ಮನೆತನ : ಶ್ರೀ ಎ. ಆರ್. ಪುಟ್ಟಾಚಾರ್ಯ ಅವರು ಬೆಂಗಳೂರು ಜಿಲ್ಲೆ ಅನೇಕಲ್ ತಾಲೂಕು ಆಡೇಸೊಂಡಟ್ಟಿಗ್ರಾಮದಲ್ಲಿ ಯಕ್ಷಗಾನ ಮತ್ತು ಆಯುರ್ವೇದ ಹಿನ್ನೆಲೆಯ ಕುಟುಂಬದಿಂದ ಬಂದವರು

ಶಿಕ್ಷಣ : ಆರಂಭದಲ್ಲಿ ತಂದೆಯಂತೆ ಯಕ್ಷಗಾನದಲ್ಲಿ ತಮ್ಮನ್ನು ಅರ್ಪಿಸಿಕೊಂಡ ಶ್ರೀಯುತರು. ನಂತರ ತಂದೆಯವರ ಪ್ರೇರಣೆಯಿಂದಲೇ ಕಥಾಕೀರ್ತನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಅನಂತರ ಸುಮಾರು ನಾಲ್ಕೂವರೆ ದಶಕಗಳಿಂದ ಕರ್ನಾಟಕದಾದ್ಯಂತ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದರು. ನೆರೆಯ ತಮಿಳುನಾಡಿನಿಂದಲೂ ಕಥಾಕೀರ್ತನ ಕಾರ್ಯಕ್ರಮ ನೀಡಲು ಪುಟ್ಟಾಚಾರ್ಯರು ಆಹ್ವಾನ ಪಡೆದಿದ್ದಾರೆ.

ಕ್ಷೇತ್ರ ಸಾಧನೆ : ಸರ್ವಧರ್ಮ ಸಮನ್ವಯತೆ, ಸಮಾಜ ಸುಧಾರಣೆ ಮುಂತಾದವುಗಳು ಪುಟ್ಟಾಚಾರ್ಯರ ಕಥಾಕೀರ್ತನದ ವಸ್ತುಗಳು, ಜಾತೀಯತೆ, ಅಸ್ಪೃಶ್ಯತೆ, ವರದಕ್ಷಿಣೆ ಮುಂತಾದ ಸಮಾಜಘಾತುಕ ಆಚರಣೆಗಳ ವಿರುದ್ಧ ತಮ್ಮ ಕಥಾಕೀರ್ತನೆಗಳ ಮೂಲಕ ಧ್ವನಿ ಎತ್ತಿದ ನಿಜವಾದ ಸಾಮಾಜಿಕ ಕಾರ್ಯಕರ್ತರು ಪುಟ್ಟಾಚಾರ್ಯರು ಅಲ್ಲದೆ ಕುಟುಂಬ ಕಲ್ಯಾಣ ಯೋಜನೆ, ವನ ಸಂರಕ್ಷಣೆ, ವನ್ಯ ಪ್ರಾಣಿ ಸಂರಕ್ಷಣೆ ಮುಂತಾದ ಸಮಾಜಮುಖಿ ವಿಷಯಗಳನ್ನೂ ಪುಟ್ಟಾಚಾರ್ಯರು ತಮ್ಮ ಕಥಾಕೀರ್ತನ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳುತ್ತಾರೆ.

ಸುಮಾರು ಐದೂವರೆ ದಶಕಗಳಿಂದ ಪುಟ್ಟಾಚಾರ್ಯರು ಸುಮಾರು ಆರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ ಆಕಾಶವಾಣಿ ಮತ್ತು ದೂರದರ್ಶನಗಳೂ ಶ್ರೀಯುತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ. ಜೊತೆಗೆ ಪುಟ್ಟಾಚಾರ್ಯರು ತಮ್ಮ ಕಥಾಕೀರ್ತನದ ಹಲವು ಧ್ವನಿಸುರುಳಿಗಳನ್ನು ಹೊರತಂದಿರುವುದು ವಿಶೇಷ. ಅಲ್ಲದೇ ’ಜಗದ್ಗುರು ವೀರಬ್ರಹ್ಮೇಂದ್ರಸ್ವಾಮಿಗಳ ಜೀವನ ಚರಿತ್ರೆ’, ’ಧ್ಯಾನದೀಕ್ಷಾ ವಿಧಾನ’, ’ಯೋಗದರ್ಶನ’ ಎಂಬ ಮೂರು ಕೃತಿಗಳನ್ನು ರಚಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಶ್ರೀ ಎ. ಆರ್. ಪುಟ್ಟಾಚಾರ್ಯ ಅವರಿಗೆ ೨೦೦೫-೦೬ರ ಸಾಲಿನ ಗೌರವ ಪ್ರಶಸ್ತಿ ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸನ್ಮಾನಿಸಿದೆ.