ಅಂದು ಮೈಸೂರಿನ ಕ್ರಾಫರ್ಡ್ ಹಾಲ್‌ನಲ್ಲಿ ಪದವೀದಾನ ಮಹೋತ್ಸವ. ಬಿ.ಎಸ್.ಸಿ., ಎಂ.ಬಿ.ಬಿ.ಎಸ್.-ಹೀಗೆ ಹಲವು ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ತಮ್ಮ “ಡಿಗ್ರಿ”- ಪ್ರಶಸ್ತಿ- ಪಡೆಯುವ ದಿನ. ಆಗ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಶ್ರೀಮನ್ಮಹಾರಾಜರು. ವಿಶ್ವವಿದ್ಯಾನಿಲಯವು ದೇಶಕ್ಕಾಗಿ  ಕೆಲವ ಮಾಡಿದ ನಾಲ್ವರು ಹಿರಿಯರಿಗೆ “ಡಾಕ್ಟರೇಟ್‌” ಪ್ರಶಸ್ತಿ ಕೊಟ್ಟು ಗೌರವಿಸಲು ಅವರನ್ನು ಆಹ್ವಾನಿಸಿತ್ತು. ಸಮಾರಂಭದಲ್ಲಿ ಅನೇಕರು ಭಾಷಣ ಮಾಡಿದರು. ಕಡೆಯದಾಗಿ ನಾಲ್ಕು ಜನ ಗೌರವ ಪದವೀಧರರಲ್ಲಿ ಒಬ್ಬರು ಭಾಷಣ ಮಾಡಲು ಎದ್ದು ನಿಂತರು. ಎಲ್ಲರೂ ಬಿಳಿಯ ಷರಾಯಿ, ಕರಿಯ ಉದ್ದವಾದ ಕೋಟು, ಪೇಟ, ವಲ್ಲಿ ಧರಿಸಿದ್ದರೆ ಆ ವ್ಯಕ್ತಿ ಸಾಧಾರಣ ಪಂಚೆ, ಕೋಟು, ಪೇಟ ಧರಿಸಿದ್ದರು. ವಿಶ್ವವಿದ್ಯಾನಿಲಯದವರೇ ಕೊಟ್ಟಿದ್ದ ಗೌರವ ಗೌನು ಮೇಲೆ ಹಾಕಿಕೊಂಡಿದ್ದರು. ಎದ್ದು ನಿಂತು “ಮಹಾಸ್ವಾಮಿಗಳೇ, ಅಣ್ಣ-ತಮ್ಮಂದಿರೇ, ಅಕ್ಕ-ತಂಗಿಯರೇ” ಎಂದು ಕನ್ನಡದಲ್ಲಿ ಭಾಷಣ ಪ್ರಾರಂಭ ಮಾಡಿದ ತಕ್ಷಣ ಗುಜುಗುಜುಗುಟ್ಟುತ್ತಿದ್ದ ಜನರು ನಿಶ್ಯಬ್ದರಾದರು. ಸೂಜಿ ಬಿದ್ದರೂ ಸಹ ಕೇಳುತ್ತಿತ್ತು. ಅಂತಹ ನಿಶ್ಯಬ್ದ. ತಾವು ಮಾಡಲಿರುವ ಭಾಷಣವನ್ನು ಅಚ್ಚು ಹಾಕಿಸಿ ತಮ್ಮ ಭಾಷಣಕ್ಕೆ ಮುಂಚೆ ಎಲ್ಲರಿಗೂ ಒಂದೊಂದು ಪ್ರತಿ ಹಂಚಿದ್ದರು. ಸೊಗಸಾದ, ಸರಳವಾದ ಕನ್ನಡದಲ್ಲಿ ಭಾಷಣ. ಆದುದರಿಂದ ಎಲ್ಲರಿಗೂ ಅರ್ಥವಾಯಿತು. ಅವರ ಭಾಷಣ ಮುಗಿಯುವ ತನಕ ಒಬ್ಬಬ್ಬರಾದರೂ ಮಾತನಾಡಲಿಲ್ಲ.

ಅಂತಹ ಸಮಾರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ ಧೀರರು ಪ್ರೋಫೆಸರ್ ಎ.ಆರ್. ಕೃಷ್ಣಶಾಸ್ತ್ರೀ ಅವರು.

ತಂದೆತಾಯಿ

ಎ.ಆರ್. ಕೃ. ಹೀಗೆ ಹಿರಿಯರಾದರೆ ಅವರ ತಂದೆ ಅಂಬಳೆ ರಾಮಕೃಷ್ಣ ಶಾಸ್ತ್ರಿಗಳು ಮತ್ತೊಂದು ರೀತಿಯಲ್ಲಿ ಗೌರವ ಪಡೆದವರು. ಅವರು ವ್ಯಾಕರಣದಲ್ಲಿ ಘನಪಂಡಿತರು. ಆದ್ದರಿಂದ ಅವರನ್ನು “ವಯ್ಯಾಕರಣದ ರಾಮಕೃಷ್ಣ ಶಾಸ್ತ್ರಿಗಳು” ಎಂದು ಕರೆಯುತ್ತಿದ್ದರು. ಶೃಂಗೇರಿಯ ಸ್ವಾಮಿಗಳಿಂದ ಚಿನ್ನದ ಕಪ್ಪ, ತೋಡ, ಪದಕ, ಶಾಲು ಜೋಡಿಗಳನ್ನು ಪಡೆದಿದ್ದರು ತಮ್ಮ ವಿದ್ವತ್ತಿಗೆ. ರಾಮಕೃಷ್ಣ ಶಾಸ್ತ್ರಿಗಳು ಮೈಸೂರು ಸಂಸ್ಕೃತ ಪಾಠಶಾಲೆಯಲ್ಲಿ ಉಪಾಧ್ಯಾಯರು. ಆದುದರಿಂದ ಮಹಾರಾಜರು ಅವರಿಗೆ ದೇವೀರಮ್ಮಣ್ಣಿ ಅಗ್ರಹಾರದಲ್ಲಿ ಒಂದು ಮನೆಯನ್ನು ಕೊಟ್ಟಿದ್ದರು. ರಾಮಕೃಷ್ಣ ಶಾಸ್ತ್ರಿಗಳ ಹೆಂಡತಿ ಶಂಕರಮ್ಮನವರು. ಅವರು ಬಹು ಮೃದು ಸ್ವಭಾವ.

ಇಂಥ ಒಳ್ಳೆಯ ತಂದೆತಾಯಿಯರ ಮಗ ಕೃಷ್ಣಶಾಸ್ತ್ರಿಗಳು. ಅವರು ೧೮೯೦ನೆಯ ಇಸವಿ ಫೆಬ್ರವರಿ ೧೨ನೆಯ ದಿನಾಂಕದಂದು ಹುಟ್ಟಿದರು.

ಬಾಲ್ಯ

ಕೃಷ್ಣಶಾಸ್ತ್ರಿಗಳಿಗೆ ಐದು ವರ್ಷ.

ಒಂದು ದಿನ, ಅವರ ತಂದೆ ಪಾಠಶಾಲೆಗೆ ಹೊರಡುವ ಹೊತ್ತು. ಮಗನಿಗೆ “ಓಂ ನಮಃ ಶಿವಾಯ” ಎಂದು ಅಕ್ಷರಗಳನ್ನು ತಿದ್ದಿ ಹಾಕಿಕೊಟ್ಟು “ನಾನು ಪಾಠ ಶಾಲೆಯಿಂದ ಬರುವ ವೇಳೆಗೆ ಈ ಅಕ್ಷರಗಳನ್ನೆಲ್ಲಾ ತಿದ್ದಿ ಕಲಿತಿರು. ಒಂದೊಂದು ಅಕ್ಷರ ಕಲಿತರೆ ಒಂದೊಂದು ಕಾಸು ಕೊಡುತ್ತೇನೆ” ಎಂದರು.

ಆಗ ಈಗಿನಂತೆ ಸ್ಲೇಟು, ಬಳಪ, ಪುಸ್ತಕ, ಪೆನ್ಸಿಲ್ ಏನೂ ಇರಲಿಲ್ಲ. ನೆಲದ ಮೇಲೆ ಮರಳನ್ನು ಹರಡಿ ಬೆರಳಿನಿಂದ ತಿದ್ದಬೇಕಾಗಿತ್ತು. ಹುಡುಗ ಪಟ್ಟು ಹಿಡಿದು ಕುಳಿತು ಬಿಟ್ಟ. ಅಕ್ಷರಗಳನ್ನು ತಿದ್ದಿದ, ತಿದ್ದಿದ. ಮಧ್ಯಾಹ್ನ ತಂದೆ ಊಟಕ್ಕೆ ಬರುವ ವೇಳೆಗೆ ಆ  ಐದು ಅಕ್ಷರಗಳನ್ನೂ ಕಲಿತು ಐದು ಕಾಸನ್ನು ಸಂಪಾದಿಸಿಬಿಟ್ಟ.

ಮತ್ತೆ ಮಧ್ಯಾಹ್ನಕ್ಕೆ ಮತ್ತೆ ಐದು ಅಕ್ಷರಗಳನ್ನು ತಿದ್ದಿ ಹಾಕಿಸಿಕೊಂಡು, ಸಂಜೆ ತಂದೆ ಬರುವುದರಲ್ಲಿ ಆ ಐದು ಅಕ್ಷರಗಳನ್ನೂ ಕಲಿತು ಮತ್ತೆ ಐದುಕಾಸನ್ನು ಸಂಪಾದಿಸಿದ. ದಿನಕ್ಕೆ ಹತ್ತು ಅಕ್ಷರ ಕಲಿತು ಹತ್ತು ಹಾಸುಗಳನ್ನು (ಈಗಿನ ಐದು ಪೈಸೆ) ಸಂಪಾದಿಸಿದೆ ಎಂದು ಖುಷಿಯೋ ಖುಷಿ, ಹೆಮ್ಮೆಯೋ ಹೆಮ್ಮೆ ಹುಡುಗನಿಗೆ.

ಎ.ಆರ್. ಕೃ. ಗೆ ಅವರ ತಂದೆಯೇ  ಮೊದಲ ಗುರು. ಅವರ ಮೊದಲನೆಯ ಪಾಠ “ಓಂ ನಮಃ ಶಿವಾಯ” ಕ್ಕೆ ಕಡೆಯ ತನಕ ಮುಪ್ಪುಸ ಬರಲಿಲ್ಲ. ಅವರು ಇದ್ದಷ್ಟು ದಿನವೂ ತಮ್ಮ ಕೊಠಡಿಯಲ್ಲಿ ತಮ್ಮ ಕುರ್ಚಿಯ ಎದುರು ತಮ್ಮ ತಂದೆಯ ಭಾವಚಿತ್ರವನ್ನು ಹಾಕಿಕೊಂಡು ಏನು ಬರೆಯಬೇಕಾದರೂ ಚಿತ್ರದ ಎದುರಿನಲ್ಲಿಯೇ ಬರೆಯುತ್ತಿದ್ದರು. ಯಾವ ಕೆಲಸ ಆರಿಸಿದರೂ ದೃಢ ಮನಸ್ಸು, ಒಂದೇ ಶ್ರದ್ಧೆಯಿಂದ ಮಾಡಿ ಮುಗಿಸುವರು.

ಕೃಷ್ಣಶಾಸ್ತ್ರಿಗಳಿಗೆ ಏಳು-ಎಂಟು ವರ್ಷವಾಗಿದ್ದಾಗ ತಂದೆಯ ಜೊತೆ ತಾವೂ ಪಾಠಶಾಲೆಗೆ ಹೋಗುತ್ತಿದ್ದರು. ಅಲ್ಲಿ ತಂದೆ ವಿದ್ಯಾರ್ಥಿಗಳಿಗಿಂತ ಚೆನ್ನಾಗಿ ತಾವು ಕಲಿಯುತ್ತಿದ್ದರು. ರಾಮಕೃಷ್ಣ ಶಾಸ್ತ್ರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಕೇಳಿದರೆ ತಾವೇ ಥಟ್ಟನೆ ಉತ್ತರ ಹೇಳಿಬಿಡುತ್ತಿದ್ದರು.

ಕೃಷ್ಣಶಾಸ್ತ್ರಿಗಳಿಗೆ ಹತ್ತು ವರ್ಷಗಳಾಗಿದ್ದಾಗ ಅವರ ತಾಯಿ ತೀರಿಕೊಂಡರು.

