ಪಿಟೀಲು ವಿದ್ವಾಂಸರಾಗಿದ್ದ ಎ.ಎಸ್‌. ಶಿವರುದ್ರಪ್ಪನವರು ೩೦.೩.೧೮೯೨ ಬೆಂಗಳೂರು ಸಮೀಪದ ಆನೇಕಲ್‌ನಲ್ಲಿ ಜನಿಸಿದರು. ಅಲ್ಲೇ ಕೆಲವು ವರ್ಷಗಳು ವಾಸವಾಗಿದ್ದರು. ಬಡತನಕ್ಕೆ ಸಿಲುಕಿ ಚಿಕ್ಕವಯಸ್ಸಿನಲ್ಲೇ ಭಿಕ್ಷಾಟನೆಯಿಂದ ಜೀವಿಸಬೇಕಾದ ಪರಿಸ್ಥಿತಿ ಒದಗಿತು. ಇವರು ಹುಟ್ಟು ಕುರುಡರು. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ ಇದ್ದ ಇವರು ತಮ್ಮ ಸಂಗೀತಾಭ್ಯಾಸವನ್ನು ಪಿಟೀಲು ವಿದ್ವಾನ್‌ ಮುನಿಶಂಕರಪ್ಪನವರಲ್ಲಿ ಆರಂಭಿಸಿದರು. ಅವರಲ್ಲಿ ಕೆಲವು ವರ್ಣಗಳು ಮತ್ತು ಕೀರ್ತನೆಗಳನ್ನು ಕಲಿತರು. ಮುಂದೆ ಮೈಸೂರಿನಲ್ಲಿರುವ ಕುರುಡ, ಮೂಗರ ಶಾಲೆಗೆ ಸೇರುವ ಇಚ್ಛೆಯಿಂದ ಮೈಸೂರಿಗೆ ಬಂದರು. ಮೈಸೂರಿನಲ್ಲೂ ಭಿಕ್ಷಾಟನೆಯಿಂದಲೇ ಒಂದೆರಡು ವರ್ಷ ಜೀವಿಸಬೇಕಾಯಿತು. ಶಾಲೆಯ ಶಿಕ್ಷಣ ಕ್ರಮ ಹಿಡಿಸದಿದ್ದ ಕಾರಣ ಯಾರಾದರೂ ಒಳ್ಳೆಯ, ಹಿರಿಯ ವಿದ್ವಾಂಸರಲ್ಲಿ ಸಂಗೀತ ಕಲಿಯಬೇಕೆಂಬ ಹಂಬಲ ತೀವ್ರವಾಯಿತು.

ಈ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಪ್ರಭುಗಳು ಆಳುತ್ತಿದ್ದರು. ಪ್ರಭುಗಳು ನಿತ್ಯವೂ ತಮ್ಮ ಕುಲದೇವತೆ ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ಹೋಗುತ್ತಿದ್ದರು. ಶಿವರುದ್ರಪ್ಪನವರು ಪ್ರಭುಗಳ ಸಮಯ ತಿಳಿದು ದೇವಸ್ಥಾನದ ಬಳಿ ಹಾಡುತ್ತಾ ಕುಳಿತಿದ್ದರಂತೆ. ಈ ದೃಶ್ಯವನ್ನು ಕಂಡ ಪ್ರಭುಗಳು ಬಾಲಕನನ್ನು ಮಾತನಾಡಿಸಿ ಅರಮನೆಗೆ ಬರಮಾಡಿಕೊಂಡರು ಮತ್ತು ಅರಮನೆ ಬಿಡದಿಯಲ್ಲೇ ಊಟಕ್ಕೆ ಅನುಕೂಲ ಮಾಡಿಕೊಟ್ಟರು. ಅರಮನೆಯ ಖಾಸ ಸಮ್ಮುಖದಲ್ಲಿಯೇ ಮೈಸೂರು ಸಹೋದರರ ತೀರ್ಥರೂಪರು ವಿದ್ವಾನ್‌ ರಾಮಯ್ಯನವರು ಶಿವರುದ್ರಪ್ಪನವರ ಊಟ ತಿಂಡಿ ಇತರ ಸಂಗತಿಗಳನ್ನು ಗಮನಿಸುತ್ತಿದ್ದರು.

