದು ಎನಿಸಿದಾಗ ಆತ ಆಡಳಿತಗಾರರೊಡನೆ ರಾಜಿ ಮಾಡಿಕೊಂಡ.

ಮೋಸಕ್ಕೆ ವಿರೋಧ

ಇದಕ್ಕೆ ತದ್‌ವಿರುದ್ಧ ಸ್ವಭಾವದವರು ಸದಾನಂದ. ಪತ್ರಿಕೋದ್ಯಮಿ ಯಾವ ಬೆದರಿಕೆಗೂ ಮಣಿಯಬಾರದು ಎಂದು ಅವರ ದೃಢನಂಬಿಕೆ. ಎ.ಪಿ.ಐ.ನ ಸುದ್ದಿ ಸರಬರಾಜು ವಿಧಾನ ಅವರಿಗೆ ಒಪ್ಪಿಗೆಯಾಗಲಿಲ್ಲ. ರಾಷ್ಟ್ರೀಯ ಚಳವಳಿಯ ಸತ್ಯದ ಸುದ್ದಿ ಸರಬರಾಜಿಗಾಗಿ ಮತ್ತು ಭಾರತೀಯ ಪತ್ರಿಕೆಗಳ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಶುದ್ಧ ಭಾರತೀಯ ಸುದ್ದಿಸಂಸ್ಥೆಯೊಂದನ್ನು ಸ್ಥಾಪಿಸಲು ನಿರ್ಧರಿಸಿದರು. ಅವರ ಸತತ ಪರಿಶ್ರಮದ ಫಲವಾಗಿ ೧೯೨೭ರಲ್ಲಿ “ಫ್ರೀ ಪ್ರೆಸ್ ಆಫ್ ಇಂಡಿಯ ಸುದ್ದಿಸಂಸ್ಥೆ’ ಉದಯವಾಯಿತು. ಸರ್ ಪುರುಷೋತ್ತಮದಾಸ್ ಠಾಕೂರ್ ದಾಸ್. ಜಿ.ಡಿ. ಬಿರ್ಲಾ, ಎಂ. ಆರ್, ಜಯಕರ್, ಡಾಕ್ಟರ್ ಆನಿ ಬೆಸೆಂಟ್, ಸರ್ ಫಿರೋಜ್ ಸೇತ್ನಾ ಮತ್ತು ವಾಲ್‌ಚಂದ್ ಹೀರಾಚಂದ್ ಅವರಿಗೆ ಬೆಂಬಲವಾಗಿ ನಿಂತರು.

‘ಫ್ರೀ ಪ್ರೆಸ್ ಆಫ್ ಇಂಡಿಯ ಸುದ್ದಿಸಂಸ್ಥೆ’ಯ ವ್ಯಾಪ್ತಿ ಭಾರತ ಮತ್ತು ಬರ್ಮಾ ದೇಶಗಳ ಸುದ್ದಿಗಳತ್ತ ಹೆಚ್ಚು ಕೇಂದ್ರಿಕೃತವಾಗಿತ್ತು. ಸದಾನಂದ ಅವರಿಗೆ ರಾಯಿಟರ್ಸ್ ಸುದ್ದಿ ಸಂಸ್ಥೆಯಲ್ಲಿ ಕೆಲಸಮಾಡಿ ಪಡೆದಿದ್ದ ಅನುಭವ ಸಹಕಾರಿ ಆಯಿತು. ಸದಾನಂದ ಈ ಸುದ್ದಿ ಸಂಸ್ಥೆಯ ವ್ಯವಸ್ಥಾಪಕ ಸಂಪಾದಕರಾದರು.

ಸರಿಸುಮಾರು ೧೯೨೫ರಲ್ಲಿ ಸರಕಾರದ ಹಣಕಾಸಿನ ಮಸೂದೆ ಬಹಳ ಗೊಂದಲವನ್ನು ಉಂಟುಮಾಡಿತು. ಇದರ ವಿಚಾರದಲ್ಲಿ ‘ಫ್ರೀ ಪ್ರ್ರೆಸ್ ಸುದ್ದಿ ಸಂಸ್ಥೆ’ಗೂ ಮತ್ತು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ’ಗೂ ಅಭಿಪ್ರಾಯಭೇದ ಮೂಡಿತು. ಸರ್ಕಾರ ಭಾರತೀಯರ ಮೇಲೆ ಹೊಸ ತೆರಿಗೆಗಳನ್ನು ವಿಧಿಸಿತು. ಈ ತೆರಿಗೆಗಳ ಹಣವೆಲ್ಲ ಆಗಿದ್ದು  ಬ್ರಿಟಿಷ್ ಸರ್ಕಾರದ ಪ್ರಯೋಜನಕ್ಕೆ. ಇದರಿಂದ ಭಾರತೀಯರಿಗೆ ಪ್ರಯೋಜನವಿರಲಿಲ್ಲ. ಮಸೂದೆಯನ್ನು ಬಹುತೇಕ ಭಾರತೀಯರು ವಿರೋಧಿಸಿದರು. ಭಾರತದ ಮೂಲೆ ಮೂಲೆಯಲ್ಲಿ ಇದ್ದ ತನ್ನ ವರದಿಗಾರರ ಮೂಲಕ ವರದಿಗಳನ್ನು ತರಿಸಿಕೊಂಡು “ಫ್ರೀ ಪ್ರೆಸ್’ ಭಾರತೀಯರ ವಿರೋಧೀ ನಿಲುವನ್ನು ತಿಳಿಯಪಡಿಸಿತು. ‘ರಾಯಿಟರ್ಸ್’ ಮತ್ತು ‘ಆಸೋಸಿಯೇಟೆಡ್ ಸುದ್ದಿಸಂಸ್ಥೆ’ಗಳು ಭಾರತೀಯರ ಈ ವಿರೋಧವನ್ನು ಕಡೆಗಣಿಸಿದವು.

ಇದು ಒಂದು ವಿಧದಲ್ಲಿ ‘ಫ್ರೀ ಪ್ರೆಸ್’ ಗೆ ಉಪಕಾರವೇ ಆಯಿತು. ಆದುದರಿಂದ ಅದು ಬೇಗನೇ ಜನಪ್ರಿಯ ವಾಯಿತು. ಫ್ರೀ ಪ್ರೆಸ್ ಸಂಸ್ಥೆ ಬೇಗನೆ ಖ್ಯಾತಿ ಪಡೆಯಿತು. ಬ್ರಿಟನಿನ ಕೆಲವು ಸುದ್ದಿ ಸಂಸ್ಥೆಗಳ ಸಹಕಾರವೂ ಅದಕ್ಕೆ ದೊರೆಯಿತು. ‘ಎಕ್ಸಚೇಂಜ್ ಟೆಲಿಗ್ರಾಫ್ ’ ಸೆಂಟ್ರಲ್ ನ್ಯೂಸ್ ಮತ್ತು ಬ್ರಿಟಿಷ್ ಯುನೈಟೆಡ್ ಪ್ರೆಸ್ ಸಂಸ್ಥೆಗಳು ಫ್ರೀ ಪ್ರೆಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡವು. ಆ ಸಂಸ್ಥೆಗಳು ಸಂಗ್ರಹಿಸಿದ ಸುದ್ದಿಗಳನ್ನು “ಫ್ರೀ ಪ್ರೆಸ್’ ಸಂಸ್ಥೆಗೆ ಕೊಡುವುದು. ಫ್ರೀ ಪ್ರೆಸ್ ಸಂಸ್ಥೆ ಸಂಗ್ರಹಿಸಿದ ಸುದ್ದಿಗಳನ್ನು ಆ ಸಂಸ್ಥೆಗಳು ತೆಗೆದುಕೊಂಡು ಬಳಸುವುದು – ಹೀಗೆ ಸಹಕಾರ ಪ್ರಾರಂಭವಾಯಿತು. ಇದರಿಂದ ಫ್ರೀ ಪ್ರೆಸ್ ಸಂಸ್ಥೆಗೆ ಸುದ್ದಿಗಳು ಸಿಕ್ಕುವುದು ಹೆಚ್ಚಾಯಿತಲ್ಲದೆ ಇಂಗ್ಲೆಂಡಿನ ಸಂಸ್ಥೆಗಳ ಮೂಲಕ ಭಾರತದಲ್ಲಿ ಜನರ ಅತೃಪ್ತಿ, ಸ್ವಾತಂತ್ರ್ಯದ ಹೋರಾಟ ಇದಕ್ಕೆ ಹೊರ ದೇಶಗಳಲ್ಲಿ ಸಾಕಷ್ಟು ಪ್ರಚಾರ ಸಿಕ್ಕಲು ಪ್ರಾರಂಭವಾಯಿತು. ಈ ಕಾರಣದಿಂದ ಇಂಗ್ಲೆಂಡಿನ ಸರ್ಕಾರಕ್ಕೆ. ಅವರ ಕೈಯಲ್ಲಿದ್ದ ಭಾರತ ಸರ್ಕಾರಕ್ಕೆ ಸಹಜವಾಗಿ ಬಹಳ ಕೋಪ ಬಂದಿತು.

ಜನತೆಯ ಬೆಂಬಲ ಸಿಕ್ಕರೂ ಸುದ್ದಿ ಸಂಸ್ಥೆಗೆ ಅಗತ್ಯವಾದ ಪತ್ರಿಕಾ ಬೆಂಬಲ ದೊರಕಲಿಲ್ಲ. ಬ್ರಿಟಿಷ್ ಮಾಲೀಕತ್ವದ ಪತ್ರಿಕೆಗಳು ಕಾಲಕ್ಕೆ ಸರಿಯಾಗಿ ಚಂದಾ ಪಾವತಿ ಮಾಡಿದರೆ, ಭಾರತೀಯ ಮಾಲೀಕತ್ವದ ಪತ್ರಿಕೆಗಳು ಅಪವಾದ ಎನ್ನುವಂತೆ ಇದ್ದವು. ಬಹಳ ದಿನಗಳ ಕಾಲ ಚಂದಾಹಣವನ್ನು ಉಳಿಸಿಕೊಳ್ಳುತ್ತಿದ್ದವು. ಹಣಪಾವತಿಯಲ್ಲಿ ಆಗುವ ಯಾವುದೇ ವ್ಯತ್ಯಯ ಯಾವುದೇ ಸುದ್ದಿಸಂಸ್ಥೆಯ ದಕ್ಷ ಕಾರ್ಯಶೀಲತೆಗೆ ಒದಗುವ ಪೆಟ್ಟು. ಅದರ ಅನುಭವ ಇದಕ್ಕೂ ಆಯಿತು.

