ವೈಜ್ಞಾನಿಕತೆ, ವೈಚಾರಿಕತೆ ಕಲಾತ್ಮಕತೆಗಳು ಬೆರೆತ ವಿಭಿನ್ನ ರೀತಿಯ ವ್ಯಕ್ತಿ ಶರ್ಮರವರು ಜನಿಸಿದ್ದು ೨೭-೩-೧೯೫೯ ರಂದು. ವೈ.ಎನ್‌. ಶ್ರೀನಿವಾಸ ಶರ್ಮ – ಕೃಷ್ಣವೇಣಿ ದಂಪತಿಗಳ ಸುಪುತ್ರರಾದ ಇವರು ವೃತ್ತಿಯಿಂದ ಪ್ರೌಢ ಸಂಶೋಧಕರು, ನುರಿತ ಪ್ರಾಧ್ಯಾಪಕರು, ದಕ್ಷ ಆಡಳಿತಗಾರರು ರಾಷ್ಟ್ರೀಯ – ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ತಂತ್ರಜ್ಞಾನ ಪರಿಣತರು. ಎಂ.ಎಸ್‌. ರಾಮರಾವ್‌ಅವರಲ್ಲಿ ಆರಂಭವಾದ ಅವರ ಸಂಗೀತ ಶಿಕ್ಷಣ ಡಿ. ಶಶಿಕಲಾ ಅವರಲ್ಲಿ ಮುಂದುವರಿದು ಆರ್.ಆರ್. ಕೇಶವಮೂರ್ತಿಯವರ ಗಟ್ಟಿ ನೆಲೆಯ ಶಿಸ್ತಿನ ಕ್ರಮಬದ್ಧ ಶಿಕ್ಷಣದಲ್ಲಿ ವಯೋಲಿನ್‌ ವಾದನದ ಮೂಲಕವೂ ಮುಂದುವರೆದಿದೆ. ಈ ಸಂಗೀತ ಜ್ಞಾನವನ್ನು ಅವರು ತಮ್ಮ ವೃತ್ತಿಯಲ್ಲಿಯೂ ಅಳವಡಿಸಿ ಹಲವಾರು ಸಂಶೋಧನೆಗಳ ಫಲವಾಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಆಯಾಸ ನಿವಾರಣೋಪಾಯವನ್ನು ಆವಿಷ್ಕರಿಸಿದ್ದಾರೆ.

ತಮ್ಮ ಪ್ರಯೋಗಕ್ಕಾಗಿ ಕಡತದ ಯಂತ್ರ (ಎಂಜಿನ್‌ಲೇತ್‌) ವನ್ನು ಆರಿಸಿಕೊಂಡು ಈ ಯಂತ್ರವು ಉತ್ಪನ್ನ ಮಾಡುವ ಏಕರೀತಿಯ ಬೇಸರ ಉಂಟು ಮಾಡುವ ಶಬ್ದವನ್ನು ಇಂಪಾದ ಮಧುರ ಸಂಗೀತ ರಾಗಗಳೊಂದಿಗೆ ಬೆರೆಸಿ ಲಯ ಬದ್ಧವಾದ ಶ್ರವಣಾನಂದಕರವಾದ ನಾದೋತ್ಪತ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಖಾನೆಗಳಲ್ಲಿನ ಯಂತ್ರಗಳ ತಿರುಗಣೆಯಲ್ಲಿ ಉಂಟಾಗುವ ಶ್ರುತಿ ಮತ್ತು ತಾಳಗಳ ಪ್ರಭೇದಗಳನ್ನು ಗಮನಿಸಿ ಶೋಧ ನಡೆಸಿದ್ದಾರೆ.

ಶರ್ಮರವರು ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಗಾನಗೋಷ್ಠಿಗಳ ಮೂಲಕ ಪ್ರಸ್ತುತ ಪಡಿಸಿದ್ದಾರೆ.‘ಯು.ಜಿ.ಸಿ. ನ್ಯಾಷನಲ್‌ ಫೆಲೋ’, ‘ಯು.ಜಿ.ಸಿ. ವೃತ್ತಿ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಕಲಾಶ್ರೀ’, ‘ಅಂಬೇಡ್ಕರ್ ಪ್ರಶಸ್ತಿ’, ಜರ್ಮನಿಯ `VERLAG ಪ್ರಶಸ್ತಿ’ ಕ್ರಿಯಾಕಲ್ಪ ಎಂಬ ವಸ್ತುಕಲೆಯ ಸಂಗ್ರಹಾಲಯವನ್ನು ಸ್ಥಾಪಿಸಿದ್ದಕ್ಕಾಗಿ ಜಾನಪದ-ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಸಮಾಜಸೇವೆ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದ ಸಂಸ್ಥಾಪಕ -ನಿರ್ವಾಹಕರಾಗಿ ಸೇವೆ ಸಲ್ಲಿಸಿದುದಕ್ಕಾಗಿ ರಾಜ್ಯ ಪ್ರಶಸ್ತಿ ಅವಿನಾಶ ಲಿಂಗಂ ಡೀಮ್ಡ್‌ ವಿಶ್ವವಿದ್ಯಾಲಯ (ಕೊಯಮತ್ತೂರು) ಕುವೆಂಪು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಹಾಗೂ ಮಂಗಳೂರು ವಿಶ್ವವಿದ್ಯಾಲಯಗಳಿಂದ ಹಲವಾರು ಡಾಕ್ಟರೇಟ್‌ ಪ್ರಶಸ್ತಿಗಳು, ಮದರ್ ಥೆರೇಸಾ ಕೇಂದ್ರ ಪ್ರಶಸ್ತಿ’ ಸಮಾಜ ಸೇವಾಭೂಷಣ’, `INSA ಫೆಲೋಷಿಪ್‌ಪ್ರಶಸ್ತಿ’, ‘ಗಾನ ಕಲಾಶ್ರೀ’ ಮುಂತಾದ ಹಲವಾರು ಪ್ರಶಸ್ತಿ ಗೌರವ ಸನ್ಮಾನಗಳನ್ನು ಪಡೆದಿರುವ ಶ್ರೀಯುತರು ಬುದ್ಧಿ ವೈಭವದೊಡನೆ ಹೃದಯವಂತಿಕೆಯನ್ನು ಬೆರೆಸಿ ಯಶಸ್ವಿಯಾಗಿದ್ದಾರೆ.