ಕೃಷ್ಣಶಾಸ್ತ್ರಿಗಳು ಕಡೆಯವರೆಗೆ ತಮ್ಮ ತಾಯಿಯನ್ನು ತುಂಬ ಪ್ರೀತಿಯಿಂದ ನೆನೆಸಿಕೊಳ್ಳುತ್ತಿದ್ದರು. ಪ್ರತಿವರ್ಷ ತಾಯಿಯ ಶ್ರಾದ್ಧದ ದಿನ ಶಾಸ್ತ್ರಿಗಳು ಕಣ್ಣೀರು ಹಾಕುತ್ತಿದ್ದರು.

ರಾಮಕೃಷ್ಣಶಾಸ್ತ್ರಿಗಳು ತಮ್ಮ ಮಕ್ಕಳಿಗೆ ತಾವೇ ತಂದೆಯೂ ಆದರು, ತಾಯಿಯೂ ಆದರು, ಅವರನ್ನು ಬೆಳೆಸಿದರು.

ವಿದ್ಯಾಭ್ಯಾಸ

ಕೃಷ್ಣಶಾಸ್ತ್ರಿಗಳು ತಮ್ಮ ವಿದ್ಯಾಭ್ಯಾಸದ ಕಾಲದಲ್ಲಿ ಶಾಲೆಗೆ ಜೊತೆಗೆ ಮನೆ ಕಡೆಗೂ ಸಹ ಗಮನ ಕೊಡಬೇಕಾಗಿತ್ತು. ಮನೆಯಲ್ಲಿ ಅಡಿಗೆ ಮಾಡಿ ಊಟ ಮಾಡಿಕೊಂಡು ಶಾಲೆಗೆ ಹೋಗಬೇಕಾಗಿತ್ತು. ಮನೆಯಲ್ಲಿ ಅವರ ತಮ್ಮನನ್ನು ನೋಡಿಕೊಳ್ಳಬೇಕಾಗಿತ್ತು. ತಂದೆಯ ತಾಯಿ ಅಜ್ಜಿ ಇದ್ದರು. ಅವರಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಅವರಿಗೆ ಸ್ನಾನ ಮಾಡಿಸಬೇಕಾಗಿತ್ತು. ಅವರನ್ನು ಎತ್ತಿಕೊಂಡು ಹೋಗಿ ಬಚ್ಚಲಮನೆಯಲ್ಲಿ ಕೂಡಿಸಿ ತಲೆಯ ಮೇಲೆ ನೀರು ಸುರಿಯುವಾಗ ದೇವರಿಗೆ ಅಭಿಷೇಕ ಮಾಡುತ್ತಿದ್ದೇನೆ ಎಂಬ  ಭಾವನೆಯಿಂದ ಅವರ ಸೇವೆ ಮಾಡುತ್ತಿದ್ದರು. ಅವರ ಸೀರೆ ಒಗೆದು ಒಣಗಿ ಹಾಕಿ, ಸ್ನಾನ ಆದ ಮೇಲೆ ಅವರಿಗೆ ಸೀರೆ ಉಡಿಸಬೇಕು. ಇದೆಲ್ಲದರ ಜೊತೆಗೆ ಮನೆ ಕೆಲಸ. ಈ ತಲ್ಲಾ ಕಾರಣದಿಂದ ಅವರು ಕನ್ನಡ ಲೋಯರ್ ಸೆಕೆಂಡರಿ ಪಾಸ್ ಮಾಡಿದಾಗ ಅವರಿಗೆ ಹದಿನಾರು ವರ್ಷ. ಸಂಸ್ಥಾನಕ್ಕೇ ಮೊದಲನೆಯವರಾಗಿ ತೇರ್ಗಡೆಯಾದರು. ಹದಿನೇಳು ವರ್ಷಕ್ಕೆ ಇಂಗ್ಲಿಷ್ ಲೋಯರ್ ಸೆಕೆಂಡರಿ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಇದೇ ಸಮಯದಲ್ಲೇ ಅವರಿಗೆ ಮದುವೆಯಾದದ್ದು, ಹೆಂಡತಿಯ ಹೆಸರು ವೆಂಕಟಲಕ್ಷಮ್ಮ.

ಕಂಡು ನಕ್ಕ ಹುಡುಗರೇ

ಶಾಸ್ತ್ರಿಗಳು “ವೆಸ್ಲಿ ಮಿಷಮ್‌ ಹೈಸ್ಕೂಲ್‌” ಎಂಬ ಶಾಲೆಯನ್ನು ಸೇರಿದರು.

ಆ ಶಾಲೆಗೆ ಬರುತ್ತಿದ್ದ ಹುಡುಗರಲ್ಲಿ ಬಹುಮಂದಿ ಶ್ರೀಮಂತರ ಮನೆಗಳವರು. ಶಿಸ್ತಾಗಿ ಆಂಗ್ಲರ ಉಡುಪನ್ನು ಧರಿಸಿ ಬರುವವರು. ಮೊದಲನೆಯ ದಿನ ಕೃಷ್ಣಶಾಸ್ತ್ರಿಗಳು ಶಾಲೆಗೆ ಹೋದರು. ಪಂಚೆ, ಷರಟು, ಟೋಪಿ ಅವರ ಉಡುಪು. ತಲೆಯಲ್ಲಿ ಜುಟ್ಟು, ಹಣೆಯಲ್ಲಿ ಗಂಧಾಕ್ಷತೆ. ಬರಿಯ ಕಾಲು.

ಹುಡುಗ ತರಗತಿಯಲ್ಲಿ ಕಾಲಿಡುತ್ತಲೇ ಇತರ ಹುಡುಗರೆಲ್ಲ “ಘೋಳ್” ಎಂದು ನಕ್ಕುಬಿಟ್ಟರು.

ಕೆಲವೆ ತಿಂಗಳ ನಂತರ, ವರ್ಷದ ಮಧ್ಯದ ಪರೀಕ್ಷೆ ನಡೆಯಿತು. ತರಗತಿಗೆ ಮೊದಲ ಸ್ಥಾನ ಪಡೆದ ಹುಡುಗನಿಗೆ ವ್ಯಾಸಂಗ ವೇತನ (ಸ್ಕಾಲರ್‌ಷಿಪ್) ಕೊಡುತ್ತಿದ್ದರು.

ಹುಡುಗ ತರಗತಿಯಲ್ಲಿ ಕಾಲಿಡುತ್ತಲೇ ಇತರ ಹುಡುಗರು ನಕ್ಕುಬಿಟ್ಟರು

 ವ್ಯಾಸಂಗ ವೇತನ ಗಿಟ್ಟಿಸಿದ ಹುಡುಗ-ಜುಟ್ಟುಬಿಟ್ಟ, ಗಂಧಾಕ್ಷತೆಯ, ಬರಿಯ ಕಾಲಿನ ಹುಡುಗ ಕೃಷ್ಣಶಾಸ್ತ್ರಿ!

ಮೊದಲನೆಯ ದಿನ ಕಂಡು ನಕ್ಕ ಹುಡುಗರೇ ಮೆಚ್ಚಿಕೊಂಡರು. ಆಗ ಆರಂಭವಾದ ಮೊದಲನೆಯ ಸ್ಥಾನ ಮತ್ತು ವಿದ್ಯಾರ್ಥಿವೇತನವನ್ನು ತಮ್ಮ ವ್ಯಾಸಂಗ ಮುಗಿಯುವ ತನಕ ಬಿಟ್ಟುಕೊಡಲಿಲ್ಲ.

ವಿದ್ಯಾರ್ಥಿವೇತನ ಎರಡು ರೂಪಾಯಿ ಮೊದಲನೆಯ ತಿಂಗಳು ಕೈಗೆ ಬಂದಾಗ ಅವರು ಮಾಡಿದ ಕೆಲಸ “ಆನಂದಮಠ” ಎಂಬ ಪುಸ್ತಕವನ್ನು ಕೊಂಡು ಓದಿದ್ದು.

ಕೃಷ್ಣಶಾಸ್ತ್ರಿಗಳು ಸಂಸ್ಕೃತ, ಕನ್ನಡಗಳನ್ನು ಆರಿಸಿಕೊಂಡು ಮೈಸೂರಿನ ಮಹಾರಾಜ ಕಾಲೇಜನ್ನು ಸೇರಿದರು.

ಕಾಲೇಜಿನಲ್ಲಿ ಟಿ.ಎಸ್. ವೆಂಕಣ್ಣಯ್ಯ ಎಂಬುವರ ಸ್ನೇಹವಾಯಿತು. ದೊಡ್ಡವರಾದ ನಂತರ ಅವರಿಬ್ಬರೂ ಕನ್ನಡಕ್ಕೆ ಒಂದೇ ಸಮ ಕೆಲಸ ಮಾಡಿದವರು. ಅವರಿಬ್ಬರನ್ನೂ ಈಗ “ಕನ್ನಡದ ಅಶ್ವಿನಿ ದೇವತೆಗಳು” ಎಂದು ಕರೆಯುತ್ತಾರೆ.

ಕೃಷ್ಣಶಾಸ್ತ್ರಿಗಳು ಬಿ.ಎ. ತರಗತಿಯಲ್ಲಿದ್ದಾಗ ಸರ್ ಎಂ. ವಿಶ್ವೇಶ್ವರಯ್ಯನವರ ಎದುರಿಗೆ ಚರ್ಚಾಸ್ಪರ್ಧೆಯೊಂದು ಏರ್ಪಾಡಾಗಿತ್ತು. ಬಹುಮಂದಿ ಸಪ್ಪೆಸಪ್ಪೆಯಾಗಿ ಮಾತನಾಡುತ್ತಿದ್ದರು. ಕೃಷ್ಣಶಾಸ್ತ್ರಿಗಳದೆ ಕಡೆಯ ಭಾಷಣ. ಇಷ್ಟು ಹೊತ್ತಿಗೆ ಬೇಸರಪಟ್ಟಿದ್ದ ಅವರು ತಮ್ಮ ಸರದಿ ಬಂದ ತಕ್ಷಣ ಧೈರ್ಯದಿಂದ ಎದ್ದು ನಿಂತುಕೊಂಡು ಎಲ್ಲರಿಗೂ ಅರ್ಥವಾಗುವಂತೆ ತಡವರಿಸದೆ ಮಾತನಾಡಿದರು. ವೇದಿಕೆಯ ಮೇಲೆ ಕುಳಿತಿದ್ದ ವಿಶ್ವೇಶ್ವರಯ್ಯನವರು “ಯಾರು ಈ ಹುಡುಗ?” ಎಂದು ಉದ್ಗಾರವೆತ್ತಿದರು.

ಕೃಷ್ಣಶಾಸ್ತ್ರಿಗಳ ಭಾಷಣ ಎಂದರೆ ಯಾವಾಗಲೂ ಹಾಗೆಯೇ.

ಬಿ.ಎ. ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಚಿನ್ನದ ಪದಕ ಬರುವಷ್ಟು ಅಂಕಗಳು ಬಂದಿದ್ದವು. ಇಂಗ್ಲಿಷಿನಲ್ಲಿ ಮಾತ್ರ ಒಂದು ಅಂಕದಿಂದ ಉತ್ತೀರ್ಣರಾಗದೆ ಹೋದರು. ಮುಂದಿನ ವರ್ಷ ಅದೊಂದೇ ವಿಷಯಕ್ಕೆ ಪರೀಕ್ಷೆಗೆ ಕುಳಿತು ೧೯೧೩ ರಲ್ಲಿ ಉತ್ತೀರ್ಣರಾದರು.

ಕನ್ನಡ ಪಂಡಿತರಿಗೆ ಗೌರವ

೧೯೧೩ ರಲ್ಲಿ ಮೈಸೂರು ಜಿಲ್ಲಾ ಕಚೇರಿಯಲ್ಲಿ ಗುಮಾಸ್ತರಾಗಿ ೩೫ ರೂ. ವೇತನದ ಮೇಲೆ ಆರು ತಿಂಗಳುಗಳಕಾಲ ಕೆಲಸ ಮಾಡಿದರು. ಅನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ “ಅಸಿಸ್ಟೆಂಟ್ ಮಾಸ್ಟರ್” ಎಂದು ನೇಮಕವಾದರು. ಕನ್ನಡ ವಿಭಾಗವನ್ನು ಸೇರಿದರು. ಮರುವರ್ಷ ಅವರ ಸ್ಥಾನಕ್ಕೆ “ಟ್ಯೂಟರ್” ಎಂದು ಹೆಸರು ಕೊಡಲಾಯಿತು.