ದಮನ ಪ್ರಯತ್ನ

ಭಾರತೀಯರ ಸ್ವಾತಂತ್ರ್ಯ ದಾಹ ಹೆಚ್ಚಾದಂತೆ ಬ್ರಿಟಿಷ್ ಸರಕಾರ ತೀವ್ರಸ್ವರೂಪದ ದಮನಕಾರಿ ನಿರ್ಧಾರವನ್ನು ಕೈಗೊಂಡಿತು. ಅದು ಮಾಡುತ್ತಿದ್ದ ಮೊದಲ ಕೆಲಸ ಪತ್ರಿಕೆಗಳ ಮೇಲೆ ನಿರ್ಬಂಧವನ್ನು ಹೇರುವುದು. ಅದಕ್ಕಾಗಿ ಕರಾಳ ಶಾಸನಗಳನ್ನು ಹೊರಡಿಸುವುದು. ಅದರಂತೆ ಪತ್ರಿಕೆಗಳಿಗೆ ಬಹಿಷ್ಕಾರ ಹಾಕಿ ಸಂಪಾದಕರನ್ನು ದಸ್ತಗಿರಿ ಮಾಡುವುದು. ಮುದ್ರಣಾಲಯಗಳನ್ನು ಸರಕಾರದ ವಶಕ್ಕೆ ತೆಗೆದುಕೊಂಡು ಪತ್ರಿಕೆಗಳ ಭದ್ರತಾಠೇವಣಿಯನ್ನು ಜಪ್ತಿ ಮಾಡುವುದು. ಬ್ರಿಟಿಷರ ದಬ್ಬಾಳಿಕೆ ಈ ಸುದ್ದಿ ಸಂಸ್ಥೆಯನ್ನೂ ಬಿಡಲಿಲ್ಲ. ಪತ್ರಿಕೆಗಳ ಮೇಲೆ ಮತ್ತು ಸುದ್ದಿವಿತರಣೆಯ ಮೇಲೆ ಪೂರ್ವ ಪರಿಶೀಲನೆಯ ನಿರ್ಬಂಧವನ್ನು ವಿಧಿಸಿತು. ‘ಫ್ರೀ ಪ್ರೆಸ್ ಆಫ್ ಇಂಡಿಯ’ ಕಳುಹಿಸಿದ ಸುದ್ದಿಗಳನ್ನು ಯಾವುದಾದರೂ ಪತ್ರಿಕೆ ಪ್ರಕಟಿಸಿದರೆ ಆ ಪತ್ರಿಕೆಯು ಠೇವಣಾತಿ ಕೊಡಬೇಕೆಂದು ಸರ್ಕಾರ ಕೇಳುವುದು; ಠೇವಣಾತಿಯನ್ನು ಸರ್ಕಾರ ವಶಮಾಡಿಕೊಂಡು ಇನ್ನಷ್ಟು ಹಣಕೊಡಬೇಕೆಂದು ಕೇಳುವುದು; ಮತ್ತೆ ‘ಫ್ರೀ ಪ್ರೆಸ್ ಆಫ್ ಇಂಡಿಂii’ ಕಳುಹಿಸಿದ ಸುದ್ದಿ ಪ್ರಕಟಿಸಿದರೆ ಮತ್ತೆ ಹಣ ಕೇಳುವುದು. ಇದರಿಂದ ಫ್ರೀ ಪ್ರೆಸ್ ಆಫ್ ಇಂಡಿಯಾದ ಸುದ್ದಿಗಳು ಬೇಕೆಂದು ಅಪೇಕ್ಷಿಸುತ್ತಿದ್ದ ಪತ್ರಿಕೆಗಳೂ ಬೆದರಿ ಅದರಿಂದ ದೂರಸರಿದವು.

ಇದರೊಡನೆ ತನ್ನ ಹಿತಾಸಕ್ತಿಗಳನ್ನು ಕಾಯ್ದಕೊಳ್ಳುವ ಬಗ್ಗೆ ‘ಅಸೋಸಿಯೇಟೆಡ್ ಪ್ರೆಸ್’ಗೆ ಅತೀವ ಆಸಕ್ತಿ. ಆರ್ಥಿಕವಾಗಿ ಸೂಕ್ತವಲ್ಲದ ಭಾರತೀಯ ಮಾಲೀಕತ್ವದ ಪತ್ರಿಕೆಗಳು ಒಂದೇ ಒಂದು ಸುದ್ದಿ ಸಂಸ್ಥೆಯ ಸೇವೆಯನ್ನು ಪಡೆಯುತ್ತಿದ್ದವು. ಎರಡೂ ಸುದ್ದಿ ಸಂಸ್ಥೆಗಳಿಂದ ಸುದ್ದಿ ಪಡೆಯುತ್ತಿದ್ದ ಪತ್ರಿಕೆಗಳ ಮೇಲೆ ‘ಅಸೋಸಿಯೇಟೆಡ್ ಪ್ರೆಸ್ ’ ಒತ್ತಡ ಹೇರಿತು. ಸದಾನಂದರನ್ನು ಗುರಿಯಾಗಿಟ್ಟುಕೊಂಡೇ ಸರಕಾರ ಈ ತಂತ್ರವನ್ನು ಬಳಸಿತು. ಇತರ ಸುದ್ದಿ ಸಂಸ್ಥೆಗಳ ಸುದ್ದಿ ಸೇವೆಯನ್ನು ಪಡೆಯುವ ಪತ್ರಿಕೆಗಳಿಗೆ ತನ್ನ ಸುದ್ದಿ ಸೇವೆ ಸಿಗಲಾರದು ಎಂದು ಸ್ಪಷ್ಟಪಡಿಸಿತು. ಸರಕಾರದ ಕೃಪಾಶ್ರಯದ ಎ.ಪಿ.ಐ. ಸುದ್ದಿಸಂಸ್ಥೆಯನ್ನು ಬಿಟ್ಟು ಇತರ ಸುದ್ದಿಸಂಸ್ಥೆಗಳಿಗೆ ಒಲಿಯುವ ಧೈರ್ಯ ಯಾವ ಪತ್ರಿಕೆಗೆ ಇದ್ದೀತು! ‘ಫ್ರೀ ಪ್ರೆಸ್ ಆಫ್ ಇಂಡಿಂii’ ಆರ್ಥಿಕವಾಗಿ ಕುಂಟತೊಡಗಿತು. ಮೂರು ವರ್ಷಗಳ ಕಾಲ ಸುದ್ದಿಸಂಸ್ಥೆ ನಡೆಸಿದ ಸದಾನಂದರಿಗೆ ಭ್ರಮನಿರಸನವಾಯಿತು.

ಫ್ರೀ ಪ್ರೆಸ್ ಜರ್ನಲ್

ಸದಾನಂದರು ಸ್ವತಂತ್ರ ಸುದ್ದಿಸಂಸ್ಥೆಯನ್ನು ಪ್ರಾರಂಭಿಸಿ ದ್ದಾಗಿತ್ತು. ಅನೇಕರು ಬಂಡವಾಳ ಹಾಕಿದ್ದರು. ಸಂಸ್ಥೆ ಸಂಗ್ರಹಿಸಿದ ಸುದ್ದಿಗಳನ್ನು ಬಳಸಿಕೊಂಡು ಪತ್ರಿಕೆಗಳವರು ಹಣ ಕೊಟ್ಟರೆ ತಾನೆ ಸಂಸ್ಥೆ ನಡೆಯಲು ಸಾಧ್ಯ, ಅದರ ಕೆಲಸ ಸಾರ್ಥಕ? ಆದರೆ ಸರ್ಕಾರದ ಮತ್ತು ಅಸೋಸಿಯೆಟೆಡ್ ಪ್ರೆಸ್‌ನ ತಂತ್ರಗಳಿಂದ ಪತ್ರಿಕೆಗಳು ಸದಾನಂದರ ಸಂಸ್ಥೆಯಿಂದ ದೂರ ನಿಲ್ಲು ವಂತಾಯಿತು. ತನ್ನ ಸುದ್ದಿಸಂಸ್ಥೆಯ ಸೇವೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಸದಾನಂದರು ಮುಂಬಯಿ ನಗರದಿಂದ ೧೯೩೦ರ ಜೂನ್ ೧೩ರಂದು ‘ಫ್ರೀ ಪ್ರೆಸ್ ಜರ್ನಲ್’ ಎಂಬ ಇಂಗ್ಲಿಷ್ ದಿನಪತ್ರಿಕೆಯನ್ನು ಆರಂಭಿಸಿದರು. ಬೆಲೆ ಆಗ ಅರ್ಧ ಆಣೆ ಅಂದರೆ ಈಗಿನ ಮೂರು ಪೈಸೆ. ಈಗಲೂ ನಡೆಯುತ್ತಿರುವ ಈ ಪತ್ರಿಕೆ ದಲಾಲ್ ರಸ್ತೆಯಲ್ಲಿ ಸ್ವಂತ ಕಟ್ಟಡ ಹೊಂದಿ ಇಂಗ್ಲಿಷಿನಲ್ಲಿ ‘ಫ್ರೀ ಪ್ರೆಸ್ ಜರ್ನಲ್’ ಬೆಳಗಿನ ದೈನಿಕ ಮತ್ತು ‘ಫ್ರೀ ಪ್ರೆಸ್ ಬುಲೆಟಿನ್’ ಎಂಬ ಸಂಜೆ ದಿನಪತ್ರಿಕೆಯನ್ನು ಹೊರಡಿಸುತ್ತಿದೆ. ಈ ಸಂಜೆ ಪತ್ರಿಕೆಯನ್ನು ಸದಾನಂದರು ೧೯೩೨ರಲ್ಲಿ ಸ್ಥಾಪಿಸಿದರು.

ಭಾರತೀಯ ಪತ್ರಿಕಾರಂಗದಲ್ಲಿ ‘ಫ್ರೀ ಪ್ರೆಸ್ ಜರ್ನಲ್’ ಒಂದು ಕ್ರಾಂತಿಯನ್ನೇ ಎಬ್ಬಿಸಿತು. ಅದುವರೆಗೆ ಸಾಮಾನ್ಯವಾಗಿ ಭಾರತದ ಇಂಗ್ಲಿಷ್ ಪತ್ರಿಕೆಗಳ ಭಾಷೆ ಪಾಂಡಿತ್ಯಪೂರ್ಣವಾಗಿ, ಗ್ರಾಂಥಿಕವಾಗಿ ಇರುತ್ತಿತ್ತು. ಈ ಪತ್ರಿಕೆ ಸರಳ ಹಾಗೂ ಜನಪ್ರಿಯ ಶೈಲಿಯನ್ನು ಅನುಸರಿಸಿ ಓದುಗರನ್ನು ಸೆಳೆಯಿತು. ಶೀರ್ಷಿಕೆಗಳನ್ನು ದಪ್ಪ ಅಕ್ಷರಗಳಲ್ಲಿ, ಪತ್ರಿಕೆಯನ್ನು ನೋಡುತ್ತಲೆ ಕಣ್ಣು ಸೆಳೆಯುವಂತೆ, ಅಚ್ಚು ಮಾಡುತ್ತಿದ್ದರು. ರಾಜಕೀಯ ಸುದ್ದಿಗಳಿಗೆ ಬಹುಮಟ್ಟಿನ ಪ್ರಾಧಾನ್ಯ ನೀಡಲಾಯಿತು. ಸರ‍್ಕಾರಕ್ಕಾಗಲಿ ಯಾವ ವ್ಯಕ್ತಿಗಾಗಲಿ ಹೆದರದೆ ಪ್ರಾಮಾಣಿಕವಾಗಿ ಪ್ರತಿಬಿಂಬಿಸುವುದು ಅದರ ಏಕೈಕ ಗುರಿಯಾಗಿತ್ತು. ರಾಷ್ಟ್ರೀಯ ಅಂದೋಲನದಲ್ಲಿ ಎರಡೂ ಪತ್ರಿಕೆಗಳು ಮಹತ್ವದ ಪಾತ್ರವಹಿಸಿದವು. ಒಂದು ರೀತಿಯಲ್ಲಿ ಸದಾನಂದರು ಭಾರತದಲ್ಲಿ ಜನಸಾಮಾನ್ಯರ ಆಸೆಯ ಪತ್ರಿಕೋದ್ಯಮದ ಆದ್ಯ ಪ್ರವರ್ತಕರಾದರು. ಇದು ಇಂಗ್ಲಿಷ್ ಪತ್ರಿಕೋದ್ಯಮದ ವಿಚಾರದಲ್ಲಂತೂ ಅಕ್ಷರಶ: ಸತ್ಯ. ಅವರ ಸರಳ ಹಾಗೂ ನೇರ ವಿಷಯ ಪ್ರತಿಪಾದನೆ ಮತ್ತು ಸಾಮಾನ್ಯರ ಒಳಿತಿಗಾಗಿ ಬರೆಯುತ್ತಿದ್ದ ಸತ್ವಯುತ ಪ್ರಭಾವಶಾಲೀ ಬರಹಗಳು ಓದುಗರನ್ನು ಸೂಜಿಗಲ್ಲಿನಂತೆ ಸೆಳೆದವು. ಜನತೆ ‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯನ್ನು ಆಶಿಸಿದರೆ ಸರ್ಕಾರ ಅದಕ್ಕೆ ಬೆದರುತ್ತಿತ್ತು.

ಸದಾನಂದರ ಪತ್ರಿಕೆಗಳು ಇಂಗ್ಲಿಷರ ಸರ್ಕಾರದ ದಾರಿಯಲ್ಲಿ ಮುಳ್ಳುಗಳಾದವು. ಅವನ್ನು ಮುರಿಯಲು ಸರ್ಕಾರ ಮತ್ತೆ ತನ್ನ ಹಿಂದಿನ ಅಸ್ತ್ರವನ್ನೇ ಬಳಸಿತು. ಸದಾನಂದರು ಸರ್ಕಾರವನ್ನು ಟೀಕಿಸಿ ಒಂದು ಲೇಖನ ಬರೆಯುವರು; ಸರ್ಕಾರ ಆಕ್ಷೇಪಿಸಿ, ಮತ್ತೆ ಹಾಗೆ ಬರೆಯುವುದಿಲ್ಲ ಎನ್ನುವುದಕ್ಕೆ ಆಧಾರವಾಗಿ ಠೇವಣಿ ಎರಡು ಸಾವಿರ ರೂಪಾಯಿಗಳೋ, ಮೂರು ಸಾವಿರವೋ, ಐದು ಸಾವಿವೋ-ಕೇಳುವುದು. ಅದನ್ನು ಕೊಡದಿದ್ದರೆ ಸದಾನಂದರು ಮತ್ತೆ ಪತ್ರಿಕೆಯನ್ನು ಅಚ್ಚು ಮಾಡುವ ಹಾಗಿಲ್ಲ. ಸರಿ, ಸರ್ಕಾರ ಕೇಳಿದಷ್ಟು ಹಣವನ್ನು ತೆರುವರು, ಮತ್ತೆ ಪತ್ರಿಕೆಯನ್ನು ಅಚ್ಚು ಮಾಡುವರು. ಮತ್ತೆ ಸರ್ಕಾರವನ್ನು ಟೀಕಿಸಿ ಲೇಖನ ಬರೆಯುವರು, ಅಥವಾ ಸುದ್ದಿ ಪ್ರಕಟಿಸು ವರು. ಮತ್ತೆ ಸರ್ಕಾರ ಅವರು ಕೊಟ್ಟಿದ್ದ ಠೇವಣಿಯನ್ನು ಕಿತ್ತುಕೊಂಡು ಇನ್ನಿಷ್ಟು ಠೇವಣಿ ಕೇಳುವುದು. ಸದಾನಂದನು ಹಣ ಕೊಟ್ಟು ಮತ್ತೆ ಸರ್ಕಾರವನ್ನು ವಿರೋಧಿಸಿ ಮತ್ತೆ ಹಣವನ್ನು ಕಳೆದುಕೊಳ್ಳುವರು.

ಹೀಗೆ ಒಟ್ಟು ಸದಾನಂದರಿಂದ ಸರ್ಕಾರ ಎಪ್ಪತ್ತು ಸಾವಿರರೂಪಾಯಿಗಳಷ್ಟು ಹಣವನ್ನು ಕಿತ್ತುಕೊಂಡಿತು. (ಆ ಕಾಲದಿಂದ ಈ ಕಾಲಕ್ಕೆ ರೂಪಾಯಿ ಬೆಲೆ ಇಳಿದಿದೆ. ಎಂದರೆ ಎಲ್ಲ ಸಾಮಾನುಗಳ ಬೆಲೆ ಏರಿದ್ದು, ಆಗ ಒಂದು ರೂಪಾಯಿಗೆ ಬರುತ್ತಿದ್ದ ಸಾಮಾನುಗಳಿಗೆ ಈಗ ಹದಿನೈದು ರೂಪಾಯಿಗಳನ್ನಾದರೂ ಕೊಡಬೇಕು. ಎಂದರೆ, ಈಗಿನ ಬೆಲೆಗಳ ಪ್ರಕಾರ ಸದಾನಂದರು ತಮ್ಮ ಹೋರಾಟದ ಈ ಭಾಗದಲ್ಲಿ ಕಳೆದುಕೊಂಡ ಹಣ ಸುಮಾರು ಹತ್ತು ಲಕ್ಷ ರೂಪಾಯಿಗಳಿ ಗಿಂತಲೂ ಹೆಚ್ಚು.)

ವ್ಯಕ್ತಿತ್ವ

ನಸುಗಪ್ಪು ಬಣ್ಣದ ಸದೃಢ ಹಾಗೂ ಪಾದರಸದಂತಹ ವ್ಯಕ್ತಿತ್ವದ ಸದಾನಂದರು ವಿಶಿಷ್ಟ ಗುಣಗಳ ಆಗರವಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಅನೇಕಬಾರಿ ತುರಂಗವಾಸವನ್ನು ಅನುಭವಿಸಿದರು. ಅಸಹಕಾರ ಚಳವಳಿಯ ಕಾರ್ಯಕರ್ತರಾಗಿ ದ್ದಾಗಲೇ ಟಿ. ಪ್ರಕಾಶಂ ಅವರ ‘ಸ್ವರಾಜ್ಯ’ ಪತ್ರಿಕೆಯಲ್ಲಿ ಕೆಲಸಮಾಡಿದರು. ಅನಂತರ ‘ಆಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ’ಯನ್ನು ಇಪ್ಪತ್ತರ ದಶಕದಲ್ಲಿ ಸೇರಿದರು. ಅಲ್ಲಿಂದ ಮುಂಬಯಿಗೆ ವಲಸೆ ಹೊದರು. ಸದಾನಂದರಿಗೆ ಕೃತಿಯಲ್ಲಿ ಸಮುದ್ರದಷ್ಟು ಆಕಾಂಕ್ಷೆ, ಆದರೆ ವೇಷಭೂಷಣದಲ್ಲಿ ಅತ್ಯಂತ ಮಿತ, ಸರಳ. ಒಂದು ಖಾದಿ ಲುಂಗಿ ಖಾದಿ ಅಂಗಿ ಇವೇ ಅವರ ಉಡುಗೆ. ಬಿಸಿಲು, ಮಳೆ, ಚಳಿ, ಗಾಳಿ ಯಾವುದನ್ನೂ ಈ ವ್ಯಕ್ತಿ ಲೆಕ್ಕಿಸುತ್ತಿರಲಿಲ್ಲ. ಹಿಡಿದ ಕೆಲಸವನ್ನು ಪಟ್ಟುಹಿಡಿದು ಮುಗಿಸುವ ಮನೋದಾರ್ಢ್ಯ.  ಹಗಲು ರಾತ್ರಿ ಎನ್ನದೆ ಸುದ್ದಿ ಸಂಪಾದಿಸುವ ಮುದ್ರಣಾಲಯವನ್ನು ನಡೆಸುವ, ಸಂಪಾದಕೀಯಗಳನ್ನು ಬರೆಯುವ ಕಾರ್ಯತತ್ಪರತೆ ಅವರದು. ಇದರ ನಡುವೆ ಇತರ ಪತ್ರಿಕೆಗಳಿಗೆ ದೊರೆಯದ ವಿಶಿಷ್ಟ ಪ್ರತ್ಯೇಕ ಸುದ್ದಿಗಳಿಗಾಗಿ ತೀವ್ರವಾದ ಹುಡುಕಾಟ ನಡೆಸುತ್ತಿದ್ದರು. ಸಾಧನೆಯ ಹೋರಾಟದ ಅಚಲಮೂರ್ತಿ ಅವರು.

