ಕೃಷ್ಣಶಾಸ್ತ್ರಿಗಳು ೧೮೯೦ ರಂದು ಮೈಸೂರಿನಲ್ಲಿ ಜನಿಸಿದರು. ಇವರು ಹೊಸಗನ್ನಡ ಬರಹಗಾರರಲ್ಲಿ ಪ್ರಸಿದ್ದರಾದವರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಬೋಧಕರಾಗಿ ವೃತ್ತಿಜೀವನವನ್ನು ಆರಂಬಿಸಿದ ಶಾಸ್ತ್ರಿಗಳು ಮೂಲೆಗುಂಪಾಗಿ ಬಿದ್ದಿದ್ದ ಕನ್ನಡವನ್ನು ಮೇಲೆತ್ತುವ ಕೆಲಸ ಮಾಡಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸುಮಾರು ೩೦ ವರ್ಷಗಳಕಾಲ ಕನ್ನಡ ಬೋಧಕರಾಗಿ ಕೆಲಸ ಮಾಡಿದ ಇವರು ಹೊಸ ಪೀಳಿಗೆಯನ್ನು ಸೃಷ್ಟಿಸಿದರಲ್ಲದೆ ಕನ್ನಡದ ಮುನ್ನಡೆಗಾಗಿ ಹಲವು ಸಂಘ ಸಂಸ್ಥೆಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಕನ್ನಡ ನಿಘಂಟುವಿನ ಪ್ರಥಮ ಸಂಪಾದಕರಾಗಿದ್ದು ಅದಕ್ಕೆ ಒಂದು ಖಚಿತ ರೂಪವನ್ನು ಕೊಟ್ಟರು. ಶಾಸ್ತ್ರಿಗಳು ಅನೇಕ ಗದ್ಯ ಕೃತಿಗಳನ್ನು ರಚಿಸಿದ್ದಾರೆ, ವೆಂಕಣ್ಣಯ್ಯನವರೊಡನೆ ‘ಶ್ರೀರಾಮಕೃಷ್ಣಪರಮಹಂಸರ ಚರಿತ್ರೆ ಸ್ವಾಮಿ ಶಿವ್ಯಾ;-ಸಂವಾದ ಭಾಗ-೧ ಕೃತಿಗಳನ್ನು ರಚಿಸಿದ್ದಾರೆ. ಬಾಸಕವಿ, ಸರ್ವಜ್ಞಕವಿ, ಸಂಸ್ಕೃತನಾಟಕ, ನಾಗಮಹಾಶಯ, ಶ್ರೀಪತಿಯ ಕಥೆಗಳು, ಕಥಾಮೃತ, ವಚನಭಾರತ, ಕವಿಜಿಹ್ವಾಬಂಧನಂ, ನಿಭಂಧಮಾಲಾ, ಹಾಗೂ ಬಂಕಿಮಚಂದ್ರ, ಎಂಬ ಶೇಷ್ಟ ಕೃತಿಗಳನ್ನು ರಚಿಸಿದ್ದಾರೆ.

ಶಾಸ್ತ್ರಿಗಳು ತಮ್ಮ ಮಗಳ ಅಕಾಲ ಮರಣದ ಕುಡಿನೆನಪಿಗಾಗಿ ‘ಶ್ರೀಪತಿಯ ಕಥೆಗಳು, ಕಥಾಸಂಕಲನವನ್ನು ಪ್ರಕಟಿಸಿದರು. ಇಂಥ ಬಾಳಕುದಿ, ಜೀವನವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ, ಎರಡೂ ಸೇರಿ ರೂಪುಗೊಂಡ, ವಾಸ್ತವ ಮನೋಧರ್ಮ, ಈ ಕಥೆಗಳಲ್ಲಿ ಕಂಡು ಬರುತ್ತದೆ. ಬಾಸಕವಿ ಹಾಗೂ ಸಂಸ್ಕೃತನಾಟಕಗಳು, ಅವರ ಪ್ರೌಡವಾದ ವಿದ್ವತ್ತಿಗೆ ಸಾಕ್ಷಿಯಾಗಿವೆ. ಹೊಸಗನ್ನಡ ಸಾಹಿತ್ಯದ ಮೇಲಿನ ಅವರ ಲೇಖನಗಳು ಅವರ ಹೊಸ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಕೃಷ್ಣಶಾಸ್ತ್ರಿಗಳ ವಿಮರ್ಶೆಯ ಮುಖ ಲಕ್ಷಣವೆಂದರೆ ಅವರ ಬಹುಸೂಕ್ಷ್ಮವಾದ, ಸಹಜವಾದ ಒಂದು ಪರಿಜ್ಞಾನ ಸಾಹಿತ್ಯ ಕೃತಿಗಳಲ್ಲಿ ಶ್ರೇಷ್ಟ, ಕನಿಷ್ಠ, ಸಾಮಾನ್ಯ ಇವುಗಳನ್ನು ಅವರು ಗುರುತಿಸಬಲ್ಲರು. ಸಂಸ್ಕೃತನಾಟಕಗಳಲ್ಲಿ, ಸಂಸ್ಕೃತ ನಾಟಕಕಾರರೆಲ್ಲರನ್ನು ವಿಂಗಡಿಸಿ, ಅವರ ಸ್ಥಾನಗಳನ್ನು ನಿರ್ಣಯಿಸುತ್ತ ಅವರ ಮೂಲಕವಾಗಿಯೇ ಸಂಸ್ಕೃತ ನಾಟಕದ ಇತಿಹಾಸವನ್ನು ಬಣ್ಣಿಸಿದ್ದಾರೆ.

ಬಂಕಿಮಚಂದ್ರ ಕೃತಿಗೆ ೧೯೬೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರ ದೊರೆತಿದೆ. ಮೈಸೂರು ವಿ.ವಿ.೧೯೬೦ ರಲ್ಲಿ ಗೌರವ ಡಿ.ಲಿಟ್ ಪದವಿಯನ್ನು ನೀಡಿತು. ಗುಣಮೌಲ್ಯ ಮತ್ತು ಗಾತ್ರಗಳೆರಡರಲ್ಲೂ ಹಿರಿದಾದ ಸಾಹಿತ್ಯ ಸೃಷ್ಟಿ ಎ.ಆರ್. ಕೃಷ್ಣಶಾಸ್ತ್ರಿಗಳದು. ಅವರಲ್ಲಿ ಕನ್ನಡವನ್ನು ಕಲಿತು ಸ್ಪೂರ್ತಿ ಪಡೆದ ಹಲವರು ಇಂದಿಗೂ ಸಾಹಿತ್ಯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.