ಇವತ್ತು ಕನ್ನಡ ಎಂದರೆ ಕನ್ನಡಿಗರಿಗೆ ಅಭಿಮಾನವಿದೆ. ಕನ್ನಡ ಭಾಷೆಯನ್ನು ಬೆಳಸಬೇಕು ಎಂಬ ಆಸೆ ಇದೆ. ಕನ್ನಡಕ್ಕಾಗಿ ಕೆಲಸ ಮಾಡುವವರಿಗೆ ಗೌರವ ಇದೆ. ಆದರೆ ಶಾಸ್ತ್ರಿಗಳು ಉಪಾಧ್ಯಾಯರಾಗಿ ಕೆಲಸಕ್ಕೆ ಸೇರಿದ ದಿನಗಳಲ್ಲಿ ಜನರಿಗೆ ಕನ್ನಡ ಎಂದರೆ ಹಾಸ್ಯ. “ಕನ್ನಡ ಪಂಡಿತರು” ಎಂದರೆ ಹಾಸ್ಯ. ಕಾಲೇಜಿನಲ್ಲಿ ಸಹ ಅವರಿಗೆ ಇತರ ಉಪಾಧ್ಯಾಯರಿಗೆ ಇದ್ದ ಸಂಬಳ, ಸ್ಥಾನ, ಗೌರವ ಇರಲಿಲ್ಲ. ವಿದ್ಯಾರ್ಥಿಗಳಿಗೂ ಕನ್ನಡ ಪಾಠ, ಕನ್ನಡ ಮೇಷ್ಟ್ರು ಎಂದರೆ ಅಷ್ಟು ಮರ್ಯಾದೆ ಇರಲಿಲ್ಲ.

ಇಂಥ ದಿನಗಳಲ್ಲಿ ಕೃಷ್ಣಧಾಸ್ತ್ರಿಗಳು ಕನ್ನಡಕ್ಕೆ “ಕನ್ನಡ ಪಂಡಿತ”ರಿಗೆ, ಕನ್ನಡ ತರಗತಿಗಳಿಗೆ ಗೌರವ ಸಂಪಾದಿಸಿಕೊಟ್ಟರು. ಪಾಠಕ್ಕೆ ಬಹು ಶ್ರದ್ಧೆಯಿಂದ ಸಿದ್ಧ ಮಾಡಿಕೊಳ್ಳುವರು. ಹುಡುಗರಿಗೆ ಅರ್ಥವಾಗುವ ಹಾಗೆ ಸೊಗಸಾಗಿ ಪಾಠ ಮಾಡುವರು. ಅವರ ಶ್ರದ್ಧೆ, ಶಿಸ್ತು, ಗಾಂಭೀರ್ಯ ಇವುಗಳಿಂದ ವಿದ್ಯಾರ್ಥಿಗಳಿಗೆ ಅವರಲ್ಲಿ ಗೌರವ ಮೂಡಿತು.

ಹಲವು ದೀಪಗಳನ್ನು ಹೊತ್ತಿಸಿದ ದೀಪ

ಆಗ ಸೆಂಟ್ರಲ್ ಕಾಲೇಜಿನಲ್ಲಿ ಎಲ್ಲಾ ಭಾಷೆಗಳಿಗೂ ಒಂದೊಂದು ಸಂಘ ಇತ್ತು. ಕನ್ನಡಕ್ಕೆ ಮಾತ್ರ ಇರಲಿಲ್ಲ. ಎ.ಆರ್.ಕೃ. “ಕರ್ಣಾಟಕ ಸಂಘ” ಎಂದು ಒಂದು ಕನ್ನಡ ಸಂಘವನ್ನು ಸ್ಥಾಪಿಸಿದರು,”ಕನ್ನಡ ಸಂಘ”ದ ಸಂಸ್ಥಾಪಕರು ಎ.ಆರ್.ಕೃ. ಅದರ ಮುಂದಿನ ವರ್ಷ ಅದೇ ಕನ್ನಡ ಸಂಘದಿಂದ “ಪ್ರಬುದ್ಧ ಕರ್ಣಾಟಕ” ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿದರು. “ಕರ್ಣಾಟಕ ಎಂಘ”, “ಪ್ರಬುದ್ಧ ಕರ್ಣಾಟಕ” ಎರಡೂ ಅವರ ಎರಡು ಕಣ್ಣುಗಳಂತಿದ್ದವು.

ಆ ದಿನಗಳಲ್ಲಿ “ಪ್ರಬುದ್ಧ ಕರ್ಣಾಟಕ” ವನ್ನು ನಡೆಸುವುದು ಸುಲಭವಾಗಿರಲಿಲ್ಲ. ಬರೆಯುವವರೇ ಕಡಿಮೆ. ಕನ್ನಡದಲ್ಲಿ ಬರೆಯುತ್ತಾರೆ ಎಂದರೆ ಹಾಸ್ಯ. ಇಂಗ್ಲಿಷಿನಲ್ಲಿ ಬರೆಯುವುದು ಒಂದುಗೌರವ. ಕೃಷ್ಣಶಾಸ್ತ್ರಿಗಳು ತಾವೇ ಲೇಖಕರು ಮನೆಗೆ ಹೋಗಿ ಲೇಖನಗಳನ್ನು ತರುತ್ತಿದ್ದರು. ಒಂದೊಂದು ಸಲ ತಂದ ಲೇಖನದಲ್ಲಿ ತಪ್ಪುಗಳಿರುತ್ತಿದ್ದವು. ಅವರೇ ಅವನ್ನು ತಿದ್ದುತ್ತಿದ್ದರು. ಒಮ್ಮೊಮ್ಮೆ ಸಂಚಿಕೆಗೆ ಬೇಕಾದಷ್ಟು ಲೇಖನಗಳು ಬರುತ್ತಿರಲಿಲ್ಲ. ಸರಿ, ತಾವೇ ಲೇಖನವನ್ನೊ, ವಿಮರ್ಶೆಯನ್ನೊ, ಕಥೆಯನ್ನೊ ಬರೆಯುತ್ತಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಹೊರಗಿನ ತರುಣ ಲೇಖಕರು ಇವರಿಗೆ ಪ್ರೋತ್ಸಾಹ ಕೊಟ್ಟು, ಅವರ ಸಂಕೋಚವನ್ನು ಬಿಡಿಸಿ, ಅವರ ಬರಹಗಳನ್ನು ತಂದು, ತಿದ್ದಿ, ಅಚ್ಚು ಮಾಡಿ ತಾವೂ ಸಂತೋಷಪಡುವರು. ಹಲವು ದೀಪಗಳನ್ನು ಹಚ್ಚಿದ ದೊಡ್ಡ ದೀಪ ಅವರು.

ಹಾಸ್ಯ ಮಾಡಿದರೆ !

ಹೀಗೆ ಅವರು ಸೆಂಟ್ರಲ್ ಕಾಲೇಜನಲ್ಲಿ ಟ್ಯೂಟರ್ ಆಗಿದ್ದಾಗ ತಾವೇ ಓದಿಕೊಂಡು ಎಂ.ಎ. ಪರೀಕ್ಷೆಗೆ ಕುಳಿತರು. ಪರೀಕ್ಷೆಗೆ ಮದರಾಸಿಗೆ ಹೋಗಬೇಕಾಗಿತ್ತು. ಒಂದು ಹಾಸ್ಟೆಲ್‌ನಲ್ಲಿ ಇಳಿದುಕೊಂಡಿದ್ದರು. ಊಟಕ್ಕೆ ಹೋಗುವಾಗ ಎ.ಆರ್.ಕೃ. ಷರಟು ಬಿಚ್ಚಿ ಮೇಲೆ ಮಗುಟವನ್ನು ಹೊದ್ದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ಸ್ನೇಹಿತನೊಬ್ಬನು ಲೇವಡಿಗೋಸ್ಕರ ಇಂಗ್ಲಿಷ್ ಭಾಷೆಯಲ್ಲಿ “ಕೃಷ್ಣಶಾಸ್ತ್ರಿಗಳು ಸುತ್ತ ಪವಿತ್ರವಾದ ಪ್ರಭಾವವನ್ನು ಬೀರುತ್ತಿದ್ದಾರೆ” ಎಂದ. ಶಾಸ್ತ್ರಿಗಳು ಕೂಡಲೇ ಇಂಗ್ಲಿಷಿನಲ್ಲೇ, “ನನ್ನ ಕೊಠಡಿಗೆ ಬನ್ನಿ. ನಿಮಗೆ ಸಾಕಾಗಿ ಬಿಡುವಷ್ಟು ಕಲಿಸಿಕೊಡುತ್ತೇನೆ” ಎಂದರು. ಮುಂದೆ ಯಾರೂ ಅವರನ್ನು ಲೇವಡಿ ಮಾಡಲಿಲ್ಲ. ಅವರಿಗೆ ತಮ್ಮ ವೈದಿಕ ಧರ್ಮದ ಮೇಲೆ ಅಷ್ಟು ಅಭಿಮಾನ ಇತ್ತು. ಯಾರಾದರೂ ಅದನ್ನು ಲೇವಡಿ ಮಾಡಿದರೆ ಅವರು ಸಹಿಸುತ್ತಿರಲಿಲ್ಲ.

೧೯೧೯ ರಲ್ಲಿ ಅವರಿಗೆ ಮೈಸೂರು ಓರಿಯಂಟಲ್ ಲೈಬ್ರರಿಗೆ ವರ್ಗವಾಯಿತು. “ಸಂಶೋಧನೆಯ ವಿದ್ವಾಂಸರು” ಎಂಬ ಕರೆಯಲ್ಪಟ್ಟರು. ಹೊಸ ವಿಷಯಗಳನ್ನು ಕಂಡುಹಿಡಿಯುವುದು ಮುಖ್ಯ ಕೆಲಸ, ಜೊತೆಗೆ ಲೆಕ್ಕ ಪತ್ರ ವಿವರಗಳನ್ನೂ, ಮಾರಾಟ ವಿಭಾಗಗಳನ್ನೂ ನೋಡಿಕೊಳ್ಳಬೇಕಾಯಿತು. ಆದ್ದರಿಂದ ಅವರು ಹೆಚ್ಚಿಗೆ ಸಂಶೋಧನೆ ಮಾಡಲಾಗಲಿಲ್ಲ. “ಹನ್ನೆರಡನೆಯ ಶತಮಾನದ ಜೈನರ ಗ್ರಂಥಗಳು”, “ಧರ್ಮಾಮೃತ”, “ಕೆಳದೀನೃಪ ವಿಜಯ” ಎಂಬ ಗ್ರಂಥಗಳ ಸಂಪಾದಕರಾಗಿ ಆ ಪುಸ್ತಕಗಳನ್ನು ಇತರರು ಓದಲು ಸುಲಭವಾಗುವಂತೆ ಸಿದ್ಧ ಮಾಡಿದರು.

ಬೆಂಗಳೂರಿನಲ್ಲಿ ಸರಸ್ವತಿಯ ಸೇವೆ

೧೯೨೭ ರಲ್ಲಿ ಕೃಷ್ಣಶಾಸ್ತ್ರಿಗಳು ಸೆಂಟ್ರಲ್ ಕಾಲೇಜಿಗೆ ಅಸಿಸ್ಟೆಂಟ್ ಪ್ರೋಫೆಸರ್ ಆಗಿ ಬಂದರು. ಅಲ್ಲಿ ೧೯೩೯ರ ವರೆಗೂ ಇದ್ದರು. ಆ ಕಾಲದಲ್ಲಿ “ಸಂಸ್ಖೃತ ನಾಟಕ”, “ಬಾಸಕವಿ”, “ರಾಮಕೃಷ್ಣ ಪರಮಹಂಸರು”, “ನಾಗ ಮಹಾಶಯ”, “ಸರ್ವಜ್ಞ ಕವಿ” ಮುಂತಾದ ಅನೇಕ ಮುತ್ತಿನಂತಹ ಕನ್ನಡದ ಪುಸ್ತಕಗಳನ್ನು ಬರೆದರು. ಸಂಸ್ಕೃತದಲ್ಲಿ ಸೊಗಸಾದ ನಾಟಕಗಳಿವೆ. ಭಾಸ, ಶೂದ್ರಕ, ಕಾಳಿದಾಸ ಮೊದಲಾದ ಹಿರಿಯ ನಾಟಕಕಾರರು ನೂರಾರು ವರ್ಷಗಳ ಹಿಂದೆ ಸಂಸ್ಕೃತದಲ್ಲಿ ಒಳ್ಳೆಯ ನಾಟಕಗಳನ್ನು ಬರೆದರು. ಈ ನಾಟಕಗಳ ವಿಷಯ ತಿಳಿದುಕೊಳ್ಳಲು ಕನ್ನಡದಲ್ಲಿ ಒಂದು ಒಳ್ಳೆಯ ಪುಸ್ತಕವಿರಲಿಲ್ಲ. ಐವತ್ತು ವರ್ಷಗಳ ಕೆಳಗೆ ಕೃಷ್ಣಶಾಸ್ತ್ರಿಗಳು ಬರೆದ ಪುಸ್ತಕ “ಸಂಸ್ಕೃತ ನಾಟಕ” ಇವತ್ತಿಗೂ ಬಹು ಶ್ರೇಷ್ಠ ಪುಸ್ತಕ ಎನಿಸಿಕೊಂಡಿದೆ.

