ಸುಮಾರು ೮೦೦-೮೫೦ ವರ್ಷಗಳ ಹಿಂದೆ, ತಮಿಳುನಾಡಿನ ‘ಶೆಂಕೋಟೈ’ ಕಡೆಯಿಂದ ವಲಸೆ ಬಂದು, ಕರ್ನಾಟಕದಲ್ಲಿ ಕಾವೇರಿ, ಹೇಮಾವತಿ ನದೀ ತಟಗಳಲ್ಲಿರುವ ಚಿಕ್ಕ ಪುಟ್ಟ ಹಳ್ಳಿ, ಗ್ರಾಮಗಳಲ್ಲಿ ನೆಲೆಸಿದ ಜನಾಂಘವು “ಸಂಕೇತಿ”ಗಳು ಎಂಬ ಹೆಸರಿನಿಂದ ಎಲ್ಲರಿಗೂ ಸುಪರಿಚಿತವಾದುದು. ವ್ಯವಸಾಯವನ್ನು ಮುಖ್ಯ ಜೀವನ ವೃತ್ತಿಯಾಗಿ, ಸಂಗೀತ, ವೇದಾಧ್ಯಯನ, ಅಧ್ಯಾಪನ, ಸಂಸ್ಕೃತ ಭಾಷಾ ವ್ಯಾಸಂಗಗಳನ್ನು ಸಹಜ ಪ್ರವೃತ್ತಿಯಾಗಿ ಹೊಂದಿರುವ ಜನಾಂಗವಿದೆಂದು ಪ್ರಖ್ಯಾತವಾಗಿದೆ. ಇವರಲ್ಲಿ ಸಂಗೀತ ಸಂಸ್ಕೃತಗಳಲ್ಲಿ ಪಾಂಡಿತ್ಯವಿರುವವರು ಅನೇಕ, ಪಾಂಡಿತ್ಯವಿಲ್ಲದವರೂ ಕೂಡ ಅಭಿರುಚಿ ಆಸಕ್ತಿವುಳ್ಳವರಂತೂ ಆಗಿಯೇ ಇರುತ್ತಾರೆ. ಇಂತಹ ಜನಾಂಗದ ಒಂದು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದವರು ಶ್ರೀ ಎ.ಕೆ. ಸುಬ್ಬರಾಯರು.

ಅರಕಲಗೂಡು ತಾಲ್ಲೂಕಿನ, ಅಗ್ರಹಾರವೆಂಬ ಚಿಕ್ಕ ಗ್ರಾಮದಲ್ಲಿ, ಶ್ಯಾನುಭೋಗ ಕೃಷ್ಣಪ್ಪನವರ ಪುತ್ರರಾಗಿ ೧೮೯೫ರಲ್ಲಿ ಸುಬ್ಬರಾಯರು ಜನ್ಮತಾಳಿದರು. ತಂದೆಯವರು ವೇದಾಧ್ಯಯನ ಸಂಪನ್ನರು. ಹಾಗೆಯೇ ಸಂಗೀತದಲ್ಲಿ ವಿಶೇಷ ಆಸಕ್ತಿ ತಳೆದಿದ್ದವರು. ಸಮೀಪ ಬಂಧುಗಳಾದ ಶ್ರೀ ಕೇಶವಶಾಸ್ತ್ರಿಗಳೂ ವೈದಿಕರಾಗಿದ್ದು, ಸಂಗೀತದಲ್ಲೂ ಪಾಂಡಿತ್ಯ ಪಡೆದಿದ್ದವರು. ಇಂತಹ ಸಂಗೀತಮಯ ಪರಿಸರದಲ್ಲಿ ಹುಟ್ಟಿ ಬೆಳೆದ ಸುಬ್ಬರಾಯರಿಗೆ ಸಂಗೀತಾಶಕ್ತಿ ಹುಟ್ಟಿನಿಂದಲೇ ಬಂದದ್ದು. ಭಜನೆ ಮನೆಗಳಲ್ಲಿ, ಮನೆಯ ವಿಶೇಷ ಸಮಾರಂಭಗಳಲ್ಲಿ ಸಂಸ್ಕೃತ ಶ್ಲೋಕಗಳನ್ನು ಸುಮಧುರವಾಗಿ ಹಾಡುತ್ತಿದ್ದ ಇವರಿಗೆ, ಕೇಶವಶಾಸ್ತ್ರಿಗಳು ಶಾಸ್ತ್ರರೀತ್ಯಾ ಕ್ರಮಬದ್ಧ ಸಂಗೀತ ಶಿಕ್ಷಣವನ್ನು ಆರಂಭಿಸಿದರು. ಅನಂತರ ರುದ್ರಪಟ್ಟಣದ ಕೃಷ್ಣಶಾಸ್ತ್ರಿಗಳಲ್ಲಿಯೂ ಸಂಗೀತಾಭ್ಯಾಸವನ್ನು ಮಾಡಿದರು. ಶ್ಯಾನುಭೋಗ ಕೃಷ್ಣಪ್ಪನವರು ಅಡಿಕೆ, ತೆಂಗು, ಮಾವು, ನಿಂಬೆ, ಇತ್ಯಾದಿ ಮರಗಿಡಗಳಿಂದ ಸಮೃದ್ಧವಾಗಿದ್ದ ತೋಟ, ಹೊಲ, ಗದ್ದೆಗಳ ಒಡೆಯರಾಗಿದ್ದರು. ಇವರ ಗ್ರಾಮಕ್ಕೆ, ಒಮ್ಮೆ ಆಳರಸರಾಗಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರು ಭೇಟಿ ಇತ್ತರು. ತೋಟದಲ್ಲಿ ಕೊಂಬೆ ಕೊಂಬೆಗಳಲ್ಲೂ, ಎಲೆಯೇ ಕಾಣದಷ್ಟು ಮಟ್ಟಿಗೆ ನಿಂಬೆಹಣ್ಣುಗಳು ತೂಗಾಡುತ್ತಿದ್ದುದನ್ನು ನೋಡಿ ಮೆಚ್ಚಿ ಆನಂದಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೃಷ್ಣಪ್ಪನವರು ದೈವಾಧೀನರಾದರು. ಹುಡುಗನಾಗಿದ್ದ ಸುಬ್ಬರಾಯರು, ತೋಟದಲ್ಲಿ, ಮರಗಿಡಗಳ ತಂಪುನೆರಳಿನಲ್ಲಿ ಅಡ್ಡಾಡುತ್ತ, ಹಾಡುವುದು ಜೊತೆಗೆ ಕೊಳಲನ್ನು ನುಡಿಸುವುದು ಪರಿಪಾಠವಾಗಿತ್ತು. ಇವರಿಗೆ, ಹದಿಮೂರು ವಯಸ್ಸಾಗಿದ್ದಾಗಲೇ, ಹಿರಿಯರು ಒಂದು ಕನ್ಯೆಯೊಡನೆ ವಿವಾಹ ಮಾಡಿದರು.