ಅದೃಷ್ಟದೇವತೆ ಒಲಿದಾಗ ಸದಾನಂದರು ಸುಖ ಸೌಲಭ್ಯಗಳನ್ನು ತಿರಸ್ಕರಿಸಲಿಲ್ಲ. ಬಂಗಲೆಯನ್ನು ಕೊಂಡರು. ಕಾರನ್ನು ಖರೀದಿಸಿದರು. ಆದರೆ ದುರದೃಷ್ಟದ ಫಲವಾಗಿ ಕಾರ್ಪಣ್ಯದ ಮೋಡ ಅದರ ನೆರಳಿನಲ್ಲೇ ಅವಿತಿರುತ್ತಿತ್ತು. ತಾಪತ್ರಯಗಳ ಸರಣಿಯೇ ಆರಂಭವಾಗುತ್ತಿತ್ತು. ಆಗ ಮುದ್ರಣಕಾಗದ ಕೊಳ್ಳಲು ಕಾರನ್ನು ಒತ್ತೆ ಇಡಬೇಕಾಗುತ್ತಿತ್ತು. ಬಾಡಿಗೆಯ ಸೋಫಾಸೆಟ್ಟುಗಳು ಕಚೇರಿಯಿಂದ ಮಾಯವಾಗುತ್ತಿದ್ದವು. ಕೆಲವೊಮ್ಮೆ ಅಧೀನ ಪತ್ರಕರ್ತರಿಗೆ ಸಂಬಳ ನೀಡಲು ಮುದ್ರಣಾಲಯವನ್ನು ಅಡಮಾನಕ್ಕೆ ಈಡು ಮಾಡಬೇಕಾಗುತ್ತಿತ್ತು. ಇವೆಲ್ಲವನ್ನು ಸದಾನಂದರು ಎದೆಗುಂದದೆ ನಗುತ್ತಲೇ ಎದುರಿಸುತ್ತಿದ್ದರು. ಒಂದಲ್ಲ ಒಂದು ದಿನ ಎಲ್ಲವೂ ಸರಿಹೋಗುತ್ತದೆ ಎಂಬ ಆತ್ಮವಿಶ್ವಾಸ ಅವರಲ್ಲಿ ತುಂಬಿತುಳುಕುತ್ತಿತ್ತು.

ಅದರಂತೆ ಅವರು ಕೊನೆಗೆ ಅತ್ಯುತ್ತಮ ಯಂತ್ರಗಳನ್ನು ಕೊಂಡರು. ಮದರಾಸಿನಲ್ಲಿ ತಮಿಳು ಮತ್ತು ಇಂಗ್ಲಿಷ್ ಪತ್ರಿಕೆಗಳನ್ನು ಹೊರಡಿಸಿದರು. ಅವರ ‘ಫ್ರೀ ಪ್ರೆಸ್ ಜರ್ನಲ್’ ವಿನ್ಯಾಸದಲ್ಲಿ ಇತರ ಪತ್ರಿಕೆಗಳಿಗಿಂತ ಭಿನ್ನವಾಗಿತ್ತು. ಎಲ್ಲ ಅಂಕಣಗಳನ್ನೂ (ಕಾಲಮ್) ಆಕ್ರಮಿಸುವ ಪುಟಪೂರ್ಣ ಶೀರ್ಷಿಕೆಗಳನ್ನು ಚಾಲ್ತಿಯಲ್ಲಿ ತಂದರು. ರಾಷ್ಟ್ರೀಯ ನಾಯಕರ ಬಂಧನ, ಬೃಹತ್ ಮೆರವಣಿಗೆಗಳು ಮತ್ತು ಸಭೆಗಳಿಗೆ ಸಂಬಂಧಿಸಿದ ಸುದ್ದಿಗಳು ಓದುಗರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದವು. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿ ಪ್ರಹಾರ, ಗುಂಡಿಕ್ಕುವಿಕೆ ಎಲ್ಲವೂ ದಪ್ಪದಪ್ಪ ಅಕ್ಷರಗಳಲ್ಲಿ ಪ್ರಕಟವಾಗಿ ಅವರನ್ನು ಕೆರಳಿಸುತ್ತಿದ್ದವು. ಸರ್ಕಾರ ಕೋಪಗೊಂಡು ಪತ್ರಿಕೆಗೆ ಕಾನೂನಿನ ಕೋಳವನ್ನು ತೊಡಿಸಲು ಯತ್ನಿಸುತ್ತಿತ್ತು. ಅನೇಕ ಮೊಕದ್ದಮೆಗಳ ನಡುವೆಯೂ ಪತ್ರಿಕೆ ತನ್ನ ಕ್ಷಾತ್ರತೇಜಸ್ಸಿನ ಬರವಣಿಗೆಯನ್ನು ಮುಂದುವರಿಸಿಕೊಂಡು ಮುನ್ನುಗ್ಗಿದುದು ಅತಿಶಯ ವಾದದ್ದು. ಹಾಗೆ ಮಾಡಬಲ್ಲ ಶಕ್ತಿ ಇದ್ದುದು ಅವರೊಬ್ಬರಿಗೇ.

ಕೇವಲ ಸಣ್ಣ ಪ್ರಮಾಣದ ಸುದ್ದಿಸಂಸ್ಥೆ ಸದಾನಂದರ ಉದ್ದೇಶವಾಗಿರಲಿಲ್ಲ. ‘ಫ್ರೀ ಪ್ರೆಸ್ ಆಫ್ ಇಂಡಿಯ’ ವನ್ನು ಜಾಗತಿಕ ಸುದ್ದಿಸಂಸ್ಥೆಯನ್ನಾಗಿಸುವ ಮಹಾ ಆಶಯ ಅವರಲ್ಲಿತ್ತು. ಸಾಲದೆಂಬಂತೆ ಭಾರತಾದ್ಯಂತ ಪತ್ರಿಕೆಗಳ ಸರಣಿಯೊಂದನ್ನು ಸ್ಥಾಪಿಸುವ ಪ್ರಬ ಆಕಾಂಕ್ಷೆಯೂ ಸಹ ಅವರಲ್ಲಿ ಬೇರೂರಿತ್ತು. ಅವರ ವಾಣಿಜ್ಯ ವ್ಯವಹಾರಗಳ ಯೋಜನೆ ಅಗಾಧವಾಗಿದ್ದು ಅವರ ಸ್ನೇಹಿತರನ್ನು ಅನೇಕ ವೇಳೆ ಗಾಬರಿಗೊಳಿಸುತ್ತಿದ್ದವು. ಸದಾನಂದರು ತಮ್ಮ ಸಹೋದ್ಯೋಗಿಗಳಿಂದ ನಿರ್ದಿಷ್ಟ ಕೆಲಸವನ್ನು ಬಯಸುತ್ತಿದ್ದ ತೀವ್ರತೆ ಮತ್ತು ಆಗಾಗ್ಗೆ ಕಾಡುತ್ತಿದ್ದ ಸಂಶಯ ಇತರರಿಗೆ ಕೆಲವೊಮ್ಮೆ ಮಾನಸಿಕವಾಗಿ ಯಾತನೆ ನೀಡುತ್ತಿದ್ದವು. ಅಂದರೆ ಅವರಿಗೆ ಆಪ್ತ ಸ್ನೇಹಿತರು ಇರಲಿಲ್ಲ ಎಂದಲ್ಲ.

ಮುದ್ರಣ ಕಾಗದ ಕೊಳ್ಳಲು ಕಾರನ್ನು ಒತ್ತೆ ಇಡಬೇಕಾಗುತ್ತಿತ್ತು.

‘ಫ್ರೀ ಪ್ರೆಸ್ ಜರ್ನಲ್’ ೧೯೪೫ರಲ್ಲಿ ಮುಚ್ಚಿಹೋಗುವ ಸ್ಥಿತಿಯಲ್ಲಿ ಇದ್ದಾಗ ಮುಂಬಯಿನ ಮಾಜಿ ಮುಖ್ಯಮಂತ್ರಿ ಬಿ.ಜಿ. ಖೇರ್ ಅದನ್ನು ಉಳಿಸಲು ಸಹಾಯ ಹಸ್ತ ಚಾಚಿದಾಗ ಸದಾನಂದ ಅದನ್ನು ನಿರಾಕರಿಸಿದರು. ಕಾರಣವಿಷ್ಟೇ- ಬಿ.ಜಿ ಖೇರ್ ಮತ್ತು ವಿಠಲಭಾಯಿ ಪಟೇಲರು ರಾಜಕೀಯವಾಗಿ ವಿರೋಧಿಗಳು, ಸದಾನಂದರು ಪಟೇಲರ ಆಪ್ತಸ್ನೇಹಿತರು. ‘ಫ್ರೀ ಪ್ರೆಸ್ ಜರ್ನಲ್’ ಗೆ ಖೇರರು ಸಹಾಯ ಮಾಡಿದರೆ, ಆ ಪತ್ರಿಕೆ ಖೇರರ ದಾಕ್ಷಿಣ್ಯಕ್ಕೆ ಸಿಕ್ಕಿಕೊಳ್ಳುತ್ತದೆ. ತಮ್ಮ ರಾಜಕೀಯ ವಿರೋಧಿಯ ಸಹಾಯದಿಂದ ತಮ್ಮ ಸ್ನೇಹಿತನ ಪತ್ರಿಕೆ ಉಳಿಯುತ್ತದೆ. ಅದಕ್ಕಿಂತ ಪತ್ರಿಕೆಯನ್ನು ನಿಲ್ಲಿಸುವುದು ಉತ್ತಮ ಎಂದರು ವಿಠಲಬಾಯಿ ಪಟೇಲರು. ಸದಾನಂದರು ತುಂಬಾ ಕಷ್ಟದಲ್ಲಿದ್ದರು. ಆದರೂ ಪಟೇಲರ ಮನಸ್ಸನ್ನು ನೋಯಿಸಲು ಇಷ್ಟಪಡಲಿಲ್ಲ. ಸದಾನಂದ ಅಪ್ಪಟ ಸ್ವದೇಶೀ ಸಹ. ೧೯೪೫-೪೭ ರಲ್ಲಿ ವಿದೇಶೀ ಪುಸ್ತಕಗಳ ಸುಲಭ ಬೆಲೆ ಆವೃತ್ತಿಗಳನ್ನು ಹೊರಡಿಸುವ ಒಪ್ಪಂದ ತನ್ನ ಕೈಯಲ್ಲಿದ್ದು ಅದಕ್ಕೆ ಭಾರತದಲ್ಲಿ ಒಳ್ಳೆಯ ಮಾರುಕಟ್ಟೆ ಇದ್ದಾಗ ಅದನ್ನು ವಿದೇಶೀ ಎಂಬ ಸಣ್ಣ ನೆಪಕ್ಕಾಗಿ ತಿರಸ್ಕರಿಸಿದರು. ಇದು ಅವರ ಮನೋಭಾವದ ಪ್ರತೀಕ.