ಬೆಂಗಳೂರಿನಲ್ಲಿ “ಕನ್ನಡ ಸಾಹಿತ್ಯ ಪರಿಷತ್ತು” ಎಂಬ ಸಂಸ್ಥೆ ಇದೆ. ಕನ್ನಡದ ಕೆಲಸಕ್ಕಾಗಿಯೇ ಹಿರಿಯರು ಪ್ರಾರಂಭ ಮಾಡಿದ ಸಂಸ್ಥೆ ಇದು. ಇದರ ಕಚೇರಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿದೆ. ಆ ಕಟ್ಟಡ ಕಟ್ಟುವಾಗ ಕೃಷ್ಣಶಾಸ್ತಿಗಳು ಬಿಡುವಾದಾಗಲೆಲ್ಲ ಅಲ್ಲಿಯೇ ನಿಂತು ಕೆಲಸ ಮಾಡಿಸಿದರು. ತಮ್ಮ ಸ್ವಂತ ಮನೆಯನ್ನು ಎಷ್ಟು ಶ್ರದ್ಧೆಯಿಂದ, ಎಚ್ಚರಿಕೆಯಿಂದ ಕಟ್ಟಿಸುವರೋ ಅದಕ್ಕಿಂತ ಹೆಚ್ಚು ಶ್ರದ್ಧೆ, ಎಚ್ಚರಿಗೆ ಈ ಕೆಲಸದಲ್ಲಿ.

ಒಂದೇ ಜೀವದ ಗೆಳೆಯರು

ಆಗ ಟಿ.ಎಸ್. ವೆಂಕಣ್ಣಯ್ಯ ಎಂಬ ದೊಡ್ಡ ವಿದ್ವಾಂಸರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರೂ ಕೃಷ್ಣಶಾಸ್ತ್ರಿಗಳೂ ತಂಬ ಪ್ರೀತಿಯ ಸ್ನೇಹಿತರು. ಅವರ ಅಕಾಲ ಮರಣದಿಂದ ಶಾಸ್ತ್ರಿಗಳು ೧೯೩೯ ರಲ್ಲಿ ಮೈಸೂರು ಮಹಾರಾಜ ಕಾಲೇಜಿಗೆ ಪ್ರಾಧ್ಯಾಪಕರಾಗಿ ಬಂದರು.

“ವೆಂಕಣ್ಣ, ನಾನು ಇಬ್ಬರೂ ಸೇರಿ ಕನ್ನಡಕ್ಕೆ ದುಡಿಯಬೇಕೆಂದಿದ್ದೆವು. ಆದರೆ ಸತ್ತು ಅವನ ಜಾಗದಲ್ಲಿ ನಾನು ನಿಂತು ಮಾಡಬೇಕಾಗಿದೆ” ಎಂದು ಕಣ್ಣೀರ್ಗರದರು.

ಒಮ್ಮೆ ಎ.ಆರ್.ಕೃ. ಕಾಯಿಲೆ ಮಲಗಿದರು. ಕಾಯಿಲೆ ಬಹು ಹೆಚ್ಚಾದಾಗ ವೆಂಕಣ್ಣಯ್ಯನವರು, “ದೇವರೇ, ಇದುವರೆಗೂ ನಿನ್ನನ್ನು ಇಂತಹದನ್ನು ಕೊಡು ಎಂದು ಕೇಳಿಲ್ಲ. ಈಗ ನನ್ನ ಕೃಷ್ಣನನ್ನು ಉಳಿಸಿಕೊಡು” ಎಂದು ಮೊರೆಯಿಟ್ಟರು. ಅವರ ಮೊರೆ ದೇವರಿಗೆ ಮುಟ್ಟಿತು ಅಂತ ಕಾಣುತ್ತೆ. ಎ.ಆರ್.ಕೃ. ಗುಣಮುಖರಾದರು.

ಅಷ್ಟು ಸ್ನೇಹ ಅವರಿಬ್ಬರಲ್ಲಿತ್ತು.

ವಚನ ಭಾರತ

ಕೃಷ್ಣಶಾಸ್ತ್ರಿಗಳು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿಯೇ ಕೆಲಸದಿಂದ ನಿವೃತ್ತರಾದರು.

ಅವರು ಕಾಲೇಜಿನಿಂದ ನಿವೃತ್ತರಾದರೇ ವಿನಃ ಸರಸ್ವತೀ ಸೇವೆಯಿಂದ ನಿವೃತ್ತರಾಗಲಿಲ್ಲ. “ಪ್ರಬುದ್ಧ ಕರ್ಣಾಟಕ”ಕ್ಕೆ ಅವರ ಕೆಲವು ಸಲ ಬೇರೆ ಬೇರೆ ಹೆಸರಿನಿಂದ ಕಥೆಗಳನ್ನು ಬರೆದಿದ್ದರು. ಅವನ್ನು ಸೇರಿಸಿ “ಶ್ರೀಪತಿಯ ಕಥೆಗಳು” ಎಂದು ಪ್ರಕಟಿಸಿದರು. ಅದರಲ್ಲಿ ಕೆಲವು ಸೊಗಸಾದ ಕಥಗಳಿವೆ.

“ಮಹಾಭಾರತ” ನಮ್ಮ ದೇಶದ ಒಂದು ಮಹಾಗ್ರಂಥ. ಅಷ್ಟೇ ಅಲ್ಲ, ಪ್ರಪಂಚರ ಅತಿ ಶ್ರೇಷ್ಠ ಗ್ರಂಥಗಳಲ್ಲಿ ಒಂದು. ಆದರೆ ಅದು ಇರುವುದು ಸಂಸ್ಕೃತ ಭಾಷೆಯಲ್ಲಿ. ಅಲ್ಲದೆ ಅದು ಬಹು ಉದ್ದವಾದ ಪುಸ್ತಕ. ಕನ್ನಡದಲ್ಲಿ ಹಾಗೆಯೇ ಅನುವಾದ ಮಾಡಿದರೆ ಸಾವಿರಾರು ಪುಟಗಳಾಗುತ್ತವೆ. ಕೃಷ್ಣಶಾಸ್ತ್ರಿಗಳಿಗೆ ಮಹಾಭಾರತದಲ್ಲಿ ತುಂಬ ಗೌರವ. ನಮ್ಮ ದೇಶದ ಈ ಅದ್ಭುತವಾದ ಗ್ರಂಥವನ್ನು ನಮ್ಮ ದೇಶದವರು ಸುಲಭವಾಗಿ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಅವರ ಆಸೆ. ಅದರೆ ಇಡೀ ಭಾರತದ ಮುಖ್ಯ ಭಾಗಗಳನ್ನು ಸರಳವಾದ ಕನ್ನಡದಲ್ಲಿ ಬರೆಯಬೇಕು.

ಕನ್ನಡಕುಲ ಸಾರಥಿ

ನಿವೃತ್ತರಾದ ಮೇಲೆ ಕೃಷ್ಣಶಾಸ್ತ್ರಿಗಳು ಈ ಮಹಾಕಾರ್ಯಕ್ಕೆ ಕೈ ಹಾಕಿದರು.

ಸಂಸ್ಕೃತದ ಮೂಲ ಮಹಾಭಾರತವನ್ನು ಓದಿ ಆರು ತಿಂಗಳಲ್ಲಿ ಅದನ್ನು ಕನ್ನಡದಲ್ಲಿ ಸಂಗ್ರಹವಾಗಿ ಬರೆದು ಮುಗಿಸಿದರು. ಅದೇ “ವಚನ ಭಾರತ”. ಐದು ನೂರು ಪುಟಗಳ ಪುಸ್ತಕ ಸರಳವಾದ, ಸ್ಪಷ್ಟವಾದ ಶೈಲಿ. ಸಾಮಾನ್ಯ ಜನಗಳಿಗೂ ಅರ್ಥವಾಗುವಂತಿದೆ. ಅವರು ಅದಕ್ಕೆ ಒಂದು ಪೀಠಿಕೆಯನ್ನು ಬರೆದರು. ಇದರಲ್ಲಿ ಮಹಾಭಾರತದ ಹುಟ್ಟು ಮತ್ತು ಬೆಳವಣಿಗೆ, ಅದನ್ನು ಈ ಕಾಲದಲ್ಲಿಯೂ ಏಕೆ ಓದಬೇಕು ಎಂದು ವಿವರಿಸಿದ್ದಾರೆ. ಈ ಪೀಠಿಕೆಯೇ ಒಂದು ಸೊಗಸಾದ ಅಮೂಲ್ಯ ಪುಸ್ತಕ.

“ವಚನ ಭಾರತ” ಬರೆಯುತ್ತಿದ್ದಾಗ ಅವರಿಗೆ ಅರವತ್ತು ವರ್ಷ ವಯಸ್ಸು. ಬೆಳಿಗ್ಗೆ ಹನ್ನೊಂದು ಘಂಟೆಗೆ ಬರೆಯುವುದಕ್ಕೆ ಕುಳಿದರೆ ಸಂಜೆ ಐದು ಘಂಟೆಯ ತನಕ ಏಳುತ್ತಿರಲಿಲ್ಲ. ಹೀಗೆ ಅದನ್ನು ತಪಸ್ಸಿನಂತೆ ಮಾಡುವ ಹೊತ್ತಿಗೇ ಅದನ್ನು ಆರು ತಿಂಗಳಲ್ಲಿ ಓದಿ ಬರೆದು ಮುಗಿಸುವಂತಾಯಿತು.

ಅವರು ತಮ್ಮ ಅರವತ್ತನೆಯ ವರ್ಷದಲ್ಲಿ ಷಷ್ಠಿಪೂರ್ತಿ ಶಾಂತಿ ಮಾಡಿಕೊಳ್ಳಲಿಲ್ಲ. ತಾವು ಬರೆದ “ವಚನ ಭಾರತ”ದ ನೂರ ಎಂಟು ಪ್ರತಿಗಳನ್ನೇ ತಮ್ಮ ಇಷ್ಟ ಮಿತ್ರರು, ಗುರುಗಳು, ದೊಡ್ಡವರು ಎಲ್ಲರಿಗೂ ಹಂಚಿ ಅದರಿಂದಲೂ ಸರಸ್ವತಿ ದೇವಿಯಿಂದಲೂ ಆಶೀರ್ವಾದ ಪಡೆದರು. ಅಲ್ಲಿಂದ ಮುಂದೆ ಪ್ರತಿ ಮಾಘಶುದ್ಧ ಪೂರ್ಣಿಮೆಯಂದು “ವಚನ ಭಾರತ”ವನ್ನು ದೇವರ ಮುಂದೆ ಇಟ್ಟು ಪೂಜೆ ಮಾಡುತ್ತಿದ್ದರು. ತಾವೇ ಸ್ವತಃ ರಂಗೋಲಿ, ಹೂಗಳಿಂದ ಅಲಂಕರಿಸುತ್ತಿದ್ದರು. ಪೂಜಿಸಿ ತೃಪ್ತರಾಗುತ್ತಿದ್ದರು.

“ವಚನ ಭಾರತ” ಬರೆದು ಮುಗಿಸಿದ ಸ್ವಲ್ಪ ಕಾಲದಲ್ಲೇ ತಮ್ಮ ನಿವಾಸವನ್ನು ಬೆಂಗಳೂರಿಗೆ ವರ್ಗಾಯಿಸಿದರು.

ಬೆಂಗಳೂರು ಬಸವನಗುಡಿ ಎರಡನೆಯ ರಸ್ತೆಯಲ್ಲಿ ಅವರ ಮನೆ. ಈಗ ಆ ರಸ್ತೆಗೆ ಎ.ಆರ್.ಕೃಷ್ಣಶಾಸ್ತ್ರಿಗಳ ರಸ್ತೆ ಎಂದೇ ಹೆಸರು.

