೪-೧೧-೧೯೨೯ ರಂದು ಮೈಸೂರಿನಲ್ಲಿ ಜನಿಸಿದವರು ಪದ್ಮ. ಇವರು ಎಂ.ಜೆ. ಶ್ರೀನಿವಾಸ ಐಯ್ಯಂಗಾರ್ ಹಾಗೂ ಡಾ|| ದೊರೆಸ್ವಾಮಿ ಐಯ್ಯಂಗಾರ್ ಅವರುಗಳಲ್ಲಿ ಶಿಕ್ಷಣ ಪಡೆದು ಸತತ ಅಭ್ಯಾಸದ ಮೂಲಕ ಶ್ರೇಷ್ಠ ವೀಣಾ ವಾದಕಿಯರ ಸಾಲಿಗೆ ಸೇರುವವರಾಗಿದ್ದಾರೆ. ಇವರು ಬಿ.ಎ. ಪದವೀಧರರೂ ಸಹ.

ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ ಮೈಸೂರು ಅರಮನೆ ದರ್ಬಾರ್ ಸಭಾಂಗಣದಿಂದ ಮೊದಲುಗೊಂಡು ನಾಡಿನ ಹೊರ ನಾಡಿನ ಪ್ರಮುಖ ಸ್ಥಳ-ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಆಕಾಶವಾಣಿ – ದೂರದರ್ಶನ ಕೇಂದ್ರಗಳಿಂದಲೂ ಇವರ ವಾದನ ಪ್ರಸಾರವಾಗುತ್ತಿರುತ್ತದೆ. ಅನೇಕ ಪಂಚವೀಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಮೈಸೂರು ಲಲಿತ ಕಾಲ ಕಾಲೇಜಿನಲ್ಲಿ ವೀಣೆಯ ಉಪನ್ಯಾಸಕರಾಗಿ, ಮೈಸೂರು ಆಕಾಶವಾಣಿಯ ನಿಲಯದ ಕಲಾವಿದರಾಗಿ ಇವರು ಸಲ್ಲಿಸಿರುವ ಸೇವೆ ಅಪಾರ. ಮೈಸೂರಿನ ಶ್ರೀ ವಿದ್ಯಾಧರಸ್ವಾಮಿಗಳು ನೀಡಿದ ‘ವೈಣಿಕ ಪ್ರವೀಣೆ’ ಬಿರುದು ಸೇರಿದಂತೆ ಹಲವಾರು ಸಂಸ್ಥೆಗಳ, ಸಂಘಗಳ ಸನ್ಮಾನಗಳಿಗೆ ಇವರು ಪಾತ್ರರು. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಇವರಿಗೆ ಸಂದಿದೆ.

ಹಲವಾರು ವಿದ್ಯಾರ್ಥಿಗಳು ಇವರ ವಿದ್ಯೆಯ ಪ್ರಯೋಜನ ಪಡೆಯುತ್ತಿದ್ದಾರೆ.