ಕವಿದು ಬಂದ ಕಷ್ಟಗಳು

ಸತ್ಯಾಗ್ರಹದ ಸುದ್ದಿಯನ್ನು ಪ್ರಕಟಿಸುವುದಕ್ಕೆ ಭಾರತದಲ್ಲಿ ಪತ್ರಿಕೆಗಳಿಗೆ ಅಧೈರ್ಯ. ಸರ್ಕಾರದ ಕಪಿಮುಷ್ಟಿಯ ತಂತ್ರಗಳು ಫ್ರೀ ಪ್ರೆಸ್ ಸುದ್ದಿ ಸಂಸ್ಥೆಯ ನಿರ್ದೇಶಕರ ಮೇಲೆ ಪರಿಣಾಮ ಬೀರಿದವು. ಅವರಲ್ಲಿ ನಾಲ್ವರು ೧೯೨೯ರಲ್ಲಿ ರಾಜೀನಾಮೆ ನೀಡಿದರು. ಐದನೆಯವರು ೧೯೩೧ರಲ್ಲಿ. ೧೯೩೦ರಲ್ಲಿ ಭಾರತ ಸರ್ಕಾರ ಒಂದು ಶಾಸನವನ್ನು ಮಾಡಿತು. ಇದರ ಪ್ರಕಾರ ಪತ್ರಿಕೆಯಲ್ಲಿ ಬಂದ ಸುದ್ದಿ ಅಥವಾ ಲೇಖನ ಸರ್ಕಾರಕ್ಕೆ ಒಪ್ಪಿಗೆಯಾಗದಿದ್ದರೆ ಸಂಪಾದಕರಿಗೆ ಶಿಕ್ಷೆ ಮಾಡುವುದರ ಬದಲು ಮುದ್ರಣಾಲಯವನ್ನೆ ವಶಮಾಡಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ಬಂದಿತು. ಮತ್ತೆ ಮತ್ತೆ ಪತ್ರಿಕೆಯಿಂದ ಠೇವಣಿಯನ್ನು ಕಿತ್ತುಕೊಳ್ಳಲು ಸರ್ಕಾರ ಪ್ರಾರಂಭಿಸಿತು. ಅನೇಕ ಪತ್ರಿಕೆಗಳವರು ‘ಫ್ರೀ ಪ್ರೆಸ್’ ಸಂಸ್ಥೆಯಿಂದ ಸುದ್ದಿಗಳನ್ನು ತರಿಸಿಕೊಂಡರೆ ಸರ್ಕಾರ ತೊಂದರೆ ಕೊಡುವುದೆಂದು ಹೆದರಿದರು. ಸರ್ಕಾರದ ಸುಗ್ರೀವಾಜ್ಞೆ ‘ಫ್ರೀ ಪ್ರೆಸ್ ಆಫ್ ಇಂಡಿಯ’ ತನ್ನ ಶ್ರೀಮಂತ ಚಂದಾದಾರರನ್ನು ಕಳೆದು ಕೊಳ್ಳುವಂತೆ ಮಾಡಿತು. ಇದರ ಜೊತೆಗೆ ಎ.ಪಿ.ಐ ಒತ್ತಡ, ಹಣದ ಕೊರತೆ ಸುದ್ದಿಸಂಸ್ಥೆಯನ್ನು ಹಣ್ಣಾಗಿಸಿತು.

ಸುದ್ದಿಸಂಸ್ಥೆಯೊಂದು ಪತ್ರಿಕೆ ನಡೆಸುವುದನ್ನು ಪ್ರಮುಖ ಪತ್ರಿಕೆಗಳು ವಿರೋಧಿಸಿದವು. ಇದರಿಂದ ಅದು ತನ್ನ ಚಂದಾದಾರರಿಗೇ ಸುದ್ದಿಸಂಸ್ಥೆ ಪ್ರತಿಸ್ಪರ್ಧಿ ಆಗುತ್ತದೆಂದು ಭಾವಿಸಿ ಅವು ತಮ್ಮ ಬೆಂಬಲವನನ್ನು ಹಿಂತೆಗೆದು ಕೊಂಡವು. ಇಂತಹ ಪತ್ರಿಕೆಗಳಲ್ಲಿ ಬಹುತೇಕ ಕಲ್ಕತ್ತೆಯವು. ಆದರೂ ಫ್ರೀ ಪ್ರೆಸ್ ಜರ್ನಲ್ ಹಿನ್ನೆಡೆಯಲಿಲ್ಲ. ಸದಾನಂದ ಗುಜರಾತಿಯಲ್ಲಿ ‘ನವಭಾರತ ’ ಪತ್ರಿಕೆಯನ್ನು ಆರಂಭಿಸಿದ್ದಲ್ಲದೆ ಮದರಾಸಿನ ‘ಇಂಡಿಯನ್ ಎಕ್ಸ್ಸ್‌ಪ್ರೆಸ್’ ಪತ್ರಿಕೆಯನ್ನು ಕೊಂಡು ಕೊಂಡರು. ಅವರು ೧೯೩೪ರಲ್ಲಿ ‘ದಿನಮಣಿ’ ತಮಿಳು ದೈನಿಕವನ್ನು ಮದರಾಸಿನಿಂದ ಹಾಗೂ ಮುಂಬಯಿ ನಗರದಿಂದ ‘ನವಶಕ್ತಿ’ ಮರಾಠ ಪತ್ರಿಕೆ ಮತ್ತು ಕಲ್ಕತ್ತೆಯಿಂದ ‘ಫ್ರೀ ಇಂಡಿಯ’ ಪತ್ರಿಕೆಯನ್ನು ಹೊರಡಿಸಿದರು. ಕೊನೆಯ ಪತ್ರಿಕೆ ಕೇವಲ ಕೆಲವೇ ತಿಂಗಳು ಮಾತ್ರ ಬದುಕಿತ್ತು.

ದೆಹಲಿ, ಲಕ್ನೋ ಮತ್ತು ಲಾಹೋರ್ ನಗರಗಳಿಂದಲೂ ಇಂಗ್ಲಿಷ್ ಪತ್ರಿಕೆಗಳನ್ನು ಹೊರಡಿಸಲು ಅವಶ್ಯಕವಾದ ಯಂತ್ರಗಳನ್ನು ಮತ್ತು ಸಂಪಾದಕ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಿದ್ದರು. ಆದರೆ ‘ಆಸೋಸಿಯೇಟೆಡ್ ಪ್ರೆಸ್ ಆಫ್ ಇಂಡಿಯ’ ಸುದ್ದಿ ಸಂಸ್ಥೆಯ ಪ್ರತಿಸ್ಪರ್ಧೆ ಚಂದಾದಾರ ಪತ್ರಿಕೆಗಳ ಹಿಂದೇಟು, ಬಂಡವಾಳಗಾರರ ಹಿಂಜರಿತ ಮತ್ತು ಸರ್ಕಾರದ ತೀವ್ರ ವಿರೋಧ ಸದಾನಂದರನ್ನು ಹಿಂದಕ್ಕೆ ತಳ್ಳಿದವು. ಅಲ್ಲದೆ ಪ್ರಭಾವಶಾಲೀ ಕಾಂಗ್ರೆಸ್ ನಾಯಕರ ಬೆಂಬಲವನ್ನು ಸದಾನಂದರು ನೆಚ್ಚಿಕೊಳ್ಳುವಂತಿರಲಿಲ್ಲ.

ವೈಶಿಷ್ಟ್ಯ.ವೈಖರಿ

ನಾಗರಿಕ ಕಾನೂನು ಉಲ್ಲಂಘನೆ ಚಳವಳಿ ಹಬ್ಬುತ್ತಿದ್ದಂತೆ ಸರ್ಕಾರ ಅದನ್ನು ತಡೆಗಟ್ಟಲು ತನ್ನೆಲ್ಲ ಶಕ್ತಿಯನ್ನು ಬಳಸಿತು. ಅಹಿತಕರ ಘಟನೆಗಳ ಮಧ್ಯೆ ಮೊದಲನೆ ದುಂಡುಮೇಜಿನ ಪರಿಷತ್ತು ಲಂಡನ್ನಿನಲ್ಲಿ ನಡೆಯಿತು. ಭಾರತೀಯರಿಗೆ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ಕೊಡಬೇಕು ಎಂದು ತೀರ್ಮಾನಿಸಲು ಭಾರತದ ಪ್ರತಿನಿಧಿಗಳೊಡನೆ ಮಾತುಕತೆ ನಡೆಸಲು ಬ್ರಿಟಿಷ್ ಸರ್ಕಾರ ಕರೆದ ಸಮ್ಮೇಳನ ಇದು. ಭಾರತೀಯರಿಗೆ ಅದರಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಬದಲಾಗಿ ಅವರು ಎಲ್ಲ ಘಟನೆಗಳನ್ನು ಸಂಶಯದೃಷ್ಟಿಯಿಂದಲೇ ನೋಡುತ್ತಿದ್ದರು. ಆದರೂ ಪರಿಷತ್ತಿನ ಕಲಾಪಗಳ ಪೂರ್ಣವರದಿಗೆ ಅವಕಾಶ ಕಲ್ಪಿಸಲಾಗಿತ್ತು. ‘ಫ್ರೀ ಪ್ರೆಸ್’ ತನ್ನ ಲಂಡನ್ ಬಾತ್ಮೀದಾರರಿಂದ ಪರಿಷತ್ತಿನ ಕಲಾಪ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳನ್ನು ವರದಿ ಮಾಡಿತು. ಮೂರನೆಯ ದುಂಡುಮೇಜಿನ ಪರಿಷತ್ತು ಸೇರಿದಾಗ ಸದಾನಂದರೇ ಲಂಡನಿಗೆ ಹೋದರು.  ಆ ಸಮ್ಮೇಳನದ ಕಾಲದಲ್ಲಿ ಬ್ರಿಟಿಷ್ ಸರ್ಕಾರ ಜಾತೀಯತೆ, ಕೋಮುವಾರು ಸ್ಪರ್ಧೆ ಇವನ್ನೇ ಮುಖ್ಯ ಮಾಡಿಕೊಂಡ ಕೆಲವರು ಭಾರತೀಯರನ್ನು ಎತ್ತಿಕಟ್ಟಿ ಭಾರತಕ್ಕೆ ಸ್ವಾತಂತ್ರ್ಯ ನೀಡುವುದನ್ನು ತಪ್ಪಿಸಲು ಪ್ರಯತ್ನಿಸಿತು. ಭಾರತೀಯರಿಗೆ ನಿಜವಾಗಿ ಅಧಿಕಾರ ನೀಡದೆ, ಹೊರಗೆ ತೋರಿಕೆಗೆ ಅಧಿಕಾರ ನೀಡಿದಂತೆ ಮಾಡುವ ತನ್ನ ಯೋಜನೆಯೊಂದನ್ನು ಬುದ್ಧಿವಂತಿಕೆಯಿಂದ ಮುಂದಿಟ್ಟಿತು. ಅದರ ಪ್ರಕಾರ ಭಾರತದಲ್ಲಿ ಬ್ರಿಟಿಷರ ಅಧಿಕಾರ ಉಳಿಯಬೇಕು. ವ್ಯಾಪಾರ ಸಂಪತ್ತು ಎಲ್ಲ ಅವರ ಕೈಯಲ್ಲಿರಬೇಕು. ಸಮ್ಮೇಳನ ನಡೆಯುತ್ತಿದ್ದಷ್ಟು ಕಾಲವೂ ಲಂಡನಿನಲ್ಲಿದ್ದು ಸದಾನಂದರು ವರದಿಗಳನ್ನು ಕಳುಹಿ ಸುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಬ್ರಿಟಿಷ್ ಸರ್ಕಾರದ ತಂತ್ರಗಳನ್ನು ಬಯಲಿಗೆಳೆಯುತ್ತಿದ್ದರು.