ಈ ಅಂಧ ಬಾಲಕನಲ್ಲಿದ್ದ ಸಂಗೀತಾಸಕ್ತಿ ಮತ್ತು ಕಷ್ಟ ಪರಿಸ್ಥಿತಿಗಳನ್ನು ಅರಿತ ಪ್ರಭುಗಳು ಇವನಿಗೆ ಆಕಾಲದಲ್ಲೇ ಹಿರಿಯ ಸಂಗೀತ ವಿದ್ವಾಂಸರಾಗಿದ್ದ ಬಿಡಾರಂ ಕೃಷ್ಣಪ್ಪ ಅವರಲ್ಲಿ ಸಂಗೀತ ಕಲಿಯಲು ಅನುಕೂಲ ಮಾಡಿಕೊಟ್ಟರು. ಅಂಧ ಬಾಲಕನ ಮೇಲೆ ಕೃಪೆ ತೋರಿ ವಿದ್ವಾನ್‌ ಬಿಡಾರಂರವರು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಪಿಟೀಲು ವಾದನದಲ್ಲಿ ಪ್ರೌಢಶಿಕ್ಷಣವನ್ನಿತ್ತರು. ಶಿವರುದ್ರಪ್ಪನವರು ಸೇರುವುದಕ್ಕೆ ಮುಂಚೆಯೇ, ಇವರಿಗಿಂತ ಎರಡು ವರ್ಷ ಕಿರಿಯರಾದ ಟಿ. ಚೌಡಯ್ಯನವರು ಬಿಡಾರಂರವರಲ್ಲಿ ಪಿಟೀಲು ಅಭ್ಯಾಸಮಾಡುತ್ತಿದ್ದು, ಗುರುಗಳಿಗೆ ಪಕ್ಕವಾದ್ಯ ನುಡಿಸುತ್ತಿದ್ದರಂತೆ. ಶಿವರುದ್ರಪ್ಪನವರೂ ಸಹ ಗುರುಗಳ ಅಣತಿಯಂತೆ ಗುರುಗಳಿಗೆ ಪಕ್ಕವಾದ್ಯ ನುಡಿಸುತ್ತಿದ್ದರು. ಇವರು ಗುರುಗಳಂತೆಯೇ ಶುದ್ಧವಾಗಿ ಪಿಟೀಲು ನುಡಿಸುತ್ತಿದ್ದರು. ಒಳ್ಳೆಯ ಪಾಂಡಿತ್ಯ ಗಳಿಸಿಕೊಂಡರು. ಇವರಲ್ಲಿ ತುಂಬಾ ಅಭಿಮಾನವಿದ್ದ ನಾಲ್ವಡಿಯವರು ೧೯೨೬ರಲ್ಲಿ ೧೦ ರೂ ವೇತನದ ಜೊತೆಗೆ ದಿನಭತ್ಯೆಯನ್ನು ನೀಡಿ ಫಿಡಲ್‌ಬಾಯ್‌ (Fiddle boy) ಎಂದು ನೇಮಕ ಮಾಡಿಕೊಂಡರು.

ಕಾಲಕ್ರಮೇಣ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡರು. ಪ್ರಭುಗಳ ಆಸ್ಥಾನದಲ್ಲಿದ್ದ ಎಲ್ಲಾ ವಿದ್ವಾಂಸರಿಗಿಂತ ಕಿರಿಯ ವಯಸ್ಸಿನ ಆಸ್ಥಾನ ವಿದ್ವಾಂಸ ಹಾಗೂ ಎಲ್ಲರಿಗಿಂತ ದೀರ್ಘಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು.

ನಾಲ್ವಡಿ ಪ್ರಭುಗಳ ನಂತರ ಪಟ್ಟಕ್ಕೆ ಬಂದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರೂ ತಮ್ಮ ದೊಡ್ಡಪ್ಪನವರಂತೆ ಅದೇ ಅಭಿಮಾನದಿಂದ ಶಿವರುದ್ರಪ್ಪನವರಿಗೆ ಮಾಹೆಯಾನ ೮೦ ರೂ.ಗಳನ್ನು ನೀಡಿದ್ದೇ ಅಲ್ಲದೆ ಅವರ ಕುಟುಂಬವು ವಾಸಿಸಲು ಸೀತಾವಿಲಾಸ ಛತ್ರದಲ್ಲಿ ಮನೆಯನ್ನು ನೀಡಿ ಅನುಕೂಲ ಮಾಡಿಕೊಟ್ಟರು. ಇಂದಿಗೂ ಆ ಮನೆಯಲ್ಲಿ ಇವರ ಸಾಕುಮಗ ವಾಸಿಸುತ್ತಿರುವರು. ಅಲ್ಲದೆ ಶಿವರುದ್ರಪ್ಪನವರಿಗೆ ಖಾಸ್‌ ಬಿಡದಿಯಲ್ಲೇ ಪ್ರತಿನಿತ್ಯದ ಭೋಜನ ವ್ಯವಸ್ಥೆಯಾಗಿತ್ತು.