ಸುಬ್ಬರಾಯರಿಗೆ ವೀಣಾ ಧನಮ್ಮಾಳ್‌ ಎಂದರೆ ಬಹು ಗೌರವ. ಆಕೆ ಸಾಕ್ಷಾತ್‌ ಶಾರದೆಯೆಂದೇ ಅವರು ಭಾವಿಸಿದ್ದರು. ವಿವಾಹವಾದ ತರುಣದಲ್ಲೇ, ಮನೆ ತೊರೆದು, ಹದಿಮೂರು ವಯಸ್ಸಿನ ಸುಬ್ಬರಾಯರು, ವೀಣಾಧನಮ್ಮಾಳ್‌ ಅವರ ಶಿಕ್ಷಣ ಆಶ್ರಯಗಳನ್ನು ಕೋರಿ, ಅವರಲ್ಲಿಗೆ ಹೋದರು. ಆಕೆ, ಹುಡುಗನ ಪ್ರತಿಭೆ, ಆಸಕ್ತಿಗಳನ್ನು ಗ್ರಹಿಸಿ, ಮೈಸೂರಿನಲ್ಲಿದ್ದ ಬಿಡಾರಂ ಕೃಷ್ಣಪ್ಪನವರಲ್ಲಿ ಸಂಗೀತಾಭ್ಯಾಸ ಮಾಡುವಂತೆ ಸಲಹೆ ಇತ್ತು ಆದರಿಸಿ ಕಳುಹಿಸಿಕೊಟ್ಟರು. ಸುಬ್ಬರಾಯರು ಹೀಗೆ ಬಿಡಾರಂ ಕೃಷ್ಣಪ್ಪನವರ ಶಿಷ್ಯರಾಗಿ ಒಂದು ದಶಕಕ್ಕೂ ಮೀರಿ ಸಾಧನೆ ಮಾಡಿದರು. ಗುರುಗಳೊಡನೆ, ಸಂಗೀತ ಕಚೇರಿಗಳಲ್ಲಿ ಹಾಡುತ್ತಲೂ ಇದ್ದರು. ಉತ್ತಮವಾದ ಕಂಠ, ಪ್ರೌಢವಾದ ಶಿಕ್ಷಣ, ಒಳ್ಳೆಯ ಮಾರ್ಗದರ್ಶಕ ಗುರು ಎಲ್ಲವೂ, ಇದ್ದರೂ ಸುಬ್ಬರಾಯರಿಗೆ ಕೊಳಲಿನ ಮೋಹವೇ ಕೈ ಬೀಸಿ ಕರೆಯುತ್ತಿತ್ತು. ಸ್ವಯಂ ಸಾಧನೆಯಿಂದ, ಕೊಳಲು ವಾದ್ಯವನ್ನು ಕರಗತಮಾಡಿಕೊಂಡರೆಂದರೆ, ಅದೆಂತಹ ಹಠ ಸಾಧನೆ ಮಾಡಿರಬೇಕೆಂಬುದನ್ನು ಯಾರಾದರೂ ಊಹಿಸಬಹುದು. ಸಂಕೇತಿ ಜನಾಂಗದಲ್ಲಿ “ಕೊಳಲು ಪುಟ್ಟಣ್ಣ” ನೆಂದೇ ಇವರು ಪ್ರಸಿದ್ಧಿ ಪಡೆದಿದ್ದರು.

ಎ.ಕೆ. ಸುಬ್ಬರಾಯರ ಸೋದರಿಯ ಪುತ್ರ, ಸಂಸ್ಕೃತ ಕ್ಷೇತ್ರದಲ್ಲಿ ಗಣ್ಯರಾಗಿದ್ದ ಡಾ. ಕೃಷ್ಣಮೂರ್ತಿ (ಧಾರವಾಡ)ಯವರು. ಸುಬ್ಬರಾಯರೂ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ, ಸಾಹಿತ್ಯರತ್ನ ಕೆ. ಗೋಪಾಲಕೃಷ್ಣಶಾಸ್ತ್ರಿಗಳಂತಹ ಉದ್ಧಾಮ ಪಂಡಿತರ ಶಿಕ್ಷಣದಲ್ಲಿ ಸಾಂಗವಾಗಿ ಸಂಸ್ಕೃತಾಭ್ಯಾಸ ಮಾಡಿ ಪಾಂಡಿತ್ಯ ಗಳಿಸಿದರು. ಸಂಗೀತ ಸಾಹಿತ್ಯಗಳೆರಡರಲ್ಲೂ ವಿಶೇಷ ಪರಿಣತಿ ಪಡೆದಿದ್ದ ಸುಬ್ಬರಾಯರು, ಪಾರ್ವತಮ್ಮನವರನ್ನು ವಿವಾಹವಾದರು. ಈಕೆ ಅಂಚೆಭಕ್ಷಿ ತಿಪ್ಪಯ್ಯನವರ ವಂಶೀಕರು ಹಾಗೂ ಯೋಜನಾ ಆಯೋಗದಲ್ಲಿ ಉನ್ನತ ಹುದ್ದೆಯಲ್ಲಿದ್ದು, ಹೂವರ್ ಡ್ಯಾಮ್‌ ಪರಿವೀಕ್ಷಣೆಗಾಗಿಕ ಸರ್ಕಾರದಿಂದ ಕಳುಹಿಸಲ್ಪಟ್ಟವರಾಗಿದ್ದ, ಸಿವಿಲ್‌ ಇಂಜಿನಿಯರ್ ವೆಂಕಟರಾಮರಾಯರ ಸಹೋದರಿ. ಈ ದಂಪತಿಗಳಿಗೆ ಒಬ್ಬ ಪುತ್ರಿ ಹಾಗೂ ಮೂವರು ಪುತ್ರರು ಜನಿಸಿದರು. ಇವರೆಲ್ಲರಿಗೂ ಸಂಗೀತದಲ್ಲಿ, ಬಹಳ ಆಸಕ್ತಿ ಇದೆ. ಹಿರಿಯವರಾದ ಪಾಂಡುರಂಗರವರು ಸಿವಿಲ್‌ ಇಂಜನೀಯರ್ ಆಗಿ ದೇಶದ ನಾನಾ ಕಡೆಗಳಲ್ಲಿ ಜವಾಬ್ದಾರಿಯುತ ಕರ್ತವ್ಯಗಳನ್ನು ನಿರ್ವಹಿಸಿ, ಈಗ ನಿವೃತ್ತರಾಗಿದ್ದಾರೆ. ಪಾಂಡುರಂಗ ಅವರು, ತಂದೆಯವರ ಕಚೇರಿಗಳಿಗೆ ಹಾರ್ಮೋನಿಯಂ ಶ್ರುತಿ ಹಾಕುತ್ತಿದ್ದರು. ಕಾರ್ಯನಿಮಿತ್ತ ಅವರು ಹೊರ ರಾಜ್ಯಗಳಿಗೆ ಹೋದ ಮೇಲೆ, ಮೂರನೆಯವರಾದ ನಟರಾಜರವರು ತಂದೆಯವರ ಜೊತೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಸುಬ್ಬರಾಯರು ಪಿಟೀಲು ವಾದ್ಯವನ್ನೂ ನುಡಿಸುತ್ತಿದ್ದರು. ಅವರು ಬಳಸುತ್ತಿದ್ದ ಆ ಪಿಟೀಲುವಾದ್ಯವೀಗ ನಟರಾಜ ಅವರ ಬಳಿಯಿದೆ. ಎರಡನೆ ಪುತ್ರ ವಸಂತಕುಮಾರ್ ಅವರು ನಮ್ಮ ದೇಶದ ಸೇನಾಪಡೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದರೆ. ಈ ಪುತ್ರರೆಲ್ಲರೂ ಸೇರಿ, ಸುಬ್ಬರಾಯರ ವೇಣುವಾದನದ ಒಂದು ಕಾರ್ಯಕ್ರಮವನ್ನು ಧ್ವನಿಮುದ್ರಿಸಿದ್ದಾರೆ. ಆದರೆ, ದುರದೃಷ್ಟವಶಾತ್‌ ಆ ಧ್ವನಿ ಸುರುಳಿ ಉಪಲಭ್ಯವಿಲ್ಲ.