ಜಗತ್ತಿನ ಪ್ರಮುಖ ಸುದ್ದಿಸಂಸ್ಥೆಗಳ ಕೇಬಲ್‌ಗಳನ್ನು ಲಂಡನ್‌ನಲ್ಲಿ ಸಂಗ್ರಹಿಸಿ ಅವನ್ನು ಸೂಕ್ತವಾಗಿ ಮಾರ್ಪಡಿಸಿ ಭಾರತಕ್ಕೆ ಕಳುಹಿಸುವ ಏರ್ಪಾಟನ್ನು ಮಾಡಿದ್ದರು ಸದಾನಂದ. ಈ ಪೈಪೋಟಿಯಲ್ಲಿ ರಾಯಿಟರ್ಸ್ ಅನೇಕ ವೇಳೆ ಸೋಲಬೇಕಾಯಿತು. ಫ್ರೀ ಪ್ರೆಸ್ ಜರ್ನಲ್ ನಲ್ಲಿ ಪ್ರಕಟ ವಾಗುತ್ತಿದ್ದ ಪ್ರತ್ಯೇಕ ವಿಶಿಷ್ಟ ಸುದ್ದಿಗಳು ಮುಂಬಯಿಯಲ್ಲಿದ್ದ ರಾಯಿಟರ್ಸ್ ಕಚೇರಿಗೆ ತಲೆನೋವು ಬರಿಸಿದವು. ೧೯೩೦ರ ಏಪ್ರಿಲ್‌ನಲ್ಲಿ ಬ್ರಿಟಿಷ್ ಆಡಳಿತವನ್ನು ನಡುಗಿಸುವಂತಹ ಘಟನೆಯೊಂದು ನಡೆಯಿತು. ಸೂರ್ಯಸೇನ್ ಎನ್ನುವವರು ಕ್ರಾಂತಿವೀರರು. ಅವರೂ ಅವರ ಅನುಯಾಯಿಗಳು ಸೇರಿ ಚಿತ್ತಗಾಂಗಿನಲ್ಲಿ ಸರ್ಕಾರದ ಶಸ್ತ್ರಾಗಾರಕ್ಕೆ- ಗುಂಡು ಮದ್ದು ಬಂದೂಕ ಎಲ್ಲ ಶಸ್ತ್ರಾಸ್ತ್ರಗಳನ್ನು ಇಟ್ಟಿರುವ ಕಟ್ಟಡಕ್ಕೆ ಮುತ್ತಿಗೆ ಹಾಕಿದರು. ಅದನ್ನು ವಶಪಡಿಸಿಕೊಂಡರು. ಅಲ್ಲಿದ ಆಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು. ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಸರ್ಕಾರದ ಸೈನ್ಯ ಧಾವಿಸಿ ಬಂದಿತ್ತು. ಆದರೆ ಸೇನರೂ ಅವರ ಗೆಳೆಯರೂ ತಪ್ಪಿಸಿಕೊಂಡರು. ಪಾಪ, ಕ್ರಾಂತಿಕಾರಿಗಳಿಗೆ ಆಹಾರವಿಲ್ಲದೆ ನಿಲ್ಲಲು ನೆಲೆ ಇಲ್ಲದೆ ಅವರು ತುಂಬಾ ಕಷ್ಟಪಟ್ಟರು. ಆದರೂ ಅವರನ್ನು ಹುಡುಕಿ ಬಂಧಿಸಲು ಬ್ರಿಟಿಷ್ ಸಾಮ್ರಾಜ್ಯದ ಸೈನ್ಯಕ್ಕೆ ಸಾಧ್ಯವಾಗದೆ ಹೋಯಿತು. ಒಬ್ಬೊಬ್ಬ ಕ್ರಾಂತಿಕಾರಿಯನ್ನು ಹಿಡಿದುಕೊಟ್ಟರೆ ಐದು ಸಾವಿರ ರೂಪಾಯಿ ಬಹುಮಾನ ಎಂದು ಸರ್ಕಾರ ಸಾರಿತು. ಏಪ್ರಿಲ್ ೨೭ರಂದು ಕ್ರಾಂತಿಕಾರಿಗಳಿಗೂ ಬ್ರಿಟಿಷ್ ಸೈನಿಕರಿಗೂ ಕಾಳಗವೇ ನಡೆಯಿತು. ಹನ್ನೊಂದು ಮಂದಿ ಕ್ರಾಂತಿಕಾರರು ಸತ್ತು. ಅರವತ್ತು ಎಪ್ಪತ್ತು ಮಂದಿ ಸೈನಿಕರು ಸತ್ತರು. ಹಲವರು ಕ್ರಾಂತಿಕಾರರು ಗಾಯವಾಗಿ ಸೆರೆಸಿಕ್ಕರು. ಸೂರ್ಯಸೇನರು ತಪ್ಪಿಸಿಕೊಂಡರು. ಹೀಗಾಗಿ ಸರ್ಕಾರ ತಲ್ಲಣಿಸಿತು. ಸೈನ್ಯ ಮನೆಮನೆಗೆ ನುಗ್ಗಿತು. ಗಂಡಸರನ್ನು ಹೊಡೆಯಿತು. ಬಡೆಯಿತು, ಹೆಂಗಸರಿಗೆ ಅಪಮಾನ ಮಾಡಿತು. ಇಷ್ಟಾದರೂ ಸೇನರು ಸೆರೆ ಸಿಕ್ಕಲಿಲ್ಲ. ೧೯೩೨ರ ಜೂನ್‌ನಲ್ಲಿ ಸೂರ್ಯಸೇನರಿದ್ದ ಮನೆಯನ್ನು ಸೈನ್ಯ ಮುತ್ತಿತು. ಒಳಗಿದ್ದ ಕ್ರಾಂತಿಕಾರಿಗಳು ಐದು ಜನ, ಹೊರಗೆ ಇದ್ದ ಸೈನಿಕರು ನೂರಾರು ಮಂದಿ, ಆದರೂ ಸೇನರು ತಪ್ಪಿಸಿಕೊಂಡರು. ಅವರನ್ನು ಹಿಡಿದು ಕೊಟ್ಟವರಿಗೆ ಹತ್ತು ಸಾವಿರ ರೂಪಾಯಿಗಳ ಬಹುಮಾನ ಕೊಡುವುದಾಗಿ ಸರ್ಕಾರ ಪ್ರಕಟಿಸಿತು.

ಇಂತಹ ಸೇನರು-ಭಾರತವೆಲ್ಲ ಮೆಚ್ಚಿಕೊಳ್ಳುತ್ತಿದ್ದ, ಬ್ರಿಟಿಷರು ಸ್ಮರಿಸಿಕೊಂಡರೇ ನಡುಗುತ್ತಿದ್ದ ಸೇನರು ಸೆರೆಸಿಕ್ಕಿಕೊಂಡರೆ ಎಂತಹ ಮುಖ್ಯ ವಾರ್ತೆ!

೧೯೩೩ ರ ಜನವರಿಯಲ್ಲಿ ಪೊಲೀಸ್ ಗುಪ್ತಚರನೊಬ್ಬ ಸೇನರನ್ನು ಮೋಸಗೊಳಿಸಿದ. ಅವರನ್ನು ಸೆರೆಹಿಡಿಯ ಲಾಯಿತು.

ಈ ಸುದ್ದಿಯನ್ನು ಮೊದಲು ಜನತೆಗೆ ಕೊಟ್ಟಿದ್ದು ‘ಫ್ರೀ ಪ್ರೆಸ್’. ಕಲ್ಕತ್ತದಲ್ಲಿದ್ದ ಅವರ ಮುಖ್ಯ ಪ್ರತಿನಿಧಿ ಬೆಳಗಿನ ಜಾವ ಮೂರು ಗಂಟೆಗೆ ಸುದ್ದಿಯನ್ನು ಕೇಂದ್ರ ಕಚೇರಿಗೆ ತಲುಪಿಸಿದರು.

ಸೇನರ ಬಂಧನದ ಸುದ್ದಿಯನ್ನು ಕೊಟ್ಟಿದ್ದು ‘ಫ್ರೀ ಪ್ರೆಸ್ ಜರ್ನಲ್’ ಒಂದೇ. ಆಸೋಸಿಯೇಟೆಡ್ ಪ್ರೆಸ್‌ನಿಂದ ಸುದ್ದಿ ಪಡೆಯುತ್ತಿದ್ದ ಪತ್ರಿಕೆಗಳಿಗೆಲ್ಲ ಅಸೋಸಿಯೇಟೆಡ್ ಪ್ರೆಸ್ ಮೇಲೆ ವಿಪರೀತ ಸಿಟ್ಟು.

ಹಾಗೆಯೇ ೧೯೩೩ರಲ್ಲಿ ಬ್ರಿಟಿಷ್ ಸರ್ಕಾರ ಭಾರತದ ಸಿಡಿಲಿನ ಮರಿ ಸುಭಾಷ್ ಚಂದ್ರ ಬೋಸರನ್ನು ಭಾರತದಿಂದಾಚೆ ಯೂರೋಪಿಗೆ ಕಳಿಸಲು ತೀರ್ಮಾನಿಸಿತು. ಸೆರೆಮನೆಯಲ್ಲಿದ್ದ ಬೋಸರನ್ನು ರಾತ್ರೋರಾತ್ರಿ ಪೊಲೀಸ್ ಕಾವಲಿನಲ್ಲಿ ಹಡಗಿಗೆ ಕರೆದೊಯ್ಯಲು ಏರ್ಪಾಡು ಮಾಡಿತು. ಬೋಸರಿಗೆ ವಿಪರೀತ ಕಾಯಿಲೆ. ಅವರು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಸರ್ಕಾರದ ನಂಬಿಕೆ. ಅವರನ್ನು ನೋಡಲು ಯಾರಿಗೂ ಅವಕಾಶ ಇರಲಿಲ್ಲ. ಆದರೆ ‘ಫ್ರೀ ಪ್ರೆಸ್ ಜರ್ನಲಿನ’ ಸಂಪಾದಕ ಮಂಡಲಿಯ ರಾಮರಾಯರು ಪತ್ರಿಕೆಯ ಚಿತ್ರಗಾರರೂ ಸೇರಿ ಸ್ಟ್ರೆಚರಿನ ಮೇಲೆ ಮಲಗಿದ್ದ ನೇತಾಜಿಯವರ ಚಿತ್ರವನ್ನು ತೆಗೆದೇಬಿಟ್ಟರು. ಅದು ಮರುದಿನ ‘ಫ್ರೀ ಪ್ರೆಸ್ ಜರ್ನಲ್’ನಲ್ಲಿ ಪ್ರಕಟವಾದಾಗ ಜನರಿಗೆ ಸಂತೋಷ, ಇತರ ಪತ್ರಿಕೆಗಳವರಿಗೆ ಅಚ್ಚರಿ, ಸರ್ಕಾರಕ್ಕೆ ತಡೆಯಲಾರದ ಕೋಪ.

ಆದರೆ ಮುಂದೆ ಸಂಭವಿಸಿದ ರಾಜಕೀಯ ಘಟನೆಗಳು ಮತ್ತು ಸರ್ಕಾರದ ದಮನನೀತಿ ಸದಾನಂದರ ಪಾಲಿಗೆ ಕ್ರೂರವಾದವು. ಬೃಹತ್ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದನ್ನು ಸ್ಥಾಪಿಸುವ ಮತ್ತು ವಿದೇಶಗಳಲ್ಲಿಯೂ ತನ್ನ ಜಾಲವನ್ನು ಹರಡುವ ಪ್ರಯತ್ನ ಅಷ್ಟಾಗಿ ನೆರವೇರಲಿಲ್ಲ. ಅಂತಿiವಾಗಿ ‘ಫ್ರೀ ಪ್ರೆಸ್ ಇಂಡಿಯ’ ೧೯೩೩ರಲ್ಲಿ ತನ್ನ ಬಾಳಿಗೆ ತಾನೇ ಚರಮಗೀತೆಯನ್ನು ಹಾಡಿತು.

ಸದಾನಂದ ಪತ್ರಿಕೋದ್ಯಮ ಪ್ರವೇಶಿಸಿದಾಗ ದೇಶದ ರಾಜಕೀಯ ವಾತಾವರಣ ಅನುಕೂಲಕರವಾಗಿತ್ತು. ಭಾರತೀಯರು ತಮ್ಮನ್ನು ತಾವೇ ಆಳಿಕೊಳ್ಳುವ ತತ್ವವನ್ನು ಬ್ರಿಟಿಷರು ಮುಕ್ಕಾಲುಪಾಲು ಅಂಗೀಕರಿಸಿದ್ದರು. ಆದರೂ ಸರ್ಕಾರೀ ನಿರ್ಬಂಧಗಳು ಪತ್ರಿಕೆಗಳಿಗೆ ಉರುಳಾಗಿದ್ದವು. ನೇರವಾಗಿಲ್ಲದಿದ್ದರೂ ಅವುಗಳ ಪರೋಕ್ಷ ಬಳಕೆ ನಡದೇ ಇತ್ತು. ಸದಾನಂದ ತಮ್ಮ ಸುದ್ದಿ ಸಂಸ್ಥೆಯ ಉದ್ದೇಶವನ್ನು ಹೀಗೆ ಹೇಳಿದರು:

“ದಿನನಿತ್ಯದ ಸುದ್ದಿಗಳಿಂದ ಪೂರ್ಣವಾಗಿ ರೂಪಿತ ವಾಗುವ ಆರೋಗ್ಯಕರ ಸಾರ್ವಜನಿಕ ಅಭಿಪ್ರಾಯವನ್ನು ಸುದ್ದಿ ಸರಬರಾಜಿನ ಏಕಸ್ವಾಮ್ಯವನ್ನು ಹೊಂದಿರುವ ಸರ್ಕಾರೀ ಕೃಪಾಪೋಷಿತ ಸುದ್ದಿಸಂಸ್ಥೆಗಳಿಂದ ಬೆಳೆಸುವುದು ಕಷ್ಟಕರ ಎಂಬ ಸತ್ಯವೇ ಇದರ ಹುಟ್ಟಿಗೆ ಪ್ರೇರಕ.’

ಸ್ವಾತಂತ್ರ್ಯ ಅನಂತರ

ಸ್ವಾತಂತ್ಯ್ರಾನಂತರ ಫ್ರೀ ಪ್ರೆಸ್ ಟ್ರಸ್ಟ್ ಆಫ್ ಇಂಡಿಯ (ಪಿ.ಟಿ.ಐ) ಸುದ್ದಿಸಂಸ್ಥೆ ಹುಟ್ಟಿತು. ಭಾರತಕ್ಕೆ ೧೯೪೭ರಲ್ಲಿ ಸ್ವಾತಂತ್ರ್ಯ ನೀಡಲಾಗುವುದೆಂಬುದನ್ನು ತಿಳಿದ ರಾಯಿಟರ್ಸ ಭಾರತೀಯ ಸುದ್ದಿ ಸಂಸ್ಥೆಯೊಂದರ ಆಶ್ರಯದಲ್ಲಿ ಸುದ್ದಿಸಂಚಯನದ ನಿಯಂತ್ರಣ ಹೊಂದುವ ತವಕ ತೋರಿಸಿತು. ಅಲ್ಲದೆ ೧೯೪೭ರ ಜುಲೈನಲ್ಲಿ ರಾಯಿಟರ್ಸ್ ತನ್ನ ದೂರ ಮುದ್ರಕ ಯಂತ್ರಗಳ ಚಾಲನೆಗಾಗಿ ಅನುಮತಿಯನ್ನು ನವೀಕರಿಸಬೇಕಿತ್ತು. ಅಷ್ಟು ಹೊತ್ತಿಗಾಗಲೇ ಜವಹರಲಾಲ್ ನೆಹರು ಅವರ ನಾಯಕತ್ವದ ಮಧ್ಯಾವಧಿ ಸರ್ಕಾರ ಅಧಿಕಾರದಲ್ಲಿ ಇತ್ತು. ನವೀಕರಣ ಸಾಧ್ಯವಾಗದೆಂಬ ತಿಳಿವಳಿಕೆ ಅದು ಪಿ.ಟಿ.ಐ.ಯೊಂದಿಗೆ ಒಪ್ಪಂದ ಮಾಡಿ ಕೊಳ್ಳುವುದಕ್ಕೆ ಕಾರಣವಾಯಿತು. ೧೯೪೮ರ ಸೆಪ್ಟೆಂಬರಿನಲ್ಲಿ ರಾಯಿಟರ್ಸ್ – ಪಿ.ಟಿ.ಐ. ಒಪ್ಪಂದಕ್ಕೆ ಸಹಿ ಬಿತ್ತು.

ಮಾತುಕತೆಗಳಿಗಾಗಿ ನೇಮಿಸಲಾದ ಭಾರತೀಯ ನಿಯೋಗದಲ್ಲಿ ಐವರು ಸದಸ್ಯರಿದ್ದರು. ಸದಾನಂದ ಅವರಲ್ಲಿ ಒಬ್ಬರು. ಉಳಿದವರು ಕಸ್ತೂರಿ ಶ್ರೀನಿವಾಸನ್, ಸಿ.ಆರ್. ಶ್ರೀನಿವಾಸನ್. ದೇವದಾಸ್ ಗಾಂಧಿ ಮತ್ತು ರಾಮನಾಥ ಗೊಯಂಕಾ, ರಾಯಿಟರ್ಸ್ ಒಂದಿಗೆ ಯಾವುದೇ ಬಗೆಯ ಒಪ್ಪಂದ ಸದಾನಂದರಿಗೆ ಬೇಕಿರಲಿಲ್ಲ. ಏಕೆಂದರೆ ತಮ್ಮ ಸ್ವತಂತ್ರ ಸುದ್ದಿಸಂಸ್ಥೆಯ ಅಕಾಲ ಮೃತ್ಯುವಿಗೆ ರಾಯಿಟರ್ಸ್ ಸಹ ಕಾರಣ ಎಂಬ ಕಹಿ ಭಾವನೆ ಅವರಲ್ಲಿ ಉಳಿದಿತ್ತು. ಮಿಗಿಲಾಗಿ ಒಪ್ಪಂದದಲ್ಲಿದ್ದ ಲಾಭಕರವಲ್ಲದ ಆರ್ಥಿಕ ಅಂಶವನ್ನು ಅವರು ಬೊಟ್ಟು ಮಾಡಿ ತೋರಿಸಿದರು. ರಾಯಿಟರ್ಸ್‌ನಿಂದ ಪಡೆಯುವ ಸುದ್ದಿಗಾಗಿ ಪಿ,ಟಿ.ಐ ೫೦,೦೦೦ ಪೌಂಡುಗಳನ್ನು ಕೊಡಬೇಕಿತ್ತು. ಅದೇ ಸುದ್ದಿಯನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ ಅಸೋಸಿಯೇಟೆಡ್ ಪ್ರೆಸ್ (ಎ.ಪಿ.) ಸುದ್ದಿಸಂಸ್ಥೆಯಿಂದ ಕೇವಲ ೧೨,೦೦೦ ಪೌಂಡುಗಳಿಗೆ ಪಡೆಯಬಹುದು ಎಂದು ಸೂಚಿಸಿದರು. ರಾಮನಾಥ ಗೊಯಂಕಾ ಸಹ ಈ ಒಪ್ಪಂದವನ್ನು ಬೇರೆ ಕಾರಣದ ಮೇಲೆ ವಿರೋಧಿಸಿದರು. ಅದರೆ ಉಳಿದ ಸದಸ್ಯರ ಬಹುಮತದ ಅಭಿಪ್ರಾಯ ರಾಯಟರ್ಸ್ ಪರವಾಗಿ ಇದ್ದುದರಿಂದ ರಾಯಿಟಸ್  ಮತ್ತು ಪಿ.ಟಿ.ಐ ಒಪ್ಪಂದ ಮಾಡಿಕೊಂಡವು

