ಸಂಗೀತ ಮತ್ತು ನೃತ್ಯವೆಂದರೆ ಚಂದ್ರಮತಿಯವರಿಗೆ ಬಾಲ್ಯದಿಂದಲೇ ಆಸಕ್ತಿ ಇವರ ಆಸಕ್ತಿಯನ್ನು ಗಮನಿಸಿದ ತಂದೆ ತಾಯಿಯವರು ಮನೆಯಲ್ಲಿಯೇ ಎಂ. ವಿಷ್ಣುದಾಸ್ ಅವರಿಂದ ನೃತ್ಯ ಮತ್ತು ಶ್ರೀರಾಜಶೇಖರಯ್ಯ ಹಾಗೂ ಶ್ರೀಮತಿ ವೀಣೇ ಜಯಮ್ಮನವರ ಬಳಿ ಸಂಗೀತಾಭ್ಯಾಸಕ್ಕೆ ವ್ಯವಸ್ಥೆ ಮಾಡಿದರು.

ಮುಂದೆ ಚಂದ್ರಮತಿ ನೃತ್ಯದ ಸೀನಿಯರ್ ಪರೀಷೆಯನ್ನು ಪ್ರಥಮ ಶ್ರೇಣಿಯೊಂದಿಗೆ ಮುಗಿಸಿ,  ನಂತರ ವಿದ್ವತ್ತನ್ನೂ ಪೂರ್ಣಗೊಳಿಸಿದರು.

ದೆಹಲಿಯ ನಾಟ್ಯಾಚಾರ್ಯ ಶ್ರೀ ತೀರ್ಥರಾಮ ಆಜಾದ್ ಅವರಿಂದ ಕಥಕ್ ಮತ್ತು ಶ್ರೀ ವಾಲ್ಮೀಕಿ ಬ್ಯಾನರ್ಜಿ, ನೂಪುರ್ ಬ್ಯಾನರ್ಜಿ ಅವರುಗಳಿಂದ ಒಡಿಸ್ಸಿ ನೃತ್ಯ ಪದ್ದತಿಗಳನ್ನು ಅಭ್ಯಾಸ ಮಾಡಿದ ಚಂದ್ರಮತಿ ನಂತರ ಮಣಿಪುರಿ ಮತ್ತು ಜಾನಪದ ನೃತ್ಯ ಪ್ರಕಾರಗಳನ್ನು ಕಲಿತು ತಮ್ಮ ಅರಿವನ್ನು ಹೆಚ್ಚಿಸಿಕೊಂಡಿದ್ದಾರೆ. ಜೊತೆಗೆ ಪದ್ಮಭೂಷಣ ಡಾ|| ವೆಂಕಟಲಕ್ಷ್ಮಮ್ಮನವರಿಂದ ಅಭಿನಯದಲ್ಲಿ ತರಬೇತಿ ಪಡೆದಿದ್ದಾರೆ.

ತಾವು ಕಲಿಯುತ್ತಲೇ ಬೇರೆಯವರಿಗೆ ಕಲಿಸುವ ಕೈಂಕರ್ಯವನ್ನೂ ಆರಂಭಿಸಿದ ಚಂದ್ರಮತಿಯವರು ತಮ್ಮ ಗುರುಗಳ ಶ್ರೀ ಸರಸ್ವತಿ ನೃತ್ಯಕಲಾ ಮಂದಿರವನ್ನು ಈಗಲೂ ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಗೆ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ವನಿತಾ ಸದನದಲ್ಲಿಯೂ ಕಳೆದ ಮೂವತ್ತು ವರ್ಷಗಳಿಂದ ನೃತ್ಯ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಇವರ ಶಿಷ್ಯರುಗಳನ್ನೇಕರು ಉತ್ತಮ ಕಲಾವಿದರಾಗಿ ರೂಪುಗೊಂಡು ದೇಶ ವಿದೇಶಗಳಲ್ಲಿ ಕಲಾವಿದರಾಗಿ ಈ ಶಿಕ್ಷಕರಾಗಿ ತಮ್ಮ ಗುರು ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ಬೆಳಗಾವಿಯ ರವೀಂದ್ರ ನೃತ್ಯಶಾಲೆ, ಮೈಸೂರಿನ ಸರ್ವೇಶ್ವರ ನೃತ್ಯಕಲಾ ಮಂದಿರ, ಸಂಸ್ಕಾರ ಭಾರತಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಪ್ರಖ್ಯಾತ ನೃತ್ಯಗುರು ಶ್ರೀಮತಿ ನಂದಿನಿ ಈಶ್ವರ್ ಅವರ ರಾಸವೃಂದ ನೃತ್ಯಶಾಲೆ ಮುಂತಾದ ಸಂಸ್ಥೆಗಳು ಚಂದ್ರಮತಿಯವರ ಸೇವೆಯನ್ನು ಗುರುತಿಸಿ ಸನ್ಮಾನಿಸಿದೆ. ಅಲ್ಲದೆ ಮೈಸೂರಿನ ಸಿದ್ಧಾರ್ಥ ನಗರದ ಶ್ರೀ ವಿಶ್ವಕರ್ಮ ಮಂಟಪದದವರಿಂದ ’ನಾಟ್ಯ ಸರಸ್ವತಿ’, ಭಾರತೀಯ ನೃತ್ಯಕಲಾ ಪರಿಷತ್ತಿನವರು ’ಕಲಾ ಸಿಂಧು’ ಬಿರುದುಗಳನ್ನು ನೀಡಿ ಗೌರವಿಸಿದ್ದಾರೆ.

ಶ್ರೀಮತಿ ಎ. ಚಂದ್ರಮತಿಯವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೫-೦೬ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.