ಗಾನವಿಶಾರದ ಬಿಡಾರಂ ಕೃಷ್ಣಪ್ಪನವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಶಿವರುದ್ರಪ್ಪನವರು ಜನಿಸಿದ್ದು ಬೆಂಗಳೂರಿನ ಸಮೀಪದಲ್ಲಿರುವ ಆನೇಕಲ್ನಲ್ಲಿ, ೧೮೯೨ರಲ್ಲಿ ಜನ್ಮಾಂಧರಾಗಿ ಜನಿಸಿದ ಇವರ ಮೊದಲ ಗುರುಗಳು ಮುನಿಶಂಕರಪ್ಪ.

ಉನ್ನತ ಸಂಗೀತಾಭ್ಯಾಸ ಪಡೆಯುವ ಆಸೆಯಿಂದ ಮೈಸೂರಿಗೆ ಬಂದ ಇವರು ಭಿಕ್ಷಾವೃತ್ತಿಯಿಂದಲೇ ಜೀವನಯಾತ್ರೆ ನಿರ್ವಹಿಸಬೇಕಾದ ಪರಿಸ್ಥಿತಿಯಿತ್ತು. ಚಾಮುಂಡಾಂಬೆಯ ದರ್ಶನಕ್ಕೆ ದಯಮಾಡಿಸಿದ ಪ್ರಭು ಕೃಷ್ಣರಾಜ ಒಡೆಯರ ಗಮನ ದೇವಾಲಯದ ಮುಂದೆ ಕುಳಿತು ಹಾಡುತ್ತಿದ್ದ ಈ ಅಂಧ ಬಾಲಕನ ಮೇಲೆ ಬಿದ್ದಿತು. ಅಲ್ಲಿಂದ ಮುಂದೆ ಶಿವರುದ್ರಪ್ಪನವರ ಊಟ-ವಸತಿಗಳ ಏರ್ಪಾಡು ಸಮರ್ಪಕವಾಗಿ ಆಗಿ ಬಿಡಾರಂ ಕೃಷ್ಣಪ್ಪನವರ ಶಿಷ್ಯರಾಗಿ ಪಿಟೀಲು ವಿದ್ವಾಂಸರಲ್ಲಿಯೇ ಅಗ್ರಸ್ಥಾನ ಪಡೆಯುವ ಯೋಗಕ್ಕೆ ಮಾರ್ಗವಾಯಿತು.

ಪಂಡಿತ್ ಮದನಮೋಹನ ಮಾಳವೀಯರ ಸಮಕ್ಷಮದಲ್ಲಿ ಪಿಟೀಲು ವಾದನ ಮಾಡುವ ಸುಯೋಗ ಪಡೆದ ಧನ್ಯರು ಶಿವರುದ್ರಪ್ಪನವರು. ಪಕ್ಕ ವಾದ್ಯಗಾರರಾಗಿಯೂ ತನಿ ವಾದಕರಾಗಿಯೂ ದೇಶದ ನಾನಾ ಕಡೆಗಳ ಪ್ರತಿಷ್ಠಿತ ಸಭೆ-ಸಂಸ್ಥೆಗಳಲ್ಲಿ ನುಡಿಸುವ ಅವಕಾಶಗಳು ದೊರಕಿದುವು. ಅದರೊಡನೆ ಅನೇಕ ಸನ್ಮಾನಗಳೂ ಶ್ರೀಯುತರಿಗೆ ಲಭಿಸಿದವು. ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಸ್ವರ್ಣಪದಕ ಹಾಗೂ ‘ಪಿಟೀಲು ವಾದನ ವಿಶಾರದ’ ಎಂಬ ಬಿರುದು, ಮೈಸೂರು ಸಂಸ್ಥಾನದಲ್ಲಿ ಆಸ್ಥಾನ ಪದವಿ, ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ, ಗಾನಕಲಾ ಪರಿಷತ್ತಿನಿಂದ ಸನ್ಮಾನ; ಚೌಡಯ್ಯ ಸ್ಮಾರಕ ಪ್ರಶಸ್ತಿ; ‘ಸಂಗೀತ ಕಲಾ ಶಿರೋಮಣಿ’ ಬಿರುದು – ಹೀಗೆ ಶಿವರುದ್ರಪ್ಪನವರು ಸನ್ಮಾನಗಳ ಸರಮಾಲೆಯನ್ನೇ ಧರಿಸಿ ಸಾರ್ಥಕ್ಯ ಪಡೆದ ಧನ್ಯಜೀವಿಗಳು.