ಕನ್ನಡಕ್ಕೆ ಕಥೆಗಳ ಗಣಿ

ಬೆಂಗಳೂರಿಗೆ ಬಂದ ಮೇಲೆ ಎ.ಆರ್.ಕೃ. ಬರೆದ ಮತ್ತೊಂದು ಪುಸ್ತಕ “ಕಥಾಮೃತ”. “ಬೃಹತ್ಕಥಾ ಮಂಜರಿ” “ಕಥಾಸರಿತ್ಸಾಗರ” ಎಂಬ ಸಂಸ್ಕೃತ ಪುಸ್ತಕಗಳಿಂದ ಆಯ್ದ ಕಥೆಗಳ ಸಂಗ್ರಹವೇ “ಕಥಾಮೃತ”. ಐನೂರು ಪುಟಗಳ ಪುಸ್ತಕ. ಅದರಲ್ಲಿ ಎಲ್ಲಾ ತರಹದ ಕಥೆಗಳೂ ಇವೆ. ಪ್ರಾಣಿಗಳ ಕಥೆ, ದಡ್ಡರ ಕಥೆ, ಬೇತಾಳನ ಕಥೆ, ರಾಜರಾಣಿಯರ ಕಥೆ, ಋಷಿಗಳ ಕಥೆ, ಗಂಧರ್ವರ ಕಥೆ, ಹೀಗೆ ನಾನಾ ಬಗೆಯ ಕಥೆಗಳಿವೆ. ಒಂದು ಕಥೆಯಲ್ಲಿ ಮತ್ತೊಂದು ಕಥೆ ಸೇರಿಕೊಂಡು ಒಂದಕ್ಕೊಂದು ಸರಪಣಿಯಂತಿದೆ. ಇದೇ ಆ ಪುಸ್ತಕದ ಸೊಗಸು. ಕೃಷ್ಣಶಾಸ್ತ್ರಿಗಳ ಸುಂದರ ಶೈಲಿಯಿಂದ ಕಥೆಗಳ ಆಸಕ್ತಿ ಹೆಚ್ಚುವಂತಾಗಿದೆ.

ಮತ್ತೆ ಪ್ರಾಧ್ಯಾಪಕರು

ಬೆಂಗಳೂರಿನಲ್ಲಿ ಅವರ ಮನೆಯ ಹತ್ತಿರ ಇದ್ದ ನ್ಯಾಷನಲ್ ಕಾಲೇಜಿಗೆ ಒಬ್ಬರು ಕನ್ನಡ ಪ್ರಾಧ್ಯಾಪಕರು ಬೇಕಾಗಿತ್ತು. ಎ.ಆರ್.ಕೃ. ಅವರನ್ನು ಪಾಠ ಕೇಳಿಕೊಡುವಂತೆ ಕೇಳಿಕೊಂಡರು. ಕಾಲೇಜಿನವರು ಅವರಿಗೆ ಸಂಬಳ ಕೊಡಲು ಸಿದ್ಧರಾಗಿದ್ದರು. ಆದರೆ ಎ.ಆರ್.ಕೃ. ಒಂದು ಕಾಸನ್ನೂ ತೆಗೆದುಕೊಳ್ಳದೇ ಗೌರವ ಪ್ರಾಧ್ಯಾಪಕರಾಗಿ ಎರಡು ವರ್ಷ ಕಾಲೇಜಿಗೆ ಸೇವೆ ಸಲ್ಲಿಸಿದರು. ಆಗ ಅವರಿಗೆ ಸುಮಾರು ಅರವತ್ತೈದು ವರ್ಷ ವಯಸ್ಸು. ಅವರು ಮೊದಲು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಯಾವಸ ರೀತಿ ಕಾಲೇಜಿಗೆ ಹೋಗುತ್ತಿದ್ದರೋ ಆಗಲೂ ಅದೇ ರೀತಿ ಕಾಲೇಜಿಗೆ ಹೋಗುತ್ತಿದ್ದರು. ಕನ್ನಡ ನಾಡಿನಲ್ಲಿ ಬಹು ದೊಡ್ಡ ವಿದ್ವಾಂಸರು ಅವರು. ಆದರೂ ಪ್ರತಿ ದಿನ ತರಗತಿಯಲ್ಲಿ ಏನು ಪಾಠ ಮಾಡಬೇಕು ಎಂದು ಹಿಂದಿನ ದಿನವೇ ನೋಡಿಕೊಂಡು ಅದಕ್ಕೆ ಸಿದ್ಧತೆ ಮಾಡಿಕೊಂಡು ತರಗತಿಗೆ ಹೋಗುತ್ತಿದ್ದರು. ಅಷ್ಟು ವಯಸ್ಸಾಗಿದ್ದರೂ ಅಷ್ಟು ದೊಡ್ಡ ದೊಡ್ಡ ತರಗತಿಗಳಲ್ಲಿ ಎಲ್ಲರಿಗೂ ಕೇಳಿಸುವಂತಿತ್ತು ಅವರ ಧ್ವನಿ.

ಬಂಕಿಮಚಂದ್ರ

ಅದಾದ ನಂತರ ಅವರು ಬರೆದ ಮತ್ತೊಂದು ಪುಸ್ತಕ “ಬಂಕಿಮಚಂದ್ರ”. ಎ.ಆರ್.ಕೃ. ಹೇಗೆ ಕನ್ನಡ ಸಾಹಿತ್ಯದಲ್ಲಿ ವಿದ್ವಾಂಸರೋ, ಸಾಹಿತಿಗಳೋ, ಬಂಕಿಮಚಂದ್ರ ಸಹ ಬಂಗಾಳಿ ಭಾಷೆಯಲ್ಲಿ ಅಂತಹ ಒಬ್ಬ ಸಾಹಿತಿ. ಅವರು ಬರೆದ ಕೆಲವು ಕಾದಂಬರಿಗಳನ್ನು ಬಿ. ವೆಂಕಟಾಚಾರ್ಯರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಎ.ಆರ್.ಕೃ.ಗೆ ಮೊದಲು ವಿದ್ಯಾರ್ಥಿವೇತನ ಬಂದಾಗ ಕೊಂಡದ್ದು ಬಂಕಿಮಚಂದ್ರದ “ಆನಂದಮಠ”ದ ಕನ್ನಡ ಅನುವಾದ. ಅವರು ಪ್ರಾಧ್ಯಾಪಕರಾಗಿದ್ದ ಕಾಲದಲ್ಲಿ ತರಗತಿಯಲ್ಲಿ ಅವುಗಳೆಲ್ಲಾ ಪಠ್ಯಪುಸ್ತಕಗಳಾದ್ದರಿಂದ ಅವುಗಳ ವಿಷಯವಾಗಿ ಪಾಠ ಮಾಡಬೇಕಾಗಿತ್ತು. ಆಗಲೇ ಅವರು ಬಂಗಾಳಿ ಭಾಷೆ ಕಲಿತಿದ್ದು. ಆಗ ಅವರಿಗೆ ಬಂಕಿಮ ಚಂದ್ರರ ಮತ್ತು ಅವರ ಸಾಹಿತ್ಯದ ಮೇಲೆ ಅಭಿಮಾನ ಮೂಡಿತು. ತಮ್ಮ ಅರವತ್ತೈದನೆಯ ವಯಸ್ಸಿನಲ್ಲಿ “ಬಂಕಿಮಚಂದ್ರ” ಎಂಬ ಉತ್ತಮವಾದ ಪುಸ್ತಕವನ್ನು ಬರೆದರು. ಆಗಲೂ ಸಹ ಬೆಳಿಗ್ಗೆ ಊಟ ಮಾಡಿ ಬರೆಯಲು ಕುಳಿತರೆ ಸಂಜೆ ಐದು ಘಂಟೆಯ ತನಕ ಏಳುತ್ತಿರಲಿಲ್ಲ.

ಭಾರತದಲ್ಲಿ “ಸಾಹಿತ್ಯ ಅಕಾಡೆಮಿ” ಎಂಬ ಸಂಸ್ಥೆ ಇದೆ. (ಇದರ ಕಚೇರಿ ಇರುವುದು ನವದೆಹಲಿಯಲ್ಲಿ) ಭಾರತದ ಪ್ರತಿಯೊಂದು ಭಾಷೆಯಲ್ಲಿ ನೂರಾರು ಪುಸ್ತಕಗಳು ಹೊರಕ್ಕೆ ಬರುತ್ತವೆ ಅಲ್ಲವೇ? ಅವುಗಳಲ್ಲಿ ಅತ್ಯುತ್ತಮ ಪುಸ್ತಕಗಳಿಗೆ ಸಾಹಿತ್ಯ ಅಕಾಡೆಮಿಯವರು ಬಹುಮಾನ ಕೊಡುತ್ತಾರೆ. “ಬಂಕಿಮಚಂದ್ರ” ಪುಸ್ತಕಕ್ಕಾಗಿ ಕೃಷ್ಣಶಾಸ್ತ್ರಿಗಳಿಗೆ ಬಹುಮಾನ ಸಿಕ್ಕಿತು. ಆಗ ಅವರಿಗೆ ಎಪ್ಪತ್ತು ವರ್ಷ ವಯಸ್ಸು.

ಈ ಪ್ರಶಸ್ತಿಗಳನ್ನು ದೆಹಲಿಯಲ್ಲಿ ಒಂದು ದೊಡ್ಡ ಸಮಾರಂಭದಲ್ಲಿ ಕೊಡುತ್ತಾರೆ. ಆದರೆ ಎ.ಆರ್.ಕೃ. ಅವರಿಗೆ ತುಂಬ ವಯಸ್ಸಾಗಿತ್ತು. ಅವರು ದೆಹಲಿಯ ತನಕ ಹೋಗಲು ಇಷ್ಟಪಡಲಿಲ್ಲ.

ಸಾಹಿತ್ಯ ಅಕಾಡೆಮಿಯವರೇ ಕೆಲವು ಕನ್ನಡ ಸಾಹಿತ್ಯಗಳನ್ನು ಆಹ್ವಾನಿಸಿ ಬೆಂಗಳೂರಿನಲ್ಲಿ ಎ.ಆರ್.ಕೃ. ಅವರ ಮನೆಯಲ್ಲಿಯೇ ಒಂದು ಸಮಾರಂಭವನ್ನೇರ್ಪಡಿಸಿ ಅವರಿಗೆ ಪ್ರಶಸ್ತಿ ಕೊಟ್ಟು ಗೌರವಿಸಿದರು.

ಸಭೆ, ಭಾಷಣ, ಹೊಗಳಿಕೆ, ಹಾರ ಎಂದರೆ ಶಾಸ್ತ್ರಿಗಳು ದೂರವೇ. ಯಾರಾದರೂ ಒಂದು ಭಾಷಣಕ್ಕೆ ಕರೆದರೆ ಹೋಗುತ್ತಿರಲಿಲ್ಲ. “ನಾನು ನಿವೃತ್ತನಾದ ಮೇಲೆ ಅವೆಲ್ಲಕ್ಕೂ ನಿವೃತ್ತಿಯೇ! ನಾನು ಹೇಳಬೇಕಾದ್ದನ್ನೆಲ್ಲಾ ನನ್ನ ಪುಸ್ತಕದಲ್ಲಿ ಬರೆದುಬಿಟ್ಟಿದ್ದೇನೆ. ಭಾಷಣ, ಸಭೆ ಅಂತ ನನ್ನನ್ನು ಬಲವಂತ ಮಾಡಬೇಡಿ, ಬಿಟ್ಟುಬಿಡಿ” ಎನ್ನುತ್ತಿದ್ದರು. ಪ್ರಾಧ್ಯಾಪಕರಾಗಿ ಅವರು ಹೋಗಬೇಕಾದ ಸಭೆಗಳಿಗೆ ಮಾತ್ರ ಹೋಗುತ್ತಿದ್ದರು.

ನಿರ್ಮಲ ಭಾರತೀ

ಒಂದು ದಿನ ಕೃಷ್ಣಶಾಸ್ತ್ರಿಗಳ ಮೊಮ್ಮಗಳು, ಏಳು ವರ್ಷದ ಹುಡುಗಿ ಅವರ ಹತ್ತಿರ ಬಂದಳು. ಕೈಯಲ್ಲಿ ಶಾಸ್ತ್ರಿಗಳೇ ಬರೆದ “ವಚನ ಭಾರತ”.

“ತಾತ, ನನಗೆ ಈ ಕಥೆ ಹೇಳು” ಎಂದಳು ಹುಡುಗಿ.

“ನೀನೇ ಓದಿಕೊಳ್ಳಮ್ಮ” ಎಂದರು ಶಾಸ್ತ್ರಿಗಳು.

ಮೊಮ್ಮಗಳು ಹೇಳಿದಳು: “ಇದು ತುಂಬ ದಪ್ಪ ಪುಸ್ತಕ, ತಾತ ಅಕ್ಷರ ತುಂಬ ಸಣ್ಣದು, ನನಗೆ ಓದೋದು ಕಷ್ಟ”!

ಶಾಸ್ತ್ರಿಗಳಿಗೆ ಎನ್ನಿಸಿತು. ಮಹಾಭಾರತದ ಕಥೆ ಮಕ್ಕಳಿಗೆ ತಿಳಿಯಬೇಕು. ಆದರೆ “ವಚನ ಭಾರತ” ಸಹ ಅವರ ಶಕ್ತಿಗೆ ಮೀರಿದ್ದು.