ಹೀಗೆ ನಿತ್ಯವೂ ವಿರ್ದ್ವಾ ರಾಮಯ್ಯನವರೂ ಶಿವರುದ್ರಪ್ಪನವರೂ ಭೇಟಿಯಾಗುತ್ತಿದ್ದರು. ಪ್ರತಿನಿತ್ಯ ಕಾಶಿಪತಿಲಾಯದಲ್ಲಿದ್ದ ವಿದ್ವಾನ್‌ ರಾಮಯ್ಯನವರ (ಮೈಸೂರು ಸಹೋದರರ ತಂದೆಯವರು) ಮನೆಗೆ ಶಿವರುದ್ರಪ್ಪನವರು ಬರುತ್ತಿದ್ದರು. ಈ ಬಾಂಧವ್ಯದಿಂದ, ಮೈಸೂರು ಸಹೋದರರಾದ ದಿ.ವಿದ್ವಾನ್‌ ರಾ. ಚಂದ್ರಶೇಖರಯ್ಯ ಮತ್ತು ವಿದ್ವಾನ್‌ ರಾ. ಸೀತಾರಾಮ್‌ರವರು ದ್ವಂದ್ವ ಗಾಯನ ಕಚೇರಿ ನಡೆಸುತ್ತಿದ್ದರೂ ಶಿವರುದ್ರಪ್ಪನವರ ಒತ್ತಾಯದಿಂದ ಅವರಲ್ಲಿಗೆ ಹೋಗುತ್ತಿದ್ದರು. (೧) ಪಾಶ್ಚಾತ್ಯ ಸಂಗೀತದಲ್ಲೂ ಆಸಕ್ತರಾಗಿದ್ದ ನಾಲ್ವಡಿಯವರು ಶಿವರುದ್ರಪ್ಪನವರಿಗೆ ಹಾರ್ನ್‌ಫಿಡಲನ್ನು (Horn Violin) ಪಾಶ್ಚಾತ್ಯದೇಶದಿಂದ ತರಿಸಿಕೊಟ್ಟಿದ್ದರು. ಶಿವರುದ್ರಪ್ಪನವರು ಅದರಲ್ಲೂ ಪ್ರಾವಿಣ್ಯತೆ ಪಡೆಯುವಂತೆ ಪ್ರೋತ್ಸಾಹಿಸುತ್ತಿದ್ದರು ಪ್ರಭುಗಳು. ಯಾವಾಗಲೂ ಆ ಪಿಟೀಲಿನಲ್ಲೇ ನುಡಿಸುತ್ತಿದ್ದ ಶಿವರುದ್ರಪ್ಪನವರ ವಾದನದೊಂದಿಗೆ ಮೈಸೂರು ಸಹೋದರರು ಹಾಡುತ್ತಿದ್ದರು.(೨) ಶಿವರುದ್ರಪ್ಪನವರು ಅನೇಕ ವಿದ್ವಾಂಸರಿಗೆ ಪಿಟೀಲು ಪಕ್ಕವಾದ್ಯ ನುಡಿಸುತ್ತಿದ್ದರು. ಆ ಕಾಲದಲ್ಲಿ ಮೈಸೂರಿನಲ್ಲಿ ಪಿಟೀಲು ವಾದಕರು ಹೆಚ್ಚಾಗಿ ಇರದಿದ್ದುದು ಕಾರಣವಿರಬಹುದು.

ಶಿವರುದ್ರಪ್ಪನವರು ಸಾಧನೆ ಮಾಡುತ್ತಿದ್ದಾಗ ಒಮ್ಮೆಮ್ಮೆ ಗಾಢ ತನ್ಮಯತೆಯಿಂದಾಗಿ ನುಡಿಸುವುದು ತಾನೇ ತಾನಾಗಿ ನಿಂತು ಹೋಗುತ್ತಿದ್ದು ಸ್ವಲ್ಪ ಹೊತ್ತಿನ ನಂತರ ಪುನಃ ಸ್ಮರಣೆ ಬಂದು ನುಡಿಸುವುದನ್ನು ಕಣ್ಣಾರೆ ಕಂಡ ವಿದ್ವಾನ್‌ ಆರ್. ಸೀತಾರಾಮ್‌ ತಿಳಿಸಿದ್ದಾರೆ. ಇದೇ ಸ್ಥಿತಿ ಶಿವರುದ್ರಪ್ಪನವರ ಗುರುಗಳಾದ ಬಿಡಾರಂ ಕೃಷ್ಣಪ್ಪನವರಲ್ಲೂ ಆಗುತ್ತಿತ್ತಂತೆ.

