ಸಂಗೀತ ಮನೆತನದಲ್ಲಿ ಹುಟ್ಟಿ, ಸಿತಾರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸಿತಾರದ ಘರಾಣಾ ಪರಂಪರೆಯನ್ನು ಉಳಿಸಿ, ಕನ್ನಡ ನಾಡಿಗೆ ಕಲಾವಂತ ಮಕ್ಕಳನ್ನು ನೀಡಿ ಕಣ್ಮರೆಯಾದ ಪ್ರೊ. ಎ. ಕರೀಮ್‌ಖಾನರು ಕನ್ನಡ ನಾಡು ಕಂಡ ಅಪರೂಪದ ಸಿತಾರ ವಾದಕರು.

ಪ್ರೊ. ಎ. ಕರೀಮ್‌ಖಾನರದು ಸಿತಾರ ಪರಂಪರೆಯ ಮನೆತನ. ಅಜ್ಜ ಗುಲಾಮ ಹುಸೇನಖಾನ ಗ್ವಾಲಿಯರ್ ಘರಾಣೆಯ ಖ್ಯಾತ ಗಾಯಕ. ಭಾವನಗರ ಆಸ್ಥಾನದ ಕಲಾವಿದ. ತಂದೆ ರಹಿಮತ್‌ಖಾನ್‌ ‘ಸಿತಾರ ರತ್ನ’ ಎಂಬ ಖ್ಯಾತಿಗೆ ಭಾಜನರಾದ ದೇಶದ ಹೆಮ್ಮೆಯ ಸಿತಾರ ವಾದಕ. ಈ ನಾದ ಪರಿಸರದಲ್ಲಿ ಧಾರವಾಡದಲ್ಲಿ ೧೯೧೫ರಲ್ಲಿ ಜನಿಸಿದ ಅಬ್ದುಲ್‌ ಕರೀಮ್‌ಖಾನರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು. ಆರನೇ ವಯಸ್ಸಿನಲ್ಲಿಯೇ ತಂದೆಯಿಂದ ಸಿತಾರ ದೀಕ್ಷೆ. ಶಾಲಾ ಶಿಕ್ಷಣಕ್ಕೆ ತಿಲಾಂಜಲಿ. ನಿತ್ಯ ಪೂರ್ತಿ ಸಿತಾರದಲ್ಲಿ ರಿಯಾಜ್‌. ಫಲವಾಗಿ ಅವರೊಬ್ಬ ನಿಷ್ಣಾತ ಸಿತಾರ ವಾದಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

೧೯೩೫ರಲ್ಲಿ ಮುಂಬೈ ಆಕಾಶವಾಣಿಯಲ್ಲಿ ನಿಲಯದ ಸಿತಾರ ಕಲಾವಿದರಾಗಿ ವೃತ್ತಿ. ‘ತಬಲಾ ಮಾಂತ್ರಿಕ’ ಉಸ್ತಾದ್‌ ಅಲ್ಲಾರಖಾ ಖಾನ್‌ರೊಂದಿಗೆ ಸಹೋದ್ಯೋಗಿಯಾಗಿ ಕೆಲಸ ಮಾಡುವ ಸುಯೋಗ. ಆಕಾಶವಾಣಿ ಮೂಲಕ ದೇಶದ ಹೆಸರಾಂತ ಸಂಗೀತಗಾರರ ಸಂಪರ್ಕ ಪ್ರಾಪ್ತಿ. ಕೆಲ ದಿನಗಳ ನಂತರ ಆಕಾಶವಾಣಿ ಕೆಲಸಕ್ಕೆ ರಾಜೀನಾಮೆ. ಧಾರವಾಡಕ್ಕೆ ವಾಪಸ್ಸು. ತಂದೆ ೧೯೩೧ರಲ್ಲಿ ಸ್ಥಾಪಿಸಿದ ‘ಭಾರತೀಯ ಸಂಗೀತ ವಿದ್ಯಾಲಯ’ದ ಉಸ್ತುವಾರಿ. ಆ ಮೂಲಕ ಆಸಕ್ತರಿಗೆ ಸಿತಾರ ವಿದ್ಯಾದಾನ. ೧೯೪೫ರಲ್ಲಿ ಪುಣೆಗೆ ಪಯಣ. ಅಲ್ಲಿ ಸಿತಾರ ವಿದ್ಯಾಲಯದ ಪ್ರಾರಂಭ. ಶಿಷ್ಯರಿಂದ, ಅಭಿಮಾನಿಗಳಿಂದ ಪುಣೆಯಲ್ಲಿ ಒಂದು ಹೊಸ ಮನೆ ಗುರುವಿಗೆ ಕಾಣಿಕೆ ರೂಪದಲ್ಲಿ ಅರ್ಪಣೆ. ದುರ್ದೈವಶಾತ್‌ ಪುಣೆಯ ಪಾನಸೇಟ್‌ ಡ್ಯಾಂ ಒಡೆದ ರಭಸದಲ್ಲಿ ಆ ಮನೆ ಗಂಗಾರ್ಪಣ. ಮತ್ತೆ ಪುಣೆಯಿಂದ ಧಾರವಾಡಕ್ಕೆ ವಾಪಸ್‌.