ಏನು ಮಾಡಬೇಕು?

ಮಕ್ಕಳಿಗೆ ಅರ್ಥವಾಗುವಂತೆ, ಮಹಾಭಾರತದ ಕಥೆಯನ್ನು ಸಂಕ್ಷೇಪ ಮಾಡಿ, ಸುಲಭವಾದ ಭಾಷೆಯಲ್ಲಿ ಬರೆಯಬೇಕು.

ಎಂ.ಎ. ತರಗತಿಗಳಿಗೆ ಬಹು ಕಷ್ಟವಾದ ಪುಸ್ತಕಗಳನ್ನು ಪಾಠ ಹೇಳಿದ್ದ ಅಸಾಧಾರಣ ವಿದ್ವಾಂಸರು ಕೃಷ್ಣಶಾಸ್ತ್ರಿಗಳು. ಪುಟ್ಟ ಮಕ್ಕಳಿಗಾಗಿ ಪುಸ್ತಕ ಬರೆದರೆ ಅದೇ “ನಿರ್ಮಲ ಭಾರತೀ”. ನಿರ್ಮಲ, ಭಾರತೀ ಇಬ್ಬೂ ಅವರ ಪುಟ್ಟ ಮೊಮ್ಮಕ್ಕಳು. ಅವರೂ ಅವರ ವಯಸ್ಸಿನವರೂ ಓದಿಕೊಳ್ಳುವಂತಹ ಒಂದು ಭಾರತವನ್ನು ಮೊಮ್ಮಕ್ಕಳ ಹೆಸರಿನಿಂದಲೇ ಬರೆದರು. ನಿರ್ಮಲ ಎಂದರೆ ತಿಳಿಯಾದ, ಸುಲಭವಾದ, ಭಾರತೀ ಎಂದರೆ ಮಾತು ಎಂದು ಅರ್ಥವೂ ಆಗುತ್ತದೆ. ಅಂದರೆ ಸುಲಭವಾಗಿ ಅರ್ಥವಾಗುವಂತಹ ಮಾತು ಎಂದರ್ಥವೂ ಬರುತ್ತದೆ.

ನಿಜವಾದ ಗುರು

ಒಮ್ಮೆ ಒಬ್ಬ ವಿದ್ಯಾರ್ಥಿ ತರಗತಿಗೆ ಬರುತ್ತಿರಲಿಲ್ಲ. ಆ ವಿದ್ಯಾರ್ಥಿಯನ್ನು ಕರೆಸಿ “ಏಕೆ ತರಗತಿಗೆ ಬರುತ್ತಿಲ್ಲ” ಎಂದು ಕೇಳಿದರು. ಪರೀಕ್ಷೆಗೆ ಹಣ ಕಟ್ಟಲು ಸಾಧ್ಯವಾಗಲಿಲ್ಲ. ಪರೀಕ್ಷೆಗೆ ಹಣ ಕಟ್ಟಲು ಸಾಧ್ಯವಿಲ್ಲದ್ದರಿಂದ ಹೇಗಿದ್ದರೂ ಪರೀಕ್ಷೆಗೆ ಹೋಗುವುದಕ್ಕೆ ಆಗುವುದಿಲ್ಲ. ಆದ್ದರಿಂದ ತರಗತಿಗೆ ಹಾಜರಾಗುವುದರಿಂದ ಏನು ಪ್ರಯೋಜನ ಎಂದು ಬರುತ್ತಿಲ್ಲ ಸಾರ್” ಎಂದ ಆ ವಿದ್ಯಾರ್ಥಿ.

“ಪರೀಕ್ಷೆಗೆ ಹಣವನ್ನು ನಾನು ಕೊಡುತ್ತೇನೆ”.

“ಪಾಠಗಳೆಲ್ಲಾ ತುಂಬಾ ಮುಂದೆ ಹೋಗಿಬಿಟ್ಟಿವೆ ಸಾರ್. ತರಗತಿಯಲ್ಲಿ ನಾನು ಬಂದರೂ ಈಗ ಅನುಸರಿಸುವುದು ಕಷ್ಟವಾಗುತ್ತದೆ.”

“ನೀನು ನಮ್ಮ ಮನೆಗೆ ನಿತ್ಯ ಬಾ. ನೀನೇನೂ ಹಣ ಕೊಡಬೇಡ. ನಾನು ನಿನಗೆ ಪಾಠ ಹೇಳಿಕೊಡುತ್ತೇನೆ” ಎಂದರು ಗುರುಗಳು.

ಇನ್ನು ಆ ವಿದ್ಯಾರ್ಥಿ ಏನು ತಾನೇ ಹೇಳಿಯಾನು?

ಹಣ ಮುಟ್ಟದೆ ಶಾಸ್ತ್ರಿಗಳು ಅವನಿಗೆ ಪಾಠ ಹೇಳಿಕೊಟ್ಟರು. ಅವನಿಗೆ ಪರೀಕ್ಷೆಗೆ ಹಣ ಕೊಟ್ಟರು. ಹುಡುಗ ತೇರ್ಗಡೆಯಾದ. ಮರುವರ್ಷದ ಹೊತ್ತಿಗೆ ಆ ವಿದ್ಯಾರ್ಥಿಯೂ ಒಬ್ಬ ಉಪಾಧ್ಯಾಯನಾಗಿದ್ದ.

ಆನಂತರ ಒಮ್ಮೆ ಎ.ಆರ್.ಕೃ. ಅವರ ಮನೆಗೆ ಬಂದು ಅವರು ಕೊಟ್ಟ ಹಣವನ್ನು ಹಿಂದಿರುಗಿಸಲು ನೋಡಿದ ಆ ವಿದ್ಯಾರ್ಥಿ. ಆದರೆ ಎ.ಆರ್.ಕೃ. ಅವರು “ನೀನು ಹೇಗಿದ್ದರೂ ಮೇಷ್ಟ್ರೇ ಆಗಿದ್ದೀ, ನೀನೂ ಯಾರಾದರೂ ಒಬ್ಬ ವಿದ್ಯಾರ್ಥಿ ಕಷ್ಟದಲ್ಲಿದ್ದಾಗ ಹೀಗೆ ಸಹಾಯ ಮಾಡು. ಆಗ ನನಗೇ ಬಂದಂತೆ ಆಗುತ್ತದೆ” ಎಂದು ಬಿಟ್ಟರು. ಆ ವಿದ್ಯಾರ್ಥಿ ತಂದಿದ್ದ ಹಣವನ್ನು ಕೈಯಲ್ಲಿ ಮುಟ್ಟಲೂ ಇಲ್ಲ. ಹಣ ತೀರಿಸಲು ಬಂದು ವಿದ್ಯಾರ್ಥಿ ಅವರ ಆಶೀರ್ವಾದವನ್ನು ಪಡೆದು ಹೊರಟ.

ಹೀಗೆ ಶಾಸ್ತ್ರಿಗಳು ಎಷ್ಟೋ ಜನ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದರು. ಪ್ರತಿಯಾಗಿ ಏನನ್ನೂ ನಿರೀಕ್ಷಿಸುತ್ತಿರಲೇ ಇರಲಿಲ್ಲ. ತಾವು ಮಾಡಿದ ಉಪಕಾರದ ವಿಷಯ ಮಾತೂ ಆಡುತ್ತಿರಲಿಲ್ಲ. ಉಪಕಾರ ಪಡೆದವರು, ಎ.ಆರ್.ಕೃ. ಇಬ್ಬರಿಗೇ ಗೊತ್ತಿರುತ್ತಿತ್ತು ಅವರು ಮಾಡಿದ ಉಪಕಾರದ ವಿಷಯ.

ಒಮ್ಮೆ ಇಬ್ಬರು ವಿದ್ಯಾರ್ಥಿಗಳು ಒಂದು ಜೊತೆ ಪಂಚೆ, ಒಂದು ಸೋರೆ, ಕುಪ್ಪಸದ ಖಣ ತಂದು ಎ.ಆರ್.ಕೃ.ಗೆ ಪಂಚೆ ಕೊಟ್ಟು ನಮಸ್ಕಾರ ಮಾಡಿ ಆಶೀರ್ವಾದ ಬೇಡಿದರು. ಅಡಿಗೆ ಮನೆಗೆ ಹೋಗಿ ಶಾಸ್ತ್ರಿಗಳ ಪತ್ನಿಗೆ ಸೀರೆ ಮತ್ತು ಖಣ ಕೊಟ್ಟು ಬಂದರು. ಗುರುಗಳಿಗೆ ಕಾಣಿಕೆ ತಲುಪಿಸಿದೆವು ಎಂದು ಅವರಿಗೆ ಸಂತೋಷವೇ ಸಂತೋಷ. ಆಗ ಎ.ಆರ್. ಕೃ. ತಮ್ಮ ಕೈಯಲ್ಲಿದ್ದ ಎರಡು ಪಂಚೆಗಳನ್ನು ಒಬ್ಬೊಬ್ಬರಿಗೆ ಒಂದೊಂದನ್ನು ಕೊಟ್ಟು, “ನೀವು ಕೊಟ್ಟ ಉಡುಗೊರೆ ನನಗೆ ಬಂತು. ಈಗ  ನಿಮ್ಮಿಬ್ಬರಿಗೂ ನನ್ನ ಆಶೀರ್ವಾದ ಉಡುಗೊರೆ ಕೊಡುತ್ತಿದ್ದೇನೆ. ತೆಗೆದುಕೊಳ್ಳಿ” ಎಂದರು. ಆಗ ಶ್ರೀಮತಿ ಎ.ಆರ್.ಕೃ. ಅವರು “ನಾನು ಸೀರೆ, ಖಣ ತೆಗೆದುಕೊಂಡು ಬಿಟ್ಟೆನಲ್ಲಾ” ಎಂದಾಗ “ನೀನು ಕೊಟ್ಟಿದ್ದರೂ ಅವರು ಸೀರೆ ಉಡುವಂತಿರಲಿಲ್ಲ. ಆದ್ದರಿಂದ ನೀನೇ ಉಟ್ಟುಕೋ” ಎಂದರು.

"ಯಾರಾದರೂ ವಿದ್ಯಾರ್ಥಿ ಕಷ್ಟದಲ್ಲಿದ್ದಾಗ ಸಹಾಯ ಮಾಡು. ಹಣ ನನಗೆ ಬಂದ ಹಾಗೆಯೇ"

ಹೀಗೆ ಅವರು ಉಪಕಾರ ಮಾಡುತ್ತಿದ್ದರೇ ವಿನಃ ಪ್ರತ್ಯುಪಕಾರವನ್ನು ಸ್ವೀಕರಿಸುವುದಿರಲಿ, ಅಪೇಕ್ಷಿಸುತ್ತಿರಲೂ ಇಲ್ಲ!

ಅಭಿವಂದನೆಗ್ರಂಥ ಸಮರ್ಪಣೆ

ಅವರ ವಿದ್ಯಾರ್ಥಿಗಳು, ಸ್ನೇಹಿತರು ಎಲ್ಲರೂ ಸೇರಿ ಎ.ಆರ್.ಕೃ. ಗೆ ಮರ್ಯಾದೆ ಮಾಡಬೇಕು. ಎಂದು ಉಡುಗೊರೆ ಕೊಡಬೇಕು ಎಂದು ಯೋಚಿಸಿದರು. ಅವರಿಗೆ ಪುಸ್ತಕವೆಂದರೆ ಪ್ರಾಣ, ಪುಸ್ತಕವೇ ಪೂಜೆ. ಆದ್ದರಿಂದ ಪುಸ್ತಕ ರೂಪದಲ್ಲಿ ಉಡುಗೊರೆ ಕೊಟ್ಟರೆ ಖಂಡಿತ ಅವರು ನಿರಾಕರಿಸುವುದಿಲ್ಲ. ಆದ್ದರಿಂದ ನಾವೆಲ್ಲ ಸೇರಿ ಒಂದು ಪುಸ್ತಕ ಬರೆದು, ಒಂದು ಸಮಾರಂಭವನ್ನೇರ್ಪಡಿಸಿ, ಅವರನ್ನು ಗೌರವಿಸಿ, ಆ ಪುಸ್ತಕವನ್ನು ಉಡುಗೊರೆಯಾಗಿ ಕೊಡುವುದೇ ಸರಿ ಎಂದು ತೀರ್ಮಾನಿಸಿದರು. ಅದೇ “ಅಭಿನಂದನೆ” ಪುಸ್ತಕ.