ಶಿವರುದ್ರಪ್ಪನವರಿಗೆ ಹಾಡುಗಾರಿಕೆಯೂ ತಿಳಿದಿತ್ತು. ಯಾರು ಚೆನ್ನಾಗಿ ಹಾಡಿದರೂ ಅವರ ಬಳಿ ಹೋಗಿ ಮಾತನಾಡಿಸಿ ಅವರನ್ನು ಪ್ರೋತ್ಸಾಹಿಸುತ್ತಿದ್ದರು.

ಇವರು ಬಹಳವಾಗಿ ಮೆಚ್ಚಿಕೊಂಡಿದ್ದ ಪಿಟೀಲು ವಿದ್ವಾಂಸರೆಂದರೆ ಪಿಟೀಲು ಟಿ. ಚೌಡಯ್ಯನವರು. ಇವರನ್ನು ಬಿಟ್ಟರೆ ವಿದ್ವಾನ್‌ ದ್ವಾರಂ ವೆಂಕಟಸ್ವಾಮಿ ನಾಯ್ದುರವರು. ನಾಯ್ದುರವರ ಪಿಟೀಲು ವಾದನದ ಧ್ವನಿಮುದ್ರಿಕೆ ಇವರಲ್ಲಿತ್ತು. ಅದರಲ್ಲಿ ವೀಣೆಯನ್ನು ಪಕ್ಕವಾದ್ಯಕ್ಕೆ ಹಾಕಿಕೊಂಡ ಧೀರ ಇವರೊಬ್ಬರೇ ಎಂದು ಶ್ಲಾಘಿಸುತ್ತಿದ್ದರಂತೆ. ಯಾರಲ್ಲಿಯೂ ತಪ್ಪು ಹುಡುಕುವ ಸ್ವಭಾವದವರಲ್ಲ. ಸದಾ ಹಸನ್ಮುಖಿ. ಯಾವ ರಾಜಕೀಯಕ್ಕೂ ಪ್ರವೇಶಿಸಿದವರಲ್ಲ.

ಶಿವರುದ್ರಪ್ಪನವರದ್ದು ಗೋಧಿ ಮೈ ಬಣ್ಣ, ಸುಮಾರು ಐದುವರೆ ಅಡಿ ಎತ್ತರ. ದಪ್ಪವಿಲ್ಲದ ದೃಢ ಶರೀರ. ನೀಳ ಕೂದಲು! ಅವರ ಪತ್ನಿಯಿಂದ ಕೇಶರಾಶಿಯನ್ನು ಬಾಚಿಸಿಕೊಳ್ಳುತ್ತಿದ್ದರಂತೆ. ಹಣೆಯಲ್ಲಿ ವಿಭೂತಿ, ಜರೀಪೇಟ, ತುಂಬು ಕಾಲರಿನ ನಿಲುವಂಗಿ, ಬಿಳೀ ಕಚ್ಚೆಪಂಚೆ, ಯಾವಾಗಲೂ ಕಣ್ಣಿಗೆ ತಂಪು ಕನ್ನಡಕ. ಅರಮನೆಗೆ ಹೋಗುವಾಗ ಬಿಳಿಷರಾಯಿ ಮತ್ತು ಕೋಟಿನ ಮೇಲೆ ಒಂಬತ್ತು ಮೊಳದ ಜರೀವಲ್ಲಿ ಹಾಕುತ್ತಿದ್ದರು. ಸ್ಥಳೀಯ ಕಚೇರಿಗಳಿಗೆ ಹೋಗುವಾಗ ಕೆಲವೊಮ್ಮೆ ಎರಡು ಮೂರು ಮೆಡಲ್‌ಗಳನ್ನು ಹಾಕಿಕೊಂಡು ಹೋಗುತ್ತಿದ್ದರಂತೆ. ಸದಾ ಎಲೆ ಅಡಿಕೆ ಹಾಕುವ ಅಭ್ಯಾಸ.