ಮೊದಮೊದಲಿಗೆ ಸುಬ್ಬರಾಯರ ವೇಣುವಾದನಕ್ಕೆ, ಮೈಸೂರು ಟಿ. ಚೌಡಯ್ಯನವರು ವಯೊಲಿನ್‌ ಪಕ್ಕವಾದ್ಯ ನುಡಿಸುತ್ತಿದ್ದರು. ಕಾರಣಾಂತರಗಳಿಂದ ಭಿನ್ನಾಭಿಪ್ರಾಯ ಮೂಡಿ ಈ ಇಬ್ಬರು ವಿದ್ವಾಂಸರೂ ವಿಮುಖರಾದರು. ಗೋಪಾಲ ಐಯಂಗಾರ್ಯರ ಮನೆಯಲ್ಲಿ, ಅವರ ಹೆಣ್ಣುಮಕ್ಕಳಿಗೆ ಸಂಗೀತ ಪಾಠವನ್ನು ಹೇಳಿಕೊಡುತ್ತಿದ್ದ ಸುಬ್ಬರಾಯರು, ಎಷ್ಟಮಟ್ಟಿಗೆ ಅವರ ಆದರಾಭಿಮಾನಗಳಿಗೆ ಪಾತ್ರರಾಗಿದ್ದರೆಂದರೆ, ಗೋಪಾಲ ಐಯ್ಯಂಗಾರ್ಯರು ಮೈಸೂರಿನಿಂದ ಬೆಂಗಳೂರಿಗೆ ವರ್ಗವಾಗಿ ಬಂದಾಗ, ೧೯೪೨ರಲ್ಲಿ, ಸುಬ್ಬರಾಯರೂ ಅವರ ವಿಶ್ವಾಸಕ್ಕೆ ಮಣಿದು ಬೆಂಗಳೂರಿಗೆ ಬರಬೇಕಾಯಿತು. ಮಲ್ಲೇಶ್ವರದ ಗಣೇಶ ವಿಲಾಸ್‌ ಲಾಡ್ಜ್ ನಲ್ಲಿ ವಾಸವಾಗಿದ್ದು, ಸಂಗೀತ ಪಾಠವನ್ನು ಮುಂದುವರೆಸುತ್ತಿದ್ದರು. ಮುಂದೆ ಮೂರು ವರ್ಷಗಳ ನಂತರ, ತಮ್ಮ ಕುಟುಂಬದವರೆಲ್ಲರನ್ನೂ ಬೆಂಗಳೂರಿಗೇ ಬರಮಾಡಿಕೊಂಢು, ಮಲ್ಲೇಶ್ವರದ ಪಕ್ಕದಲ್ಲಿರುವ ಶ್ರೀರಾಮಪುರ ಬಡಾವಣೆಗಳಲ್ಲಿ ವಾಸವಾಗಿದ್ದರು. ಮಲ್ಲೇಶ್ವರದ ತೆಂಗಿನಮರದ ರಸ್ತೆಯಲ್ಲಿ ಸ್ವಂತ ಗೃಹ ನಿರ್ಮಾಣ ಮಾಡಿಕೊಂಡರು. ಎಸ್‌.ಕೆ. ವೆಂಕಟರಂಗ ಐಯ್ಯಂಗಾರ್ಯರ ಪುತ್ರಿ ರಾಧಮ್ಮ ಹಾಗೂ ಶ್ರೀಮತಿ ವಿಮಲಾ ರಂಗಾಚಾರ್, ಸುಬ್ಬರಾಯರಲ್ಲಿ ಕೆಲವು ಕಾಲ ಶಿಷ್ಯರಾಗಿದ್ದರು.