ಅವರ ಊಹೆಯಂತೆ ಎ.ಆರ್.ಕೃ. ಅದನ್ನು ನಿರಾಕರಿಸಲಿಲ್ಲ. ಮೈಸೂರು ಕ್ರಾಫರ್ಡ್‌ ಹಾಲ್‌ನಲ್ಲಿ ಸಮಾರಂಭವನ್ನು ಏರ್ಪಡಿಸಿದ್ದರು. ಅವರ ಕೊರಳಿಗೆ ಬಿದ್ದ ಹಾರಗಳಲ್ಲಿ ಎ.ಆರ್. ಕೃ. ಮುಚ್ಚಿಹೋಗಿದ್ದರು. ತಮ್ಮ ಶಿಷ್ಯರ ಮತ್ತು ಮಿತ್ರರ ಅಭಿಮಾನಗಳಿಂದ ಎ.ಆರ್.ಕೃ. ಕಣ್ಣುಗಳು ಆನಂದಬಾಷ್ಪದಿಂದ ತುಂಬಿ ತುಖುಕಾಡಿದುವು.

ಕಡೆಯ ಕೃತಿನಿಬಂಧಮಾಲಾ

“ನಿಬಂಧಮಾಲಾ” ಅವರ ಕರೆಯ ಕೃತಿ. ಇದನ್ನು ಪ್ರಾರಂಭಿಸಿದಾಗ ಅವರಿಗೆ ಎಪ್ಪತ್ತ ಮೂರು ವರ್ಷ. ಭಾರತದ ಸಾಹಿತ್ಯ ಅಕಾಡೆಮಿಯವರು ಬಂಗಾಳಿ ಸಾಹಿತಿ ರವೀಂದ್ರನಾಥ ಠಾಕೂರ್ ಅವರ ಜೀವನ ಚರಿತ್ರೆ, ಅವರ ಕೃತಿಗಳು, ಅವುಗಳ ವಿಮರ್ಶೆಯನ್ನು ಬರೆದುಕೊಡುವಂತೆ ಕೇಳಿಕೊಂಡರು. ಶಾಸ್ತ್ರಿಗಳಿಗೆ ಕನ್ನಡ, ಬಂಗಾಳಿ ಎರಡೂ ಭಾಷೆಗಳೂ ಚೆನ್ನಾಗಿ ಬರುತ್ತಿದ್ದವು. ಆಗಲೇ ಬಂಕಿಮಚಂದ್ರರನ್ನು ಕುರಿತು ಸೊಗಸಾದ ಪುಸ್ತಕ ಬರೆದಿದ್ದರು. ಆದುದರಿಂದ ಸಾಹಿತ್ಯ ಅಕಾಡೆಮಿಯವರು ಅವರಿಗೇ ಈ ಕೆಲಸವನ್ನು ಒಪ್ಪಿಸಿದರು. ಶಾಸ್ತ್ರಿಗಳು ಒಪ್ಪಿಕೊಂಡರು. ಆದರೆ ಕಡೆಯ ಎರಡು ಪ್ರಬಂಧಗಳನ್ನು ಮುಗಿಸಲು ಅವರಿಗೆ ಆಗಲೇ ಇಲ್ಲ.

ಮನೆಯಲ್ಲಿ ಜನಗಳೂ ಆಳುಕಾಳುಗಳೂ ಇದ್ದರೂ ಅವರಿಗೆ ತಮ್ಮ ಕೆಲಸವನ್ನು ತಾವೇ ಮಾಡಿಕೊಂಡರೇ ತೃಪ್ತಿ. ಎಪ್ಪತ್ತಮೂರನೆಯ ವಯಸ್ಸಿನಲ್ಲೂ ಹಾಗೆಯೇ. ಬೆಳಿಗ್ಗೆ ಐದು ಘಂಟೆಗೆ ಎದ್ದು ಸ್ನಾನಕ್ಕೆ ನೀರು ಕಾಯಿಸುವರು. ವ್ಯಾಯಾಮ ಮಾಡುವರು. ಒಂದು ಘಂಟೆ ಕಾಲ ತಿರುಗಾಡಿಕೊಂಡು ಮನೆಗೆ ಬರುವ ಹೊತ್ತಿಗೆ ಎಂಟು ಘಂಟೆ ಆಗಿರುತ್ತಿತ್ತು. ತಮ್ಮ ಬಟ್ಟೆಗಳನ್ನೆಲ್ಲಾ ತಾವೇ ಸೋಪಿನ ನೀರಿನಲ್ಲಿ ನೆನೆಸಿ ಸ್ನಾನ ಮಾಡುವರು. ಮನೆಯ ಅಂಗಳದ ತುಂಬಾ ತಾವೇ ಬೆಳೆಸಿದ್ದ ಹೂವಿನ ಗಿಡಗಳಿಂತ ತೃಪ್ತಿ ಆಗುವಷ್ಟು ಹೂವುಗಳನ್ನು ಬಿಡಿಸಿ ತಂದು ದೇವರನ್ನು ಚೆನ್ನಾಗಿ ಅಲಂಕರಿಸಿ ಪೂಜೆ ಮಾಡಿ ಸಂತೋಷ ಪಡುವರು. ಅನಂತರ ಅಂಗಡಿಗೆ ಹೋಗಿ ಮನೆಗೆ ಬೇಕಾದ ಸಾಮಾನುಗಳನ್ನು ತಂದು ಹಾಕುವ ಹೊತ್ತಿಗೆ ಹನ್ನೊಂದು ಘಂಟೆ ಆಗಿರುತ್ತಿತ್ತು. ತಮ್ಮ ಬಟ್ಟೆಯನ್ನು ತಾವೇ ಚೆನ್ನಾಗಿ ಒಗೆದುಕೊಂಡು ಒಣಗಿ ಹಾಕುವರು. ಅವರು ಬಟ್ಟೆ ಒಗೆದರೆ ಬಟ್ಟೆ ಚೊಕ್ಕಟವಾಗಿ ಶುಭ್ರವಾಗಿರುತ್ತಿತ್ತು. ಅದರಲ್ಲಿ ಒಂದು ಸುಕ್ಕು ಸಹ ಇರುತ್ತಿರಲಲ್ಲ. ಮನೆಯಲ್ಲಿ ನಲ್ಲಿ ಇದ್ದರೂ ಬಾವಿಯಿಂದ ನೀರು ಸೇದಿ ಗಿಡಗಳಿಗೆಲ್ಲಾ ಹಾಕುತ್ತಿದ್ದರು. ಅದು ಒಳ್ಳೆಯ ವ್ಯಾಯಾಮ ಎಂದು ಅವರ ಅಭಿಪ್ರಾಯ. ಅನಂತರ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ಊಟ ಆದ ನಂತರ ಹದಿನೈದು ನಿಮಿಷ ಅಡ್ಡಾಡಿ ವಿಶ್ರಾಂತಿ ಪಡೆದು “ನಿಬಂಧಮಾಲಾ” ಬರೆಯುವುದಕ್ಕೆ ಕುಳಿತುಕೊಳ್ಳುತ್ತಿದ್ದರು. ಮಧ್ಯಾಹ್ನ ನಾಲ್ಕು ಘಂಟೆಯ ತನಕ ಮೇಲೇಳುತ್ತಿರಲಿಲ್ಲ. ನಾಲ್ಕು ಘಂಟೆಗೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ ಸಂಜೆ ಆರು ಘಂಟೆಯ ತನಕ ಅಲ್ಲಿದ್ದ ಒಬ್ಬ ಬಂಗಾಳಿ ಸ್ವಾಮಿಜಿ ಹತ್ತಿರ ತಮಗೆ ಇದ್ದ ಬಂಗಾಳಿ ಭಾಷೆಯ ಸಂಶಯಗಳನ್ನೆಲ್ಲ ಚರ್ಚೆ ಮಾಡುವುದು. ಆರು ಘಂಟೆಗೆ ಮನೆಗೆ ಬಂದು, ಮತ್ತೆ ತಿರುಗಾಡಲು ಹೋಗುವುದು. ಬೆಳಿಗ್ಗೆ ಊಟ ಮಾಡಿದರೆ ರಾತ್ರಿ ಊಟದ ವರೆಗೆ ಏನನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಇಷ್ಟು ಕಟ್ಟು ನಿಟ್ಟಿನ ಜೀವನ ಅವರದು.

ಅವರು ಬರೆಯುತ್ತಿದ್ದಾಗ “ಇದು ಕರಡು ಪ್ರತಿ, ಇದು ಉತ್ತಮ ಪ್ರತಿ” ಎಂದು ಎರಡೆರಡು ಸಲ ಬರೆದವರೇ  ಅಲ್ಲ! ಏನು ಬರೆಯಬೇಕೆಂಬುದನ್ನು ಮೊದಲೇ ಮನಸ್ಸಿನಲ್ಲಿ ಬರೆದುಕೊಂಡು ಬಿಡುತ್ತಿದ್ದರು. ಆಮೇಲೆ ಕಾಗದದ ಮೇಲೆ ಬರೆಯುವುದಕ್ಕೆ ಆರಂಭಿಸಿದರೆ ಅಕ್ಷರ ಮುತ್ತು ಪೋಣಿಸಿದಂತೆ- ಒಂದು ಚಿತ್ತಾಗಲೀ ಬರೆದು ಹೊಡೆದದ್ದಾಗಲೀ ಅವರ ಹಸ್ತಪ್ರತಿಯಲ್ಲಿ ಕಾಣಬರುತ್ತಿರಲಿಲ್ಲ. ಅವರ ಹಸ್ತಪ್ರತಿಯೇ ಒಂದು ಅಚ್ಚಾದ ಪುಸ್ತಕದಂತಿರುತ್ತಿತ್ತು.

“ನಿಬಂಧಮಾಲಾ” ಬರೆಯುವಾಗಲೇ ಅವರ ಆರೋಗ್ಯ ಕೆಟ್ಟಿತ್ತು. ಒಂದು ಬಾರಿ ತೊಡೆಯ ಮೂಳೆ ಮುರಿದು ಆಸ್ಪತ್ರೆಯಲ್ಲಿರಬೇಕಾಯಿತು. ಮತ್ತೆ ಓಡಾಡುವಂತೆ ಚೇತರಿಸಿಕೊಂಡರು. ಆದರೂ ತಾವು ಏನೂ ಕೆಲಸ ಮಾಡುವ ಹಾಗಿಲ್ಲ ಎಂದು ಅವರಿಗೆ ಬೇಸರ, ಕೊರಗು. ೧೯೬೮ರ ಫೆಬ್ರವರಿ ಒಂದರಂದು ಅವರು ತೀರಿಕೊಂಡರು. ಆಗ ಅವರಿಗೆ ಎಪ್ಪತ್ತೆಂಟು ವರ್ಷ ವಯಸ್ಸು.

ಹೂವಿನಂತೆ ಮೃದು ಮನಸ್ಸು

ಎ.ಆರ್.ಕೃ. ಅವರು ನೋಡುವುದಕ್ಕೆ ವಜ್ರದಷ್ಟು ಕಠಿಣ ಎನ್ನಿಸಿದರೂ ಹೃದಯ ಮಾತ್ರ ಕುಸುಮದಂತೆ ಮೃದುವಾಗಿತ್ತು. “ವಚನ ಭಾರತ” ಬರೆಯುತ್ತಿದ್ದ ಕಾಲ. ವಿರಾಟ ಪರ್ವದಲ್ಲಿ ದ್ರೌಪದಿ ಕೀಚನ ಕೈಯಿಂದ ತಪ್ಪಿಸಿಕೊಂಡು ಬರುತ್ತಾಳೆ. ಅವರು ಬರುವ ವೇಳೆಗೆ ಅಡಿಗೆ ಭಟ್ಟನ ವೇಷದಲ್ಲಿದ್ದ ಭೀಮ ತಿಂದು, ಉಂಡು ಗೊರಕೆ ಹೊಡೆಯುತ್ತಿರುತ್ತಾನೆ. ಅದನ್ನು ನೋಡಿದ ದ್ರೌಪದಿಗೆ ದುಃಖ, ಕೋಪ ಎಲ್ಲ ಒಟ್ಟಿಗೆ ಬರುತ್ತದೆ. ಭೀಮನನ್ನು ತಿವಿದು  ಎಬ್ಬಿಸಿ ತನ್ನ ದುಃಖವನ್ನು ಅವನ ಮುಂದೆ ತೋಡಿಕೊಳ್ಳುತ್ತಾಳೆ. ಭೀಮನ ಎದುರು ತನ್ನ ದುಃಖವನ್ನು ತೋಡಿಕೊಂಡು ಅಳುವ ಸನ್ನಿವೇಶವನ್ನು ಬರೆಯುವಾಗ ಶಾಸ್ತ್ರಿಗಳು ಅತ್ತುಬಿಟ್ಟಿದ್ದರು. ಇನ್ನೊಮ್ಮೆ ಬೆಂಗಳೂರು ಆಕಾಶವಾಣಿ ಕೇಂದ್ರದವರು ಕಾಳಿದಾಸನ ಶಾಕುಂತಲಾ ನಾಟಕದ ಬಗ್ಗೆ ಭಾಷಣಕ್ಕೆ ಏರ್ಪಡು ಮಾಡಿದ್ದರು. ದುಷ್ಯಂತನ ಆಸ್ಥಾನ. ತುಂಬು ಗರ್ಭಿಣಿ ಶಕುಂತಲೆ ದುಷ್ಯಂತನ ಎದುರಿಗೆ ಬಂದು ನಿಂತಾಗ ಅವನು “ನೀನು ಯಾರೋ ನನಗೆ ಗೊತ್ತಿಲ್ಲ” ಎನ್ನುತ್ತಾನೆ. ಶಕುಂತಲೆ ದುಃಖದಿಂದ “ಭೂಮಿತಾಯಿ, ನೀನು ಇಲ್ಲೇ ಬಾಯ್ತೆರೆದು ನನ್ನನ್ನು ನುಂಗಬಾರದೇ” ಎಂದು ಅಳುತ್ತಾಳೆ ಆ ವಾಕ್ಯವನ್ನು ಹೇಳುವಾಗ ಎ.ಆರ್.ಕೃ. ಅವರ ಕಂಠ ಬಿಗಿದುಕೊಂಡು ಗದ್ಗದವಾಗಿತ್ತು.

