ಅರಕಲಗೂಡು ತಾಲ್ಲೂಕಿನ ಅಗ್ರಹಾರವೆಂಬ ಚಿಕ್ಕ ಗ್ರಾಮದಲ್ಲಿ ೧೮೯೫ರಲ್ಲಿ ಜನಿಸಿದ ಸುಬ್ಬರಾಯರಿಗೆ ಆರಂಭದ ಸಂಗೀತ ಶಿಕ್ಷಣ ಸಮೀಪ ಬಂಧುಗಳಾಗಿದ್ದ ಕೇಶವಶಾಸ್ತ್ರಿಗಳಿಂದಲೂ ನಂತರ ರುದ್ರಪಟ್ಟಣದ ಕೃಷ್ಣಶಾಸ್ತ್ರಿಗಳಿಂದಲೂ ದೊರೆಯಿತು. ಹದಿಮೂರು ವರ್ಷದವರಾಗಿದ್ದಾಗಲೇ ಗೃಹತ್ಯಾಗ ಮಾಡಿ ಮೈಸೂರಿಗೆ ಬಂದು ಬಿಡಾರಂ ಕೃಷ್ಣಪ್ಪನವರಲ್ಲಿ ಉನ್ನತ ಶಿಕ್ಷಣ ಪಡೆದು ಹಠ ಸಾಧನೆಯಿಂದ ಅತ್ಯುತ್ತಮ ವೇಣು ವಾದಕರೆಂಬ ಕೀರ್ತಿ ಪಡೆದರು.

ತಮ್ಮ ವಿದ್ವತ್ತಿನ ಬಲದಿಂದಲೇ ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿ ನೇಮಕಾತಿ ಹೊಂದಿದರು. ಕರ್ನಾಟಕದಲ್ಲಿಯೂ ಹೊರ ರಾಜ್ಯಗಳಲ್ಲಿಯೂ ತಮ್ಮ ವಾದನದ ಕಛೇರಿಗಳನ್ನು ನಡೆಸಿ ಜನಮನ್ನಣೆಯನ್ನು ಗಳಿಸಿದರು.

‘ವೇಣುಗಾನ ವಿಶಾರದ’, ‘ವೇಣುವಿಕ ರತ್ನ’, ‘ಗಾನ ಕಲಾಭೂಷಣ’ ಇತ್ಯಾದಿ ಹಲವಾರು ಬಿರುದು ಪ್ರಶಸ್ತಿಗಳನ್ನು ಅರ್ಜಿಸಿದ್ದ ಸುಬ್ಬರಾಯರು ಸುಷಿರ ವಾದ್ಯಗಳನ್ನು ಕುರಿತು ಒಂದು ಪುಸ್ತಕವನ್ನೂ ಬರೆದಿದ್ದಾರೆ. ೧೯೭೫ರಲ್ಲಿ ನಾದೈಕ್ಯರಾದ ಇವರು ತಮ್ಮ ಕಡೆಯುಸಿರಿನವರೆಗೂ ಸಂಗೀತ ಸಾಧನೆಯಲ್ಲಿ ತೊಡಗಿದ್ದರು.

ಸಂಸ್ಕೃತ ಕಾವ್ಯ-ನಾಟಕಗಳಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದ ಇವರು ಸಂಗೀತ ಕಾವ್ಯ-ನಾಟಕಗಳಿಗೆ ಸಂಬಂಧಿಸಿದ ಪುಸ್ತಕಗಳ ಬಹು ಹಿರಿದಾದ ಭಂಡಾರವನ್ನೇ ಹೊಂದಿದ್ದರು. ಅವರ ನಿಧನಾನಂತರ ಅವರ ಮಕ್ಕಳು ಆ ಪುಸ್ತಕಗಳೆಲ್ಲವನ್ನೂ ಕರ್ನಾಟಕ ಗಾನ ಕಲಾ ಪರಿಷತ್ತಿಗೆ ದಾನವಾಗಿ ನೀಡಿದರು.