ಮೈಸೂರು ಆಸ್ಥಾನದ ವಿದ್ವಾಂಸರಾಗಿದ್ದ ಸುಬ್ಬರಾಯರಿಗೆ, ವೇಣುಗಾನವಿಶಾರದ, ವೇಣುವಿಕ ರತ್ನ, ೧೯೬೪-೬೫ರ ಸಾಲಿನ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಗಳೂ ಸಂದಿದ್ದವು. ಸುಬ್ಬರಾಯರು ಮೈಸೂರಿನಲ್ಲಿ ವಾಸವಿದ್ದಾಗ, ವಿ. ದೊರೆಸ್ವಾಮಿ ಐಯಂಗಾರ್ಯರು, ಅವರ ಮನೆಗೆ ಹೋಗಿ, ತಮಗೆ ಬೇಕಾದ ಸಂಗೀತ ರಚನೆಗಳ ಸ್ವರ ಸಾಹಿತ್ಯವನ್ನು ಬರೆದುಕೊಳ್ಳುತ್ತಿದ್ದರು. ಕಲಿಯುವ ಆಸಕ್ತಿ ಇರುವ ಎಳೆಯರನ್ನು ಉತ್ತೇಜಿಸುವ ಗುಣ ಸುಬ್ಬರಾಯರಲ್ಲಿದ್ದುದು, ಇದರಿಂದ ವ್ಯಕ್ತವಾಗುತ್ತದೆ.

ಮಲ್ಲೇಶ್ವರದ ಸಾಯಿಮಂಡಲಿಯಲ್ಲಿ ಸುಬ್ಬರಾಯರ ವೇಣುವಾದನ ಕಚೇರಿಗಳು ಬಹಳವಾಗಿ ನಡೆಯುತ್ತಿದ್ದುವು. ವಿದ್ಯಾಸಾಗರ ಆರ್.ಆರ್. ಕೇಶವಮೂರ್ತಿಗಳ ವಯೊಲಿನ್‌ ಪಕ್ಕವಾದ್ಯದಲ್ಲಿ, ಸುಬ್ಬರಾಯರ ಕಚೇರಿಗಳು ಬಹಳಷ್ಟು ನಡೆದಿವೆ. ವೇಣುವಾದ್ಯದ ಬಗ್ಗೆ ಸುಬ್ಬರಾಯರಿಗಿದ್ದ ವಿಶೇಷ ಅಭಿಮಾನ, ಅವರ ಒಂದೊಂದು ಮಾತಿನಲ್ಲಿಯೂ ಗೋಚರವಾಗುತ್ತಿತ್ತು. ೧೯೭೨ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಮೂರನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಗಾನಕಲಾ ಭೂಷಣ ಪ್ರಶಸ್ತಿ ಪಡೆದರು. ಆ ಸಂದರ್ಭದಲ್ಲಿ ಅವರು ನೀಡಿರುವ ಅಧ್ಯಕ್ಷ ಭಾಷಣವು ಸುಬ್ಬರಾಯರಿಗೆ, ಸಂಗೀತ, ಸಂಸ್ಕೃತ, ನಾಟ್ಯ ನಾಟಕ, ಕಾವ್ಯಾದಿಗಳಲ್ಲಿದ್ದ ಪ್ರೌಢಿಮೆ ಪಾಂಡಿತ್ಯಗಳಿಗೆ ನಿದರ್ಶನವಾಗಿದೆ. ಹಾಗೆಯೇ ಕರ್ನಾಟಕ ಸಂಗೀತವನ್ನು ಉಳಿಸಿ-ಬೆಳೆಸುವ ಕಾರ್ಯದಲ್ಲಿ ಅವರಿಗಿದ್ದ ಕಳಕಳಿ, ಯುವ ಕಲಾವಿದರು ಸಾಧಿಸಬೇಕಾದುದರ ಬಗ್ಗೆ ಚಿಂತನೆ, ಎಳೆತನದಿಂದಲೇ ಸಂಗೀತಾಸಕ್ತಿ ಬೆಳೆಸುವ ವಿಷಯದಲ್ಲಿದ್ದ ಕಲ್ಪನೆಗಳೆಲ್ಲವೂ ಆ ಭಾಷಣದಲ್ಲಿ ಸಾರವತ್ತಾಗಿ ಅಭಿವ್ಯಕ್ತವಾಗಿದೆ. ಸುಷಿರವಾದ್ಯಗಳನ್ನು ಕುರಿತು ಒಂದು ಪುಸ್ತಕವನ್ನು ಬರೆದಿದ್ದಾರೆ.