ಶ್ರದ್ಧೆ, ಶಿಸ್ತು

ಅವರಿಗೆ ಎಷ್ಟೇ ಕೆಲಸವಿರಲಿ, ತಮ್ಮ ನಿತ್ಯಕರ್ಮವನ್ನು ಚಾಚೂತಪ್ಪದೆ ಮಾಡುತ್ತಿದ್ದರು. ಗಡಿಯಾರ ಮುಳ್ಳಿನಂತೆ ಒಂದೇ ಸಮನೆ ಮಾಡುತ್ತಿದ್ದರು. ಅವರು ಮೈಸೂರಿನಲ್ಲಿದ್ದಾಗ ಆಗಾಗ್ಗೆ ಬೆಂಗಳೂರಿಗೆ ತಮ್ಮ ಕೆಲಸಕ್ಕೆ ಸಂಬಂಧಿಸಿದ ಸಭೆಗೆ ಬರಬೇಕಾಗಿತ್ತು. ಆ ದಿನ ಬೆಳಗಿನ ಜಾವ ಇನ್ನೂ ಕತ್ತಲೆಯಾಗಿದ್ದಾಗಲೇ ನಾಲ್ಕು ಘಂಟೆಗೆಲ್ಲಾ ಎದ್ದು ಕತ್ತಲೆಯಲ್ಲೇ ಸಿಕ್ಕಿದಷ್ಟು ಹೂವು ಬಿಡಿಸಿ, ಸ್ನಾನ, ಪೂಜೆ ಮಾಡಿ ಬೆಳಿಗ್ಗೆ ಮೊದಲ ರೈಲಿಗೆ ಹೊರಟು ಹೊತ್ತಿಗೆ ಸರಿಯಾಗಿ ಬೆಂಗಳೂರು ತಲುಪುತ್ತಿದ್ದರು.

ಅವರಿಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್, ಬಂಗಾಳಿ, ತಮಿಳು, ತೆಲುಗು, ಹಿಂದಿ ಭಾಷೆಗಳು ಚೆನ್ನಾಗಿ ತಿಳಿದಿದ್ದುವು. ಫ್ರೆಂಚ್, ಜರ್ಮನ್, ಉರ್ದು ಮುಂತಾದ ಭಾಷೆಗಳನ್ನೂ ಅಭ್ಯಾಸ ಮಾಡಿದ್ದರು.

ಪುಸ್ತಕದ ಅಚ್ಚಿನ ವಿಷಯದಲ್ಲಿಯೂ ಅವರದು ಬಹು ಶ್ರದ್ಧೆ. ಅವರ ಪುಸ್ತಕಗಳಿಗೆ ವಿತ್ರಗಳನ್ನು ಬರೆದು ಕೊಡುತ್ತಿದ್ದ ಕಲಾವಿದರ ಮನೆ ಅವರ ಮನೆಯಿಂದ ಆರು ಮೈಲಿ ದೂರ. ಅರವತ್ತು-ಎಪ್ಪತ್ತು ವರ್ಷ ವಯಸ್ಸಾದಾಗಲೂ ಶಾಸ್ತ್ರಿಗಳು ಅವರ ಮನೆಗೆ ಒಂದು ಸಲ ಅಲ್ಲ, ನಾಲ್ಕು ಸಲ ಹೋಗುವರು. ಚಿತ್ರ ಹೇಗಿರಬೇಕು ಎಂದು ವಿವರಿಸುವರು. ಚಿತ್ರ ಚೆನ್ನಾಗಿ ಬಂದಾಗ ಬಾಯ ತುಂಬ ಹೊಗಳುವರು. ಅವರ “ಬಂಕಿಮಚಂದ್ರ: ಪುಸ್ತಕದ ಅಚ್ಚು, ಹೊರ ರೂಪ ಎಲ್ಲ ಸೊಗಸಾಗಿವೆ ಎಂದು ಅದಕ್ಕೆ ಬಹುಮಾನ ಬಂದಿತ್ತು!

ಶಾಸ್ತ್ರಿಗಳು ಎಲ್ಲದರಲ್ಲಿಯೂ ಶಿಸ್ತಿನಿಂದ ನಡೆಯುವರು. ಏನೇ ಮಾಡಲಿ ಅಚ್ಚುಕಟ್ಟಾಗಿ ಮಾಡುವರು. ಬಟ್ಟೆ ಶುಭ್ರತೆ, ಶಿಸ್ತು. ಕನ್ನಡ ಪ್ರಾಧ್ಯಾಪಕರು, ಜೊತೆಗೆ ಮಹಾರಾಜ ಕಾಲೇಜಿನಲ್ಲಿ ವ್ಯಾಯಾಮಶಾಲೆಯಲ್ಲಿ ಬೋಧಕರು. ಹುಡುಗರೊಡನೆ ಸೇರಿ ಅವರಿಗೆ ಸರಿಸಮನಾಗಿ ವ್ಯಾಯಾಮ ಮಾಡುತ್ತಿದ್ದರು. ಪಾಠ ಹೇಳಲಿ, ಭಾಷಣ ಮಾಡಲಿ ಸಿದ್ಧತೆ ಇಲ್ಲದೆ ಎದ್ದು ನಿಲ್ಲುವವರೇ ಅಲ್ಲ. ಹೇಳುವುದನ್ನು ಸ್ಪಷ್ಟವಾಗಿ, ಮನಸ್ಸಿಗೆ ತಟ್ಟುವ ಹಾಗೆ ಹೇಳುವರು. ಆದರೆ ಬಳಸುವ ಶಬ್ಧಗಳು ಬಹಳ ಕಡಿಮೆ. ಇತರರು ಹತ್ತು ಮಾತುಗಳಲ್ಲಿ ಹೇಳುವುದನ್ನು ನಾಲ್ಕೇ ಮಾತುಗಳಲ್ಲಿ ಶಕ್ತಿಯುತವಾಗಿ ಹೇಳುವರು. ಅವರ ವಿದ್ಯಾರ್ಥಿಗಳಲ್ಲದವರೂ ಅವರ ಪಾಠ ಕೇಳಲು ಹೋಗಿ ಕುಳಿತುಕೊಳ್ಳುತ್ತಿದ್ದರಂತೆ.

ಕನ್ನಡಕುಲ ಸಾರಥಿ

ಕನ್ನಡ ಎಂದರೆ ಜನಕ್ಕೆ ತಿರಸ್ಕಾರವಿದ್ದ ಕಾಲದಲ್ಲಿ, ಕನ್ನಡ ಅಧ್ಯಾಪಕರು ಇತರ ಅಧ್ಯಾಪಕರಿಗಿಂತ ಒಂದು ಮೆಟ್ಟಲು ಕಡಿಮೆ ಎಂದು ಸರ್ಕಾರದವರೂ ವಿದ್ಯಾರ್ಥಿಗಳೂ ಭಾವಿಸುತ್ತಿದ್ದ ಕಾಲದಲ್ಲಿ ಕನ್ನಡ “ಅಸಿಸ್ಟೆಂಟ್ ಮಾಸ್ಟರ್” ಎಂದು ಕೆಲಸಕ್ಕೆ ಸೇರಿದರು ಶಾಸ್ತ್ರಿಗಳು. ಅವರನ್ನು “ಟ್ಯೂಟರ್” ಎಂದು ಸಹ ಮೊದಲು ಕರೆಯಲಿಲ್ಲ. ಅವರ ಪಾಂಡಿತ್ಯ, ಅವರು ಪಾಠ ಹೇಳುತ್ತಿದ್ದ ರೀತಿ, ಅವರ ಗಾಂಭೀರ್ಯ, ಶಿಷ್ಯದಲ್ಲಿ ಅವರ ಪ್ರೇಮ ಇವುಗಳಿಂದ ಕನ್ನಡ ಅಧ್ಯಾಪಕರಿಗೆ ಗೌರವವನ್ನು ತಂದು ಕೊಟ್ಟರು. ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದು, ಬರೆಯುವುದು ದೊಡ್ಡಸ್ತಿಕೆ; ಕನ್ನಡದಲ್ಲಿ ಬರೆಯುವುದು, ಮಾತನಾಡುವುದು ವಿದ್ಯಾವಂತರಿಗೆ  ಅವಮಾನ ಎನ್ನುವ ಕಾಲದಲ್ಲಿ ಕನ್ನಡದ ಕೆಲಸ ಮಾಡಿದರು.ಇತರರಿಂದ ಮಾಡಿಸಿದರು. ಸಾಹಿತ್ಯವನ್ನು ಓದುವ ವಿದ್ಯಾರ್ಥಿಗಳಿಗೆ, ವಿದ್ಯಾಂಸರಿಗೆ ಸಹಾಯವಾಗುವಂತೆ “ಸಂಸ್ಕೃತ ನಾಟಕ”, “ಭಾಸ” ಮೊದಲಾದ ಪುಸ್ತಕಗಳನ್ನು ಬರೆದರು. ಸಾಮಾನ್ಯ ಓದುಗರಿಗೆ “ವಚನ ಭಾರತ” ಕೊಟ್ಟರು. ಮಕ್ಕಳ ಕೈಯಲ್ಲಿ “ನಿರ್ಮಲ ಭಾರತೀ” ಇಟ್ಟರು. ವಿದ್ಯಾರ್ಥಿಗಳಿಗೆ ಪಾಠ ಹೇಳಿ ಜ್ಞಾನ ಬೆಳೆಸಿದರು. ತಮ್ಮ ಶುದ್ಧವಾದ ಶಿಸ್ತಿನಿಂದ ಜೀವನದಿಂದ ಮೇಲ್ಪಂಕ್ರಿಯಾದರು. ಬಿಡುಗೈಯಿಂದ ಸಹಾಯ ಮಾಡಿ ಆಪದ್ಭಾಂಧವರಾದರು. ಚಪ್ಪಾಳೆ, ಹಾರ, ಬಿರುದು ಬಾವಲಿ ಯಾವುದನ್ನೂ ಬಯಸಲಿಲ್ಲ. ಆದರೂ ಕೀರ್ತಿ ಅವರನ್ನು ಹುಡುಕಿಕೊಂಡು ಬಂದಿತು. ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು (೧೯೪೧); ೧೯೬೦ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ “ಡಾಕ್ಟರೇಟ್” ಕೊಟ್ಟಿತು; ಅದೇ ಸುಮಾರಿಗೆ ಸಾಹಿತ್ಯ ಅಕಾಡೆಮಿಯ ಬಹುಮಾನವೂ ಬಂದಿತು.

ಇವರನ್ನು “ಕನ್ನಡಕುಲ ಸಾರಥಿ”, “ಕನ್ನಡಕುಲ ಗುರು” ಹೀಗೆಲ್ಲ ಅವರ ಶಿಕ್ಷರು, ಜೊತೆಯ ಬರಹಗಾರರು ಕರೆದದ್ದು ಆಶ್ವರ್ಯವಲ್ಲ.

ಬಹು ದೊಡ್ಡ ಬರಹಗಾರರು ಕೃಷ್ಣಶಾಸ್ತ್ರಿಗಳು. ಬಹು ಹಿರಿಯ ಬಾಳು ಅವರದು.