ಸದಾನಂದ ‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಗಾಗಿ ವಿದೇಶೀ ಸುದ್ದಿಸಂಸ್ಥೆಗಳ ಸೇವೆಯನ್ನು ಪಡೆದರು. ಜರ್ನಲ್ ಅಭಿವೃದ್ಧಿ ಹೊಂದಿತು.

ಸದಾನಂದರಿಗೆ ಪತ್ರಿಕೋದ್ಯಮ ಶಿಕ್ಷಣದಲ್ಲಿ ನಂಬಿಕೆ ಇತ್ತು. ಅನೇಕ ಮಂದಿ ಉತ್ಸಾಹೀ ತರುಣರನ್ನು ಪತ್ರಕರ್ತರಾಗಲು ಪ್ರೋತ್ಸಾಹಿಸಿದರು. ಸೂಕ್ತ ಮಾರ್ಗದರ್ಶನ ನೀಡಿದರು. ತಮ್ಮ ಕಿರಿಯರಲ್ಲಿ ಅವರಿಗೆ ವಿಶ್ವಾಸವಿತ್ತು. ಇಂದಿನ ಅನೇಕ ಮಂದಿ ಹಿರಿಯ ಪತ್ರಕರ್ತರಲ್ಲಿ ಅನೇಕರು ಒಂದು ಒಂದು ರೀತಿಯಲ್ಲಿ ಅವರೊಡನೆ ಸಂಪರ್ಕ ಹೊಂದಿದ್ದವರು. ಕೆಲವರಂತೂ ‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ತರಬೇತಿ ಪಡೆದವರೇ.

ಸತತ ದುಡಿಮೆ ಮತ್ತು ವಿರೋಧಗಳ ನಡುವೆ ಸದಾನಂದರ ಆರೋಗ್ಯ ಹದಗೆಟ್ಟಿತು. ೧೯೫೩ ರಲ್ಲಿ ಅವರು ನಿಧನರಾದರು. ಭಾರತದ ಪತ್ರಿಕಾರಂಗದ ನಕ್ಷತ್ರವೊಂದು ಭಾರತದಿಂದ ಕಣ್ಮರೆಯಾಯಿತು.

ಧೀರ ಬಾಳು

ಸದಾನಂದರು ಪತ್ರಿಕೋದ್ಯಮಕ್ಷೇತ್ರಕ್ಕೆ ಕಾಲಿಟ್ಟಾಗ ದೇಶ ಗುಲಾಮಗಿರಿಯಲ್ಲಿತ್ತು. ಇಲ್ಲಿ ಜನರಿಗೇ ದೇಶದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂದು ತಿಳಿಯುವುದೇ ಕಷ್ಟವಾಗಿತ್ತು. ಹೊರದೇಶಗಳವರಿಗಂತೂ ಇಲ್ಲಿ ಜನರ ಪ್ರತಿಭಟನೆ ಮತ್ತು ಸ್ವಾತಂತ್ರ್ಯ ಹೋರಾಟಗಳ ವಿಷಯ ತಿಳಿಯದಂತಾಗಿತ್ತು. ಸುದ್ದಿ ಕೊಡುವವರೆಲ್ಲ ಬ್ರಿಟಿಷ್ ಸರ್ಕಾರಕ್ಕೆ ತಲೆ ಬಾಗಿದವರೇ. ಇಂತಹ ಕಾಲದಲ್ಲಿ ಕಷ್ಟ, ಹಣದ ನಷ್ಟ ಯಾವುದಕ್ಕೂ ಬೆದರದೆ ದೇಶದ ಧ್ವನಿಯಾದವರು ಸದಾನಂದ. ಸ್ವತ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ೧೯೨೦ ರಲ್ಲಿ ನಡೆದ ಅಹಿಂಸಾತ್ಮಕ ಅಸಹಕಾರ ಚಳವಳಿ, ೧೯೩೦ರಲ್ಲಿ ಸರ್ಕಾರದ ಅಪ್ಪಣೆ ಇಲ್ಲದೆ ಉಪ್ಪನ್ನು ತಯಾರುಮಾಡಕೊಡದೆಂಬ ನಿಯಮವನ್ನು ಮುರಿದು ಗಾಂಧೀಜಿಯವರು ನಡೆಸಿದ ಪ್ರಸಿದ್ಧ ಉಪ್ಪಿನ ಸತ್ಯಾಗ್ರಹ, ಮತ್ತೆ ೧೯೩೦-೩೧ ಅಹಿಂಸಾತ್ಮಕ ಅಸಹಕಾರ ಚಳವಳಿ, ೧೯೪೦ರಲ್ಲಿ ಗಾಂಧೀಜಿಯವರು ನಡೆಸಿದ ವೈಯುಕ್ತಿಕ ಸತ್ಯಾಗ್ರಹ ೧೯೪೨ರಲ್ಲಿ ನಡೆದ ಧೀರ ಹೋರಾಟ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿರಿ’ ಆಂದೋಲನ- ಇವೆಲ್ಲವುಗಳಲ್ಲಿ ಭಾಗವಹಿಸಿದ್ದರು ಸದಾನಂದರು.

ಭಾರತ ಪ್ರಜಾಪ್ರಭುತ್ವವನ್ನು ಆರಿಸಿಕೊಂಡಿದೆ. ನಮ್ಮದು ಗಣರಾಜ್ಯ. ಇಂತಹ ದೇಶದಲ್ಲಿ ಆತ್ಮಗೌರವ ಪ್ರಾಮಾಣಿಕತೆ ಎರಡನ್ನೂ ಹೊಂದಿರುವ ಪತ್ರಿಕಾಕರ್ತರು ಅತ್ಯಗತ್ಯ. ಅಧಿಕಾರಕ್ಕೆ ಹೆದರಿ ತೆವಳದಿರುವ ಧೀರ ಪತ್ರಿಕಾಕರ್ತರು ನಿರ್ಭಯವಾಗಿ ಸರ್ಕಾರದ ಅನೀತಿ, ಅಧಿಕಾರ ದುರುಪಯೋಗ ಮತ್ತು ದೋಷಗಳನ್ನು ಬಯಲಿಗೆಳೆಯ ಬಲ್ಲರು. ಪತ್ರಿಕಾಕರ್ತರು ಸರ್ಕಾರ ಮಾಡುವುದನ್ನೆಲ್ಲ ಟೀಕಿಸುತ್ತಲೇ ಇರಬೇಕು ಎಂದಲ್ಲ. ಸರ್ಕಾರ ಸರಿಯಾದ ಹೆಜ್ಜೆ ಇಟ್ಟಾಗ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಜನರು ಮುಂದಿಡುವುದು ಅಗತ್ಯವಾದ ಕರ್ತವ್ಯ. ಅದರೊಂದಿಗೇ ನಿರ್ಭಯವಾಗಿ ಸರ್ಕಾರದ ತಪ್ಪುಗಳನ್ನು ಅಪರಾಧಗಳನ್ನೂ ತೋರಿಸುವ ಕರ್ತವ್ಯವೂ ಅವರದೇ. ಜನರ ನಿರೀಕ್ಷಣೆ, ಆಸೆ, ಅಭಿಪ್ರಾಯಗಳಿಗೆ ಧೈರ್ಯವಾಗಿ ದನಿಗೂಡಿಸಬಲ್ಲ ಪತ್ರಿಕಾಕರ್ತರು ಪ್ರಜಾಪ್ರಭುತ್ವಕ್ಕೊಂದು ಆಸ್ತಿ. ಆತ್ಮಗೌರವ, ನಿರ್ಭಯ, ನಿಸ್ವಾರ್ಥ. ದೇಶಪ್ರೇಮ, ಪತ್ರಿಕಾಸಂಸ್ಥೆಗಳನ್ನು ನಡೆಸುವುದರಲ್ಲಿ ದಕ್ಷತೆ ಇವುಗಳ ಸಂಗಮವಾಗಿದ್ದ ಸದಾನಂದರು ತಮ್ಮ ಧೀರ ಬಾಳನ್ನು ಸಾರ್ಥಕ ಮಾಡಿಕೊಂಡರು ಮಾತ್ರವಲ್ಲ. ಭಾರತದ ಪತ್ರಿಕೋದ್ಯಮಕ್ಕೆ ಕೀರ್ತಿತಂದರು.

ಸದಾನಂದರೊಡನೆ ಬಹುಕಾಲ ಕೆಲಸ ಮಾಡಿದ ಹಿರಿಯ ಪತ್ರಿಕೋದ್ಯಮಿ ರಾಮರಾಯರು ಸದಾನಂದರ ಬಾಳನ್ನು ಕೆಲವೇ ಮಾತುಗಳಲ್ಲಿ ಹೇಳಿದ್ದಾರೆ, “ಸದಾನಂದರ ಮುರಿದುಹೋಗಿದ್ದ ಟೈಪ್‌ರೈಟ್‌ರೊಂದನ್ನು ಕಟ್ಟಿಕೊಂಡು ಬಾಳನ್ನು ಪ್ರಾರಂಭಿಸಿದರು, ಯಶಸ್ಸಿನ ವೈಭವದಲ್ಲಿ ಕಣ್ಮರೆಯಾದರು.’