ಕಲಾವಿದರನೇಕರ ಏಳು-ಬೀಳುಗಳು ಪತ್ರಕರ್ತರ ವಿಮರ್ಶಕರ ನವಿರಾದ ಅಥವಾ ಮೊನಚಾದ ಲೇಖನಿಯನ್ನೇ ಅವಲಂಬಿಸಿರುತ್ತವೆ ಎಂದರೆ ಅತಿಶಯೋಕ್ತಿಯಲ್ಲ, ಇಂತಹ ಪ್ರಬಲ ಮಾಧ್ಯಮದ ಸಬಲ ಪ್ರತಿನಿಧಿ ಈಶ್ವರಯ್ಯನವರು ಜನಿಸಿದ್ದು ಕಾಸರಗೋಡು ತಾಲ್ಲೂಕಿನ ಕುಂಬಳೆಯ ಸಮೀಪದ ಅನಂತಪುರದಲ್ಲಿ, ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನಲ್ಲಿ ಆಂಗ್ಲ ಭಾಷಾ ಸಾಹಿತ್ಯದಲ್ಲಿ ಪದವಿ ಪಡೆದವರು.

ಕನಾಟಕ ಸಂಗೀತ ಪಿಟೀಲು, ಕೊಳಲು, ಕೀಬೋರ್ಡಗಳಲ್ಲಿ ಪರಿಶ್ರಮ ಪಡೆದಿರುವ ಈಶ್ವರಯ್ಯನವರ ಆಸಕ್ತಿ ಸಾಹಿತ್ಯದೊಡನೆ ಸಂಗೀತ, ಭರತನಾಟ್ಯ, ಯಕ್ಷಗಾನ, ಛಾಯಾಚಿತ್ರ ಗ್ರಹಣಗಳಿಗೂ ವ್ಯಾಪಿಸಿದೆ. ತಮಗಿರುವ ಸಂಗೀತ-ಸಾಹಿತ್ಯ ಕ್ಷೇತ್ರಗಳಲ್ಲಿನ ಒಡನಾಟದಿಂದ ಹಲವಾರು ಯಶಸ್ವಿ ಶಿಕ್ಷಣ ಶಿಬಿರಗಳನ್ನು ನಡೆಸಿದ್ದಾರೆ.

ಉದಯವಾಣಿ ಪತ್ರಿಕೆಯಲ್ಲಿ ‘ಲಲಿತರಂಗ’ (ಈಗ ಕಲಾ ವಿಹಾರ) ಎಂಬ ಶೀರ್ಷಿಕೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿದವರು. ‘ತುಷಾರ’ ಮಾಸಪತ್ರಿಕೆಗಾಗಿಯೂ ಕೆಲಸ ಮಾಡಿದ್ದಾರೆ. ‘ಪ್ರಮಾಣ’, ಅವಸಾನ’ ಮತ್ತು ‘ಸರಸ’ ಅವರ ಲೇಖನಿ ಮೂಡಿಸಿರುವ ಕಥಾ ಸಂಕಲನಗಳು ಹಾಗೂ ಯಶಸ್ವೀ ಕೃತಿಗಳು. ಉದಯವಾಣಿ ಪತ್ರಿಕೆಯ ಶುಕ್ರವಾರದ ‘ಕಲಾ ವಿಹಾರ’ ಅಂಕಣದ ಮೂಲಕ ಅವರು ಕೈಗೊಂಡ ಕಲಾಪ್ರಚಾರ ಅನುಸರಣೀಯ. ದಕ್ಷಿಣ ಕನ್ನಡದ ಯಾವುದೇ ಕಲಾ ಮಾಧ್ಯಮದ ಕಾರ್ಯಕ್ರಮವಿರಲಿ ಅಲ್ಲಿ ಈಶ್ವರಯ್ಯನವರ ಪಾತ್ರ ಅತ್ಯಗತ್ಯ. ಇಂತಹ ಜನಾರಣೆ ಪಡೆದಿರುವ ಶ್ರೀಯುತರು ಮಾಡುತ್ತಿರುವ ಸಂಗೀತ ಕಾರ್ಯಕ್ರಮಗಳ ವಿಮರ್ಶೆ ಉದಯೋನ್ಮುಖ ಕಲಾವಿದರಿಗೆ ದಾರಿದೀಪವಾಗಿದೆ.

ಇಷ್ಟು ಗಾಢವಾಗಿ ಕಲಾ ಪ್ರಪಂಚದಲ್ಲಿ ಪತ್ರಕರ್ತರ ವಲಯದಲ್ಲಿ ತೊಡಗಿಸಿಕೊಂಡಿರುವ ಈಶ್ವರಯ್ಯನವರಿಗೆ ತಂದಿರುವ ಗೌರವ ಸನ್ಮಾನಗಳೂ ಲೆಕ್ಕವಿಲ್ಲದಷ್ಟು ಇವರ ಸೇವೆಯನ್ನು ಗುರುತಿಸಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೊಡನೆ ಇವರನ್ನು ಗೌರವಿಸಿದೆ.

ಇಂದಿನ-ಹಿಂದಿನ ತಲೆಮಾರುಗಳ ಕಲಾವಿದರ ಬಗ್ಗೆ, ಕಛೇರಿಗಳ ನಡಾವಳಿಯ ಬಗ್ಗೆ, ಆಕಾಶವಾಣಿ- ದೂರದರ್ಶನದಂತಹ ಮಾಧ್ಯಮಗಳ ಬಗ್ಗೆ, ಧ್ವನಿಸುರುಳಿ -ಅಡಕಚಕ್ರಗಳ ಬಗ್ಗೆ, ಕಲಾವಿದರಿಗೆ ದೊರಕುತ್ತಿರುವ ಮಾನ್ಯತೆಯ ಬಗ್ಗೆ, ಸಂಗೀತ ವಿಮರ್ಶೆಯ ಬಗ್ಗೆ – ಇವರ ವಿಮರ್ಶಾತ್ಮಕ ವಿಚಾರಧಾರೆ ಸಾಧಾರ ಸಾರಪೂರ.