ಧಾರವಾಡ ಕರ್ನಾಟಕ ಕಾಲೇಜಿನ ಸಂಗೀತ ವಿಭಾಗದಲ್ಲಿ (ಈಗ ಕ.ವಿ.ವಿ. ಸಂಗೀತ ಕಾಲೇಜು) ಸಿತಾರ ಅಧ್ಯಾಪಕರಾಗಿ (೧೯೬೨) ಸೇವೆಗಾರಂಭ. ೧೩ ವರ್ಷ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ. ಕಾಲೇಜು ಮಟ್ಟದಲ್ಲಿ ಸಿತಾರ ಶಿಕ್ಷಣ  ನೀಡಿದ ಉತ್ತರ ಕರ್ನಾಟಕದ ಮೊದಲ ಸಿತಾರ ಪ್ರಾಧ್ಯಾಪಕರೆಂಬ ಅಗ್ಗಳಿಕೆ, ನಿವೃತ್ತಿಯ ನಂತರ ಕೆಲವು ವರ್ಷ ಗೋವಾದ ‘ಕಲಾ ಅಕಾಡೆಮಿ’ಯಲ್ಲಿ ಸಿತಾರ ಪ್ರಾಧ್ಯಾಪಕರಾಗಿ ಸೇವೆ. ೧೫ ವರ್ಷ ತುಂಬು ಜೀವನ ಸಾಗಿಸಿ ೨೦೦೦ರದ ಜನವರಿ ೧೩ ರಂದು ನಾದಲೋಕದಲ್ಲಿ ಲೀನ. ಪ್ರೊ. ಎಂ. ಕರೀಮ್‌ಖಾನರು ನಾಡಿಗೆ ಬಿಟ್ಟು ಹೋದ ಆಸ್ತಿಯೆಂದರೆ ಅವರ ಕಲಾವಂತ ಮಕ್ಕಳು. ಅವರ ಒಂಭತ್ತು ಜನ ಗಂಡು ಮಕ್ಕಳಲ್ಲಿ ಏಳು ಜನರು ಸಿತಾರ ವಾದನದಲ್ಲಿ ಹೆಸರು ಪಡೆದವರು. ಪುಣೆಯಲ್ಲಿ ನೆಲೆಸಿರುವ ಹಿರಿಯ ಮಗ ಉಸ್ಮಾನ್ ಖಾನ್‌, ಧಾರವಾಡ ಆಕಾಶವಾಣಿಯ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿದ ಬಾಲೇಖಾನ್‌, ಮುಂಬೈಯಲ್ಲಿ ನೆಲೆಸಿರುವ ಮೆಹಬೂಬ್‌ಖಾನ್‌, ಧಾರವಾಡದ ಕ.ವಿ.ವಿ. ಸಂಗೀತ ಕಾಲೇಜಿನ ಪ್ರಾಚಾರ್ಯರಾಗಿರುವ ಹಮೀದ್ ಖಾನ್‌, ಗೋವಾ ಕಲಾ ಅಕಾಡೆಮಿಯಲ್ಲಿ ಸಿತಾರ ಪ್ರಾಧ್ಯಾಪಕರಾಗಿರುವ ಛೋಟೆ ರಹಿಮತ್ ಖಾನ್‌, ಧಾರವಾಡ ಆಕಾಶವಾಣಿಯಲ್ಲಿ ಸಿತಾರದ ನಿಲಯದ ಕಲಾವಿದರಾಗಿರುವ ಶಫಿಕ್ ಖಾನ್‌, ಮಂಗಳೂರು ಆಕಾಶವಾಣಿಯಲ್ಲಿ ನಿಲಯದ ಸಿತಾರ ಕಲಾವಿದರಾಗಿರುವ ರಫಿಕ್‌ಖಾನ್‌ – ಇವರೆಲ್ಲ ನಾಡಿನ ಹೆಮ್ಮೆಯ ಸಿತಾರ ವಾದಕರೆಂಬುದು ಕನ್ನಡದ ಪುಣ್ಯ. ಪ್ರೊ. ಎ. ಕರೀಮ್‌ಖಾನರ ಶಿಷ್ಯ ಸಂಪತ್ತು ಅಪೃ. ಏಳುಜನ ಸಿತಾರ ನುಡಿಸುವ ಮಕ್ಕಳಲ್ಲದೆ ಜಿ.ಬಿ. ಜಠಾರ, ತಗರ್ಸೆ, ಕೊಪ್ಟಿಕರ, ನಾಡಗೇರ, ರವೀಂದ್ರಚಾರಿ, ರೇಖಾ ಕಾರ್ಕಶ್ರೀ, ಪ್ರೊ. ವ್ಹಿ.ವಿ. ಮಹಾಪುರುಷ, ಪ್ರೊ.ಡಿ.ಎಸ್‌. ಚಾಳೇಕರ, ಯೋಗಿ ರಾಜ ನಾಯಕ, ಪ್ರಿಯಾ ಕಾಮತ್‌ ಹಾಗೂ ಆರುಂಧತಿ ದೇಶಪಾಂಡೆ ಮುಂತಾದವರು ಉಲ್ಲೇಖನೀಯರಾಗಿದ್ದಾರೆ. ಪ್ರೊ. ಎಂ. ಕರೀಮ್‌ಖಾನರಿಗೆ ಗೋವಾ ನಾಗರಿಕ ಸನ್ಮಾನ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾತಿಲಕ’ (೧೯೮೦) ಪ್ರಶಸ್ತಿ ದೊರೆತಿವೆ.