೧೯೩೮ರಲ್ಲಿ ಮೈಸೂರಿನಲ್ಲಿ ಜನಿಸಿದ ಶ್ರೀಮತಿ ಸುನಂದಾ ಅವರು ಸಂಗೀತ ಕಲಾವಿದರ ಕುಟುಂಬದಲ್ಲಿ ಬೆಳೆದು ಬಂದವರು. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಸುನಂದಾ ಸಂಗೀತಾಭ್ಯಾಸ ಮಾಡಿದ್ದು ಅವರ ಸೋದರಿ ಖ್ಯಾತ ಕಲಾವಿದೆ ಸಂಗೀತ ವಿದೂಷಿ ಶ್ರೀಮತಿ ರತ್ನಮ್ಮ ಕೃಷ್ಣಮೂರ್ತಿ ಮತ್ತು ಖ್ಯಾತ ಸಂಗೀತ ವಿದ್ವಾನ್ ಶ್ರೀ ಡಿ. ಸುಬ್ಬರಾಮಯ್ಯ ಅವರುಗಳಲ್ಲಿ.

೧೯೫೮ರಲ್ಲಿ ರಾಜ್ಯದ ಪರವಾಗಿ ಬರೋಡಾದಲ್ಲಿ ನಡೆದ ಅಖಿಲ ಭಾರತ ಯುವಜನೋತ್ಸವದಲ್ಲಿ ಸಂಗೀತ ವಿಭಾಗದ ಮುಖ್ಯ ಗಾಯಕಿಯಾಗಿ ಭಾಗವಹಿಸಿದ್ದ ಶ್ರೀಮತಿ ಸುನಂದಾ ಹಲವಾರು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಖ್ಯಾತ ಭರತನಾಟ್ಯ ಕಲಾವಿದರಾದ ಶ್ರೀ ಯು.ಎಸ್. ಕೃಷ್ಣರಾವ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಚಂದ್ರ ಭಾಗಾದೇವಿ ಅವರ ನೃತ್ಯಕ್ಕೆ ಹಿನ್ನೆಲೆ ಗಾಯನ ನೀಡಲು ಆರಂಭಿಸಿದ ಸುನಂದಾ ಅವರ ಹಾಗೂ ಅವರ ಶಿಷ್ಯವೃಂದದ ಕಾರ್ಯಕ್ರಮಗಳಿಗೆ ಹೆಚ್ಚಿನ ಶೋಭೆ ತಂದುಕೊಟ್ಟಿದ್ದಾರೆ. ಅಲ್ಲದೆ ಖ್ಯಾತ ನೃತ್ಯ ಕಲಾವಿದರುಗಳಾದ ಶ್ರೀಮತಿ ಇಂದ್ರಾಣಿ ರೆಹಮಾನ್ ಹಾಗೂ ಶ್ರೀಮತಿ ಸೋನಾಲ್ ಮಾನ್‌ಸಿಂಗ್ ಅವರ ನೃತ್ಯಕ್ಕೂ ಹಿನ್ನೆಲೆ ಗಾಯನ ನೀಡಿದ ಹೆಗ್ಗಳಿಕೆ ಸುನಂದಾರದು.

ಪ್ರಸ್ತುತ ರಾಜಾಜಿನಗರದ ’ತ್ಯಾಗರಾಜ ಗಾನ ಸಭಾ’ದಲ್ಲಿ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಹಲವಾರು ಬಾರಿ ವಿದೇಶಿಗಳಲ್ಲಿಯೂ ಕಾರ್ಯಕ್ರಮ ನೀಡಿದ್ದು ಅಮೇರಿಕಾದ ಒಹಿಯೋ ನಗರದ ಸಂಗೀತ ರಸಿಕರಿಂದ ’ಗಾನ ಸರಸ್ವತಿ’ ಬಿರುದಿಗೆ ಪಾತ್ರರಾಗಿರುವ ಸುನಂದಾ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ೧೯೯೮-೯೯ನೇ ಸಾಲಿನ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.