ಇವರಿಗೆ ಗುರುಗಳಾದ ಬಿಡಾರಂ ಕೃಷ್ಣಪ್ಪನವರಲ್ಲಿ ಅಪಾರ ಭಕ್ತಿ. ಗುರುಗಳಂತೆಯೇ ಇವರು ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯಾದಾನ ಮಾಡಿರುವರು.

ಕಚೇರಿಗಳು: ಶಿವರುದ್ರಪ್ಪನವರ ಮೊದಲ ಕಚೇರಿಯು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸಮ್ಮುಖದಲ್ಲಿ ನಡೆಯಿತು.

ಒಮ್ಮೆ ಬನಾರಸ್‌ ಹಿಂದೂ ವಿಶ್ವವಿದ್ಯಾಲಯಕ್ಕೆ ನಾಲ್ವಡಿ ಪ್ರಭುಗಳು ಭಾಷಣ ನೀಡಲು ಹೋಗಬೇಕಾಯಿತು. ಆಗ ಪ್ರಭುಗಳು ಜೊತೆಯಲ್ಲಿ ಶಿವರುದ್ರಪ್ಪನವರನ್ನು ಕರೆದುಕೊಂಡು ಹೋದರು. ಬನಾರಸ್‌ನಲ್ಲಿ ಪಂಡಿತ್‌ ಮದನಮೋಹನ ಮಾಳವೀಯ ಅವರ ಅಧ್ಯಕ್ಷತೆಯಲ್ಲಿ ಪಿಟೀಲು ವಾದನ ಕಚೇರಿ ನಡೆಸಿದರು.

ಚಿತ್ರದುರ್ಗ, ಕೊಲ್ಹಾಪುರ, ಮದರಾಸು, ಹುಬ್ಬಳ್ಳಿ, ಬೆಂಗಳೂರು, ಬೊಂಬಾಯಿ, ಮೈಸೂರು ಮುಂತಾದ ಸ್ಥಳಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಸಂಸ್ಥೆಗಳಾದ ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್‌ ಮುಂತಾದೆಡೆ ಪಿಟೀಲು ತನಿ ಕಚೇರಿಗಳನ್ನು, ಅನೇಕ ಹಿರಿಯ ವಿದ್ವಾಂಸರಿಗೆ ಪಕ್ಕವಾದ್ಯವನ್ನು ನುಡಿಸಿದ್ದಾರೆ. ಇವರ ಪಿಟೀಲು ಕಾರ್ಯಕ್ರಮ ಆಕಾಶವಾಣಿಯಿಂದಲೂ ಬಿತ್ತರಗೊಳ್ಳುತ್ತಿತ್ತು. ಮೈಸೂರಿನಲ್ಲಿ ನಡೆಯುತ್ತಿದ್ದ ರಾಮೋತ್ಸವ, ಗಣೇಶೋತ್ಸವ, ಹನುಮಂತೋತ್ಸವಗಳಲ್ಲಿ ತನಿಕಚೇರಿಗಳೇ ಅಲ್ಲದೆ ಪಕ್ಕವಾದ್ಯವನ್ನೂ ನುಡಿಸಿದ ಕೀರ್ತಿ ಇವರದ್ದು.

ಪ್ರಶಸ್ತಿಬಿರುದುಗಳು: ಇವರ ಪಾಂಡಿತ್ಯಕ್ಕೆ ಅನೇಕ ಬಿರುದುಗಳು ಮತ್ತು ಸನ್ಮಾನಗಳು ದೊರಕಿದ್ದವು. ಅವುಗಳೆಂದರೆ ಬನಾರಸ್‌ ಹಿಂದೂ ವಿದ್ಯಾಲಯ-ಸ್ವರ್ಣಪದಕ ಮತ್ತು ‘ಪಿಟೂಲುವಾದನ ವಿಶಾರದ’-,೧೯೬೮-ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೭೧-ಕರ್ನಾಟಕ ಗಾನಕಲಾ ಪರಿಷತ್‌ ಸನ್ಮಾನ, ೧೯೮೩-ಅಕಾಡೆಮಿ ಆಫ್‌ ಮ್ಯೂಸಿಕ್‌, ಬೆಂಗಳೂರು ಚೌಡಯ್ಯ ಸ್ಮಾರಕ ಪ್ರಶಸ್ತಿ, ೧೯೯೨-ಹೊನ್ನಪ್ಪ ಭಾಗವತರ್ ಟ್ರಸ್ಟ್‌ ಬೆಂಗಳೂರು-‘ಸಂಗೀತ ಕಲಾ ಶಿರೋಮಣಿ’.