ಇನ್ನೂ, ಅವರ ಸಂಸ್ಕೃತ ಜ್ಞಾನದ ಅಗಾಧತೆಯನ್ನು ಕುರಿತು ಹೇಳಬೇಕೆಂದರೆ, ೧೯೭೫ರಲ್ಲಿ ಸುಬ್ಬರಾಯರ ನಿಧನಾನಂತರದ ಒಂದು ಸಂದರ್ಭವನ್ನಿಲ್ಲಿ ಸ್ಮರಿಸಬೇಕಾಗುತ್ತದೆ.

ವಿದ್ವಾನ್‌.ಎ.ಕೆ ಸುಬ್ಬರಾಯರು, ಈ ಮೊದಲೇ ತಿಳಿಸಿರುವಂತೆ ಸಂಸ್ಕೃತ ಪಂಡಿತರೂ ಆಗಿದ್ದುದರಿಂದ, ಸಂಗೀತ ಹಾಗೂ ಸಾಹಿತ್ಯಗಳ, ಕಾವ್ಯ, ನಾಟಕಾದಿಗಳ ಸಂಸ್ಕೃತ ಪುಸ್ತಕಗಳನ್ನು ಹೆಚ್ಚು ಸಂಖ್ಯೆಯಲ್ಲಿ ಸಂಗ್ರಹಿಸಿದ್ದರು. ಅವರು ಪರಂಧಾಮವನ್ನೈದಿದ ನಂತರ, ಅವರ ಮಕ್ಕಳು ಆ ಪುಸ್ತಕಗಳನ್ನು ಕರ್ನಾಟಕ ಗಾನಕಲಾ ಪರಿಷತ್ತಿನ ಪುಸ್ತಕ ಸಂಗ್ರಹಾಲಯಲಕ್‌ಎ ದಾನ ಮಾಡಿದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾಗಿದದ ವಿದ್ವಾನ್‌ ಬೆಂಗಳೂರು ಕೆ. ವೆಂಕಟರಾಂ ಅವರ ಮನೆಗೆ ಆ ಪುಸ್ತಕಗಳು ರವಾನೆಯಾಗಿದ್ದವು. ಭಾರಿ ಭಾರಿ ಪೆಟ್ಟಿಗೆಗಳಲ್ಲಿದ್ದ ಆ ಪುಸ್ತಕಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿ ಜೋಡಿಸಿಡಲು ನೆರವಾಗಿ ನಾನು ಮತ್ತು ನನ್ನ ಸೋದರಿ ಟಿ.ಎಸ್‌., ಸತ್ಯವತಿಕ ಅವರ ಮನೆಗೆ ಹೋಗಿದ್ದೆವು. ಈಗ ಕಣ್ಣಿಂದ ಒಮ್ಮೆ ನೋಡಲೂ ಸಿಗದ, ಅಮೂಲ್ಯವಾದ ಪುಸ್ತಕ ರಾಶಿಯೇ ಅಲ್ಲಿತ್ತು. ಒಂದೊಂದು ಪುಸ್ತಕವನ್ನೂ ಪರಿಶೀಲಿಸುವಾಗ ನಾವು ಗಮನಿಸಿದ ಮುಖ್ಯ ಅಂಶವೆಂದರೆ, ಸುಬ್ಬರಾಯರು, ಆ ಪುಸ್ತಕಗಳನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿದುದಕ್ಕೆ ನಿದರ್ಶನವಾಗಿ, ಪ್ರತಿ ಪುಟದ ಖಾಲಿ ಜಾಗದಲ್ಲಿಯೂ, ಅವರ ಕೈ ಬರಹದಲ್ಲಿ ಒತ್ತಾಗಿ ಮೂಡಿದ್ದ ಟಿಪ್ಪಣಿಗಳು. ಆಳವಾಗಿ ಅಧ್ಯಯನ ಮಾಡದೆ, ಆ ಟಿಪ್ಪಣಿಗಳನ್ನು ಬರೆದಿರಲು ಸಾಧ್ಯವೇ ಇಲ್ಲ. ಇದು ಅವರ ಜ್ಞಾನ ಸಂಪಾದನೆಯಲ್ಲಿದ್ದ ಆಸ್ಥೆಯನ್ನು ನಿರೂಪಿಸಿದರೆ, ಅಂಚೆ ಚೀಟಿಗಳನ್ನು ಸಂಗ್ರಹಿಸುವಲ್ಲಿ ಅವರಿಗಿದ್ದ ವಿಶೇಷ ಆಸಕ್ತಿಯು ಅವರ ಸೌಂದರ್ಯ ಪ್ರಜ್ಞೆಯನ್ನು ಎತ್ತಿ ತೋರಿಸುವಂತಿತ್ತು. ಆ ಅಂಚೆ ಚೀಟಿಗಳು ನಮ್ಮ ಕೇಂದರ ಸರ್ಕಾರದ ಅಂಚೆ ಇಲಾಖೆಯ ಮೂಲಕ, ಸಾಂದರ್ಭಿಕವಾಗಿ, ಮುಖ್ಯ ಘಟನೆಗಳನ್ನು ದಾಖಲುಪಡಿಸಲು, ಬಿಡುಗಡೆಯಾಗಿದ್ದುವು. ಸರ್ಕಾರದ ಈ ಉದ್ದೇಶ ಸಾಧನೆಯೊಡನೆ, ಸ್ವಂತದ ಅಭಿರುಚಿಯನ್ನು ಸೇರಿಸಿ, ಸುಬ್ಬರಾಯರು ಆ ಅಂಚೆ ಚೀಟಿಗಳನ್ನು ಪ್ರತ್ಯೇಕ ಸಂಸ್ಕೃತ ಪುಸ್ತಕಗಳ ಮೊದಲ ಒಳ ಪುಟದಲ್ಲಿ ಅಂಟಿಸಿದ್ದರು. ಅಂಛೆ ಚೀಟಿಗಳನ್ನೂ ನೋಡಿಯೇ ಪುಸ್ತಕ ಯಾವುದೆಂದು ಹೇಳಲು ಸಾಧ್ಯವಾಗುವ ರೀತಿಯಲ್ಲಿತ್ತು! ಉದಾಹರಣೆಗೆ, ಗೀತೋಪದೇಶದ ಚಿತ್ರವಿರುವ ಅಂಚೆ ಚೀಟಿ “ಭಾಗವತ”ದ ಮೊದಲ ಒಳಪುಟದಲ್ಲಿ; ಶಕುಂತಲೆ ಜಿಂಕೆಯ ಮೈ ಸವರುತ್ತಿರುವ ಚೀಟಿ, “ಅಭಿಜ್ಞಾನ ಶಾಕುಂತಲ”ದಲ್ಲಿ; ಯುವತಿಯೋರ್ವಳು ನೀಲಾಕಾಶದ ಕೆಳಗೆ, ಪ್ರಕೃತಿಯ ಮಡಿಲಲ್ಲಿ ಕುಳಿತು ಪತ್ರ ಬರೆಯುತ್ತಿರುವ ಚೀಟಿ, “ಮೇಘ ಸಂದೇಶ”ದಲ್ಲಿ; ಇಂತಹ ಪಾಂಡಿತ್ಯ, ಕಲಾಭಿಜ್ಞತೆಗಳ ಸಂಗಮವಾಗಿ, ವಿದ್ವಾನ್‌ ಎ.ಕೆ. ಸುಬ್ಬರಾಯರು ಸಾರ್ಥಕವಾಗಿ ಬಾಳಿ, ಅಮರವಾದ ಯಶಸ್ಸನ್ನು ಗಳಿಸಿದ್ದಾರೆ.